ಭಾರತದ ಶೈಕ್ಷಣಿಕ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ ಮೇಧಾವಿ ಭಾರತ ರತ್ನ ಮೌಲಾನಾ ಆಝಾದ್

ಆಝಾದರು ಸ್ಥಾಪಿಸಿದ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು ಇಂದಿಗೂ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವಹಿಸುತ್ತಿದೆ. ಓರ್ವ ಸಚಿವನ ನೀತಿ ನಿರ್ಧಾರಗಳು ಹಲವು ದಶಕಗಳ ಬಳಿಕವೂ ಉತ್ತಮ ಫಲವನ್ನು ನೀಡುತ್ತಿರುವುದನ್ನು ಕಾಣುವಾಗ ಆಝಾದರ ದೂರದೃಷ್ಟಿತ್ವ, ದೇಶವನ್ನು ಸದೃಢವಾಗಿ ಕಟ್ಟುವ ಅವರ ಅಚಲವಾದ ನಿಲುವುಗಳು ಎಷ್ಟು ಪರಿಣಾಮಕಾರಿಯಾಗಿದ್ದವು ಎಂಬುದನ್ನು ಅರ್ಥೈಸಬಹುದು.

Update: 2024-11-11 04:43 GMT

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಓರ್ವ ಮುಸ್ಲಿಮ್ ಸಮುದಾಯದ ಮೇಧಾವಿ ಎನ್ನುವುದು ಅಚ್ಚರಿ ಮತ್ತು ಕುತೂಹಲಕರ ಸಂಗತಿ. ಮುಸ್ಲಿಮ್ ಸಮುದಾಯ ಬಹುಪಾಲು ಆಧುನಿಕ ಶಿಕ್ಷಣಕ್ಕೆ ತಮ್ಮನ್ನು ತಾವು ತೆರೆದುಕೊಂಡದ್ದು ಇತ್ತೀಚಿನ ವರ್ಷಗಳಲ್ಲಿ. ಈ ಸಮುದಾಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಜಾಗೃತಿ ಇಂದಿಗೂ ನಡೆಯುತ್ತಲೇ ಇದೆ. ಉನ್ನತ ವಿದ್ಯಾಭ್ಯಾಸ ಪಡೆಯುವಂತೆ, ವಿಜ್ಞಾನ ತಂತ್ರಜ್ಞಾನಗಳ ಕಡೆಗೆ ಆಸಕ್ತಿ ವಹಿಸುವಂತೆ, ನಾಗರಿಕ ಸೇವಾ ಪರೀಕ್ಷೆಗಳ ಕಡೆಗೆ ಮುಖ ಮಾಡುವಂತೆ, ಐಐಟಿ, ಐಐಎಸ್ಸಿಗಳ ಬಗ್ಗೆ ಕುತೂಹಲ ಬೆಳೆಸುವಂತೆ ಸಮುದಾಯದ ವಿದ್ಯಾರ್ಥಿಗಳಿಗೆ ಬಲ್ಲವರು ಉತ್ತೇಜನ ನೀಡುತ್ತಲೇ ಇದ್ದಾರೆ. ದಕ್ಷಿಣ ಭಾರತದಲ್ಲಿ ಹೈದರಾಬಾದ್ ಮತ್ತು ತಿರುವಾಂಕೂರು ಪ್ರಾಂತಗಳನ್ನು ಹೊರತುಪಡಿಸಿದರೆ ಇತರ ಭಾಗಗಳಲ್ಲಿ ಮುಸ್ಲಿಮ್ ಸಮುದಾಯ ಆಧುನಿಕ ಶಿಕ್ಷಣದ ಕಡೆಗೆ ಒಲವು ತೋರಿದ್ದು ಬಹಳ ತಡವಾಗಿ ಎನ್ನಬಹುದು. ಆದರೂ ಉತ್ತರ ಭಾರತದಲ್ಲಿ ಮುಸ್ಲಿಮ್ ಸಮುದಾಯದ ಮುಂದಾಳುಗಳು ಸ್ವಾತಂತ್ರ್ಯಪೂರ್ವದಲ್ಲಿಯೇ ಶಾಲಾ-ಕಾಲೇಜಿನ ಶಿಕ್ಷಣ ಪಡೆಯುವಂತೆ ಜನರಲ್ಲಿ ನಿರಂತರ ಜಾಗೃತಿ ಮೂಡಿಸಿದ ಫಲವಾಗಿ ಬಹಳಷ್ಟು ವಿದ್ವಾಂಸರು, ಮೇಧಾವಿಗಳು ಆ ಭಾಗದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಸಮುದಾಯದ ಸಬಲೀಕರಣ ಈ ಎರಡೂ ಕೈಂಕರ್ಯದಲ್ಲಿ ಏಕಕಾಲದಲ್ಲಿ ತೊಡಗಿದರು ಎನ್ನುವುದು ಗಮನಾರ್ಹ ಸಂಗತಿ.

ಉತ್ತರ ಭಾರತದಲ್ಲಿ ಅಂದಿನ ವಿದ್ವಾಂಸರು ಉರ್ದು, ಅರಬಿಕ್, ಹಿಂದಿ, ಇಂಗ್ಲಿಷ್, ಪರ್ಷಿಯನ್‌ನಂತಹ ಬಹುಭಾಷೆಗಳ ಕಲಿಕೆಗೆ ಒತ್ತು ನೀಡಿದರು. ಇದರಿಂದ ಜನಸಾಮಾನ್ಯರನ್ನು ಹೊರತುಪಡಿಸಿ ಅಂದು ಆರ್ಥಿಕವಾಗಿ ಸಬಲರು, ಶೈಕ್ಷಣಿಕ ಕಳಕಳಿಯುಳ್ಳ ಪೋಷಕರು, ದೇಶದ ಸ್ವಾತಂತ್ರ್ಯದ ಚಳವಳಿಯನ್ನು ಬದುಕಿನ ಭಾಗವಾಗಿ ಕಂಡ ಮೌಲಾನಾಗಳು, ಸಮುದಾಯದ ಸಬಲೀಕರಣಕ್ಕೆ ಶಿಕ್ಷಣವೇ ಅಸ್ತ್ರ ಎಂದು ಮನಗಂಡ ವಿದ್ವಾಂಸರು ತಾವು ಮಾತ್ರವಲ್ಲದೆ ತಮ್ಮ ಮಕ್ಕಳು ಹಾಗೂ ಸಮುದಾಯದ ಇತರರಲ್ಲಿಯೂ ಆಧುನಿಕ ಶಿಕ್ಷಣದ ಒಲವನ್ನು ಬಿತ್ತಿದರು. ಈ ಕಾರಣದಿಂದಲೇ ಅಂದಿನ ಬಹುತೇಕ ಮೌಲಾನಾಗಳು ಧಾರ್ಮಿಕ ಶಿಕ್ಷಣ ಮಾತ್ರವಲ್ಲದೆ ಆಧುನಿಕ ಶಿಕ್ಷಣದಲ್ಲಿಯೂ ಪಾರಂಗತರಾಗಿದ್ದರು.

ತಮ್ಮ ಮಾತೃಭಾಷೆ ಉರ್ದು ಅಥವಾ ಪರ್ಶಿಯನ್ ಜೊತೆಗೆ ಅರಬಿಕ್ ಮತ್ತು ಇಂಗ್ಲಿಷ್ ಭಾಷೆಗಳ ಕಲಿಕೆಗೆ ಒತ್ತು ನೀಡಿದರು. ಅವರು ಸಂಸ್ಕೃತವನ್ನು ಕೂಡಾ ಪರಕೀಯ ಎನ್ನದೆ ಜ್ಞಾನ ಮತ್ತು ಅಧ್ಯಯನ ದೃಷ್ಟಿಯಿಂದ ಕಲಿತರು. ಇದರ ಫಲವೇ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಉತ್ತರ ಭಾರತದ ಮುಸ್ಲಿಮ್ ನಾಯಕರು ಅದರಲ್ಲೂ ಮೌಲಾನಾಗಳನ್ನು ಕಾಣಲು ಸಾಧ್ಯವಾಯಿತು. ಗಮನಿಸಬೇಕಾದ ಸಂಗತಿಯೆಂದರೆ ಈ ಮೇಧಾವಿ ಮುಸ್ಲಿಮ್ ನಾಯಕರು ಕೇವಲ ಸಮುದಾಯಕ್ಕೆ ನಾಯಕರಾಗಿರಲಿಲ್ಲ. ಬದಲಾಗಿ ಈ ದೇಶದ ಸರ್ವ ಜನಾಂಗಗಳ ನಾಯಕರಾಗಿ ಹೊರಹೊಮ್ಮಿದ್ದರು. ಇಂತಹ ನಾಯಕರ ಪೈಕಿ ಮೌಲಾನಾ ಅಬುಲ್ ಕಲಾಂ ಆಝಾದ್ ಓರ್ವರು.

ಮೌಲಾನಾ ಆಝಾದರ ಪರಿಚಯ:

ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹಮದ್ ಎಂಬ ಪೂರ್ಣ ಹೆಸರಿನ ಮೌಲಾನಾ ಆಝಾದ್ 1888 ನವೆಂಬರ್ 11 ನೇ ತಾರೀಖಿನಂದು ಸೌದಿ ಅರೇಬಿಯದ ಮಕ್ಕಾದಲ್ಲಿ ಜನಿಸಿದರು. ಇವರ ತಂದೆ ಖೈರುದ್ದೀನ್ ತಾಯಿ ಆಲಿಯಾ. ಮೂಲತಃ ದಿಲ್ಲಿಯ ನಿವಾಸಿಗಳಾಗಿದ್ದ ಆಝಾದರ ಹಿರಿಯರು ನಂತರ ಮುಂಬೈಗೆ ಬಂದು ನೆಲೆಸಿದರು. ಆಝಾದರ ತಂದೆ ಸೌದಿ ಅರೇಬಿಯಕ್ಕೆ ತೆರಳಿ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರು. ಅರಬಿಕ್ ಮತ್ತು ಇಸ್ಲಾಮ್ ಧರ್ಮದ ಆಳವಾದ ಜ್ಞಾನವನ್ನು ಪಡೆದ ಖೈರುದ್ದೀನ್ ಸುಶಿಕ್ಷಿತರಾಗಿದ್ದ ಆಲಿಯಾ ಅವರನ್ನು ವಿವಾಹವಾಗಿ ಮಕ್ಕಾ ಪಟ್ಟಣದಲ್ಲಿ ನೆಲೆಸಿದರು. ಈ ದಂಪತಿಗೆ ಎರಡು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಜನಿಸಿದರು. ಗಂಡು ಮಕ್ಕಳಲ್ಲಿ ಎರಡನೆಯವರಾದ ಅಬುಲ್ ಕಲಾಂ ಅವರಿಗೆ ತನ್ನ ವಿದ್ಯಾವಂತ ತಂದೆಯಿಂದಲೇ ಆರಂಭಿಕ ಶಿಕ್ಷಣ ದೊರಕಿತು. ಖೈರುದ್ದೀನ್ ಅವರು ತಮ್ಮ ಮನೆಯಲ್ಲಿಯೇ ಶಿಕ್ಷಕರನ್ನು ನೇಮಿಸಿ ತನ್ನ ಮಕ್ಕಳಿಗೆ ಬಹು ಆಯಾಮದ ಶಿಕ್ಷಣ ನೀಡಿದರು.

ಓದು ಬರಹದಲ್ಲಿ ಚುರುಕಾಗಿದ್ದ ಅಬುಲ್ ಕಲಾಂ ಗಣಿತ, ತತ್ವಶಾಸ್ತ್ರ, ಇತಿಹಾಸ, ವಿಜ್ಞಾನ ಅಲ್ಲದೆ, ಇಸ್ಲಾಮ್ ಧರ್ಮದ ನಾಲ್ಕು ಪರಂಪರಾಗತ ವರ್ಗಗಳ ಕರ್ಮ ಶಾಸ್ತ್ರ ಗಳನ್ನು ಬಹುಬೇಗ ಅಧ್ಯಯನ ಮಾಡಿದರು. ಸ್ವಯಂ ಅಧ್ಯಯನದಲ್ಲಿ ಸಮಯ ಕಳೆಯುತ್ತಿದ್ದ ಕಲಾಂ ತನ್ನ ಎಳೆಯ ಪ್ರಾಯದಲ್ಲೇ ಮನೆಯಲ್ಲಿಯೇ ಗ್ರಂಥಾಲಯವನ್ನು ಆರಂಭಿಸಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇವರ ಭವಿಷ್ಯದ ದಿಕ್ಕನ್ನು ಬಾಲ್ಯದಲ್ಲೇ ಕಾಣಬಹುದಿತ್ತು.

ಕಲಾಂ ಅವರು ಸುಮಾರು ಹತ್ತನೇ ವಯಸ್ಸಿನಲ್ಲಿದ್ದಾಗ ಅವರ ಕುಟುಂಬ ಭಾರತಕ್ಕೆ ಮರಳಿ ಬಂದಿತು. ಕೋಲ್ಕತಾದಲ್ಲಿ ನೆಲೆಸಿದ ಅಲ್ಪ ಸಮಯದಲ್ಲಿ ಖೈರುದ್ದೀನ್ ಅವರ ಕುಟುಂಬದ ಆಧಾರಸ್ತಂಭವಾಗಿದ್ದ ಇವರ ಪತ್ನಿ ಆಲಿಯಾ ಅವರು ಅನಾರೋಗ್ಯದಿಂದ ನಿಧನರಾದರು. ಕುಟುಂಬವು ಬಹುದೊಡ್ಡ ಆಘಾತವನ್ನು ಎದುರಿಸಿತು.

ಕಲಾಂ ಅವರಿಗೆ ಹದಿಮೂರು ವರ್ಷ ಪ್ರಾಯವಾಗಿದ್ದಾಗ ಅವರಿಗೆ ಝುಲೇಖಾ ಬೇಗಂ ಎಂಬ ಬಾಲಕಿಯೊಡನೆ ವಿವಾಹ ಮಾಡಲಾಯಿತು. ಅಂದು ಬಾಲ್ಯವಿವಾಹ ಸಾಮಾನ್ಯವಾಗಿತ್ತು.ಝುಲೇಖಾ ಬೇಗಂ ಅವರು ಉರ್ದು ಮತ್ತು ಪರ್ಶಿಯನ್ ಭಾಷೆಯಲ್ಲಿ ಹಿಡಿತವನ್ನು ಹೊಂದಿದ್ದರು. ಮದುವೆಯ ಬಳಿಕವೂ ಕಲಾಂ ಅವರು ಓದಿನಲ್ಲಿಯೇ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು.

ಪತ್ರಕರ್ತನಾಗಿ ಅಬುಲ್ ಕಲಾಂ:

ಓದು, ಬರಹ, ಭಾಷಣಗಳಲ್ಲಿ ಅಪಾರ ಆಸಕ್ತನಾಗಿದ್ದ ಕಲಾಂ ತನ್ನ ಸಣ್ಣ ಪ್ರಾಯದಲ್ಲೇ ‘ನಯರಂಗ್ ಎ ಆಲಂ’ ಎಂಬ ಪತ್ರಿಕೆಯನ್ನು ಆರಂಭಿಸಿದರು. ತನ್ನ ಹದಿನೈದನೇ ವಯಸ್ಸಿನಲ್ಲಿ ಪ್ರಬುದ್ಧ ಲೇಖನಗಳನ್ನು ಬರೆಯುತ್ತಿದ್ದರು. ಭಾರತೀಯ ಮುಸ್ಲಿಮರಲ್ಲಿ ಸಾಮಾಜಿಕ ಬದಲಾವಣೆ ತರುವುದು ಮತ್ತು ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸುವುದು ಕಲಾಂ ಅವರ ಲೇಖನ, ಪತ್ರಿಕೆ ಮತ್ತು ಭಾಷಣಗಳ ಉದ್ದೇಶವಾಗಿತ್ತು. ಇದಕ್ಕೆ ಪೂರಕವಾಗಿ ಕಲಾಂ ಅವರು ಅರಬಿಕ್, ಪರ್ಶಿಯನ್, ಉರ್ದು, ಇಂಗ್ಲಿಷ್, ಹಿಂದಿ ಭಾಷೆಗಳ ಜೊತೆಗೆ ವಿಜ್ಞಾನ, ವೇದಾಂತಗಳನ್ನು ಅಪಾರವಾಗಿ ಅಧ್ಯಯನ ಮಾಡಿದ್ದರು. 1912 ರಲ್ಲಿ ‘ಅಲ್ ಹಿಲಾಲ್’ ಎಂಬ ಪೂರ್ಣಪ್ರಮಾಣದ ಪತ್ರಿಕೆಯನ್ನು ಆರಂಭಿಸಿದರು. ಈ ಪತ್ರಿಕೆ ಬಹುಬೇಗನೆ ಜನಪ್ರಿಯವಾಯಿತು.

ಅತ್ಯಧಿಕ ಪ್ರಸರಣದ ಉರ್ದು ಪತ್ರಿಕೆಯಾದ ‘ಅಲ್ ಹಿಲಾಲ್’ ಬ್ರಿಟಿಷ್ ಆಡಳಿತದ ಕೆಂಗಣ್ಣಿಗೆ ಗುರಿಯಾಗಿ ಇದರ ಮುದ್ರಣಾಲಯವನ್ನು ಸರಕಾರ ವಶಪಡಿಸಿಕೊಂಡಿತು. ‘ಅಲ್ ಹಿಲಾಲ್’ ಪತ್ರಿಕೆ ಜವಾಹರಲಾಲ್ ನೆಹರೂ, ಝಾಕಿರ್ ಹುಸೇನ್ ಸೇರಿದಂತೆ ಅನೇಕ ವಿದ್ವಾಂಸರ ಪ್ರಶಂಸೆಗೆ ಒಳಗಾಗಿತ್ತು.

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ನಾಯಕ:

1920 ರಲ್ಲಿ ಆಝಾದರು ಗಾಂಧೀಜಿ ಯವರನ್ನು ಭೇಟಿಯಾದರು. ಅಸಹಕಾರ ಚಳವಳಿಯ ಯಶಸ್ಸಿಗೆ ಆಝಾದರು ಪಣತೊಟ್ಟು ಕಾರ್ಯನಿರ್ವಹಿಸಿದರು. ಇದರ ಪರಿಣಾಮವಾಗಿ ಬ್ರಿಟಿಷ್ ಸರಕಾರ ಇವರನ್ನು ಸೆರೆಮನೆಗೆ ತಳ್ಳಿತು. ಆದರೂ ಆಝಾದರು ಸೆರೆಮನೆಯಿಂದಲೇ ಪತ್ರಗಳ ಮೂಲಕ ಜನರನ್ನು ಸದಾ ಜಾಗೃತಗೊಳಿಸುವ ಕಾರ್ಯ ಮಾಡುತ್ತಲೇ ಇದ್ದರು. ಪತ್ನಿ ಝುಲೈಖಾ ಬೇಗಂ ಕೂಡಾ ಪತಿಯ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು.

ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಅಹಮದ್ ನಗರದ ಕಾರಾಗೃಹದಲ್ಲಿ ಬಂಧಿಯಾಗಿದ್ದ ಆಝಾದರು ತಪ್ಪೊಪ್ಪಿ ಕ್ಷಮಾಪಣೆ ಪತ್ರ ನೀಡಿದ್ದರೆ ಸೆರೆಮನೆಯಿಂದ ಬಿಡುಗಡೆಯಾಗುವ ಅವಕಾಶ ಹೊಂದಿದ್ದರು. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಕಠಿಣ ನಿಲುವನ್ನು ತಳೆದಿದ್ದ ಆಝಾದರು ಬ್ರಿಟಿಷ್ ಅಧಿಪತ್ಯದ ಮುಂದೆ ಶರಣಾಗದೆ, ಜೈಲಿನಲ್ಲೇ ಕಳೆದರೂ ಸರಿಯೇ ಹೋರಾಟದಿಂದ ಹಿಂಜರಿಯುವುದಿಲ್ಲ ಎನ್ನುವ ಅಚಲ ನಿರ್ಧಾರ ಮಾಡಿದರು.

1923ರಲ್ಲಿ ನಡೆದ ದಿಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದಾಗ ಅಬುಲ್ ಕಲಾಂರಿಗೆ ಕೇವಲ 35ರ ಹರೆಯ. ರಾಷ್ಟ್ರೀಯ ಕಾಂಗ್ರೆಸ್‌ನ ಇತಿಹಾಸದಲ್ಲಿ ಸಣ್ಣ ವಯಸ್ಸಿನಲ್ಲಿ ಅಧ್ಯಕ್ಷ ಹುದ್ದೇಗೇರಿದ ಕೀರ್ತಿ ಕಲಾಂರಿಗೆ ಸಲ್ಲುತ್ತದೆ.

ಭಾರತ ಇಬ್ಭಾಗವಾಗುವುದನ್ನು ಪ್ರಬಲವಾಗಿ ವಿರೋಧಿಸಿದ ಆಝಾದರು ದೇಶವಿಭಜನೆಯಿಂದ ಮುಸ್ಲಿಮರಿಗೆ ಸಂತೋಷ, ನೆಮ್ಮದಿ ಸಿಗುವುದಿಲ್ಲ ಎಂದು ಪ್ರತಿಪಾದಿಸಿದ್ದರು.

ದೇಶದ ಮೊದಲ ಶಿಕ್ಷಣ ಸಚಿವ:

1946ರಲ್ಲಿ ರಚನೆಯಾದ ಮಧ್ಯಂತರ ಸರಕಾರದಲ್ಲಿ ಮೌಲಾನಾ ಆಝಾದರಿಗೆ ಮಹತ್ವದ ಶಿಕ್ಷಣ ಸಚಿವರ ಜವಾಬ್ದಾರಿ ನೀಡಲಾಗಿತ್ತು. ಸ್ವಾತಂತ್ರ್ಯಾನಂತರದ ಮೊದಲ ಸಚಿವ ಸಂಪುಟದಲ್ಲಿ ಬಹುತೇಕ ಇದೇ ಸಚಿವರು ಮುಂದುವರಿದರು. ಮೌಲಾನಾ ಆಝಾದರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಶಿಕ್ಷಣದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರು. 1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಂಪುರ-ಬರೇಲಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಆಝಾದರು 1957ರಲ್ಲಿ ನಡೆದ ಎರಡನೇ

ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಪಂಜಾಬಿನ ಗುರಗಾಂವ್ ಲೋಕಸಭಾ ಕ್ಷೇತ್ರದಿಂದ ಅತ್ಯಧಿಕ ಮತಗಳಿಂದ ಆಯ್ಕೆಯಾಗಿ ದೇಶದ ಶಿಕ್ಷಣ ಸಚಿವರಾಗಿ ಮುಂದುವರಿದರು. ಸುಮಾರು ಒಂದು ದಶಕದ ಕಾಲ ಭಾರತದ ಶಿಕ್ಷಣ ಸಚಿವರಾಗಿ ಸೇವೆಸಲ್ಲಿಸಿದ ಆಝಾದರು ದೇಶದ ಶಿಕ್ಷಣ ವ್ಯವಸ್ಥೆಗೆ ಭದ್ರವಾದ ಬುನಾದಿ ಹಾಕಿದರು.

ಅಂದು ಬಹುಪಾಲು ವಯಸ್ಕರು ಅನಕ್ಷರಸ್ಥರಾಗಿದ್ದರೆ ಎಳೆಯ ಮಕ್ಕಳು ನಾನಾ ಕಾರಣಗಳಿಗಾಗಿ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದರು. ಈ ಸವಾಲನ್ನು ಅರಿತಿದ್ದ ಆಝಾದರು ಮೂರು ಹಂತಗಳ ದೂರದೃಷ್ಟಿಯ ಯೋಜನೆ ರೂಪಿಸಿದರು.

ಒಂದನೆಯದು, ಪ್ರಾಥಮಿಕ ಶಿಕ್ಷಣವನ್ನು ವ್ಯಾಪಕವಾಗಿಸುವುದು, ಅದು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು, ಅದಕ್ಕಾಗಿ ಬುನಾದಿ ಹಂತದಿಂದಲೇ ಸುಧಾರಣೆ ತರುವುದು.

ಎರಡನೆಯದು, ಉನ್ನತ ಶಿಕ್ಷಣದ ಬಾಗಿಲುಗಳನ್ನು ತೆರೆದು ವಿಜ್ಞಾನ-ತಂತ್ರಜ್ಞಾನಗಳ ಕಡೆಗೆ ವಿದ್ಯಾರ್ಥಿಗಳು ಮುಖಮಾಡುವಂತೆ ಮಾಡುವುದು.

ಮೂರನೆಯದಾಗಿ, ಈಗಾಗಲೇ ಶಿಕ್ಷಣದಿಂದ ವಂಚಿತರಾಗಿರುವ ವಯಸ್ಕರನ್ನು ಸಾಕ್ಷರರನ್ನಾಗಿ ಮಾಡುವ ಮೂಲಕ ದೇಶದ ಅನಕ್ಷರತೆಯ ಪ್ರಮಾಣವನ್ನು ಕಡಿಮೆ ಮಾಡುವುದು.

ದೇಶ ಸ್ವತಂತ್ರವಾಗಿ ಸ್ವಂತ ಕಾಲಮೇಲೆ ಎದ್ದುನಿಲ್ಲಲು ತಯಾರಾಗಿರುವ ಸಂದರ್ಭದಲ್ಲಿ ಮೌಲಾನಾ ಆಝಾದರು ದೇಶದ ಬಹುದೊಡ್ಡ ಸವಾಲುಗಳಲ್ಲಿ ಒಂದಾದ ಶಿಕ್ಷಣ ಕ್ಷೇತ್ರವನ್ನು ತನ್ನ ಅಪಾರ ಮೇಧಾವಿತನ, ದೂರದೃಷ್ಟಿಯ ಮೂಲಕ ಅಡಿಪಾಯದಿಂದಲೇ ಭದ್ರಗೊಳಿಸುವ ದಿಟ್ಟ ಹೆಜ್ಜೆ ಇಟ್ಟರು. ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಸ್ಥಾಪನೆ ಆಝಾದರ ಕೊಡುಗೆಯಾಗಿದೆ. ವಿಶ್ವ ವಿದ್ಯಾನಿಲಯ ಶಿಕ್ಷಣ ಆಯೋಗ, ಪ್ರೌಢಶಿಕ್ಷಣ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗಳ ಸ್ಥಾಪನೆಯಲ್ಲಿ ಆಝಾದರ ಪಾತ್ರ ಹಿರಿದಾಗಿದೆ. ಕಲೆ, ಸಾಹಿತ್ಯ, ಸಂಗೀತ, ನಾಟಕ ಅಕಾಡಮಿಗಳನ್ನು ಸ್ಥಾಪಿಸಿ ಅವುಗಳಿಗೆ ಸರಕಾರದ ನೆರವು ನೀಡಿ ಬಹುಮುಖ ಕ್ಷೇತ್ರಗಳು ಅಭಿವೃದ್ಧಿಯಾಗುವಂತೆ ಮಾಡಿದ ಹಿರಿಮೆ ಮೌಲಾನಾ ಆಝಾದರಿಗೆ ಸಲ್ಲುತ್ತದೆ.

ಆಝಾದರು ಸ್ಥಾಪಿಸಿದ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು ಇಂದಿಗೂ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವಹಿಸುತ್ತಿದೆ. ಓರ್ವ ಸಚಿವನ ನೀತಿ ನಿರ್ಧಾರಗಳು ಹಲವು ದಶಕಗಳ ಬಳಿಕವೂ ಉತ್ತಮ ಫಲವನ್ನು ನೀಡುತ್ತಿರುವುದನ್ನು ಕಾಣುವಾಗ ಆಝಾದರ ದೂರದೃಷ್ಟಿತ್ವ, ದೇಶವನ್ನು ಸದೃಢವಾಗಿ ಕಟ್ಟುವ ಅವರ ಅಚಲವಾದ ನಿಲುವುಗಳು ಎಷ್ಟು ಪರಿಣಾಮಕಾರಿಯಾಗಿದ್ದವು ಎಂಬುದನ್ನು ಅರ್ಥೈಸಬಹುದು.

ಅಪ್ಪಟ ದೇಶಪ್ರೇಮಿ, ಪ್ರಖರ ಪಾಂಡಿತ್ಯದ ಆಝಾದರು 1958 ಫೆಬ್ರವರಿ 22ರಂದು ನಿಧನರಾದರು. ಭಾರತ ಸರಕಾರವು 1992ರಲ್ಲಿ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ವನ್ನು ಪ್ರದಾನಿಸಿದೆ. ಮೌಲಾನ ಅಬುಲ್ ಕಲಾಂ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಅಪ್ರತಿಮ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಇವರ ಜನ್ಮದಿನವಾದ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸುವಂತೆ 2008ರಲ್ಲಿ ಭಾರತ ಸರಕಾರ ನಿರ್ದೇಶಿಸಿತು. ಆರಂಭದಲ್ಲಿ ವ್ಯಾಪಕವಾಗಿ ನಡೆದ ಈ ಆಚರಣೆ ನಂತರದ ವರ್ಷಗಳಲ್ಲಿ ಸೀಮಿತವಾಗಿ ನಡೆಯುತ್ತಿದೆ.

ಆಝಾದರ ಕೊಡುಗೆಗಳನ್ನು, ಅವರ ದೇಶಪ್ರೇಮದ ಉತ್ಕಟತೆಯನ್ನು ನವಪೀಳಿಗೆಗೆ ತಿಳಿಸುವ ಮಹತ್ತರವಾದ ಜವಾಬ್ದಾರಿ ಸರಕಾರಕ್ಕಿದೆ. ಅದಕ್ಕಾಗಿ ನವೆಂಬರ್ 11ರ ದಿನವು ಶೈಕ್ಷಣಿಕ ಸಬಲೀಕರಣದ ಹೊಸದಿಕ್ಕಿನ ಕಡೆಗೆ ದೃಷ್ಟಿ ಹಾಯಿಸುವಂತಾದರೆ ಅದು ಆಝಾದರಿಗೆ ಕೊಡುವ ಕಿಂಚಿತ್ ಗೌರವವಾಗಿ ಮಾರ್ಪಡಬಹುದು. ಆಝಾದರ ಕೊಡುಗೆಗಳನ್ನು, ಅವರ ದೇಶಪ್ರೇಮದ ಉತ್ಕಟತೆಯನ್ನು ನವಪೀಳಿಗೆಗೆ ತಿಳಿಸುವ ಮಹತ್ತರವಾದ ಜವಾಬ್ದಾರಿ ಸರಕಾರಕ್ಕಿದೆ. ಅದಕ್ಕಾಗಿ ನವೆಂಬರ್ 11ರ ದಿನವು ಶೈಕ್ಷಣಿಕ ಸಬಲೀಕರಣದ ಹೊಸದಿಕ್ಕಿನ ಕಡೆಗೆ ದೃಷ್ಟಿ ಹಾಯಿಸುವಂತಾದರೆ ಅದು ಆಝಾದರಿಗೆ ಕೊಡುವ ಕಿಂಚಿತ್ ಗೌರವವಾಗಿ ಮಾರ್ಪಡಬಹುದು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಅಬ್ದುಲ್ ರಝಾಕ್ ಅನಂತಾಡಿ

contributor

Similar News