ಈಡೇರದ ಅಂಬೇಡ್ಕರ್ ಆಶಯ

Update: 2024-12-06 05:53 GMT

ಭಾರತದ ಕೋಟ್ಯಂತರ ಶೋಷಿತ ಸಮುದಾಯ ಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ವಿಮೋಚಕ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ 1956-ಡಿಸಂಬರ್-6 ರಂದು ಮಹಾ ಪರಿನಿಬ್ಬಾಣ ಹೊಂದಿದರು. ತಮ್ಮ ಸಾಮಾಜಿಕ ಹೋರಾಟದ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ಜೀವನ ಪೂರ್ತಿ ಹೋರಾಡಿದ ಮಹಾಚೇತನ ಡಾ. ಅಂಬೇಡ್ಕರ್. ‘ವಿವಿಧತೆಯಲ್ಲಿ ಏಕತೆ’ ಸಾರುವ ಉತ್ತಮ ಸಂವಿಧಾನವನ್ನು ಭಾರತದ ಜನತೆಗೆ ಕಲ್ಪಿಸಿದ್ದಾರೆ. ಸಂವಿಧಾನ ಸಮರ್ಪಿಸುವ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನ ಕುರಿತು ‘‘ನಮ್ಮ ಸಂವಿಧಾನವು ಎಲ್ಲ ಕಾಲದಲ್ಲೂ ಆಡಳಿತ ನಡೆಸಲು ಬಲಿಷ್ಠವಾಗಿದೆ. ಒಂದು ವೇಳೆ ಪರಿಸ್ಥಿತಿ ಕೈಮೀರಿ ಹದಗೆಟ್ಟು ಹೋದಲ್ಲಿ ಅದರರ್ಥ ನಮಗೆ ಕೆಟ್ಟ ಸಂವಿಧಾನ ಇದೆಯೆಂದಲ್ಲ, ಸಂವಿಧಾನ ಕೆಟ್ಟ ಮನುಷ್ಯನ ಕೈಯಲ್ಲಿದೆಯೆಂದರ್ಥ’’ ಎಂದು ಹೇಳುತ್ತಾರೆ. ಅವರು ಅಂದು ಆಡಿದ ಈ ಮಾತುಗಳು ಭಾರತದ ಸಂವಿಧಾನದ ಗಟ್ಟಿತನವನ್ನು ಎತ್ತಿ ತೋರಿಸುತ್ತದೆ. ಡಾ. ಅಂಬೇಡ್ಕರ್‌ರವರಿಗೆ ಭಾರತದ ಜನರ ನಾಡಿ ಮಿಡಿತ ಚೆನ್ನಾಗಿ ಗೊತ್ತಿತ್ತು.

ಇಂದು ಸಂವಿಧಾನದ ಬಗ್ಗೆ ಆಕ್ಷೇಪಗಳನ್ನು ಎತ್ತುತ್ತಿರುವ ಸ್ವಾಮೀಜಿಗಳಿಗೆ ಸಂವಿಧಾನ ಬಹು ಭಾಷೆ, ಪ್ರಾಂತ, ಜಾತಿ, ಧರ್ಮ ಇರುವ ಭಾರತಕ್ಕೆ ಜನರು ಒಳಗೊಳ್ಳುವಿಕೆಯನ್ನು ಪುಷ್ಟೀಕರಿಸುತ್ತಿದೆ ಎಂಬ ಅರಿವು ಇಲ್ಲವೆನ್ನಿಸುತ್ತದೆ. ಹಾಗಾಗಿ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ.

ಸಾಮಾಜಿಕ ಹೋರಾಟಗಳನ್ನು ಮೈಗೂಡಿಸಿ ಕೊಂಡಿದ್ದ ಡಾ. ಅಂಬೇಡ್ಕರ್ ಸಾಮಾಜಿಕ ಬದಲಾವಣೆಯಿಂದ ಮಾತ್ರ ಸಮಾನತೆ ಸಾಧಿಸಲು ಸಾಧ್ಯ ಎಂದು ನಂಬಿದ್ದರು. ತಮ್ಮ 60ನೇ ವಯಸ್ಸಿನ ನಂತರ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ದೇಶದ ಅಪಾರ ಸಂಖ್ಯೆಯ ಶೋಷಿತರ ಪರವಾಗಿ ಚಿಂತಿಸುತ್ತಿದ್ದರು. ತಾವು ಹಾಕಿಕೊಂಡಿದ್ದ ದಲಿತರ ಆಭಿವೃದ್ಧಿ ಮತ್ತು ತಮ್ಮ ಜನತಾ ಶಿಕ್ಷಣ ಸಂಸ್ಥೆ ವಿಚಾರವಾಗಿ ಅವರು ಮುಂಬೈ ಮತ್ತು ದಿಲ್ಲಿಗಳಿಗೆ ಹೋಗಿ ಬರುತ್ತಿದ್ದರು. ಇದರ ನಡುವೆ ಭಾರತದ ರಾಜಕೀಯ ವಿಚಾರವಾಗಿ ಅನೇಕ ದೇಶ-ವಿದೇಶದ ರಾಜಕೀಯ ಮುತ್ಸದ್ದಿಗಳು ಅವರ ಅನುಯಾಯಿಗಳು, ಭಾರತದ ಧಾರ್ಮಿಕ ಸಂತರು ಅವರನ್ನು ನಿತ್ಯ ಭೇಟಿ ಮಾಡುತ್ತಿದ್ದರು. ಹೀಗಾಗಿ ಅವರು ತುಂಬಾ ಬಳಲಿದ್ದರು. ಇಂತಹ ಮಹಾ ಸಾಧಕನ ಕೊನೆಯ ಸಂದೇಶಗಳು ಕೂಡ ಬಹಳ ಪರಿಣಾಮಕಾರಿಯಾಗಿದ್ದವು. ದೇಶದ ಭವಿಷ್ಯ ‘ದೀನೋದ್ಧಾರ ದೇಶೋದ್ಧಾರ’ ತತ್ವದಿಂದ ಸಮೃದ್ಧಿಯಾಗುತ್ತದೆ ಎಂದು ಅವರು ನಂಬಿದ್ದರು.

1956 ಮೇ 12ರಂದು ಅವರು ಬಿಬಿಸಿಗೆ ಮಾಡಿದ ಭಾಷಣದಲ್ಲಿ ತಾನು ಬೌದ್ದ ಧರ್ಮವನ್ನು ಏಕೆ ಇಷ್ಟಪಡುತ್ತೇನೆ ಎಂಬ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ. ‘‘ಬೌದ್ಧ ಧರ್ಮ ಒಂದು ಸಮಾನತೆ ಇರುವ ಸಮಾಜ ಸುಧಾರಣಾ ಸುವಾರ್ತೆ ಎಂಬುದನ್ನು ಅರಿತು ಬೆಳೆಸಿದರೆ, ಅದು ವಿಶ್ವಕ್ಕೆ ಶಾಶ್ವತವಾದ ಸುಖಿ ಸಮಾಜ ಪರಿವಾರವಾಗಬಲ್ಲದು’’ ಎಂದು ಅಂದು ಹೇಳಿದರು. ಹೀಗಾಗಿ ಭಾರತದ ಅಕ್ಕಪಕ್ಕದ ಬೌದ್ಧ ದೇಶಗಳಿಗೆ ಹೋಗಿ ಅಧ್ಯಯನ ಕೈಗೊಂಡು, ಶೋಷಿತರು ತಮ್ಮ ಮೇಲೆ ನಡೆಯುವ ಅಸ್ಪಶ್ಯತೆ ಹೋಗಲಾಡಿಸಲು ಸಮಾನತೆ ತತ್ವ ಸಾರುವ ಬೌದ್ಧ ಧರ್ಮ ಅಪ್ಪಿಕೊಳ್ಳಲು ತಿಳಿಸಿದ್ದರು. ಈ ಸಂದರ್ಭದಲ್ಲಿ ಅವರ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಕೃತಿ ಜೊತೆ ಅನೇಕ ಪ್ರಸಿದ್ಧ ಕೃತಿಗಳು ತನ್ನ ಜೀವಿತದ ಅವಧಿಯಲ್ಲಿ ಪ್ರಕಟವಾಗಬೇಕು ಎಂದು ಅವರು ಆಶೆ ಪಟ್ಟಿದ್ದರು. ಇವುಗಳ ತುರ್ತು ಪ್ರಕಟಣೆಗೆ ಆಪ್ತ ಸಹಾಯಕ ಎಂ.ಎಸ್. ರತ್ತು ಜೊತೆ ಹೇಳುತ್ತಿದ್ದರು. ಈ ನಡುವೆ ಅಂಬೇಡ್ಕರ್ 1956ರ ಅಕ್ಟೋಬರ್ 14ರಂದು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. 1956 ನವೆಂಬರ್ 15ರಂದು ನೇಪಾಳದಲ್ಲಿ ವಿಶ್ವ ಬುದ್ಧ ಸಮ್ಮೇಳನ ಮಾಡಿ ನಂತರ ಡಿಸೆಂಬರ್ 5ರಂದು ಅಪಾರ ಅನುಯಾಯಿಗಳನ್ನು ಮನೆಯಲ್ಲೇ ಮಾತಾಡಿಸುತ್ತಾರೆ.

ಅಂಬೇಡ್ಕರ್ ಅವರು 1956 ಜುಲೈ 31ರಂದು ‘‘ನೀರವ ಮೌನದಿಂದ ನಾನು ಏಕೆ ದುಃಖಿತನಾಗಿದ್ದೇನೆಂದು ನಿನಗೆ ತಿಳಿಯದು. ನಾನು ನನ್ನ ಜೀವನದ ಧ್ಯೇಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ! ನನ್ನ ಜನರು ಇತರರೊಂದಿಗೆ ಸರಿ ಸಮಾನರಾಗಿ ಅಧಿಕಾರಕ್ಕೇರಿ ಆಳ್ವಿಕೆ ಮಾಡುವುದನ್ನು ನನ್ನ ಜೀವಿತದ ಕಾಲದಲ್ಲಿ ನೋಡಲು ಬಯಸಿದ್ದೆ. ಅದರೆ ನನ್ನ ಆರೋಗ್ಯ ಕ್ಷೀಣಿಸುತ್ತಿದೆ. ಬಹುತೇಕ ನನ್ನ ಶಕ್ತಿ ಕುಂದಿದೆ. ನಾನು ಸಾಧಿಸಿ ಗಳಿಸಿದ ಫಲವನ್ನು ಕೆಲವು ವಿದ್ಯಾವಂತರು ಅನುಭವಿಸಿ ಸಂತೋಷದಿಂದಿದ್ದಾರೆ. ತುಳಿತಕ್ಕೆ ಒಳಗಾದ ಅವಿದ್ಯಾವಂತರಾದ ಅವರ ಸೋದರ ಬಂಧುಗಳ ಕಡೆ ಕಾಳಜಿ ವಹಿಸದೆ ಬಹುತೇಕ ನಿಷ್ಪ್ರಯೋಜಕ ಸ್ವಾರ್ಥಿಗಳಾಗಿದ್ದಾರೆ’’ ಎಂದು ಆಪ್ತ ಸಹಾಯಕ ಎಂ.ಎಸ್. ರತ್ತು ಜೊತೆ ತಮ್ಮ ನೋವುಗಳನ್ನು ತೋಡಿಕೊಂಡಿದ್ದರು. ಅಂದು ರಾತ್ರಿ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಕೃತಿಯ ಪ್ರಸ್ತಾವನೆ ನೋಡಲು ರತ್ತುವಿನಿಂದ ಪಡೆದು ಅಂದು ಆ ಪುಸ್ತಕವನ್ನು ಎದೆಯ ಮೇಲೆ ಇಟ್ಟುಕೊಂಡು ಮಲಗಿದ್ದೇ ಕೊನೆ 1956 ಡಿಸೆಂಬರ್-6ಮುಂಜಾನೆ ಅವರು ಮಹಾ ಪರಿನಿಬ್ಬಾಣ ಹೊಂದುತ್ತಾರೆ.

ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಬುದ್ಧನ ಹಾದಿಯಲ್ಲಿ ಸಾಗಿ ಜಾತಿ ಮತ್ತು ಅಸ್ಪಶ್ಯತೆ ಎಂಬ ವಿಷ ವರ್ತುಲದಿಂದ ಮುಕ್ತರಾಗಿ ಹೊರ ಬಂದು ಸಮಾನತೆ ಜೀವನ ನಡೆಸಿ ಎಂದು ಹೇಳಿದ್ದಾರೆ. ಈ ದಿಕ್ಕಿನಲ್ಲಿ ದಲಿತರು ಸಾಗದೇ ಗೊಡ್ಡು, ಮೂಢ ನಂಬಿಕೆಗಳನ್ನು ಆಚರಿಸುತ್ತಾ ಡಾ. ಅಂಬೇಡ್ಕರ್ ಆಶಯವನ್ನೇ ಮರೆತಿದ್ದಾರೆ. ಅಂಬೇಡ್ಕರ್‌ಹಾದಿಯಲ್ಲಿ ಸಾಗಲು ದಲಿತರಿಗೆ ಇನ್ನೆಷ್ಟು ದಿನ ಬೇಕು? ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಒಂದು ಕಡೆ ಉತ್ತಮ ಸಂವಿಧಾನ ಈ ದೇಶದಲ್ಲಿ ಜಾರಿ ಇದ್ದರೂ, ಕೆಲವು ಮತೀಯವಾದಿಗಳು ಸಂವಿಧಾನದ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕವಾಗಿ ಸಂವಿಧಾನ ಎಲ್ಲರನ್ನು ಒಳಗೊಳ್ಳಲು ಕಾರಣವಾಗಿದೆ ಎಂಬುದೇ ಇವರಿಗೆ ತಿಳಿದಿಲ್ಲ. ಮತ್ತೊಂದು ಕಡೆ ಶೋಷಿತ ಸಮುದಾಯಗಳಲ್ಲಿ ಸವಲತ್ತು ಪಡೆದವರು ತಮ್ಮ ಸೋದರ, ಬಂಧುಗಳ ಬಗ್ಗೆ ಚಿಂತಿಸುವ ಅಗತ್ಯವನ್ನೇ ಮರೆತಿದ್ದಾರೆ. ಹೀಗಾಗಿ ಮಹಾಮಾನವತಾವಾದಿ ಅಂಬೇಡ್ಕರ್ ಆಶಯಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಶೋಷಿತರು ಮತ್ತು ಮತೀಯವಾದಿಗಳು ಇಬ್ಬರೂ ವಿಫಲರಾಗಿದ್ದಾರೆ. ಡಾ. ಅಂಬೇಡ್ಕರ್‌ರ ನಿಜವಾದ ತತ್ವ, ಸಿದ್ಧಾಂತ ಮತ್ತು ವಿಚಾರಗಳ ಕಡೆ ಗಮನ ನೀಡಿದರೆ ಮಾತ್ರ ಡಾ. ಅಂಬೇಡ್ಕರ್ ಆಶಯ ಈಡೇರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ

contributor

Similar News