ದೇಶದ ಜನರ ಅನುಮಾನಗಳು ಈಗ ನಿಜವಾಗುತ್ತಿದೆಯೇ?

ಬಾಂಡ್ ಖರೀದಿಯ ದಾಖಲೆಗಳೆಲ್ಲವೂ ಕೋಟಿಗಟ್ಟಲೆ ರೂ. ವ್ಯವಹಾರವಾದ್ದರಿಂದಲೇ ಅದು ಕಂಪ್ಯೂಟರ್‌ಗಳಲ್ಲಿ ದಾಖಲಾಗಿರುತ್ತೆ ಅಲ್ಲವೇ? ಎಲ್ಲ ದಾಖಲೆಗಳೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇಡಲಾಗಿರುತ್ತದೆ ಅಲ್ಲವೇ? ಆದರೂ ಎಸ್‌ಬಿಐ ಮತ್ತೇಕೆ ನಾಲ್ಕು ತಿಂಗಳ ಕಾಲಾವಕಾಶವನ್ನು ಕೇಳಿದೆ? ಹಾಗೇನಾದರೂ ಗಡುವನ್ನು ವಿಸ್ತರಿಸಿದ್ದೇ ಆದಲ್ಲಿ ಮತ್ತೆ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿಗೆ ಬೆಲೆ ಎಲ್ಲಿದೆ?

Update: 2024-03-07 04:43 GMT
Editor : Thouheed | Byline : ಪೂರ್ವಿ

ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ದೇಶದ ಜನರಲ್ಲಿ ಮೂಡಿದ್ದ ಅನುಮಾನಗಳು ಈಗ ನಿಜವಾಗುತ್ತಿದೆಯೇ?

ಇಲ್ಲಿನ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಬಿಜೆಪಿಗೆ ಭಾರೀ ದೊಡ್ಡ ಮೊತ್ತದ ಹಣ ಬಾಚಿಕೊಳ್ಳಲು ತೆರೆದಿಟ್ಟಿದ್ದ ಅಕ್ರಮ ದಾರಿಯನ್ನು ಮುಚ್ಚಲು ಸುಪ್ರೀಂ ಕೋರ್ಟ್ ನೀಡಿದ ಆದೇಶ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಬಾಂಡ್ ಖರೀದಿದಾರರ ಮಾಹಿತಿಗಳನ್ನು ಇನ್ನೇನು ಬಹಿರಂಗಪಡಿಸಿದರೆ ಬಹುದೊಡ್ಡ ಹಗರಣದ ಹಿಂದಿರುವವರ ಹೆಸರು ಬಯಲಾಗುತ್ತದೆ ಎಂಬ ಭಯ ಬಿಜೆಪಿಯನ್ನು ಕಾಡಿತ್ತು.

ಅದರ ಬೆನ್ನಿಗೇ ಈಗ ಸುಪ್ರೀಂ ಕೋರ್ಟ್ ನೀಡಿದ ಗಡುವನ್ನು ಜೂ.30ರವರೆಗೆ ವಿಸ್ತರಿಸುವಂತೆ ಎಸ್‌ಬಿಐ ಮನವಿ ಮಾಡಿರುವುದು ಬಿಜೆಪಿಯನ್ನು ಸದ್ಯದ ಕುಣಿಕೆಯಿಂದ ರಕ್ಷಿಸಲಿಕ್ಕಾಗಿಯೇ?

ಫೆಬ್ರವರಿ 15ರಂದು ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾದುದು ಎಂದು ಹೇಳಿತ್ತು. ಬಿಜೆಪಿ ಹಾಗೂ ಮೋದಿ ಸರಕಾರಕ್ಕೆ ದೊಡ್ಡ ಆಘಾತ ನೀಡಿದ ತೀರ್ಪದು. ಮಾ.6ರೊಳಗೆ ಎಲ್ಲ ಬಾಂಡ್ ಖರೀದಿದಾರರ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಎಸ್‌ಬಿಐಗೆ ತಿಳಿಸಿತ್ತು. ಅಲ್ಲದೆ, ಆಯೋಗದ ವೆಬ್‌ಸೈಟ್‌ನಲ್ಲಿ ಆ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಸೂಚಿಸಿತ್ತು.

ಆನಂತರ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ತನಗೆ ವಿಧಿಸಲಾಗಿರುವ ಮಾ.6ರ ಗಡುವನ್ನು ಜೂ.30ರವರೆಗೆ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ಮೂಲಕ ಮಾರಾಟ ಮಾಡಲಾಗಿತ್ತು. ಬ್ಯಾಂಕ್, ಈಗ ಕೆಲವೊಂದು ವ್ಯಾವಹಾರಿಕ ಸಮಸ್ಯೆಗಳನ್ನು ಉಲ್ಲೇಖಿಸಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಮೂರು ವಾರಗಳ ಗಡುವಿನಲ್ಲಿ ಇವುಗಳನ್ನು ಸಲ್ಲಿಸುವುದು ಕಷ್ಟಕರ ಎಂದು ಹೇಳಿದೆ.

‘ಸುಪ್ರೀಂ’ಗೆ ಸಲ್ಲಿಸಿರುವ ಅರ್ಜಿಯಲ್ಲಿ ಎಸ್‌ಬಿಐ, ‘2019ರ ಎಪ್ರಿಲ್ 12ರಿಂದ ತೀರ್ಪು ಪ್ರಕಟವಾದ ದಿನದವರೆಗೂ ಒಟ್ಟಾರೆ 22,217 ಚುನಾವಣಾ ಬಾಂಡ್‌ಗಳನ್ನು ಬಳಸಿ ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ’ ಎಂದು ಉಲ್ಲೇಖಿಸಿದೆ.

ನಗದೀಕರಣಗೊಂಡ ಬಾಂಡ್‌ಗಳನ್ನು ಮುದ್ರೆ ಹಾಕಿದ ಲಕೋಟೆ ಗಳಲ್ಲಿ ಮುಂಬೈನ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಇಡಲಾಗಿದೆ. ಆಯೋಗಕ್ಕೆ ಸಲ್ಲಿಸಬೇಕಾದ ವಿವರಗಳಂತೆ 44,434 ಮಾಹಿತಿಗಳನ್ನು ಪ್ರತ್ಯೇಕಗೊಳಿಸಿ, ಹೋಲಿಕೆ ಮಾಡಿ, ಕ್ರೋಡೀಕರಿಸಬೇಕಿದೆ ಎಂದು ಹೇಳಿದೆ.

ಈ ಪ್ರಕ್ರಿಯೆಗಳನ್ನು ಕೋರ್ಟ್ ನಿಗದಿಪಡಿಸಿರುವ ಮೂರು ವಾರಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗದು ಎಂದು ತಿಳಿಸಿರುವ ಬ್ಯಾಂಕ್, ಗಡುವನ್ನು ಜೂನ್ 30ರವರೆಗೂ ವಿಸ್ತರಿಸುವಂತೆ ಮನವಿ ಮಾಡಿದೆ.

ದಾನಿಗಳ ವಿವರಗಳನ್ನು ಗೋಪ್ಯವಾಗಿಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೇ ಕಾರಣದಿಂದ ಬಾಂಡ್‌ಗಳ ವಿವರಗಳು ಹಾಗೂ ದಾನಿಗಳ ಹೆಸರನ್ನು ಪರಸ್ಪರ ಹೋಲಿಸಿ ವಿವರ ಸಂಗ್ರಹಿಸಬೇಕಾಗಿದೆ. ಈ ಎಲ್ಲವೂ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

‘ದಾನಿಗಳ ವಿವರ ಸಂಗ್ರಹಿಸಲು ಪ್ರತೀ ಬಾಂಡ್ ವಿತರಿಸಿದ ದಿನಾಂಕದ ಮಾಹಿತಿ ಪರಿಶೀಲಿಸಬೇಕು. ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ತಮ್ಮ ಖಾತೆಗಳಿರುವ ಬ್ಯಾಂಕ್‌ಗಳಲ್ಲಿ ನಗದೀಕರಣಗೊಳಿಸಿಕೊಂಡಿವೆ. ಅದೇ ಪ್ರಕಾರ, ಎರಡನ್ನೂ ಗುರುತಿಸಿ ಹೋಲಿಕೆ ಮಾಡಬೇಕಾಗಿದೆ. ಬಾಂಡ್‌ಗಳ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಗಳು ಡಿಜಿಟಲ್ ಸ್ವರೂಪದಲ್ಲಿವೆ. ಖರೀದಿದಾರರ ಹೆಸರು, ಕೆವೈಸಿ ವಿವರಗಳು ಭೌತಿಕ ಸ್ವರೂಪದಲ್ಲಿಯೂ ಇವೆ. ಎಲ್ಲ ಮಾಹಿತಿಗಳನ್ನು ಡಿಜಿಟಲ್ ಸ್ವರೂಪದಲ್ಲಿಯೇ ಇಡದಿರುವುದರ ಉದ್ದೇಶ, ಯೋಜನೆಯ ಗುರಿಯಂತೆ ಮಾಹಿತಿಗಳು ಸುಲಭವಾಗಿ ಸಿಗದಂತಿರಬೇಕು ಎಂಬುದೇ ಆಗಿದೆ’ ಎಂದು ಬ್ಯಾಂಕ್ ವಿವರಿಸಿದೆ.

ಈಗ ಎಸ್‌ಬಿಐ ಜೂ.30ರ ಸಮಯ ಕೇಳಿದೆ. ಅಷ್ಟೊತ್ತಿಗೆ ಲೋಕಸಭೆ ಚುನಾವಣೆ ಮುಗಿದಿರುತ್ತದೆ. ಹೀಗಾಗಿ ಚುನಾವಣೆ ಆರಂಭವಾಗುವುದರ ಒಳಗೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಹಣ ನೀಡಿರುವ ದೇಣಿಗೆದಾರರ ಹೆಸರು ಬಹಿರಂಗ ಮಾಡಲು ಹಿಂದೇಟು ಹಾಕುವ ಯತ್ನ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ಬಾಂಡ್ ಮಾಹಿತಿ ನೀಡಲು ಸಮಯ ವಿಸ್ತರಣೆ ಕೋರಿದ ಎಸ್‌ಬಿಐನ ನಿರ್ಧಾರ, ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಮುಖ ಮುಚ್ಚಿಕೊಳ್ಳಲು ನಡೆಸಿದ ಕಡೆಯ ಯತ್ನ. ಈ ಡೊನೇಶನ್ ಬಿಸ್ನೆಸ್ ಅನ್ನು ಮುಚ್ಚಿಡಲು ಮೋದಿ ತನ್ನೆಲ್ಲ ಬಲವನ್ನು ಪ್ರಯೋಗಿಸಿದ್ದಾರೆ’’ ಎಂದಿದ್ದಾರೆ.

ಕಾಂಗ್ರೆಸ್‌ನ ಮನೀಶ್ ತಿವಾರಿ, ಅಭಿಷೇಕ್ ಮನು ಸಿಂಘ್ವಿ ಅವರೂ ಎಸ್‌ಬಿಐನ ಈ ಮನವಿ ಮಾಹಿತಿಯನ್ನು ಬಚ್ಚಿಡುವ ಪ್ರಯತ್ನ, ಇದರ ವಿರುದ್ಧ ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಯೋಜನೆ ಜಾರಿಗೆ ಬಂದ ನಂತರದ ಆರು ವರ್ಷಗಳಲ್ಲಿ, ಬಾಂಡ್‌ಗಳ ಮೂಲಕ ನೀಡಲಾದ ದೇಣಿಗೆಗಳ ಅರ್ಧಕ್ಕೂ ಹೆಚ್ಚಿನ ಹಣವನ್ನು ಬಿಜೆಪಿ ಒಂದೇ ಪಡೆದಿದೆ. 2018ರಿಂದ 2023ರವರೆಗೆ ಬಾಂಡ್‌ಗಳ ಮೂಲಕ 6,565 ಕೋಟಿ ರೂ. ಬಿಜೆಪಿ ಪಡೆದಿದ್ದರೆ, ಕಾಂಗ್ರೆಸ್ ಪಡೆದದ್ದು ಕೇವಲ 1,123 ಕೋಟಿ ರೂ. ಇನ್ನು ಎಲೆಕ್ಟೊರಲ್ ಟ್ರಸ್ಟ್‌ಗಳ ಮೂಲಕವೂ ಅತಿ ಹೆಚ್ಚು ದೇಣಿಗೆ ಪಡೆದಿದ್ದು ಬಿಜೆಪಿಯೇ.

ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳ ಕೋಟಿಗಟ್ಟಲೆ ಜನರ ಮತ ಎಣಿಕೆ ನಡೆದು ಒಂದೇ ದಿನದಲ್ಲಿ ಫಲಿತಾಂಶ ಪ್ರಕಟ ಮಾಡುವ ತಂತ್ರಜ್ಞಾನ ವ್ಯವಸ್ಥೆ ಇಲ್ಲಿರುವಾಗ, ಎಸ್‌ಬಿಐಗೆ ಕಳೆದೈದು ವರ್ಷಗಳ 44,000 ಡೇಟಾ ಸೆಟ್‌ಗಳನ್ನು ಸಂಗ್ರಹಿಸಿ ಕೊಡಲು ಸುಪ್ರೀಂ ಕೋರ್ಟ್ ಅನುಮತಿಸಿದ ಮೂರು ವಾರಗಳು ಸಾಕಾಗದೆ ಇನ್ನೂ ನಾಲ್ಕು ತಿಂಗಳು ಕಾಲಾವಕಾಶ ಕೇಳಿದೆ ಅಂದರೆ ಏನಿದರ ಅರ್ಥ?

ಬಾಂಡ್ ಖರೀದಿಯ ದಾಖಲೆಗಳೆಲ್ಲವೂ ಕೋಟಿಗಟ್ಟಲೆ ರೂ. ವ್ಯವಹಾರವಾದ್ದರಿಂದಲೇ ಅದು ಕಂಪ್ಯೂಟರ್‌ಗಳಲ್ಲಿ ದಾಖಲಾಗಿರುತ್ತೆ ಅಲ್ಲವೇ? ಎಲ್ಲ ದಾಖಲೆಗಳೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇಡಲಾಗಿರುತ್ತದೆ ಅಲ್ಲವೇ? ಆದರೂ ಎಸ್‌ಬಿಐ ಮತ್ತೇಕೆ ನಾಲ್ಕು ತಿಂಗಳ ಕಾಲಾವಕಾಶವನ್ನು ಕೇಳಿದೆ? ಹಾಗೇನಾದರೂ ಗಡುವನ್ನು ವಿಸ್ತರಿಸಿದ್ದೇ ಆದಲ್ಲಿ ಮತ್ತೆ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿಗೆ ಬೆಲೆ ಎಲ್ಲಿದೆ?

ಚುನಾವಣೆಗೆ ಸಂಬಂಧಿಸಿದ ಬಹು ಮುಖ್ಯ ಮಾಹಿತಿ ಜನರಿಗೆ ಚುನಾವಣೆಗೆ ಮೊದಲೇ ಗೊತ್ತಾಗಬೇಕು ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪೂರ್ವಿ

contributor

Similar News