ನ್ಯಾಯಯುತ ಹಕ್ಕನ್ನು ಕಸಿಯುವ ಹಿಂಬಾಗಿಲ ಪ್ರವೇಶ
ಯುಪಿಎಸ್‌ಸಿ ಮೂಲಕ ನೇಮಕಾತಿ ನಡೆಯುವಾಗ ದೇಶದ ಆದಿವಾಸಿಗಳು, ದಲಿತರು, ಹಿಂದುಳಿದವರು ಹೀಗೆ ಈ ಎಲ್ಲ ಸಮುದಾಯದವರಿಗೂ ಮೀಸಲಾತಿಗೆ ಅನುಗುಣವಾಗಿ ಅವಕಾಶ ಸಿಗುತ್ತಾ ಹೋಗುತ್ತದೆ. ಆದರೆ ಈಗ ವೃತ್ತಿಪರತೆ ಮತ್ತು ವಿಷಯ ಪರಿಣತಿ ಎಂಬ ನೆಪ ಹೂಡುವುದರೊಂದಿಗೆ ಅಂಥ ಮೀಸಲಾತಿಗೆ ವ್ಯತಿರಿಕ್ತವಾದ ನೇಮಕಕ್ಕೆ ಸರಕಾರ ಮುಂದಾಗುತ್ತಿರುವುದು ವಿಪರ್ಯಾಸ.
ಜನರಿಗೆ ಅನುಕೂಲವಾಗುವುದಕ್ಕೆಂದೇ, ಜನರ ಹಕ್ಕುಗಳನ್ನು ರಕ್ಷಿಸಲೆಂದೇ ಸಂವಿಧಾನ ಇದೆ. ಆದರೆ ಸಂವಿಧಾನವನ್ನು ಮೀರಿ ತನ್ನ ಅನುಕೂಲ ನೋಡಿಕೊಳ್ಳುವ ಮೋದಿ ಸರಕಾರ ಮತ್ತೆ ಮತ್ತೆ ಜನವಿರೋಧಿ ನಿಲುವು ತೋರಿಸುತ್ತ, ತನ್ನದೇ ಹಿತಾಸಕ್ತಿಗಳಲ್ಲಿ ಮಗ್ನವಾಗುತ್ತಿದೆ.
ಸರಕಾರದಲ್ಲಿನ ಮುಖ್ಯ ಭಾಗವಾಗಿರುವ ಅಧಿಕಾರಿಗಳನ್ನು ಆಯ್ಕೆ ಮಾಡಲು ಅಗತ್ಯವಿರುವ ಪರೀಕ್ಷಾ ವ್ಯವಸ್ಥೆಯೇ ಸ್ವಾಯತ್ತತೆ ಕಳೆದುಕೊಳ್ಳುವುದರೊಂದಿಗೆ ಮತ್ತು ಭ್ರಷ್ಟವಾಗುವುದರೊಂದಿಗೆ ಇದೆಲ್ಲವೂ ಶುರುವಾಗುತ್ತದೆ.
ಯುಪಿಎಸ್‌ಸಿ ಅಥವಾ ಕೇಂದ್ರ ಲೋಕಸೇವಾ ಆಯೋಗ ಎನ್ನುವ, ಸಾಂವಿಧಾನಿಕ ತಾಕತ್ತುಳ್ಳ ಸ್ವಾಯತ್ತ ಸಂಸ್ಥೆಗೆ ಸರಕಾರದೊಂದಿಗೆ ಯಾವುದೇ ಕೊಡುಕೊಳ್ಳುವಿಕೆ ಇಲ್ಲ.
ಆದರೆ ಒಂದು ಕ್ಷಣ ಯೋಚಿಸಿ.
ಅದರ ಅಧ್ಯಕ್ಷರೋ ಸದಸ್ಯರೋ ಈ ದೇಶದ ಪ್ರಧಾನಿ ಅಥವಾ ಪ್ರಧಾನಿ ಕಚೇರಿಯಿಂದ ನೇಮಕಗೊಂಡರೆ ಅಂಥವರು ಎಷ್ಟು ಸ್ವಾಯತ್ತವಾಗಿರಲು ಸಾಧ್ಯ? ಅವರು ಪ್ರಧಾನಿ ಅಥವಾ ಪ್ರಧಾನಿ ಕಚೇರಿ ಹಾಕಿದ ಗೆರೆ ದಾಟಿ ಏನಾದರೂ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವೇ?
ಎರಡನೆಯದಾಗಿ, ಹಾಗೆ ಅವರು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದು ಎಂದಾದ ಮೇಲೆ ಹೇಗೆ ಅಧಿಕಾರಿಗಳು ಸರಕಾರದ ಪರವಾಗಿ ಗೋಣು ಹಾಕುವವರಾಗದೆ ಇರುತ್ತಾರೆಯೇ?
ಎಲ್ಲ ಸರಕಾರಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಕಡೆಗೆ ಮೀಡಿಯಾ ಸಂಪಾದಕರ ಹುದ್ದೆಗಳವರೆಗೂ ಎಲ್ಲವೂ ಸರಕಾರದ ಇಷಾರೆಯಂತೆಯೇ ಭರ್ತಿಯಾಗುತ್ತವೆ. ಹೀಗೆಯೇ ನಡೆದರೆ ಅವೆಲ್ಲವೂ ಪ್ರಧಾನಿ ಕಚೇರಿ ಹೇಳುವುದನ್ನೇ ಕೇಳಿಕೊಂಡಿರುವವರ ಸಂತೆಯ ಹಾಗಾಗುತ್ತವಲ್ಲವೇ?
ನ್ಯಾಯಾಂಗದಲ್ಲಿನ ನೇಮಕದ ಮೇಲೆಯೂ ಹಿಡಿತ ಸಾಧಿಸುವ ಯತ್ನಗಳು ನಡೆದಿರುವ ಈ ಹೊತ್ತಲ್ಲಿ ಉಳಿದ ಯಾವ ವಿಭಾಗಗಳೂ ಸರಕಾರದ ಹಿಡಿತದಿಂದ ತಪ್ಪಿಸಿಕೊಂಡು ಉಳಿದಿಲ್ಲ. ಇಂಥ ಸ್ಥಿತಿಯಲ್ಲಿ ಪ್ರಜಾಸತ್ತೆ ಬಚಾವಾಗುವುದಾದರೂ ಹೇಗೆ?
ಈಗ ವಿಷಯವೇನೆಂದರೆ,
ಸರಕಾರದ ಪ್ರಮುಖ ಹುದ್ದೆಗಳಿಗೆ ಅಂದರೆ, ಐಎಎಸ್‌ನಲ್ಲಿ ಆಯ್ಕೆಯಾದವರು ಇರಬೇಕಾದ ಆಡಳಿತಾತ್ಮಕ ಹುದ್ದೆಗಳಿಗೆ ಯುಪಿಎಸ್‌ಸಿಯ ಸರಕಾರಿ ಸೇವಾ ಕೇಡರ್‌ಗಳಿಗೆ ಹೊರತಾದ ಖಾಸಗಿ ವಲಯದ ಪರಿಣಿತರನ್ನು, ವಿಷಯ ತಜ್ಞರನ್ನು ನೇರವಾಗಿ ನೇಮಕ ಮಾಡಿಕೊಳ್ಳುವುದು ನಡೆಯುತ್ತಿದೆ.
ಇದನ್ನು ‘ಲ್ಯಾಟರಲ್ ಎಂಟ್ರಿ’ ನೇಮಕಾತಿ ಎಂದು ಹೇಳಲಾಗುತ್ತದೆ. ಕೇಂದ್ರ ಸರಕಾರ 2018ರಿಂದಲೂ ಇಂಥ ನೇಮಕಾತಿಗಳನ್ನು ಮಾಡಿಕೊಂಡು ಬರುತ್ತಿದೆ. 2018ರಲ್ಲಿ ಮೋದಿ ಸರಕಾರ ಇದನ್ನು ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳ ನೇಮಕದೊಂದಿಗೆ ಶುರು ಮಾಡಿತ್ತು. ಮೂರು ವರ್ಷಗಳ ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯುತ್ತದೆ.
ವಾಸ್ತವವಾಗಿ ಅವೆಲ್ಲವೂ ಯುಪಿಎಸ್‌ಸಿ ಭರ್ತಿ ಮಾಡಬೇಕಿರುವ ಹುದ್ದೆಗಳು.
ಯುಪಿಎಸ್‌ಸಿ ಮೂಲಕ ನೇಮಕಾತಿ ನಡೆಯುವಾಗ ದೇಶದ ಆದಿವಾಸಿಗಳು, ದಲಿತರು, ಹಿಂದುಳಿದವರು ಹೀಗೆ ಈ ಎಲ್ಲ ಸಮುದಾಯದವರಿಗೂ ಮೀಸಲಾತಿಗೆ ಅನುಗುಣವಾಗಿ ಅವಕಾಶ ಸಿಗುತ್ತಾ ಹೋಗುತ್ತದೆ. ಆದರೆ ಈಗ ವೃತ್ತಿಪರತೆ ಮತ್ತು ವಿಷಯ ಪರಿಣತಿ ಎಂಬ ನೆಪ ಹೂಡುವುದರೊಂದಿಗೆ ಅಂಥ ಮೀಸಲಾತಿಗೆ ವ್ಯತಿರಿಕ್ತವಾದ ನೇಮಕಕ್ಕೆ ಸರಕಾರ ಮುಂದಾಗುತ್ತಿರುವುದು ವಿಪರ್ಯಾಸ.
ಆದರೆ ಇಲ್ಲೊಂದು ಪ್ರಶ್ನೆ ಏಳುತ್ತದೆ.
ವೃತ್ತಿಪರತೆ ಮತ್ತು ಪರಿಣತಿ ಹೆಸರಲ್ಲಿ ಮಾಡಿಕೊಳ್ಳುತ್ತ ಬರಲಾಗಿರುವ ಈ ನೇಮಕಗಳಿಂದ ಆಯಾ ಇಲಾಖೆಗಳಲ್ಲಿ ಏಕೆ ಸುಧಾರಣೆ ಆಗದೆ ಉಳಿದಿದೆ?
ಗೃಹ ಸಚಿವಾಲಯ, ಶಿಕ್ಷಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ವಿದೇಶಾಂಗ ವ್ಯವಹಾರ, ಉಕ್ಕು ಸಚಿವಾಲಯ, ಹಣಕಾಸು ಸಚಿವಾಲಯ, ಸಾಮಾಜಿಕ ನ್ಯಾಯ ಸಚಿವಾಲಯ, ಜನಶಕ್ತಿ ಸಚಿವಾಲಯ, ಕಾನೂನು ಸಚಿವಾಲಯ, ವಾಣಿಜ್ಯ ಸಚಿವಾಲಯ ಮುಂತಾದೆಡೆ ಹೀಗೆ ಹಲವಾರು ಮಂದಿ ವಿಷಯ ತಜ್ಞರ ನೇಮಕ ಆಗಿದೆ.
ಈವರೆಗೆ 63 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ಎಲ್ಲೆಲ್ಲಿ ಇಂಥ ಪರಿಣಿತರ ನೇಮಕ ಆಗಿದೆಯೋ ಅಲ್ಲೆಲ್ಲ ಆ ಪರಿಣಿತರು ಸಾಧಿಸಿರುವುದಾದರೂ ಏನು?
ಹೀಗೆ ಹಿಂಬಾಗಿಲ ಮೂಲಕ ಪ್ರಮುಖ ಹುದ್ದೆಗಳಿಗೆ ಬರುವವರು ಇಲ್ಲಿ ಸಿಗುವ ಸಂಬಳಕ್ಕಾಗಿ ಬರುತ್ತಿಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಅಷ್ಟು ಅನುಭವ ಇರುವ ವಿಷಯ ತಜ್ಞರಿಗೆ ಖಾಸಗಿ ವಲಯದಲ್ಲಿ ಬಹಳ ದೊಡ್ಡ ಸಂಬಳವೇ ಸಿಗುತ್ತೆ. ಹಾಗಾದರೆ ಅವರು ಯಾವ ಉದ್ದೇಶ ಇಟ್ಟುಕೊಂಡು ಸರಕಾರಿ ಸೇವೆಗೆ ಬರುತ್ತಿದ್ದಾರೆ?
ದಿಢೀರ್ ಆಗಿ ಸರಕಾರದ ಪ್ರಮುಖ ಭಾಗವಾಗುವ, ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವವರಾಗಿ ಬಿಡುವ ಅವರು ಸರಕಾರದಲ್ಲಿದ್ದು ಜನರಿಗೆ ಮಹದುಪಕಾರ ಆಗುವಂಥ ಏನನ್ನಾದರೂ ಮಾಡಿದ್ದಾರೆಯೆ?
ರಾಹುಲ್ ಗಾಂಧಿ ಹೇಳಿದ ಹಾಗೆ, ಇದು ಆರೆಸ್ಸೆಸ್ ಮಂದಿಯನ್ನು ಹಿಂಬಾಗಿಲಿಂದ ಸರಕಾರದ ಉನ್ನತ ಹುದ್ದೆಗಳಿಗೆ ತಂದು ಕೂರಿಸುವ ಹುನ್ನಾರವೇ?
ಇನ್ನು, ವಿಷಯ ಪರಿಣತಿ ಹೆಸರಲ್ಲಿ ಸರಕಾರದ ಉನ್ನತ ಹುದ್ದೆಗಳಿಗೆ ನೇಮಕಗೊಳ್ಳುವವರು ಖಾಸಗಿ ಅಂದರೆ ಹೆಚ್ಚಾಗಿ ಕಾರ್ಪೊರೇಟ್ ವಲಯದ ವ್ಯಕ್ತಿಗಳಾಗಿರುತ್ತಾರೆ.
ಸರಕಾರ ಮತ್ತು ಕಾರ್ಪೊರೇಟ್ ವಲಯದ ಸಂಬಂಧದ ಹಿನ್ನೆಲೆಯಲ್ಲಿ ಆಗುವ ಇಂಥ ನೇಮಕಗಳ ಮೂಲಕ ಅಂತಿಮವಾಗಿ ಕಾರ್ಪೊರೇಟ್ ವಲಯಕ್ಕೆ ಲಾಭ ಆಗುತ್ತಿದೆಯೇ?
ಈ ಸಲವೂ 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ನಿರ್ದೇಶಕರು ಸೇರಿದಂತೆ ಒಟ್ಟು 45 ಹುದ್ದೆಗಳಿಗೆ ಹಿಂಬಾಗಿಲ ಪ್ರವೇಶದ ನೇಮಕಾತಿಗೆ ಕೇಂದ್ರ ಸರಕಾರ ಮುಂದಾಗಿತ್ತು.
ಆದರೆ ಈ ನಡೆ ಭಾರೀ ವಿವಾದ ಸೃಷ್ಟಿಸಿದೆ. ಆಡಳಿತದೊಳಗೆ ಹಿಂಬಾಗಿಲ ಪ್ರವೇಶದ ನೇಮಕಾತಿಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ದೊಡ್ಡ ಮಟ್ಟದಲ್ಲಿ ತಕರಾರು ತೆಗೆದಿವೆ. ಮಾತ್ರವಲ್ಲದೆ, ಬಿಜೆಪಿಯ ಮಿತ್ರಪಕ್ಷಗಳೂ ಇದರ ವಿರುದ್ಧ ದನಿಯೆತ್ತಿವೆ.
ಕೇಂದ್ರ ಸರಕಾರದ ಈ ನಡೆ ಸಂವಿಧಾನದ ಉಲ್ಲಂಘನೆಯಾಗುತ್ತದೆ. ಉನ್ನತ ಹುದ್ದೆಗಳಿಗೆ ತನ್ನ ಸೈದ್ಧಾಂತಿಕ ಹಿನ್ನೆಲೆಯ ಮಂದಿಯನ್ನು ಹಿಂಬಾಗಿಲ ಮೂಲಕ ನೇಮಿಸುವ ಪಿತೂರಿ ಇದಾಗಿದೆ ಎಂದು ವಿಪಕ್ಷಗಳು ಟೀಕಿಸಿವೆ.
ಹಿಂಬಾಗಿಲ ಪ್ರವೇಶದ ಮೂಲಕ ನೇಮಕ ಮಾಡಿಕೊಳ್ಳುವ ಕೇಂದ್ರದ ನಡೆ ದೇಶವಿರೋಧಿಯಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಐಎಎಸ್‌ನ ಖಾಸಗೀಕರಣ ಎಂದು ಅವರು ಟೀಕಿಸಿದ್ದರು.
ಬಿಜೆಪಿ ತನ್ನ ಸೈದ್ಧಾಂತಿಕ ಪೋಷಕ ಸಂಸ್ಥೆಯಾದ ಆರೆಸ್ಸೆಸ್‌ನ ನಿಷ್ಠಾವಂತ ಅಧಿಕಾರಿಗಳನ್ನು ಹಿಂಬಾಗಿಲಿನಿಂದ ನೇಮಿಸಿಕೊಳ್ಳಲು ಬಳಸುತ್ತಿರುವ ದಾರಿ ಇದು ಎಂದು ರಾಹುಲ್ ಆರೋಪಿಸಿದ್ದರು.
ಹಿಂಬಾಗಿಲ ಪ್ರವೇಶದ ನೇಮಕಾತಿ ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲಿನ ದಾಳಿ. ಇಂಥ ನಡೆಯ ಮೂಲಕ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳ ಮೀಸಲಾತಿಯನ್ನು ಬಹಿರಂಗವಾಗಿಯೇ ಕಿತ್ತುಕೊಳ್ಳಲಾಗುತ್ತದೆ. ಬಿಜೆಪಿ ಸಂವಿಧಾನವನ್ನು ನಾಶಪಡಿಸಲು ಮತ್ತು ಬಹುಜನರಿಂದ ಮೀಸಲಾತಿ ಕಸಿದುಕೊಳ್ಳಲು ರಾಮರಾಜ್ಯದ ಪರಿಕಲ್ಪನೆಯನ್ನು ವಿರೂಪಗೊಳಿಸಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸಂವಿಧಾನವನ್ನು ಹರಿದು ಹಾಕಿದ ಬಿಜೆಪಿಯಿಂದ, ಮೀಸಲಾತಿಯ ಮೇಲೆ ಡಬಲ್ ದಾಳಿ ಎಂದು ಮೋದಿ ಸರಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ. ‘‘ಇದು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಡಬ್ಲ್ಯುಎಸ್ ಮೀಸಲಾತಿಯನ್ನು ಹೊಂದಿದೆಯೇ? ಬಿಜೆಪಿಯ ಮಿತ್ರಪಕ್ಷದ ಕೇಂದ್ರ ಸಚಿವರು ಉದ್ಯೋಗ ಮೀಸಲಾತಿಯಲ್ಲಿ ಅಕ್ರಮಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದು ಏಕೆ ಎಂಬುದು ಈಗ ನಮಗೆ ತಿಳಿಯುತ್ತಿದೆ’’ ಎಂದು ಖರ್ಗೆ ಹೇಳಿದ್ದರು.
ಎಸ್‌ಪಿಯ ಅಖಿಲೇಶ್ ಯಾದವ್, ಬಿಜೆಪಿಯ ಈ ಪಿತೂರಿ ವಿರುದ್ಧ ಚಳವಳಿ ನಡೆಸುವ ಸಮಯ ಬಂದಿದೆ ಎಂದಿದ್ದಾರೆ. ಈ ನೇಮಕಾತಿ ಪ್ರಕ್ರಿಯೆ ಹಿಂಪಡೆಯದೇ ಇದ್ದಲ್ಲಿ ಅಕ್ಟೋಬರ್ 2ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದರು.
ಕೇಂದ್ರದ ಇಂತಹ ನಡೆ, ಈಗಿರುವ ಅಧಿಕಾರಿಗಳು ಹಾಗೂ ಯುವಕರನ್ನು ಅಂಥ ಉನ್ನತ ಹುದ್ದೆಗಳಿಂದ ವಂಚಿತರನ್ನಾಗಿಸಲಿದೆ. ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಮತ್ತು ಹಕ್ಕುಗಳನ್ನು ಕಸಿಯುವುದು ಇದರ ಉದ್ದೇಶ ಎಂದು ಅಖಿಲೇಶ್ ಟೀಕಿಸಿದ್ದರು.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರದ ಇಂಥ ನಡೆಯಿಂದ ಕೆಳಹಂತದ ಹುದ್ದೆಗಳಲ್ಲಿರುವವರು ಭಡ್ತಿಯಿಂದ ವಂಚಿತರಾಗುತ್ತಾರೆ ಎಂದು ಹೇಳಿದ್ದರು.
ಇನ್ನು ಎನ್‌ಡಿಎ ಭಾಗವಾಗಿರುವವರೂ ಇದರ ವಿರುದ್ಧ ದನಿಯೆತ್ತಿರುವುದು ಮಹತ್ವದ ಸಂಗತಿ.
ಲೋಕ್ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಮೀಸಲಾತಿಯನ್ನು ತಪ್ಪಿಸಿ ಸರಕಾರಿ ಹುದ್ದೆಗಳಲ್ಲಿ ನೇಮಕಾತಿಗೆ ಅನುಸರಿಸುವ ಯಾವುದೇ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ಸರಕಾರಿ ನೇಮಕಾತಿಯಲ್ಲಿ ಮೀಸಲಾತಿ ಇರಬೇಕು. ಇಲ್ಲಿ ಯಾವುದೇ ನೆಪಗಳನ್ನು ಮುಂದೆ ಮಾಡುವಂತಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಒಂದೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಾಗಲೇ ಇನ್ನೊಂದೆಡೆ ಸರಕಾರ ಸಮರ್ಥನೆಗೆ ಮುಂದಾಗಿದೆ. ಮೀಸಲಾತಿ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಮೂರು ವರ್ಷಗಳಿಗೆ ಮಾತ್ರವೇ ಇರುತ್ತವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ವಿಪಕ್ಷಗಳ ತಕರಾರು ಮತ್ತು ಆರೋಪಗಳು ಆಧಾರರಹಿತ ಎಂದಿದರು.
ಆದರೆ ಇಲ್ಲೊಂದು ನಾಜೂಕುತನ ಇತ್ತು. ಇಲ್ಲಿ ರೋಸ್ಟರ್ ಪಾಲನೆ ಎಂಬುದು ಹೇಳುವುದಕ್ಕೆ ಮಾತ್ರವೇ ಇರುತ್ತದೆ. ಆಗುವುದೇ ಬೇರೆ.
ಸಾರ್ವಜನಿಕ ಉದ್ಯೋಗಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮೀಸಲಾತಿಯನ್ನು 13 ಪಾಯಿಂಟ್ ರೋಸ್ಟರ್ ಎಂದು ಕರೆಯಲಾಗುತ್ತದೆ.
ಅದರಂತೆ, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರ (ಇಡಬ್ಲ್ಯುಎಸ್) ಕೋಟಾದ ಶೇಕಡಾವಾರು ಪ್ರಮಾಣವನ್ನು ನೂರರಿಂದ ಭಾಗಿಸುವ ಮೂಲಕ ಅಭ್ಯರ್ಥಿಯ ಆರಂಭಿಕ ರೋಸ್ಟರ್‌ನಲ್ಲಿನ ಸ್ಥಾನ ನಿರ್ಧರಿಸಲಾಗುತ್ತದೆ.
ಉದಾಹರಣೆಗೆ, ಒಬಿಸಿ ಕೋಟಾ ಶೇ.27 ಆಗಿರುವುದರಿಂದ, ಒಬಿಸಿ ಅಭ್ಯರ್ಥಿಗಳನ್ನು ಪ್ರತಿ 4ನೇ ಹುದ್ದೆಗೆ ನೇಮಕ ಮಾಡಲಾಗುತ್ತದೆ.
ಅಂತೆಯೇ, ಎಸ್‌ಸಿ ಅಭ್ಯರ್ಥಿಗಳು ಶೇ.15 ಮೀಸಲಾತಿ ಹೊಂದಿದ್ದು, ಪ್ರತೀ 7ನೇ ಹುದ್ದೆಗೆ ನೇಮಕ ಮಾಡಬೇಕು.ಎಸ್‌ಟಿ ಅಭ್ಯರ್ಥಿಗಳು ಶೇ. 7.5 ಮೀಸಲಾತಿ ಹೊಂದಿದ್ದು, ಪ್ರತೀ 14ನೇ ಹುದ್ದೆಗೆ, ಇಡಬ್ಲ್ಯುಎಸ್ ಅಭ್ಯರ್ಥಿಗಳು ಶೇ.10 ಮೀಸಲಾತಿ ಹೊಂದಿರುವುದರಿಂದ ಪ್ರತೀ 10ನೇ ಖಾಲಿ ಹುದ್ದೆಗೆ ನೇಮಕ ಮಾಡಬೇಕು.
ಈ ಸೂತ್ರದ ಪ್ರಕಾರ, ಖಾಲಿ ಹುದ್ದೆಗಳು ಮೂರು ಮಾತ್ರ ಇದ್ದಲ್ಲಿ ಅಲ್ಲಿ ಮೀಸಲಾತಿಯೇ ಸಿಗುವುದಿಲ್ಲ. ಅಲ್ಲದೆ ಒಂದೇ ಪೋಸ್ಟ್ ಕೇಡರ್‌ನಲ್ಲಿ ಕೂಡ ಮೀಸಲಾತಿ ಅನ್ವಯಿಸುವುದಿಲ್ಲ ಎಂಬುದನ್ನು ಆರ್‌ಟಿಐ ಮಾಹಿತಿ ಉಲ್ಲೇಖಿಸಿ ವರದಿಗಳು ಹೇಳಿದ್ದವು.
ಈಗ ಹಿಂಬಾಗಿಲ ಪ್ರವೇಶದ ಮೂಲಕ ಭರ್ತಿ ಮಾಡುವ ಪ್ರಯತ್ನದ ಪ್ರತಿಯೊಂದು ಹುದ್ದೆಯೂ ಒಂದೇ ಹುದ್ದೆ ಎಂದು ತೋರಿಸಲಾಗಿದ್ದು, ಮೀಸಲಾತಿಯೇ ಅನ್ವಯಿಸದ ಸ್ಥಿತಿ ಸೃಷ್ಟಿಸಲಾಗಿತ್ತು.
ಈ ಸಲ 45 ಹುದ್ದೆಗಳಿಗೆ ಹಿಂಬಾಗಿಲ ಪ್ರವೇಶದ ಮೂಲಕ ನೇಮಕ ನಡೆಸಲು ಮುಂದಾಗಿದ್ದು, ಇವುಗಳನ್ನು ಒಂದೇ ಗುಂಪಾಗಿ ಪರಿಗಣಿಸಿದರೆ, 13 ಪಾಯಿಂಟ್ ರೋಸ್ಟರ್ ಪ್ರಕಾರ, 6 ಹುದ್ದೆಗಳನ್ನು ಎಸ್‌ಸಿ ಅಭ್ಯರ್ಥಿಗಳಿಗೆ, 3 ಹುದ್ದೆಗಳನ್ನು ಎಸ್‌ಟಿ ಅಭ್ಯರ್ಥಿಗಳಿಗೆ, 12 ಹುದ್ದೆಗಳನ್ನು ಒಬಿಸಿ ಅಭ್ಯರ್ಥಿಗಳಿಗೆ ಮತ್ತು 4 ಹುದ್ದೆಗಳನ್ನು ಇಡಬ್ಲ್ಯುಎಸ್ ವರ್ಗಕ್ಕೆ ಮೀಸಲಿಡಬೇಕು.
ಆದರೆ ಈ ಖಾಲಿ ಹುದ್ದೆಗಳಿಗಾಗಿ ಪ್ರತೀ ಇಲಾಖೆಗೆ ಪ್ರತ್ಯೇಕವಾಗಿ ಅರ್ಜಿ ಕರೆದಿರುವುದರಿಂದ, ಒಂದೇ ಹುದ್ದೆ ಎಂದು ತೋರಿಸುವ ಮೂಲಕ ಮೀಸಲಾತಿ ಕೊಡುವುದನ್ನೇ ತಪ್ಪಿಸುವ ಕೆಲಸ ಮಾಡಲಾಗಿತ್ತು. ಮೀಸಲಾತಿ ಕೊಡಲು ಬಯಸದ ಕೇಂದ್ರ ಸರಕಾರ ಆಡುತ್ತಿರುವ ಆಟ ಇದು.
ಇನ್ನು ಪ್ರಧಾನಿ ಮೋದಿ ಸಂಪುಟದಲ್ಲೂ ರಾಜಕೀಯದಲ್ಲಿಲ್ಲದೆ, ಜನರಿಂದ ಆಯ್ಕೆಯಾಗದೆ, ಮೋದಿಯವರೇ ಕರೆದು ಅತ್ಯಂತ ಪ್ರಮುಖ ಸಚಿವ ಸ್ಥಾನಗಳನ್ನು ಕೊಟ್ಟ ವಿಷಯ ತಜ್ಞರಿದ್ದಾರೆ. ಅವರಿಂದ ಮೋದಿ ಸರಕಾರಕ್ಕೆ, ಈ ದೇಶದ ಜನರಿಗೆ ಎಷ್ಟು ಪ್ರಯೋಜನವಾಗಿದೆ? ಹೇಗೆ ನ್ಯಾಯಯುತ ಹಕ್ಕನ್ನು ಸರಕಾರ ತನ್ನ ಈ ಆಟದ ಮೂಲಕ ಕಸಿಯುತ್ತಿದೆ ಮತ್ತಿದು ಎಷ್ಟು ಅಪಾಯಕಾರಿಯಾಗಿದೆ, ಹೇಗೆ ಸದ್ದಿಲ್ಲದೆ ಸಂವಿಧಾನವನ್ನು ಉಲ್ಲಂಘಿಸುತ್ತ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ ಎಂಬುದನ್ನು ಕಾಣಬಹುದಾಗಿದೆ.
ಈಗ ವಿಪಕ್ಷಗಳು ಮತ್ತು ಎನ್‌ಡಿಎ ಭಾಗವಾಗಿರುವ ಪಕ್ಷಗಳ ಆಕ್ರೋಶಕ್ಕೆ ಮಣಿದ ಕೇಂದ್ರ ಸರಕಾರ ಈ ನಡೆಯಿಂದ ಹಿಂದೆ ಸರಿದಂತೆ ಕಾಣುತ್ತಿದೆ.