ಬಿಜೆಪಿ-ಆರೆಸ್ಸೆಸ್ ಮುಸುಕಿನ ಗುದ್ದಾಟ
ಆರೆಸ್ಸೆಸ್ ಮೌನವಾಗಿದೆ ಎಂದರೆ ಮುಂದಿನ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಅರ್ಥ. ತನ್ನ ರಾಜಕೀಯ ಘಟಕವಾದ ಬಿಜೆಪಿಗೆ ಗೊಬ್ಬರ-ನೀರು ಹಾಕಿ ಪೋಷಿಸಿದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಅವರನ್ನೇ ‘ತಮ್ಮ ಮಾತು ಮೀರಿದರು ಅಥವಾ ಮೂಲ ಸಂಘಟನೆ ಮೀರಿ ಬೆಳೆಯುತ್ತಿದ್ದಾರೆ’ ಎನಿಸಿದಾಗ ನಗಣ್ಯ ಮಾಡಿರುವ ಆರೆಸ್ಸೆಸ್‌ಗೆ ಮೋದಿ ಹೇಗೆ ತಾನೇ ಪ್ರತ್ಯೇಕವಾಗಿ ಅಥವಾ ವಿಶೇಷ ಆದ್ಯತೆಯಾಗಿ ಕಾಣಲು ಸಾಧ್ಯ?
ಜೆ.ಪಿ. ನಡ್ಡಾ ಅಧ್ಯಕ್ಷರಾಗಿ ನಾಲ್ಕೂವರೆ ವರ್ಷ ಪೂರೈಸಿದ್ದಾರೆ. ಮತ್ತೀಗ ಕೇಂದ್ರ ಮಂತ್ರಿಯಾಗಿದ್ದಾರೆ. ಆದ್ದರಿಂದ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ ಬರುವ ಬಗ್ಗೆ ಚರ್ಚೆಯಾಗುತ್ತಿದೆ. ಸ್ಮತಿ ಇರಾನಿ, ಸುನಿಲ್ ಬನ್ಸಲ್, ವಿನೋದ್ ತಾವ್ಡೆ ಮತ್ತಿತರ ಹೆಸರುಗಳು ಕೇಳಿಬರುತ್ತಿವೆ. ವಾಸ್ತವವಾಗಿ ಯಾರು ಹೊಸ ಅಧ್ಯಕ್ಷರಾಗುತ್ತಾರೆ ಎನ್ನುವುದಕ್ಕಿಂತ ಯಾವ ಬಣ ಅಧ್ಯಕ್ಷಗಾದಿಯನ್ನು ದಕ್ಕಿಸಿಕೊಳ್ಳುತ್ತದೆ ಎನ್ನುವುದು ಹೆಚ್ಚು ಕುತೂಹಲವನ್ನು ಹುಟ್ಟುಹಾಕಿದೆ.
ನರೇಂದ್ರ ಮೋದಿ 2014ರಲ್ಲಿ ಪ್ರಧಾನಿ ಆದ ಬಳಿಕ ಬಿಜೆಪಿಯಲ್ಲೂ ಅವರೇ ನಿರ್ಣಾಯಕ. ಅವರು ಅಸ್ತು ಎಂದ ಕಾರಣಕ್ಕೆ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದು, ಮೋದಿ ಮುದ್ರೆ ಒತ್ತಿದ ಕಾರಣಕ್ಕಾಗಿಯೇ ಅಮಿತ್ ಶಾ ಕೇಂದ್ರ ಸಂಪುಟ ಸೇರಿ ಜೆ.ಪಿ. ನಡ್ಡಾ ಅಧ್ಯಕ್ಷಗಾದಿ ಮೇಲೆ ಬಂದು ಕೂತಿದ್ದು. ಈಗಲೂ ಹಾಗೇ ಆಗುತ್ತಾ? ಮೋದಿ ಹೇಳಿದವರೇ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆಯೇ?
ಸಮಸ್ಯೆ ಶುರುವಾಗಿರುವುದೇ ಇಲ್ಲಿ. ಹಿಂದಿನಂತೆ ಮೋದಿ ಮತ್ತೊಮ್ಮೆ ತನಗೆ ಬೇಕಾದ ನಾಯಕನನ್ನೇ ಅಧ್ಯಕ್ಷ ಪದವಿಗೆ ತಂದು ಕೂರಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಈ ಬಾರಿ ಅದು ಅಷ್ಟು ಸಲೀಸಾಗಿ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮೋದಿ ಸೂಚಿಸಿದ ವ್ಯಕ್ತಿಗೆ ಅಧ್ಯಕ್ಷ ಪದವಿ ಕೊಡಲು ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ಸಮ್ಮತಿ ನೀಡುವ ಸಾಧ್ಯತೆಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಮೋದಿ ಆಯ್ಕೆಗೆ ಆರೆಸ್ಸೆಸ್ ಅಡ್ಡಗಾಲು ಹಾಕುತ್ತಿರುವುದು, ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಶೀತಲ ಸಮರ ಉಂಟಾಗಿರುವುದು ಕೆಳಗಿನ ನಾಲ್ಕು ಘಟನೆಗಳಿಂದ ದೃಢಪಡುತ್ತದೆ.
1) ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಜೂನ್ 10ರಂದು ನಾಗಪುರದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಆಡಿರುವ ಮಾತುಗಳು ಈಗಿನ ಎಲ್ಲಾ ಬೆಳವಣಿಗೆಗಳಿಗೂ ಮುನ್ನುಡಿ ಬರೆದಿವೆ. ಫಲಿತಾಂಶ ಬಂದು ಆರೇ ದಿನಕ್ಕೆ ಅವರಿಗೆ ‘ಬಿಜೆಪಿಯಲ್ಲಿ ಈಗ ನಿಜವಾದ ಸೇವಕರ ಕೊರತೆ ಇದೆ’ ಮತ್ತು ‘ಸೇವಕರು ಅಹಂಕಾರ ಹೊಂದಿದ್ದಾರೆ’ ಎಂದು ಅನಿಸಿದೆ. ಸದ್ಯಕ್ಕೆ ‘ಬಿಜೆಪಿ ಎಂದರೆ ಮೋದಿ-ಮೋದಿ ಎಂದರೆ ಬಿಜೆಪಿ’ ಎಂಬಂತೆ ಆಗಿರುವುದರಿಂದ ಮೋಹನ್ ಭಾಗವತ್ ಅವರ ಮಾತುಗಳು ಮೋದಿ ಕುರಿತಾಗಿಯೇ ಹೇಳಿದವು ಎಂದು ಧ್ವನಿಸುತ್ತಿದೆ. ಇದಲ್ಲದೆ ‘ಮಣಿಪುರದ ಹಿಂಸಾಚಾರ ತಡೆಯಲು ಬಿಜೆಪಿ ವಿಫಲವಾಯಿತು, ಅಲ್ಲಿಗೆ ಮೋದಿ ಭೇಟಿ ಕೊಡಲಿಲ್ಲ. ಪ್ರತಿಯಾಗಿ ರಾಹುಲ್ ಗಾಂಧಿ ಹೋಗಿದ್ದರು’ ಎಂದಿದ್ದಾರೆ. ಈ ಮೂಲಕ ಮೋದಿ ನಡೆ ಕುರಿತು ಅಸಮಾಧಾನವನ್ನೂ ಮತ್ತು ಗೃಹ ಮಂತ್ರಿಯಾಗಿ ಅಲ್ಲಿನ ಹಿಂಸಾಚಾರ ತಡೆಯಲು ವಿಫಲರಾಗಿದ್ದಾರೆ ಎಂದು ಅಮಿತ್ ಶಾ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
2) ಮೋಹನ್ ಭಾಗವತ್ ಮಾತನಾಡಿದ ಮೂರು ದಿನಕ್ಕೆ ಆರೆಸ್ಸೆಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ‘‘ಭಗವಾನ್ ರಾಮ ಅಹಂಕಾರ ಹೊಂದಿರುವವರನ್ನು 240 ಸ್ಥಾನಗಳಿಗೆ ಸೀಮಿತಗೊಳಿಸಿದ್ದಾನೆ’’ ಎಂದು ಹೇಳುವ ಮೂಲಕ ‘ಬಿಜೆಪಿ ಮತ್ತು ಮೋದಿಯ ಅಹಂಕಾರಕ್ಕೆ ಸೋಲುಂಟಾಯಿತು’ ಎಂಬ ಸಂದೇಶ ರವಾನಿಸಿದ್ದಾರೆ. ಅವರ ಹೇಳಿಕೆಯಿಂದ ಬಿಜೆಪಿಗೆ-ಮೋದಿಗೆ ತೀವ್ರ ಮುಜುಗರವಾದ ಹಿನ್ನೆಲೆಯಲ್ಲಿ ಅವರು ಮರುದಿನವೇ ಉಲ್ಟಾಹೊಡೆದಿದ್ದಾರೆ ಕೂಡ.
3) ಇಂಗ್ಲಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಆರೆಸ್ಸೆಸ್ ನಾಯಕ ರತನ್ ಶಾರ್ದಾ ಅವರು ‘‘ಬಿಜೆಪಿ ನಾಯಕರ ಅತಿಯಾದ ಆತ್ಮವಿಶ್ವಾಸ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಲಘುವಾಗಿ ಪರಿಗಣಿಸಿದ್ದು ಲೋಕಸಭೆ ಚುನಾವಣೆ ಸೋಲಿಗೆ ಕಾರಣ’’ ಎಂದಿದ್ದಾರೆ. ಅಲ್ಲದೆ ‘‘ಬಿಜೆಪಿ ನಾಯಕರು ತಾವೇ ಸೃಷ್ಟಿಸಿಕೊಂಡ ಕೋಟೆಯಲ್ಲಿ ಸಮೃದ್ಧವಾಗಿದ್ದರು, ಬೀದಿಯಲ್ಲಿದ್ದ ಜನರ ಧ್ವನಿ ಅವರಿಗೆ ಕೇಳಲಿಲ್ಲ’’ ಎಂದು ಕುಟುಕಿದ್ದಾರೆ.
4) ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಪತ್ರಿಕೆ ‘ದುಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದಲೇ ಬಿಜೆಪಿಗೆ ಸೋಲಾಗಿದೆ’ ಎಂದು ಷರಾ ಬರೆದಿದೆ. ಈ ಸಲ ಬಿಜೆಪಿ ಚಿಹ್ನೆಯಿಂದ ಕಣಕ್ಕಿಳಿದಿದ್ದ ನಾಲ್ವರ ಪೈಕಿ ಒಬ್ಬರು ಬೇರೆ ಪಕ್ಷದಿಂದ ಬಂದಿದ್ದವರು. ಅವರನ್ನೆಲ್ಲಾ ಪಕ್ಷಕ್ಕೆ ಬರಮಾಡಿಕೊಂಡದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸುವ ಅಗತ್ಯ ಇಲ್ಲ.
ಇಂದ್ರೇಶ್ ಕುಮಾರ್ ‘ತಾವು ಹೇಳಿದ್ದು ಆ ರೀತಿ ಅಲ್ಲ’ ಎಂದು ಉಲ್ಟಾ ಹೊಡೆದಿರಬಹುದು, ಸಾಮಾನ್ಯವಾಗಿ ಏನಾದರೂ ಸಂದೇಶ ಕೊಡಬೇಕು ಎನ್ನುವ ಕಾರಣಕ್ಕಾಗಿ ಮಾತ್ರವೇ ಮಾಧ್ಯಮಗಳ ಎದುರು ಹಾಜರಾಗುವ ಆರೆಸ್ಸೆಸ್ ನಾಯಕರು ಈಗ ‘ಬಾಯಿ ತಪ್ಪಿ’ ಮಾತನಾಡಿಲ್ಲ. ಬಿಜೆಪಿ-ಮೋದಿ ಬಗ್ಗೆ ಇದ್ದ ಅಸಮಾಧಾನವನ್ನು ಚುನಾವಣೆ ಸೋಲಿನ ಬಳಿಕ ಹೊರ ಹಾಕುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಾಗಿದ್ದರೂ ಮಿತ್ರಪಕ್ಷಗಳ ಜೊತೆಗೂಡಿ ಬಿಜೆಪಿ ಸರಕಾರ ರಚಿಸಿದೆ. ಆದರೂ ಆರೆಸ್ಸೆಸ್ ನಾಯಕರು ಬಿಜೆಪಿ-ಮೋದಿ ಮೇಲೆ ಮುಗಿಬೀಳುತ್ತಿರುವುದೇಕೆ ಎನ್ನುವುದು ಕೂಡ ಕುತೂಹಲಕಾರಿ.
ಮೊದಲನೆಯದಾಗಿ ರಾಮ ಮಂದಿರ ಉದ್ಘಾಟನೆ ವೇಳೆ ಮೋದಿ ಮಾತ್ರವೇ ಮುನ್ನೆಲೆಯಲ್ಲಿ ಇದ್ದರು, ಮಂದಿರ ನಿರ್ಮಾಣಕ್ಕೆ ದಶಕಗಳ ಕಾಲ ಹೋರಾಟ ಮಾಡಿದವರನ್ನು ಕಡೆಗಣಿಸಲಾಯಿತು, ರಾಮನ ಮೂರ್ತಿ ಪ್ರತಿಷ್ಠಾಪನೆ ವಿಧಿಗಳಲ್ಲಿ ಸಂಪ್ರದಾಯ ಮೀರಿ ಮೋದಿ ಗರ್ಭ ಗುಡಿ ಪ್ರವೇಶಿಸಿದ್ದರು, ಅರ್ಚಕರ ಕಾರ್ಯವನ್ನು ತಾವೇ ನಿರ್ವಹಿಸಿದ್ದರು ಎಂಬ ಅಸಮಾಧಾನವೂ ಇತ್ತು. ಇಂತಹ ಅಸಮಾಧಾನಗಳಿಂದಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆರೆಸ್ಸೆಸ್ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಎನ್ನುವ ಮಾತುಗಳು ಆರೆಸ್ಸೆಸ್-ಬಿಜೆಪಿ ಎರಡೂ ಕಡೆಯಿಂದ ಕೇಳಿಬರುತ್ತಿವೆ. ಒಂದೊಮ್ಮೆ ಆರೆಸ್ಸೆಸ್ ಉತ್ತರಪ್ರದೇಶದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರೆ ಬಿಜೆಪಿ ಇಷ್ಟು ಹೀನಾಯವಾದ ಸೋಲು ಕಾಣುತ್ತಿರಲಿಲ್ಲ ಎನ್ನುವ ಅಭಿಪ್ರಾಯವೂ ದಟ್ಟವಾಗಿದೆ.
ಎರಡನೆಯದಾಗಿ, ಚುನಾವಣೆ ನಡುವೆಯೇ ಜೆ.ಪಿ. ನಡ್ಡಾ ‘‘ಇಂಡಿಯನ್ ಎಕ್ಸ್ ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ‘ಬಿಜೆಪಿಗೆ ಸ್ವತಂತ್ರವಾಗಿ ಚುನಾವಣೆ ಎದುರಿಸುವ ಶಕ್ತಿ ಇದೆ. ಈಗ ಆರೆಸ್ಸೆಸ್ ಅಗತ್ಯ ಇಲ್ಲ’’ ಎಂದು ಹೇಳಿದ್ದರು. ನಡ್ಡಾ ಹೇಳಿಕೆ ಬಹಳ ಜನಕ್ಕೆ ಆಶ್ಚರ್ಯ ಉಂಟುಮಾಡಿದ್ದರೆ, ಆರೆಸ್ಸೆಸ್ ನಾಯಕರಿಗೆ ಆಕ್ರೋಶವನ್ನು ತರಿಸಿತ್ತು. ‘ಇದು ಸ್ವತಃ ಜೆ.ಪಿ. ನಡ್ಡಾ ಅವರ ಹೇಳಿಕೆಯಲ್ಲ’ ಎಂಬ ಅನುಮಾನವನ್ನೂ ಮೂಡಿಸಿತ್ತು. ಹಾಗೆಯೇ ‘ಮೋದಿ-ಅಮಿತ್ ಶಾ ನಿರ್ದೇಶನದ ಮೇರೆಗೆ ಜೆ.ಪಿ. ನಡ್ಡಾ ಇಂತಹ ಹೇಳಿಕೆ ನೀಡಿರಬಹುದು ಎಂಬ ಖಚಿತತೆಯೂ ಇತ್ತು. ಆದರೂ ಚುನಾವಣೆ ಹೊಸ್ತಿಲಲ್ಲಿ ಅನಿವಾರ್ಯವಾಗಿ ಆರೆಸ್ಸೆಸ್ ಬಾಯಿ ಮುಚ್ಚಿಕೊಂಡಿತ್ತು.
ಆರೆಸ್ಸೆಸ್ ಮೌನವಾಗಿದೆ ಎಂದರೆ ಮುಂದಿನ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಅರ್ಥ. ತನ್ನ ರಾಜಕೀಯ ಘಟಕವಾದ ಬಿಜೆಪಿಗೆ ಗೊಬ್ಬರ-ನೀರು ಹಾಕಿ ಪೋಷಿಸಿದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಅವರನ್ನೇ ‘ತಮ್ಮ ಮಾತು ಮೀರಿದರು ಅಥವಾ ಮೂಲ ಸಂಘಟನೆ ಮೀರಿ ಬೆಳೆಯುತ್ತಿದ್ದಾರೆ’ ಎನಿಸಿದಾಗ ನಗಣ್ಯ ಮಾಡಿರುವ ಆರೆಸ್ಸೆಸ್‌ಗೆ ಮೋದಿ ಹೇಗೆ ತಾನೇ ಪ್ರತ್ಯೇಕವಾಗಿ ಅಥವಾ ವಿಶೇಷ ಆದ್ಯತೆಯಾಗಿ ಕಾಣಲು ಸಾಧ್ಯ?
ಒಂದು ಸಂಘಟನೆಯಾಗಿ ಆರೆಸ್ಸೆಸ್‌ಗೆ ಮೋದಿಯನ್ನು ನಿಯಂತ್ರಿಸಬೇಕಾಗಿದೆ. ತನ್ನದೇ ಆದ ದೊಡ್ಡ ಬೆಂಬಲಿಗರ ಪಡೆ-ಅಗಾಧವಾದ ಸಂಪನ್ಮೂಲವುಳ್ಳ ಸ್ನೇಹಿತರ ಬಳಗ ಕಟ್ಟಿಕೊಂಡಿರುವ ಮೋದಿಯನ್ನು ಒಂದೇ ಸಲಕ್ಕೆ ನಿಯಂತ್ರಿಸುವುದು ಕಷ್ಟವಾಗಿದೆ. ಹಾಗಾಗಿ ಮೊದಲು ‘ದುರ್ಬಲಗೊಳಿಸುವ’ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎನ್‌ಡಿಎ ಸರಕಾರ ರಚನೆ ವೇಳೆ ಅಮಿತ್ ಶಾ ಅವರನ್ನು ಸಂಪುಟದಿಂದ ಹೊರಗಿಡುವಂತೆ, ಒಂದು ವೇಳೆ ಸಂಪುಟಕ್ಕೆ ಸೇರಿಸಿಕೊಂಡರೂ ಗೃಹ ಖಾತೆ ಕೊಡದಂತೆ ಒತ್ತಡ ಹೇರಲಾಯಿತು. ಅದು ಫಲಿಸಲಿಲ್ಲ. ಈಗ ಬಹಿರಂಗ ಹೇಳಿಕೆಗಳ ಸರದಿ. ಮುಂದಿನದು ಬಿಜೆಪಿ ಅಧ್ಯಕ್ಷಗಾದಿ.
ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಎರಡೂ ಪಾಳೆಯಕ್ಕೂ ನಿರ್ಣಾಯಕವಾದುದಾಗಿದೆ. ರಾಜಕೀಯದಲ್ಲಿ ಮನೆಯೊಳಗಿನ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ಬಹಳ ಮುಖ್ಯ. ಈಗ ಮೋದಿ ಮತ್ತು ಆರೆಸ್ಸೆಸ್ ಪಾಳೆಯಗಳು ಅಂತಹ ಸಂಕಷ್ಟಕ್ಕೆ ಸಿಲುಕಿವೆ. ಮೇಲಾಗಿ ಎರಡೂ ಬಣಗಳು ಇದೇ ಮೊದಲ ಬಾರಿಗೆ ಇಷ್ಟು ತೀವ್ರತೆರನಾದ ಶೀತಲಸಮರ ಎದುರಿಸುತ್ತಿವೆ. ಗೆಲುವು ಯಾರಿಗೆ ಎಂದು ಹೇಳುವುದು ಕಷ್ಟ, ಆದರೆ ಮುಂದಿನ ಅಧ್ಯಾಯಗಳು ರೋಚಕವಾಗಿರಲಿವೆ ಎಂಬುದನ್ನು ಮಾತ್ರ ಸುಲಭವಾಗಿ ಹೇಳಬಹುದು.