ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಕ್ರೀಡಾ ಸಾಧಕ!

Update: 2024-04-15 07:22 GMT

ದಾವಣಗೆರೆ: ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಕ್ರೀಡಾಪಟುವಾದ ಮಾಲತೇಶ್ ಪಾಟೀಲ್‌ಇಂದು ಸರಕಾರಿ ನೌಕರರ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಸಕ್ತ ಹರಪನಹಳ್ಳಿ ತಾಲೂಕು ಅರಸೀಕೆರೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ತಮ್ಮ ಬೋಧನಾ ವೃತ್ತಿಯ ಜೊತೆಯಲ್ಲಿಯೇ ಸರಕಾರಿ ನೌಕರರ ಕ್ರೀಡಾಕೂಟಗಳಲ್ಲಿ ಕ್ರಿಕೆಟ್, ಚೆಸ್‌ನಲ್ಲಿ ರಾಜ್ಯಮಟ್ಟದಲ್ಲಿ, ಕೇರಂ ಆಟದಲ್ಲಿ ಮೂರು ಬಾರಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದ ಮಾಲತೇಶ್, ಹಲವಾರು ಕ್ರೀಡೆಗಳಲ್ಲಿ ರಾಜ್ಯ,ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ತಾಲೂಕು, ಜಿಲ್ಲೆಗೆ ಕೀರ್ತಿ ತಂದು ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಸಾಧನೆಗೆ ತಂದೆಯೇ ಪ್ರೇರಣೆ:

ಮಾಲತೇಶ್ ಇಷ್ಟು ಸಾಧನೆ ಮಾಡಲು ತಂದೆ ಜಗನ್ನಾಥ್ ಪಾಟೀಲ್ ಪ್ರೇರಣೆಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಬೇಕೆಂಬ ಛಲದೊಂದಿಗೆ ಪ್ರತಿದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ನಿರಂತರ ಮನೆಯಲ್ಲಿಯೇ ತರಬೇತುದಾರರಿಲ್ಲದೆ ಸ್ವ-ಪ್ರಯತ್ನದಿಂದ ಕೇರಂ ಅಭ್ಯಾಸ ಮಾಡಿ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

2003ರಲ್ಲಿ ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಕ್ರಿಕೆಟ್, 2007ರಲ್ಲಿ ರಾಜ್ಯಮಟ್ಟದ ಚೆಸ್‌ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ನಂತರ ಅವರು ಕೇರಂ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡು 2008ರಿಂದ 2024ರವರೆಗೆ ನಿರಂತರವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾರೆ.

ಸೋತರೂ ಕುಗ್ಗದ ಉತ್ಸಾಹ:

2022ರಲ್ಲಿ ದಿಲ್ಲಿಯಲ್ಲಿ ನಡೆದ ರಾಷ್ಟ್ರಮಟ್ಟದ ನೌಕರರ ಕ್ರೀಡಾಕೂಟದಲ್ಲಿ ಅಸ್ಸಾಂ, ಪಾಂಡಿಚೇರಿ, ದಿಲ್ಲಿ ವಿರುದ್ಧ ಜಯಗಳಿಸಿ, ಬಿಹಾರ ರಾಜ್ಯದ ಮೇಲೆ ಪರಾಭವಗೊಂಡಿದ್ದರು. 2023ರಲ್ಲಿ ತ್ರಿಪುರ ರಾಜ್ಯದ ರಾಜಧಾನಿ ಅಗರ್ತಲದಲ್ಲಿ ನಡೆದ ರಾಷ್ಟ್ರಮಟ್ಟದ ನೌಕರರ ಕ್ರೀಡೆಯಲ್ಲಿ ಭಾಗವಹಿಸಿ ಪಾಂಡಿಚೇರಿ, ಗುಜರಾತ್, ಅಸ್ಸಾಂ ರಾಜ್ಯಗಳ ವಿರುದ್ಧ ಜಯ ಸಾಧಿಸಿ, ದಿಲ್ಲಿಯ ಅಂತರ್‌ರಾಷ್ಟ್ರೀಯ ಕೇರಂ ಆಟಗಾರ ವಿಜಯಕುಮಾರ್ ಸಿಂಗ್ ವಿರುದ್ಧ ವಿಜಯದ ಸನಿಹಕ್ಕೆ ಬಂದು ಸೋತಿದ್ದರು.

ಪ್ರಸಕ್ತ 2024ರಲ್ಲಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ರಾಷ್ಟ್ರಮಟ್ಟದ ನೌಕರರ ಕ್ರೀಡಾಕೂಟದಲ್ಲಿ ಪಾಂಡಿಚೇರಿ, ಒಡಿಶಾ ರಾಜ್ಯದ ವಿರುದ್ಧ ಜಯ ಸಾಧಿಸಿ, ಮಧ್ಯಪ್ರದೇಶದ ವಿರುದ್ಧ ಪರಭಾವಗೊಂಡಿದ್ದಾರೆ.

ಮುಂದೊಂದು ದಿನ ಅವಕಾಶ ಸಿಕ್ಕರೆ ಕಲಿಯುವಂತಹ ಮಕ್ಕಳಿಗೂ ಉಚಿತವಾಗಿ ಕೇರಂ ತರಬೇತಿಯನ್ನು ಹೇಳಿಕೊಡಲು ಉತ್ಸುಕರಾಗಿದ್ದಾರೆ, ಒಟ್ಟಾರೆ ವೃತ್ತಿ ಮತ್ತು ಪ್ರವೃತ್ತಿಗಳನ್ನು ಸಮಚಿತ್ತದಿಂದ ನಿಭಾಯಿಸುತ್ತಿರುವ ಅವರು ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಮಾಲತೇಶ್ ಪಾಟೀಲ್ ಕ್ರಿಯಾಶೀಲ ಶಿಕ್ಷಕ ಮತ್ತು ಸಂಘ ಜೀವಿ, ಮಿಡಿಯುವ ಹೃದಯವಂತ. ನಮ್ಮ ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದು ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಬಸವರಾಜ ಸಂಗಪ್ಪನವರ್, ಕ.ರಾ.ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ 

ಬಹುಮುಖ ಪ್ರತಿಭೆಯುಳ್ಳ ಮಾಲತೇಶ್ ಪಾಟೀಲ್ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಪ್ರತಿನಿತ್ಯ ತಮ್ಮ ಶಾಲಾ ಮಕ್ಕಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಇಂಗ್ಲಿಷ್, ಸಾಮಾನ್ಯ ಜ್ಞಾನ , ಗಣಿತ ವಿಷಯವನ್ನು ತಿಳಿಸಿಕೊಡುತ್ತಾರೆ.

 ಎಚ್.ನಾಗರಾಜ್, ಶಿಕ್ಷಕ

ನನ್ನ ಈ ಸಾಧನೆಗೆ ನನ್ನ ಶಾಲೆಯ ಸಿಬ್ಬಂದಿ ವರ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನನ್ನ ಕುಟುಂಬ, ಪ್ರಗತಿಪರ ಮುಖಂಡರು, ಅರಸೀಕೆರೆ ಗ್ರಾಮದ ಮುಖಂಡ ಅಣ್ಣಪ್ಪನವರು ಹಾಗೂ ಗ್ರಾಮಸ್ಥರ ಸಹಕಾರ, ಪ್ರೋತ್ಸಾಹ ಕಾರಣವಾಗಿದೆ.

 ಮಾಲತೇಶ ಪಾಟೀಲ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಪ್ರಕಾಶ್ ಎಚ್.ಎನ್.

contributor

Similar News