ಈ ಅಸ್ತ್ರ ಬಿಜೆಪಿಗೆ ಇನ್ನೂ ಲಾಭ ತಂದು ಕೊಡಲು ಸಾಧ್ಯವೇ?

ಮೋದಿ ಬಳಸಿದ್ದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮತ್ತು ‘ಅಚ್ಛೇ ದಿನ್’ ಎಂಬೆರಡು ಆಕರ್ಷಕ ಸ್ಲೋಗನ್‌ಗಳು ಮಂದಿರ ವಿಚಾರವನ್ನೂ ಮೀರಿ ಮತದಾರರನ್ನು ಸೆಳೆದಿದ್ದವು. ಮೂರು ದಶಕಗಳ ಬಳಿಕ, ಬಿಜೆಪಿ ಮತ್ತು ಸಂಘ ಪರಿವಾರ ಎಲ್ಲಿಂದ ಹೊರಟಿದ್ದವೋ ಅಲ್ಲಿಗೇ ಮತ್ತೆ ಬಂದು ನಿಂತಿವೆ. ಈಗ ಮೂರನೇ ಅವಧಿಯನ್ನು ಗೆಲ್ಲುವ ತಯಾರಿಯಲ್ಲಿರುವ ಮೋದಿ ಹಿಡಿದಿರುವುದು ಅದೇ ಹಳೇ ಅಸ್ತ್ರವನ್ನೇ. ಮಸೀದಿ ಧ್ವಂಸದ ನಂತರ ಜನಾಕರ್ಷಣೆ ಇಲ್ಲವಾಗಿದೆ ಎಂಬ ಭಯದಿಂದ ಯಾವುದನ್ನು ಅಡ್ವಾಣಿಯವರ ಬಿಜೆಪಿ ಕೈಬಿಟ್ಟಿತ್ತೋ ಅದೇ ವಿಷಯವನ್ನು ಈಗ ಮೋದಿ ನಾಯಕತ್ವದ ಬಿಜೆಪಿ ಮತ್ತೆ ಕೈಗೆತ್ತಿಕೊಂಡಿದೆ.

Update: 2024-01-24 05:56 GMT
Editor : jafar sadik | Byline : ವಿನಯ್ ಕೆ.

Photo: twitter.com/narendramodi

ಮೂರು ದಶಕಗಳ ಹಿಂದೆ ಎಲ್.ಕೆ. ಅಡ್ವಾಣಿ ಪ್ರಾರಂಭಿಸಿದ ರಥ ಯಾತ್ರೆ ಸೋಮವಾರ ರಾಮ ಮಂದಿರ ಉದ್ಘಾಟನೆಯವರೆಗೆ ಬಂದು ತಲುಪಿದೆ. ಆಗ ಯಾತ್ರೆಯಲ್ಲಿ ಅಡ್ವಾಣಿಯ ಹಲವು ಸಹಾಯಕರಲ್ಲಿ ಒಬ್ಬರಾಗಿದ್ದ ನರೇಂದ್ರ ಮೋದಿ ಈಗ ಸ್ವತಃ ಆ ರಾಮ ಮಂದಿರದ ಉದ್ಘಾಟನೆ ನೆರವೇರಿಸಿದ್ದಾರೆ. ಇವತ್ತು ಇಡೀ ದೇಶದಲ್ಲಿ ಅವರೇ ಹಿಂದುತ್ವದ ಪರಮೋಚ್ಚ ನಾಯಕರಾಗಿದ್ದಾರೆ. ಅಲ್ಲದೆ ರಾಮ ಮಂದಿರದ ಹೆಸರಲ್ಲೇ ಮೋದಿ ಈಗ ಇನ್ನೊಂದು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಅದು ಸಾಧ್ಯವಾಗಲಿದೆಯೇ ?

ವಿಕಾಸ, ವಿಶ್ವಾಸ, ಅಚ್ಛೇ ದಿನ್, ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಆಡಳಿತ ಎಂದೆಲ್ಲ ಅಧಿಕಾರಕ್ಕೆ ಬಂದ ಮೋದಿಯವರಿಗೆ ದಶಕದ ಕಾಲ ಪ್ರಚಂಡ ಬಹುಮತದ ಅಧಿಕಾರ ಸಿಕ್ಕಿತ್ತು. ಆದರೆ ಈಗ ಇನ್ನೊಂದು ಚುನಾವಣೆ ಸಮೀಪಿಸುವಾಗ ಅವರು ಎಲ್ಲವನ್ನೂ ಬಿಟ್ಟು ಮತ್ತೆ ಮಂದಿರ ವಿಷಯವನ್ನು ನೆಚ್ಚಿಕೊಳ್ಳಬೇಕಾಗಿ ಬಂದಿರುವುದು ಒಂದು ವಿಪರ್ಯಾಸವಾಗಿದೆ.

ದೇಶದಲ್ಲಿ ತಾವು ಅಧಿಕಾರಕ್ಕೆ ಬಂದ ನಂತರ ಎಷ್ಟು ಉದ್ಯೋಗ ಸೃಷ್ಟಿ ಮಾಡಲಾಗಿದೆೆ?, ರೈತರ ಆದಾಯ ಎಷ್ಟು ಹೆಚ್ಚಿಸಲಾಗಿದೆ?, ಬೆಲೆ ಏರಿಕೆ ನಿಯಂತ್ರಿಸಲಾಗಿದೆ ಎಂದು ಹೇಳುವ ಬದಲಿಗೆ ‘‘ನಾವು ಮಂದಿರ ನಿರ್ಮಿಸಿದ್ದೇವೆ’’ ಎಂದು ಹೇಳಿಕೊಂಡು ಚುನಾವಣೆ ಗೆಲ್ಲಲು ಹೊರಟಿದ್ದಾರೆ ಮೋದಿ ಹಾಗೂ ಬಿಜೆಪಿ. ಅದರಲ್ಲಿ ಅವರು ಯಶಸ್ವಿಯಾದಾರೇ?

೧೯೯೨ರಲ್ಲಿ ಬಾಬರಿ ಮಸೀದಿ ಉರುಳಿದ ಬೆನ್ನಿಗೇ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿ ಸೋತಿತ್ತು. ಆನಂತರ ರಾಷ್ಟ್ರ ರಾಜಕಾರಣದಲ್ಲಿ ಅಡ್ವಾಣಿಯೂ ಬದಿಗೆ ಸರಿದು ಎಲ್ಲರಿಗೂ ಒಪ್ಪಿಗೆಯಾಗುವ ವಾಜಪೇಯಿ ಕೇಂದ್ರ ಸ್ಥಾನಕ್ಕೆ ಬರಬೇಕಾಯಿತು. ಈಗ ಮೋದಿ ಮಂದಿರವನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ?

೧೯೯೨ರ ಡಿಸೆಂಬರ್ ೬ರಂದು ಬಾಬರಿ ಮಸೀದಿ ಧ್ವಂಸವಾದ ಕೂಡಲೇ ರಾಮ ಜನ್ಮ ಭೂಮಿ ಆಂದೋಲನ ದೊಡ್ಡ ತಿರುವು ಪಡೆದುಕೊಂಡಿತು. ಆವರೆಗೆ ಬಿಜೆಪಿಗೆ ಭಾರೀ ರಾಜಕೀಯ ಲಾಭ ತಂದು ಕೊಟ್ಟ ಆಂದೋಲನ ಮಸೀದಿ ಧ್ವಂಸದಿಂದಾಗಿ ಕಳಂಕ ಹಚ್ಚಿಬಿಟ್ಟಿತು. ಅಡ್ವಾಣಿ ದೇಶದ ರಾಜಕೀಯ ವಿಲನ್ ಆಗಿ ಬಿಂಬಿತರಾದರು.

ಆದರೆ ಅಡ್ವಾಣಿ ರಥಯಾತ್ರೆ ಮಾಡಿದ್ದಷ್ಟೇ ಬಂತು. ಅವರು ಪ್ರಧಾನಿಯಾಗುವುದು ಸಾಧ್ಯವಾಗಲಿಲ್ಲ. ಪಕ್ಷದೊಳಗೆ ನಿಧಾನವಾಗಿ ಅವರು ಬದಿಗೆ ಸರಿಸಲ್ಪಟ್ಟರು. ಮೋದಿ ಮುನ್ನೆಲೆಗೆ ಬರುತ್ತಿದ್ದಂತೆ ಅಡ್ವಾಣಿಯವರನ್ನು ಪೂರ್ತಿಯಾಗಿ ಮೂಲೆಗುಂಪು ಮಾಡಲಾಯಿತು. ತಾನು ರಾಜಕೀಯವಾಗಿ ರಕ್ಷಿಸಿದ ಶಿಷ್ಯನಿಂದಲೇ ಸಾರ್ವಜನಿಕವಾಗಿಯೂ ಕಡೆಗಣನೆಗೆ ಒಳಗಾಗುವ ಸಂದರ್ಭವನ್ನೂ ನೋಡಬೇಕಾದ ಸ್ಥಿತಿ ಅಡ್ವಾಣಿ ಅವರಿಗೆ ಬಂತು.

ಅದೇ ಅಡ್ವಾಣಿ ಒಂದು ಕಾಲದಲ್ಲಿ ಬಳಸಿದ್ದ ಅಸ್ತ್ರವನ್ನೇ ಈಗ ಮೋದಿ ತೆಗೆದುಕೊಂಡಿದ್ದಾರೆ. ಈಗಲೂ ಅದರ ಅಲಗನ್ನೇ ಅವರು ತಮ್ಮ ರಾಜಕೀಯ ಕದನದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಅದರ ಹರಿತ ಇನ್ನೂ ಅವರಿಗೆ ಚುನಾವಣಾ ಲಾಭ ತಂದುಕೊಡುವಷ್ಟು ಉಪಯುಕ್ತವಾಗಿ ಉಳಿದಿದೆಯೇ?

ಈ ಪ್ರಶ್ನೆಗೆ ಉತ್ತರವನ್ನು ಯೋಚಿಸುವುದಕ್ಕೆ ಮೊದಲು, ಮರೆತೇಹೋಗಿದ್ದ ರಾಮಮಂದಿರ ವಿಷಯವನ್ನು ಬಿಜೆಪಿ ಮತ್ತೆ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುವಂತೆ ಜೀವಂತವಾಗಿಸಿದ್ದು ಹೇಗೆ ಎಂಬುದನ್ನು ಗಮನಿಸಬೇಕು.

೨೦೧೪ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಬ್ಬರಿಸಿತ್ತು. ಆದರೆ ಮಂದಿರದ ವಿಷಯದಲ್ಲೇನೂ ಹೇಳಿಕೊಳ್ಳುವಂಥ ಬದಲಾವಣೆ ಕಂಡಿರಲಿಲ್ಲ.

ಮೋದಿ ಬಳಸಿದ್ದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮತ್ತು ‘ಅಚ್ಛೇ ದಿನ್’ ಎಂಬೆರಡು ಆಕರ್ಷಕ ಸ್ಲೋಗನ್‌ಗಳು ಮಂದಿರ ವಿಚಾರವನ್ನೂ ಮೀರಿ ಮತದಾರರನ್ನು ಸೆಳೆದಿದ್ದವು. ಮೂರು ದಶಕಗಳ ಬಳಿಕ, ಬಿಜೆಪಿ ಮತ್ತು ಸಂಘ ಪರಿವಾರ ಎಲ್ಲಿಂದ ಹೊರಟಿದ್ದವೋ ಅಲ್ಲಿಗೇ ಮತ್ತೆ ಬಂದು ನಿಂತಿವೆ. ಈಗ ಮೂರನೇ ಅವಧಿಯನ್ನು ಗೆಲ್ಲುವ ತಯಾರಿಯಲ್ಲಿರುವ ಮೋದಿ ಹಿಡಿದಿರುವುದು ಅದೇ ಹಳೇ ಅಸ್ತ್ರವನ್ನೇ.

ಮಸೀದಿ ಧ್ವಂಸದ ನಂತರ ಜನಾಕರ್ಷಣೆ ಇಲ್ಲವಾಗಿದೆ ಎಂಬ ಭಯದಿಂದ ಯಾವುದನ್ನು ಅಡ್ವಾಣಿಯವರ ಬಿಜೆಪಿ ಕೈಬಿಟ್ಟಿತ್ತೋ ಅದೇ ವಿಷಯವನ್ನು ಈಗ ಮೋದಿ ನಾಯಕತ್ವದ ಬಿಜೆಪಿ ಮತ್ತೆ ಕೈಗೆತ್ತಿಕೊಂಡಿದೆ.ರಾಮಮಂದಿರ ಉದ್ಘಾಟನೆ ಮೂಲಕ ದೇಶವನ್ನೇ ರಾಮಮಯ ಹಾಗೂ ಮೋದಿಮಯವಾಗಿಸಲಾಗಿದೆ. ಮಸೀದಿ ಧ್ವಂಸದಿಂದಾಗಿ ಅಡ್ವಾಣಿಯವರ ಬಿಜೆಪಿ ರಾಜಕೀಯವಾಗಿ ಬೇರೆ ಪಕ್ಷಗಳ ಪಾಲಿಗೆ ಅಸ್ಪಶ್ಯವಾದರೆ, ಈಗ ಪರಿಸ್ಥಿತಿ ಹಾಗಿಲ್ಲ. ಈಗ ಆಕ್ರಮಣಕಾರಿ ಹಿಂದುತ್ವವೇ ದೊಡ್ಡ ರಾಜಕೀಯ ಶಕ್ತಿ ಎಂಬಂತಾಗಿದೆ.

ಕಳೆದೊಂದು ದಶಕದಲ್ಲಿ ದೇಶದಲ್ಲಿ ಅಂತಹದೊಂದು ರಾಜಕೀಯ ವಾತಾವರಣವನ್ನು ನಿರ್ಮಿಸುವಲ್ಲಿ ಬಿಜೆಪಿ ಹಾಗೂ ಮೋದಿ ಭಾರೀ ಯಶಸ್ಸು ಕಂಡಿದ್ದಾರೆ. ಬಿಜೆಪಿಯಲ್ಲೀಗ ಅಗ್ರೆಸಿವ್ ಹಿಂದುತ್ವದ ಮಾತಾಡುವವರಿಗೇ, ದ್ವೇಷ ಭಾಷಣ ಮಾಡುವವರಿಗೇ ಮನ್ನಣೆ ಸಿಗುತ್ತಿದೆ. ಇದು ಅಡ್ವಾಣಿ ಹಾಗೂ ಮೋದಿ ಕಾಲದ ಬಿಜೆಪಿಗೆ ಇರುವ ಬಹುದೊಡ್ಡ ವ್ಯತ್ಯಾಸ.

ರಾಮಮಂದಿರ ಉದ್ಘಾಟನೆಯನ್ನು ರಾಮಮಂದಿರ ಟ್ರಸ್ಟ್, ಬಿಜೆಪಿ, ಆರೆಸ್ಸೆಸ್, ವಿಎಚ್‌ಪಿ ಇತ್ಯಾದಿ ಒಟ್ಟಾರೆ ಸಂಘ ಪರಿವಾರ ನಿರ್ವಹಿಸಿದೆ. ಆದರೆ ಚುನಾವಣೆಯನ್ನು ಗೆಲ್ಲುವ ವಿಚಾರದಲ್ಲಿ ಅವರೆದುರು ಈಗಿರುವ ಈ ಸವಾಲು ಅಷ್ಟೇ ಸುಲಭದ್ದೇನೂ ಅಲ್ಲ.

ಒಂದು ಅಂಶವಂತೂ ಸ್ಪಷ್ಟವಾಗಿ ಗಮನಕ್ಕೆ ಬರುತ್ತಿದೆ.

ಎಷ್ಟೇ ಬಣ್ಣಬಣ್ಣದ ಪ್ರಚಾರವನ್ನು ಮೋದಿ ಸರಕಾರ ಮಾಡುತ್ತಿದ್ದರೂ, ೩ನೇ ಅತಿದೊಡ್ಡ ಆರ್ಥಿಕತೆ, ೫, ೧೦, ೩೦ ಟ್ರಿಲಿಯನ್ ಡಾಲರ್ ಕಥೆಗಳನ್ನೆಲ್ಲ ಹೇಳುತ್ತಾ, ಮಡಿಲ ಮೀಡಿಯಾಗಳ ಮೂಲಕ ಅಬ್ಬರದ ಪ್ರಚಾರ ಮಾಡುತ್ತಿದ್ದರೂ ಒಳಗೊಳಗೇ ಮೋದಿಯವರಿಗೆ ಭಯ ಶುರುವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ, ಆದಾಯ ಇಳಿಕೆಯಂತಹ ಗಂಭೀರ ಸಮಸ್ಯೆಗಳು ಎಲ್ಲಿ ಸಮಸ್ಯೆಯಾಗಲಿದೆಯೋ ಎಂಬ ಶಂಕೆ ಅವರನ್ನೂ ಅವರ ಬಿಜೆಪಿಯನ್ನೂ ಆವರಿಸಿರುವ ಹಾಗಿದೆ.

ಹಾಗಾಗಿಯೇ ರಾಮಮಂದಿರ ಉದ್ಘಾಟನೆಯನ್ನು ಅಬ್ಬರದಿಂದ ಮಾಡುವ ಮೂಲಕ, ಜನರೆಲ್ಲ ರಾಮ ಭಜನೆಯಲ್ಲಿ ಮೈಮರೆತಂತಿರು ವುದನ್ನು ಕಂಡು ತಮ್ಮೊಳಗೇ ಇರುವ ಭಯವನ್ನು ಅಡಗಿಸಿಕೊಳ್ಳಲು ಯತ್ನಿಸುತ್ತಿರುವ ಹಾಗಿದೆ.

ಇದರ ನಡುವೆಯೇ, ಅಡ್ವಾಣಿ ಕಾಲದ ಬಿಜೆಪಿಯ ಮುಸ್ಲಿಮ್ ದ್ವೇಷವನ್ನು, ರಾಮಮಂದಿರದ ಮೂಲಕ ಹಿಂದುತ್ವದ ಅಬ್ಬರದ ಪ್ರದರ್ಶನವನ್ನು ಅದರ ಮರುಹುಟ್ಟು ಎಂಬಂತೆ ಬಿಂಬಿಸುವ ಹೊಸ ತಂತ್ರ ಜೋಡಿಸಿಕೊಳ್ಳಲಾಗಿದೆ. ಹಾಗಾಗಿಯೇ, ರಾಮಮಂದಿರ ಉದ್ಘಾಟನೆಯನ್ನು ಎರಡನೇ ದೀಪಾವಳಿ ಎಂಬಂತೆ ಬಿಂಬಿಸಲಾಯಿತು.

ಇದರಲ್ಲಿ ಮಡಿಲ ಮೀಡಿಯಾಗಳ, ಸೋಷಿಯಲ್ ಮೀಡಿಯಾ ಯೋಧರ ಹಾಗೂ ಐಟಿ ಸೆಲ್‌ನ ಹಗಲು ರಾತ್ರಿಯ ನಿರಂತರ ಸೇವೆ ಕೂಡ ಸೇರಿಕೊಂಡಿದೆ.

ಅಡ್ವಾಣಿ ಬಾಬರಿ ಮಸೀದಿಯನ್ನು, ಹಿಂದೂಗಳ ಮೇಲೆ ಮೊಗಲರ ಅಂದರೆ ಮುಸ್ಲಿಮರ ದಬ್ಬಾಳಿಕೆಯ ಪ್ರತೀಕ ಎಂದು ಬಿಂಬಿಸಿ ಯಾತ್ರೆ ಹೊರಟರೆ, ಈಗ ಮೋದಿಯವರು ಹೊಸ ರಾಮ ಮಂದಿರವನ್ನು, ಹಿಂದೂ ಪುನರುತ್ಥಾನ ಎಂಬಂತೆ ಬಿಂಬಿಸಿ ಹೊಸ ರಾಜಕೀಯ ಮೈಲೇಜ್ ಪಡೆಯಲು ಹೊರಟಿದ್ದಾರೆ. ಹಿಂದೂಗಳಿಗೆ ನೀಡಲಾಗಿದ್ದ ದೊಡ್ಡ ಭರವಸೆಯನ್ನು ಮೋದಿ ನೇತೃತ್ವದಲ್ಲಿ, ಮೋದಿ ಆಡಳಿತದಲ್ಲಿ ಪೂರೈಸಿದ್ದೇವೆ ಎಂಬಂತೆ ಭರ್ಜರಿ ಪ್ರಚಾರ ನಡೆಯುತ್ತಿದೆ.

ಇವೆಲ್ಲದರ ನಡುವೆಯೂ ಹಿಂದೂಗಳಲ್ಲೇ ಇದು ಕೆಲವರ ವಿರೋಧಕ್ಕೂ ಕಾರಣವಾಗಿದೆ. ಅಡ್ವಾಣಿ ಕಾಲದಲ್ಲಿ ಮಂದಿರ ವಿಚಾರ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವ ಕೆಲಸ ಮಾಡಿದ್ದರೆ, ಮೋದಿ ರಾಜಕಾರಣ ಈಗ ಹಿಂದೂ-ಮುಸ್ಲಿಮರ ನಡುವಿನ ವಿಭಜನೆಯ ಜೊತೆಗೇ ಹಿಂದೂ ಧಾರ್ಮಿಕ ಮುಖಂಡರು ಮತ್ತು ಸಂತರ ನಡುವೆಯೂ ವಿಭಜನೆಗೆ ಕಾರಣವಾಗಿದೆ.

ನಾಲ್ಕೂ ಶಂಕರಾಚಾರ್ಯರ ಪೀಠಗಳ ಮಠಾಧೀಶರು ಪಾಲ್ಗೊಳ್ಳಲಿಲ್ಲ. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿಂದೂ ಶಾಸ್ತ್ರಕ್ಕೆ ವಿರುದ್ಧವಾಗಿದೆ ಎಂದು ಈ ಮಠಾಧೀಶರು ಹೇಳಿದ್ದಾರೆ. ಬಹಳ ದೊಡ್ಡ ಸ್ಥಾನದಲ್ಲಿರುವವರು ಮಾಡಿರುವ ಗಂಭೀರ ಆರೋಪವಿದು.

ಅಲ್ಲದೆ ಈ ಕಾರ್ಯಕ್ರಮ ರಾಜಕೀಯ ಒಡಕನ್ನೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಸಿದೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು.

ಆದರೆ ಈ ಯಾವ ವಿರೋಧವನ್ನೂ ಮೋದಿ ಲೆಕ್ಕಿಸಿದಂತಿಲ್ಲ.

ಪ್ರತಿಪಕ್ಷಗಳನ್ನು ಅವು ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದಕ್ಕೆ ಹಿಂದೂ ವಿರೋಧಿ ಎಂದು ಜರೆಯಲಾಗಿದೆ. ಹಾಗೆಯೇ, ಶಂಕರಾಚಾರ್ಯರ ಟೀಕೆಯನ್ನು ಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ವಿಎಚ್‌ಪಿ ನಾಯಕ ಚಂಪತ್ ರಾಯ್ ತಳ್ಳಿಹಾಕಿದ್ದಾರೆ.

ಮೋದಿಯವರ ಧೈರ್ಯವೆಂದರೆ, ಈ ಎಲ್ಲ ಅಪಸ್ವರಗಳ ಹೊರತಾಗಿಯೂ, ರಾಮ ಮಂದಿರ ಉದ್ಘಾಟನೆಯಿಂದ ‘ದೇಶದ ಹಿಂದೂಗಳಿಗೆ’ ಖುಷಿಯಾಗಿದೆ ಎಂಬುದು.

ರಾಮಮಂದಿರ ಮೋದಿಯವರ ಗ್ಯಾರಂಟಿಗೆ ಒಂದು ಉದಾಹರಣೆಯಾಗಿದೆ. ಜೊತೆಗೆ ಇತ್ತೀಚೆಗೆ ಶುರು ಮಾಡಿರುವ ಮೋದಿ ಕೀ ಗ್ಯಾರಂಟಿಯ ಇಂತಹ ಕೆಲವು ಯೋಜನೆಗಳೂ ಲಾಭ ಮಾಡಬಹುದು ಎಂಬ ನಿರೀಕ್ಷೆ ಅವರಿಗಿದೆ.

ಈಗ ಇನ್ನೂ ಎರಡು ಮಸೀದಿಗಳ ವಿಚಾರವಾಗಿ ಬಿಜೆಪಿ ಇಂಥದೇ ನಡೆಯನ್ನು ಅನುಸರಿಸುತ್ತಿದೆ. ಒಂದು ಮಥುರಾದ ಶಾಹಿ ಈದ್ಗಾ ಮತ್ತು ಇನ್ನೊಂದು ವಾರಣಾಸಿಯ ಜ್ಞಾನವಾಪಿ ಮಸೀದಿ.

ಇವೆಲ್ಲವೂ ಚುನಾವಣೆಯವರೆಗೂ ಹಿಂದುತ್ವದ ಇದೇ ಅಲೆಯನ್ನು ಕಾಯ್ದುಕೊಂಡು ಹೋಗುವ ಅವರ ತಂತ್ರವಾಗಿದೆ. ಯಾಕೆಂದರೆ ಜನ ಹಿಂದುತ್ವ, ಮಂದಿರ ವಿಷಯವನ್ನು ಮರೆತರೆ ಕಷ್ಟ ಎಂಬ ಅರಿವಿದೆ ಅವರಿಗೆ.

ಆದರೆ, ನಿಜವಾಗಿಯೂ ಚುನಾವಣೆ ಬರುವವರೆಗೂ ಇದೇ ಹಿಂದುತ್ವದ ಉನ್ಮಾದ ಉಳಿದೀತೆ? ಎಂಬುದೇ ಪ್ರಶ್ನೆ.

೧೦ ವರ್ಷಗಳ ಹಿಂದೆ ಕೊಟ್ಟ ಭರವಸೆಗಳನ್ನು ಈಡೇರಿಸದ ಮೋದಿಯ ವೈಫಲ್ಯವನ್ನು, ಉದ್ಯೋಗಗಳಿಲ್ಲದ ಹತಾಶೆಯನ್ನು, ಬೆಲೆಯೇರಿಕೆಯ ಬಿಸಿಯನ್ನು, ಆರ್ಥಿಕ ರಂಗದಲ್ಲಿನ ವಿಫಲತೆಗಳನ್ನು, ಒಟ್ಟಾರೆ ಮೋದಿ ಸರಕಾರದ ಕಳೆದೊಂದು ದಶಕದ ಅಸಮರ್ಥತೆಯನ್ನು ಜನ ಸಂಪೂರ್ಣ ಮರೆತುಬಿಡುವರೇ? ಎಲ್ಲರೂ ರಾಮ ಮಂದಿರ ಒಂದನ್ನೇ ನೋಡಿ ಮತ ಹಾಕುವರೇ?

ಬಹುಶಃ ಅದು ಅಷ್ಟು ಸುಲಭವಿಲ್ಲ.

ಜನರೇನು ತೀರ್ಮಾನ ಕೊಡಲಿದ್ದಾರೆ ಎಂಬುದನ್ನು ತಿಳಿಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗಿದೆ.

ಆದರೆ, ಜನರು ೧೦ ವರ್ಷಗಳ ಭಾರೀ ಬಹುಮತದ ಸರಕಾರ ಕೊಟ್ಟರೂ, ಅವರಿಗಾಗಿ ತಾನು ಹೇಳಿದ್ದನ್ನು ಏನನ್ನೂ ಮಾಡದೆ, ಚುನಾವಣೆ ಬಂದಾಗೆಲ್ಲ ಧಾರ್ಮಿಕತೆ, ರಾಷ್ಟ್ರೀಯತೆ ಹಾಗೂ ರಾಷ್ಟ್ರೀಯ ಸುರಕ್ಷತೆಯ ವಿಚಾರವನ್ನು ಮುಂದೆ ಮಾಡಿ ಆಟವಾಡುವುದೇ ಮೋದಿ ರಾಜಕೀಯಕ್ಕೆ ಅನಿವಾರ್ಯ ವಾಗಿಬಿಟ್ಟಿದೆ ಎಂಬುದೇ ಅತ್ಯಂತ ಶೋಚನೀಯ ವಿಚಾರ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಿನಯ್ ಕೆ.

contributor

Similar News