ಸಮುದಾಯಕ್ಕೆ ಶಿಕ್ಷಣದ ಹಾದಿ ತೋರಿಸಿದ ಬಂಜಾರ ಕುಲಗುರು ಸೇವಾಲಾಲ್

‘‘ಹಾತೇಮಾಯಿ ಕಾಟಿರೆ ಝಲನರ ಗೋರೂರ ತಾಂಡೇನ ಜಾರೋ ಫೆರಿನರ ತಾಂಡೋ ತಾಂಡೆಮ ಸೀಕವಾಡಿ ದೇನರ’’ (ಕೈಯಲ್ಲಿ ಝಂಡ ಹಿಡಿದು ಬಂಜಾರರ ತಾಂಡಕ್ಕೆ ಹೋಗುವ ತಾಂಡಾ ತಾಂಡಗಳಲ್ಲಿ ಶಾಲೆ ನೀಡಲು) -ಸೇವಾಲಾಲ್

Update: 2024-02-15 05:29 GMT

ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅನೇಕ ಮಹಾಪುರುಷರು, ಸಂತರು, ಕವಿಗಳು, ರಾಜರು, ಗುರುಗಳು, ವೀರರು, ಸುಧಾರಕರು, ತ್ಯಾಗಿಗಳು ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು ಸಿಗುತ್ತಾರೆ. ಅಂತಹ ಸಮಾಜ ಸುಧಾರಕರಲ್ಲೊಬ್ಬರು ಬಂಜಾರ ಗುರು ಸೇವಾಲಾಲರು.

ಬಂಜಾರರು ಹಿಂದೂಗಳಲ್ಲ, ಆರ್ಯರೂ ಅಲ್ಲ; ಪರಿಸರ ಆರಾಧಕರು. ಮೂಲ ನಿವಾಸಿಗಳಾದ ಬಂಜಾರರಲ್ಲಿನ ಪಂಗಡಗಳಾದ ರಾಥೋಡರು, ಚವ್ಹಾಣರು, ಗಹದ್ವಾಲರು, ಪರಮಾರರು ಮುಂತಾದ ಐತಿಹಾಸಿಕ ಹಾಗೂ ಚಾರಿತ್ರಿಕವಾದ ಗೋತ್ರದ 64ಕ್ಕೂ ಹೆಚ್ಚಿನ ನಾಯಕರು ಇದ್ದಾರೆ. ಆದರೆ ಬಂಜಾರ (ಲಂಬಾಣಿ)ರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಚಾರಿತ್ರಿಕ ನೆಲ ಮೂಲದ ನಾಟಿ ವೈದ್ಯ, ಸಮುದಾಯದ ಮಾರ್ಗದರ್ಶಕರಾಗಿದ್ದ ಸಂತ ಸೇವಾಲಾಲರು ಇತರರ ಸೇವೆ ಮಾಡುವ ಸಮಾಜಸುಧಾರಕರಾಗಿದ್ದರು.

ಸಮುದಾಯ ಹೆಚ್ಚು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು, ಪ್ರಾಮಾಣಿಕರಾಗಬೇಕು, ಎಲ್ಲರ ನಂಬಿಕೆಗೆ ಅರ್ಹರಾಗಬೇಕು, ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು. ವೆಚ್ಚಕ್ಕೆ ಕಡಿವಾಣ ಹಾಕಬೇಕು, ಮೌಢ್ಯಗಳಿಂದ ಹೊರಬರಬೇಕು ಎಂದು ಹೇಳಿ, ಪರ್ಯಾಯ ಕಾನೂನು ವ್ಯವಸ್ಥೆ (ಪಂಚಾಯತ್) ರೂಪಿಸಿದ್ದರು. ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿ ಸ್ವಾಭಿಮಾನ ಅರಳುವಂತೆ ಮಾಡುತ್ತಿದ್ದರು.

ಬಂಜಾರರು ಸೇವಾ ಭಾಯ(ಅಣ್ಣ)ರಿಗೆ ತಮ್ಮ ತಾಂಡಗಳಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ. ಬಂಜಾರರು 300ಕ್ಕೂ ಹೆಚ್ಚಿನ ಸಂಸ್ಥಾನಗಳ ರಾಜ ಮಹಾರಾಜರಿಗೆ ಆಹಾರ ಧಾನ್ಯ, ಯುದ್ಧ ಸಾಮಗ್ರಿಗಳ ಜೊತೆಗೆ ಉಪ್ಪು, ಕೊಬ್ಬರಿ, ಬೆಳ್ಳಿ, ಬಂಗಾರ, ಖರ್ಜೂರ ಅಲ್ಲದೆ ನೈಸರ್ಗಿಕ ಸಂಪನ್ಮೂಲಗಳನ್ನು ಮಾರಿ ಬದುಕುವುದನ್ನು ಸೇವಾಲಾಲರು ಉತ್ತೇಜಿಸಿದ್ದರು. 1813ರ laman marg ಕೃತಿಯಲ್ಲಿ ಏಶ್ಯ ಖಂಡದ ಉದ್ದಕ್ಕೂ ವ್ಯಾಪಾರದ ದಾಖಲೆ ಇದೆ.

ಭಾರತೀಯ ಸಂಸ್ಕೃತಿಗೆ ದ್ರಾವಿಡ ಪರಂಪರೆ ನೀಡಿದ ಅಮೋಘ ಕೊಡುಗೆ ಗುರು ಸಂಪ್ರದಾಯ. ಸೇವಾಲಾಲರು ಮುನಿ ಸಂಪ್ರದಾಯಕ್ಕೆ ಹೊರತಾಗಿ ದ್ರಾವಿಡರ ಗುರು ಸಂಸ್ಕೃತಿ, ಸಂಪ್ರದಾಯದವರಾಗಿದ್ದಾರೆ. ಗುರು ಸಂಪ್ರದಾಯದಲ್ಲಿ ಹೆಣ್ಣು ಗಂಡು ಎಂಬ ಲಿಂಗಭೇದಕ್ಕೆ ಅವಕಾಶವೇ ಇಲ್ಲ. ಭಿನ್ನ ಆಚಾರ, ಉಡುಗೆ-ತೊಡುಗೆ, ರೂಢಿ-ಪದ್ಧತಿಗಳು ಹಾಗೂ ಭಿನ್ನ ಧರ್ಮ ಬಂಜಾರರದ್ದಾಗಿದೆ.

ಸೇವಾಲಾಲರ ಜನನ-ಮರಣ:

ಕ್ರಿ.ಶ. 1739 ಫೆಬ್ರವರಿ 15ರ ಸೋಮವಾರ ಬೆಳಗ್ಗೆ 9 ಗಂಟೆಗೆ ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಪೂರ್ವಜರು ಮೂಲತಃ ಅಲೆಮಾರಿ ವ್ಯಾಪಾರಿಗಳಾಗಿದ್ದುದರಿಂದ ದೇಶದ ಪ್ರತಿಯೊಂದು ಪ್ರಾಂತಗಳಲ್ಲೂ ಸಂಚರಿಸುತ್ತಿದ್ದವರು. ಹೀಗಾಗಿ ಇವರು ಕರ್ನಾಟಕದ ಇಂದಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯಘಡ)ದಲ್ಲಿ ಜನಿಸಿದರು ಎನ್ನಲಾಗುತ್ತದೆ. (ಹೀಗೆ ಭಿನ್ನ ಭಿನ್ನ ಪ್ರದೇಶಗಳಲ್ಲೂ ಹುಟ್ಟಿದರು, ಅಸುನೀಗಿದರು ಎಂಬ ಐತಿಹ್ಯಗಳಿವೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯ ಇದೆ.)

ಮನುಕುಲಕ್ಕೆ ಸೇವಾಲಾಲರು ಬೋಧಿಸಿದ ಕೆಲವು ಹಿತ ವಚನಗಳು-ಉಪದೇಶಗಳು ಹೀಗಿವೆ:

ನಾವು

► ‘‘ಅಪಣ್ ಬ್ರಹ್ಮೇರ್ ಲಕಣಿ ಲಕೇವಾಳ್ ವೇಣು’’ (ನಾವು ಬ್ರಹ್ಮನ ಬರಹ ಬರೆಯುವವರಾಗಬೇಕು).

‘‘ಸೀಕ್ ಸೀಕೋ ಸೀಕನ್ ಸೀಕಾವೋ ಸೀಕೋಜಕೋ ಸೇನಿಭಲಾನ್ ಆಂಗ್ ಚಾಲಚ್’’ ಅಂದರೆ, ‘‘ಶಿಕ್ಷಣ ಪಡೆಯಿರಿ, ಕಲಿತು ಕಲಿಸಿರಿ, ಕಲಿತವನು ಸರ್ವರನ್ನು ಒಗ್ಗೂಡಿಸಿ ಮುಂದೆ ಸಾಗುತ್ತಾನೆ’’ ಎಂದ ಈ ಮಾತು ಇಂದಿಗೂ ಹೆಚ್ಚು ಪ್ರಸ್ತುತವಾಗಿದೆ ಇದರ ಪಾಲನೆ ಆಗಬೇಕು.

► ನಾನೇ ಎಂಬ ಅಹಂಬೇಡ, ಇನ್ನೊಬ್ಬರ ಜೀವತೆಗೆದು ಲಾಭ ಪಡೆಯಬೇಡ, ಮನುಷ್ಯ ಮನುಷ್ಯರಲ್ಲಿ ವ್ಯತ್ಯಾಸಬೇಡ.

► ಎಲ್ಲಾ ಧರ್ಮಗಳನ್ನು ಆಚರಿಸಿ, ತಮ್ಮ ವಿಶ್ವ ಮಾನವ ಧರ್ಮ ಎನಿಸಿದ ಪರಿಸರ ಆರಾಧನಾ ಧರ್ಮ ಪಾಲಿಸಿ. ಕಲ್ಲೇ (ಪರಿಸರ) ನಮಗೆ ದೇವರು

► ದೇಶಸುತ್ತಿ, ಕೋಶ ಓದಿ ಜ್ಞಾನ ಸಂಪಾದಿಸಿರಿ. ಶ್ರಮ ಜೀವಿಗಳಾಗಿ, ದುಶ್ಚಟ ಬಿಡಿ, ಅಭಿಮಾನವಂತರಾಗಿ.

► ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ.

► ಪರಿಸರದೊಂದಿಗೆ ಹೊಂದಿಕೊಂಡು ನಿಸರ್ಗಕ್ಕೆ ಪೂರಕ ಜೀವನವನ್ನು ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು.

► ಯಾರು ಯಾರೊಬ್ಬರ ವಿರುದ್ಧವೂ ಕೆಟ್ಟದ್ದನ್ನು ಯಾವ ರೀತಿಯಿಂದಲೂ ಯೋಚಿಸಬಾರದು ಮತ್ತು ಮಾಡಬಾರದು.

► ಮಾನವನಾಗಿ ಹುಟ್ಟಿದ ಮೇಲೆ ಘನತೆಯಿಂದ ಬದುಕುವುದನ್ನು ಕಲಿಯಬೇಕು.

► ಸುಳ್ಳು ಹೇಳಬಾರದು, ಪ್ರಾಮಾಣಿಕವಾಗಿರಬೇಕು ಹಾಗೂ ಇತರರ ವಸ್ತುಗಳನ್ನು ಕದಿಯಬಾರದು.

► ಯಾರ ವಿರುದ್ಧವೂ ಕೆಟ್ಟದ್ದನ್ನು ಆಡಬಾರದು ಮತ್ತು ಮಾಡಬಾರದು.

► ಹೆಣ್ಣುಮಕ್ಕಳನ್ನು ದೇವಿಸ್ವರೂಪರೆಂದು ತಿಳಿದು ಸಮಾನವಾಗಿ ಗೌರವಿಸಬೇಕು.

► ಸದಾ ಚಿಂತಿಸುತ್ತಾ ಇರಬಾರದು, ಆತ್ಮವಿಶ್ವಾಸದಿಂದ ಕೂಡಿದ ಜೀವನವನ್ನು ಜೀವಿಸಬೇಕು.

► ಭೋಗಭಾಗ್ಯಗಳನ್ನು ತ್ಯಜಿಸಬೇಕು. ಭಯರಹಿತವಾದ ಜೀವನವನ್ನು ಜೀವಿಸಬೇಕು.

► ಮೂಢನಂಬಿಕೆಗಳನ್ನು ತೊರೆದು ಜ್ಞಾನ ಸಂಪಾದನೆ ಮಾಡುತ್ತಾ ಬಾಳಬೇಕು.

► ನಾವು ನಮ್ಮ ಪ್ರಗತಿಗೆ ಉತ್ತಮ ಸಂಸ್ಕೃತಿ ಅಳವಡಿಸಿಕೊಳ್ಳಬೇಕು.

ಇಂತಹ ನೂರಾರು ಉದಾತ್ತ ಚಿಂತನೆಗಳ ಮೂಲಕ ಸಮ ಸಮಾಜದ ಸಾಕಾರಕ್ಕೆ ಮುನ್ನುಡಿಯನ್ನು ಬರೆದಿದ್ದವರು ಸೇವಾಲಾಲರು.

ಅವಿವಾಹಿತರಾಗಿದ್ದ ಸೇವಾಲಾಲರು ಬಂಜಾರರಿಗೆ ಮಾತ್ರ ಸುಧಾರಕರಾಗಿರಲಿಲ್ಲ ಇತರರಿಗೂ ಸಹಾಯ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ಸೇವಾಲಾಲರಿಗೆ ಕಾಡೇ ದೇಗುಲ, ಕಾಡಿನ ಗೆಣಸೇ ಹಿಟ್ಟು, ಕಾಡಿನ ಜೇನು ಆಹಾರ, ಕಾಡಿನ ಕಲ್ಲೇ ದೇವರು, ಕಾಡಿನ ಗುಹೆಗಳೇ ವಾಸದ ಅರಮನೆಯಾಗಿತ್ತು.

ಇವರ ಕಥೆ- ಸಾವಿರಾರು ಲಾವಣಿಗಳಲ್ಲಿ, ಜಾನಪದ ಕಥಾನಕಗಳಲ್ಲಿ, ಹಾಡುಗಳಲ್ಲಿ, ಹರಿಕಥೆಗಳಲ್ಲಿ ಇರುವುದನ್ನು ಇಂದಿಗೂ ಕಾಣಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಎ.ಆರ್. ಗೋವಿಂದ ಸ್ವಾಮಿ

contributor

Similar News