ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲಲು ಅಖಿಲೇಶ್ ರಣತಂತ್ರ?

Update: 2024-07-27 07:31 GMT

ಉತ್ತರ ಪ್ರದೇಶದ ರಾಜಕಾರಣ ಈಗ ದೇಶಾದ್ಯಂತ ನಿತ್ಯ ಚರ್ಚೆಯ ವಿಷಯ. ಒಂದು ಕಡೆ ಸಿಎಂ ಆದಿತ್ಯನಾಥ್ ವಿರುದ್ಧ ಬಿಜೆಪಿಯೊಳಗೆ ಮಸಲತ್ತಿನ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿಯನ್ನು ಯುಪಿ ಗದ್ದುಗೆಯಿಂದಲೇ ಕೆಳಗಿಳಿಸಲು ನಡೆಯುತ್ತಿರುವ ತಯಾರಿಯ ಸುದ್ದಿಗಳೂ ಚಾಲ್ತಿಗೆ ಬಂದಿವೆ.

‘ದಿ ವೈರ್’ ಜಾಲತಾಣದ ಸೆಂಟ್ರಲ್ ಹಾಲ್ ಶೋನಲ್ಲಿ ಕಪಿಲ್ ಸಿಬಲ್ ಜೊತೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿಬಲ್ ಅವರೊಡನೆ ಅಖಿಲೇಶ್ ಹೇಳಿಕೊಂಡಂತೆ, ಮೋದಿ ಸರಕಾರ ಈ ಬಾರಿ ಬಹುಮತದ ಸರಕಾರವಾಗುವುದನ್ನು ತಡೆದದ್ದೇ ಉತ್ತರ ಪ್ರದೇಶದ ಜನತೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಂದುಕೊಂಡಂತೆ ಗೆದ್ದಿದ್ದರೆ ಇವತ್ತು ಕೇಂದ್ರದಲ್ಲಿ ಬಿಜೆಪಿಯ ಬಹುಮತದ ಸರಕಾರವಿರುತ್ತಿತ್ತು. ಆದರೆ ಉತ್ತರ ಪ್ರದೇಶದ ಜನತೆ ಹಾಗಾಗಲು ಬಿಡಲಿಲ್ಲ. ಅವರು ‘ಇಂಡಿಯಾ’ ಒಕ್ಕೂಟದ ಬೆನ್ನಿಗೆ ನಿಂತರು, ಹಿಂದುಳಿದ, ದಲಿತ, ಅಲ್ಪಸಂಖ್ಯಾತ (ಪಿಡಿಎ) ರಾಜಕೀಯವನ್ನು ಗೆಲ್ಲಿಸಿದರು ಎನ್ನುತ್ತಾರೆ ಅಖಿಲೇಶ್.

ಇಂಥದೊಂದು ಫಲಿತಾಂಶವನ್ನು ಜನರೇ ಬಯಸಿದ್ದರು ಮತ್ತು ಅವರೇ ಸಂವಿಧಾನ ವಿರೋಧಿಗಳ ವಿರುದ್ಧ ನಿಂತರು ಎಂಬುದು ಅಖಿಲೇಶ್ ಮಾತು.

ಆದರೆ ಇಲ್ಲಿ ಸಿಬಲ್ ಗಮನಿಸುವಂತೆ ಇಂಥದೊಂದು ಗೆಲುವಿನ ಹಿಂದೆ ಇನ್ನೂ ಒಂದು ಮುಖ್ಯ ಅಂಶ ಇದೆ.

ಅದು ಅಖಿಲೇಶ್ ಟಿಕೆಟ್ ಹಂಚಿಕೆಯಲ್ಲಿ ಅನುಸರಿಸಿದ ರಾಜಕೀಯ ಸಮೀಕರಣ.

ಯುಪಿಯ ಒಟ್ಟು ೮೦ ಸೀಟುಗಳಲ್ಲಿ ಅಖಿಲೇಶ್ ತಮ್ಮ ಯಾದವ ಸಮುದಾಯಕ್ಕೆ ಟಿಕೆಟ್ ನೀಡಿದ್ದು ಬರೀ ೫ ಕ್ಷೇತ್ರಗಳಲ್ಲಿ.

ಒಬಿಸಿಗೆ ೩೨, ದಲಿತರಿಗೆ ೧೬, ಮೇಲ್ಜಾತಿಯವರಿಗೆ ೧೦

ಮುಸ್ಲಿಮರಿಗೆ ೪ ಸೀಟುಗಳನ್ನು ನೀಡಿದ್ದರು ಅಖಿಲೇಶ್.

ಅಖಿಲೇಶ್ ಅವರ ಈ ರಣನೀತಿ ಇಂಥದೊಂದು ಗೆಲುವಿಗೆ ಕಾರಣವಾಯಿತೆನ್ನುವುದು ಸುಳ್ಳಲ್ಲ.

ಈ ಮೂಲಕ ಅಖಿಲೇಶ್ ಎಸ್‌ಪಿ ಎಂದರೆ ‘ಎಂವೈ’ ಎಂದರೆ ಕೇವಲ ಮುಸ್ಲಿಮರು ಮತ್ತು ಯಾದವರ ಪಕ್ಷ ಎಂಬ ಅಪಪ್ರಚಾರಗಳ ಸದ್ದಡಗಿಸಿದರು.

ಬಿಜೆಪಿಯಲ್ಲಿಯೂ ‘ಎಂವೈ’ ಅಂದರೆ ಮೋದಿ ಮತ್ತು ಯೋಗಿ ಇರುವುದರ ಬಗ್ಗೆ ಹೇಳುವ ಅಖಿಲೇಶ್,

‘‘ಆ ಎಂವೈ ಅನ್ನು ಸೋಲಿಸಲು ನಾನು ಹೀಗೆ ಬದಲಿಸಬೇಕಾಯಿತು’’ ಎನ್ನುತ್ತಾರೆ.

ಪಿಡಿಎ ಅಂದರೆ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಲ ಇಲ್ಲಿ ಎಸ್‌ಪಿಗೆ ಸಿಕ್ಕಿತು.

ಉತ್ತರ ಪ್ರದೇಶದಲ್ಲಿ ಸಾಂಪ್ರದಾಯಿಕ ರಾಜಕಾರಣದ ಆಟ ಇನ್ನು ನಡೆಯುವುದಿಲ್ಲ ಎನ್ನುವುದಕ್ಕೆ ಅಯೋಧ್ಯೆಯಲ್ಲಿ ಬಿಜೆಪಿ ಕಂಡಿರುವ ಸೋಲನ್ನು ನಿದರ್ಶನವಾಗಿ ಗುರುತಿಸುತ್ತಾರೆ ಅಖಿಲೇಶ್.

೨೦೧೯ರಲ್ಲಿ ಎಸ್‌ಪಿ ಸೋಲುವುದಕ್ಕೆ ಮತದಾರರ ಹೆಸರು ಕಾಣೆಯಾದದ್ದು ಪ್ರಮುಖ ಕಾರಣ ಎಂದು ಅಖಿಲೇಶ್ ಗುರುತಿಸುತ್ತಾರೆ.

ಅದರ ಬಗ್ಗೆ ವಿವರವಾಗಿ ಮಾಹಿತಿ ಕೊಟ್ಟರೂ ಚುನಾವಣಾ ಆಯೋಗ ಯಾವ ಕ್ರಮವನ್ನೂ ಇವತ್ತಿನವರೆಗೂ ಕೈಗೊಳ್ಳದೇ ಉಳಿದಿದೆ ಎಂಬುದು ಅವರ ಆಕ್ಷೇಪ.

ಉತ್ತರ ಪ್ರದೇಶದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಹೇಳುವ ಅಖಿಲೇಶ್, ಅದು ಇಬ್ಬರು ನಾಯಕರ ನಡುವಿನ ಸಂಘರ್ಷವಾಗದೆ, ದಿಲ್ಲಿ ಮತ್ತು ಲಕ್ನೊ ನಡುವಿನ ಸಂಘರ್ಷವಾಗಿದೆ ಎನ್ನುತ್ತಾರೆ.

ಅದರ ಭಾಗವಾಗಿಯೇ, ಕನ್ವರ್ ಯಾತ್ರೆ ಮಾರ್ಗದಲ್ಲಿ ಅಂಗಡಿಕಾರರು ಹೆಸರು ಪ್ರದರ್ಶಿಸಬೇಕೆಂಬ ಆದೇಶ ಜಾರಿ ಮಾಡಲಾಗಿತ್ತು ಎನ್ನುತ್ತಾರೆ ಅವರು.

ಇದಲ್ಲದೆ, ಬಿಜೆಪಿಯ ಕೆಲಸವೇ ಸದಾ ದ್ವೇಷವನ್ನು ಬಿತ್ತುವುದಾಗಿದೆ ಎಂಬುದು ಅಖಿಲೇಶ್ ಅವರ ಆರೋಪ.

ಸಾಮಾನ್ಯವಾಗಿ ಉದ್ಯಮ, ವ್ಯಾಪಾರ ಎಲ್ಲರ ಸಹಕಾರದಿಂದಲೇ ನಡೆಯುತ್ತದೆ. ಹಾಗಾಗಿ ಪ್ರತಿಯೊಂದು ವ್ಯಾಪಾರವೂ ಜನರ ನಡುವೆ ಬಾಂಧವ್ಯಕ್ಕೆ ಕಾರಣವಾಗುತ್ತದೆ. ಆದರೆ ಬಿಜೆಪಿ ಆ ಬಾಂಧವ್ಯವನ್ನೇ ಒಡೆದು ಹಾಕುವ ಕೆಲಸ ಮಾಡುತ್ತಿದೆ.

ಇದನ್ನು ಯುಪಿಯ ಜನ ಗಮನಿಸುತ್ತಿದ್ದಾರೆ ಎಂಬುದು ಅಖಿಲೇಶ್ ಅವರ ಅಭಿಪ್ರಾಯ.

ಅಖಿಲೇಶ್ ಅವರ ಬಹಳ ಮುಖ್ಯವಾದ ಆಗ್ರಹವೆಂದರೆ, ಇವಿಎಂ ಹೋಗಿ ಬ್ಯಾಲೆಟ್ ವ್ಯವಸ್ಥೆ ಬರಬೇಕು ಎಂಬುದು.

ಜರ್ಮನಿಯಂಥ ದೇಶಗಳಲ್ಲಿ ಅಸಾಂವಿಧಾನಿಕ ಎಂದು ಪರಿಗಣಿತವಾಗಿರುವ ಇವಿಎಂ ಅನ್ನು ಇಲ್ಲಿ ಹೇಗೆ ಒಪ್ಪಿಕೊಳ್ಳಲಾಗಿದೆ ಎಂಬುದು ಅವರ ಪ್ರಶ್ನೆ.

ಸಾಮಾನ್ಯವಾಗಿ ಸೋತವರು ಇವಿಎಂ ಅನ್ನು ದೂರುವುದು ಸಹಜ.

ಆದರೆ ಯುಪಿಯಲ್ಲಿ ಅತಿ ಹೆಚ್ಚು ಹಾಗೂ ದೇಶದಲ್ಲೇ ಮೂರನೇ ಅತಿ ಹೆಚ್ಚು ಸ್ಥಾನ ಪಡೆದಿರುವ ಎಸ್‌ಪಿ ನಾಯಕ ಅಖಿಲೇಶ್ ಈಗಲೂ ಇವಿಎಂ ಬೇಡ, ಅದನ್ನು ತೆಗೆದುಹಾಕಿ ಬ್ಯಾಲೆಟ್ ವ್ಯವಸ್ಥೆ ತನ್ನಿ ಎಂದು ಆಗ್ರಹಿಸುತ್ತಿದ್ದಾರೆ.

ಇದು ಬಹಳ ಮುಖ್ಯ ಬೆಳವಣಿಗೆ.

೨೦೧೯ರ ಸೋಲು ಮತ್ತು ೨೦೨೪ರ ಭಾರೀ ಗೆಲುವು ಇವೆರಡರಿಂದಲೂ ಕಲಿತಿರುವ ಪಾಠಗಳನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಣತಂತ್ರವಾಗಿ ಬದಲಿಸಲು ಅಖಿಲೇಶ್ ತಯಾರಾಗುತ್ತಿದ್ದಾರೆ ಎಂಬುದಂತೂ ಸ್ಪಷ್ಟ.

ಅದರ ಪ್ರಕಾರ, ಎಸ್‌ಪಿಯನ್ನು ಯಾದವರು ಮತ್ತು ಮುಸ್ಲಿಮ್ ಸಮುದಾಯದ ಆಚೆಗೂ ಕೊಂಡೊಯ್ದ ಸಮೀಕರಣವನ್ನು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೂ ಅವರು ಬಳಸಿಕೊಳ್ಳುತ್ತಾರೆ.

ಸಾಂಪ್ರದಾಯಿಕ ರಾಜಕಾರಣವನ್ನು ಮೀರಿದ ಆಲೋಚನೆ ಮತ್ತು ಅದಕ್ಕೆ ಅನುಗುಣವಾಗಿ ತಂತ್ರಗಾರಿಕೆಯನ್ನು ರೂಪಿಸಬಲ್ಲ ಜಾಣ್ಮೆ ಅಖಿಲೇಶ್ ಅವರಲ್ಲಿದೆ.

ಮುಖ್ಯವಾಗಿ, ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ಪಕ್ಷದ ಕಡೆಗೆ ಸೆಳೆಯಬಲ್ಲ ನೆಲೆಯೊಂದನ್ನು ಮೊನ್ನೆಯ ಲೋಕಸಭಾ ಚುನಾವಣೆಯ ವೇಳೆ ಅವರು ಕಂಡುಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಚೆನ್ನಾಗಿ ಸಾಧನೆ ಮಾಡಿ ‘ಇಂಡಿಯಾ’ ಒಕ್ಕೂಟವನ್ನು ಬಲಪಡಿಸಿದ್ದವು. ಈಗಲೂ ಅದೇ ಸಮೀಕರಣವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಅಖಿಲೇಶ್ ಅವರಲ್ಲಿದೆ.

ರಾಹುಲ್ ಗಾಂಧಿ ಜೊತೆ ಅಖಿಲೇಶ್ ಅವರ ಬಾಂಧವ್ಯ ಅತ್ಯುತ್ತಮವಾಗಿದೆ. ಹಾಗಾಗಿ ರಾಜ್ಯದಲ್ಲಿ ಮೈತ್ರಿ ವಿಷಯದಲ್ಲಿ ಯಾವುದೇ ಸಮಸ್ಯೆ ತಲೆದೋರದ ಹಾಗೆ ನೋಡಿಕೊಳ್ಳುವ ವಿಶ್ವಾಸವೂ ಅವರಿಗಿದೆ.

ಇವೆಲ್ಲವೂ, ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸುವಾಗ ಅಖಿಲೇಶ್ ಗಮನದಲ್ಲಿ ಇರುವ ವಿಚಾರಗಳಾಗಿವೆ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಸೋಲಿಸುವ ಗುರಿ ಅವರದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News