ಮಿತ್ರಪಕ್ಷಗಳು ಬಿಜೆಪಿ ಕೊಟ್ಟಷ್ಟು ಪಡೆದುಕೊಂಡು ಸುಮ್ಮನಿರಲು ಸಾಧ್ಯವೇ?

ಒಂದೆಡೆ ನಿಧಾನವಾಗಿ ‘ಇಂಡಿಯಾ’ ಒಕ್ಕೂಟ ಮೈಕೊಡವಿಕೊಂಡು ಎದ್ದೇಳುತ್ತಿರುವಾಗಲೇ ಇತ್ತ ಬಿಜೆಪಿ ನೇತೃತ್ವದ ಎನ್‌ಡಿಎ ಒಳಗೆ ಏನಾಗುತ್ತಿದೆ? ಬಿಜೆಪಿಯ ಮಿತ್ರಪಕ್ಷಗಳು ಈವರೆಗೆ ಇದ್ದಂತೆ ಈಗಲೂ ಮೋದಿ, ಅಮಿತ್ ಶಾ ಹೇಳಿದಂತೆ ಕೇಳಿಕೊಂಡು, ಕೊಟ್ಟಷ್ಟು ಸೀಟು ತೆಗೆದುಕೊಂಡು ಕೂರಲು ಸಿದ್ಧರಿದ್ದಾರೆಯೇ? ಅಥವಾ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿರುವ ಸವಾಲುಗಳನ್ನು ನೋಡಿ ಅದರ ಮಿತ್ರಪಕ್ಷಗಳು ಈಗ ತಮ್ಮ ಪಾಲು ಸರಿಯಾಗಿ ಕೊಡಿ ಎಂದು ಹಠಕ್ಕೆ ಬಿದ್ದಿವೆಯೇ?

Update: 2024-03-07 03:59 GMT

ಬಿಜೆಪಿಯ ಕನಿಷ್ಠ ಮೂವರು ಲೋಕಸಭಾ ಅಭ್ಯರ್ಥಿಗಳು ಟಿಕೆಟ್ ಘೋಷಣೆಯಾದ ಬಳಿಕ ಹಿಂದೆ ಸರಿದಿದ್ದಾರೆ. ಒಬ್ಬ ಸಂಸದರದ್ದು ಎನ್ನಲಾದ ಅಶ್ಲೀಲ ವೀಡಿಯೊ ಬಹಿರಂಗವಾಗಿದೆ.

ಈ ನಡುವೆ ಬಿಜೆಪಿ ಹಿರಿಯ ಮುಖಂಡರೆಲ್ಲ ತಮ್ಮ ಹೆಸರಿನ ಜೊತೆ ‘ಮೋದಿ ಕಾ ಪರಿವಾರ್’ ಎಂದು ಬರೆದುಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಬಿಜೆಪಿಗೆ ಸೀಟು ಹೊಂದಾಣಿಕೆ ಸವಾಲಾಗಿ ಪರಿಣಮಿಸಿದೆಯೇ?

ದೇಶಾದ್ಯಂತ ಮೋದಿ ಎಡೆಬಿಡದ ಪ್ರವಾಸ ಶುರುವಾಗಿದೆ. ದೇಶದ ಉದ್ದಗಲದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 29 ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ.

ಚುನಾವಣೆಗಳು ಬಂದಾಗೆಲ್ಲ ನೀತಿ ಸಂಹಿತೆ ಘೋಷಣೆಗೆ ಮೊದಲು ಅಭಿವೃದ್ಧಿ ಕೆಲಸಗಳ ಶಿಲಾನ್ಯಾಸದ ನೆಪ ಮಾಡಿಕೊಂಡು ಜನರ ದುಡ್ಡಿನಲ್ಲೇ ದೇಶಾದ್ಯಂತ ಪ್ರವಾಸ ಮಾಡಿ ಚುನಾವಣೆಗೆ ವೇದಿಕೆ ಸಜ್ಜುಗೊಳಿಸುವ ತಾಲೀಮು ಈಗಲೂ ಶುರುವಾಗಿದೆ. ಪ್ರಧಾನಿಯಾದವರಿಗೆ ತಮ್ಮದೇ ಆದ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುವುದಕ್ಕಿಂತಲೂ ಹೆಚ್ಚಾಗಿ ಚುನಾವಣೆಯನ್ನು ಮನಸ್ಸಲ್ಲಿಟ್ಟುಕೊಂಡು ಹೀಗೆ ಸತತ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ನಿಜಕ್ಕೂ ವಿಚಿತ್ರವೆನ್ನಿಸುತ್ತದೆ.

ಬಿಜೆಪಿ ಕಚೇರಿಯಲ್ಲಿ ರಾತ್ರಿಯಿಡೀ ಸಭೆ ನಡೆಸಿದರೂ ಬೆಳಗ್ಗೆಯೇ ಕರ್ತವ್ಯಕ್ಕೆ ಹಾಜರಾದರು ಎಂದು ಸುದ್ದಿ ಮಾಡುವ ನ್ಯೂಸ್ ಚಾನೆಲ್‌ಗಳು ಹೇಗೂ ಬೇಕಾದಷ್ಟು ಇವೆ.

ಅಬ್ಬರದ ಪ್ರಚಾರದ ಈ ಬಾರಿಯಂತೂ 400 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುವ ಘೋಷಣೆ ಮೋದಿಗೂ ಬಿಜೆಪಿಗೂ ದೊಡ್ಡ ಸವಾಲೇ ಆಗಲಿದೆ ಎಂಬುದಂತೂ ಹೌದು.

ಎಷ್ಟೋ ಪ್ರಮುಖರಿಗೆ ಈ ಸಲ ಬಿಜೆಪಿ ಟಿಕೆಟ್ ಸಿಗದೇ ಹೋಗಬಹುದು. ರಾಜ್ಯ ರಾಜಕಾರಣದಲ್ಲಿ ಆಸಕ್ತಿಯಿದ್ದವರನ್ನು ಬಲವಂತವಾಗಿ ರಾಷ್ಟ್ರ ರಾಜಕಾರಣಕ್ಕೆ ಎಳೆಯಲೂ ಬಹುದು. ಮೋದಿಯವರ 400 ಸೀಟುಗಳ ಘೋಷಣೆಗಾಗಿ ಏನು ಬೇಕಾದರೂ ನಡೆಯಬಹುದು.

ಈ 400 ಸೀಟುಗಳ ಕುರಿತ ಬಡಾಯಿಯ ಇನ್ನೊಂದು ಮಗ್ಗುಲಲ್ಲಿ ತಮಾಷೆಯೂ ಇದೆ. 400 ಸೀಟುಗಳನ್ನು ಗೆಲ್ಲುತ್ತೇವೆಂಬ ಇವರ ಬಡಾಯಿ ನೋಡಿದರೆ, ಮಿತ್ರಪಕ್ಷಗಳು ಲೆಕ್ಕಕ್ಕೇ ಇಲ್ಲವೆಂಬ ರೀತಿಯಲ್ಲಿಯೇ ಮಾತಿನ ಧಾಟಿ ಇದೆ.

ಹಾಗಾದರೆ ಎನ್‌ಡಿಎ ಮಿತ್ರಪಕ್ಷಗಳು ಮೋದಿ ಅಥವಾ ಅಮಿತ್ ಶಾ ಕೊಟ್ಟದ್ದೇ ಪ್ರಸಾದ, ಕೊಡದಿದ್ದರೆ ಅದು ಕೂಡ ಅವರ ಮರ್ಜಿ ಎಂದುಕೊಂಡು ಸುಮ್ಮನೆ ಕೂರುವ ಪಕ್ಷಗಳೇ? ಹಾಗಂತೂ ಖಂಡಿತ ಇಲ್ಲ. ಹಾಗಾಗಿ ಬಿಜೆಪಿಗೆ 400 ಸೀಟುಗಳನ್ನು ಗೆಲ್ಲುವ ಸವಾಲಿಗಿಂತಲೂ ಹೆಚ್ಚಾಗಿ, ಮಿತ್ರಪಕ್ಷಗಳನ್ನು ಸಂಭಾಳಿಸುವ ಮತ್ತು ಸರಿದೂಗಿಸುವ ಸವಾಲು ಕೂಡ ದೊಡ್ಡದೇ ಇದೆ.

ಬಿಹಾರದಲ್ಲಾಗಲೀ, ಮಹಾರಾಷ್ಟ್ರದಲ್ಲಾಗಲೀ ಬಿಜೆಪಿ ಪಾಲಿಗೆ ಸೀಟು ಹೊಂದಾಣಿಕೆ ಎಣಿಸಿದಷ್ಟು ಸುಲಭವಿಲ್ಲ.ಉತ್ತರ ಪ್ರದೇಶದಲ್ಲಿಯೂ ಆಟ ಎಂದಿನ ಹಾಗೆ ಇರಲಾರದು.

ಕರ್ನಾಟಕದಲ್ಲಿ ಇವರೊಡನೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿಯೇನೋ ಕೇಸರಿ ಶಾಲು ಹಾಕಿಕೊಂಡು ‘ಜೈಶ್ರೀರಾಮ್’ ಎಂದಿರಬಹುದು. ಆದರೆ ಸೀಟು ಹಂಚಿಕೆ ವಿಚಾರ ಬಂದ ಕೂಡಲೇ ಅವರು ಬೇರೆ ಅವತಾರವನ್ನು ತಾಳದೇ ಇರಲಾರರು. ‘‘ಅಮಿತ್ ಶಾ ದೇವೇಗೌಡರ ಕಾಲ್ಬೆರಳ ಉಗುರಿಗೂ ಸಮವಲ್ಲ’’ ಎಂದು ಹೇಳಿದ್ದು ಇದೇ ಕುಮಾರಸ್ವಾಮಿ ಎಂಬುದು ಬಿಜೆಪಿಯವರಿಗೆ ಮರೆತುಹೋಗಿರಲಿಕ್ಕಿಲ್ಲ.

ಮಹಾರಾಷ್ಟ್ರದ ವಿಚಾರವಾಗಿ ನೋಡಿದರೆ, ಅಲ್ಲಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಿಜೆಪಿ ಹೇಳಿದ್ದನ್ನೆಲ್ಲ ಕೇಳಿಕೊಂಡಿರುವ ಮಟ್ಟದಲ್ಲಂತೂ ಇಲ್ಲ. ಬಿಹಾರದ ವಿಚಾರದಲ್ಲಿಯೂ ಇಂಥದೇ ಸವಾಲು ಎದುರಾಗಲಿದೆ.

ಇದರ ಜೊತೆಗೇ ಮಿತ್ರಪಕ್ಷಗಳ ವೋಟುಗಳು ಬಿಜೆಪಿಗೆ ಬರಲಿವೆಯೇ ಇಲ್ಲವೆ ಎಂಬುದು ಕೂಡ ಮುಖ್ಯವಾಗಲಿದೆ.

ಮೈತ್ರಿ ಹೆಸರಿನಲ್ಲಿ ಬಿಜೆಪಿಯ ಆಟ ಇರುವುದೇ ಆ ಪ್ರಾದೇಶಿಕ ಪಕ್ಷಗಳ ವೋಟುಗಳನ್ನು ತಾನು ಪಡೆಯುವ ಅವಕಾಶಗಳನ್ನು ಹೊಂಚುವುದರಲ್ಲಿ. ಆದರೆ ಆ ಆಟದಲ್ಲಿ ಅಷ್ಟೊಂದು ಸುಲಭವಾಗಿ ಬಿಜೆಪಿಯ ಲೆಕ್ಕಾಚಾರಗಳು ನಡೆಯಬಹುದೇ?

ಬಿಹಾರದಲ್ಲಿ ಬಿಜೆಪಿಯನ್ನು ನಡುಗಿಸುವಂತಹ ಸವಾಲೊಂದು ಈಗ ತೇಜಸ್ವಿ ಯಾದವ್ ರೂಪದಲ್ಲಿ ಎದುರಾಗಿದೆ. ತೇಜಸ್ವಿ ರಾಜಕೀಯ ಜನಪ್ರಿಯತೆ ಅವರ ‘ಜನ ವಿಶ್ವಾಸ್’ ಮಹಾ ರ್ಯಾಲಿಯಲ್ಲಿ ನಿಚ್ಚಳವಾಗಿ ಗೋಚರವಾಗಿದೆ. ಅದರ ಅಬ್ಬರಕ್ಕೆ, ಅದರ ತಾಕತ್ತಿಗೆ ಮೋದಿ ಪಡೆ ತಲ್ಲಣಿಸಿಹೋದಂತೆ ಕಾಣುತ್ತಿದೆ.

ಇನ್ನೊಂದೆಡೆ ರಾಹುಲ್ ಗಾಂಧಿಯವರ ‘ಭಾರತ ಜೋಡೊ ನ್ಯಾಯ ಯಾತ್ರೆ’ ಬಿಜೆಪಿಯನ್ನು ಹಿಡಿದು ಅಲ್ಲಾಡಿಸುತ್ತಿದೆ. ಅದರ ಸುಳ್ಳುಗಳನ್ನು ಬಯಲಿಗೆ ಎಳೆಯುತ್ತಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಕೂಡ ಬಿಜೆಪಿಗೆ ಠಕ್ಕರ್ ಕೊಡಲು ‘ಇಂಡಿಯಾ’ ಮೈತ್ರಿಕೂಟ ಸಜ್ಜಾಗಿದೆ. 63 ಕ್ಷೇತ್ರಗಳಲ್ಲಿ ಎಸ್‌ಪಿ ಹಾಗೂ ಮೈತ್ರಿಕೂಟದ ಇತರ ಪಕ್ಷಗಳು ಬಿಜೆಪಿಗೆ ಎದುರಾಳಿಯಾಗಲಿವೆ. ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದು, ವಾರಣಾಸಿಯಲ್ಲಿ ಮೋದಿಗೂ ಸವಾಲೊಡ್ಡಲಿದೆ.

ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ ಈ ಮೂರು ರಾಜ್ಯಗಳಲ್ಲದೆ, ಇನ್ನೂ ಎರಡು ರಾಜ್ಯಗಳಲ್ಲೂ ಬಿಜೆಪಿ ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ. ಅದರಲ್ಲಿ ಒಂದು, ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ. 28 ಲೋಕಸಭಾ ಕ್ಷೇತ್ರಗಳಿರುವುದರಿಂದ ಕರ್ನಾಟಕಕ್ಕೆ ಗಮನಾರ್ಹ ಮಹತ್ವವಿದೆ.

ಇನ್ನು ತೆಲಂಗಾಣದಲ್ಲಿ ಬಿಜೆಪಿ ಮತ್ತು ಬಿಆರ್‌ಎಸ್ ಆಟ ನಡೆಯದ ಹಾಗೆ ತಂತ್ರ ಹೂಡಿದ್ದ ಕಾಂಗ್ರೆಸ್ ಕಳೆದ ವಿಧಾನಸಭೆ ಚುನಾವಣೆಯನ್ನು ಗೆದ್ದುಕೊಂಡಿತ್ತು.

ತೆಲಂಗಾಣದಲ್ಲೀಗ 56,000 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ಕೊಟ್ಟಿದ್ದಾರೆ. ಚುನಾವಣಾ ಆಯೋಗದ ಅಧಿಸೂಚನೆ ಬರುವವರೆಗೂ ಇಂಥ ಆಟ ಮೋದಿ ಸರಕಾರದ ವತಿಯಿಂದ ನಡೆಯಬಹುದು.

ಈ ಎಲ್ಲ ರಾಜ್ಯಗಳಲ್ಲೂ ಈಗ ಬಿಜೆಪಿಗೆ ಇರುವ ಸವಾಲು ಅದು ಎಷ್ಟು ವೋಟುಗಳನ್ನು ಪಡೆಯಬಹುದು ಎನ್ನುವುದಲ್ಲ. ಶೇಕಡಾವಾರು ವೋಟುಗಳಲ್ಲ. ಬದಲಿಗೆ ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎನ್ನುವುದು. ಆದರೆ ಅದು ಅಷ್ಟು ಸುಲಭವಾಗಿಯಂತೂ ಕಾಣಿಸುತ್ತಿಲ್ಲ.

ಬಿಹಾರದಲ್ಲಿ ಕಳೆದ ಚುನಾವಣೆಯಲ್ಲಿ ಮತ ಹಂಚಿಕೆಯಲ್ಲಿ ದೊಡ್ಡ ಏರಿಕೆಯನ್ನೇ ಕಂಡಿತ್ತು. ಕಣಕ್ಕಿಳಿದಿದ್ದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿತ್ತು.

ಆದರೆ ಈ ಸಲ ಸನ್ನಿವೇಶ ಬೇರೆಯಾಗಿದೆ ಎಂಬುದಂತೂ ಕಾಣಿಸತೊಡಗಿದೆ. ಪಾಸ್ವಾನ್ ಪಕ್ಷ ಕೂಡ ಕಳೆದ ಬಾರಿ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳನ್ನೂ ಗೆದ್ದಿದ್ದರಿಂದ ಈ ಸಲದ ಅದರ ಬೇಡಿಕೆಯೂ ಪ್ರಬಲಗೊಳ್ಳಲಿದೆ. ಇದೇ ವೇಳೆ ಇನ್ನೂ ಎರಡು ಪಕ್ಷಗಳು ಸೇರಿದ್ದು, ಅವುಗಳೂ ಕನಿಷ್ಠ ಎರಡೆರಡು ಸೀಟುಗಳನ್ನಾದರೂ ಕೇಳಲಿವೆ.

ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿರುವ ಎಚ್ಚರವನ್ನು ಹೊಂದಿರದೆ ಇರಲು ಸಾಧ್ಯವಿಲ್ಲ ಮತ್ತು ಅಂಥ ಎಚ್ಚರದ ಕಾರಣದಿಂದಾಗಿಯೇ ಅವು ಬಿಜೆಪಿಯ ಜೊತೆಗಿದ್ದರೂ ಬಿಜೆಪಿ ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಸ್ಥಿತಿಯಲ್ಲಂತೂ ಇಲ್ಲ. ಬಿಜೆಪಿಯೆದುರಿನ ಸವಾಲು ಹೀಗಾಗಿಯೇ ಈಗ ಇನ್ನಷ್ಟಾಗಿದೆ.

ಬಿಜೆಪಿ ಟಿಕೆಟ್ ಕೊಟ್ಟರೂ ನಿರಾಕರಿಸಿ ಚುನಾವಣಾ ರೇಸ್‌ನಿಂದ ಅದರ ಅಭ್ಯರ್ಥಿಗಳು ಹಿಂದೆ ಸರಿಯುವುದಕ್ಕೆ ಕಾರಣವಾಗುತ್ತಿರುವ ಸಮೀಕರಣಗಳೂ ಮತ್ತೊಂದೆಡೆ ಕಾಣಿಸುತ್ತಿವೆ.

ಇದರ ನಡುವೆಯೇ ಬಿಜೆಪಿಯೊಳಗೇ ಟಿಕೆಟ್‌ಗಾಗಿ ಪೈಪೋಟಿ, ಅಸಮಾಧಾನಗಳೂ ತಲೆದೋರಿವೆ. ಅವರೇ ಅವರ ಮೇಲೆ ಅಸ್ತ್ರ ಪ್ರಯೋಗಕ್ಕೆ ಇಳಿಯುತ್ತಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿ ಬಿಜೆಪಿ ಸಂಸದನೊಬ್ಬನ ಅಶ್ಲೀಲ ವೀಡಿಯೊ ಸುದ್ದಿಯಾಗಿದೆ.

ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಎಐ ಹಾಗೂ ಡೀಪ್ ಫೇಕ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದ ಬೆನ್ನಿಗೇ ಬಾರಾಬಂಕಿಯ ಬಿಜೆಪಿ ಸಂಸದನ ಅಶ್ಲೀಲ ವೀಡಿಯೊ ವೈರಲ್ ಆಗಿದೆ. ಆ ಬಿಜೆಪಿ ಸಂಸದ ಇದು ಎಐ ಹಾಗೂ ಡೀಪ್ ಫೇಕ್ ಬಳಸಿ ಮಾಡಿರುವ ತಿರುಚಿದ ವೀಡಿಯೊ ಎನ್ನುತ್ತಿದ್ದಾರೆ.

ಅವರಿಗೆ ಟಿಕೆಟ್ ಕೂಡ ಘೋಷಣೆಯಾಗಿತ್ತು. ಈಗವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭೋಜ್‌ಪುರಿ ಗಾಯಕ ಪವನ್ ಸಿಂಗ್ ಅವರನ್ನು ಘೋಷಿಸಲಾಗಿತ್ತು. ಅದರ ಬೆನ್ನಿಗೇ ಮಹಿಳೆಯರ ಬಗ್ಗೆ ತೀರಾ ಅವಹೇಳನಕಾರಿಯಾಗಿರುವ ಅವರ ಹಾಡುಗಳನ್ನು ಟಿಎಂಸಿ ಟ್ವೀಟ್ ಮಾಡಿತು. ಯಾರೂ ನೋಡಲು, ಕೇಳಲೂ ಆಗದ ಹಾಡುಗಳವು. ಈಗ ಪವನ್ ಸಿಂಗ್ ಕೂಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಗುಜರಾತ್‌ನ ಮೆಹಸಾನಾದಿಂದ ಟಿಕೆಟ್ ಘೋಷಣೆಯಾಗಿದ್ದ ಮಾಜಿ ಡಿಸಿಎಂ ನಿತಿನ್ ಪಟೇಲ್ ಕೂಡ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಇದರ ನಡುವೆಯೇ ಬಿಜೆಪಿ ಮತ್ತೊಂದು ತಂತ್ರದ ಮೊರೆಹೋದಂತಿದೆ.

ಬಿಜೆಪಿಯ ಹಿರಿಯ ನಾಯಕರೆಲ್ಲ ‘ಮೋದಿ ಕಾ ಪರಿವಾರ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೊಫೈಲ್ ತಿದ್ದಿಕೊಳ್ಳುತ್ತಿದ್ದಾರೆ. ಮೋದಿಗೆ ಪರಿವಾರವಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಟೀಕಿಸಿದ್ದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಇಂಥದೊಂದು ಹೊಸ ನಾಟಕ ಶುರುವಾಗಿದೆ.

ಈ ದೇಶದ ಪ್ರತಿಯೊಬ್ಬರೂ ತನ್ನ ಪರಿವಾರ ಎಂದು ಮೋದಿ ಮತ್ತೊಂದು ಬಣ್ಣದ ಮಾತು ಶುರು ಮಾಡಿದ್ದಾರೆ.

ಆದರೆ 2014ರಲ್ಲಿ ಚಾಯ್ ಪೇ ಚರ್ಚಾ, 2019 ರಲ್ಲಿ ಚೌಕಿದಾರ್ ಹೆಸರು ಮಾಡಿದ ಮೋಡಿ ಈ ಮೋದಿ ಕಾ ಪರಿವಾರ್ ಮಾಡುತ್ತದೆ ಎಂಬ ಖಾತರಿ ಇಲ್ಲ.

ಮೈತ್ರಿ ಮಾಡಿಕೊಂಡ ರಾಜ್ಯಗಳಲ್ಲಿನ ಸವಾಲಿಗೆ ಇದೆಲ್ಲ ಉತ್ತರವಾಗುವುದು ಸಾಧ್ಯವೆ? ಕಾದು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News