ಭಾರತ ಜೋಡೊ ನ್ಯಾಯ ಯಾತ್ರೆ: ಚುನಾವಣೆ ಗೆಲ್ಲುವುದರ ಆಚೆಗಿನ ಮಹತ್ವ

Update: 2024-02-02 05:37 GMT

ಈಚಿನ ಎರಡು ರಾಜಕೀಯ ಚಿತ್ರಗಳು ಭಾರತದಲ್ಲಿನ ಪ್ರಸಕ್ತ ಸ್ಥಿತಿಯನ್ನು ಬಹಳ ಸರಿಯಾಗಿ ಮತ್ತು ಸ್ಪಷ್ಟವಾಗಿಯೇ ಕಾಣಿಸುತ್ತಿವೆ.

ಮೊದಲನೆಯದು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಅಯೋಧ್ಯೆಯ ರಾಮಮಂದಿರದ ಭವ್ಯತೆಯ ಬಗ್ಗೆ ಹೇಳುತ್ತ, ರಾಮನೇ ಭಾರತದ ನಂಬಿಕೆ, ಅಡಿಪಾಯ, ಚಿಂತನೆ ಮತ್ತು ಕಾನೂನು ಎಂದು ಸಾರಿದ ದೃಶ್ಯ.

ಪ್ರಧಾನಿ ಮಾತುಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದೂ ರಾಷ್ಟ್ರದ ಕಲ್ಪನೆಯೊಂದಿಗೆ ಅವರ ಆಲೋಚನೆಗಳು ಹೇಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂಬುದರ ಕುರಿತ ಕಲ್ಪನೆಗೆ ಗುಟ್ಟು ಬಿಟ್ಟುಕೊಡುವುದಿಲ್ಲವಾದರೂ, ಕನಿಷ್ಠ ಕಾಗದದ ಮೇಲೆ (ಮತ್ತು ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಲ್ಲಿ) ಭಾರತ ಇನ್ನೂ ಸಹ ಜಾತ್ಯತೀತ ರಾಷ್ಟ್ರವಾಗಿದೆ ಎಂಬುದನ್ನು ನೆನೆಯುವಾಗ, ಅವರ ಭಾಷಣದ ಬಗ್ಗೆ ಯೋಚಿಸಬೇಕಾಗುತ್ತದೆ.

ಅಯೋಧ್ಯೆಯಲ್ಲಿ ಹೀಗೆ ದೇಶವು ಅಧಿಕೃತ ಧರ್ಮವನ್ನು ಹೊಂದಿಲ್ಲ ಎಂಬ ಎಲ್ಲಾ ಸೋಗುಗಳು ಚೂರು ಚೂರಾಗುತ್ತಿದ್ದ ವೇಳೆಯಲ್ಲಿಯೇ, ಅಲ್ಲಿಂದ 1,000 ಕಿಲೋ ಮೀಟರ್‌ಗಿಂತಲೂ ದೂರವಿರುವ ಅಸ್ಸಾಮಿನಲ್ಲಿ ರಾಮನ ಮತ್ತೊಂದು ಆವಾಹನೆ ನಡೆಯಿತು. ಅಲ್ಲಿ ಕಂಡದ್ದು ಮಹಾತ್ಮಾ ಗಾಂಧಿಯವರ ರಾಮ. ಅಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸಿದ್ದ ಇತರರನ್ನು ಬಟದ್ರವ ಥಾನ್ ಯಾತ್ರಾಸ್ಥಳಕ್ಕೆ ಪ್ರವೇಶಿಸದಂತೆ ಬಿಜೆಪಿ ಸರಕಾರ ತಡೆಯಿತು.

ಆಗ ಕಾಂಗ್ರೆಸ್‌ನ ಇತರರೊಂದಿಗೆ ರಸ್ತೆಯಲ್ಲಿಯೇ ಧರಣಿ ಕುಳಿತ ರಾಹುಲ್ ಗಾಂಧಿಯವರು, ಮಹಾತ್ಮಾ ಗಾಂಧಿಯವರಿಂದಾಗಿ ಜನಪ್ರಿಯಗೊಂಡಿರುವ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯನ್ನು ಪಠಿಸಿದ ದೃಶ್ಯ ಗಮನ ಸೆಳೆಯಿತು.

ಮೂರು ದಶಕಗಳ ಹಿಂದೆ ಹಿಂದುತ್ವದ ಕಾಲಾಳುಗಳು ಮಸೀದಿಯನ್ನು ಧ್ವಂಸಗೊಳಿಸಿದ ಸ್ಥಳದಲ್ಲಿ ನಿರ್ಮಿಸಲಾದ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಉಡುಗೆಯಲ್ಲಿ ಬಾಲಿವುಡ್ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ನೆರೆದಿದ್ದ ಅಯೋಧ್ಯೆಯಲ್ಲಿನ ವಿಜೃಂಭಣೆಯನ್ನೂ ಮೀರಿದ ಮತ್ತೊಂದು ಸಂಗತಿಯನ್ನು ಆ ಎರಡನೇ ದೃಶ್ಯ ನೆನಪಿಸಿತ್ತು.

ಯಾತ್ರಾಸ್ಥಳಕ್ಕೆ ಪ್ರವೇಶವನ್ನು ನಿರಾಕರಿಸಿದ ನಂತರ ರಾಹುಲ್ ಗಾಂಧಿಯವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ‘‘ಇಂದು ಒಬ್ಬರಿಗೆ ಮಾತ್ರ ದೇವಾಲಯವನ್ನು ಪ್ರವೇಶಿಸಲು ಅವಕಾಶವಿದೆ’’ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಾಣ ಪ್ರತಿಷ್ಠಾಪನೆ ಆಚರಣೆಯಲ್ಲಿ ಮೋದಿ ಪಾಲ್ಗೊಂಡಿರುವುದನ್ನು ದೇಶದ ಎಲ್ಲಾ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು.

ಅಯೋಧ್ಯೆಯ ಮತ್ತು ಅಸ್ಸಾಮಿನ ಈ ಎರಡು ದೃಶ್ಯಗಳು, 2024ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಈ ದೇಶ ನಿಂತಿರುವ ಒಂದು ಮಹತ್ವದ ಘಟ್ಟವನ್ನು ತೋರಿಸುತ್ತವೆ.

ಬಿಜೆಪಿ ರಾಮಮಂದಿರದ ಮೂಲಕ ಲೋಕಸಭೆ ಚುನಾವಣೆಗೆ ಒಂದು ತಂತ್ರವನ್ನು ಕಂಡುಕೊಂಡಿರುವುದರ ಬಗ್ಗೆ ಯಾವುದೇ ಅನುಮಾನಗಳಿಲ್ಲ.

ರಾಜಕೀಯ ಪಕ್ಷಗಳು ಮತ್ತು ಸಿದ್ಧಾಂತಗಳ ಪ್ರಭಾವವನ್ನು ನಿರ್ಣಯಿಸಲು ಚುನಾವಣೆಗಳು ಸ್ವಲ್ಪಮಟ್ಟಿಗೆ ಸರಿಯಾದ ಮಾನದಂಡವಾಗಿದ್ದರೂ, ಈಗ ನಡೆಯುತ್ತಿರುವ ಭಾರತ ಜೋಡೊ ಯಾತ್ರೆಯ ಎರಡನೇ ಹಂತವು ಅದರ ಯಶಸ್ಸನ್ನು ಚುನಾವಣಾ ಫಲಿತಾಂಶಗಳ ನೆಲೆಯಿಂದ ಅಳೆಯುವುದು ಸೂಕ್ತವಲ್ಲ ಎಂಬುದರ ಕಡೆಗೆ ಗಮನ ಸೆಳೆಯುತ್ತದೆ.

ಭಾರತ ಜೋಡೊ ಯಾತ್ರೆಯು ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳ ಮೂಲಕ ಹಾದುಹೋದರೂ, ಕಾಂಗ್ರೆಸ್ ಅಲ್ಲಿ ಬಿಜೆಪಿಯೆದುರು ಸೋತಿದೆ ಎಂಬುದನ್ನು ಯಾತ್ರೆಯನ್ನು ಟೀಕಿಸುವವರು ಎತ್ತಿ ಹೇಳುತ್ತಾರೆ.

ಆದರೆ ಇಲ್ಲಿ ಒಂದು ಪ್ರತಿವಾದವಿದೆ. ಭಾರತ ಜೋಡೊ ನ್ಯಾಯ ಯಾತ್ರೆಯು ಹಾದುಹೋಗುವ ರಾಜ್ಯಗಳಲ್ಲಿನ ಸನ್ನಿವೇಶವು, ಯಾತ್ರೆ ಕೇವಲ ಚುನಾವಣೆಗಳನ್ನು ಗೆಲ್ಲುವುದರ ಆಚೆಗೆ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂಬುದನ್ನು ಆ ವಾದವು ಪ್ರತಿಪಾದಿಸುತ್ತದೆ.

ಮಣಿಪುರದಿಂದಲೇ ಎರಡನೇ ಹಂತದ ಯಾತ್ರೆಯನ್ನು ಪ್ರಾರಂಭಿಸಿದ ಸಂಗತಿಯನ್ನು ಗಮನಿಸಬೇಕು. ಕಳೆದ ಎಂಟು ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರವು ಮಣಿಪುರವನ್ನು ಛಿದ್ರವಾಗಿಸಿದೆ. ಅದರ ಪರಿಣಾಮವಾಗಿ 200ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಹಲವು ವಿರೋಧ ಪಕ್ಷದ ನಾಯಕರ ಮನವಿಯ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಲೇ ಇಲ್ಲ ಎಂಬುದರ ನಡುವೆಯೇ, ಭಾರತ ಜೋಡೊ ನ್ಯಾಯ ಯಾತ್ರೆಯ ಅಂಗವಾಗಿ ರಾಹುಲ್ ಗಾಂಧಿಯವರು ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಸಾಮೂಹಿಕ ಹೋರಾಟದ ಅಗತ್ಯವಿರುವುದರ ಬಗ್ಗೆ ಮಾತನಾಡಿದರು.

ಮಣಿಪುರದಲ್ಲಿ 2022ರಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು ಮತ್ತು ಕಾಂಗ್ರೆಸ್ ಅತ್ಯಂತ ಹೀನಾಯ ಸೋಲನ್ನು ಕಂಡಿತ್ತು. ಹಾಗಾಗಿ, ಭಾರತ ಜೋಡೊ ಯಾತ್ರೆಯ ಮೂಲಕ ಕಾಂಗ್ರೆಸ್ ಚುನಾವಣಾ ಲಾಭ ಪಡೆಯುವ ಗುರಿಯನ್ನು ಹೊಂದಿದೆ ಎಂಬ ವಾದಕ್ಕೆ ಇಲ್ಲಿ ಯಾವ ಆಧಾರವೂ ಇಲ್ಲ.

ಮಣಿಪುರದಲ್ಲಿ ಚುನಾವಣೆಗೆ ಇನ್ನೂ ಮೂರು ವರ್ಷಗಳು ಬಾಕಿ ಇರುವಾಗಲೂ, ಭಾರತ ಜೋಡೊ ನ್ಯಾಯ ಯಾತ್ರೆಯು ಆ ರಾಜ್ಯದಿಂದಲೇ ಶುರುವಾಗಿದೆ. ಅದರ ಹಿಂದಿರುವ ಉದ್ದೇಶ, ಕಳೆದ ವರ್ಷ ರಾಜ್ಯದ ಸಾರ್ವಜನಿಕರು ಅನುಭವಿಸಿದ ಸಂಕಟಕ್ಕೆ, ಸದ್ಯಕ್ಕಂತೂ ಆರದ ಅವರ ಮನಸ್ಸಿನ ಗಾಯಗಳಿಗೆ ಸಾಂತ್ವನದ ಮುಲಾಮು ಹಚ್ಚುವುದೇ ಆಗಿತ್ತು.

ನಾವು ತೆಗೆದುಕೊಳ್ಳುವ ಹೆಜ್ಜೆಯು ಹಸಿದ ಮತ್ತು ಆಧ್ಯಾತ್ಮಿಕವಾಗಿ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಜನರ ಪಾಲಿನ ಸ್ವರಾಜ್ಯಕ್ಕೆ ಕಾರಣವಾಗುತ್ತದೆಯೇ ಎಂದು ನಮ್ಮ ಸಂದೇಹದ ಹೊತ್ತಿನಲ್ಲೆಲ್ಲ ಕೇಳಿಕೊಳ್ಳಬೇಕೆಂಬ ಗಾಂಧಿಯವರ ಮಂತ್ರವನ್ನು ನಾವು ಮರೆಯುವಂತಿಲ್ಲ. ಭಾರತ ಜೋಡೊ ಯಾತ್ರೆಯ ಗುರಿ, ಮಹಾತ್ಮಾ ಗಾಂಧಿಯವರ ಕನಸಿನ ಭಾರತವನ್ನು ಕಟ್ಟುವ ಆಶಯ ಹೊಂದಿದೆ.

 (ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅಖಿಲ್ ಚೌಧರಿ

contributor

Similar News