ಸಾಂವಿಧಾನಿಕ ನೈತಿಕತೆಯನ್ನು ನೆನಪಿಸುವ ಮತ್ತೊಂದು ದಿನ
ಸಂವಿಧಾನವನ್ನು ಎದೆಗೊತ್ತಿಕೊಂಡು, ಗಣತಂತ್ರ ದಿನವನ್ನು ಆಚರಿಸುವ ಮುನ್ನ ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ಸ್ಥಾಯಿಭಾವವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಭಾವವನ್ನು ಪರಿಣಾಮಕಾರಿಯಾಗಿ ತಳಮಟ್ಟದ ಪ್ರತೀ ವ್ಯಕ್ತಿಗೂ ತಲುಪಿಸಿ ಮನದಟ್ಟು ಮಾಡುವುದು ನಮ್ಮ ಜವಾಬ್ದಾರಿಯಾಗಬೇಕಿದೆ. ಪರಸ್ಪರ ಶತ್ರುಗಳಿಲ್ಲದ, ಅಸ್ಮಿತೆಗಳ ಭೇದವಿಲ್ಲದ, ಸಹಬಾಳ್ವೆಯ ದ್ಯೋತಕವಾದ, ಅನ್ಯತೆಯ ಭಾವವಿಲ್ಲದ, ಹೊರಗಿಟ್ಟು ನೋಡುವ ಮನಸ್ಥಿತಿಯಿಲ್ಲದ ಒಂದು ಸಮಾಜವನ್ನು ನಿರ್ಮಿಸುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಸಮಾಜದ ನಿರ್ಮಾಣಕ್ಕಾಗಿ ಪಣತೊಡುವುದು ವರ್ತಮಾನ ಭಾರತದ ಪ್ರಥಮ ಆದ್ಯತೆಯಾಗಬೇಕಿದೆ. ಇದಕ್ಕೆ ಅಡ್ಡಿಯಾಗುವಂತಹ ಯಾವುದೇ ಬೆಳವಣಿಗೆಗಳ ವಿರುದ್ಧ ಹೋರಾಡುತ್ತಲೇ ಬಹುತ್ವ ಭಾರತದ ಸಮನ್ವಯದ ನೆಲೆಯನ್ನು ಕಾಪಾಡಬೇಕಿದೆ.
ವರ್ತಮಾನ ಭಾರತದ ಅಂತಃಸತ್ವವನ್ನು ಕೊಂಚ ಮಟ್ಟಿಗಾದರೂ ಕದಡಬಹುದಾದ, ಭವಿಷ್ಯ ಭಾರತದ ದಿಕ್ಕು ದೆಸೆಯನ್ನು ಆಮೂಲಾಗ್ರವಾಗಿ ಬದಲಾಯಿಸಬಹುದಾದ 2024ರ ಮಹಾ ಚುನಾವಣೆಗಳ ನೆರಳಿನಲ್ಲೇ ದೇಶವು ತನ್ನ 75ನೆಯ ಗಣತಂತ್ರ ದಿನವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯಪೂರ್ವ ಭಾರತದ ದಾರ್ಶನಿಕರ ಮುಂಗಾಣ್ಕೆ ಹಾಗೂ ದೂರಗಾಮಿ ದೃಷ್ಟಿಕೋನದ ಪ್ರತಿಫಲವಾಗಿ ಡಾ. ಬಿ.ಆರ್.ಅಂಬೇಡ್ಕರ್‌ಅವರ ದಾರ್ಶನಿಕ ನೆಲೆಯಲ್ಲೇ ರಚಿಸಲ್ಪಟ್ಟ ಭಾರತದ ಸಂವಿಧಾನವನ್ನು ಸ್ವತಂತ್ರ ಭಾರತ ಅಂಗೀಕರಿಸಿ, ಅಳವಡಿಸಿ, ಅನುಷ್ಠಾನಗೊಳಿಸಿದ ಮಹತ್ವದ ದಿನವಾಗಿ ಗಣತಂತ್ರ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಸಾರ್ವಭೌಮತ್ವವನ್ನು ಸಾಕ್ಷೀಕರಿಸುವ ಸಂವಿಧಾನದ ಆಶಯಗಳಂತೆಯೇ 1950ರ ಜನವರಿ 26ರಂದು ದೇಶವನ್ನು ಗಣತಂತ್ರ ಎಂದು ಘೋಷಿಸಲಾಗಿದೆ. ಗಣತಂತ್ರ ಭಾರತ ತನ್ನ 75ನೆಯ ಸುವರ್ಣ ಸಂವತ್ಸರವನ್ನು ಪ್ರವೇಶಿಸುತ್ತಿದೆ.
ಕಳೆದ ಎರಡು ದಶಕಗಳಲ್ಲಿ ಭಾರತದ ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚು ಚರ್ಚೆಗೊಳಗಿರುವ ಭಾರತದ ಸಂವಿಧಾನ, ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ತಲುಪಿರುವುದು ನಿರ್ವಿವಾದ ಅಂಶ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಅತಿ ಹೆಚ್ಚು ನಮ್ಯ (Flexible) ಸಂವಿಧಾನ ಎಂಬ ಹೆಸರಿನೊಂದಿಗೇ ಕಟ್ಟಕಡೆಯ ವ್ಯಕ್ತಿಯಲ್ಲೂ ಭರವಸೆಯನ್ನು ಮೂಡಿಸಿರುವ ಭಾರತದ ಸಂವಿಧಾನ ನಮ್ಮನ್ನು ಹಾಗೂ ನಾವು ಆಯ್ಕೆ ಮಾಡಿಕೊಂಡ ಸಂಸದೀಯ ಪ್ರಜಾಪ್ರಭುತ್ವವನ್ನು ಸದಾ ಕಾಪಾಡುತ್ತದೆ ಎಂಬ ವಿಶ್ವಾಸ ಇಂದಿಗೂ ಇರುವುದಾದರೂ, ಸಾಂವಿಧಾನಿಕ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿಯುಳ್ಳ ಸರಕಾರಗಳ ಆಡಳಿತ ನೀತಿಗಳು ಈ ವಿಶ್ವಾಸವನ್ನು ಕುಂದಿಸುತ್ತಿರುವುದು ವರ್ತಮಾನದ ವಾಸ್ತವ. ಡಾ. ಬಿ.ಆರ್.ಅಂಬೇಡ್ಕರ್ ಅಪೇಕ್ಷಿಸಿದ/ನಿರೀಕ್ಷಿಸಿದ್ದ ಆಳ್ವಿಕೆಯ ಸಾಂವಿಧಾನಿಕ ನೈತಿಕತೆ ಸತತವಾಗಿ ಕುಸಿಯುತ್ತಿರುವುದರಿಂದ ತಳಮಟ್ಟದ ಸಮಾಜದಲ್ಲಿ ಜನಸಾಮಾನ್ಯರ ಆತಂಕಗಳು ಮತ್ತಷ್ಟು ಹೆಚ್ಚಾಗುತ್ತಿದೆ.
ಸಂವಿಧಾನ ಪೀಠಿಕೆಯ ಓದು ಇಂದು ಸಾಮಾನ್ಯ ಜನತೆಯ ನಡುವೆಯೂ ಹಾಡುಗಳ ರೂಪದಲ್ಲಿ ಹರಿದಾಡುತ್ತಿದ್ದು ಹಲವಾರು ಸಮಾಜಮುಖಿ ಚಿಂತಕರು ಕಿರುಹೊತ್ತಿಗೆಗಳ ಮೂಲಕ ಸಾಂವಿಧಾನಿಕ ನಿಯಮಗಳನ್ನು, ಆಶಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಕರ್ನಾಟಕ ಸರಕಾರ ಸಂವಿಧಾನ ಪೀಠಿಕೆಯ ಪಠಣವನ್ನು ಸಾರ್ವತ್ರೀಕರಿಸಿದ್ದು ಶಾಲಾ ಕಾಲೇಜುಗಳಲ್ಲಿ ಚಾಲನೆ ನೀಡಿದೆ. ಪ್ರಾರ್ಥನೆಗಳಿಂದ ಆರಂಭವಾಗುತ್ತಿದ್ದ ಸಾರ್ವಜನಿಕ ಸಭೆಗಳು/ವಿಚಾರ ಸಂಕಿರಣಗಳು ಇಂದು ಸಂವಿಧಾನ ಪೀಠಿಕೆಯ ಪಠಣದೊಂದಿಗೆ ಆರಂಭವಾಗುತ್ತಿವೆ. ಈ ಪ್ರಯೋಗಾತ್ಮಕ ಬೆಳವಣಿಗೆಗೆ ಕಾರಣ ಆಳ್ವಿಕೆಯಲ್ಲಿ ಸಾಂವಿಧಾನಿಕ ನೈತಿಕತೆ ಹಾಗೂ ಮೌಲ್ಯಗಳು ಕುಸಿಯುತ್ತಿರುವುದು ಮತ್ತು ಸರಕಾರಗಳ ಆಡಳಿತ ನೀತಿಗಳು ಸಾಂವಿಧಾನಿಕ ಆಶಯಗಳಿಗೆ ವಿಮುಖವಾಗಿರುವುದು. ಬಹುಸಂಖ್ಯಾವಾದದ ರಾಜಕಾರಣ ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಭಗ್ನಗೊಳಿಸುವ ಆತಂಕಗಳು ತುಳಿತಕ್ಕೊಳಗಾದ ಜನಸಮುದಾಯಗಳನ್ನು ಸಂವಿಧಾನದ ಮೊರೆ ಹೋಗುವಂತೆ ಮಾಡುತ್ತಿರುವುದು ವರ್ತಮಾನದ ವಾಸ್ತವ.
ಗಣತಂತ್ರದ ಆಶಯಗಳೊಂದಿಗೆ
ಈ ಆತಂಕಗಳ ನಡುವೆಯೇ ನವ ಭಾರತ ತನ್ನ 75ನೇ ಗಣತಂತ್ರ ದಿನವನ್ನು ಆಚರಿಸುತ್ತಿದೆ. ಬಿಜೆಪಿ-ಸಂಘಪರಿವಾರದ ಕನಸಿನ ರಾಮಮಂದಿರದ ಪ್ರತಿಷ್ಠಾಪನೆಯೊಂದಿಗೆ ಈಗಾಗಲೇ ದೇಶಾದ್ಯಂತ ನೆಲೆಯೂರಿರುವ ಬಲಪಂಥೀಯ ರಾಜಕಾರಣ ಮತ್ತಷ್ಟು ಚಾಲನೆ ಪಡೆದುಕೊಳ್ಳುವುದು ನಿಶ್ಚಿತ. ಇಷ್ಟೂ ವರ್ಷಗಳು ಕೆಲವು ಅಪಭ್ರಂಶಗಳೊಂದಿಗೆ ಮೇಲ್ನೋಟಕ್ಕಾದರೂ ಉಳಿಸಿಕೊಂಡು ಬಂದಿದ್ದ ಭಾರತೀಯ ಸೆಕ್ಯುಲರಿಸಂ ಅಥವಾ ಧರ್ಮನಿರಪೇಕ್ಷತೆ ಇಂದು ಭಗ್ನಗೊಂಡ ಸ್ಥಿತಿಯಲ್ಲಿದೆ. ಹಿಂದುತ್ವ ರಾಜಕಾರಣದ ಮುನ್ನಡೆಯಲ್ಲಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿರುವ ಸೆಕ್ಯುಲರಿಸಂ ಇತರ ಬಂಡವಾಳಿಗ ಪಕ್ಷಗಳಿಗೂ ಕೇವಲ ಜನಾಕರ್ಷಣೆಯ ವಸ್ತುವಾಗಿ ಮಾತ್ರವೇ ಉಳಿದುಕೊಂಡಿದೆ. ಸ್ವಾರ್ಥರಾಜಕಾರಣದ ದಾಳವಾಗಿ ಬಳಕೆಯಾಗುತ್ತಿದ್ದ ವಿವಿಧ ಧರ್ಮಗಳ ಜನತೆಯ ಓಲೈಕೆ ರಾಜಕಾರಣ ಇಂದು ಅಧಿಕೃತತೆಯನ್ನು ಪಡೆದುಕೊಂಡಿದ್ದು, ಮತಬ್ಯಾಂಕುಗಳ ನೆಲೆಯಲ್ಲಿ ಎಲ್ಲ ಧರ್ಮಗಳ ಜನರೂ ಅಧಿಕಾರ ರಾಜಕಾರಣದಲ್ಲಿ ಬಳಕೆಯ ಆಟಕಾಯಿಗಳಾಗುತ್ತಿದ್ದಾರೆ.
ಈ ರಾಜಕೀಯ ಪಗಡೆಯಾಟದಲ್ಲಿ ಮತ್ತೆ ಮತ್ತೆ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದು ಸಾಮಾಜಿಕ ಪಿರಮಿಡ್ಡಿನಲ್ಲಿ ತಳಪಾಯದಲ್ಲಿರುವ ಜನಸಮುದಾಯಗಳೇ ಆಗಿವೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿರುವ ನವ ಭಾರತದ ವಿಶ್ವದ ಭೂಪಟದಲ್ಲಿ ಅಗ್ರಮಾನ್ಯ ದೇಶವಾಗಿ ಗೋಚರಿಸುವ ದಿನಗಳ ನಿರೀಕ್ಷೆಯ ನಡುವೆಯೇ ತಳಮಟ್ಟದ ಸಮಾಜದಲ್ಲಿ ಹಸಿವೆ, ಬಡತನದಿಂದ ಬಳಲುತ್ತಿರುವ ಅವಕಾಶವಂಚಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳು ಬಹುಸಂಖ್ಯೆಯ ಜನರನ್ನು ಉದ್ಯೋಗವಂಚಿತರನ್ನಾಗಿ ಮಾಡುತ್ತಿದ್ದು, ಸರಕಾರಿ ನೌಕರಿಯಲ್ಲಿ, ಶಿಕ್ಷಣದಲ್ಲಿ ಮೀಸಲಾತಿಗಾಗಿ ಆಗ್ರಹಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಾರುಕಟ್ಟೆ ಆರ್ಥಿಕತೆಯ ಬೆಳವಣಿಗೆಯಿಂದ ವಂಚಿತರಾಗಿರುವ ಕೆಳಮಧ್ಯಮ ವರ್ಗಗಳು ಹಾಗೂ ಈ ಅಭಿವೃದ್ಧಿಯ ಚೌಕಟ್ಟಿನಿಂದ ಹೊರಗುಳಿದಿರುವ ಶೋಷಿತ ವರ್ಗಗಳು ಹೆಚ್ಚಿನ ಪ್ರಮಾಣದಲ್ಲಿ ಸರಕಾರಗಳನ್ನೇ ಅವಲಂಬಿಸುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸರಕಾರಗಳು ಉದ್ಯೋಗ ಸೃಷ್ಟಿ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಂದ ದೂರ ಸರಿಯುತ್ತಿವೆ.
ಈ ಪ್ರಕ್ರಿಯೆ ಸಂವಿಧಾನದ ಮೂಲ ಆಶಯವನ್ನೇ ಅಣಕಿಸುವಂತಿದ್ದು, ರಾಜಕೀಯ ಸಮಾನತೆಯೊಂದಿಗೇ ಆರ್ಥಿಕ-ಸಾಮಾಜಿಕ ಸಮಾನತೆಯನ್ನು ಸಾಧಿಸುವ ಉಪಕ್ರಮಗಳು ಅಪರೂಪವಾಗುತ್ತಿವೆ. ಸಾರ್ವತ್ರಿಕ ಶಿಕ್ಷಣದಿಂದ ವಂಚಿತರಾದ ಸಮು ದಾಯಗಳು ವಾಣಿಜ್ಯೀ ಕರಣಕ್ಕೊಳಗಾದ ಖಾಸಗಿ ಶಿಕ್ಷಣದ ಹೊರೆಯನ್ನು ತಾಳಲಾರದೆ ಪರದಾಡುತ್ತಿರುವುದು ಒಂದು ವಿದ್ಯಮಾನವಾದರೆ ಮತ್ತೊಂದೆಡೆ ತಮ್ಮ ವ್ಯಾಸಂಗ ಪೂರೈಸಿದ ಯುವ ಸಮೂಹ ಸುಸ್ಥಿರ ಬದುಕಿಗೆ ಅಗತ್ಯವಾದ ಉದ್ಯೋಗಗಳನ್ನು ಕಾಣದೆ ಸಾಮಾಜಿಕವಾಗಿ ಅರಾಜಕತೆಯತ್ತ ಹೊರಳುತ್ತಿರುವುದು ಮತ್ತೊಂದು ಗಂಭೀರ ವಿದ್ಯಮಾನವಾಗಿದೆ. ನಿಶ್ಚಿತ ಬದುಕನ್ನು ಕಟ್ಟಿಕೊಳ್ಳಲಾಗದ ಯುವ ಸಮೂಹ ದೇಶದ ರಾಜಕಾರಣದ ಒಂದು ಭಾಗವೇ ಆಗಿರುವ ಜಾತಿವಾದ, ಮತೀಯವಾದ, ಮತಾಂಧತೆ ಹಾಗೂ ದ್ವೇಷಾಸೂಯೆಗಳನ್ನು ಪ್ರಸರಿಸುವ ಕಾಲಾಳುಗಳಾಗಿ ಸಂವಿಧಾನ ವಿರೋಧಿ ಶಕ್ತಿಗಳೊಡನೆ ಬೆರೆತುಹೋಗುತ್ತಿದೆ. ಜಾತಿ-ಮತ-ಧರ್ಮಗಳ ಗೋಡೆಗಳು ತಳಮಟ್ಟದಲ್ಲೂ ಜನಸಾಮಾನ್ಯರನ್ನು ವಿಭಜಿಸುತ್ತಿದ್ದು, ವಿಭಜಿತ ಜನಸಮೂಹಗಳ ಸುತ್ತ ಸಾಂಸ್ಕೃತಿಕ ಅಸ್ಮಿತೆಗಳ ಭದ್ರಕೋಟೆಗಳನ್ನು ನಿರ್ಮಿಸಲಾಗುತ್ತಿದೆ.
ಬಹುಸಾಂಸ್ಕೃತಿಕ ನೆಲೆಯ ಸವಾಲುಗಳು
ಕಳೆದ 75 ವರ್ಷಗಳಲ್ಲಿ ತಳಸಮುದಾಯಗಳ ಶೋಷಿತರಿಗೆ ದಾರಿದೀಪವಾಗುತ್ತಾ, ಈ ಜನತೆಯ ಹಕ್ಕೊತ್ತಾಯಗಳ ಧ್ವನಿಗೆ ಧ್ವನಿಗೂಡಿಸುತ್ತಲೇ ಬಂದಿರುವ ಎಡಪಂಥೀಯ, ಪ್ರಗತಿಪರ ಹೋರಾಟಗಳು ತಳಮಟ್ಟದ ಸಮಾಜದಲ್ಲಿ ಗುಪ್ತವಾಹಿನಿಯಂತೆ ಹರಿಯುವ ಸಾಂಸ್ಕೃತಿಕ ನೆಲೆಗಳನ್ನು ತಲುಪುವಲ್ಲಿ, ಅರ್ಥಮಾಡಿ ಕೊಳ್ಳುವುದರಲ್ಲಿ ಬಹುಮಟ್ಟಿಗೆ ವಿಫಲವಾಗಿರುವುದು ಸ್ಪಷ್ಟ. ಇದರ ಫಲವನ್ನು ಈಗ ನೋಡುತ್ತಿದ್ದೇವೆ. ಇಂದು ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬೃಹತ್ ಜನಸ್ತೋಮದ ಸಾಂಸ್ಕೃತಿಕ ಬದುಕನ್ನು ಹಿಂದುತ್ವ ರಾಜಕಾರಣ ಆವರಿಸಿಕೊಂಡಿದೆ. ತಳಮೂಲದಲ್ಲಿರುವ ಸಾಂಸ್ಕೃತಿಕ ನೆಲೆಗಳನ್ನು ಭೇದಿಸದೆ ತಳಸಮಾಜದ ನಾಡಿಮಿಡಿತವನ್ನು ಅರ್ಥಮಾಡಿ ಕೊಳ್ಳುವುದು ದುಸ್ತರವಾಗುತ್ತದೆ. ಈ ಅರಿವಿನೊಂದಿಗೆ ಮುನ್ನಡೆಯಬೇಕಾದರೆ, ಸಾಂಸ್ಕೃತಿಕ ರಾಜಕಾರಣ ನಿರ್ಮಿಸಿರುವ ಭದ್ರಕೋಟೆಗಳನ್ನು ಭೇದಿಸುವುದು ಅತ್ಯವಶ್ಯವಾಗಿದೆ.
ಈ ಭದ್ರಕೋಟೆಯೊಳಗೆ ಸಿಲುಕಿರುವ ಅಲಕ್ಷಿತ ಸಮಾಜದ ಸಮಸ್ಯೆ ಮತ್ತು ಸವಾಲುಗಳಿಗೆ ಮೂಲ ಕಾರಣ ಮಾರುಕಟ್ಟೆ ಆರ್ಥಿಕತೆ ಮತ್ತು ಪೂರಕ ಆಡಳಿತ ನೀತಿಗಳಲ್ಲಿದ್ದರೂ, ಅವಕಾಶವಂಚಿತ ಜನಸಮೂಹವೂ ಸಹ ಜಾತಿ-ಧರ್ಮಗಳ ಭ್ರಮಾಧೀನರಾಗಿದ್ದು, ಸಮಸ್ಯೆಗಳ ಮೂಲವನ್ನು ಜನಾಂಗೀಯ ನೆಲೆಯಲ್ಲಿ ಹುಡುಕುವಂತೆ ಪ್ರಚೋದಿಸಲಾಗುತ್ತಿದೆ. ಭಾರತದ ಸಂವಿಧಾನ ಅಪೇಕ್ಷಿಸುವ ಭ್ರಾತೃತ್ವವನ್ನು ಸಾಧಿಸುವ ಹಾದಿಯಲ್ಲಿ ಇದು ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಭ್ರಾತೃತ್ವದ ಸ್ಥಾಯಿ ಭಾವ ಇರುವುದು ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಲ್ಲಿ. ಈ ಒಳಗೊಳ್ಳುವಿಕೆ ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ-ರಾಜಕೀಯವಾಗಿ -ಸಾಮುದಾಯಿಕವಾಗಿ ನಮ್ಮ ನಡುವೆ ಸಕ್ರಿಯವಾಗಬೇಕಿದೆ. ವ್ಯಕ್ತಿ/ಸಮುದಾಯ/ಸಮಾಜವನ್ನು ಹೊರಗಿಟ್ಟು ನೋಡುವ ಸಾಂಪ್ರದಾಯಿಕ ಸಮಾಜದ ತಾತ್ವಿಕ ಬೇರುಗಳನ್ನು ಭಂಗಗೊಳಿಸದೆ ಹೋದರೆ, ಈ ಪ್ರಕ್ರಿಯೆ ಸಫಲವಾಗುವುದಿಲ್ಲ.
ಆದರೆ ಸಂವಿಧಾನವನ್ನು ಎದೆಗಪ್ಪಿಕೊಳ್ಳುವವರೂ ಸಹ ಭ್ರಾತೃತ್ವದ ಮೂಲ ಸ್ಥಾಯಿಭಾವವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿರುವುದು ಸಮಾಜವನ್ನು ಮತ್ತಷ್ಟು ವಿಘಟನೆಯತ್ತ ಕರೆದೊಯ್ಯುತ್ತಿದೆ. ಚುನಾವಣಾ ರಾಜಕಾರಣ ಮತ್ತು ಅಧಿಕಾರ ರಾಜಕಾರಣದ ಫಲಾನುಭವಿಗಳು ವ್ಯವಸ್ಥಿತವಾಗಿ ನಿರ್ಮಿಸಿರುವ ಜಾತಿ-ಮತಗಳ ಅಸ್ಮಿತೆಗಳು ಹೊಸ ರಾಜಕೀಯ ಪರಂಪರೆಯನ್ನೇ ಹುಟ್ಟುಹಾಕಿದ್ದು, ಈ ಅಸ್ಮಿತೆಗಳಿಂದಾಚೆಗಿನ ಚುನಾವಣೆಗಳನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿದೆ. ಮೇಲ್ನೋಟಕ್ಕೆ ಹಿಂದೂ ಸಮುದಾಯಗಳನ್ನು ಒಂದೇ ವರ್ತುಲದಲ್ಲಿ ಟ್ಟಂತೆ ಕಾಣುವ ಹಿಂದುತ್ವ ರಾಜಕಾರಣದಲ್ಲೂ ಜಾತಿ ಅಸ್ಮಿತೆಗಳ ಒಳಸುಳಿಗಳು ಕ್ರಿಯಾಶೀಲವಾಗಿದ್ದು, ಹಿಂದೂ ಐಕ್ಯತೆಯ ಚೌಕಟ್ಟಿನೊಳಗೇ ಜಾತಿ ತಾರತಮ್ಯಗಳನ್ನು, ದೌರ್ಜನ್ಯಗಳನ್ನು ಸ್ವೀಕಾರಾರ್ಹಗೊಳಿಸ ಲಾಗುತ್ತಿದೆ. ಇಲ್ಲಿ ಅತಿ ಹೆಚ್ಚು ದಾಳಿಗೊಳಗಾಗಿರುವುದು ಆರ್ಥಿಕವಾಗಿ ದುರ್ಬಲರಾದ ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು ಹಾಗೂ ಮಹಿಳಾ ಸಮೂಹ. ಹಾಗಾಗಿಯೇ ಮಹಿಳೆಯರ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳು ವಿಶಾಲ ಸಮಾಜದ ದೃಷ್ಟಿಯಲ್ಲಿ ಕೇವಲ ಕಾನೂನು ಸಮಸ್ಯೆಗಳಾಗಿ ಕಾಣುತ್ತಿವೆ. ದೌರ್ಜನ್ಯ/ಅತ್ಯಾಚಾರಕ್ಕೊಳಗಾದ ಮಹಿಳೆಯ ಕಂಬನಿಯೂ ಪಿತೃಪ್ರಧಾನ ಪ್ರೇರಿತ ಸಮಾಜವನ್ನು ವಿಚಲಿತಗೊಳಿಸುತ್ತಿಲ್ಲ. ಬಿಲ್ಕಿಸ್‌ಬಾನು, ಸಾಕ್ಷಿ ಮಲ್ಲಿಕ್ ಪ್ರಕರಣಗಳಲ್ಲಿ ಇದು ಸುಸ್ಪಷ್ಟವಾಗಿ ಕಾಣುತ್ತದೆ.
ಒಳಗೊಳ್ಳುವ ಸಂಸ್ಕೃತಿಯತ್ತ
ಡಾ. ಬಿ. ಆರ್.ಅಂಬೇಡ್ಕರ್ ಅವರ ಭ್ರಾತೃತ್ವದ ಪರಿಕಲ್ಪನೆಯ ವೈಶಾಲ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಭಾರತೀಯ ಸಮಾಜ ಸೋತಿದೆ. ಸಾಂಸ್ಕೃತಿಕ ಒಳಗೊಳ್ಳುವಿಕೆಯಲ್ಲೂ ಸಾಂಪ್ರದಾಯಿಕ ಸಮಾಜದ ಪಿತೃಪ್ರಧಾನತೆ, ಜಾತಿ ಶ್ರೇಷ್ಠತೆ ಮತ್ತು ಹೊರಗಿಟ್ಟು ನೋಡುವ ಅವೈಚಾರಿಕತೆ ಆಳವಾಗಿ ಬೇರೂರಿರುವುದರಿಂದ, ಭ್ರಾತೃತ್ವ ಎಂಬ ಉದಾತ್ತ ಪರಿಕಲ್ಪನೆ ಹಲವಾರು ಸಂದರ್ಭಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಶೋಷಿತರನ್ನು, ಸಂತ್ರಸ್ತರನ್ನು, ನೊಂದವರನ್ನು ಹಾಗೂ ಶೋಷಕರನ್ನೂ ಸಹ ಜಾತಿ-ಧರ್ಮದ ಸಾಪೇಕ್ಷ ನೆಲೆಯಲ್ಲಿ ನೋಡುವ ಒಂದು ವಿಕೃತ ಪರಂಪರೆಗೆ ಸಾಕ್ಷಿಯಾಗಿರುವ 21ನೇ ಶತಮಾನದ ಭಾರತ ಅಪ್ರಾಪ್ತ ಬಾಲೆಯರ ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ, ಮರ್ಯಾದೆಗೇಡು ಹತ್ಯೆ, ಅಸ್ಪಶ್ಯತೆಯಂತಹ ಹೀನ ಪ್ರವೃತ್ತಿಗಳಿಂದಲೂ ವಿಚಲಿತವಾಗದೆ, ನಾಗರಿಕತೆಯ ಮುಸುಕು ಹೊದ್ದುಕೊಂಡಿದೆ. ಅಂಬೇಡ್ಕರ್‌ರನ್ನು ಪ್ರತಿನಿತ್ಯ ಪಠಿಸುವ ಕೋಟ್ಯಂತರ ಮನಸ್ಸುಗಳ ನಡುವೆ ಈ ಜಟಿಲ ಪ್ರಶ್ನೆ ನಿರಂತರವಾಗಿ ಕಾಡುತ್ತಿರಲೇಬೇಕಲ್ಲವೇ ?
ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಂಸದೀಯ ಆಳ್ವಿಕೆಯನ್ನು ಕೇವಲ ಅಧಿಕಾರಗಳಿಕೆಯ ಅಸ್ತ್ರಗಳಾಗಿ ಪರಿಗಣಿಸುವ ರಾಜಕೀಯ ಪಕ್ಷಗಳಿಗೆ ಈ ಸಾಂವಿಧಾನಿಕ ಸೂಕ್ಷ್ಮತೆಗಳು ನಗಣ್ಯವಾಗಿ ಕಾಣುತ್ತವೆ. ಏಕೆಂದರೆ ರಾಜಕೀಯ ಪಕ್ಷಗಳನ್ನು ಆವರಿಸಿರುವ ಅಧಿಕಾರ ಲೋಲುಪತೆ ಅವರೊಳಗಿನ ಮನುಜ ಸಂವೇದನೆಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಅಧಿಕಾರ ರಾಜಕಾರಣದ ವಾರಸುದಾರರಿಗೆ ಭಾರತೀಯ ಸಮಾಜದ ಕೆಳಸ್ತರದ ಜನತೆಯ ನಾಡಿಮಿಡಿತವೇ ಅರ್ಥವಾಗಿಲ್ಲ ಎನ್ನುವುದು ಹಸಿವೆ, ನಿರುದ್ಯೋಗ, ಬಡತನ, ದೌರ್ಜನ್ಯಗಳ ಉಪೇಕ್ಷೆಯಿಂದಲೇ ಸ್ಪಷ್ಟವಾಗುತ್ತದೆ. ಈ ಜಟಿಲ ಸಮಸ್ಯೆಗಳಿಗೆ ಮೂಲ ಕಾರಣವನ್ನು ಸಂವಿಧಾನ ನಿಯಮಗಳ ಉಪೇಕ್ಷೆಯಲ್ಲಿ, ಸಾಂವಿಧಾನಿಕ ನೈತಿಕತೆಯ ಕುಸಿತದಲ್ಲಿ, ಚುನಾವಣಾ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ದುರಂತ ಎಂದರೆ ಜಾತಿ-ಧರ್ಮಾಧಾರಿತ ಅಸ್ಮಿತೆಯ ರಾಜಕಾರಣವು ಇವೆಲ್ಲವನ್ನೂ ಮಸುಕಾಗಿಸಿದೆ.
ಸಂವಿಧಾನವನ್ನು ಎದೆಗೊತ್ತಿಕೊಂಡು, ಗಣತಂತ್ರ ದಿನವನ್ನು ಆಚರಿಸುವ ಮುನ್ನ ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ಸ್ಥಾಯಿಭಾವವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಭಾವವನ್ನು ಪರಿಣಾಮಕಾರಿಯಾಗಿ ತಳಮಟ್ಟದ ಪ್ರತೀ ವ್ಯಕ್ತಿಗೂ ತಲುಪಿಸಿ ಮನದಟ್ಟು ಮಾಡುವುದು ನಮ್ಮ ಜವಾಬ್ದಾರಿಯಾಗಬೇಕಿದೆ. ಪರಸ್ಪರ ಶತ್ರುಗಳಿಲ್ಲದ, ಅಸ್ಮಿತೆಗಳ ಭೇದವಿಲ್ಲದ, ಸಹಬಾಳ್ವೆಯ ದ್ಯೋತಕವಾದ, ಅನ್ಯತೆಯ ಭಾವವಿಲ್ಲದ, ಹೊರಗಿಟ್ಟು ನೋಡುವ ಮನಸ್ಥಿತಿಯಿಲ್ಲದ ಒಂದು ಸಮಾಜವನ್ನು ನಿರ್ಮಿಸುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಸಮಾಜದ ನಿರ್ಮಾಣಕ್ಕಾಗಿ ಪಣತೊಡುವುದು ವರ್ತಮಾನ ಭಾರತದ ಪ್ರಥಮ ಆದ್ಯತೆಯಾಗಬೇಕಿದೆ. ಇದಕ್ಕೆ ಅಡ್ಡಿಯಾಗುವಂತಹ ಯಾವುದೇ ಬೆಳವಣಿಗೆಗಳ ವಿರುದ್ಧ ಹೋರಾಡುತ್ತಲೇ ಬಹುತ್ವ ಭಾರತದ ಸಮನ್ವಯದ ನೆಲೆಯನ್ನು ಕಾಪಾಡಬೇಕಿದೆ.
ಗಾಂಧಿ, ಟಾಗೋರ್, ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯ ಪೂರ್ವದ ದಾರ್ಶನಿಕರ ದೂರಗಾಮಿ ಚಿಂತನೆಗಳನ್ನು ಸಾಕಾರಗೊಳಿಸುವುದರೊಂದಿಗೇ ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಬಹುತ್ವ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹೊಣೆಗಾರಿಕೆಯನ್ನು ಅರಿತೇ ಪ್ರಗತಿಪರ ಹೋರಾಟಗಳು ಹಾಗೂ ಚಿಂತನಶೀಲ ವ್ಯಕ್ತಿ/ಗುಂಪು/ಸಂಘಟನೆಗಳು ಕ್ರಿಯಾಶೀಲತೆಯಿಂದ ಮುನ್ನಡೆಯಬೇಕಿದೆ. 2024ರ ಮಹಾಚುನಾವಣೆಗೆ ಮುನ್ನ ಸಾರ್ವಜನಿಕರಲ್ಲಿ ಈ ಜಾಗೃತಿಯನ್ನು ಮೂಡಿಸುವ ಸಂಕಲ್ಪದೊಂದಿಗೆ ಗಣತಂತ್ರ ದಿನವನ್ನು ಆಚರಿಸಿದರೆ ಸಾರ್ಥಕ.