ಬಿಳಿಯಾನೆಗಳಾಗಿರುವ ಬಿಬಿಎಂಪಿ ಮತ್ತು ಬಿಡಿಎ ಮಾರುಕಟ್ಟೆ ವಿಭಾಗ

Update: 2023-07-19 05:12 GMT

ಮಾನ್ಯರೇ,

ಬೆಂಗಳೂರು ನಗರದಲ್ಲಿ ಬಿಬಿಎಂಪಿ ಮತ್ತು ಬಿಡಿಎ ವತಿಯಿಂದ ಹಲವಾರು ದಶಕಗಳಿಂದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡು ಬಂದಿರುತ್ತಾರೆ. ಇವುಗಳಲ್ಲಿ ಕೆಲವೇ ಕೆಲವು ವಾಣಿಜ್ಯ ಮಳಿಗೆಗಳು ಮಾತ್ರ ಉಪಯುಕ್ತವಾಗಿದ್ದು, ಅದರಿಂದ ಆದಾಯ ಬರುತ್ತಿವೆ. ಉಳಿದಂತೆ ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ಬಹಳಷ್ಟು ವಾಣಿಜ್ಯ ಮಳಿಗೆಗಳು ಪಾಳುಬಿದ್ದು ಹೇಳುವವರಿಲ್ಲದೆ ಕೇಳುವವರಿಲ್ಲದೆ ಭಿಕ್ಷುಕರ ತಾಣವಾಗಿದೆ. ಈ ವಾಣಿಜ್ಯ ಮಳಿಗೆಗಳ ನಿರ್ವಹಣೆ ತೀರಾ ಕಳಪೆಮಟ್ಟದಾಗಿದೆ. ಶೌಚಾಲಯಗಳಿಲ್ಲ, ನೀರಿನ ಸಂಪರ್ಕವಿಲ್ಲ, ಭದ್ರತೆ ಇಲ್ಲ, ಹಲವಾರು ಮಳಿಗೆಗಳಲ್ಲಿ ಬಾಡಿಗೆಗೆ ಬರುವವರಿಲ್ಲ ಮತ್ತು ಕೆಲವು ಮಳಿಗೆಗಳು ಲಕ್ಷಾಂತರ ರೂ. ಬಾಡಿಗೆಯನ್ನು ಬಾಕಿ ಉಳಿಸಿಕೊಂಡು ಬಾಗಿಲು ಹಾಕಿಕೊಂಡಿವೆ. ಬಾರದಿರುವ ಬಾಡಿಗೆಗಳ ವಸೂಲಿಗಾಗಿ ಅಧಿಕಾರಿಗಳು ಕಾಯುತ್ತಲೇ ಅಂಗಡಿಗಳನ್ನು ಹಲವಾರು ವರ್ಷಗಳಿಂದ ಮುಚ್ಚಿಕೊಂಡು ಅವುಗಳ ಮೇಲೆ ಒಂದೊಂದು ನೋಟಿಸ್‌ಗಳನ್ನು ಅಂಟಿಸಿಕೊಂಡು ತಮ್ಮ ಕರ್ತವ್ಯಗಳನ್ನು ಅಷ್ಟಕ್ಕೇ ಸೀಮಿತಗೊಳಿಸಿಕೊಂಡಿದ್ದಾರೆ.

ಬಹಳಷ್ಟು ಮಳಿಗೆಗಳಲ್ಲಿ ಇರುವವರು ಬಾಡಿಗೆಯನ್ನೇ ಕಟ್ಟಿರುವುದಿಲ್ಲ. ಉಪಗುತ್ತಿಗೆ ಹೇರಳವಾಗಿ ನಡೆದಿದೆ. ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಬಿಟ್ಟರೆ ಬಹಳಷ್ಟು ಬಿಬಿಎಂಪಿ ವಾಣಿಜ್ಯ ಮಳಿಗೆಗಳು ನಿರುಪಯುಕ್ತವಾಗಿವೆ. ಬೆಂಗಳೂರು ಸಿಟಿ ಮಾರುಕಟ್ಟೆ ಕಟ್ಟಡ ಮಾತ್ರ ಬಿಬಿಎಂಪಿಯ ಮಾರುಕಟ್ಟೆ ವಿಭಾಗದ ದೊಡ್ಡ ಆದಾಯದ ಮೂಲವಾಗಿದೆ. ಈ ವಿಭಾಗಕ್ಕೆ ಒಬ್ಬರು ಉಪ ಆಯುಕ್ತರು, ಸಹಾಯಕ ಆಯುಕ್ತರು, ಒಬ್ಬ ಸಿಬ್ಬಂದಿ ಮತ್ತು ಕಾನೂನು ಅಧಿಕಾರಿಗಳು ಇರುವುದರಿಂದ, ಈ ವಿಭಾಗದಿಂದ ಬರುವ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುತ್ತದೆ.

ಇದೇ ಪರಿಸ್ಥಿತಿ ಬಿಡಿಎದ್ದಾಗಿದೆ. ಇಂದಿರಾನಗರ, ವಿಜಯನಗರ ಮತ್ತು ಬನಶಂಕರಿಯ ಮಳಿಗೆಗಳನ್ನು ಬಿಟ್ಟರೆ ಬೇರೆ ಕಡೆ ಇದೂ ಸಹ ಪಾಳುಬಿದ್ದ ಕೊಂಪೆಯಾಗಿದೆ. ನಿರ್ವಹಣೆ ತೀರ ಕಳಪೆ ಮಟ್ಟದ್ದಾಗಿದೆ. ಈ ಪರಿಸ್ಥಿತಿಯೇ ಬಿಎಂಟಿಸಿ ಬಸ್ ನಿಲ್ದಾಣ ವಾಣಿಜ್ಯ ಮಳಿಗೆಗಳದ್ದು ಆಗಿದೆ. ಹಲವಾರು ಕೋಟಿ ರೂ.ಗಳನ್ನು ಹಾಕಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆದಾರರಿಲ್ಲದೆ ಬಾಗಿಲು ಹಾಕಿಕೊಂಡು ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಪಾವತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರದ ಉಸ್ತುವಾರಿ ಮತ್ತು ಅಭಿವೃದ್ಧಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್‌ರವರು ಗಮನವನ್ನು ಹರಿಸಿ ಅಗತ್ಯವಿರುವ ಕಡೆಯಲ್ಲಿ ರಿಪೇರಿ ಮಾಡಿಸಿ, ಸಾಧ್ಯವಿರುವ ಕಡೆಯಲ್ಲಿ ಖಾಸಗಿ ಕಂಪೆನಿಗಳ ಸಹಕಾರದಿಂದ ನೂತನವಾದ ಮಳಿಗೆಗಳನ್ನು ನಿರ್ಮಿಸಿ ಬಿಬಿಎಂಪಿ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. 

-ಕೆ.ಎಸ್. ನಾಗರಾಜ್,

ಹನುಮಂತನಗರ, ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News