ಕೋಮುಲ್ ನೇರ ನೇಮಕಾತಿಯಲ್ಲಿ ಅಕ್ರಮ ಆರೋಪ

Update: 2023-12-20 09:03 GMT

ಕೋಲಾರ, ಡಿ.19: ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಸಪ್ಟೆಂಬರ್ ತಿಂಗಳಲ್ಲಿ ಅರ್ಜಿ ಸ್ವೀಕರಿಸಿ ಲಿಖಿತ ಪರೀಕ್ಷೆಗಳನ್ನು ಸಹ ನಡೆಸಲಾಗಿತ್ತು. ಡಿಸೆಂಬರ್ 14ರಿಂದ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ 1:5ರ ಅನುಪಾತದಲ್ಲಿ ಸಂದರ್ಶನವೂ ನಡೆದಿತ್ತು. ಇದೀಗ ಆಯ್ಕೆ ಪ್ರಕ್ರಿಯೆ ಅಂತಿಮಘಟ್ಟ ತಲುಪುವ ವೇಳೆಗೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕಳೆದ ಎರಡು ದಿನಗಳಿಂದ ಸಂಭವನೀಯ ಅಯ್ಕೆ ಪಟ್ಟಿಯ ನಕಲು ಪ್ರತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪಟ್ಟಿಯಲ್ಲಿ ಸಂದರ್ಶನಕ್ಕೆ ಹಾಜರಾದ 1:5ರ ಪಟ್ಟಿಯ ಅಭ್ಯರ್ಥಿಗಳಲ್ಲಿ ಆಯ್ಕೆಯಾದವರ ಹೆಸರುಗಳ ಮುಂದೆ ಟಿಕ್ ಮಾರ್ಕ್ ಹಾಕಿ ಅವರು ಯಾರ ಶಿಪಾರಸಿನ ಮೇರೆಗೆ ಆಯ್ಕೆಯಾಗಿದ್ದಾರೆ ಎಂದು ಬರೆಯಲಾಗಿತ್ತು. ಈ ರೀತಿಯಲ್ಲಿ ಬರೆದ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದು ಪರೀಕ್ಷೆ ಬರೆದ ಅ್ಯರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಒಕ್ಕೂಟದಲ್ಲಿ ಒಟ್ಟು 273 ಹುದ್ದೆಗಳು ಖಾಲಿ ಇದ್ದವು. ಈ ಹುದ್ದೆಗಳಿಗೆ ಸಪ್ಟೆಂಬರ್ ತಿಂಗಳಲ್ಲಿ ಮೂರು ಅಧಿಸೂಚನೆ ಹೊರಡಿಸಲಾಗಿತ್ತು. ಇದರಲ್ಲಿ 192 ಹುದ್ದೆಗಳಿಗೆ ಹೊರಡಿಸಿದ ಎರಡು ಅಧಿಸೂಚನೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇನ್ನುಳಿದ 81 ಹುದ್ದೆಗಳಿಗೆ ಹೊರಡಿಸಿದ ಅಧಿಸೂಚನೆ ಪ್ರಕಾರ ನವೆಂಬರ್ 11ರಂದು ಕೋಲಾರದ ವಿವಿಧ ಕಾಲೇಜುಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು.

ಲಿಖಿತ ಪರೀಕ್ಷೆಯ ಪಲಿತಾಂಶವನ್ನು ಒಕ್ಕೂಟದ ಕಚೇರಿ ಅಧಿಕಾರಿಗಳು ಸಾರ್ವಜನಿಕರ ಗಮನಕ್ಕೆ ತರುವ ನಿಟ್ಟಿನಲ್ಲಿ ನಾಮಪಲಕದಲ್ಲಿ ಪ್ರಕಟಿಸಲೇ ಇಲ್ಲ. ಬದಲಾಗಿ ಅ್ಯರ್ಥಿಗಳು ಗಳಿಸಿದ ಅಂಕಗಳನ್ನು ಆಯಾ ಅ್ಯರ್ಥಿಗಳ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ. ಲಿಖಿತ ಪರೀಕ್ಷಯಲ್ಲಿ ಉತ್ತೀರ್ಣರಾದ ಅ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗಿದೆ ಎಂದು ಹೇಳಲಾಗಿದೆ. ಆ ಪ್ರಕಾರ ಡಿ.14,15,16 ಮತ್ತು 18ರಂದು ನೇಮಕಾತಿ ಸಮಿತಿಯ ಸದಸ್ಯರು ಸಂದರ್ಶನ ನಡೆಸಿದ್ದಾರೆ.

ಲಿಖಿತ ಪರೀಕ್ಷೆ ಬರೆದು ಸಂದರ್ಶನ ಮುಗಿಯುವ ಮುನ್ನವೇ ಸಂಭವನೀಯ ಅಯ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಕೋಮುಲ್ ಸಿದ್ದಪಡಿಸಿದೆ ಎಂದು ಮಾದರಿ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸತೊಡಗಿದೆ. ಆ ಪಟ್ಟಿಯಲ್ಲಿ ಯಾವ ಯಾವ ಅ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಅವರನ್ನು ಯಾರು ಶಿಪಾರಸು ಮಾಡಿದ್ದಾರೆ ಎಂದು ಬರೆಯಲಾಗಿದೆ. ಅದರಲ್ಲಿ ಕೆಲವು ಉನ್ನತ ಅಧಿಕಾರದಲ್ಲಿರುವ ಗಣ್ಯ ವ್ಯಕ್ತಿಗಳ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸಿರುವುದು ಕಂಡು ಬಂದಿದೆ.

ನೇರ ಸಂದರ್ಶನ ನಡೆಸುವ ಸಮಿತಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಶಾಸಕ ಕೆ.ವೈ.ನಂಜೇಗೌಡ, ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಕೆಎಂಎಫ್ ನಿರ್ದೇಶಕ ಸುರೇಶ ಹಾಗೂ ಸಹಕಾರ ಇಲಾಖೆಯ ರಿಜಿಸ್ಟ್ರಾರ್ ಲಿಂಗರಾಜು ಇದ್ದು, ಈ ರೀತಿಯ ಮಾದರಿಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಆಡಳಿತ ಮಂಡಳಿ ಸ್ಪಷ್ಟನೆ

ನೇಮಕಾತಿ ಅಕ್ರಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಗಮನಿಸಿದ ಕೋಮುಲ್ ಆಡಳಿತ ಮಂಡಳಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ, 81 ಹುದ್ದೆಗಳಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಕೇವಲ 75 ಹುದ್ದೆಗಳಿಗೆ ಮಾತ್ರ ಅರ್ಜಿ ಸ್ವೀಕೃತವಾದವು. ಉಳಿದ 6 ಹುದ್ದೆಗಳಿಗೆ ಯಾರೂ ಅರ್ಜಿ ಸಲ್ಲಿಸಲಿಲ್ಲ. ಹಾಗಾಗಿ ಒಟ್ಟು 75 ಹುದ್ದೆಗಳಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗಿದೆ. ಲಿಖಿತ ಪರೀಕ್ಷೆ ಹಾಗೂ ಅದರ ಮೌಲ್ಯಮಾಪನವನ್ನು ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಟ್ಟಿದೆ. ಅದರಲ್ಲಿ ಮೆರಿಟ್ ಅಧಾರದಲ್ಲಿ ಗರಿಷ್ಟ ಅಂಕಗಳಿಸಿದ ಅ್ಯರ್ಥಿಗಳನ್ನು ಪ್ರತೀ ಹುದ್ದೆಗೆ 5 ಜನ ಅ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ನೇಮಕಾತಿ ಸಮಿತಿಯಿಂದ ಸಂದರ್ಶನ ನಡೆಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿ ಸಂದರ್ಶನಕ್ಕೆ ಅಂತಿಮಗೊಳಿಸಿದ 1:5 ಪಟ್ಟಿಯಾಗಿದೆ.

ಈ ಪಟ್ಟಿಯನ್ನು ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರಲು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಪಟ್ಟಿಯಲ್ಲಿ ನಮೂದು ಮಾಡಿರುವುದೆಲ್ಲಾ ಸುಳ್ಳು, ನೇಮಕಾತಿ ಸಮಿತಿಗೆ ಆ ರೀತಿಯ ಯಾವುದೇ ಶಿಫಾರಸುಗಳು ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಿ.ವಿ.ನಾಗರಾಜ್. ಕೋಲಾರ

contributor

Similar News