ಒಬಿಸಿಗಳನ್ನು ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳಾಗಿ ವಿಂಗಡಿಸಬಹುದೇ?
ನ್ಯಾ. ಜಿ. ರೋಹಿಣಿ ಆಯೋಗ ಕೊನೆಗೂ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಹಿಂದುಳಿದ ವರ್ಗಗಳ ಉಪ-ವರ್ಗೀಕರಣದ ವರದಿಯನ್ನು ಒಕ್ಕೂಟ ಸರಕಾರಕ್ಕೆ ನೀಡಿದೆ. ಒಕ್ಕೂಟ ಸರಕಾರಕ್ಕೆ ವರದಿ ಕೈ ಸೇರಿ ಸುಮಾರು ಆರು ತಿಂಗಳೇ ಗತಿಸಿದ್ದರೂ ಕುಂಭಕರ್ಣ ನಿದ್ದೆಯಿಂದ ಒಕ್ಕೂಟ ಸರಕಾರ ಎಚ್ಚರಗೊಂಡಿಲ್ಲ. ಕನಸು-ಮನಸ್ಸಿನಲ್ಲೂ ಅನುಕೂಲ ಸಿಂಧು ರಾಜಕೀಯವನ್ನೇ ಉಸಿರಾಡುವ ಭಾಜಪ ಸರಕಾರ ನ್ಯಾ. ಜಿ. ರೋಹಿಣಿ ಆಯೋಗದ ವರದಿ ಜಾರಿಗೆ ಕೊಡದೆ ಹಿಂದುಳಿದ ವರ್ಗಗಳು ಉಸಿರುಗಟ್ಟುವ ವಾತಾವರಣ ಸೃಷ್ಟಿಸಿ ಬಿಟ್ಟಿದೆ. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಮೇಲ್ಜಾತಿ-ವರ್ಗದ ಮನಸ್ಥಿತಿಯನ್ನು ಹೊಂದಿರುವ ಭಾಜಪಕ್ಕೆ ಇದು ಹೊಸದೇನಲ್ಲ ಬಿಡಿ.
ಎಲ್ಲಾ ಹಿಂದುಳಿದ ವರ್ಗಗಳ(ಜಾತಿ) ಹಿಂದುಳಿದಿರುವಿಕೆ ಒಂದೇ ಪ್ರಮಾಣದಲ್ಲಿ ಇರುತ್ತದೆ ಎಂಬುದು ಸರಿಯಲ್ಲ. ಹಿಂದುಳಿದ ವರ್ಗಗಳನ್ನು ಪುನರ್ವರ್ಗೀಕರಣ ಮಾಡ ಬಹುದೇ ಎಂಬ ವಿಷಯ ಎಂ.ಆರ್. ಬಾಲಾಜಿ vs ಮೈಸೂರು(ಎಐಆರ್ 1963 ಎಸ್‌ಸಿ 649)ರಾಜ್ಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಚರ್ಚೆಗೆ ಬಂತು. ಇದು ಎರಡು ಮುಖ್ಯ ಲಕ್ಷಣಗಳನ್ನು ಹೊಂದಿತ್ತು: (1)ವಿಧಿ 15(4)ಕ್ಕೆ ಸಂಬಂಧಿಸಿದ ಮತ್ತು (2) ಎರಡು ಪ್ರವರ್ಗಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಲು ಮತ್ತು ಆ ಮೂಲಕ ಮೀಸಲಾತಿಯ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಗಮನಿಸಿತು. ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ನಡುವಿನ, ಉಪ-ವರ್ಗೀಕರಣವು ವಿಧಿ 15(4)ರ ಅಡಿಯಲ್ಲಿ ಸಮರ್ಥಿಸಲ್ಪಟ್ಟಿಲ್ಲ. ಏಕೆಂದರೆ ಅದು ನಿಜವಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಅವಕಾಶವನ್ನು ನೀಡಲು ಅಧಿಕಾರ ನೀಡುವುದಿಲ್ಲ ಎಂದು ನ್ಯಾ.ಗಜೇಂದ್ರಗಡಕರ್ ಹೇಳಿದರು.
‘‘ಹಿಂದುಳಿದ ವರ್ಗಗಳ ಎರಡು ವರ್ಗಗಳನ್ನು ಪರಿಚಯಿಸುವಾಗ, ರಾಜ್ಯದಲ್ಲಿನ ಅತ್ಯಂತ ಮುಂದುವರಿದ ವರ್ಗಗಳಿಗೆ ಹೋಲಿಸಿದರೆ ಕಡಿಮೆ ಮುಂದುವರಿದ ಎಲ್ಲಾ ವರ್ಗದ ನಾಗರಿಕರ ಅನುಕೂಲಕ್ಕಾಗಿ ಕ್ರಮಗಳನ್ನು ರೂಪಿಸುವುದು ನಮ್ಮ ಅಭಿಪ್ರಾಯದಲ್ಲಿ 15(4)ರ ವ್ಯಾಪ್ತಿಯಲ್ಲಿ ಅದು ಬರುವುದಿಲ್ಲ.’’
ನ್ಯಾ. ಗಜೇಂದ್ರಗಡಕರ್ ಅವರು ಪ್ರಶ್ನಿತ ಆದೇಶ ಅನುಸರಿಸಿದ ವಿಧಾನದಿಂದ ಫಲಿಸುವುದೆಂದರೆ ರಾಜ್ಯದ ಜನಸಂಖ್ಯೆಯ ಸುಮಾರು ಪ್ರತಿಶತ 90ರಷ್ಟು ಹಿಂದುಳಿದವರು ಎಂದು ಪರಿಗಣಿಸಲಾಗಿದೆ ಮತ್ತು ಈ ಆದೇಶವು ರಾಜ್ಯದ ಜನಸಂಖ್ಯೆಯನ್ನು ಅತ್ಯಂತ ಮುಂದುವರಿದ ಮತ್ತು ಉಳಿದವರನ್ನು ಹಿಂದುಳಿದ ಎಂದು ಪರಿಗಣಿಸಿ ಮತ್ತೆ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಎಂಬೆರಡು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಅವರ ದೃಷ್ಟಿಯಲ್ಲಿ ಅದು ವಿಧಿ 15(4)ರ ಅಡಿಯಲ್ಲಿ ದೃಢಪಟ್ಟಿಲ್ಲ. ಕೆ.ಸಿ. ವಸಂತ್ ಕುಮಾರ್ vs ಕರ್ನಾಟಕ ರಾಜ್ಯ(ಎಐಆರ್1985 ಎಸ್‌ಸಿ 1495)ಪ್ರಕರಣದಲ್ಲಿ ನ್ಯಾ. ಚಿನ್ನಪ್ಪ ರೆಡ್ಡಿ ಅವರು, ಅಂತಹ ಕ್ರಮದ ಔಚಿತ್ಯವು ಪ್ರತಿ ಪ್ರಕರಣದ ನೈಜತೆಯ ಮೇಲೆ ಪ್ರಶ್ನಿಸಲು ಮುಕ್ತವಾಗಿರಬಹುದು ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಅವರು ಯಾವುದೇ ಸಮರ್ಥನೆಯನ್ನು ನೀಡಿಲ್ಲ. ಅವರ ಅಭಿಪ್ರಾಯ ಹೀಗಿದೆ:
‘‘ವಾಸ್ತವವಾಗಿ ಹೆಚ್ಚು ಹಿಂದುಳಿದ ವರ್ಗಗಳಿಗೆ ಸಹಾಯ ಮಾಡಲು ಇಂತಹ ವರ್ಗೀಕರಣ ಅವಶ್ಯಕವಾಗಿದೆ: ಇಲ್ಲದಿದ್ದರೆ ಹಿಂದುಳಿದ ವರ್ಗಕ್ಕಿಂತ ಸ್ವಲ್ಪ ಹೆಚ್ಚು ಮುಂದುವರಿದ ಹಿಂದುಳಿದ ವರ್ಗಗಳು ಮೀಸಲಾತಿಗೆ ಇಡಲ್ಪಟ್ಟ ಎಲ್ಲಾ ಸ್ಥಾನಗಳನ್ನು ಪಡೆದುಕೊಳ್ಳಬಹುದು....’’
ನ್ಯಾ. ಚಿನ್ನಪ್ಪ ರೆಡ್ಡಿ ಅವರು: ‘‘ನಾವು ಹೇಳುವುದೇನೆಂದರೆ ಮುಂದುವರಿದ ವರ್ಗಗಳಿಗಿಂತ ಖಂಡಿತವಾಗಿಯೂ ಹಿಂದುಳಿದಿರುವ, ಆದರೆ ಹಿಂದುಳಿದ ವರ್ಗಗಳಿಗಿಂತ ಮುಂದುವರಿದ ಜನರ ವರ್ಗಗಳಿದ್ದರೆ ಉಪ -ವರ್ಗೀಕರಣವನ್ನು ಅನುಮತಿಸಬಹುದು’’. ವಿಧಿಗಳಾದ 15 (4)ಮತ್ತು 16(4) ನಡುವಿನ ವ್ಯತ್ಯಾಸವೆಂದರೆ- ಮೊದಲಿನ ವಿಧಿಯ ಕೆಳಗೆ ಮಾಡಬೇಕಾದ ವಿಶೇಷ ಅವಕಾಶದ ವ್ಯಾಪ್ತಿಯ ವಿಷಯದ ಬಗ್ಗೆ ವ್ಯವಹರಿಸುತ್ತದೆ ಮತ್ತು ಎರಡನೆಯ ವಿಧಿ ವ್ಯಾಪಕ ಮೀಸಲಾತಿ ಎಂದು ವಾದಿಸುವ ತತ್ವ ಎಂಬುದು ಅನಿವಾರ್ಯವಾಗಿ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಮೂರನೇ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ಚಿನ್ನಪ್ಪ ರೆಡ್ಡಿ ತಮ್ಮ ವರದಿಯಲ್ಲಿ ಪರಸ್ಪರ ಸಂಬಂಧಿತ ಹಿಂದುಳಿದಿರುವಿಕೆಯ ಬಗ್ಗೆ ಮೂರು ಅಂಶಗಳನ್ನು ಅಂದರೆ- ಜಾತಿ, ಆರ್ಥಿಕ ಮತ್ತು ಶೈಕ್ಷಣಿಕ ಎಂದು ಗುರುತಿಸಿದ್ದಾರೆ. ಆರ್ಥಿಕ ಅನಭಿವೃದ್ಧಿ, ಶೈಕ್ಷಣಿಕ ಕೊರತೆ ಮತ್ತು ಜಾತಿಯ ಅಪಮಾನ ಇವೆಲ್ಲವೂ ಹಿಂದುಳಿಯುವಿಕೆಗೆ ಕಾಣಿಕೆ ಸಲ್ಲಿಸುತ್ತವೆ. ಜಾತಿ ಹುಟ್ಟಿನಿಂದಲೇ ಬಂದಿರುವುದರಿಂದ ಈ ಅಂಶಗಳೊಂದಿಗೆ ಹೋರಾಡಲು ಇನ್ನೆರಡು ಅನಿಷ್ಟಗಳನ್ನು ನಿರ್ಮೂಲನೆ ಮಾಡಬೇಕಿದೆ. ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರು ಹಿಂದುಳಿದ ವರ್ಗಗಳನ್ನು ಎರಡು ಪ್ರವರ್ಗಗಳಾಗಿ ವಿಂಗಡಿಸಿದ್ದರು, ಮೀಸಲಾತಿ ನ್ಯಾಯ ನೀಡುವುದಕ್ಕಾಗಿಯೇ ಹೊರತು ಅದನ್ನು ತಿರಸ್ಕರಿಸಲು ಅಲ್ಲ ಎಂದು ಪ್ರತೀ ಪ್ರವರ್ಗಕ್ಕೂ ಪ್ರತ್ಯೇಕ ಶೇಕಡಾವಾರು ಮೀಸಲಾತಿ ನಿಗದಿಪಡಿಸಿದ್ದರು.
ಈ ಹಿಂದೆ ಬಿಹಾರ ಸರಕಾರವು ಮುಂಗೇರಿ ಲಾಲ್ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ಜೂನ್ 1971ರಲ್ಲಿ ನೇಮಕ ಮಾಡಿತ್ತು. ಅದು ಫೆಬ್ರವರಿ 1976 ರಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಆಯೋಗವು 128 ಜಾತಿಗಳನ್ನು ಹಿಂದುಳಿದ ವರ್ಗಗಳೆಂದು ಗುರುತಿಸಿ ಅವುಗಳಲ್ಲಿ 94 ಜಾತಿಗಳನ್ನು ಅತ್ಯಂತ ಹಿಂದುಳಿದವು ಎಂದು ವರದಿಯಲ್ಲಿ ಮುಡುಪಿಡಲಾಗಿತ್ತು.
ಇಲ್ಲಿಯವರೆಗೆ ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳನ್ನು ಗುರುತಿಸುವುದು ಹಿಂದುಳಿದ ವರ್ಗಗಳ ಒಳಗಿನ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರಲ್ಲಿ ಪ್ರತ್ಯೇಕ ಶೇಕಡವಾರು ಮೀಸಲಾತಿ ನೀಡುವ ಸಲುವಾಗಿ ಮಾಡಲಾಯಿತು. ಎರಡನೆಯದಾಗಿ ಗಮನಿಸಬೇಕಾದ ಅಂಶವೆಂದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಷಯವು ರಾಜ್ಯ ಸೇವೆಗಳಲ್ಲಿ ಮಾತ್ರ ಇತ್ತು. ರಾಷ್ಟ್ರೀಯ ಸೇವೆಗಳಲ್ಲಿ ಯಾವುದೇ ಮೀಸಲಾತಿ ಯೋಜನೆ ಹಿಂದುಳಿದ ವರ್ಗಗಳಿಗೆ ಅನ್ವಯಿಸುವಂತೆ ಜಾರಿಯಲ್ಲಿರಲಿಲ್ಲ.
ಹಿಂದುಳಿದ ವರ್ಗಗಳನ್ನು ವಿಭಾಗಿಸುವ ತತ್ವವನ್ನು ಕರ್ನಾಟಕದಲ್ಲಿ 1972 ಆಗಸ್ಟ್ ಮಾಹೆಯಲ್ಲಿ ರಚಿತವಾದ ಎಲ್.ಜಿ. ಹಾವನೂರ್ ಆಯೋಗ ಕೂಡ ಹಿಂದುಳಿದ ವರ್ಗಗಳ ವಿಂಗಡಣಾ ತತ್ವವನ್ನು ಅನುಸರಿಸಿದೆ. 1975ರಲ್ಲಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹಿಂದುಳಿದ ವರ್ಗಗಳನ್ನು ಹಿಂದುಳಿದ ಕೋಮು, ಹಿಂದುಳಿದ ಜಾತಿ ಮತ್ತು ಹಿಂದುಳಿದ ಪಂಗಡಗಳು ಎಂಬುದಾಗಿ ಮೂರು ಭಾಗಗಳಲ್ಲಿ ವಿಂಗಡಿಸಿದೆ. ಎಂ.ಆರ್. ಬಾಲಾಜಿ vs ಮೈಸೂರು ರಾಜ್ಯ(ಎಐಆರ್ 1963 ಎಸ್‌ಸಿ 649) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ಒಳಾಂಶಗಳಾದ ಹಿಂದುಳಿದ ವರ್ಗಗಳ ವಿಂಗಡಣಾ ತತ್ವವನ್ನು ಆಯೋಗ ಪರಿಗಣಿಸಿಲ್ಲ ಎಂಬುದು ವಿಶೇಷ.
1956ರಲ್ಲಿ ಕಾಕಾ ಕಾಲೇಲ್ಕರ್ ವರದಿಯನ್ನು ಒಕ್ಕೂಟ ಸರಕಾರ ತಿರಸ್ಕರಿಸಿದ ನಂತರ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವ ಉಸಾಬರಿಗೆ ಸರಕಾರ ಹೋಗಲಿಲ್ಲ. 1977ರಲ್ಲಿ ಕಾಂಗ್ರೆಸ್ ಸರಕಾರ ಪತನಗೊಂಡು ಜನತಾಪಕ್ಷದ ಸರಕಾರ ಅಧಿಕಾರ ಹಿಡಿದ ನಂತರವಷ್ಟೆ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ನೇಮಿಸಲಾಯಿತು.
ಮೀಸಲಾತಿಯ ಪ್ರಯೋಜನವನ್ನು ಪಡೆಯುವುದರಲ್ಲಿ ಹಿಂದುಳಿದವರಲ್ಲಿ ಹಿಂದುಳಿದವರು ಮೂಲೆಗುಂಪಾಗುತ್ತಾರೆ ಎಂಬ ಮನವಿಯ ಮೇರೆಗೆ ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರು ಎಂದು ವಿಭಜಿಸುವ ಸಮಸ್ಯೆಯನ್ನು ಮಂಡಲ್ ಆಯೋಗವು ಎದುರಿಸಿತು ಮತ್ತು ಆ ಉಸಾಬರಿಗೆ ಹೋಗಲೇ ಇಲ್ಲ.
ಹಿಂದುಳಿದ ಮತ್ತು ಅತ್ಯಂತ ಹಿಂದುಳಿದವರ ನಡುವೆ ಹಿಂದುಳಿದವರನ್ನು ವಿಭಜಿಸಲು ಮಂಡಲ್ ಆಯೋಗದ ನಿರಾಕರಣೆಯು ವಿಧಿ 16(4)ರ ಅಡಿಯಲ್ಲಿ ಉದ್ದೇಶಿಸಲಾದ ಮೀಸಲಾತಿಯ ವರ್ಗ ಸ್ವರೂಪವನ್ನು ಅವಲಂಬಿಸಿದೆ. ಆಯೋಗದ ಸದಸ್ಯರಲ್ಲಿ ಒಬ್ಬರಾದ ಎಲ್.ಆರ್. ನಾಯಕ್ ತಮ್ಮ ಅಸಮ್ಮತಿ ಟಿಪ್ಪಣಿಯಲ್ಲಿಯೂ ಸಹ ಹಿಂದುಳಿದ ವರ್ಗಗಳನ್ನು (1) ಮಧ್ಯಂತರ ಹಿಂದುಳಿದ ವರ್ಗಗಳು ಮತ್ತು (2) ಶೋಷಣೆಗೆ ಒಳಗಾದ ವರ್ಗಗಳೆಂದು ವಿಂಗಡಿಸಿದ್ದರು. ನಂತರ ಎರಡನೆಯವರನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ರೀತಿಯಲ್ಲಿ ಪ್ರತ್ಯೇಕವಾಗಿ ಉಪಚರಿಸಬೇಕು ಎಂದೂ ಸೂಚಿಸಿದ್ದರು. ‘‘ದೊಡ್ಡ ಮೀನು ಮತ್ತು ಸಣ್ಣ ಮೀನುಗಳನ್ನು ಒಟ್ಟಿಗೆ ಸೇರಿಸಿದರೆ ದೊಡ್ಡ ಮೀನು ಸಣ್ಣ ಮೀನನ್ನು ನುಂಗುತ್ತದೆ’’ ಎಂಬ ಪುರಾತನ ಗಾದೆಯ ಸಂಕೇತಗಳ ನಡುವೆ ವಿಭಜನೆಗೆ ನಾಯಕ್ ಆದ್ಯತೆ ನೀಡಿದರು. ಹಿಂದುಳಿದ ವರ್ಗಗಳ ವಿಭಾಗವು ಪ್ರತ್ಯೇಕ ಉಪಚಾರಕ್ಕಾಗಿಯೇ ಹೊರತು ಯಾವುದೇ ವಿಭಾಗವನ್ನು ನಿರಾಕರಿಸುವುದಕ್ಕಲ್ಲ.
ಆಯೋಗವು ಬಹುಮತದ ತೀರ್ಮಾನದ ಮೇಲೆ, ಹಿಂದುಳಿದ ವರ್ಗವನ್ನು ವಿಭಾಗಿಸುವುದನ್ನು ಬಿಟ್ಟು ಮತ್ತು ಅದನ್ನು ಸರಕಾರದ ವಿವೇಚನೆಗೆ ಬಿಟ್ಟಿತು. ಆಯೋಗವು ವರದಿಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿ 1980ರ ಕೊನೆಯ ದಿನಗಳಲ್ಲಿ ಸರಕಾರಕ್ಕೆ ಸಲ್ಲಿಸಿತು.
ಆಗಸ್ಟ್ 13,1990ರಲ್ಲಿ ಮಂಡಲ ಆಯೋಗದ ಶಿಫಾರಸಿನಂತೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರಕಾರದ ಹುದ್ದೆಗಳಿಗೆ ಅನ್ವಯಿಸುವಂತೆ ಶೇ.27ರಷ್ಟು ಮೀಸಲಾತಿಯನ್ನು ನೀಡಿ ವರದಿಯನ್ನು ಜಾರಿಗೊಳಿಸಲಾಯಿತು. ವರದಿಯ ಅನುಷ್ಠಾನವನ್ನು ಒಪ್ಪದ ಮೇಲ್ಜಾತಿ-ವರ್ಗದ ಜನ ವ್ಯಾಪಕವಾಗಿ ವಿರೋಧಿಸಿದರು. ಮೀಸಲಾತಿಯನ್ನು ವಿರೋಧಿಸಿ ಅದರ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ಹಲವಾರು ಮನವಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದವು. ಪ್ರಾರಂಭದಲ್ಲಿ 3 ಮಂದಿ ನ್ಯಾಯಾಧೀಶರು ವಿಚಾರಣೆ ನಡೆಸಿ, ತಡೆಯಾಜ್ಞೆ ನೀಡಿದರು. ಅಂತಿಮ ವಿಚಾರಣೆಯನ್ನು 9 ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಕೈಗೆತ್ತಿಕೊಂಡಿತು. ಒಂಭತ್ತು ಮಂದಿ ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ(ಇಂದಿರಾ ಸಹಾನಿ vs ಭಾರತ - ಎಐಅರ್ 1993 ಎಸ್‌ಸಿ 477)ವಿಚಾರಣೆ ನಡೆದು ಪ್ರಶ್ನಿತ ಆಗಸ್ಟ್ 13, 1990ರ ಅಧಿಕೃತ ಜ್ಞಾಪನದ ಸಂವಿಧಾನ ಬದ್ಧತೆ, ನ್ಯಾಯ ಸಮ್ಮತತೆ ಮತ್ತು ಜಾರಿಗೊಳಿಸುವಿಕೆ ಕುರಿತು 4:2:3ರ ಅನುಪಾತದಂತೆ ಸರಕಾರದ ಜ್ಞಾಪನವನ್ನು 16 ನವೆಂಬರ್, 1992ರಂದು ಎತ್ತಿ ಹಿಡಿಯಿತು.
ಸಂವಿಧಾನ ಪೀಠ ವಿಚಾರಣೆಗಾಗಿ 11 ಪ್ರಶ್ನಾವಳಿಗಳನ್ನು ರೂಪಿಸಿಕೊಂಡು, ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಿದೆ. ಅತಿ ಮುಖ್ಯವಾಗಿ ಲೇಖನಕ್ಕೆ ಸಂಬಂಧಪಟ್ಟ ಹಾಗೆ ಐದನೇ ಪ್ರಶ್ನೆಯನ್ನು ವಿಚಾರಣೆಗೆ ರೂಪಿಸಿದ ರೀತಿ- ‘‘ಹಿಂದುಳಿದ ವರ್ಗಗಳನ್ನು ಮತ್ತಷ್ಟು ‘ಹಿಂದುಳಿದ’ ಮತ್ತು ‘ಹೆಚ್ಚು ಹಿಂದುಳಿದ’ ವರ್ಗಗಳಾಗಿ ವರ್ಗೀಕರಿಸಬಹುದೇ?’’ ಎಂಬುದಾಗಿತ್ತು. ನ್ಯಾಯಪೀಠ ಈ ದಿಸೆಯಲ್ಲಿ ಇತ್ತ ತೀರ್ಪಿನ ಅಂಶಗಳೆಂದರೆ-ಇತರ ಹಿಂದುಳಿದ ವರ್ಗಗಳಲ್ಲಿ ಹೆಚ್ಚು ಹಿಂದುಳಿದವರು ಉದ್ದೇಶಿಸಿರುವ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ಗೆರೆ ಎಲ್ಲಿ ಎಳೆಯಬೇಕು ಮತ್ತು ಉಪ-ವರ್ಗೀಕರಣ ಹೇಗೆ ಪರಿಣಾಮಕಾರಿಯಾಗಿರಬೇಕು ಎಂಬುದು ಮುಖ್ಯ. ಇದು ಆಯೋಗ ಮತ್ತು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಮತ್ತು ಅದನ್ನು ಸಮಂಜಸವಾಗಿ ಮಾಡುವವರೆಗೆ ನ್ಯಾಯಾಲಯವು ಮಧ್ಯ ಪ್ರವೇಶಿಸುವುದಿಲ್ಲ. ಆದ್ದರಿಂದ ಹಿಂದುಳಿದ ವರ್ಗಗಳಲ್ಲಿಯೂ ಸಮರ್ಪಕವಾದ ಆಧಾರದ ಮೇಲೆ ಉಪ -ವರ್ಗೀಕರಣವನ್ನು ಮಾಡಬಹುದು ಎಂದು ಇದೇ ನ್ಯಾಯಾಲಯ 40 ವರ್ಷಗಳ ಹಿಂದಿನ ತನ್ನ ಆದೇಶವನ್ನು ಮರು ಪರಿಶೀಲಿಸಿ ಅದಕ್ಕೆ ಇತಿಶ್ರೀ ಹಾಡಿತು. ಇದೇ ಸಂದರ್ಭದಲ್ಲಿ ಇತ್ತೀಚಿನ ಒಕ್ಕೂಟ ಸರಕಾರಕ್ಕೆ ಸಂಬಂಧಿಸಿದಂತೆ ಹೇಳಬೇಕಾದ ವಿಷಯವೊಂದಿದೆ. ಇದೇ ಕಾರಣಕ್ಕೆ 2017ರಲ್ಲಿ ನ್ಯಾಯಮೂರ್ತಿ ಜಿ. ರೋಹಿಣಿ ಆಯೋಗ ರಚಿಸಿತು.
ನ್ಯಾ. ಜಿ. ರೋಹಿಣಿ ಆಯೋಗ ಕೊನೆಗೂ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಹಿಂದುಳಿದ ವರ್ಗಗಳ ಉಪ-ವರ್ಗೀ ಕರಣದ ವರದಿಯನ್ನು ಒಕ್ಕೂಟ ಸರಕಾರಕ್ಕೆ ನೀಡಿದೆ. ಒಕ್ಕೂಟ ಸರಕಾರಕ್ಕೆ ವರದಿ ಕೈ ಸೇರಿ ಸುಮಾರು ಆರು ತಿಂಗಳೇ ಗತಿಸಿದ್ದರೂ ಕುಂಭಕರ್ಣ ನಿದ್ದೆಯಿಂದ ಒಕ್ಕೂಟ ಸರಕಾರ ಎಚ್ಚರಗೊಂಡಿಲ್ಲ. ಕನಸು-ಮನಸ್ಸಿನಲ್ಲೂ ಅನುಕೂಲ ಸಿಂಧು ರಾಜಕೀಯವನ್ನೇ ಉಸಿರಾಡುವ ಭಾಜಪ ಸರಕಾರ ನ್ಯಾ. ಜಿ. ರೋಹಿಣಿ ಆಯೋಗದ ವರದಿ ಜಾರಿಗೆ ಕೊಡದೆ ಹಿಂದುಳಿದ ವರ್ಗಗಳು ಉಸಿರುಗಟ್ಟುವ ವಾತಾವರಣ ಸೃಷ್ಟಿಸಿ ಬಿಟ್ಟಿದೆ. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಮೇಲ್ಜಾತಿ-ವರ್ಗದ ಮನಸ್ಥಿತಿಯನ್ನು ಹೊಂದಿರುವ ಭಾಜಪಕ್ಕೆ ಇದು ಹೊಸದೇನಲ್ಲ ಬಿಡಿ.
ಸರ್ವೋಚ್ಚ ನ್ಯಾಯಾಲಯದಲ್ಲಿ ಇಂಥದ್ದೊಂದು ಜನಪರ ತೀರ್ಪು ಬಂದದ್ದು ನ್ಯಾಯಾಂಗದಲ್ಲಿ ಚಾರಿತ್ರಿಕ ದಾಖಲೆಯಾಗಿ ಉಳಿದು ಈ ದಿಕ್ಕಿನಲ್ಲಿ ಹಿಂದುಳಿದ ವರ್ಗಗಳ ಆಯೋಗಗಳು ಮತ್ತು ಸರಕಾರಗಳು ರುಜು ಮಾರ್ಗದಲ್ಲಿ ನಡೆದು ಅತ್ಯಂತ ಹಿಂದುಳಿದ ವರ್ಗಗಳ ಕಲ್ಯಾಣದ ಬದುಕಿಗೆ ಬೆಳಕಾಗಲಿ ಎಂದು ಆಶಿಸೋಣ.