ಮಂಡ್ಯದ ಬೆಸಗರಹಳ್ಳಿಯಲ್ಲಿ ಸಮಸ್ಯೆಗಳದ್ದೇ ಕಾರುಬಾರು

Update: 2024-01-15 07:14 GMT

ಮಂಡ್ಯ: ರಾಜ್ಯದ ಎರಡನೇ ದೊಡ್ಡ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆಯ ಬೆಸಗರಹಳ್ಳಿಯಲ್ಲಿ ಸಮಸ್ಯೆಗಳದೇ ಕಾರುಬಾರು. ಮದ್ದೂರು ತಾಲೂಕಿನ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನ ಬೆಸಗರಹಳ್ಳಿ ಗ್ರಾಮವು ಅವ್ಯವಸ್ಥೆಗಳ ಗೂಡಾಗಿದೆ. ಸ್ವಚ್ಛಗೊಳ್ಳದ ಚರಂಡಿಗಳು, ದುರಸ್ತಿ ಕಾಣದ ರಸ್ತೆ ಬೀದಿಗಳು, ರಾಶಿ ರಾಶಿ ಕಸದ ಗುಡ್ಡೆಗಳು ಕಣ್ಣಿಗೆ ರಾಚುತ್ತವೆ.

ಬೆಸಗರಹಳ್ಳಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಅಂಗಡಿ ಮುಂಗಟ್ಟುಗಳಿಂದ, ಸ್ವಂತ ವಾಣಿಜ್ಯ ಕಟ್ಟಡಗಳ ಸಂಕೀರ್ಣದಿಂದ ಸಾವಿರಾರು ರೂ. ತೆರಿಗೆ, ಬಾಡಿಗೆ ಗ್ರಾಮ ಪಂಚಾಯತ್‌ಗೆ ಸಂದಾಯವಾಗುತ್ತದೆ. ಆದರೆ, ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಪಂಚಾಯತ್ ಆಡಳಿತ ಕಿವುಡಾಗಿದೆ.

ಬ್ಯಾಂಕ್ ಕೆಲಸ, ಆಸ್ಪತ್ರೆ ಮತ್ತು ಸರಕು ಸರಾಂಜಾಮು ಖರೀದಿಗೆ ಪ್ರತಿದಿನ ನೂರಾರು ಜನರು ಅಕ್ಕಪಕ್ಕದ ಹಳ್ಳಿಗಳಿಂದ ಇಲ್ಲಿಗೆ ಬರುತ್ತಾರೆ. ಈ ಜನರಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವಿಲ್ಲ. ದಾಹ ತೀರಿಸಿಕೊಳ್ಳಲು ಹೊಟೇಲ್, ಬೇಕರಿಗೆ ಹೋಗಬೇಕು. ಗ್ರಾಮ ಪಂಚಾಯತ್‌ನಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಬೀಗ ಜಡಿದುಕೊಂಡು ಕುಳಿತಿದೆ.

ಪಾಳೇಗಾರರ ಆಳ್ವಿಕೆಯಲ್ಲಿದ್ದ ಬೆಸಗರಹಳ್ಳಿಗೆ ಸುತ್ತಲೂ ಕೋಟೆ ಇತ್ತಂತೆ. ಆದರೆ, ಇಂದು ಆ ಕುರುಹುಗಳು ಇಲ್ಲ. ಪಶ್ವಿಮಕ್ಕೆ ಮಂಡ್ಯ ರಸ್ತೆಯ ಪಕ್ಕದಲ್ಲಿ ದೊಡ್ಡ ಕೆರೆ ಇದೆ. ಗ್ರಾಮದ ಕೋಳಿ, ಮಾಂಸದಂಗಡಿಗಳ ತ್ಯಾಜ್ಯ, ಅಂಗಡಿ, ಹೊಟೇಲ್‌ಗಳ ಕಸವನ್ನು ಈ ಕೆರೆಯ ಪಕ್ಕದಲ್ಲಿ ಹಾಕಲಾಗುತ್ತಿದ್ದು, ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ.

ಒಟ್ಟಾರೆ, ಪ್ರಮುಖ ವಾಣಿಜ್ಯ ಕೇಂದ್ರವಾದ ಬೆಸಗರ ಹಳ್ಳಿಯ ಅವ್ಯವಸ್ಥೆಯನ್ನು ಸರಿಪಡಿಸುವತ್ತ ಈಗಲಾದರೂ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಆಡಳಿತ ಗಮನಹರಿ ಸಬೇಕಾಗಿದೆ. ಇನ್ನು ಗ್ರಾಮಕ್ಕೆ ಹಲವು ಬಾರಿ ಭೇಟಿ ನೀಡಿ ಸಮಸ್ಯೆ ಅರಿತಿರುವ ನೂತನ ಶಾಸಕ ಕೆ.ಎಂ.ಉದಯ ಅವರು ಸಮಸ್ಯೆ ಬಗೆಹರಿಸುವ ಕಾಳಜಿ ತೋರುತ್ತಾರೆ ಎಂಬ ನಿರೀಕ್ಷೆ ನಾಗರಿಕರದ್ದಾಗಿದೆ.

ಮನೆಗೆ ಹರಿಯುತ್ತಿದೆ ಚರಂಡಿ ನೀರು!: ಗ್ರಾಮದ ೩ನೇ ವಾರ್ಡ್‌ನ ಚರಂಡಿ ಸಮಸ್ಯೆಗೆ ಹಲವು ದಶಕಗಳಿಂದಲೂ ಮುಕ್ತಿಯೇ ಸಿಗುತ್ತಿಲ್ಲ. ಕೊಳಕಿನಿಂದ ತುಂಬಿ ತುಳುಕುತ್ತಿರುವ ಚರಂಡಿಯಲ್ಲಿ ಹುಳುಹುಪ್ಪಟೆಗಳು ಮಿತಿಗುಡುತ್ತಿವೆ. ಮನೆಗಳ ಶೌಚದ ಹೊಲಸು ಚರಂಡಿ ಸೇರುತ್ತಿದೆ. ಬೇಕರಿ, ಅಂಗಡಿ ತ್ಯಾಜ್ಯ ಚರಂಡಿ ಒಡಲು ತುಂಬಿದೆ. ಸುತ್ತಲೂ ಗಿಡಗಂಟಿಗಳು ಬೆಳೆದುನಿಂತಿವೆ. ಚರಂಡಿಯ ಕಲುಷಿತ ನೀರು ಪಕ್ಕದ ಮನೆಗಳಿಗೆ ಹರಿದು ಅವಾಂತರ ಸೃಷ್ಟಿಸುತ್ತಿದೆ. ಗ್ರಾಪಂ ಮಾಜಿ ಸದಸ್ಯ ರಹತ್‌ವುಲ್ಲಾ ಬೇಗ್ ಮನೆಗೇ ಕೊಳಕು ನೀರು ಹರಿಯುತ್ತಿದ್ದರೂ ಅವರೇ ನಿಸ್ಸಹಾಯಕರಾಗಿದ್ದಾರೆ. ‘ಚರಂಡಿ ಸ್ವಚ್ಛಗೊಳಿಸಿ ೧೫ ವರ್ಷವಾಯಿತು. ಹೋರಾಟ ಮಾಡಿದರೂ ಪಂಚಾಯತ್ ಆಡಳಿತ ಜಪ್ಪಯ್ಯ ಎನ್ನುತ್ತಿಲ್ಲ. ಇದೀಗ ಗ್ರಾಪಂಗೆ ಮುತ್ತಿಗೆ ಹಾಕುವ ಮೂಲಕ ಹೋರಾಟವನ್ನು ತೀವ್ರಗೊಳಿಸುವ ತೀರ್ಮಾನ ಮಾಡಿದ್ದೇವೆ’ ಎನ್ನುತ್ತಾರೆ ರಹತ್‌ವುಲ್ಲಾ ಬೇಗ್. ಸದ್ಯಕ್ಕಂತೂ ಈ ಚರಂಡಿ ಸಮಸ್ಯೆಗೆ ಮುಕ್ತಿ ಸಿಗುವ ಸಾಧ್ಯತೆ ಕಾಣುತ್ತಿಲ್ಲ ಎನ್ನುತ್ತಾರೆ ಪಕ್ಕದ ಕಟ್ಟಡದಲ್ಲಿರುವ ವ್ಯಾಪಾರಿ ಎಂ.ಆರ್.ಶ್ರೀಧರ್.

ಸಂಸದರ ಸುವರ್ಣ ಗ್ರಾಮ ನಿಧಿ ಏನಾಯಿತು?: ವಿಪರ್ಯಾಸವೆಂದರೆ, ಸಂಸದರ ಸುವರ್ಣ ಗ್ರಾಮ ನಿಧಿ ಯೋಜನೆಯಡಿ ಒಂದು ಕೋಟಿ ರೂ.ವೆಚ್ಚದಲ್ಲಿ ಬೆಸಗರಹಳ್ಳಿಯಲ್ಲಿ ಕೆಲಸಗಳನ್ನು ಮಾಡಲಾಗಿದೆ. ಆದರೆ, ಏನು ಕೆಲಸಗಳಾಗಿವೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಯೋಜನೆಯಡಿ ಗ್ರಾಮದ ಕೆಲವು ಬೀದಿಗಳಿಗೆ ಡಾಂಬರು ಬಳಿದಿದ್ದು, ಕೆಲವೇ ದಿನಗಳಲ್ಲಿ ಕಿತ್ತುಬಂದಿದೆ. ಇನ್ನು ಚರಂಡಿಗಳ ದುರಸ್ತಿಯಂತೂ ಆಗಿಯೇ ಇಲ್ಲ. ದಿವಂಗತ ಅಂಬರೀಷ್ ಅವರ ಸಂಸದರ ಅನುದಾನದಿಂದ ನಿರ್ಮಿಸಿರುವ ಸಮುದಾಯ ಭವನವೂ ಪೂರ್ಣಗೊಂಡಿಲ್ಲ. ಆದರೆ, ಒಂದು ಕೋಟಿ ರೂ. ಏನಾಯಿತು ಎಂಬುದು ಬಿಡಿಸಲಾಗದ ಒಗಟಾಗಿದೆ. ‘ಸಂಸದೆ ಸುಮಲತಾ ಅಂಬರೀಷ್ ಅವರೇ ನಾಲ್ಕಾರು ಬಾರಿ ಕಾಮಗಾರಿ ಪರಿಶೀಲನೆ ಮಾಡಿ ಹೋಗಿದ್ದು ಬಿಟ್ಟರೆ ಏನು ಕೆಲಸವಾಗಿದೆ ಎಂಬುದನ್ನು ಅವರೇ ಹೇಳಬೇಕು’ ಎನ್ನುತ್ತಾರೆ ಸಾರ್ವಜನಿಕರು.

ಸಾರಿಗೆ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಕಾರುಬಾರು

ಹಲವು ಅಡೆತಡೆ, ಪರವಿರೋಧದ ನಡುವೆಯೂ ಕೊನೆಗೆ ಗ್ರಾಮದ ಹೃದಯ ಭಾಗದಲ್ಲಿ ಸಾರಿಗೆ ಬಸ್ ನಿಲ್ದಾಣ ಆಗಿದೆ. ಆದರೆ, ನಿಲ್ದಾಣದ ಸುತ್ತ ರಕ್ಷಣಾಗೋಡೆ(ಕಾಂಪೌಂಡ್) ನಿರ್ಮಾಣ ಮಾಡದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಪರ್ಯಾಯ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಕಾರುಗಳು, ದ್ವಿಚಕ್ರ ವಾಹನ ಮಾಲಕರು ಸಾರಿಗೆ ನಿಲ್ದಾಣವನ್ನೇ ನಿಲ್ದಾಣವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಸಾರಿಗೆ ಬಸ್‌ಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗದೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೈಚೆಲ್ಲಿದ್ದಾರೆ. ಇನ್ನು ಪೊಲೀಸರಂತೂ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲವೆಂಬುದು ಪ್ರಯಾಣಿಕರ ಆರೋಪವಾಗಿದೆ.

ಆಸ್ಪತ್ರೆ ವ್ಯವಸ್ಥೆ ಸಮಾಧಾನಕರವಾಗಿದೆ: ಇನ್ನು ಗ್ರಾಮದಲ್ಲಿ ಸುಸಜ್ಜಿತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸಲಾಗಿದೆ. ಇರುವ ಓರ್ವ ಆಡಳಿತ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ತಮ್ಮ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಆರೋಗ್ಯ ಸೇವೆ ನೀಡುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡರ ಅನುದಾನದಿಂದ ಇತ್ತೀಚೆಗೆ ಆ್ಯಂಬುಲೆನ್ಸ್ ಬಂದಿರುವುದು ಅನುಕೂಲವಾಗಿದೆ. ಜಿಲ್ಲಾಡಳಿತ, ಶಾಸಕರು ಆಸ್ಪತ್ರೆಗೆ ಮತ್ತೊಬ್ಬ ವೈದ್ಯರು, ಅಗತ್ಯ ಸಿಬ್ಬಂದಿಯನ್ನು ಕಲ್ಪಿಸಲು ಮುಂದಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News