ಹಿಮಂತ ಬಿಸ್ವಾ ಶರ್ಮಾ ಜಾರ್ಖಂಡ್‌ಗೆ ಸತ್ಯ ಶೋಧನಾ ತಂಡ ಕಳಿಸುವ ಉದ್ದೇಶವೇನು?

ಯಾವ ಬುಡಕಟ್ಟಿನವರ ಹೆಸರಲ್ಲಿ ಜಾರ್ಖಂಡ್‌ನಲ್ಲಿ ಕಾಳಜಿಯ ನಾಟಕವಾಡಿದ್ದರೋ ಅದೇ ಬುಡಕಟ್ಟಿನವರ ವಿಷಯದಲ್ಲಿ ಬಿಜೆಪಿಯ ಬಣ್ಣ ಕಳಚುವುದಕ್ಕೆ ಹೇಮಂತ್ ಸೊರೇನ್ ಮುಂದಾಗಿದ್ದಾರೆ. ಜಾರ್ಖಂಡ್‌ನ ಸರ್ವಪಕ್ಷ ಸಮಿತಿಯೊಂದು ಅಧ್ಯಯನಕ್ಕಾಗಿ ಅಸ್ಸಾಮಿಗೆ ಬರುತ್ತಿದೆ ಎನ್ನುವಾಗ ಹಿಮಂತ ಬಿಸ್ವಾ ಶರ್ಮಾಗೆ ಫಜೀತಿಯಾಗಿರುವ ಹಾಗಿದೆ. ಹಾಗಾಗಿಯೇ ನಾವೂ ಎರಡು ಟೀಂ ಕಳಿಸುವುದಾಗಿ ಅರ್ಥಹೀನ ಹೇಳಿಕೆ ನೀಡಿದ್ದಾರೆ. ತಾನು ಕಳೆದುಹೋಗಿಬಿಡುತ್ತೇನೇನೊ ಎಂಬ ಭಯವಿದ್ದಂತಿರುವ ಹಿಮಂತ ಬಿಸ್ವಾ ಶರ್ಮಾ ಚಲಾವಣೆಯಲ್ಲಿರುವುದಕ್ಕಾಗಿಯೇ ಆಡುವ ಆಟಗಳು ಅಂತಿಮವಾಗಿ ಅವರನ್ನು ಭಾರತದ ರಾಜಕಾರಣದ ಹೊಸ ಜೋಕರ್ ಆಗಿಸಿಬಿಟ್ಟಿವೆಯೆ?

Update: 2024-12-05 06:29 GMT

ಮೊನ್ನೆಯಷ್ಟೇ ಮುಗಿದ ಮತ್ತು ಹೇಮಂತ್ ಸೊರೇನ್ ದೊಡ್ಡ ಗೆಲುವು ದಾಖಲಿಸಿದ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯ ಉಸ್ತುವಾರಿ ವಹಿಸಿದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ.

ತನ್ನ ಬತ್ತಳಿಕೆಯಲ್ಲಿರುವ ದ್ವೇಷಾಸ್ತ್ರಗಳನ್ನೆಲ್ಲ ಬಳಸಿದರೂ ಹಿಮಂತ ಬಿಸ್ವಾ ಶರ್ಮಾ ಆಟ ಜಾರ್ಖಂಡ್‌ನಲ್ಲಿ ನಡೆಯಲೇ ಇಲ್ಲ.

ಅಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಬಳಸದೇ ಉಳಿದ ಫಾರ್ಮಲಾಗಳೇ ಇಲ್ಲ. ವಿಷ ಕಾರದೇ ಇದ್ದ ಮಾತುಗಳೇ ಇಲ್ಲ. ಆದರೂ ಜಾರ್ಖಂಡ್ ಹಿಮಂತ ಬಿಸ್ವಾ ಶರ್ಮಾ ಎಂಬ ದ್ವೇಷ ಭಾಷಣಕೋರನನ್ನು ಎಲ್ಲಿಡಬೇಕೋ ಅಲ್ಲಿಟ್ಟು ಮುಂದೆ ಸಾಗಿತ್ತು. ಬಿಜೆಪಿ ಅಲ್ಲಿ ಮಣ್ಣು ಮುಕ್ಕಿತು.

ಮತ್ತೆ ಸಿಎಂ ಹುದ್ದೆಗೆ ಏರಿದ ಹೇಮಂತ್ ಸೊರೇನ್, ಅಸ್ಸಾಮಿನ ಟೀ ಎಸ್ಟೇಟುಗಳಲ್ಲಿ ದುಡಿಯುತ್ತಿರುವ ಜಾರ್ಖಂಡ್ ಬುಡಕಟ್ಟು ಜನರ ಸ್ಥಿತಿ ಅಧ್ಯಯನಕ್ಕೆ ಒಂದು ಸತ್ಯ ಶೋಧನಾ ತಂಡ ಕಳಿಸಲು ನಿರ್ಧರಿಸುತ್ತಾರೆ.

ಅದು ಸರ್ವಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿರಲಿದೆ.

ತಮಾಷೆಯೆಂದರೆ, ಇದಕ್ಕೆ ಪ್ರತಿಯಾಗಿ ಹಿಮಂತ ಬಿಸ್ವಾ ಶರ್ಮಾ ತಾನೂ ಕೂಡ ಟೀಂ ಕಳಿಸುತ್ತೇನೆ ಎಂದು ತಯಾರಾಗಿಯೇ ಬಿಟ್ಟಿದ್ದಾರೆ.

ಅವರು ನಮ್ಮ ರಾಜ್ಯಕ್ಕೆ ತಂಡ ಕಳಿಸುತ್ತಿದ್ದಾರೆ. ನಾವೂ ಜಾರ್ಖಂಡ್‌ಗೆ ತಂಡ ಕಳಿಸುತ್ತೇವೆ. 5ರಂದು ಇದರ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಹೇಮಂತ್ ಸೊರೇನ್ ಅಸ್ಸಾಮಿಗೆ ತಂಡ ಕಳಿಸುತ್ತಿರುವುದು ತಮ್ಮ ರಾಜ್ಯದ ಬುಡಕಟ್ಟು ಜನರು ಅಸ್ಸಾಮ್ ಟೀ ಎಸ್ಟೇಟುಗಳಲ್ಲಿ ಯಾವ ಸ್ಥಿತಿಯಲ್ಲಿದ್ಧಾರೆ ಎಂಬುದನ್ನು ಅಧ್ಯಯನ ಮಾಡುವುದಕ್ಕೆ. ಆದರೆ ಹಿಮಂತ ಬಿಸ್ವಾ ಶರ್ಮಾ ಜಾರ್ಖಂಡ್‌ಗೆ ಯಾಕಾದರೂ ತಂಡ ಕಳಿಸುತ್ತಿದ್ದಾರೆ? ಅಲ್ಲಿ ಅವರಿಗೆ ಏನು ಮಾಡುವುದಕ್ಕಿದೆ?

ಜಾರ್ಖಂಡ್‌ನದು ಒಂದು ಟೀಂ ಆದರೆ ತಮ್ಮದು ಎರಡು ಟೀಂ ಎಂದು ಹೇಳಿರುವ ಹಿಮಂತ ಬಿಸ್ವಾ ಶರ್ಮಾಗೆ ಯಾವ ಉದ್ದೇಶಕ್ಕಾಗಿ ಕಳಿಸಬೇಕಾಗಿದೆ ಎಂಬ ಸ್ಪಷ್ಟತೆಯೇ ಇಲ್ಲ.

ವಾಸ್ತವದಲ್ಲಿ ಅಂತಹದ್ದೊಂದು ತಂಡ ಕಳಿಸಲು ಅಸ್ಸಾಮಿಗೆ ಕಾರಣಗಳೇ ಇಲ್ಲ. ಉದ್ದೇಶವೇ ಇಲ್ಲವೆಂದ ಮೇಲೆ ಅದೆಂಥ ಸತ್ಯ ಶೋಧನಾ ತಂಡ?

ಜಾರ್ಖಂಡ್ ಚುನಾವಣೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಎಷ್ಟೇ ತಿಪ್ಪರಲಾಗ ಹಾಕಿದರೂ ಬೇಳೆ ಬೇಯಲಿಲ್ಲ.

ಜಾರ್ಖಂಡ್‌ನಲ್ಲಿ ಮದ್ರಸಗಳನ್ನು ಮುಚ್ಚುತ್ತೇನೆ ಎಂದರು, ಹಿಂದೂಗಳನ್ನು ಮುಸ್ಲಿಮರು ಲೂಟಿಗೈಯುತ್ತಿದ್ದಾರೆ ಎಂದು ಅತ್ಯಂತ ಭಯಾನಕ ಹೇಳಿಕೆ ನೀಡಿದ್ದೂ ಆಯಿತು.

ಮುಸ್ಲಿಮರು ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ, ಆದರೆ ಹಿಂದೂ ಮತಗಳು ವಿಭಜನೆಯಾಗುತ್ತವೆ ಎಂದು ಮತ್ತೊಂದು ಹಳೇ ಫಾರ್ಮುಲಾವನ್ನೂ ಬಳಸಿದರು.

ಜಾರ್ಖಂಡ್‌ನ ಹೇಮಂತ್ ಸೊರೇನ್ ಸರಕಾರ ಬಾಂಗ್ಲಾದೇಶೀ ನುಸುಳುಕೋರರನ್ನು ಬೆಂಬಲಿಸುತ್ತಿದೆ ಎಂದು ಶರ್ಮಾ ಆರೋಪಿಸಿದರು.

ಭಾರತಕ್ಕೆ ನುಸುಳಿರುವ ಅಕ್ರಮ ವಲಸಿಗರಿಂದಾಗಿ ಜಾರ್ಖಂಡ್‌ನಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಹಸಿ ಹಸಿ ಸುಳ್ಳು ಹೇಳಿಕೆಯನ್ನೂ ಅವರು ನೀಡಿದರು.

ಇಷ್ಟೆಲ್ಲದರ ನಂತರವೂ ಜಾರ್ಖಂಡ್‌ನಲ್ಲಿ ಬಿಜೆಪಿಯ ಆಟ ಏನೇನೂ ನಡೆಯಲಿಲ್ಲ.

ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಹೇಮಂತ್ ಸೊರೇನ್ ಅಸ್ಸಾಂ ಟೀ ತೋಟಗಳಲ್ಲಿ ಜಾರ್ಖಂಡ್‌ನ ಬುಡಕಟ್ಟು ಸಮುದಾಯದವರು ಅನುಭವಿಸುತ್ತಿರುವ ಸಂಕಟ ಏನೆಂಬುದನ್ನು ತಿಳಿಯಲು ಸತ್ಯ ಶೋಧನಾ ತಂಡವನ್ನು ಕಳಿಸಲಿದ್ದಾರೆ.

ಜಾರ್ಖಂಡ್‌ನಲ್ಲಿ ಬುಡಕಟ್ಟು ಜನರಾಗಿರುವ ಅವರು ಅಸ್ಸಾಮಿನಲ್ಲಿ ಒಬಿಸಿ ವರ್ಗದಡಿ ಬರುತ್ತಾರೆ.

ಜಾರ್ಖಂಡ್‌ನಲ್ಲಿ ಬುಡಕಟ್ಟಿನವರ ಭೂಮಿಯನ್ನೆಲ್ಲ ಬಾಂಗ್ಲಾದೇಶದಿಂದ ನುಸುಳಿ ಬಂದಿರುವ ಮುಸ್ಲಿಮರು ಅತಿಕ್ರಮಿಸುತ್ತಿದ್ದಾರೆ ಎಂದು ದ್ವೇಷದ ಸುಳ್ಳು ಕಥೆ ಹೇಳಿದ್ದರು ಹಿಮಂತ ಬಿಸ್ವಾ ಶರ್ಮಾ. ಈಗ ಅವರದೇ ಅಸ್ಸಾಮಿನಲ್ಲಿ ಅದೇ ಬುಡಕಟ್ಟಿನವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ನೋಡುವುದು ಸೊರೇನ್ ಕಳಿಸಲಿರುವ ತಂಡದ ಉದ್ದೇಶವಾಗಿರಲಿದೆ.

ಬುಡಕಟ್ಟಿನವರ ಬಗ್ಗೆ ಹುಸಿ ಕಾಳಜಿ ತೋರಿಸುವ, ಮೊಸಳೆ ಕಣ್ಣೀರು ಹಾಕುವ ಬಿಜೆಪಿಯ ಅಸಲಿಯತ್ತನ್ನು ಅದರದ್ದೇ ಸರಕಾರವಿರುವ ಅಸ್ಸಾಮಿನಲ್ಲಿಯೇ ಬಯಲಿಗೆ ತರುವುದಕ್ಕೆ ಹೇಮಂತ್ ಸೊರೇನ್ ಈ ಮೂಲಕ ಯತ್ನಿಸುತ್ತಿರುವ ಹಾಗಿದೆ.

ಅಸ್ಸಾಮಿನಲ್ಲಿ ಅಧ್ಯಯನ ನಡೆಸಲಿರುವ ತಂಡ ಹೊರಗೆ ತರಬಹುದಾದ ಸತ್ಯಗಳು, ಬುಡಕಟ್ಟಿನವರ ಬಗ್ಗೆ ಅಪಾರ ಕಾಳಜಿಯಿದ್ದ ಹಾಗೆ ಚುನಾವಣೆ ವೇಳೆ ತೋರಿಸಿಕೊಂಡಿದ್ದ ಹಿಮಂತ ಬಿಸ್ವಾ ಶರ್ಮಾಗೆ ಸರಿಯಾದ ಹೊಡೆತವನ್ನೇ ಕೊಡಲೂ ಬಹುದು.

ಆದರೆ, ಹಿಮಂತ ಬಿಸ್ವಾ ಶರ್ಮಾ ಮಾತ್ರ ಜಾರ್ಖಂಡ್‌ನ ಒಂದು ಟೀಮಿಗೆ ತಮ್ಮದು ಎರಡು ಟೀಂ ಎಂದು ಹೇಳಿದ್ದಾರೆ.ಆದರೆ ಅದರ ಉದ್ದೇಶವೇನು ಎಂಬುದು ಮಾತ್ರ ಅವರಿಗೇ ಗೊತ್ತಿಲ್ಲ.

ಮೂಲತಃ ಕಾಂಗ್ರೆಸ್ ಮನುಷ್ಯನಾಗಿದ್ದ ಈ ಹಿಮಂತ ಬಿಸ್ವಾ ಶರ್ಮಾ ಆರೋಗ್ಯ ಮಂತ್ರಿಯಾಗಿ ಬಹುಕಾಲ ಅಧಿಕಾರದಲ್ಲಿದ್ದರೂ, ಸಿಎಂ ಆಗಬೇಕೆಂಬ ಆಸೆಯಿಂದ ಕೊರಗುತ್ತಿದ್ದವರು ಕಡೆಗೆ ಬಿಜೆಪಿ ಸೇರಿದರು.

ಮೈತುಂಬ ಭ್ರಷ್ಟಾಚಾರ ಕೇಸುಗಳನ್ನು ಅಂಟಿಸಿಕೊಂಡಿದ್ದ ಶರ್ಮಾಗೆ ಬಚಾವಾಗುವುದಕ್ಕೆ ಬಿಜೆಪಿ ವಾಷಿಂಗ್ ಮೆಷಿನ್ ಅನಿವಾರ್ಯವಾಗಿತ್ತು.

ಕಾಂಗ್ರೆಸ್‌ನಲ್ಲಿರುವಾಗ ಹೇಳಿಕೆ ಕೊಡುವುದು ಕೂಡ ಗೊತ್ತಿರದ ಹಾಗಿದ್ದ ಶರ್ಮಾ, ಬಿಜೆಪಿ ಸೇರಿ ಅಸ್ಸಾಂ ಸಿಎಂ ಕೂಡ ಆಗುತ್ತಿದ್ದಂತೆ ಮಾತು ಶುರು ಮಾಡಿದರು. ಒಂದೇ ಸಮನೆ ಕೋಮುದ್ವೇಷದ ಕೆಂಡ ಕಾರತೊಡಗಿದರು.

ಅಮಿತ್ ಶಾ ಪಾಲಿನ ನಂಬಿಗಸ್ಥರ ಸಾಲಿನಲ್ಲಿರುವ ಕಾರಣಕ್ಕೇ ವಿಶೇಷ ಮರ್ಯಾದೆಯೂ ಪಕ್ಷದಲ್ಲಿ ಶರ್ಮಾಗೆ ಸಿಕ್ಕಿಬಿಟ್ಟಿದೆ. ಈ ಸಮಯವನ್ನು ಚೆನ್ನಾಗಿಯೇ ಬಳಸಿಕೊಳ್ಳಬೇಕೆಂಬ ಇರಾದೆಯೂ ಅವರಲ್ಲಿ ಬೆಳೆದಿರುವ ಹಾಗಿದೆ.

ಈಶಾನ್ಯ ಭಾರತದಲ್ಲಿ ಬಿಜೆಪಿಯ ಪಾಯಿಂಟ್ ಮ್ಯಾನ್ ಎಂದೇ ಗುರುತಿಸಲ್ಪಡುವ ಹಿಮಂತಗೆ ದ್ವೇಷವೊಂದೇ ಅಸ್ತ್ರ. ಅದಕ್ಕೆ ಬೇಕಾದಷ್ಟು ಹಸಿ ಸುಳ್ಳಿನ ಮಸಾಲೆ ಸೇರಿಸಿಕೊಳ್ಳುತ್ತಾರೆ.

ಬಿಜೆಪಿಯ ಮಡಿಲ ಮೀಡಿಯಾಗಳಿಗೆ ಹೆಡ್‌ಲೈನ್ ಆಗುವ ಕಂಟೆಂಟ್ ಕೊಡುತ್ತ ಸಾಧ್ಯವಾದಷ್ಟೂ ಸುದ್ದಿಯಲ್ಲಿರಲು ಹಾತೊರೆಯುತ್ತಿರುವಂತೆ ಕಾಣಿಸುವ ಶರ್ಮಾಗೆ, ಹೇಗೆಂದರೆ ಹಾಗೆ ಹೇಳಿಕೆ ಕೊಡುವ ಚಾಳಿಯಿದೆ.

ಅಸ್ಸಾಮ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ ಎಂದು ಹೇಳಿ ನಗೆಪಾಟಲಿಗೀಡಾಗಿದ್ದರು ಇದೇ ಹಿಮಂತ ಶರ್ಮಾ. ಆದರೆ ಅದು ಹಸಿ ಸುಳ್ಳು ಎಂದು ಬಯಲಾಗಿ ಇನ್ನಷ್ಟು ಮುಜುಗರಕ್ಕೆ ಒಳಗಾದರು.

ಜಾರ್ಖಂಡ್‌ನಲ್ಲಿ ಪಕ್ಷ ಗೆಲ್ಲಿಸಬೇಕೆಂಬ ಹೊಣೆಯನ್ನು ಶರ್ಮಾಗೆ ವಹಿಸಲಾಗಿತ್ತು. ಆದರೆ ಅದು ಹಿಮಂತ ಬಿಸ್ವಾ ಶರ್ಮಾ ಕಡೆಯಿಂದ ಆಗಿಲ್ಲ. ಜಾರ್ಖಂಡ್‌ನಲ್ಲಿ ಅವರು ಎತ್ತಿದ್ದ ಯಾವ ವಿಷಯವೂ ಬಿಜೆಪಿಗೆ ಲಾಭ ತರಲಿಲ್ಲ.

ಜಾರ್ಖಂಡ್‌ನಲ್ಲಿ ವಿಪಕ್ಷವಾಗಿ ಎತ್ತಬೇಕಾಗಿದ್ದ ಯಾವುದೇ ವಿಷಯಗಳನ್ನು ಚುನಾವಣೆ ಸಂದರ್ಭ ಎತ್ತಲೇ ಇಲ್ಲ ಈ ಹಿಮಂತ ಶರ್ಮಾ. ಬದಲಾಗಿ ಅದೇ ಹಳೇ ಸವಕಲು ಸುಳ್ಳು ಹಾಗೂ ದ್ವೇಷವನ್ನೇ ಭರಪೂರ ಹರಿಬಿಟ್ಟರು.

ಹಿಮಂತ್ ಬಿಸ್ವಾ ಶರ್ಮಾ ಎತ್ತಿದ್ದ ಒಳನುಸುಳುವಿಕೆ ವಿಷಯ ದೊಡ್ಡ ಗುಲ್ಲೆಬ್ಬಿಸಿತು. ಆದರೆ ಅದು ಬರೀ ಸುಳ್ಳಾಯಿತು.

ಬಿಜೆಪಿ ಏನೇ ಮಾಡಿದರೂ ಕಣ್ಣು ಮುಚ್ಚಿಕೊಂಡು ಕೂತುಬಿಡುವ ಚುನಾವಣಾ ಆಯೋಗವೇ ಶರ್ಮಾ ಪ್ರಕಟಿಸಿದ ಜಾಹೀರಾತನ್ನು ವಾಪಸ್ ಪಡೆಯಲು ಹೇಳಿತು. ಹಾಗಾದರೆ ಅದೆಷ್ಟು ಕೆಳ ಮಟ್ಟದ್ದಾಗಿತ್ತು ಎಂಬುದನ್ನು ಸುಲಭವಾಗಿ ತಿಳಿಯಬಹುದು.

ಹಿಮಂತ ಬಿಸ್ವಾ ಶರ್ಮಾ ಎತ್ತಿದ್ದ ಮತ್ತೊಂದು ವಿಷಯ, ಏಕರೂಪ ನಾಗರಿಕ ಸಂಹಿತೆ.

ಬುಡಕಟ್ಟಿನವರೇ ಹೆಚ್ಚಿದ್ದ ಜಾರ್ಖಂಡ್‌ನಲ್ಲಿ ಯುಸಿಸಿ ಬುಡಕಟ್ಟಿನವರ ಪಾಲಿಗೆ ಅಪಾಯದ ಗಂಟೆ ಎಂದು ಹೇಮಂತ್ ಸೊರೇನ್ ಪ್ರತಿ ಅಸ್ತ್ರ ಬಳಸಿದ್ದರು.

ಬಿಜೆಪಿಗೆ ತೀವ್ರ ಹಿನ್ನಡೆಯಾಯಿತು.

ಕಡೆಗೆ, ಯುಸಿಸಿಯನ್ನು ಬುಡಕಟ್ಟು ಜನರ ಮೇಲೆ ಹೇರುವ ಪ್ರಶ್ನೆಯಿಲ್ಲ ಎಂದು ಶಾ ಹೇಳಬೇಕಾಯಿತು.

ಹೀಗೆ ಹಿಮಂತ ಬಿಸ್ವಾ ಶರ್ಮಾ ಪ್ರಯೋಗಿಸಿದ ಎರಡು ಪ್ರಮುಖ ಅಸ್ತ್ರಗಳು ಜಾರ್ಖಂಡ್‌ನಲ್ಲಿ ಠುಸ್ಸೆಂದಿದ್ದವು.

ಅದಾದ ಬಳಿಕ ಅವರು ಬಳಸಿದ್ದು ಹಿಂದೂ-ಮುಸ್ಲಿಮ್ ಕಾರ್ಡ್.

ಬಾಂಗ್ಲಾದೇಶದಿಂದ ಬರುವವರ ಸಂಖ್ಯೆ ಏರುತ್ತ, ಇಲ್ಲಿನ ಹಿಂದೂಗಳಿಗೆ ಅಪಾಯ ಎದುರಾಗಿದೆ ಎಂದು ಬಿಂಬಿಸುವ ಯತ್ನ ಮಾಡಿದರು. ಅದು ಕೂಡ ವರ್ಕೌಟ್ ಆಗದೇ ಹೋಯಿತು.

ಹೀಗೆ ಹಿಮಂತ ಬಿಸ್ವಾ ಶರ್ಮಾ ಸೋತ ಅವಸ್ಥೆಯಲ್ಲಿರುವಾಗಲೇ, ಅವರು ಯಾವ ಬುಡಕಟ್ಟಿನವರ ಹೆಸರಲ್ಲಿ ಜಾರ್ಖಂಡ್‌ನಲ್ಲಿ ಕಾಳಜಿಯ ನಾಟಕವಾಡಿದ್ದರೋ ಅದೇ ಬುಡಕಟ್ಟಿನವರ ವಿಷಯದಲ್ಲಿ ಬಿಜೆಪಿಯ ಬಣ್ಣ ಕಳಚುವುದಕ್ಕೆ ಹೇಮಂತ್ ಸೊರೇನ್ ಮುಂದಾಗಿದ್ದಾರೆ.

ಜಾರ್ಖಂಡ್‌ನ ಸರ್ವಪಕ್ಷ ಸಮಿತಿಯೊಂದು ಅಧ್ಯಯನಕ್ಕಾಗಿ ಅಸ್ಸಾಮಿಗೆ ಬರುತ್ತಿದೆ ಎನ್ನುವಾಗ ಹಿಮಂತ ಬಿಸ್ವಾ ಶರ್ಮಾಗೆ ಫಜೀತಿಯಾಗಿರುವ ಹಾಗಿದೆ. ಹಾಗಾಗಿಯೇ ನಾವೂ ಎರಡು ಟೀಂ ಕಳಿಸುವುದಾಗಿ ಅರ್ಥಹೀನ ಹೇಳಿಕೆ ನೀಡಿದ್ದಾರೆ.

ತಾನು ಕಳೆದುಹೋಗಿಬಿಡುತ್ತೇನೇನೊ ಎಂಬ ಭಯವಿದ್ದಂತಿರುವ ಹಿಮಂತ ಬಿಸ್ವಾ ಶರ್ಮಾ ಚಲಾವಣೆಯಲ್ಲಿರುವುದಕ್ಕಾಗಿಯೇ ಆಡುವ ಆಟಗಳು ಅಂತಿಮವಾಗಿ ಅವರನ್ನು ಭಾರತದ ರಾಜಕಾರಣದ ಹೊಸ ಜೋಕರ್ ಆಗಿಸಿಬಿಟ್ಟಿವೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News