ಚೆಂಡೆ-ಮದ್ದಳೆ ಚರ್ಮ ವಾದ್ಯ ತಯಾರಿಕೆಯಲ್ಲಿ ಪಳಗಿದ ಯುವಕ
ಮಂಗಳೂರು: ವಾಮಂಜೂರು ತಿರುವೈಲಿನ ಅಮೃತನಗರ 2ನೇ ಬ್ಲಾಕ್‌ನಲ್ಲಿ ವಾಸವಾಗಿರುವ ಶಿಶಿರ್ ದೇವಾಡಿಗ ಚೆಂಡೆ -ಮದ್ದಳೆ ಚರ್ಮ ವಾದ್ಯ ತಯಾರಿಕೆಯಲ್ಲಿ ಪಳಗಿದ್ದಾರೆ.
ಬಿಕಾಂ ಪದವಿ ಪಡೆದಿದ್ದರೂ ಕುಲ ಕಸುಬಿನ ಜೊತೆಗೆ ಚರ್ಮ ವಾದ್ಯಗಳ ತಯಾರಿಯೊಂದಿಗೆ ಶಿಶಿರ್ ದೇವಾಡಿಗ ಜೀವನ ಸಾಗಿಸುತ್ತಿದ್ದಾರೆ. ದಿನನಿತ್ಯ ಇವರ ಚೆಂಡೆ, ಮದ್ದಳೆ, ನಗಾರಿ, ಮೃದಂಗ, ತಾಸೆ, ಡೋಲು ಮತ್ತಿತರ ಚರ್ಮ ವಾದ್ಯಗಳಿಗೆ ನಾನಾ ಕಡೆಗಳಿಂದ ಒಳ್ಳೆಯ ಬೇಡಿಕೆ ಇರುವುದು ವಿಶೇಷ.
ಜನಾರ್ದನ ಮತ್ತು ರೇಖಾ ದೇವಾಡಿಗ ದಂಪತಿಯ ಇಬ್ಬರು ಮಕ್ಕಳಲ್ಲಿ ಕಿರಿಯವನಾದ ಶಿಶಿರ್ ದೇವಾಡಿಗ ಪದವಿಯಲ್ಲಿ ಕಲಿಯುವಾಗಲೇ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಚೆಂಡೆ, ಉಡುಕೆ, ತಿಮಿಲೆ, ಪಟಹದಂತಹ ಚರ್ಮ ವಾದ್ಯ ಬಾರಿಸುತ್ತಲೇ ಚರ್ಮ ವಾದ್ಯಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾದರು.
ತೋಕೂರು, ಕುಳಾಯಿ, ಸುರಗಿರಿ, ನರಹರಿ ಪರ್ವತ, ಇಡ್ಯಾ, ಪಾಂಡೇಶ್ವರ, ಅಡ್ಯಾರಿನ ದೇವಸ್ಥಾನಗಳಲ್ಲಿ ಪೂರ್ಣಕಾಲಿಕ ಪದಾಧಿಕಾರಿಯಾಗಿರುವ ಶಿಶಿರ್ ದೇವಾಡಿಗ ಜಿಲ್ಲೆಯ ಇನ್ನೂ ಕೆಲವು ದೇವಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪದಾರ್ಥಿ ಸೇವೆಯ ಚರ್ಮ ವಾದ್ಯಗಳ ಬಾರಿಸುವಿಕೆಗೆ ಕುಡುಪು ನಾಗೇಂದ್ರ, ವರ್ಕಾಡಿ ವಿಠಲ ದೇವಾಡಿಗ, ಸೋಮೇಶ್ವರದ ಗಣೇಶ್ ದೇವಾಡಿಗ ಗುರುಗಳಾಗಿರುವುದನ್ನು ಮತ್ತು ವಾಮಂಜೂರಿನಲ್ಲಿರುವ ಕುಮ್ಮುಂಜೆ ಮುಂಡಪ್ಪಮೂಲ್ಯ ಅವರ ಕಾರ್ಯಾಗಾರ ಸೇರಿಕೊಂಡು ಚೆಂಡೆ, ಮದ್ದಳೆಯಂತಹ ಚರ್ಮವಾದ್ಯ ತಯಾರಿಕೆಯ ಕೌಶಲವನ್ನು ಕಲಿತಿರುವುದನ್ನು ಶಿಶಿರ್ ನೆನಪಿಸುತ್ತಾರೆ.
ಪದಾರ್ಥಿ, ಚರ್ಮ ವಾದ್ಯ ತಯಾರಿಯ ತರಬೇತಿಯಲ್ಲಿ ಪಳಗಿರುವ ಶಿಶಿರ್ ಚೆಂಡೆ, ಮದ್ದಳೆ ವಾದಕರೂ ಆಗಿದ್ದಾರೆ. ಜೊತೆಗೆ ಆಸಕ್ತ ಮಕ್ಕಳಿಗೆ ಪದಾರ್ಥಿ ಸೇವೆಯ ಚರ್ಮ ವಾದ್ಯ ಬಾರಿಸುವಿಕೆ ಮತ್ತು ಚೆಂಡೆ-ಮದ್ದಳೆ ತರಬೇತಿ ನೀಡುತ್ತಿದ್ದಾರೆ.
ಚೆಂಡೆ-ಮದ್ದಳೆ ತಯಾರಿಸುವವರ ಸಂಖ್ಯೆ ಈಗ ವಿರಳವಾಗಿದೆ. ಕೇರಳದ ಚೆಂಡೆ-ಮದ್ದಳೆಯ ಭರಾಟೆಯಲ್ಲಿ ಯಕ್ಷಗಾನಕ್ಕೆ ಅಗತ್ಯವೆನಿಸಿರುವ ಶ್ರುತಿಬದ್ಧ ಚೆಂಡೆ-ಮದ್ದಳೆ ಸಿಗುವುದು ಕಷ್ಟವೆನಿಸಿದೆ. ಶ್ರುತಿ ಬಗ್ಗೆ ಶಿಶಿರ್ ದೇವಾಡಿಗ ಇತರರಿಂದ ಕೇಳಿ, ತಿಳಿದು ಚರ್ಮ ವಾದ್ಯ ತಯಾರಿಸುವುದರಲ್ಲಿ ನಿಷ್ಣಾತರು. ಕಲೆಯ ಮೇಲಿನ ಪ್ರೀತಿ ಮತ್ತು ಕಲೆಗಾಗಿ ಉದ್ಯೋಗದಲ್ಲಿ ಆತ್ಮತೃಪ್ತಿ ಕಂಡುಕೊಂಡಿರುವ ಶಿಶಿರ್ ದೇವಾಡಿಗ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಅವಿನಾಶ್ ಬೈಪಡಿತ್ತಾಯ ಅಭಿಪ್ರಾಯಪಟ್ಟಿದ್ದಾರೆ.
ನಾನು ಸರಕಾರಿ ಉದ್ಯೋಗಕ್ಕಾಗಿ ಕಾದು ಕುಳಿತವನಲ್ಲ. ಇದರಲ್ಲೇ ಸಂತೃಪ್ತಿಯ ಜೀವನ ಮುಂದುವರಿಸಿದ್ದೇನೆ. ಹಾಗಂತ ಚರ್ಮ ವಾದ್ಯ ತಯಾರಿಯು ಸುಲಭದ ಕೆಲಸವಲ್ಲ. ಚರ್ಮ ವಾದ್ಯ ತಯಾರಿಸುವಾಗ ಪ್ರಾಣಿ ಚರ್ಮದ ಅಲರ್ಜಿ ಉಂಟಾಗುತ್ತದೆ. ಕಷ್ಟವಾದರೂ ಈ ವೃತ್ತಿ ಇಷ್ಟವಾಗಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಯುವಜನರ ಸಂಘ-ಸಂಸ್ಥೆಗಳಿಂದ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಲಾಭವಲ್ಲದೆ ನಷ್ಟವಿಲ್ಲ.
-ಶಿಶಿರ್ ದೇವಾಡಿಗ, ಚೆಂಡೆ ವಾದ್ಯ ಕಲಾವಿದ