ಕಡಿಮೆ ಅವಧಿಯಲ್ಲಿ ಆದಾಯ ತರುವ ಬ್ರೊಕೊಲಿ

Update: 2024-11-11 06:04 GMT

PC:freepik

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಕಷ್ಟು ರೈತರು ವಿದೇಶಿ ತರಕಾರಿ ಬ್ರೊಕೊಲಿ ಕೃಷಿಯನ್ನು ಮಾಡಿದ್ದಾರೆ. ಎಲೆಕೋಸಿನ ಜಾತಿಗೆ ಸೇರಿದ ತರಕಾರಿಗಳಲ್ಲಿ ಇದು ಒಂದಾಗಿದ್ದು, ಕಡಿಮೆ ಅವಧಿಯಲ್ಲಿ ಬೆಳೆಯುವ ತರಕಾರಿಯಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ರೈತರು ಈ ಬೆಳೆಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಬ್ರೊಕೊಲಿಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ, ಫ್ಲೋರಿಡ್ ಬಿಟ್ಟರ್ ಕ್ಯಾರಾಟೀನ್, ವಿಟಮಿನ್-ಸಿ ಗುಣಗಳನ್ನು ಹೊಂದಿದ್ದು, ಮನುಷ್ಯನ ರಕ್ತನಾಳ ಸಂಚಾರ ಮತ್ತು ಹೃದಯಕ್ಕೆ ಉತ್ತಮ ತರಕಾರಿಯಾಗಿದೆ. ಬ್ರೊಕೊಲಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಎಕರೆಗೆ 20 ಟನ್‌ನಷ್ಟು ಬೆಳೆ: ಒಂದು ಎಕರೆಗೆ ಬ್ರೊಕೊಲಿ ಕೃಷಿ ಮಾಡಿದರೆ ಬರೋಬ್ಬರಿ 15ರಿಂದ 20 ಟನ್‌ನಷ್ಟು ಬೆಳೆ ನೀರಿಕ್ಷಿಸಬಹುದು. ಬ್ರೊಕೊಲಿ ಬೆಳೆಯಲು 30 ಡಿಗ್ರಿಯಷ್ಟು ಉಷ್ಣಾಂಶ ಬೇಕಾಗುತ್ತದೆ. ಅತೀ ಹೆಚ್ಚು ಉಷ್ಣಾಂಶದಲ್ಲಿ ಈ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಮಾರುಕಟ್ಟೆ ಯಲ್ಲಿ ಪ್ರತಿ ಕೆಜಿಗೆ 30 ರೂ.ಗಳಂತೆ ಮಾರಾಟ ಮಾಡಿದರೆ, ಒಂದು ಎಕರೆಯ ಇಳುವರಿಗೆ 6 ಲಕ್ಷ ರೂ.ಗಳವರೆಗೆ ಆದಾಯ ನಿರೀಕ್ಷಿಸಬಹುದು. ಹೊಸಕೋಟೆ ತಾಲೂಕಿನ ನಂದಗುಡಿ, ಅನುಗೊಂಡನಹಳ್ಳಿ, ಥಾಮಸನಹಳ್ಳಿ, ಸೂಲಿಬೆಲೆ ಹೋಬಳಿಯ 100 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬ್ರೊಕಲಿ ಬೆಳೆ ಬೆಳೆಯುತ್ತಿದ್ದಾರೆ. ಇದನ್ನು ಕಂಪೆನಿಗಳ ಸಹಯೋಗದೊಂದಿಗೆ ವಿದೇಶಗಳಿಗೂ ರಫ್ತು ಮಾಡಬಹುದೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಪೂರ್ಣಿಮಾ ಹೇಳುತ್ತಾರೆ.

ಬ್ರೊಕೊಲಿ ಬೆಳೆಯು ಅತ್ಯಂತ ಕಡಿಮೆ ಕಾಲದಲ್ಲಿ ಲಾಭ ತರುವ ಬೆಳೆಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಬೆಂಗಳೂರು ನಗರ ಹತ್ತಿರ ಇರುವುದರಿಂದ ಮಾರುಕಟ್ಟೆ ಬೆಲೆಯೂ ಸಹ ರೈತರಿಗೆ ಕೈಗೆಟುಕುವಂತೆ ಸಿಗುತ್ತದೆ. ಇಲಾಖೆಯಿಂದ ಯಾವುದೇ ತೋಟಗಾರಿಕೆ ಬೆಳೆ ಬೆಳೆಯಲು, ಹನಿ ನೀರಾವರಿ ಪದ್ಧತಿ ಅಳವಡಿಸಲು ಪ್ರೋತ್ಸಾಹಧನ ಮತ್ತು ಸಹಾಯಧನ ನೀಡಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

-ಗುಣವಂತ, ಜಿಲ್ಲಾ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ಬ್ರೊಕೊಲಿ ಬೆಳೆಯನ್ನು 7ರಿಂದ 8 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಖರ್ಚುವೆಚ್ಚ ಕಡಿಮೆ ಇದೆ. ಕಾರ್ಮಿಕರಿಗೆ 300ರಿಂದ 400 ರೂ. ದಿನಗೂಲಿ ಕೊಡಬೇಕು. ಕೀಟಗಳೇನು ಕಂಡುಬರುವುದಿಲ್ಲ. ದಿನದಲ್ಲಿ 2 ಬಾರಿ ನೀರು ಹಾಯಿಸಿದರೆ ಉತ್ತಮ ಇಳುವರಿಯನ್ನು ಪಡೆಯಬಹುದು. ಮಾರುಕಟ್ಟೆಯಲ್ಲೂ ಬೇಡಿಕೆ ಇದ್ದು, ಕೆಜಿಗೆ 20 ರೂ. ಸಿಗಲಿದೆ. ಹೂಕೋಸಿಗಿಂತ ಇದು ಉತ್ತಮ ಬೆಳೆ, ವಿದೇಶಗಳಲ್ಲಿ ಹೆಚ್ಚಾಗಿ ಈ ಬೆಳೆ ಬೆಳೆಯುತ್ತಾರೆ. ಬೆಳೆದ ಬೆಳೆಯನ್ನು ಚೆನ್ನೈ ಮಾರುಕಟ್ಟೆಗೆ ಕಳುಹಿಸುತ್ತೇವೆ.

ರಾಮಂಜಿ , ರೈತ, ಮುತ್ಸಂದ್ರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News