ಅದಾನಿ-ಮೋದಿ-ಬಾಂಗ್ಲಾದೇಶ ಸಂಬಂಧದ ಜಾಲಕ್ಕೆ ಬೆಲೆ ತೆತ್ತಿದ್ದು ಯಾರು?

ಅದಾನಿಗಾಗಿ ಮೋದಿ ಸರಕಾರ ಈ ದೇಶದ ಕಾನೂನುಗಳನ್ನು ಹೇಗೆಲ್ಲ ಬದಲಿಸಿತೆಂದರೆ, ಜಾರ್ಖಂಡ್‌ನ ಗೊಡ್ಡಾದಲ್ಲಿ ನಿರ್ಮಿಸಲಾದ ಅದಾನಿಯ ಕಲ್ಲಿದ್ದಲು ಸ್ಥಾವರದಲ್ಲಿ ಉತ್ಪತ್ತಿಯಾಗುವ ಎಲ್ಲ ವಿದ್ಯುತ್ ಅನ್ನು ಬಾಂಗ್ಲಾದೇಶಕ್ಕೇ ರಫ್ತು ಮಾಡಲು ಅವಕಾಶ ಮಾಡಿಕೊಡಲಾಯಿತು. ಇಲ್ಲಿನ ಸ್ಥಾವರದಲ್ಲಿ ಉತ್ಪಾದನೆಯಾಗುವ ಪೂರ್ತಿ ವಿದ್ಯುತ್ ಅನ್ನು ಬಾಂಗ್ಲಾಕ್ಕೆ ಪೂರೈಸುವ ಒಪ್ಪಂದ ಮಾಡಿಕೊಂಡ ಏಕೈಕ ಕಂಪೆನಿ ಅದಾನಿ ಪವರ್ ಲಿಮಿಟೆಡ್ ಆಗಿತ್ತು.

Update: 2024-08-21 07:33 GMT

ಅಂಕಿ ಅಂಶಗಳು ಹೇಳುವ ಪ್ರಕಾರ, 2014ರಲ್ಲಿ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ ಗೌತಮ್ ಅದಾನಿಯ ಒಟ್ಟು ಸಂಪತ್ತು 16,780 ಕೋಟಿ ಇತ್ತು. 2023ರ ಜನವರಿಯಲ್ಲಿ ಅದು 12 ಲಕ್ಷ ಕೋಟಿಗೆ ಏರಿತ್ತು.

ಅಂದರೆ ಒಂಭತ್ತೇ ವರ್ಷಗಳಲ್ಲಿ ಅದಾನಿ ಸಂಪತ್ತಿನಲ್ಲಿ 14 ಪಟ್ಟು ಏರಿಕೆ!.

ಜಗತ್ತಿನ ಅತಿ ಶ್ರೀಮಂತರಲ್ಲಿ 106ನೇ ಸ್ಥಾನದಲ್ಲಿದ್ದ ಅದಾನಿ 11ನೇ ಅತಿ ಶ್ರೀಮಂತ ವ್ಯಕ್ತಿಯಾದದ್ದು ಮೋದಿ ಅಧಿಕಾರದ ಅವಧಿಯಲ್ಲಿ. ಮುಕೇಶ್ ಅಂಬಾನಿಯನ್ನೂ ಹಿಂದಿಕ್ಕಿ ಏಶ್ಯದ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಿದ್ದೂ ಮೋದಿ ಕಾಲದಲ್ಲೇ.

ಇದೆಲ್ಲವೂ ಹೇಗಾಯಿತು?

ಇದರ ಹಿಂದೆ ಅದಾನಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಮೋದಿ ಸರಕಾರ ಕಾನೂನುಗಳನ್ನೇ ಬದಲಿಸಿರುವ ಕಥೆಗಳು ಇವೆ.

ಗೌತಮ್ ಅದಾನಿಯ ಕಂಪೆನಿ ಅದಾನಿ ಪವರ್ ಲಿಮಿಟೆಡ್ ಇಲ್ಲಿ ವಿದ್ಯುತ್ ಉತ್ಪಾದಿಸಿ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಸುವ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಯಿತೆಂಬುದು ಇದಕ್ಕೆ ಒಂದು ಒಳ್ಳೆಯ ಉದಾಹರಣೆ.

ಅದಾನಿಗಾಗಿ ಮೋದಿ ಸರಕಾರ ಈ ದೇಶದ ಕಾನೂನುಗಳನ್ನು ಹೇಗೆಲ್ಲ ಬದಲಿಸಿತೆಂದರೆ,

ಜಾರ್ಖಂಡ್‌ನ ಗೊಡ್ಡಾದಲ್ಲಿ ನಿರ್ಮಿಸಲಾದ ಅದಾನಿಯ ಕಲ್ಲಿದ್ದಲು ಸ್ಥಾವರದಲ್ಲಿ ಉತ್ಪತ್ತಿಯಾಗುವ ಎಲ್ಲ ವಿದ್ಯುತ್ ಅನ್ನು ಬಾಂಗ್ಲಾದೇಶಕ್ಕೇ ರಫ್ತು ಮಾಡಲು ಅವಕಾಶ ಮಾಡಿಕೊಡಲಾಯಿತು. ಇಲ್ಲಿನ ಸ್ಥಾವರದಲ್ಲಿ ಉತ್ಪಾದನೆಯಾಗುವ ಪೂರ್ತಿ ವಿದ್ಯುತ್ ಅನ್ನು ಬಾಂಗ್ಲಾಕ್ಕೆ ಪೂರೈಸುವ ಒಪ್ಪಂದ ಮಾಡಿಕೊಂಡ ಏಕೈಕ ಕಂಪೆನಿ ಅದಾನಿ ಪವರ್ ಲಿಮಿಟೆಡ್ ಆಗಿತ್ತು. ಇಂಥದೊಂದು ಅಧಿಕಾರ ಭಾರತದಲ್ಲಿ ಇನ್ನಾವುದೇ ವಿದ್ಯುತ್ ಸ್ಥಾವರಕ್ಕೂ ಸಿಕ್ಕಿಲ್ಲ.

ಕೋಲ್ಕತಾ ಮೂಲದ ಈಸ್ಟರ್ನ್ ರೀಜನಲ್ ಪವರ್ ಕಮಿಟಿ (ಇಆರ್ ಪಿಸಿ) ಅಂಕಿಅಂಶಗಳ ಪ್ರಕಾರ,

2023ರ ಎಪ್ರಿಲ್‌ನಿಂದ 2024ರ ಮಾರ್ಚ್ ವರೆಗಿನ ಅವಧಿಯಲ್ಲಿ ಬಾಂಗ್ಲಾದೇಶಕ್ಕೆ ಪೂರೈಕೆಯಾದ ಒಟ್ಟು ವಿದ್ಯುತ್‌ನ ಶೇ.63ರಷ್ಟು ಅದಾನಿ ಕಂಪೆನಿಯೊಂದರಿಂದಲೇ ಪೂರೈಕೆಯಾಗಿದೆ.

ಈ ಅವಧಿಯಲ್ಲಿ ಭಾರತದಿಂದ ಬಾಂಗ್ಲಾಕ್ಕೆ ರಫ್ತಾಗಿರುವುದು 1.03 ಬಿಲಿಯನ್ ಡಾಲರ್ ಮೌಲ್ಯದ 11,933.83 ಮಿಲಿಯನ್ ಯೂನಿಟ್‌ಗಳು. ಅಂದರೆ ಇದರಿಂದ ದೊಡ್ಡ ಲಾಭವಾಗಿರುವುದು ಗೌತಮ್ ಅದಾನಿ ಕಂಪೆನಿಗೆ.

ಆದರೆ ಈಗ ಬಾಂಗ್ಲಾದಲ್ಲಿಯೇ ಸ್ಥಿತಿ ಅಲ್ಲೋಲಕಲ್ಲೋಲವಾಗಿಬಿಟ್ಟಿದೆ. ಅದರ ಭವಿಷ್ಯ ಅತಂತ್ರ ಎನ್ನುವಂತಾಗಿದೆ. ಹೀಗಿರುವಾಗ ಅದಾನಿ ಕಂಪೆನಿಗೆ ಆಗುವ ಲಾಭಕ್ಕೆ ಕಲ್ಲು ಬೀಳುವಂತಾಗಿದೆ.

ಹೀಗಾಗಿ ಗೌತಮ್ ಅದಾನಿಗೆ ಆಗುವ ನಷ್ಟ ತಡೆಯುವುದಕ್ಕಾಗಿ ಈಗ ಪುನಃ ನಿಯಮ ಬದಲಿಸಲಾಗಿದೆ. ಗೊಡ್ಡಾ ಸ್ಥಾವರದಿಂದ ದೇಶದೊಳಗೇ ವಿದ್ಯುತ್ ಮಾರಾಟ ಮಾಡಲು ಅದಾನಿಗೆ ಅವಕಾಶ ಮಾಡಿಕೊಡಲಾಗಿದೆ.

ಬಾಂಗ್ಲಾದೇಶ ವಿದ್ಯುತ್ ಕೊರತೆಯಿದ್ದ ದೇಶ. ಹಾಗಾಗಿಯೇ ಅದು ಅಗತ್ಯ ವಿದ್ಯುತ್ ಅನ್ನು ನೆರೆಯ ದೇಶಗಳಿಂದ ಪಡೆಯಲು ಬಯಸಿತ್ತು.

2010ರಲ್ಲಿ ಭಾರತ ಬಾಂಗ್ಲಾಕ್ಕೆ ಮೂಲಸೌಕರ್ಯ ಯೋಜನೆಗಳಿಗಾಗಿ ಬಿಲಿಯನ್ ಡಾಲಟ್‌ಗಟ್ಟಲೆ ಸಾಲ ನೀಡಿತ್ತು. ಅದೇ ವರ್ಷ, ಬಾಂಗ್ಲಾದಲ್ಲಿ ಎರಡು ಕಲ್ಲಿದ್ದಲು ಸ್ಥಾವರ ನಿರ್ಮಿಸುವುದಕ್ಕಾಗಿ ಭಾರತದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಹಾಗೂ ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ ನಡುವೆ ಒಪ್ಪಂದವಾಯಿತು.

ಆದರೆ ಅದು ಹಾಗೇ ನನೆಗುದಿಗೆ ಬಿದ್ದಿತ್ತು.

ಯಾವಾಗ ಮೋದಿ ಪ್ರಧಾನಿಯಾದರೋ ಒಟ್ಟು ಚಿತ್ರಣವೇ ಬದಲಾಗಿ ಬಿಟ್ಟಿತು.

2015ರಲ್ಲಿ ಮೋದಿ ಮೊದಲ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದರು.

ಬಾಂಗ್ಲಾದ ಅವತ್ತಿನ ಪ್ರಧಾನಿ ಶೇಕ್ ಹಸೀನಾ ಜೊತೆ ಬಾಂಗ್ಲಾದೇಶದ ಒಟ್ಟು ವಿದ್ಯುತ್ ವ್ಯವಸ್ಥೆಯನ್ನು ಭಾರತದ ಖಾಸಗಿ ಕಂಪೆನಿ ವಹಿಸಿಕೊಳ್ಳುವುದೆಂಬ ಒಪ್ಪಂದ ಮಾಡಿಕೊಂಡರು.

ಅದಾನಿ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್ ನಿರ್ಮಿಸಲಿರುವ ಉಷ್ಣವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿಸುವ ಬಗ್ಗೆ ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ ಒಪ್ಪಂದ ಮಾಡಿಕೊಂಡಿತು.

ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧ, ಬಾಂಗ್ಲಾದೇಶ ಮತ್ತು ಅದಾನಿ ಮಧ್ಯದ ಸಂಬಂಧವಾಗಿ ಬದಲಾಗಿತ್ತು.

ಸರಕಾರಿ ಕಂಪೆನಿ ವಹಿಸಿಕೊಳ್ಳಬೇಕಿದ್ದ ಯೋಜನೆ ಖಾಸಗಿ ಕಂಪೆನಿಯ ಪಾಲಾಗುವ ಜಾದೂ ಒಂದು ಅಲ್ಲಿ ನಡೆದುಬಿಟ್ಟಿತ್ತು.

2015ರ ಆಗಸ್ಟ್ 11ರಂದು ಒಪ್ಪಂದಕ್ಕೆ ಬಾಂಗ್ಲಾದೇಶ ಮತ್ತು ಅದಾನಿ ಸಹಿ ಹಾಕಿದ್ದೂ ಆಯಿತು.

25 ವರ್ಷಗಳ ಸುದೀರ್ಘ ಅವಧಿಗೆ ಈ ಒಪ್ಪಂದವಿತ್ತು.

ಶೇಕ್ ಹಸೀನಾ ಇತರರೊಂದಿಗೆ ಚರ್ಚಿಸದೆ ತಮ್ಮದೇ ವಿವೇಚನೆಯಿಂದ ಅಂಥದೊಂದು ತೀರ್ಮಾನ ಮಾಡಿದ್ದರು. ಇಲ್ಲಿ ಮೋದಿ ಮಾಡುತ್ತಿದ್ದ ರೀತಿಯಲ್ಲಿಯೇ ಅಲ್ಲಿ ಹಸೀನಾ ನಡೆಯಿತ್ತು.

ಒಪ್ಪಂದದ ಪ್ರಕಾರ, ಪ್ರತೀ ಯೂನಿಟ್ ವಿದ್ಯುತ್ ಖರೀದಿಸುವ ದರ ಬಾಂಗ್ಲಾಕ್ಕೆ ದುಬಾರಿಯಾಗಿತ್ತು. ಬಾಂಗ್ಲಾ ಇತರ ದೇಶಗಳಿಂದ ವಿದ್ಯುತ್ ಖರೀದಿಸುತ್ತಿದ್ದುದರ ಡಬಲ್ ದರಕ್ಕೆ ಅದಾನಿ ಕಂಪೆನಿಯಿಂದ ಖರೀದಿಸಬೇಕಾಗಿತ್ತು.

ಅದಾನಿ ಜೊತೆಗಿನ ಈ ಒಪ್ಪಂದ ಬಾಂಗ್ಲಾ ಜನತೆಯ ವಿರುದ್ಧವಾಗಿದೆ ಎಂದು ಆಗ ಅಲ್ಲಿನ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.ಒಪ್ಪಂದ ಮುರಿಯುವ ಒತ್ತಡ ಹೇರಿದ್ದವು. ಇಷ್ಟು ದುಬಾರಿ ದರದಲ್ಲಿ ಯಾಕೆ ವಿದ್ಯುತ್ ಖರೀದಿಸಬೇಕಾಗಿದೆ ಎಂಬ ಪ್ರಶ್ನೆ ಎದ್ದಿತ್ತು.

ಜನರ ಹಣ ಲೂಟಿ ಮಾಡಿ ಚುನಾವಣೆಯಲ್ಲಿ ಭಾರೀ ಅಕ್ರಮಕ್ಕೆ ಕಾರಣವಾದ ಆರೋಪವೂ ಹಸೀನಾ ವಿರುದ್ಧ ಬಂದಿತ್ತು.

ಜಾರ್ಖಂಡ್‌ನಲ್ಲಿ ಶೇ.59ರಷ್ಟು ಮಾತ್ರವೇ ವಿದ್ಯುದೀಕರಣವಾಗಿದ್ದ 2018ರ ಹೊತ್ತಿನಲ್ಲಿ, ಅಲ್ಲೇ ಉತ್ಪಾದನೆಯಾಗುವ ಅದಾನಿ ಸ್ಥಾವರದ ಪೂರ್ತಿ ವಿದ್ಯುತ್ ಬಾಂಗ್ಲಾಕ್ಕೆ ಸರಬರಾಜಾಗಲು ಅನುಮತಿ ಸಿಕ್ಕಿದ್ದೇ ವಿಚಿತ್ರವಾಗಿತ್ತು.

2012ರಲ್ಲಿ ಜಾರ್ಖಂಡ್ ರಾಜ್ಯ ರೂಪಿಸಿದ್ದ ಇಂಧನ ನೀತಿಯನ್ವಯ, ರಾಜ್ಯದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಕಂಪೆನಿ ತನ್ನ ಉತ್ಪಾದನೆಯ ಶೇ.25ರಷ್ಟು ವಿದ್ಯುತ್ತನ್ನು ರಿಯಾಯಿತಿ ದರದಲ್ಲಿ ರಾಜ್ಯಕ್ಕೆ ಪೂರೈಸಬೇಕಿತ್ತು.

ಆದರೆ 2016ರಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿ ಸರಕಾರವಿತ್ತು. ಅದಾನಿಯ ಗೊಡ್ಡಾ ವಿದ್ಯುತ್ ಸ್ಥಾವರಕ್ಕೋಸ್ಕರ ಬಿಜೆಪಿ ಸರಕಾರ ಈ ನಿಯಮವನ್ನೇ ಬದಲಿಸಿತ್ತು. ಅದರಂತೆ, ಅದಾನಿ ಕಂಪೆನಿ ಗೊಡ್ಡಾದಲ್ಲಿನ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.25ರಷ್ಟನ್ನು ರಾಜ್ಯಕ್ಕೆ ಕೊಡಬೇಕಾದ ಅಗತ್ಯ ಬೀಳಲಿಲ್ಲ.

ಆದರೆ ಜಾರ್ಖಂಡ್‌ಗೆ ತಾನೇ ಬೇರೆ ಸ್ಥಾವರದಿಂದ ವಿದ್ಯುತ್ ಅನ್ನು ಹೆಚ್ಚಿನ ದರಕ್ಕೆ ಪೂರೈಸುವ ಪ್ರಸ್ತಾವವನ್ನು ಅದಾನಿ ಕಂಪೆನಿ ಇಟ್ಟಿತ್ತು. ಜಾರ್ಖಂಡ್ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಸಬೇಕಾಗಿ ಬಂದಿತ್ತು.

ಆಡಿಟರ್ಸ್ ವರದಿ ಉಲ್ಲೇಖಿಸುವ ಪ್ರಕಾರ, ತಿಂಗಳಿಗೆ 72.4 ಕೋಟಿ ರೂ. ದರದಲ್ಲಿ ವಿದ್ಯುತ್ ಖರೀದಿಸುತ್ತಿದ್ದ ಜಾರ್ಖಂಡ್, ಅದಾನಿ ಕಂಪೆನಿಗೆ ತಿಂಗಳಿಗೆ 97.1 ಕೋಟಿ ರೂ. ಪಾವತಿಸಬೇಕಾಗಿ ಬಂದಿತ್ತು.

ಅಂದರೆ ಪ್ರತೀ ತಿಂಗಳೂ ರೂ. 24.7 ಕೋಟಿ ಹೆಚ್ಚುವರಿ ಹೊರೆ, ವಾರ್ಷಿಕ ರೂ. 296.40 ಕೋಟಿ ಹೆಚ್ಚುವರಿ ಹೊರೆ

ಬಾಂಗ್ಲಾದೊಂದಿಗಿನ ಒಪ್ಪಂದದ ಅವಧಿಯಾದ 25 ವರ್ಷಗಳಿಗೆ 7,410 ಕೋಟಿ ರೂ. ಹೆಚ್ಚುವರಿ ಹೊರೆ ಜಾರ್ಖಂಡ್ ಪಾಲಿಗೆ ಬರಲಿದೆ ಎಂದು ವರದಿ ಲೆಕ್ಕ ಹಾಕಿತ್ತು.

ಗೊಡ್ಡಾದ ಜನರಿಗೆ ಅವರಲ್ಲೇ ಉತ್ಪಾದನೆಯಾಗುವ ವಿದ್ಯುತ್ ಸಿಗದೇ ಹೋದರೂ ಅವರಿಗೆ ವಂಚನೆಯಾಗುವುದು ಮಾತ್ರ ತಪ್ಪಿರಲಿಲ್ಲ.

ಜಾರ್ಖಂಡ್‌ನ ಸಾವಿರಾರು ಎಕರೆ ಭೂಮಿ, ಸಾವಿರಾರು ಲೀಟರ್ ನೀರಿನ ಬಳಕೆ ಮಾಡಿ ಪರಿಸರ ನೀತಿಯ ಉಲ್ಲಂಘನೆ ಮಾಡಿದ್ದ ಅದಾನಿ ಕಂಪೆನಿ ಜಾರ್ಖಂಡ್ ಜನರಿಗೆ ಮಾತ್ರ ವಿದ್ಯುತ್ ಒದಗಿಸುವ ಮನಸ್ಸು ಮಾಡದೆ ಹೋಗಿತ್ತು.

ಗೌತಮ್ ಅದಾನಿಯವರ ಕಲ್ಲಿದ್ದಲಿನಿಂದ ವಿದ್ಯುತ್ ತಯಾರಿಸುವ ಉದ್ಯಮಕ್ಕೆ ನೆರವಾಗುವುದಕ್ಕೆ ಮತ್ತು ಅವರಿಗೆ ಕನಿಷ್ಠ 8,273 ಕೋಟಿ ರೂ. ಲಾಭ ಮಾಡಿಕೊಡುವುದಕ್ಕೆ ನರೇಂದ್ರ ಮೋದಿ ಸರಕಾರ ಕನಿಷ್ಠ ಮೂರು ಬಾರಿ ಕಾನೂನುಗಳನ್ನು ಪರಿಷ್ಕರಿಸಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಡಿಸೆಂಬರ್ 2022ರಲ್ಲಿ ವರದಿ ಮಾಡಿತ್ತು.

ಅಷ್ಟೇ ಅಲ್ಲ, ಗೊಡ್ಡಾದ ಅದಾನಿ ಪವರ್ ಪ್ಲಾಂಟ್‌ಗೆ ಬೇಕಾದ ಹಾಗೆ ಸಹಕರಿಸಲು ನಿರಾಕರಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಯಿತು. ಪ್ರತಿಭಟಿಸಿದ ಶಾಸಕರನ್ನು ಬಂಧಿಸಲಾಯಿತು.

ಇನ್ನೂ ಒಂದು ವಿಷಯವೆಂದರೆ, ಗೊಡ್ಡಾ ಸ್ಥಾವರದಲ್ಲಿ ಬಳಕೆಯಾಗುತ್ತಿದ್ದುದು ಜಾರ್ಖಂಡ್‌ನ ಕಲ್ಲಿದ್ದಲಾಗಿರಲಿಲ್ಲ. ಇಂಡೋನೇಶ್ಯ ಅಥವಾ ಆಸ್ಟ್ರೇಲಿಯದಿಂದ ಆಮದಾಗುತ್ತಿದ್ದ ಕಲ್ಲಿದ್ದಲಿನ ಬಳಕೆ ಮಾಡಲಾಗುತ್ತಿತ್ತು.

ರೆವೆನ್ಯೂ ಇಲಾಖೆ ಇಂಟೆಲಿಜೆನ್ಸ್ ಅದಾನಿ ಕಂಪೆನಿ ವಿರುದ್ಧ ಕೇಸ್ ದಾಖಲಿಸಿತು. ಅದಾನಿ ಕಂಪೆನಿ ಆಮದು ಮಾಡಿಕೊಳ್ಳುತ್ತಿದ್ದ ಕಲ್ಲಿದ್ದಲಿನ ಬಿಲ್ಲಿಂಗ್ ದರ ಸಿಕ್ಕಾಪಟ್ಟೆ ಇರುತ್ತಿತ್ತು. ಬರುವ ಕಲ್ಲಿದ್ದಲಿನ ಪ್ರಮಾಣವನ್ನೂ ಮೀರಿ ಹೆಚ್ಚಿನ ಬಿಲ್ ಇರುತ್ತಿತ್ತು. ಹೆಚ್ಚು ಇನ್ವಾಯ್ಸ್ ಮೂಲಕ ದೇಶದ ಹೆಚ್ಚು ಹಣ ವಿದೇಶಕ್ಕೆ ಹೋಗುತ್ತಿತ್ತು. ಸದ್ದಿಲ್ಲದೆ ಮನಿ ಲಾಂಡರಿಂಗ್ ನಡೆಯುತ್ತಿತ್ತು. ಅದಾನಿ ಕಂಪೆನಿ ವಾಸ್ತವಕ್ಕಿಂತ ಹೆಚ್ಚಿನ ದರಕ್ಕೆ ಇಲ್ಲಿನ ಗ್ರಾಹಕರಿಗೆ ಕಲ್ಲಿದ್ದಲು ಮಾರುತ್ತಿತ್ತು. ಅವರಿಂದ ಹೆಚ್ಚು ಹಣ ವಸೂಲು ಮಾಡುತ್ತಿತ್ತು.

ಆದರೆ ಯಾಕೆ ಈ ಮೂಲಕ ಅದು ಮನಿ ಲಾಂಡರಿಂಗ್ ಮಾಡುತ್ತಿತ್ತು?

ಹೀಗೆ ವಿದೇಶಕ್ಕೆ ಹೋಗುತ್ತಿದ್ದ ಹಣ ಶೆಲ್ ಕಂಪೆನಿಗಳ ಮೂಲಕ ಗೌತಮ್ ಅದಾನಿಯ ಹಿರಿಯ ಸೋದರ ವಿನೋದ್ ಅದಾನಿಯ ಕಂಪೆನಿಯಲ್ಲಿ ಗೌತಮ್ ಅದಾನಿಯ ಷೇರಾಗಿ ಜಮೆಯಾಗುತ್ತಿತ್ತು.

ಕೆಲಸ, ಉತ್ಪಾದನೆ ಏನೂ ಇಲ್ಲದಿದ್ದರೂ, ಅದಾನಿ ಷೇರುಗಳ ಬೆಲೆಯಲ್ಲಿ ಮಾತ್ರ ಕೃತಕ ಏರಿಕೆ ತೋರಿಸಲಾಗುತ್ತಿತ್ತು. ಅದಾನಿಯ ಸಂಪತ್ತು ಏರುತ್ತ ಹೋಗುತ್ತಿತ್ತು.

ಅದಾನಿಯ ಈ ಆಟವನ್ನು ಬಯಲು ಮಾಡಿದ್ದು ಹಿಂಡನ್‌ಬರ್ಗ್ ವರದಿ.

ಅದಾನಿ-ಮೋದಿ-ಬಾಂಗ್ಲಾದೇಶ - ಈ ಸಂಬಂಧದ ಜಾಲದಲ್ಲಿ ದೊಡ್ಡ ವಿಶ್ವಾಸಘಾತವಾದದ್ದು ಮಾತ್ರ ಭಾರತ ಮತ್ತು ಬಾಂಗ್ಲಾದ ಜನಸಾಮಾನ್ಯರಿಗೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಚಂದ್ರಕಾಂತ್ ಎನ್.

contributor

Similar News