ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಕಾಯುತ್ತಿವೆಯೇ?

ಈಗ ಪ್ರಶ್ನೆಪತ್ರಿಕೆ ಲೀಕ್ ವಿಚಾರವಾಗಿ, ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಹೊಣೆ ಹೊರುವುದಾಗಿ ಹೇಳಬೇಕಾಗಿ ಬಂದಿರುವುದು ಮೋದಿ ಸರಕಾರದಲ್ಲಿ ಇದೇ ಮೊದಲ ಬಾರಿಗೆ ಆಗಿದೆ. ಇದನ್ನು ದೇಶದ ಜನರು ಖಂಡಿತ ಗಮನಿಸದೇ ಇರಲಾರರು. ಎರಡನೆಯದಾಗಿ, ಮೊದಲ ಸಲ ಸರಕಾರದ್ದೇ ಇಲಾಖೆಯಡಿಯ ಸಂಸ್ಥೆಯೊಂದರ ವಿರುದ್ಧ ತನಿಖೆಗೆ ಸರಕಾರವೇ ಸೂಚಿಸಬೇಕಾಗಿ ಬಂದಿದೆ. ಎನ್‌ಟಿಎ ವಿರುದ್ದ ಉನ್ನತ ಮಟ್ಟದ ಸಮಿತಿ ತನಿಖೆ ನಡೆಯಲಿರುವುದು, ಖಂಡಿತವಾಗಿಯೂ ಹಿಂದಿನ ಅಹಮ್ಮಿನ ಮೋದಿಗೆ ಅರಗಿಸಿಕೊಳ್ಳಲಾರದ ಸಂದರ್ಭವಾಗಿದೆ.

Update: 2024-06-23 06:21 GMT

ಮೋದಿ ಸರಕಾರ ಮೂರನೇ ಅವಧಿಯ ಕೆಲಸವನ್ನೇ ಇನ್ನೂ ಸರಿಯಾಗಿ ಶುರು ಮಾಡಿಲ್ಲ.

ಮಂತ್ರಿಗಳು ತಮ್ಮ ತಮ್ಮ ಕಚೇರಿಗೆ ಬಂದು ಕುಳಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಅವರಿಗೆ ಹೂಗುಚ್ಛ ನೀಡಿ ಇಲಾಖೆಯ ಕುರಿತ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಲವು ಮಂತ್ರಿಗಳಂತೂ ಚುನಾವಣೆಗೆ ಹೋಗುವ ಮೊದಲು ಸಹಿ ಮಾಡಿ ಹೋಗಿರುವ ಫೈಲುಗಳ ಕತೆ ಏನಾಗಿದೆ ಎಂದು ನೋಡಲು ತಮ್ಮ ಹಳೇ ಫೈಲುಗಳನ್ನು ತರಿಸಿಕೊಳ್ಳುತ್ತಿರ ಬಹುದು.

ಇದೆಲ್ಲದರ ನಡುವೆಯೇ ದಿಲ್ಲಿಯಲ್ಲಿ ತುರ್ತು ಸಭೆಯೊಂದು ನಡೆದಿದ್ದು, ಅಲ್ಲಿ ಈ ಮೋದಿ ಸರಕಾರ ಎದುರಿಸುತ್ತಿರುವ ಹಲವು ಆತಂಕಗಳ ಹಿನ್ನೆಲೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಮಾಹಿತಿಗಳಿವೆ.

ಸರಕಾರದ ಈ ಮೊದಲಿನ ಅಕ್ರಮಗಳು ಬಯಲಿಗೆ ಬರುವ ಭಯ ಅದಾಗಿದೆ. ಮತ್ತದನ್ನು ಹೇಗೆ ಮರೆಮಾಚುವುದು ಎಂಬುದು, ಎಲ್ಲ ಸತ್ಯಗಳನ್ನು ಮರೆಮಾಚುತ್ತಲೇ ಬಂದಿದ್ದವರಿಗೆ ಈಗ ದೊಡ್ಡ ಸವಾಲಾಗಿದೆ. ಸಂಸತ್ ಅಧಿವೇಶನ ಶುರುವಾದ ಮೇಲೆ ವಿಪಕ್ಷಗಳನ್ನು ಎದುರಿಸುವುದು ಹೇಗೆಂಬ ಚಿಂತೆಯೂ ದೊಡ್ಡ ಮಟ್ಟದಲ್ಲಿಯೆ ಶುರುವಾಗಿದೆ.

ಈಗ ಸರಕಾರವೂ ಮೊದಲಿನ ಭರ್ಜರಿ ಬಹುಮತದ ಮೋದಿ ಸರಕಾರ ಅಲ್ಲ, ಅತ್ತ ವಿಪಕ್ಷವೂ ತೀರಾ ಕಡಿಮೆ ಸೀಟುಗಳ ದುರ್ಬಲ ಕೂಟವೂ ಅಲ್ಲ.

ಇನ್ನು ವಿಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ನಲ್ಲಿ ಹೊಸ ಹೋರಾಟದ ಮನೋಭಾವದ ಸಂಸದರು ಬೇಕಾದಷ್ಟಿದ್ದಾರೆ.

ರಾಹುಲ್ ಗಾಂಧಿಯಂತೂ ಈ ಸರಕಾರ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಇದರ ವಿರುದ್ಧ ಟೀಕಾ ಪ್ರಹಾರ, ಆರೋಪಗಳನ್ನು ಶುರು ಮಾಡಿ ಬಿಟ್ಟಿದ್ದಾರೆ.

ಹಾಗಾಗಿ ಸಂಸತ್ತಿನಲ್ಲಿ ಹೇಗೆಲ್ಲ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬುದರ ಸುಳಿವುಗಳೂ ಈಗಾಗಲೇ ಸಿಗತೊಡಗಿವೆ.

ಮತಗಟ್ಟೆ ಸಮೀಕ್ಷೆಗಳೆಲ್ಲ ಬಿಜೆಪಿ ಗೆಲುವಿನ ಬಗ್ಗೆ ಹೇಳಿದ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಏನೇನೆಲ್ಲ ಆಯಿತು ಎಂಬ ವಿಚಾರವೂ ಅಧಿವೇಶನದಲ್ಲಿ ಖಂಡಿತ ಚರ್ಚೆಗೆ ಬರಲಿದೆ.

ಸ್ವತಃ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೇ ಜನರಿಗೆ ಷೇರಿನಲ್ಲಿ ಹೂಡಿಕೆ ಮಾಡಿ ಎಂದು ಹೇಳಿ ಫಲಿತಾಂಶ ಬಂದ ಬೆನ್ನಿಗೆ ಕೋಟ್ಯಂತರ ಸಣ್ಣ ಹೂಡಿಕೆದಾರರು ನಷ್ಟ ಅನುಭವಿಸಿದ್ದು ದೊಡ್ಡ ಹಗರಣ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ.

ಈಗಾಗಲೇ ನಿರುದ್ಯೋಗಿಗಳಾಗಿ ಕೋಟಿಗಟ್ಟಲೆ ಯುವಕರು ಹತಾಶ ಸ್ಥಿತಿಯಲ್ಲಿರುವಾಗ, ಈಗ ಆಗಿರುವ ನೀಟ್ ಪೇಪರ್ ಸೋರಿಕೆ ಹಾಗೂ ಯುಜಿಸಿ ನೆಟ್ ಪರೀಕ್ಷಾ ಆಕ್ರಮ ಪ್ರಕರಣಗಳೂ ದೊಡ್ಡ ಗದ್ದಲ ಎಬ್ಬಿಸಲಿದೆ ಎಂಬುದು ನಿಜ.

ಕಳೆದ 5 ವರ್ಷಗಳಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳೆಷ್ಟು, ನೌಕರಿಗಾಗಿ ಅಲೆಯುತ್ತಿರುವ ಕೋಟಿಗಟ್ಟಲೆ ಯುವಕರು ಬಲಿಪಶುಗಳಾಗಿರುವ ಅಂಥ ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಮಂದಿ ಎಷ್ಟು ಶಾಮೀಲಾಗಿದ್ದಾರೆ ಎಂಬುದೆಲ್ಲ ಚರ್ಚೆಗೆ ಬಾರದೇ ಇರಲು ಸಾಧ್ಯವಿಲ್ಲ.

ಮೂರೂವರೆ ಕೋಟಿ ಯುವಕರು ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಗಳ ಬಲಿಪಶುಗಳಾಗಿದ್ದಾರೆ.

ಅವರಲ್ಲಿ 1.1 ಕೋಟಿ ಯುವಕರು ಕೇಂದ್ರ ಸರಕಾರದ ಪರೀಕ್ಷೆಗಳನ್ನು ಎದುರಿಸಿ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಅತಂತ್ರರಾದವರಾಗಿದ್ದಾರೆ.

ಈಗಿನ ನೀಟ್ ಹಾಗೂ ಯುಜಿಸಿ ನೆಟ್ ಅಕ್ರಮ ದಿಂದಾಗಿಯೂ ಲಕ್ಷಗಟ್ಟಲೆ ಆಕಾಂಕ್ಷಿಗಳ ಸ್ಥಿತಿ ಡೋಲಾಯಮಾನವಾಗಿದೆ.

ಇವೆಲ್ಲವುಗಳಿಂದಾಗಿ ಸರಕಾರದ ವೈಫಲ್ಯ ಬಯಲಾಗುವುದು ನಿಶ್ಚಿತ. ಇದರಿಂದ ಪಾರಾಗಲು ದುರ್ಬಲ ಸರಕಾರಕ್ಕೆ ಕಾಣಿಸುತ್ತಿರುವುದು ಎರಡೇ ದಾರಿಗಳು.

ಮೊದಲನೆಯದು, ಈ.ಡಿ. ಹಗರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ನಿರ್ಧಾರ ತೆಗೆದುಕೊಳ್ಳುವುದು.

ಮತ್ತೊಂದು, ಯಾರನ್ನಾದರು ಹೊಣೆಗಾರರನ್ನಾಗಿ ಮಾಡಿ ಅವರ ತಲೆದಂಡ ಪಡೆದು ಸದ್ಯಕ್ಕೆ ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವುದು.

ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅಂತೂ ‘ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಯನ್ನು ಸಮರ್ಥಿಸಿಕೊಳ್ಳುವುದರಲ್ಲೇ ಮೊದಲು ಕಾಲ ಕಳೆದಿದ್ದರು.

ಸುಪ್ರೀಂ ಕೋರ್ಟ್ ಯಾವಾಗ ಚಾಟಿ ಬೀಸಿತೊ ಆಗ ಎನ್‌ಟಿಎ ಮರುಪರೀಕ್ಷೆಗೆ ಒಪ್ಪಿಕೊಂಡಿತು.

ಈ ಇಡೀ ಪ್ರಕರಣದಲ್ಲಿ ಕೇಂದ್ರ ಸರಕಾರದ ಅಸಲೀ ಬಣ್ಣ ಬಯಲಾದಂತಾಗಿದೆ. ಶಿಕ್ಷಣ ಇಲಾಖೆ ಮತ್ತದರ ಮಂತ್ರಿಯ ಅದಕ್ಷತೆ, ಹೊಣೆಗೇಡಿತನವೂ ಬಯಲಾಗಿದೆ.

ಈ ನಡುವೆ ನಾಗ್ಪುರದಿಂದ ಪ್ರಧಾನಿ ಕಚೇರಿಗೆ ಕರೆ ಬಂದಿರುವ ಬಗ್ಗೆಯೂ ಮಾತುಗಳಿವೆ.

ಅಂದಹಾಗೆ ಅಲ್ಲಿಂದ ಕರೆ ಮಾಡಿ ಮಾತಾಡಿರುವುದು ಮೋಹನ್ ಭಾಗವತ್ ಅಲ್ಲ. ಬದಲಾಗಿ ದತ್ತಾತ್ರೇಯ ಹೊಸಬಾಳೆಯೆಂದು ಸುದ್ದಿಯಿದೆ.

ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ವಿಪಕ್ಷಗಳಿಗೆ ಅಧಿವೇಶದಲ್ಲಿ ದೊಡ್ಡ ಅಸ್ತ್ರವಾಗಲಿದೆ ಎಂಬುದರ ಬಗ್ಗೆ ಚರ್ಚೆಯಾಗಿರುವುದಾಗಿ ಹೇಳಲಾಗುತ್ತಿದೆ. ಪ್ರಶ್ನೆಪತ್ರಿಕೆ ಲೀಕ್ ವಿಚಾರವಾಗಿ ಏಳಬಹುದಾದ ಕೋಲಾಹಲವನ್ನು ನಿಭಾಯಿಸುವ ಬಗ್ಗೆ ಚರ್ಚೆ ನಡೆದಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಜೊತೆಗೆ ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧಗಳ ಬಗ್ಗೆಯೂ ವದಂತಿಗಳಿರುವುದು ಮತ್ತಷ್ಟು ಕಗ್ಗಂಟಾಗಿದೆ.

ಇದೆಲ್ಲದರ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ತುರ್ತು ಸಭೆ ಅಧಿಕಾರಿಗಳಿಂದ ಮಾತ್ರವಲ್ಲ, ಮಂತ್ರಿಗಳಿಂದಲೂ ವಿವರಣೆ ಪಡೆಯುವ ಉದ್ದೇಶದ್ದಾಗಿದೆ. ಬಚಾವಾಗುವ ದಾರಿ ಏನು ಎಂಬುದನ್ನೂ ಕೇಳಲಾಗಿದೆ.

ಈಗ ರಾಹುಲ್ ಗಾಂಧಿಯವರು ಈ ಇಡೀ ವಿಚಾರವನ್ನು ದೇಶದ ಯುವಕರ ಸ್ಥಿತಿಯೊಡನೆ ಜೋಡಿಸಿ ಸರಕಾರವನ್ನು ಪ್ರಶ್ನಿಸುವ ಸಾಧ್ಯತೆಗಳಿವೆ. ಷೇರು ಖರೀದಿಗೆ ಪ್ರಧಾನಿ, ಗೃಹಮಂತ್ರಿ ಸಲಹೆ ಮಾಡಿದ್ದರೆಂಬ ವಿಚಾರ, ಮತ್ತದರಿಂದ ಯಾರಿಗೆಲ್ಲ ಲಾಭವಾಯಿತು ಎಂಬ ವಿಚಾರವೂ ಸಣ್ಣದಲ್ಲ.

ಗಮನಿಸಬೇಕು.

ಇವೆಲ್ಲವೂ ಜೂನ್ 4ರ ನಂತರದ ವಿಚಾರಗಳು ಮಾತ್ರ.

ಇದಕ್ಕಿಂತಲೂ ಹಳೆಯ ವಿಚಾರಗಳು ಬಂದರಂತೂ ಸಂಸತ್ತಿನಲ್ಲಿ ಸರಕಾರ ಎದುರಿಸಬೇಕಾಗಿ ಬರುವ ಬಿಕ್ಕಟ್ಟು ಎಂಥದಿರಬಹುದು? ಅದನ್ನು ನೆನೆದೇ ಮೋದಿ ಸರಕಾರಕ್ಕೆ ಭಯ ಶುರುವಾಗಿದೆ.

ಈ ಹಿಂದೆ ರಾಹುಲ್ ಗಾಂಧಿಯನ್ನು ಹಣಿಯಲು ಮೋದಿ ಸರಕಾರ ಏನೇನೆಲ್ಲ ಮಾಡಿತ್ತು. ಅವರ ಸಂಸತ್ ಸದಸ್ಯತ್ವ ಕಸಿಯಲಾಯಿತು. ಅವರ ಸರಕಾರಿ ನಿವಾಸವನ್ನು ಕಸಿಯಲಾಗಿತ್ತು. ಅವರ ಮಾತುಗಳೇ ಪ್ರಸಾರವಾಗದ ಹಾಗೆ ಸೆನ್ಸರ್ ಮಾಡಲಾಗುತ್ತಿತ್ತು. ಈಗ ಅದೇ ರಾಹುಲ್ ಎದುರು ಸರಕಾರ ಕಂಗೆಟ್ಟು ನಿಲ್ಲುವ ಸ್ಥಿತಿ ಬರಬಹುದೆ?

ಕಳೆದ ಎರಡು ಅವಧಿಗಳಲ್ಲಿ ತನ್ನ ಎಷ್ಟೆಲ್ಲ ಹಗರಣಗಳನ್ನು ಮೋದಿ ಸರಕಾರ ಮುಚ್ಚಿಹಾಕುತ್ತಲೇ ಬಂದಿದೆ.

ಭ್ರಷ್ಟಾಚಾರದ ವಿಷಯವಾಗಿ ಸಿಎಜಿ ವರದಿಯೇ ಪ್ರಶ್ನೆಗಳನ್ನು ಎತ್ತಿದ್ದರೂ ಯಾವುದೇ ಸಚಿವಾಲಯವೂ ತಲೆಕೆಡಿಸಿಕೊಳ್ಳಲೇ ಇಲ್ಲ. ಬದಲಾಗಿ ಸಿಎಜಿ ಅಧಿಕಾರಿಗಳನ್ನೇ ಚೆಲ್ಲಾಪಿಲ್ಲಿ ಮಾಡಲಾಗಿತ್ತು.

ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ - ಇವರೆಲ್ಲ ದೊಡ್ಡ ಪಂಗನಾಮ ಹಾಕಿ ದೇಶ ಬಿಟ್ಟು ಹೋದವರೆಲ್ಲ ಮೋದಿ ಜೊತೆ ನಿಂತು ಕ್ಯಾಮರಾಗಳಿಗೆ ಕೈಬೀಸಿದವರೇ ಆಗಿದ್ದರು.

ಆದರೂ, ಸರಕಾರ ಯಾವುದಕ್ಕೂ ಉತ್ತರಿಸುವ ಅಗತ್ಯವೇ ಇಲ್ಲವೆಂಬಂಥ ಅಹಂಕಾರವನ್ನು ತೋರಿಸಿತ್ತು.

ಈಗ ಅವೆಲ್ಲವೂ ಮೋದಿ ಸರಕಾರದ ಎದುರು ಬಂದು ನಿಲ್ಲದೇ ಇರಲಾರವು.

ಯಾವುದರ ಬಗ್ಗೆಯೂ ಹೊಣೆ ಹೊತ್ತದ್ದೇ ಇರಲಿಲ್ಲ ಮೋದಿ ಸರಕಾರ. ಎಲ್ಲವನ್ನೂ ನಿರಾಕರಿಸುತ್ತಲೇ ಬಂದಿತ್ತು.

ಒಡಿಶಾದಲ್ಲಿ ರೈಲು ದುರಂತವಾದಾಗಲೂ ಸರಕಾರ ಯಾರದೇ ಹೊಣೆಗಾರಿಕೆ ನಿರ್ಧರಿಸದೇ ಹೋಯಿತು.

ಆದರೆ ಈಗ ಪ್ರಶ್ನೆಪತ್ರಿಕೆ ಲೀಕ್ ವಿಚಾರವಾಗಿ, ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಹೊಣೆ ಹೊರುವುದಾಗಿ ಹೇಳಬೇಕಾಗಿ ಬಂದಿರುವುದು ಮೋದಿ ಸರಕಾರದಲ್ಲಿ ಇದೇ ಮೊದಲ ಬಾರಿಗೆ ಆಗಿದೆ. ಇದನ್ನು ದೇಶದ ಜನರು ಖಂಡಿತ ಗಮನಿಸದೇ ಇರಲಾರರು.

ಎರಡನೆಯದಾಗಿ, ಮೊದಲ ಸಲ ಸರಕಾರದ್ದೇ ಇಲಾಖೆಯಡಿಯ ಸಂಸ್ಥೆಯೊಂದರ ವಿರುದ್ಧ ತನಿಖೆಗೆ ಸರಕಾರವೇ ಸೂಚಿಸಬೇಕಾಗಿ ಬಂದಿದೆ.

ಎನ್‌ಟಿಎ ವಿರುದ್ಧ ಉನ್ನತ ಮಟ್ಟದ ಸಮಿತಿ ತನಿಖೆ ನಡೆಯಲಿರುವುದು, ಖಂಡಿತವಾಗಿಯೂ ಹಿಂದಿನ ಅಹಮ್ಮಿನ ಮೋದಿಗೆ ಅರಗಿಸಿಕೊಳ್ಳಲಾರದ ಸಂದರ್ಭವಾಗಿದೆ.

ಮೂರನೆಯದಾಗಿ, ಒಂದಡೆ ಶಿಕ್ಷಣ ಸಚಿವ, ಇನ್ನೊಂದೆಡೆ ಉನ್ನತ ಮಟ್ಟದ ಸಮಿತಿ, ಮತ್ತೂ ಒಂದೆಡೆ ಸಂಸತ್ತು ಇವುಗಳ ನಡುವೆ ಮೋದಿ ಸರಕಾರ ಬಣ್ಣಗೇಡಾಗುವ ಸನ್ನಿವೇಶ ಬಂದಿದೆ.

ದೇಶದ ಕೋಟಿಗಟ್ಟಲೆ ಯುವಕರಿಗೆ ಉದ್ಯೋಗವನ್ನೇ ನೀಡದ ಮೋದಿ ಸರಕಾರ, ಮಾನವ ಸಂಪನ್ಮೂಲ ಖಾತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಆರೆಸ್ಸೆಸ್ ಮಂದಿಯನ್ನು ತುಂಬಿಸಿರುವುದು ಸರಕಾರವನ್ನು ಉತ್ತರ ನೀಡಲೇಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದೆ.

ಬೆಂಬಲವಾಗಿ ನಿಂತಿರುವ ಪಕ್ಷಗಳು ಯಾವತ್ತು ಹಿಂದೆ ಸರಿಯುತ್ತವೊ ಗೊತ್ತಿಲ್ಲ. ಸಂಸತ್ತಿನ ಹೊರಗೇ ತನ್ನನ್ನು ತಾನು ಬಚಾವು ಮಾಡಿಕೊಳ್ಳಲಾರದ ಸ್ಥಿತಿಗೆ ಮುಟ್ಟಿದೆ ಈ ಬಾರಿಯ ಮೋದಿ ಸರಕಾರ. ಇನ್ನು ಸಂಸತ್ತಿನ ಒಳಗೆ ಅದು ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಸಾಧ್ಯವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಚ್. ವೇಣುಪ್ರಸಾದ್

contributor

Similar News