ವಿಶಾಲ ಮೈಸೂರು ರಾಜ್ಯ ಸ್ಥಾಪನೆಯ ಹಿಂದೆ..

ಮೈಸೂರು ಸಂಸ್ಥಾನ ಪ್ರದೇಶಗಳು ಹೆಚ್ಚಿಗೆ ಅಭಿವೃದ್ಧಿ ಹೊಂದಿದ್ದರಿಂದ ಮುಂಬೈ ಕರ್ನಾಟಕ ಮುಂತಾದ ಪ್ರದೇಶಗಳನ್ನು ಸೇರಿಸಿಕೊಳ್ಳಬಾರದು ಎಂದು ರಾಜ್ಯ ಏಕೀಕರಣಕ್ಕೆ ಆ ಭಾಗದ ಜನರು ವಿರೋಧಿಸುತ್ತಿದ್ದರು. ಏಕೀಕರಣದ ಮೂಲಕ ವಿಶಾಲ ಮೈಸೂರು ರಾಜ್ಯಕ್ಕಾಗಿ ಪ್ರಯತ್ನಿಸುತ್ತಿದ್ದ ಕೆಂಗಲ್ ಹನುಮಂತಯ್ಯನವರಿಗೆ ಆ ಭಾಗದ ಅವರ ಪಕ್ಷದವರೇ ಮುಳುವಾಗಿದ್ದರು. ಹನುಮಂತಯ್ಯನವರ ಮಹಾ ಕನಸಿನ ವಿಧಾನ ಸಭಾ ಕಟ್ಟಡ ನಿರ್ಮಾಣಕ್ಕೂ ಅವರ ವಿರೋಧವಿತ್ತು. ಆದರೆ ಹನುಮಂತಯ್ಯನವರ ಈ ಎರಡೂ ಪ್ರಯತ್ನಗಳಿಗೆ ಇಮಾಂ ಸಾಹೇಬರು ಬೆಂಬಲ ವ್ಯಕ್ತಪಡಿಸಿದ್ದು ಗಮನಾರ್ಹವಾಗಿದೆ.

Update: 2024-07-30 09:00 GMT

ಭಾಗ- 2

ಪ್ರಜಾ ಸರಕಾರ

ಮೈಸೂರು, ಬ್ರಿಟಿಷ್ ಭಾರತದ ಆಶ್ರಿತ ಸಂಸ್ಥಾನವಾಗಿತ್ತು. ಭಾರತ ಒಕ್ಕೂಟ ಸರಕಾರವನ್ನು ಸೇರುವುದು ಅಥವಾ ಬಿಡುವುದು ಆಶ್ರಿತ ಸಂಸ್ಥಾನಗಳ ನಿರ್ಧಾರಕ್ಕೆ ಬಿಟ್ಟುಕೊಟ್ಟಿದೆ ಎಂದು ಬ್ರಿಟಿಷರು ಪ್ರಕಟಿಸಿದರು. ಆದರೆ ದೇಶ ಸ್ವತಂತ್ರವಾದ ಬಳಿಕ ಮೈಸೂರು ಬೇಗನೆ ಭಾರತ ಒಕ್ಕೂಟ ಸೇರಿತು. ಕಾಂಗ್ರೆಸ್ ನಾಯಕ ಕೆ. ಚಂಗಲರಾರೆಡ್ಡಿ ಅವರು ಜನವರಿ 1950ರಿಂದ ಮಾರ್ಚ್ 1952ರ ವರೆಗೆ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದರು. ಮೈಸೂರು ಸಂಸ್ಥಾನದ 36 ಕೋಟಿ ರೂಪಾಯಿ ನಿಧಿಯನ್ನು ಅವರಿಗೆ ಹಸ್ತಾಂತರಿಸಲಾಯಿತು.

ಪ್ರಜಾ ಸರಕಾರ ಬಂದರೂ 1945ರಲ್ಲಿ ರಚಿತವಾದ ನ್ಯಾಯವಿಧಾಯಕ ಹಾಗೂ 1881ರಲ್ಲಿ ಸ್ಥಾಪಿತವಾದ ಪ್ರಜಾಪ್ರತಿನಿಧಿ ಸಭೆಗಳು ಮುಂದುವರಿದವು. ಕಾಂಗ್ರೆಸ್ ಸದಸ್ಯರು ಮತ್ತು ಸರಕಾರಿ ಸದಸ್ಯರು ಸರಕಾರಕ್ಕೆ ಬೆಂಬಲ ಕೊಡುತ್ತಿದ್ದುದರಿಂದ ಸಹಜವಾಗಿ ಅವರದೇ ಬಹುಮತವಿದ್ದಿತು. ಆದರೆ ವ್ಯವಸ್ಥಿತವಾದ ವಿರೋಧ ಪಕ್ಷ ಇರಲಿಲ್ಲ. ಈ ಪರಿಸ್ಥಿತಿಯನ್ನು ನೋಡಿ ಡಿ.ಎಸ್. ಮಲ್ಲಪ್ಪ, ಒ. ವೀರಭದ್ರಪ್ಪ, ಎಂ.ಸಿ. ಲಿಂಗೇಗೌಡರು, ಇಮಾಂ ಸಾಹೇಬರು ಮುಂತಾದವರು ಸೇರಿ ವಿರೋಧ ಪಕ್ಷ ಸ್ಥಾಪಿಸಿದರು. ಇಮಾಂ ಸಾಹೇಬರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಯಿತು. ಸರಕಾರದ ನೀತಿ ಮತ್ತು ಆಡಳಿತ ಕ್ರಮವನ್ನು ವಿರೋಧ ಪಕ್ಷದವರು ರಚನಾತ್ಮಕವಾಗಿ ಟೀಕಿಸುತ್ತಿದ್ದರು. ಕಾಂಗ್ರೆಸ್ ಸರಕಾರ ನ್ಯಾಯವಿಧಾಯಕ ಸಭೆ ಮತ್ತು ಪ್ರಜಾಪ್ರತಿನಿಧಿ ಸಭೆಯನ್ನು ವಿಸರ್ಜಿಸಿತು. 1951ನೇ ನವೆಂಬರ್ ತಿಂಗಳಲ್ಲಿ ಆಚಾರ್ಯ ಕೃಪಲಾನಿಯವರು ಬಂದು ತಾವು ಸ್ಥಾಪಿಸಿದ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯಲ್ಲಿ ಸೇರಲು ವಿರೋಧ ಪಕ್ಷದ ಸದಸ್ಯರಿಗೆ ಸಲಹೆ ಮಾಡಿದರು. ಎಲ್ಲರೂ ಕೆ.ಎಂ.ಪಿ. ಪಾರ್ಟಿ ಸೇರಿದರು.

ಮೊದಲ ವಿಧಾನ ಸಭಾ ಚುನಾವಣೆ

ನಂತರ 1952ರಲ್ಲಿ ವಿಧಾನಸಭೆಗೆ ಮೊದಲ ಚುನಾವಣೆ ನಡೆದು ಮಾರ್ಚ್ 1952ರಿಂದ ಆಗಸ್ಟ್ 1956ರ ವರೆಗೆ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಗಳಾದರು. ಇಮಾಂ ಸಾಹೇಬರು 1952ರ ಚುನಾವಣೆಯಲ್ಲಿ ಆಚಾರ್ಯ ಕೃಪಲಾನಿಯವರ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯಿಂದ ವಿಧಾನ ಸಭೆಗೆ ಚುನಾಯಿತರಾದರು. ಪ್ರಜಾ ಸಮಾಜವಾದಿ ಪಾರ್ಟಿಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯ 12 ಜನ ಸದಸ್ಯರು ಸೇರಿದ್ದರಿಂದ ಅದುವೇ ಅಧಿಕೃತ ವಿರೋಧ ಪಕ್ಷವಾಯಿತು. ಇಮಾಂ ಸಾಹೇಬರು ವಿರೋಧ ಪಕ್ಷದ ನಾಯಕರಾದರು. ಎಲ್. ಸಿದ್ಧಪ್ಪ, ಹುಚ್ಚೇಗೌಡರು, ಎಸ್. ಶ್ರೀನಿವಾಸ ಅಯ್ಯಂಗಾರ್, ಮುಲ್ಕಾ ಗೋವಿಂದರೆಡ್ಡಿ, ರಾಜಶೇಖರ ಮೂರ್ತಿ, ಬಿ. ರಾಚಯ್ಯ, ನಾಗರಾಜಮೂರ್ತಿ, ಚಿಕ್ಕಲಿಂಗಯ್ಯ, ಆಂಜನೇಯ ರೆಡ್ಡಿ, ಮಾದಪ್ಪ, ಗೋಪಾಲಗೌಡರು ಕೂಡ ಪಿ.ಎಸ್.ಪಿ.ಯಲ್ಲಿದ್ದರು. ಆದರೆ ಕೆಲ ದಿನಗಳ ನಂತರ ರಾಜಶೇಖರ ಮೂರ್ತಿ ಮತ್ತು ಬಿ. ರಾಚಯ್ಯ ಅವರು ಕಾಂಗ್ರೆಸ್ ಪಕ್ಷ ಸೇರಿದರು. ಅಧಿಕಾರ ಮೋಹದ ಈ ಘಟನೆ ಇಮಾಂ ಸಾಹೇಬರಿಗೆ ಬೇಸರವನ್ನುಂಟು ಮಾಡಿತು. ಆದರೆ ಕೋಲಾರದ ಪಟ್ಟಾಭಿರಾಮನ್ ಅವರು 1952ಕ್ಕೆ ಮೊದಲೇ ಕಾಂಗ್ರೆಸ್‌ನ ಅಧಿಕಾರ ಮೋಹದಿಂದ ಬೇಸರಗೊಂಡು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದರು. ಐದೂ ವರ್ಷ ಸದನದ ಕಾರ್ಯಕಲಾಪಗಳಲ್ಲಿ ಮುಖ್ಯ ಪಾತ್ರ ವಹಿಸಿ ಸದನದ ಗೌರವ ಹೆಚ್ಚಿಸಿದರು ಎಂದು ಇಮಾಂ ಸಾಹೇಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯ ಪುನರ್ ವಿಂಗಡಣೆಯ ಕಸರತ್ತು

1953ರಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಜೊತೆ ಮುಂಬೈ ಕರ್ನಾಟಕದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಏಕೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸರಕಾರದ ವಿಧಾಯಕ ಕಾರ್ಯಗಳಲ್ಲಿ ವಿರೋಧ ಪಕ್ಷದ ನಾಯಕರು ಹೇಗೆ ಸಹಕರಿಸಬೇಕು ಎಂಬುದನ್ನು ತೋರಿಸಿಕೊಟ್ಟರು.

ಭಾಷೆ ಆಧಾರದ ಮೇಲೆ ರಾಜ್ಯಗಳ ರಚನೆಯಾಗಬೇಕೆಂಬ ಬೇಡಿಕೆ ತೀವ್ರವಾಯಿತು. ಕರ್ನಾಟಕದ ಕೆಲಭಾಗಗಳು ಮುಂಬೈ ಕರ್ನಾಟಕವಲ್ಲದೆ ಹೈದರಾಬಾದ್ ಸಂಸ್ಥಾನ, ದಕ್ಷಿಣ ಕನ್ನಡ ಮತ್ತು ಕೊಳ್ಳೆಗಾಲ ಪ್ರದೇಶಗಳು ಮದ್ರಾಸ್ ಪ್ರಾಂತದಲ್ಲಿ ಸೇರಿಕೊಂಡಿದ್ದವು.

ಆಂಧ್ರಪ್ರದೇಶದವರು ತೆಲುಗು ಭಾಷಾ ಆಧಾರದ ಮೇಲೆ ರಾಜ್ಯ ಸ್ಥಾಪನೆಯಾಗಬೇಕೆಂದು ಹೋರಾಡುತ್ತಿದ್ದರು. ಅಂದಿನ ಮದ್ರಾಸ್ ಪ್ರಾಂತದಿಂದ ತೆಲುಗು ಭಾಷಾ ಪ್ರದೇಶಗಳನ್ನು ಪ್ರತ್ಯೇಕಗೊಳಿಸಲು ಒತ್ತಾಯಿಸಿ ಪೊಟ್ಟಿ ಶ್ರೀರಾಮುಲು ಅವರು ಆಮರಣ ಉಪವಾಸ ಕೈಗೊಂಡು 1952ನೇ ಡಿಸೆಂಬರ್ 15ರಂದು ಹುತಾತ್ಮರಾದರು. ಎಲ್ಲೆಡೆ ದಂಗೆಗಳು ಶುರುವಾದವು. ಶ್ರೀರಾಮುಲು ಹುತಾತ್ಮರಾದ ಮೂರೇ ದಿನಗಳಲ್ಲಿ ಪ್ರಧಾನಿ ನೆಹರೂ ಅವರು ಆಂಧ್ರ ರಾಜ್ಯದ ಸ್ಥಾಪನೆ ಘೋಷಿಸಿದರು. ಬಳ್ಳಾರಿ ನಗರ, ರೂಪನಗುಡಿ, ಮೋಕ ಮತ್ತು ಫಿಕಾಗಳು ಆಂಧ್ರಕ್ಕೆ ಸೇರಬೇಕೆಂದು ಆಂಧ್ರದವರು ಪ್ರತಿಭಟಿಸಿದರು.

1953ನೇ ಜುಲೈ ತಿಂಗಳಲ್ಲಿ ಆಂಧ್ರಪ್ರದೇಶ ನಿರ್ಮಾಣದ ಮಸೂದೆ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿತು. ಕೇಂದ್ರ ಸಲಹೆಯನ್ನು ಮನ್ನಿಸಿ ಆದವಾನಿ, ಆಲೂರು ಮತ್ತು ರಾಯದುರ್ಗಗಳನ್ನು ಬಿಟ್ಟು ಉಳಿದ ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲು ನಿರ್ಧರಿಸಲಾಯಿತು.

ಬಳ್ಳಾರಿ ದುರಂತ:

ಹುತಾತ್ಮ ರಂಜಾನಸಾಬ್

ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರಿದ್ದರಿಂದ ಬಳ್ಳಾರಿ ಕನ್ನಡಿಗರು ಉತ್ಸಾಹದಿಂದ 1953ನೇ ಅಕ್ಟೋಬರ್ 1ರಂದು ಸಮಾರಂಭವನ್ನು ಏರ್ಪಡಿಸಿದರು. ಅಲ್ಲಿನ ಹಲವಾರು ತೆಲುಗು ಭಾಷಿಕರು ಈ ಸಮಾರಂಭಕ್ಕೆ ವಿರೋಧ ವ್ಯಕ್ತಪಡಿಸಿದರು. ಸಮಾರಂಭದ ಪೆಂಡಾಲ್‌ಗೆ ಹಾನಿಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಹಿಂದಿನ ರಾತ್ರಿ ಬಳ್ಳಾರಿ ನಗರದ ಪಿಂಜಾರ ಓಣಿಯ ಕನ್ನಡ ಹೋರಾಟಗಾರ ರಂಜಾನಸಾಬ್ ನದಾಫ್ ಎಂಬ ಯುವ ಪೈಲ್ವಾನ್ ಪೆಂಡಾಲ್ ಕಾಯುವ ಜವಾಬ್ದಾರಿಯನ್ನು ಹೊತ್ತು ಅಲ್ಲೇ ಉಳಿದ. ಬೆಳಗ್ಗಿನ ಸಮಾರಂಭದಕ್ಕೆ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ವಿರೋಧ ಪಕ್ಷದ ನಾಯಕ ಜಗಳೂರು ಇಮಾಂ ಸಾಹೇಬರು ಅತಿಥಿಗಳಾಗಿ ಬರುವವರಿದ್ದರು. ಆದರೆ ರಾತ್ರಿ ದುಷ್ಕರ್ಮಿಗಳು ಪೆಂಡಾಲ್‌ಗೆ ಬೆಂಕಿ ಹಚ್ಚಿ ರಂಜಾನಸಾಬ್ ಮೇಲೆ ಆ್ಯಸಿಡ್ ದಾಳಿ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮನಾದ ಏಕೈಕ ವ್ಯಕ್ತಿ ರಂಜಾನಸಾಬ್ ನದಾಫ್.

ಮರುದಿನ ಬೆಳಗ್ಗೆ ಹನುಮಂತಯ್ಯ ಮತ್ತು ಇಮಾಂ ಸಾಹೇಬರು ಸಮಾರಂಭಕ್ಕೆ ಹೋದರು. ‘‘ಇಮಾಂರವರು ಬಳ್ಳಾರಿಯ ಕನ್ನಡಿಗರನ್ನು ತಮ್ಮ ಭಾಷಣದಿಂದ ಆಕರ್ಷಿಸಿ ಯೋಗ್ಯವಾಗಿ ಸಂಘಟಿಸಿದ್ದರೂ ಬಳ್ಳಾರಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮತ್ತು ಸಣ್ಣ ಘರ್ಷಣೆಯೊಂದಿಗೆ ನಮಗೂ ಮಾನಸಿಕ ಮತ್ತು ದೈಹಿಕವಾಗಿ ಸ್ವಲ್ಪ ಪೆಟ್ಟುಂಟಾಯಿತು. ನಮ್ಮ ಮೆರವಣಿಗೆ ಚಪ್ಪರಕ್ಕೆ ವಾಪಸಾದಾಗ ಕನ್ನಡಿಗರ ಪರವಾಗಿ ಆಂಧ್ರದವರೊಂದಿಗೆ ಹೋರಾಡಿ ಹುತಾತ್ಮನಾದ ಮುಸ್ಲಿಮ್ ಬಾಂಧವನ ಬಲಿದಾನವನ್ನು ನೋಡಬೇಕಾಯಿತು’’ ಎಂದು ಕೆಂಗಲ್ ಹನುಮಂತಯ್ಯ ಅವರು ದುಃಖ ವ್ಯಕ್ತಪಡಿಸಿದ್ದಾರೆ.

ವಿವಿಧ ರಾಜ್ಯಗಳ ಬೇಡಿಕೆ ಬಗ್ಗೆ ವರದಿ ಒಪ್ಪಿಸುವುದಕ್ಕಾಗಿ 1953ರಲ್ಲಿ ಫಝಲ್ ಅಲಿ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಎರಡು ವರ್ಷಗಳ ಅಧ್ಯಯನದ ನಂತರ 1955ರಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಫಝಲ್ ಅಲಿ, ಕೆ.ಎಂ. ಪಣಿಕ್ಕರ್ ಮತ್ತು ಎಚ್.ಎನ್. ಕುಂಜ್ರು ಅವರನ್ನೊಳಗೊಂಡ ಆಯೋಗ ತನ್ನ ವರದಿ ಸಲ್ಲಿಸಿತು. 1956ನೇ ನವೆಂಬರ್ 1ರಂದು ಕೆಲ ಮಾರ್ಪಾಡುಗಳೊಂದಿಗೆ ಜಾರಿಗೊಳಿಸಲಾಯಿತು.

ಮೈಸೂರು ಸಂಸ್ಥಾನ ಪ್ರದೇಶಗಳು ಹೆಚ್ಚಿಗೆ ಅಭಿವೃದ್ಧಿ ಹೊಂದಿದ್ದರಿಂದ ಮುಂಬೈ ಕರ್ನಾಟಕ ಮುಂತಾದ ಪ್ರದೇಶಗಳನ್ನು ಸೇರಿಸಿಕೊಳ್ಳಬಾರದು ಎಂದು ರಾಜ್ಯ ಏಕೀಕರಣಕ್ಕೆ ಆ ಭಾಗದ ಜನರು ವಿರೋಧಿಸುತ್ತಿದ್ದರು. ಏಕೀಕರಣದ ಮೂಲಕ ವಿಶಾಲ ಮೈಸೂರು ರಾಜ್ಯಕ್ಕಾಗಿ ಪ್ರಯತ್ನಿಸುತ್ತಿದ್ದ ಕೆಂಗಲ್ ಹನುಮಂತಯ್ಯನವರಿಗೆ ಆ ಭಾಗದ ಅವರ ಪಕ್ಷದವರೇ ಮುಳುವಾಗಿದ್ದರು. ಹನುಮಂತಯ್ಯನವರ ಮಹಾ ಕನಸಿನ ವಿಧಾನ ಸಭಾ ಕಟ್ಟಡ ನಿರ್ಮಾಣಕ್ಕೂ ಅವರ ವಿರೋಧವಿತ್ತು. ಆದರೆ ಹನುಮಂತಯ್ಯ ನವರ ಈ ಎರಡೂ ಪ್ರಯತ್ನಗಳಿಗೆ ಇಮಾಂ ಸಾಹೇಬರು ಬೆಂಬಲ ವ್ಯಕ್ತಪಡಿಸಿದ್ದು ಗಮನಾರ್ಹವಾಗಿದೆ.

ಏಕೀಕರಣಕ್ಕಾಗಿ ದೃಢ ಪ್ರತಿಜ್ಞೆ

‘‘ಅಖಿಲ ಕರ್ನಾಟಕ ನಿರ್ಮಿಸಲು ಸರಕಾರದ ಪಕ್ಷವೂ ವಿರೋಧ ಪಕ್ಷವೂ ಏಕ ಅಭಿಪ್ರಾಯವುಳ್ಳವರಾಗಿ ಏಕೀಕರಣ ಕಾಲ ಬಂದಿದೆ. ವಿರೋಧ ಪಕ್ಷದ ನಾಯಕರಾದ ಶ್ರೀ ಜೆ.ಎಂ. ಇಮಾಂ ಅವರು ಇಲ್ಲಿಗೆ ನನ್ನ ಜೊತೆಯಲ್ಲಿ ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ’’ ಎಂದು ಹನುಮಂತಯ್ಯನವರು ರಾಣೇಬೆನ್ನೂರಿನ ಸಭೆಯಲ್ಲಿ ಹೇಳಿದರು. ಗುಳೇದಗುಡ್ಡದಲ್ಲಿ ‘‘ನಾನು ಕರ್ನಾಟಕ ದಾಸ’’ ಎಂದರು. ಕರ್ನಾಟಕದ ‘‘ಪ್ರಜೆಗಳ ಸೇವೆಗೆ ನನ್ನ ಪ್ರಾಣವನ್ನು ಮುಡಿಪಾಗಿಟ್ಟಿದ್ದೇನೆ. ಕರ್ನಾಟಕ ಏಕೀಕರಣಕ್ಕೆ ಶ್ರಮಿಸುತ್ತೇನೆ’’ ಎಂದು ಬಿಜಾಪುರದಲ್ಲಿ ಹನುಮಂತಯ್ಯನವರು ಆಶ್ವಾಸನೆ ನೀಡಿದರು.

‘‘ಗದಗದಲ್ಲಿ ನಡೆದ ಒಂದು ಘಟನೆ ಉತ್ತರ ಕರ್ನಾಟಕದ ಜನತೆಯ ಕಷ್ಟಗಳ ನೋವನ್ನು ನಮಗೆ ತೋರಿಸಿತು. ಅಲ್ಲಿಯ ಮಹನೀಯರು ದುಃಖದಿಂದ ತಮ್ಮ ಶೋಚನಿಯ ಸ್ಥಿತಿಯನ್ನು ತಿಳಿಸಿ, ನಮ್ಮನ್ನು ಮೈಸೂರಿಗೆ ಸೇರಿಸಿಕೊಳ್ಳಿ, ನಮ್ಮ ಘನತೆ ಗೌರವ ಕಾಪಾಡಿ, ಅಧಿಕಾರವೆಲ್ಲವೂ ಬೇಕಾದರೆ ನೀವೇ ಇಟ್ಟುಕೊಳ್ಳಿ, ನಮಗೆ ಯಾವ ಅಧಿಕಾರವೂ ಬೇಡ ಎಂದು ಹಂಬಲಿಸಿದರು. ಇದನ್ನು ನೋಡಿ ಇಮಾಂರವರು ತುಂಬಾ ಕಳವಳ ಹೊಂದಿದರು. ಏಕೀಕರಣಕ್ಕಾಗಿ ದೃಢ ಪ್ರತಿಜ್ಞೆ ಮಾಡಿದರು. ಆದರೆ ನಮ್ಮ ಈ ಏಕೀಕರಣ ಪ್ರಯತ್ನ ನಮ್ಮ ಮಂತ್ರಿ ಮಂಡಲದ ಸಹೋದ್ಯೋಗಿಗಳಲ್ಲಿ ಕೆಲವರಿಗೆ ಸರಿಬೀಳಲಿಲ್ಲ. ಉತ್ತರ ಕರ್ನಾಟಕದವರಿಗೆ ಅಧಿಕಾರ ಹಂಚಿಹೋಗುತ್ತದೆ. ಅವರ ಪ್ರಭಾವ ಮೈಸೂರಿನವರ ಮೇಲೆ ಹೆಚ್ಚಾಗುತ್ತದೆ. ಆ ಪ್ರಾಂತವನ್ನು ಅಭಿವೃದ್ಧಿಗೊಳಿಸಲು ಹೆಚ್ಚು ಹಣ ವ್ಯಯವಾಗುತ್ತದೆ. ಇದು ಮೈಸೂರಿನ ಪುರೋಭಿವೃದ್ಧಿ ಕುಂಠಿತಗೊಳ್ಳಲು ಕಾರಣ ಎಂದು ವಾದಿಸಿದರು. ಇದೇ ವಿಷಯವನ್ನು ಶೇಷಾದ್ರಿಯವರ ನಿಯೋಗವು ತಿಳಿಸಿದಾಗ ಇಮಾಂರವರು ಆ ನಿಯೋಗದ ತೀರ್ಪನ್ನು ಸಹ ವಿರೋಧಿಸಿ ಅಖಿಲ ಕರ್ನಾಟಕ ಏಕೀಕರಣವಾಗಲೇ ಬೇಕೆಂದು ಒಂದು ರೀತಿ ಹಠವನ್ನೇ ಹಿಡಿದರು. ಇದರಿಂದ ಮೈಸೂರಿಗೆ 260 ಮೈಲಿಗಳ ಸಮುದ್ರ ಪ್ರದೇಶ, ಭೂಸಂಪತ್ತು, ಅರಣ್ಯ, ಖನಿಜ ಸಂಪತ್ತುಗಳು ಬರುತ್ತವೆಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು ಮತ್ತು ಹಿಂದೆ ಅಗಲಿದ್ದ ಅಣ್ಣ ತಮ್ಮಂದಿರನ್ನು ಒಂದುಗೂಡಿಸಲು ಇಂದು ಇಷ್ಟಾದರೂ ತ್ಯಾಗ ಮಾಡಬೇಕೆಂದು ತಿಳಿಸಿದರು. ನಂತರ ಕೇಂದ್ರ ಸರಕಾರದವರು, ನನ್ನ ಸಹೋದ್ಯೋಗಿಗಳು ಈ ಏಕೀಕರಣಕ್ಕೆ ತಮ್ಮ ಒಪ್ಪಿಗೆಯನ್ನು ಕೊಟ್ಟರು’’ ಎಂದು ಕೆಂಗಲ್ ಹನುಮಂತಯ್ಯ ಅವರು ಮನದುಂಬಿ ಹೇಳಿದ್ದಾರೆ.

ಉಗ್ರ ಖಂಡನೆ

ಮುಂಬೈ ಕರ್ನಾಟಕದ ಪ್ರವಾಸ ಕೈಗೊಳ್ಳುವವರೆಗೂ ಹನುಮಂತಯ್ಯನವರಿಗೆ ಅವರ ಕಾಂಗ್ರೆಸ್ ಪಕ್ಷದಲ್ಲಿ ಬೆಂಬಲವಿತ್ತು. ಮಂತ್ರಿಮಂಡಲದಲ್ಲೂ ಒಗ್ಗಟ್ಟಿತ್ತು. ಆದರೆ ಮುಂಬೈ ಕರ್ನಾಟಕದಲ್ಲಿ ಅವರಿಗೆ ಸಿಕ್ಕ ಅದ್ಭುತ ಸ್ವಾಗತದಿಂದಾಗಿ ಮೈಸೂರಿನವರಿಗೆ ದುಗುಡ ಪ್ರಾರಂಭವಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಮತ್ತು ತಮ್ಮ ಹಿಂಬಾಲಕರ ಅನುಮತಿ ಪಡೆಯದೆ ಪ್ರವಾಸದ ವೇಳೆ ಏಕೀಕರಣದ ವಾಗ್ದಾನ ಮಾಡಿದ್ದರಿಂದ ಹನುಮಂತಯ್ಯನವರು ಉಗ್ರವಾದ ಖಂಡನೆಗೆ ಒಳಗಾಗಬೇಕಾಯಿತು. ಅವರ ಆಪ್ತರು ಕೂಡ ವಿರೋಧಿಗಳಾದರು. ಕಡಿದಾಳ ಮಂಜಪ್ಪರಂಥವರು ಕೂಡ ಬಹಿರಂಗವಾಗಿ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ ಅದನ್ನು ಮೈಸೂರಿನ ಮಟ್ಟಕ್ಕೆ ತರಬೇಕಾದರೆ ಅಪಾರ ಖರ್ಚು ಮಾಡಬೇಕಾಗುವುದು ಎಂಬ ಭಾವನೆ ಮೈಸೂರಿನವರದಾಗಿತ್ತು.

‘‘ಕರ್ನಾಟಕ ಏಕೀಕರಣವಾಗಬೇಕೆಂದು ನಾನು ವಾದಿಸುತ್ತಿದ್ದುದು ನನ್ನ ಅನೇಕ ಸ್ನೇಹಿತರಿಗೆ ಆಶ್ಚರ್ಯವನ್ನುಂಟು ಮಾಡುತ್ತಿತ್ತು. ಮೊದಮೊದಲು ಏಕೀಕರಣದಲ್ಲಿ ನನಗೆ ಉತ್ಸಾಹವಿರಲಿಲ್ಲ. ನನಗೆ ಮಹಾರಾಜರಲ್ಲಿ ಬಹಳ ಭಕ್ತಿ ಇತ್ತು ಮತ್ತು ಈಗಲೂ ಇದೆ. ಮಹಾರಾಜರ ಸ್ಥಾನಮಾನಗಳಿಗೆ ಚ್ಯುತಿ ಬರಬಹುದೆಂಬ ಶಂಕೆ ಇದ್ದಿತು. ಅಲ್ಲದೆ ಮೈಸೂರಿನ ವೈಶಿಷ್ಟ್ಯವು ಕಡಿಮೆಯಾಗದಂತೆ ಕಾಪಾಡಬೇಕೆಂಬ ಉದ್ದೇಶವೂ ಇತ್ತು. ಬೆಳಗಾವಿಗೆ ನಾನು ಆಗಾಗ ಭೇಟಿ ಕೊಡುತ್ತಿದ್ದೆನು. ಅಲ್ಲಿಯ ಸ್ಥಿತಿಗತಿ ಅವರ ಸ್ನೇಹಪರತೆ ನನ್ನ ಮನಸ್ಸಿನಲ್ಲಿ ಪರಿವರ್ತನೆ ಉಂಟುಮಾಡಿತು’’ ಎಂದು ಇಮಾಂ ಸಾಹೇಬರು ತಿಳಿಸಿದ್ದಾರೆ. ಅವರು ಎಲ್ಲಕ್ಕಿಂತ ಹೆಚ್ಚಾಗಿ ಭಾವಪೂರ್ಣ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಇಂಥ ಅನೇಕ ಪ್ರಸಂಗಗಳು ಸಾಕ್ಷಿಯಾಗಿವೆ.

ಕೇಂದ್ರ ಸರಕಾರ ಕೊನೆಗೂ ರಾಜ್ಯ ಪುನರ್ವಿಂಗಡಣಾ ಸಮಿತಿಯ ವರದಿಯನ್ನು ಪ್ರಕಟಿಸಿತು. ಹನುಮಂತಯ್ಯನವರು ಈ ಮಸೂದೆಯನ್ನು ವಿಧಾನಸಭೆಯ ಮುಂದೆ ಮಂಡಿಸಿ ಬಹಳ ಉತ್ಸಾಹದಿಂದ ಕರ್ನಾಟಕ ಏಕೀಕರಣಕ್ಕೆ ಬೆಂಬಲ ಕೊಟ್ಟರು. ವಿಶಾಲ ಮೈಸೂರು ರಾಜ್ಯ ಸ್ಥಾಪನೆಯಾದುದರ ಹಿನ್ನೆಲೆ ಇದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಂಜಾನ್ ದರ್ಗಾ

contributor

Similar News