ಅನುದಾನದ ಹೆಸರಲ್ಲಿ ಅಲ್ಪಸಂಖ್ಯಾತರಿಗೆ ಮೋಸ

Update: 2024-01-09 06:06 GMT

ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸಣ್ಣಪುಟ್ಟ ವಿಚಾರಗಳಿಗೂ ಚರ್ಚೆಗೊಳಪಡುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಇಲಾಖೆಗೆ 10 ಸಾವಿರ ಕೋಟಿ ರೂ. ವರೆಗೂ ಅನುದಾನ ಕೊಡಲಾಗುವುದು ಎಂದು ಹೇಳಿದಾಗ, ವಿರೋಧ ಪಕ್ಷದಲ್ಲಿನ ನಾಯಕರು ಸಮರೋಪಾದಿಯಲ್ಲಿ ರಾಜ್ಯ ಸರಕಾರವು ಮುಸ್ಲಿಮರ ತುಷ್ಟೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಆದರೆ ವಾಸ್ತವದಲ್ಲಿ 2023-24ನೇ ಸಾಲಿಗಾಗಿ ನೀಡಲಾದ 2,101 ಕೋಟಿ ರೂ. ಅನುದಾನದಲ್ಲಿ ಇಂದಿನವರೆಗೆ ಶೇ. 10ರಷ್ಟೂ ಖರ್ಚಾಗದಂತಹ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಆರ್ಥಿಕ ವರ್ಷದ ಕೊನೆಯ ಅವಧಿಗೆ ತಲುಪಿದರೂ ಇಲಾಖೆಯಿಂದ ಕೇವಲ ಶೇ. 10ರಷ್ಟು ಅನುದಾನ ಮಾತ್ರ ಖರ್ಚಾಗಿದೆ ಎಂದರೆ ಸರಕಾರವು ನಿಜವಾಗಲೂ ನುಡಿದಂತೆ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ರಾಜ್ಯ ಸರಕಾರವು ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿಲ್ಲ ಬದಲಿಗೆ ಅಲ್ಪಸಂಖ್ಯಾತರಿಗೆ ಅನುದಾನದ ಹೆಸರಲ್ಲಿ ಮೋಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಸಮರ್ಥತೆಗೆ ಕಾರಣವೇನೆಂಬುದು ಅಹಿಂದ ನಾಯಕರಾದ ಸಿದ್ದರಾಮಯ್ಯನವರೇ ಹೇಳಬೇಕು. ತಮ್ಮ ಅಚ್ಚುಮೆಚ್ಚಿನ ಶಿಷ್ಯ, ಅಲ್ಪಸಂಖ್ಯಾತ ಸಮುದಾಯದ ಸ್ವಘೋಷಿತ ನಾಯಕ ಝಮೀರ್ ಅಹ್ಮದ್ ಖಾನ್ ಅವರು ತಮ್ಮ ಇಲಾಖೆಯನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಖುದ್ದಾಗಿ ಮತ್ತೊಮ್ಮೆ ಕೂಲಂಕಶವಾಗಿ ಪರಿಶೀಲಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಎನ್ನುವುದು ಈ ಸರಕಾರದಲ್ಲಿ ಕೇವಲ ನಾಮಕಾವಾಸ್ಥೆ ಎನ್ನುವ ಸ್ಥಿತಿಗೆ ತಲುಪಿದೆ. ಹಿಂದಿನ ಬಿಜೆಪಿ ಸರಕಾರವು ಈ ಇಲಾಖೆಯ ಅನುದಾನವನ್ನು ಕಡಿತಗೊಳಿಸಿದರೂ ಕೊಟ್ಟ ಅನುದಾನ ಖರ್ಚಾಗಿ ಅಲ್ಪಸ್ವಲ್ಪ ಪ್ರಗತಿಯಾದರೂ ಆಗುತ್ತಿತ್ತು, ಆದರೆ ಈ ಸರಕಾರದಲ್ಲಿ ಒಂದು ಕೈಯಿಂದ ಅನುದಾನ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುವ ಕಾರ್ಯವಾಗುತ್ತಿದೆ ಎನ್ನಿಸುತ್ತಿದೆ.

ಸಿದ್ದರಾಮಯ್ಯನವರು 2023-24ನೇ ಸಾಲಿಗಾಗಿ ರಾಜ್ಯದ 62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ (ವಿಜ್ಞಾನ ಮತ್ತು ವಾಣಿಜ್ಯ)ಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಉಪನ್ಯಾಸಕರನ್ನು(ಅತಿಥಿ) ನೇಮಿಸಿಕೊಳ್ಳಲು ಅನುಮತಿ ನೀಡಿಲ್ಲ, ಇದರಿಂದ ಅಲ್ಲಿ ಪ್ರವೇಶ ಪಡೆದಂತಹ ವಿದ್ಯಾರ್ಥಿಗಳ ಜೊತೆಗೆ ಸರಕಾರ ಚೆಲ್ಲಾಟವಾಡಿದಂತಿದೆ. ಇಲಾಖೆಯಲ್ಲಿ ಎಂತಹ ಬುದ್ಧಿವಂತ ಅಧಿಕಾರಿಗಳು ಇದ್ದಾರೆ ಎಂದರೆ ವಿಜ್ಞಾನ/ವಾಣಿಜ್ಯ ಪ್ರತೀ ವಿಭಾಗದಲ್ಲಿ ಕೇವಲ ಮೂರು ವಿಷಯಗಳ ಉಪನ್ಯಾಸಕರನ್ನು(ಅತಿಥಿ) ಮಾತ್ರ ನೇಮಿಸಿಕೊಳ್ಳಲು ಸೂಚನೆ ನೀಡಲಾಗಿದೆ, ಅಂದರೆ ಅಲ್ಲಿ ಪ್ರವೇಶ ಪಡೆದಂತಹ ಮಕ್ಕಳು ಉಳಿದ ಮೂರು ವಿಷಯಗಳನ್ನು ತಾವೇ ಓದಿಕೊಳ್ಳಬೇಕೆ? ಕನಿಷ್ಠ ಆರು ವಿಷಯಗಳಿಗೆ ಉಪನ್ಯಾಸಕರನ್ನು ನೀಡಲು ಸಾದ್ಯವಾಗದೆ ಇದ್ದರೆ, ಆ ಕಾಲೇಜುಗಳನ್ನು ಪ್ರಾರಂಭ ಮಾಡುವ ಉದ್ದೇಶವಾದರೂ ಏತಕ್ಕೆ?. ಉಪನ್ಯಾಸಕರೇ ಇಲ್ಲದ ಕಾಲೇಜುಗಳಲ್ಲಿ ಓದುವ ದುಸ್ಥಿತಿ ಬಡ ಅಲ್ಪಸಂಖ್ಯಾತರ ಮಕ್ಕಳಿಗೆ ಮಾತ್ರವೇ? ಎಂಬ ಪ್ರಶ್ನೆಗೆ ಸಿದ್ದರಾಮಯ್ಯನವರೇ ಉತ್ತರಿಸಬೇಕಿದೆ.

ಅದೇ ರೀತಿ ಸಿದ್ದರಾಮಯ್ಯನವರ ಸರಕಾರ 2023-24ನೇ ಸಾಲಿಗಾಗಿ ರಾಜ್ಯದ 50 ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ಸಂಖ್ಯೆಯನ್ನು ದ್ವಿಗುಣಗೊಳಿಸಿ ಆದೇಶಿಸಿದೆ, ಅದರಂತೆ ಮಕ್ಕಳ ಪ್ರವೇಶವನ್ನು ಪಡೆಯಲಾಗಿದೆ. ಆದರೆ, ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮೋದನೆ ನೀಡಿ ಮೂರು ತಿಂಗಳು ಗತಿಸಿದರೂ ಇಲ್ಲಿಯವರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸರಕಾರಿ ಆದೇಶ ಮಾಡಿಲ್ಲ, ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುತ್ತಿದೆ, ಇದಕ್ಕೆ ಹೊಣೆ ಯಾರು? ಆದೇಶ ಮಾಡಲು ಇರುವ ಸಮಸ್ಯೆಯಾದರೂ ಏನು? ಇದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ? ಅಥವಾ ಅಲ್ಪಸಂಖ್ಯಾತರ ಅಭಿವೃದ್ಧಿಯ ಕುರಿತು ಇರುವ ತಾತ್ಸಾರವೇ? 2023-24ನೇ ಸಾಲಿನಿಂದ ಪ್ರಾರಂಭಿಸುವಂತೆ 10 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸರಕಾರವು ಮಂಜೂರು ಮಾಡಿದೆ ಆದರೆ ಇದು ಶಾಸಕರನ್ನು ತೃಪ್ತಿ ಪಡಿಸುವ ಏಕೈಕ ಉದ್ದೇಶದಿಂದ ಮಾಡಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಏಕೆಂದರೆ ಸರಕಾರ, ಅಲ್ಪಸಂಖ್ಯಾತ ಸಮುದಾಯದ ಜನ ಹೆಚ್ಚಿರುವ ಕಡೆ ವಸತಿ ಶಾಲೆಗಳನ್ನು ಮಂಜೂರು ಮಾಡುವುದು ನ್ಯಾಯ, ಆದರೆ ಅಲ್ಪಸಂಖ್ಯಾತರ ಜನಸಂಖ್ಯೆ ಕಡಿಮೆ ಇರುವ ಕಡೆ ಮಂಜೂರು ಮಾಡುವ ಉದ್ದೇಶವಾದರೂ ಏನು. ಉದಾಹರಣೆಗೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಅಲ್ಪಸಂಖ್ಯಾತರು ಇದ್ದು, ಅಲ್ಲಿ ಈಗಾಗಲೇ ಮೂರು ವಸತಿ ಶಾಲೆಗಳಿವೆ, ಆದರೂ ಈ ವರ್ಷ ಮತ್ತೊಂದು ವಸತಿ ಶಾಲೆ ಮಂಜೂರು ಮಾಡಲಾಗಿದೆ. ಅಲ್ಲಿಯ ಶಾಸಕ ರಾಯರೆಡ್ಡಿಯವರನ್ನು ಸಮಾಧಾನ ಪಡಿಸಲು ವಸತಿ ಶಾಲೆ ನೀಡಲಾಗಿದೆಯೋ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ಶಾಲೆ ನೀಡಬೇಕೋ ಸರಕಾರವೇ ಹೇಳಲಿ.

ಹಿಂದಿನ ಬಿಜೆಪಿ ಸರಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೆ ವಂಚಿಸಲಾಗುತ್ತಿತ್ತು, ಇದರಿಂದ ಸಾಕಷ್ಟು ಮಕ್ಕಳು ಶಿಕ್ಷಣ ತ್ಯಜಿಸುವಂತೆ ಆಗಿದೆ. ಆದರೆ ಈಗಿನ ಸರಕಾರ ತನ್ನ ಪಾಲಿನ 2022-23ನೇ ಶೈಕ್ಷಣಿಕ ಸಾಲಿಗಾಗಿನ ವಿದ್ಯಾರ್ಥಿ ವೇತನ ಇಂದಿನವರೆಗೂ ಬಿಡುಗಡೆ ಮಾಡಿಲ್ಲ, ಇದರಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಕಷ್ಟ ಅನುಭವಿಸುವಂತಾಗಿದೆ, ಅಲ್ಲದೆ ಸಾಕಷ್ಟು ಮಕ್ಕಳು ಶಿಕ್ಷಣ ಮೊಟಕುಗೊಳಿಸಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಮೇಲೂ ಅಲ್ಪಸಂಖ್ಯಾತರ ಒಂದು ಸಮಸ್ಯೆಯೂ ಬಗೆಹರಿದಿಲ್ಲ ಎನ್ನುವುದಾದರೆ, ಹಿಂದಿನ ಸರಕಾರಕ್ಕೂ ಈಗಿನ ಸರಕಾರಕ್ಕೂ ಇರುವ ವ್ಯತ್ಯಾಸವೇನು?

ರಾಜ್ಯದಲ್ಲಿ 100 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 8 ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಗಳು, 21 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳು, 5 ಮುಸ್ಲಿಮ್ ವಸತಿ ಶಾಲೆಗಳು, 200 ಮೌಲಾನಾ ಆಝಾದ್ ಮಾದರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆಯಾಗಿ ಇಷ್ಟೂ ಶಾಲೆಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ದುರದೃಷ್ಟವೋ ಅಥವಾ ಕಾಕತಾಳೀಯವೋ 2023-24ನೇ ಸಾಲಿನಲ್ಲಿ ಈ ಮಕ್ಕಳಿಗೆ ಇಂದಿನವರೆಗೂ ಸರಕಾರ ಸಮವಸ್ತ್ರ ಸರಬರಾಜು ಮಾಡಿರುವುದಿಲ್ಲ, ಅಲ್ಲದೇ ಬೆಡ್, ಕಾಟ್, ಬೆಡ್‌ಶೀಟ್ ಒದಗಿಸಿರುವುದಿಲ್ಲ, ಹಿಂದಿನ ಬಿಜೆಪಿ ಸರಕಾರದಲ್ಲೂ ಇಷ್ಟೊಂದು ವಿಳಂಬವಾಗಿರುವ ಉದಾಹರಣೆ ಇಲ್ಲ. ಲಕ್ಷಾಂತರ ಮಕ್ಕಳಿಗೆ ಸಮವಸ್ತ್ರ ನೀಡದೆ ಇರುವುದು ಒಂದು ಸಮಸ್ಯೆ ಎಂದು ಇಲಾಖೆಗೆ ಅರ್ಥವೇ ಆಗುತ್ತಿಲ್ಲವೆಂಬುದು ವಿಪರ್ಯಾಸ, ಶೈಕ್ಷಣಿಕ ವರ್ಷ ಮುಗಿಯುತ್ತಿರುವ ಈ ಸಂದರ್ಭದಲ್ಲಿ ಸಮವಸ್ತ್ರ ನೀಡಿದರೂ ಅದು ಮಕ್ಕಳಿಗೆ ತಲುಪಲಿದೆಯೇ ಎನ್ನುವುದು ಅನುಮಾನ. ಇಂತಹ ಇಲಾಖೆಗೆ ಸಚಿವರು, ಕಾರ್ಯದರ್ಶಿ, ನಿರ್ದೇಶಕರು, ಜಿಲ್ಲೆಗೊಬ್ಬ ಅಧಿಕಾರಿ, ಕಚೇರಿ, ವಾಹನದ ವ್ಯವಸ್ಥೆ ಇದೆ. ಆದರೆ ಮಕ್ಕಳಿಗೆ ಕನಿಷ್ಠ ಸೌಲಭ್ಯ ಇಲ್ಲ.

ಇಲಾಖೆಯಲ್ಲಿ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಅನುದಾನ ನೀಡಲಾಗುತ್ತಿದೆ, ಜನವರಿ ಬಂದರೂ ಇಲ್ಲಿಯವರೆಗೆ ಆಡಳಿತಾತ್ಮಕ ಆದೇಶ ಮಾಡಲು ಸಾಧ್ಯವಾಗಿಲ್ಲ, ಈಗ ಅನುಮೋದನೆ ನೀಡಿದರೆ, ಇದೇ ಆರ್ಥಿಕ ವರ್ಷದಲ್ಲಿ ಕೆಲಸ ಮಾಡಲು ಸಾಧ್ಯವೇ, ಸಮಯದ ಮಿತಿಯಲ್ಲಿ ಅನುದಾನ ಒದಗಿಸಲು, ಆದೇಶ ಮಾಡಲು ಸಾಧ್ಯವಾಗದೆ ಇದ್ದರೆ ಇಲಾಖೆ ಇದ್ದರೇನು ಉಪಯೋಗ? ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಜನವಿಕಾಸ ಯೋಜನೆ ಜಾರಿಯಲ್ಲಿದೆ. ಹಿಂದೆ ಜಿಲ್ಲಾ ಮಟ್ಟದಲ್ಲಿ/ಬ್ಲಾಕ್ ಮಟ್ಟದಲ್ಲಿ ಸಭೆ ಮೂಲಕ ಪ್ರಸ್ತಾವನೆಗಳನ್ನು ಸ್ವೀಕರಿಸಿ ಯೋಜನೆಗಳ ಅನುಮೋದನೆಗಾಗಿ ಕೇಂದ್ರಕ್ಕೆ ಸಲ್ಲಿಸಲಾಗುತ್ತಿತ್ತು, ಆದರೆ ಈ ವರ್ಷ ಇಲ್ಲಿಯವರೆಗೆ ಆ ಯೋಜನೆಯ ಅನುಷ್ಠಾನ ಏನಾಗಿದೆ ಎಂದು ಜನರಿಗೆ ತಿಳಿಯಲು ಸಾಧ್ಯವಾಗಿಲ್ಲ. ಪ್ರಧಾನ ಮಂತ್ರಿ ಜನವಿಕಾಸ ಯೋಜನೆ ಅಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬಹುದಾಗಿದ್ದರೂ, ಸರಕಾರದ ನಿರ್ಲಕ್ಷ್ಯದಿಂದ ಒಂದು ಜನಪರ ಯೋಜನೆ ಜನರಿಂದ ಮರೆಯಾಗಬಹುದು. ಅದೇ ರೀತಿ ಅಲ್ಪಸಂಖ್ಯಾತರಿಗೆ ಸರಕಾರದ ಯೋಜನೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿ ಎಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿ ರಚನೆ ಮಾಡಬೇಕು, ಆದರೆ ಇಲ್ಲಿಯವರೆಗೆ ಒಂದು ಸಮಿತಿಯೂ ರಚನೆ ಮಾಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ಕಾರ್ಯನಿರ್ವಹಿಸಬೇಕು, ಕಳೆದ ಐದು ವರ್ಷಗಳಲ್ಲಿ ಆ ಸಮಿತಿಯೇ ರಚನೆ ಮಾಡಿರುವುದಿಲ್ಲ, ಇಂತಹ ಸ್ಥಿತಿಯಲ್ಲಿ ಈಗಿನ ಸರಕಾರವಾದರೂ ಆ ಸಮಿತಿಯನ್ನು ರಚನೆ ಮಾಡಿ ತ್ರೈಮಾಸಿಕವಾಗಿ ಪ್ರಗತಿ ಪರಿಶೀಲನೆ ಮಾಡದೇ ಇರುವುದು ರಾಜ್ಯದ ಅಲ್ಪಸಂಖ್ಯಾತರ ದುರಂತವೇ ಸರಿ.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಈ ವರ್ಷ ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ಮೇಲೆ ಇಟ್ಟ ಭರವಸೆಯ ಆಧಾರದಲ್ಲಿ ಲಕ್ಷಾಂತರ ಜನ ವೈಯಕ್ತಿಕ ನೆರವು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಆರ್ಥಿಕ ವರ್ಷದ ಕೊನೆಯ ಅವಧಿಯವರೆಗೆ ಬಂದರೂ ಆ ಅರ್ಜಿಗಳ ಸ್ಥಿತಿಗತಿ ಏನು ಎನ್ನುವದು ಯಾರಿಗೂ ತಿಳಿದಿಲ್ಲ, ಅರ್ಜಿಗಳ ಪರಿಶೀಲನೆ ಆಗಿದೆಯೇ? ಅವುಗಳನ್ನು ಯಾವಾಗ ಆಯ್ಕೆ ಮಾಡಲಾಗುತ್ತದೆ ಎನ್ನುವ ಯಾವ ಮಾಹಿತಿಯೂ ನೀಡದೆ ನಿಗಮ ಮೌನಕ್ಕೆ ಜಾರಿದೆ. ಇನ್ನು ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ನಿರ್ಣಯವೇ ಅಂತಿಮವೆಂದು ಸರಕಾರದ ಆದೇಶವಿದೆ. ಆದರೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಕೆಲವು ಬಿಜೆಪಿ ಶಾಸಕರು ಮುಸ್ಲಿಮರು ಯಾರೂ ನಮ್ಮ ಮನೆಗೆ ಬರಬಾರದೆನ್ನುವ ಫರ್ಮಾನು ಬೇರೆ ಹೊರಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರಕಾರ ಯಾವ ಮಾನದಂಡದಲ್ಲಿ ಶಾಸಕರು ಫಲಾನುಭವಿಗಳ ಪಟ್ಟಿ ಮಾಡಲಿ ಎಂದು ಆದೇಶಿಸಿದೆ ಎನ್ನುವ ಪ್ರಶ್ನೆ ಕಾಡದೆ ಇರುವುದೇ? ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಯೇ ಫಲಾನುಭವಿಗಳ ಪಟ್ಟಿ ತಯಾರಿಸಲು ಅವಕಾಶ ನೀಡಿ ಸರಕಾರ ಆದೇಶಿಸುವುದರ ಮೂಲಕ ಮುಸ್ಲಿಮರು ಈ ಬಿಜೆಪಿ ಶಾಸಕರಿಂದ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಬೇಕು.

ಕಳೆದ ಎರಡು ತಿಂಗಳಿಂದ ರಾಜ್ಯದ ವಕ್ಫ್ ವ್ಯಾಪ್ತಿಯಲ್ಲಿ ಬರುವ ಮಸೀದಿಗಳ ಇಮಾಮ್/ ಮುಅದ್ಸಿನ್‌ಗಳ ಗೌರವಧನ ನೀಡದೆ ತಡೆಹಿಡಿಯಲಾಗಿದೆ, ವಕ್ಫ್ ಸಚಿವರು, ಸಚಿವ ಸಂಪುಟ ಸ್ಥಾನಮಾನದೊಂದಿಗೆ ತಿರುಗುವ ಮಂಡಳಿ ಅಧ್ಯಕ್ಷರು ಇದ್ದರೂ ಈ ಬಡಪಾಯಿ ಇಮಾಮ್/ಮುಅದ್ಸಿನ್‌ಗಳ ಗೌರವಧನ ಬಿಡುಗಡೆ ಮಾಡದೆ ಇರುವುದು ಕ್ರೌರ್ಯದ ಪರಮಾವಧಿ. ಮಂಡಳಿಯ ರಾಜ್ಯ ಕಚೇರಿಯ ಮಾಹಿತಿಯಂತೆ ಸಂಬಂಧಪಟ್ಟ ಸಿಬ್ಬಂದಿ ರಜೆ ಮೇಲಿರುವುದರಿಂದ ಗೌರವಧನ ಬಿಡುಗಡೆಗೆ ತಡವಾಗಿದೆ ಎಂಬ ಸಬೂಬು, ಒಂದು ವೇಳೆ ಆ ಸಿಬ್ಬಂದಿ ನೌಕರಿಗೆ ರಾಜೀನಾಮೆ ನೀಡಿದರೆ, ಆ ಯೋಜನೆಯನ್ನೇ ರದ್ದುಪಡಿಸಬಹುದೇ ಇವರು? ಎಂತಹ ಜಾಣ್ಮೆ ಇವರದ್ದು? ಇದಕ್ಕೆ ಹೊಣೆ ಯಾರು? ಏನಾದರು ಬದಲಾವಣೆ ಮಾಡದೇ ಇದ್ದರೆ, ಆಡಳಿತ ಬದಲಾವಣೆಯಿಂದ ಏನು ಉಪಯೋಗ?

ಸಿದ್ದರಾಮಯ್ಯನವರ ಅಚ್ಚುಮೆಚ್ಚಿನ ಮಂತ್ರಿಗಳಲ್ಲಿ ಒಬ್ಬರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ ಉಸ್ತುವಾರಿ ನೀಡಲಾಗಿದೆ. ಅವರ ನೆರಳಾಗಿ ಸದಾ ತಿರುಗುವ ಈ ಸಚಿವ ತನ್ನ ಇಲಾಖೆಯಲ್ಲಿ ಏನಾಗುತ್ತಿದೆ ಎನ್ನುವ ಮಾಹಿತಿ ಹೊಂದಿಲ್ಲವೋ ಅಥವಾ ಸಿದ್ದರಾಮಯ್ಯನವರೇ ಇಂತಹ ಅಸಮರ್ಥ ವ್ಯಕ್ತಿಯ ಕೈಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಒಪ್ಪಿಸಿ ಮುಸ್ಲಿಮರ ಆರ್ಥಿಕ ಬೆಳವಣಿಗೆಗೆ ಅಡ್ಡಗಾಲಾಗಿದ್ದಾರೋ ಎಂಬ ಪ್ರಶ್ನೆ ಕಾಡದೆ ಇರದು. ಯಾಕೆಂದರೆ, ಮುಸ್ಲಿಮ್ ಅಲ್ಪಸಂಖ್ಯಾತರು ಈ ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಅನಭಿಷಿಕ್ತ ನಾಯಕನೆಂದು ಒಪ್ಪಿಕೊಂಡಿದ್ದಾರೆ. ಅವರಿಂದ ಒಂದಿಷ್ಟು ಒಳ್ಳೆಯ ಆಡಳಿತ ನಿರೀಕ್ಷಿಸಿದ್ದಾರೆ. ಆದರೆ ಸಮುದಾಯದ ಅಭಿವೃದ್ಧಿಯ ಕುರಿತ ಯಾವುದೇ ದೂರದೃಷ್ಟಿಯಿಲ್ಲದ ಝಮೀರ್ ಅಹ್ಮದ್ ಎನ್ನುವ ಅಸಮರ್ಥ ವ್ಯಕ್ತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಸಾಧ್ಯವೇ ಎನ್ನುವ ಪ್ರಶ್ನೆ ಸಮುದಾಯದ ಪ್ರಜ್ಞಾವಂತರಿಗೆ ಕಾಡುತ್ತಿದೆ. ಇಲಾಖೆಯನ್ನು ಸೂಕ್ಷ್ಮವಾಗಿ, ಸಮರ್ಥವಾಗಿ ನಿಭಾಯಿಸಿ ಉತ್ತುಂಗಕ್ಕೆ ತೆಗೆದುಕೊಂಡು ಹೋದ ಹಿಂದಿನ ಅವಧಿಯ ಸಚಿವರಾದ ದಿ. ಖಮರುಲ್ ಇಸ್ಲಾಂ ಹಾಗೂ ಹಾಲಿ ಶಾಸಕ ತನ್ವೀರ್ ಸೇಠ್ ಅವರ ಕುರಿತು ಸಮುದಾಯವು ಇಂದಿಗೂ ಗೌರವದ ಭಾವನೆಯನ್ನು ಹೊಂದಿದೆ. ಆದರೆ ಇಂದು ಇಲಾಖೆಯನ್ನು ಅಧೋಗತಿಗೆ ಒಯ್ಯುತ್ತಿರುವ ಹಾಗೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಇದೇ ಇಲಾಖೆಯ ಚುಕ್ಕಾಣಿ ಹಿಡಿದಿದ್ದ ಝಮೀರ್ ಅಹ್ಮದ್ ಅಂದೂ ವಿದ್ಯಾರ್ಥಿ ವೇತನ ನಿಗದಿತ ಅವಧಿಯಲ್ಲಿ ನೀಡದೆ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸಲು ಕಾರಣವಾಗಿದ್ದರು, ಈಗ ಮತ್ತೆ ಅದೇ ಬೇಜವಾಬ್ದಾರಿತನ, ಮತ್ತದೇ ಪರಿಸ್ಥಿತಿ. ಒಬ್ಬ ನಾಯಕನಿಗೆ ಆದ್ಯತೆ ಯಾವುದೆಂದು ತಿಳಿಯದಿದ್ದರೆ, ಅಂತಹ ನಾಯಕನಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ಈಗಲಾದರೂ ಇಲಾಖೆಯನ್ನು ದಕ್ಷತೆಯಿಂದ ಕೆಲಸ ಮಾಡುವ ರೀತಿಯಲ್ಲಿ ಕ್ರಮ ಜರುಗಿಸುವರೇ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಎಂ. ಎನ್ ಅಹ್ಮದ್

contributor

Similar News