ಬಸವಣ್ಣ: ಮಾನವೀಯ ಮೌಲ್ಯಗಳ ಹರಿಕಾರ
ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಮೂಲಭೂತ ಸೌಕರ್ಯಗಳು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ಸಿಗಬೇಕೆಂಬುದಾಗಿತ್ತು. ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ಧ್ವನಿಯಾಗಬೇಕೆಂದು ಬಯಸಿದರು. ಅಂತಲೇ ಅವರು ಧಾರ್ಮಿಕ, ಸಾಮಾಜಿಕ ಕಾರ್ಯಗಳ ಸೇವೆಗಳನ್ನು ಅಂದಿನ ಅನುಭವ ಮಂಟಪದ ಮೂಲಕ ಮಾಡಿದರು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿ ಮಾನವೀಯ ಮೌಲ್ಯಗಳ ಹರಿಕಾರರಾದರು.
ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮಧ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಮಹಾಪುರುಷ. ಒಬ್ಬ ಸಮಾಜವಾದಿ, ಪ್ರಜಾವಾದಿ, ಸಾಮಾಜಿಕ ನ್ಯಾಯ ಪರಿಪಾಲಕ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ವಿಶ್ವದ ಶ್ರೇಯೋಭಿವೃದ್ಧಿಗಾಗಿ ದುಡಿದ ವಿಶ್ವ ಚೇತನರಾಗಿ, ಜಾತಿ ವ್ಯವಸ್ಥೆ, ಮೂಢನಂಬಿಕೆ, ಹಾಗೂ ಸಾಮಾಜಿಕ ತಾರತಮ್ಯದ ವಿರುದ್ಧ ಸದಾ ಧ್ವನಿಯೆತ್ತಿ ಜನಪರವಾದ ಕಾಯಕ ಸೇವೆ ಮಾಡಿದವರು ವಿಶ್ವ ಪ್ರಜಾಪ್ರಭುತ್ವದ ಪಿತಾಮಹ ಬಸವಣ್ಣ.
ಬಸವಣ್ಣ ಮ್ಯಾಗ್ನಕಾರ್ಟ್ ಒಪ್ಪಂದಕ್ಕಿಂತ ಅರ್ಧ ಶತಮಾನದ ಹಿಂದೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಕಲ್ಪನೆಯಾದ ಸಂಸತ್ ಭವನವನ್ನು ನಿರ್ಮಿಸಿ, ಜಾಗತಿಕ ಲೋಕಕ್ಕೆ ಸಮತಾವಾದ ಸಮಾನತೆಯ ಸಂದೇಶವನ್ನು ಸಾರುವ, ಎತ್ತಿ ಹಿಡಿಯುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹೀಗಾಗಿಯೇ ಇಂದು ಜಾಗತಿಕ ಸಮುದಾಯ ಅವರನ್ನು ಸದಾ ಸ್ಮರಣೆ ಮಾಡಿಕೊಳ್ಳುತ್ತದೆ.
ಬಸವಣ್ಣನವರು ಅಂದು ಕಲ್ಯಾಣದಲ್ಲಿ ಮಾಡಿದ ಎಲ್ಲಾ ಪ್ರಜಾಪ್ರಭುತ್ವ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಎಲ್ಲದಕ್ಕೂ ಸಮಾಜ ಮುಖಿ ಸೇವೆಗಳ ಕಾರ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರು. ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ. ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವ ಮಂಟಪದ ಅಮರಗಣಂಗಳಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಾಜೋ-ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಹೀಗೆ ಸ್ವತಂತ್ರ ಸರ್ವಸಮಾನತೆಯ ವಿಚಾರಧಾರೆಯನ್ನು ಜಗತ್ತಿನಲ್ಲಿ ಪಸರಿಸಿದವರಲ್ಲಿ ಬಸವಣ್ಣನವರು ಪ್ರಥಮರು, ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪಶ್ಯರು ಕೂಡ ಶರಣರಾದರು. ಅಕ್ಷರ ಕಲಿತರು. ವಚನಗಳನ್ನು ರಚನೆ ಮಾಡಿದರು. ಕಸಗುಡಿಸುವ ಮುತ್ತಾಯಕ್ಕ ಸಹ ವಚನಗಳನ್ನು ಬರೆಯುವಂತೆ ಮಾಡಿ, ಪ್ರೋತ್ಸಾಹಿಸಿದ್ದನ್ನು ಕಾಣುತ್ತೇವೆ.
ಬಸವಾದಿ ಶರಣರ ವಚನ ಸಾಹಿತ್ಯವು ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ. ವಚನ ಸಾಹಿತ್ಯವೂ ಸರ್ವರಿಗೂ ಸಮಬಾಳು, ಸಮಪಾಲು ತತ್ವ ನೀಡುತ್ತದೆ. ಸರ್ವರ ಬಾಳು ಬೆಳಗಿಸುವುದು ಸಮಾನತೆಯ ಸಮಾಜ ನಿರ್ಮಾಣವೇ ವಚನ ಸಾಹಿತ್ಯದ ಪ್ರಮುಖ ಉದ್ದೇಶ ತತ್ವವಾಗಿದೆ. ಹೀಗೆ ವಚನ ಸಾಹಿತ್ಯ ಅಂದಿನ ಸಮಾಜದ ಜನಮಾನಸದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ಸುಜ್ಞಾನವನ್ನು ಬಿತ್ತಿ ಸದಾಚಾರದ ಬೆಳೆತೆಗೆಯುವ ಸ್ವಭಾವದಾಗಿದ್ದವು. ವಚನಗಳು ಓದುಗರಿಗೆ ಬೇವಿನಂತೆ ಕಹಿಯೆನಿಸಿದರೂ ಅವುಗಳನ್ನು ಆಚರಣೆಗೆ ತಂದಾಗ ಬೆಲ್ಲದಂತೆ ಸಿಹಿಯಾಗುವುದನ್ನು ಕಾಣುತ್ತೇವೆ. ಇನ್ನು ಕೆಲವು ವಚನಗಳು ಶರಣರು ಸಾಧಿಸಿದ ಆಧ್ಯಾತ್ಮಿಕ ಸಾಧನೆಯ ಶಿಖರದ ಕನ್ನಡಿಗಳಾಗಿವೆ, ವಚನಗಳನ್ನು ಓದುತ್ತಿದ್ದರೆ ಶರಣರು ನಿಂತ ನೆಲೆ ಏರಿದ ಎತ್ತರ ಅನುಭಾವದ ಆಳ ನಮ್ಮ ಅರಿವಿಗೆ ಬರುತ್ತಾ ಹೋಗುತ್ತದೆ. ಬಸವಣ್ಣನವರು ವಿಶ್ವಗುರುವಾಗಿ, ತನ್ನ ಅನುಭವ ಮಂಟಪದ ಮೂಲಕ ಸಮಾನ ಮನಸ್ಕ ಚಿಂತಕರನ್ನು ಕಲ್ಯಾಣ ನಾಡಿಗೆ ಬರಮಾಡಿಕೊಂಡರು. ಆ ಮೂಲಕ ಕಲ್ಯಾಣ ಪ್ರಾಂತವು ವೈಚಾರಿಕ ಕ್ರಾಂತಿಯ ಕೇಂದ್ರಬಿಂದುವಾಯಿತು. ಈ ಪ್ರಾಂತವು ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಶರಣ ಸಿದ್ಧರಾಮೇಶ್ವರ, ಚನ್ನಬಸವಣ್ಣ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ ಹಾಗೂ ಇತರ ಶರಣರ ವಚನ ಸಾಹಿತ್ಯ ಕೃಷಿಗೆ ಪೂರಕವಾಯಿತು. ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಮೂಲಭೂತ ಸೌಕರ್ಯಗಳು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ಸಿಗಬೇಕೆಂಬುದಾಗಿತ್ತು. ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ಧ್ವನಿಯಾಗಬೇಕೆಂದು ಬಯಸಿದರು. ಅಂತಲೇ ಅವರು ಧಾರ್ಮಿಕ, ಸಾಮಾಜಿಕ ಕಾರ್ಯಗಳ ಸೇವೆಗಳನ್ನು ಅಂದಿನ ಅನುಭವ ಮಂಟಪದ ಮೂಲಕ ಮಾಡಿದರು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿ ಮಾನವೀಯ ಮೌಲ್ಯಗಳ ಹರಿಕಾರರಾದರು.
ಹೀಗೆ ಶರಣರೆಲ್ಲರೂ ಸೇರಿ ಆದರ್ಶ ಸಂಗವನ್ನು ಕಟ್ಟಿದರು. ವಚನ ಸಾಹಿತ್ಯವನ್ನು ಸರ್ವಸ್ಪರ್ಶಿ ಹಾಗೂ ಸರ್ವವ್ಯಾಪಿ ಮಾಡಿದರು. ಹಾಗಾಗಿಯೇ ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೂ ಸೇರಿವೆ. ಸ್ಥಾವರ ಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಗುಡಿಗೆ ಪರ್ಯಾಯವಾಗಿ ಅನುಭವ ಮಂಟಪ, ದಾನಕ್ಕೆ ಸಮನಾಗಿ ದಾಸೋಹ, ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ ಹೀಗೆ ಎಲ್ಲ ರೀತಿಯಿಂದಲೂ ಬಸವಣ್ಣನವರು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಈ ಹಿಂದೆ ಫ್ರಾನ್ಸ್ ದೇಶವು ೧೮ನೇ ಶತಮಾನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಯಿಂದ ಇತಿಹಾಸ ಸೃಷ್ಟಿಸಿತು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಆದರೆ ನಮ್ಮ ಬಸವಣ್ಣನವರ ಶರಣ ಸಂಸ್ಕೃತಿ ವೈಚಾರಿಕ ಕ್ರಾಂತಿಯು ೧೨ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆ ಸೇರಿದಂತೆ ಹಲವು ಅದ್ಭುತ ಚಿಂತನೆಗೆ ಮುನ್ನುಡಿ ಬರೆದು ಐತಿಹಾಸಿಕ ಮಹಾಕ್ರಾಂತಿಗೆ ಸಾಕ್ಷಿಯಾಗಿದ್ದಾರೆ. ಅದಕ್ಕಾಗಿ ಬಸವಣ್ಣನವರ ವಿಚಾರಗಳಿಗೆ ಸಂವಿಧಾನದ ಮೂಲಕ ರಾಜಾಶ್ರಯ ದೊರಕಿದೆ. ಅಂತರ್ಜಾತಿ ವಿವಾಹ, ವಿಧವಾ ವಿವಾಹ ಮತ್ತು ದೇವದಾಸಿಯರ ವಿವಾಹಗಳಿಂದ ಕೂಡಿದ ಮಹಿಳಾ ವಿಮೋಚನಾ ಚಳವಳಿ, ಅಸ್ಪಶ್ಯತಾ ನಿವಾರಣಾ ಚಳವಳಿ, ಅಂಧತ್ವದ ವಿರುದ್ಧ ಹೋರಾಟ, ಜಾತೀಯತೆ ವಿರುದ್ಧ ಚಳವಳಿ, ಲಿಂಗಭೇದದ ವಿರುದ್ಧ ಚಳವಳಿ, ವಿವಿಧ ಕಾಯಕಜೀವಿಗಳ ಚಳವಳಿ, ವಯಸ್ಕರ ಶಿಕ್ಷಣವೂ ಸೇರಿದಂತೆ ಶೈಕ್ಷಣಿಕ ಚಳವಳಿ ಹೀಗೆ ನವಸಮಾಜಕ್ಕಾಗಿ ತುಡಿಯುವ ಎಲ್ಲ ಚಳವಳಿಗಳನ್ನೂ ವಚನಕಾರರು ಮಾಡಿದ್ದಾರೆ. ಒಟ್ಟಾರೆ ಮಾನವೀಯತೆಯ ಕಲ್ಯಾಣಕ್ಕಾಗಿ ಹಾಗೂ ಸುಭದ್ರ ಸಮೃದ್ಧಿ ಆಡಳಿತಕ್ಕಾಗಿ ತಮ್ಮ ಇಡೀ ಬದುಕನ್ನು ತ್ಯಾಗ ಮಾಡಿದ ಬಸವಣ್ಣನವರು ಬಡವರ, ನೊಂದವರ, ಅನಾಥರ, ಹಿಂದುಳಿದವರ, ದಲಿತರ, ಕಾಯಕಜೀವಿಗಳ ಚೈತನ್ಯಸ್ಫೂರ್ತಿಯಾಗಿದ್ದಾರೆ.