ಆತಂಕದ ಈ ದಿನಗಳಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ

ಭಾರತದ ಬಹುತ್ವ ಮತ್ತು ಪ್ರಜಾಪ್ರಭುತ್ವ ಹಾಗೂ ಅದಕ್ಕೆ ಉಸಿರಾದ ಸಂವಿಧಾನದ ಸಂರಕ್ಷಣೆಯ ನಿಟ್ಟಿನಲ್ಲಿ ಈ ಸಲದ ಲೋಕಸಭಾ ಚುನಾವಣೆಯ ಫಲಿತಾಂಶ ಅತ್ಯಂತ ಮಹತ್ವದ ಅಂಶವಾಗಿದೆ. ಇಂಚು ,ಇಂಚಾಗಿ ಜನತಂತ್ರದ ಸಮಾಧಿ ಮಾಡಲು ಹೊರಟಿರುವ ಮಂದಿರ ಮಸೀದಿಯ ಹೆಸರಿನಲ್ಲಿ ರಾಷ್ಟ್ರ ಮಂದಿರದ ಅಡಿಪಾಯವನ್ನು ನಾಶ ಮಾಡಲು ಹೊರಟಿರುವ ಕರಾಳ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವ ಅಗತ್ಯ ಈಗ ತುರ್ತಾಗಿದೆ. ಈ ಸಲದ ಜನಾದೇಶ ಭಾರತಕ್ಕೆ ಹೊಸ ಬೆಳಕನ್ನು ನೀಡಬಹುದೇ ಎಂಬುದನ್ನು ಕಾಯ್ದುದು ನೋಡಬೇಕು. ಭರವಸೆಯ ಬೆಳಕಿನ ಕಿರಣಗಳಂತೂ ಕಾಣುತ್ತಿವೆ.

Update: 2024-05-20 05:11 GMT

ಇತ್ತೀಚೆಗೆ ಎರಡು ನ್ಯಾಯಾಲಯಗಳ ತೀರ್ಪುಗಳು ದೇಶದ ಗಮನ ಸೆಳೆದಿವೆ. ಒಂದು ಮಾನವ ಹಕ್ಕುಗಳ ಪರ ಹೋರಾಟಗಾರ ಗೌತಮ್ ನವಲ್ಕಾ ಮತ್ತು ನ್ಯೂಸ್ ಕ್ಲಿಕ್ ಸುದ್ದಿ ತಾಣದ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು. ಇನ್ನೊಂದು ಮಹಾರಾಷ್ಟ್ರದ ಪುಣೆಯ ವಿಶೇಷ ನ್ಯಾಯಾಲಯ ಅಂಧ ಶ್ರದ್ಧೆ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದ ಡಾ. ನರೇಂದ್ರ ದಾಭೋಳ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿದೆ. ಆದರೆ, ಈ ಪ್ರಕರಣದ ಮೂವರು ಸಂಚುಕೋರ ಆರೋಪಿಗಳನ್ನು ಬಿಡುಗಡೆ ಮಾಡಿದೆ.

ಸುಪ್ರೀಂ ಕೋರ್ಟ್ ತೀರ್ಪಿನಿಂದ ನ್ಯಾಯಾಂಗದ ಬಗ್ಗೆ ಭರವಸೆ ಮೂಡಿದೆ. ಆದರೆ, ದಾಭೋಳ್ಕರ್ ಹತ್ಯೆಗೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಪ್ರಾಸಿಕ್ಯೂಶನ್ ನ ಲೋಪದಿಂದ ಮುಖ್ಯ ಸಂಚುಕೋರರನ್ನು ಬಿಡುಗಡೆ ಮಾಡಿ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ದಾಭೋಳ್ಕರ್ ಹತ್ಯೆ ನಡೆದು 11 ವರ್ಷಗಳಾದವು. 2013ನೇ ಇಸವಿ ಆಗಸ್ಟ್ 20ರಂದು ಬೆಳಗ್ಗಿನ ಜಾವ ಪುಣೆಯ ಓಂಕಾರೇಶ್ವರ ಸೇತುವೆ ಬಳಿ ವಿಚಾರವಾದಿ ದಾಬೋಳ್ಕರ್ ಹತ್ಯೆ ನಡೆದಿತ್ತು.

ಗೌತಮ್ ನವಲ್ಕಾ ಮತ್ತು ಪ್ರಬೀರ್ ಪುರಕಾಯಸ್ಥ ಅವರನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಎರಡು ಪ್ರತ್ಯೇಕ ಆದೇಶಗಳನ್ನು ನೀಡಿರುವುದು ಪೊಲೀಸರು ಹಾಗೂ ಸರಕಾರದ ವರ್ತನೆ ಬಗ್ಗೆ ನ್ಯಾಯಾಲಯ ವ್ಯಕ್ತಪಡಿಸಿದ ಅಸಮಾಧಾನ ವೆಂದರೆ ಅತಿಶಯೋಕ್ತಿಯಲ್ಲ. 10 ವರ್ಷಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ವ್ಯವಸ್ಥೆಯ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ, ಸರಕಾರವನ್ನು ಟೀಕಿಸುವವರ ಧ್ವನಿಯನ್ನು ಹತ್ತಿಕ್ಕಲು ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯ ಆಗಿದೆ. ಕೋಮುವಾದವನ್ನು ವಿರೋಧಿಸುವವರನ್ನು ರಾಷ್ಟ್ರ ವಿರೋಧಿಗಳೆಂದು ಕರೆದು ಬಂಧಿಸುವುದು ಸರಕಾರದ ಚಾಳಿಯಾಗಿದೆ.ಗೌತಮ್ ನವಲ್ಕಾ ಅವರನ್ನು 2020ರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಾಧಾರವಿಲ್ಲದೇ ಬಂಧಿಸಲಾಗಿತ್ತು.ಪುರಕಾಯಸ್ಥ ಅವರನ್ನು 2023 ರಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳ ಆರೋಪ ಹೊರಿಸಿ ಜೈಲಿಗೆ ಹಾಕಲಾಗಿತ್ತು.

ಈಗ ಪುರಕಾಯಸ್ಥ ಅವರ ಬಂಧನಕ್ಕೆ ಕಾರಣವೇನೆಂದು ಲಿಖಿತ ರೂಪದಲ್ಲಿ ತಿಳಿಸುವಲ್ಲಿ ಪೊಲೀಸರು ಹಾಗೂ ಸರಕಾರ ವಿಫಲಗೊಂಡಿರುವುದಕ್ಕೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಪುರಕಾಯಸ್ಥ ಅವರನ್ನು ಬಿಡುಗಡೆ ಮಾಡಿದೆ ಮಾತ್ರವಲ್ಲ, ಸರಕಾರದ ನಡೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ವ್ಯಾಖ್ಯಾನಿಸಿದೆ. ಯಾವುದೇ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಯನ್ನು ಬಂಧಿಸಿದರೆ ಬಂಧನಕ್ಕೆ ಕಾರಣವೇನೆಂದು ತಿಳಿದುಕೊಳ್ಳುವ ಹಕ್ಕು ಬಂಧಿತ ವ್ಯಕ್ತಿಗೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಗೌತಮ್ ನವಲ್ಕಾ ಪ್ರಕರಣದಲ್ಲಿ ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್ ಇನ್ನೊಂದು ವೈಫಲ್ಯ ಗುರುತಿಸಿದೆ. ನವಲ್ಕಾ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿ ಇದ್ದಾರೆ. ಅವರ ಜೊತೆಗೆ ಇದ್ದ ಇತರ 6 ಮಂದಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.ವಿನಾಕಾರಣ ಪುರಾವೆಗಳಿಲ್ಲದೇ 4 ವರ್ಷ ನವಲ್ಕಾ ಬಂಧನದಲ್ಲಿ ಇದ್ದರು. ಪುರಕಾಯಸ್ಥ 8 ತಿಂಗಳು ಸೆರೆಮನೆ ಸೇರಿದ್ದರು. ಇದು ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಪ್ರಭುತ್ವದಿಂದ ನಡೆದ ದಾಳಿ ಎಂದು ಪರೋಕ್ಷವಾಗಿ ಹೇಳಲಾಗಿದೆ.

ನರೇಂದ್ರ ದಾಭೋಳ್ಕರ್ ಪ್ರಕರಣ ಇನ್ನೂ ಘೋರವಾಗಿದೆ. ಸಮಾಜದಲ್ಲಿ ಬೇರು ಬಿಟ್ಟ ಹಾಗೂ ಅಮಾಯಕರನ್ನು ವಂಚಿಸುತ್ತಿದ್ದ ಮೂಢ ನಂಬಿಕೆಗಳ ವಿರುದ್ಧ ಸಮರ ಸಾರಿದ್ದ ದಾಭೋಳ್ಕರ್ ಹತ್ಯೆಯಾಗಿ 11 ವರ್ಷಗಳ ನಂತರ ಇಬ್ಬರಿಗೆ ಶಿಕ್ಷೆಯಾಗಿದೆ. ನ್ಯಾಯದಾನದ ಈ ವಿಳಂಬ ನ್ಯಾಯದ ನಿರಾಕರಣೆ ಎಂದರೆ ತಪ್ಪಿಲ್ಲ. 11 ವರ್ಷಗಳ ನಂತರವೂ ಹತ್ಯೆಗೆ ಸಂಬಂಧಿಸಿದ ಎಲ್ಲರಿಗೂ ಶಿಕ್ಷೆ ಕೊಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ.ಈ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪವನ್ನು ಹೊತ್ತಿದ್ದ ವೀರೇಂದ್ರ ತಾವಡೆ ಮತ್ತು ಇತರ ಇಬ್ಬರು ಪ್ರಾಸಿಕ್ಯೂಶನ್ ನ ಲೋಪದಿಂದ ದೋಷ ಮುಕ್ತರಾಗಿ ಹೊರಗೆ ಬಂದಿದ್ದಾರೆ.ಇವರು ಹಿಂದುತ್ವ ಕೋಮುವಾದಿ ಸಂಘಟನೆ ಎಂದು ಹೆಸರಾದ ಸನಾತನ ಸಂಸ್ಥೆಯ ಜೊತೆ ಸಂಬಂಧ ಹೊಂದಿದ್ದರೆಂದು ಸಿಬಿಐ ಹೇಳಿತ್ತು.ಆದರೂ ತನಿಖಾ ಸಂಸ್ಥೆಯ ವೈಫಲ್ಯದಿಂದ ಐವರಲ್ಲಿ ಮೂವರು ದೋಷ ಮುಕ್ತರಾಗಿದ್ದಾರೆ.ಇದರಲ್ಲಿ ಮಹಾರಾಷ್ಟ್ರದ ಪೊಲೀಸರು ಹಾಗೂ ಸಿಬಿಐ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲಗೊಂಡಿದ್ದಾರೆಂದು ವಿಶೇಷ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ದಾಭೋಳ್ಕರ್ ಹತ್ಯೆಯ ನಂತರ ಕೊಲ್ಲಾಪುರದಲ್ಲಿ ಕಮ್ಯುನಿಸ್ಟ್ ನಾಯಕ ಮತ್ತು ಚಿಂತಕ ಗೋವಿಂದ ಪಾನ್ಸರೆ ಅವರ ಹತ್ಯೆ ನಡೆಯಿತು. ಅದರ ನಂತರ ಕರ್ನಾಟಕದ ಧಾರವಾಡದಲ್ಲಿ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಮತ್ತು ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದವು.ಈ ಎಲ್ಲ ಹತ್ಯೆಗಳಿಗೂ ಪರಸ್ಪರ ಸಂಬಂಧ ಇದೆ ಎಂಬುದು ನಂತರ ಖಚಿತವಾಯಿತು. ಆದರೂ ದಾಭೋಳ್ಕರ್ ಹತ್ಯೆ ನಡೆದು 11 ವರ್ಷದ ನಂತರ ಮೂವರ ಖುಲಾಸೆಯಾಗಿ ಇಬ್ಬರಿಗೆ ಶಿಕ್ಷೆಯಾಗಿರುವದರ ಹಿಂದೆ ಪೊಲೀಸರ ಮತ್ತು ಪ್ರಾಸಿಕ್ಯೂಶನ್ ನ ಆಕಸ್ಮಿಕ ಲೋಪವಲ್ಲ. ಇದು ಈ ಮೂವರ ಹತ್ಯೆಯ ನಂತರ ದೇಶದ ಬದಲಾದ ರಾಜಕೀಯ ಪರಿಸ್ಥಿತಿ ಕೂಡ ಪ್ರ್ಯಾಸಿಕ್ಯೂಶನ್ ಮೇಲೆ ಪ್ರಭಾವ ಬೀರಿರಬಹುದು ಎಂದರೆ ತಪ್ಪಿಲ್ಲ. ಹೀಗಾಗಿ ಈ ಪ್ರಕರಣಗಳಲ್ಲಿ ನಿಜವಾದ ,ಸಂಪೂರ್ಣ ನ್ಯಾಯ ಇನ್ನೂ ಗಗನ ಕುಸುಮವಾಗಿದೆ.

ಈ ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯಬೇಕೆಂದರೆ ಆಡಳಿತ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳುವಂಥ ಘಟನೆಗಳು ನಡೆಯಬಾರದು. ವಿಭಿನ್ನ ಜನಾಂಗ, ಧರ್ಮ, ಸಂಸ್ಕೃತಿಗಳ , ಭಾಷೆಗಳ 140 ಕೋಟಿ ಜನರಿಗೆ ಆಸರೆಯಾದ ಈ ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತ ಜಗತ್ತಿನ ಹೆಮ್ಮೆಯ ರಾಷ್ಟ್ರವಾಗಿ ಎದ್ದು ನಿಲ್ಲಬೇಕಾದರೆ ಯಾವುದೋ ಒಂದು ಧರ್ಮದ ಹೇರಿಕೆ ಇಲ್ಲವೇ ವೈಭವೀಕರಣದಿಂದಲ್ಲ ಅಥವಾ ಯಾವುದೋ ವಿಶ್ವಗುರುವೆಂದು ಕರೆದು ಭಜನೆ ಮಾಡುವುದರಿಂದಲ್ಲ. ಬಾಬಾಸಾಹೇಬರ ಸಂವಿಧಾನದ ಬದ್ಧತೆ ಮತ್ತು ಬಹುತ್ವದ ಭಾರತದ ರಕ್ಷಣೆ ನಮ್ಮ ಆದ್ಯತೆ ಆಗಿರಬೇಕು.

ಭಾರತದ ಬಹುತ್ವ ಮತ್ತು ಪ್ರಜಾಪ್ರಭುತ್ವ ಹಾಗೂ ಅದಕ್ಕೆ ಉಸಿರಾದ ಸಂವಿಧಾನದ ಸಂರಕ್ಷಣೆಯ ನಿಟ್ಟಿನಲ್ಲಿ ಈ ಸಲದ ಲೋಕಸಭಾ ಚುನಾವಣೆಯ ಫಲಿತಾಂಶ ಅತ್ಯಂತ ಮಹತ್ವದ ಅಂಶವಾಗಿದೆ. ಇಂಚು ,ಇಂಚಾಗಿ ಜನತಂತ್ರದ ಸಮಾಧಿ ಮಾಡಲು ಹೊರಟಿರುವ ಮಂದಿರ ಮಸೀದಿಯ ಹೆಸರಿನಲ್ಲಿ ರಾಷ್ಟ್ರ ಮಂದಿರದ ಅಡಿಪಾಯವನ್ನು ನಾಶ ಮಾಡಲು ಹೊರಟಿರುವ ಕರಾಳ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವ ಅಗತ್ಯ ಈಗ ತುರ್ತಾಗಿದೆ. ಈ ಸಲದ ಜನಾದೇಶ ಭಾರತಕ್ಕೆ ಹೊಸ ಬೆಳಕನ್ನು ನೀಡಬಹುದೇ ಎಂಬುದನ್ನು ಕಾಯ್ದುದು ನೋಡಬೇಕು. ಭರವಸೆಯ ಬೆಳಕಿನ ಕಿರಣಗಳಂತೂ ಕಾಣುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಸನತ್ ಕುಮಾರ ಬೆಳಗಲಿ

contributor

Similar News