ಬಿಜೆಪಿಯ ಕೇಸರೀಕರಣಕ್ಕೆ ದೇಶ ತೆತ್ತಿರುವ ಬೆಲೆ ಎಷ್ಟು?

Update: 2024-10-30 09:54 GMT

ಕಲರ್ ಸೈಕಾಲಜಿ ಎಂದರೆ, ಬಣ್ಣ ಎಂಬುದು ನಾವು ಜಗತ್ತನ್ನು ನೋಡುವ ರೀತಿಯ ಮೇಲೆ ಪ್ರಭಾವ ಬೀರುತ್ತದೆ.

ನಿಮ್ಮನ್ನು ತಮಗೆ ಬೇಕಾದಂತೆ ಪ್ರಭಾವಿಸಲು ಬಯಸುವವರು, ಅದಕ್ಕೆ ತಕ್ಕ ಬಣ್ಣದ ಮೂಲಕ ನಮ್ಮನ್ನು ಮರುಳುಗೊಳಿಸಿ, ತಮ್ಮ ಅಗತ್ಯಕ್ಕೆ ಬೇಕಾಗುವಂತೆ ನಮ್ಮ ಮನಸ್ಸನ್ನು ಬದಲಿಸಬಹುದು.

ನಿಮ್ಮ ಮನಸ್ಸಿನ ಮೇಲೆ ಬಣ್ಣಗಳು ಪ್ರಭಾವ ಬೀರುತ್ತವೆ ಎಂಬ ಅಂಶವನ್ನೇ ಬ್ರ್ಯಾಂಡ್ ಒಂದರ ಬಗ್ಗೆ ನಿಮ್ಮ ಗಮನ ಸೆಳೆಯಲು, ಆ ಬ್ರ್ಯಾಂಡ್ ಬಗ್ಗೆ ನಿಮ್ಮ ಮನಸ್ಸು ಆಕರ್ಷಿತವಾಗಲು ಬಳಸಲಾಗುತ್ತದೆ.

ಆ ಬ್ರ್ಯಾಂಡ್‌ಗೋಸ್ಕರ ನಿಮ್ಮ ಮನಸ್ಸನ್ನು ಬದಲಿಸಿಬಿಡುವ ಕೆಲಸ ನಡೆಯುತ್ತದೆ.

ಒಂದು ಬ್ರ್ಯಾಂಡ್ ಅನ್ನು ಒಂದು ನಿರ್ದಿಷ್ಟ ಬಣ್ಣದೊಂದಿಗೆ ಹಲವು ಕಾಲದಿಂದ ನಾವು ಗಮನಿಸುತ್ತ ಬಂದಿದ್ದರೆ, ಆ ಬಣ್ಣದ ಜೊತೆಗೆ ಆ ಬ್ರ್ಯಾಂಡ್ ಅನ್ನು ನಾವು ಅನಾಯಾಸವಾಗಿ ನೆನಪಿಸಿಕೊಳ್ಳುತ್ತೇವೆ. ಆ ಬಣ್ಣದೊಂದಿಗೆ ಮೊದಲು ನಾವು ನೆನಪಿಸಿಕೊಳ್ಳುವುದು ಆ ಬ್ರ್ಯಾಂಡ್ ಅನ್ನೇ. ಹೀಗೆ ಬಣ್ಣ ನಮ್ಮ ಸಾಮಾಜಿಕ ನಡವಳಿಕೆಯನ್ನು ಪ್ರಚೋದಿಸುವ ಸಂಗತಿಯಾಗುತ್ತದೆ.

ಆದರೆ ಈಗ ದೇಶದಲ್ಲಿ ಎಲ್ಲವೂ ಒಂದೇ ಬಣ್ಣ ಪಡೆಯುತ್ತಿದೆ. ಕೇಸರೀಕರಣವಾಗುತ್ತಿದೆ.

ಬಿಎಸ್‌ಎನ್‌ಎಲ್ ಲೋಗೋ ಬಣ್ಣ ಬದಲಾಗಿ ಈಗ ಕೇಸರಿಮಯವಾಗಿದೆ.

ದೂರದರ್ಶನ ಲೋಗೋ ಬಣ್ಣ ಕೂಡ ಕೆಲ ತಿಂಗಳುಗಳ ಹಿಂದೆ ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಗಿದೆ.

ವಂದೇ ಭಾರತ್ ಟ್ರೈನ್ ಬಣ್ಣ ಕೂಡ ಕೇಸರಿಯಾಗಿ ಹೋಗಿದೆ.

ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಗೆ ಕೂಡ ಕೇಸರಿ ಬಣ್ಣ ಮೆತ್ತಲಾಗಿದೆ. ಹೀಗೆ ನಮ್ಮ ಸುತ್ತಲೂ ಈಗ ಸಿಕ್ಕಾಪಟ್ಟೆ ಕೇಸರಿ ರಂಗು ಎದ್ದು ಕಾಣುತ್ತಿದೆ.

ಕಲರ್ ಸೈಕಾಲಜಿಯನ್ನು ಬಳಸಿಕೊಂಡು ಸರಕಾರ ಜನರನ್ನು ಸೆಳೆಯುತ್ತಿದೆ ಮತ್ತು ತನಗೆ ಬೇಕಾದುದನ್ನು ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟ.

ಬಿಜೆಪಿಯ ಮನಸ್ಸಿನಲ್ಲಿನ ಹಿಂದುತ್ವವನ್ನು ಪ್ರತಿನಿಧಿಸುವ ಬಣ್ಣವಾದದ್ದು ಕೇಸರಿ. ಆದರೆ ಹಿಂದೂ ಪಂಡಿತರು ಕೇಸರಿ ಜೊತೆಗೆ ಹಿಂದುತವ್ವನ್ನು ಬೆಸೆಯುವುದನ್ನು ಒಪ್ಪುವುದಿಲ್ಲ.

ಹಿಂದುತ್ವವನ್ನು ಪ್ರತಿನಿಧಿಸುವ ಬಣ್ಣವೆಂದು ಕೆಂಪು ಇಲ್ಲವೆ ಬಿಳಿ ಬಣ್ಣವನ್ನು ಹಲವಾರು ಹಿಂದೂ ಪಂಡಿತರು ಗುರುತಿಸುತ್ತಾರೆ.

ಅದೇನೇ ಇದ್ದರೂ, ಈಗಿನ ಸನ್ನಿವೇಶದಲ್ಲಿ ಹಿಂದುತ್ವ ಎಂದರೆ ಕೇಸರಿ ಬಣ್ಣ ಎನ್ನುವಂತಾಗಿದೆ.

ಬಿಜೆಪಿಯವರ ಯಾವುದೇ ಪೋಸ್ಟರ್‌ಗಳು ಕೇಸರಿ ಬಣ್ಣದಲ್ಲಿರುತ್ತವೆ.

ಹೀಗೆ ಹಿಂದುತ್ವವನ್ನು ಕೇಸರಿ ಜೊತೆ ಜೋಡಿಸಲಾಗಿದೆ.

ಆಗ ಕೇಸರಿ ಬಣ್ಣ ಎನ್ನುವುದು ನಿಮ್ಮ ಬದುಕಿನ ಭಾಗವೇನೋ ಎನ್ನಿಸಿಬಿಡುತ್ತದೆ. ಅದು ನಿಮ್ಮ ಜಾಯಮಾನದ ಮೇಲೆಯೂ ಪ್ರಭಾವ ಉಂಟುಮಾಡಬಹುದು.

ಕಮ್ಯುನಿಸ್ಟ್ ಪಕ್ಷದ ರ್ಯಾಲಿಯನ್ನು ಗಮನಿಸಿದರೆ ನಿಮಗೆ ಅಲ್ಲಿ ಕಾಣಿಸುವುದು ಕೆಂಪು ಮಾತ್ರ. ಅವರ ಯೂನಿಫಾರ್ಮ್ ಕೂಡ ಕೆಂಪು ಬಣ್ಣದಲ್ಲಿರುತ್ತದೆ.

ಒಂದು ಪ್ರದೇಶದಲ್ಲಿ ಕೆಂಪು ಧ್ವಜ, ಕೆಂಪು ಗೋಡೆಗಳು, ಕೆಂಪು ಕಟ್ಟಡ, ಹೀಗೆ ಎಲ್ಲವೂ ಕೆಂಪಾಗಿ ಕಾಣಿಸಿದರೆ ಅದು ಕಮ್ಯುನಿಸ್ಟರ ಪ್ರದೇಶ ಎಂದು ತಿಳಿಯಲಾಗುತ್ತಿದೆ.

ನಿರ್ದಿಷ್ಟ ಬಣ್ಣದ ಮೂಲಕ ಗುರುತಿಸಿಕೊಳ್ಳುವುದು ಬಿಜೆಪಿ ಮಾತ್ರವಲ್ಲ. ಆದರೆ ಬಣ್ಣವನ್ನು ತನ್ನ ಆಟಕ್ಕೆ ತಕ್ಕಂತೆ ಬಿಜೆಪಿ ಬಳಸಿಕೊಳ್ಳುವ ವ್ಯಾಪ್ತಿ ಇದೆಯಲ್ಲ, ಅದು ಇನ್ನಾವುದೇ ಪಕ್ಷಗಳನ್ನು ಮೀರಿಸುವಷ್ಟಿದೆ.

ಅದು ಕೇಸರಿಯೊಂದಿಗೆ ಇಷ್ಟು ವ್ಯಾಪಕವಾಗಿ ಕಾಣಿಸಿಕೊಳ್ಳುವ ರೀತಿಯಲ್ಲಿಯೇ ಸಮಸ್ಯೆಯಿದೆ.

ಕೇಸರಿಯನ್ನು ತನ್ನದೆಂದು ಮಾಡಿಕೊಂಡಿರುವ ಅದು, ಆ ಬಣ್ಣ ನಿಮ್ಮದಲ್ಲ ಎನ್ನುತ್ತದೆ. ಆ ಮೂಲಕ ಅದು ಜನರನ್ನು ಒಡೆಯುತ್ತದೆ, ದೇಶವನ್ನು ಒಡೆಯುತ್ತದೆ.

ನಮ್ಮ ದೇಶದ ಧ್ವಜದಲ್ಲಿ ಕೇಸರಿ ಮಾತ್ರವೇ ಇಲ್ಲ. ಹಸಿರು ಬಣ್ಣವೂ ಇದೆ.

ಆದರೆ ಹಸಿರು ಬ್ರ್ಯಾಂಡ್‌ಗಳು ಎಷ್ಟಿವೆ? ಹಸಿರು ಕಾರ್ಪೊರೇಟ್‌ಗಳು ಎಲ್ಲಿವೆ? ಹಸಿರು ಬಣ್ಣದಲ್ಲಿ ಎಷ್ಟು ಟ್ರೈನ್‌ಗಳಿವೆ? ಈ ಪ್ರಶ್ನೆಯನ್ನು ಕೇಳಿಕೊಂಡರೆ, ಕೇಸರಿ ಬಣ್ಣವನ್ನು ಇಟ್ಟುಕೊಂಡು ಬಿಜೆಪಿ ಏನು ಆಟ ನಡೆಸಿದೆ ಎನ್ನುವುದು ತಿಳಿದೀತು.

ಭಾರತದ ರಾಷ್ಟ್ರಧ್ವಜದಲ್ಲಿ ಮೇಲೆ ಇರುವ ಕೇಸರಿ ಬಣ್ಣ ದೇಶದ ಶಕ್ತಿ ಮತ್ತು ಧೈರ್ಯವನ್ನು ಸೂಚಿಸುತ್ತದೆ. ಮಧ್ಯೆ ಇರುವ ಬಿಳಿ ಬಣ್ಣ, ಧರ್ಮಚಕ್ರದೊಂದಿಗೆ ಶಾಂತಿ ಮತ್ತು ಸತ್ಯವನ್ನು ಸೂಚಿಸುತ್ತದೆ. ಕೆಳಗೆ ಇರುವ ಹಸಿರು ಭೂಮಿಯ ಫಲವತ್ತತೆ, ಬೆಳವಣಿಗೆ ಮತ್ತು ಶುಭವನ್ನು ತೋರಿಸುತ್ತದೆ.

ಆದರೆ, ಇಂದು ಕೇವಲ ಒಂದು ಬಣ್ಣದಿಂದ ಭಾರತ ಬಳಲುವಂತಾಗಿದೆ.

ಶಿಕ್ಷಣ ರಂಗದಲ್ಲಿ ವ್ಯಾಪಕವಾಗಿ ಹಿಂದುತ್ವ ಕೇಸರೀಕರಣ ನಡೆದಿದೆ.

ಪಠ್ಯದಲ್ಲಿ, ಶಿಕ್ಷಕರು, ಪ್ರಾಧ್ಯಾಪಕರು, ಉಪಕುಲಪತಿಗಳ ನೇಮಕದಲ್ಲಿ ಕೇಸರೀಕರಣದ್ದೇ ಪಾರಮ್ಯ.

ಯಾರು ಹಿಂದುತ್ವ ಅಜೆಂಡಾಕ್ಕೆ ಸರಿ ಹೊಂದುತ್ತಾರೋ ಅವರಿಗೇ ಆದ್ಯತೆ. ಅವರ ಶೈಕ್ಷಣಿಕ ಸಾಧನೆ, ಅನುಭವ ಯಾವುದೂ ಲೆಕ್ಕಕ್ಕೇ ಇಲ್ಲ. ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದರೆ ಅವರಿಗೆ ಹುದ್ದೆ ಖಚಿತ ಎಂಬಂತಾಗಿ ಬಿಟ್ಟಿದೆ.

ಅದರ ಫಲವನ್ನೂ ನಾವಿಂದು ಉಣ್ಣುತ್ತಿದ್ದೇವೆ. ಶಿಕ್ಷಣದ ಗುಣಮಟ್ಟ ಪಾತಾಳಕ್ಕೆ ಹೋಗಿದೆ. ವಿದ್ಯಾರ್ಥಿಗಳ ಅಳಲು ಕೇಳುವವರೇ ಇಲ್ಲವಾಗಿದೆ. ಕಾಲೇಜುಗಳು ಹಿಂದುತ್ವ ರಾಜಕೀಯದ ಅಡ್ಡೆಗಳಂತಾಗಿ ಬಿಟ್ಟಿವೆ.

ಚಿಂತಕರು, ಬುದ್ಧಿಜೀವಿಗಳು ಮಾತಾಡುವ ವೇದಿಕೆಗಳನ್ನು ಈಗ ಪ್ರಚೋದನಕಾರಿ ಭಾಷಣಗಾರರು ಆಕ್ರಮಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳ ಸರಣಿ ನಡೆಯುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುವುದು ದಿನನಿತ್ಯದ ಮಾತಾಗಿ ಬಿಟ್ಟಿದೆ. ದೇಶದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಯೂ ಈಗ ವಂಚನೆಗೆ ತುತ್ತಾಗಿದೆ.

ಎಲ್ಲವನ್ನೂ ಕೇಸರೀಕರಣಗೊಳಿಸುವ ಪ್ರಯತ್ನ ಬಿಜೆಪಿಗೆ ಫಲ ಕೊಟ್ಟಿದೆ. ಲಾಭ ತಂದಿದೆ. ಆದರೆ ದೇಶಕ್ಕೆ ಅದು ಮಾಡಿರುವ ನಷ್ಟವನ್ನು ಸರಿದೂಗಿಸಲು ಸಾಧ್ಯವೇ?

ಈ ದೇಶವನ್ನು ಕಟ್ಟಿದವರು ಕಂಡಿದ್ದ ಕನಸಿನ ಭಾರತ ಇದಾಗಿತ್ತೇ?

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಪಿ.ಎಚ್. ಅರುಣ್

contributor

Similar News