ಬಿಜೆಪಿಯೊಳಗಿನ ಅಸಮಾಧಾನದ ಬಿಸಿ ಕಾಂಗ್ರೆಸ್‌ಗೆ ಲಾಭ ದೊರಕಿಸೀತೇ?

ಹಾವೇರಿ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಯಾದಾಗಿನಿಂದಲೇ ಅಸಮಾಧಾನದ ಬಿಸಿ ಎದುರಿಸುತ್ತಿರುವ ಬಿಜೆಪಿ, ತನ್ನ ಭದ್ರಕೋಟೆಯಲ್ಲಿ ಈ ಬಾರಿ ಗೆಲ್ಲಬಹುದೇ ಎಂಬ ಸಂಶಯ ಕಾಡತೊಡಗಿದೆ. ಬಿಜೆಪಿಯ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಣದಲ್ಲಿರುವ ಕಾಂಗ್ರೆಸ್‌ನ ಆನಂದ ಗಡ್ಡದೇವರಮಠ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಕೂಡ ಕೈಹಿಡಿಯುವ ನಿರೀಕ್ಷೆ ಇದೆ. ಕ್ಷೇತ್ರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿನ ಕಾಂಗ್ರೆಸ್ ರಣತಂತ್ರ ಕುತೂಹಲ ಕೆರಳಿಸಿದೆ.

Update: 2024-04-12 10:24 GMT

ಸರಣಿ- 36

ಹಾವೇರಿ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳು 8. ಅವೆಂದರೆ, ಶಿರಹಟ್ಟಿ, ಗದಗ, ರೋಣ, ಹಾನಗಲ್, ಹಾವೇರಿ, ಬ್ಯಾಡಗಿ, ಹಿರೇಕೆರೂರು ಹಾಗೂ ರಾಣೆಬೆನ್ನೂರು.

ಒಟ್ಟು 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಒಂದರಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 17,77,877. ಅವರಲ್ಲಿ ಪುರುಷರು 8,95,366, ಮಹಿಳೆಯರು 8,82,430, ಇತರರು 81.

2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ರಚನೆಯಾದ ಹಾವೇರಿ ಕ್ಷೇತ್ರದ ಈವರೆಗಿನ ಮೂರೂ ಚುನಾವಣೆಗಳಲ್ಲಿ ಬಿಜೆಪಿಯೇ ಗೆದ್ದಿದೆ. ಬಿಜೆಪಿಯಿಂದ ಶಿವಕುಮಾರ್ ಉದಾಸಿ ಸತತ ಗೆಲುವು ಸಾಧಿಸಿದ್ದಾರೆ.

ಕಳೆದ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರಗಳನ್ನು ನೋಡುವುದಾದರೆ,

2009ರಲ್ಲಿ ಬಿಜೆಪಿ ಶೇ. 49.33, ಕಾಂಗ್ರೆಸ್ ಶೇ. 39.25.

2014ರಲ್ಲಿ ಬಿಜೆಪಿ ಶೇ. 50.79. ಕಾಂಗ್ರೆಸ್ ಶೇ.42.94.

2019ರಲ್ಲಿ ಬಿಜೆಪಿ ಶೇ.53.97, ಕಾಂಗ್ರೆಸ್ ಶೇ.42.85.

ಕೈ ವಶವಾಗುವುದೇ ಬಿಜೆಪಿಯ ಕೋಟೆ?

ಬಿಜೆಪಿಯ ಈ ಭದ್ರಕೋಟೆಯನ್ನು ಈ ಬಾರಿ ತನ್ನ ವಶಕ್ಕೆ ತೆಗೆದುಕೊಳ್ಳಲೇಬೇಕು ಎಂಬ ಉದ್ದೇಶದೊಂದಿಗೆ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ಗೆಲುವು ಸಾಧಿಸಿರುವುದು ಕೂಡ ತನಗೆ ಪೂರಕವಾಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಧಾರವಾಡ ದಕ್ಷಿಣದಿಂದ ಬೇರ್ಪಟ್ಟು ಹಾವೇರಿ ಗದಗ ಕ್ಷೇತ್ರವಾಗುವ ಮುನ್ನ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯೇ ಆಗಿತ್ತು.

ಈ ಬಾರಿ ಶಿವಕುಮಾರ್ ಉದಾಸಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸದಿರುವುದು ಕೂಡ ಕಾಂಗ್ರೆಸ್‌ಗೆ ಮತ್ತೊಂದು ಪೂರಕ ಅಂಶವಾದೀತೇ ಎಂಬ ಲೆಕ್ಕಾಚಾರಗಳೂ ಇವೆ.

ಬಿಜೆಪಿ ಈ ಬಾರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದೆ. ಇದರಿಂದ ಬಿಜೆಪಿಗೆ ಯಾವ ರೀತಿಯಲ್ಲಿ ಲಾಭವಾಗಬಹುದು ಎಂಬುದಕ್ಕಿಂತ ಹೆಚ್ಚಾಗಿ, ಈಗ ಅದು ತೀವ್ರ ಅಸಮಾಧಾನದ ಬಿಸಿಯನ್ನೇ ಎದುರಿಸುತ್ತಿದೆ. ಪಕ್ಷದಲ್ಲಿನ ಹಲವು ಆಕಾಂಕ್ಷಿಗಳಿಗೆ ನಿರಾಸೆ ತಂದಿರುವ ತೀರ್ಮಾನ ಇದಾಗಿದೆ.

ಮುಖ್ಯವಾಗಿ, ಉದಾಸಿ ಸ್ಪರ್ಧಿಸುವುದಿಲ್ಲ ಎಂದ ಬಳಿಕ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್‌ಗೆ ಈ ಕ್ಷೇತ್ರದ ಟಿಕೆಟ್ ನೀಡುವಂತೆ ನಾಯಕರಿಗೆ ದುಂಬಾಲು ಬಿದ್ದಿದ್ದರು. ಕಾಂತೇಶ್ ಒಂದು ಸುತ್ತಿನ ಪ್ರಚಾರವನ್ನೂ ಮಾಡಿದ್ದರು. ಆದರೆ ಹೈಕಮಾಂಡ್ ಅವರ ಬೇಡಿಕೆಗೆ ಸೊಪ್ಪು ಹಾಕಲಿಲ್ಲ. ಆನಂತರ ಅವರ ಬಂಡಾಯದ ನಡೆಯ ಬಗ್ಗೆಯೂ ಪಕ್ಷ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಹಾಗಿದ್ದರೂ ಇದು ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದಕ್ಕೆ ಕಾರಣವಾದೀತೇ ಎಂಬ ಆತಂಕವೂ ಪಕ್ಷದ ರಾಜ್ಯ ನಾಯಕರಲ್ಲಿ ಇದ್ದೇ ಇದೆ.

ಈಗ ಮಾಜಿ ಸಿಎಂ ಬೊಮ್ಮಾಯಿ ಕಣದಲ್ಲಿದ್ದು, ಅವರ ವಿರುದ್ದ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ.

ಬೊಮ್ಮಾಯಿಗೆ ಅಭ್ಯರ್ಥಿಯಾಗಲು ಮನಸ್ಸಿರಲಿಲ್ಲ. ಆದರೆ ಪಕ್ಷ ಬಿಡಲಿಲ್ಲ. ಹಾಗಾಗಿ ಕೊನೆಗೆ ಅನಿವಾರ್ಯವಾಗಿ ಕಣಕ್ಕಿಳಿದಿದ್ದಾರೆ.

ಗೆಲುವಿನ ವಿಶ್ವಾಸ

ಆನಂದ ಗಡ್ಡದೇವರಮಠ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗಡ್ಡಯ್ಯ ಎಸ್. ಗಡ್ಡದೇವರಮಠ ಅವರ ಪುತ್ರ.

ಹೀಗೆ ರಾಜಕೀಯ ಹಿನ್ನೆಲೆಯುಳ್ಳ ಅವರು ಹಾವೇರಿ, ಗದಗ ಕ್ಷೇತ್ರಗಳ ಜನರ ಜೊತೆ ಸಾಕಷ್ಟು ಒಡನಾಟ ಹೊಂದಿದ್ದಾರೆ.

2008ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 2011ರಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2019ರಿಂದಲೂ ಎಲ್ಲಾ ಚುನಾವಣೆಗಳಲ್ಲಿ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯೋನ್ಮುಖರಾಗಿದ್ದ ಅವರನ್ನು ಗುರುತಿಸಿರುವ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯನ್ನಾಗಿಸಿದೆ.

ಗೆಲುವಿನ ವಿಶ್ವಾಸವನ್ನು ಅವರು ಹೊಂದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಪಕ್ಷದ ಕೈಹಿಡಿಯಲಿವೆ ಎಂಬ ಭರವಸೆಯೂ ಅವರಿಗಿದೆ.

ಕಾಂಗ್ರೆಸ್ ಬಲವೇನು?

ಕ್ಷೇತ್ರವನ್ನು ಈ ಬಾರಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಸಜ್ಜಾಗುತ್ತಿರುವ ಕಾಂಗ್ರೆಸ್, ಗೆಲ್ಲುವ ಬಗ್ಗೆ ದೊಡ್ಡ ವಿಶ್ವಾಸ ಇಟ್ಟುಕೊಂಡಿದೆ. ಇಲ್ಲಿ ಕೆಳಮಟ್ಟದಿಂದಲೇ ಪಕ್ಷ ಸಂಘಟನೆ ಚುರುಕಾಗಿರುವುದು ಕೂಡ ಅದಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲದಿರುವುದರಿಂದ, ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಅನುಕೂಲವಿದೆ.

ಬಿಜೆಪಿಗೆ ತೊಡಕುಗಳೇನು?

ಬಿಜೆಪಿಗೆ ಇದು ತನ್ನ ಭದ್ರಕೋಟೆ ಎಂಬುದು, ಮೋದಿ ವರ್ಚಸ್ಸು ಇದೆಯೆಂಬುದು ಬಲವಾಗಬಹುದಾದರೂ, ಹಲವು ತೊಡಕುಗಳೂ ಇವೆ.

ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ವೇಳೆ ಈ ಕ್ಷೇತ್ರವನ್ನು ನಿರ್ಲಕ್ಷಿಸಲಾಯಿತು ಎಂಬ ಅಸಮಾಧಾನವೂ ಈ ಭಾಗದ ಜನರಲ್ಲಿದೆ.

ಗದಗ ಹಾವೇರಿ ಭಾಗದ ನೀರಾವರಿ ಯೋಜನೆಯ ವೈಫಲ್ಯ, ರೈತಪರ ಯೋಜನೆಗಳ ಜಾರಿಯಲ್ಲಿ ಇಚ್ಛಾಶಕ್ತಿಯ ಕೊರತೆ, ಜಿಲ್ಲೆಯಲ್ಲಿ ಯಾವುದೇ ದೊಡ್ಡ ಕಾರ್ಖಾನೆ ಸ್ಥಾಪನೆ ಆಗದೆ ಇರುವುದು, ಉದ್ಯೋಗಕ್ಕಾಗಿ ಯುವಕರು ಗುಳೇ ಹೋಗುವುದು, ಅಭಿವೃದ್ಧಿಯಲ್ಲಿ ಅತೀ ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿ ಹಾವೇರಿಯನ್ನು ಕಾಡುತ್ತಿರುವ ಈ ಸಮಸ್ಯೆಗಳಿಗೆ ಈ ಹಿಂದಿನ ಸಂಸದರು ವಿಫಲರಾಗಿದ್ದಾರೆ ಎಂಬ ಆರೋಪವೂಬಿಜೆಪಿಗೆ ತೊಡಕಾಗಬಹುದು.

ಸತತ ಅತಿವೃಷ್ಟಿ, ಅನಾವೃಷ್ಟಿಗೆ ಈ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿಲ್ಲ ಎಂಬ ದೂರೂ ಇದೆ.

ಜೊತೆಗೆ ಈಗ ಟಿಕೆಟ್ ವಿಚಾರವಾಗಿ ಎದ್ದಿರುವ ಅಸಮಾಧಾನವೂ ಚುನಾವಣೆಯಲ್ಲಿ ಅದರ ವಿರುದ್ಧ ಪರಿಣಾಮ ಬೀರಲೂ ಬಹುದು.

ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಪರಿಣಾಮ ಬೀರಬಹುದಾದ ಯಾವುದೇ ಅಂಶವೂ ಬಿಜೆಪಿಯ ಬತ್ತಳಿಕೆಯಲ್ಲಿ ಇಲ್ಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News