ಬಿಸಿಲ ಬೇಗೆಗೆ ಒಣಗುತ್ತಿವೆ ಕಾಫಿ ಗಿಡ, ಕಾಳುಮೆಣಸು ಬಳ್ಳಿಗಳು
ಮಡಿಕೇರಿ, ಮಾ.5: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ನೆತ್ತಿ ಸುಡುವ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ನಡುವೆ ಬಿಸಿಲ ಬೇಗೆಗೆ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳು ನೀರಿಲ್ಲದೆ ಒಣಗುತ್ತಿವೆ. ಜಿಲ್ಲಾದ್ಯಂತ ಶೇ.95ರಷ್ಟು ಕಾಫಿ ಕೊಯ್ಲು ಪೂರ್ಣಗೊಂಡಿದೆ.ಕಾಳುಮೆಣಸು ಕೊಯ್ಲು ಕೆಲವು ಕಡೆಗಳಲ್ಲಿ ಆರಂಭಗೊಂಡಿದ್ದು, ಪೂರ್ಣಪ್ರಮಾಣದಲ್ಲಿ ಕೊಯ್ಲು ಪ್ರಾರಂಭಗೊಂಡಿಲ್ಲ.
ಬಿಸಿಲಿನ ಬೇಗೆಯಿಂದ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬೆಳೆಗಾರರಿಗೆ ಎದುರಾಗಿದ್ದು, ಸಾವಿರಾರು ರೂ. ಖರ್ಚು ಮಾಡಿ ಮೋಟರ್ ಪಂಪ್ ಬಳಸಿ ಸ್ಪ್ರಿಂಕ್ಲರ್ ಮೂಲಕ ಕಾಫಿ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಕಾಫಿ ಕೊಯ್ಲು ಬಹುತೇಕ ಪೂರ್ಣಗೊಂಡಿದ್ದು, ಬಿಸಿಲಿನ ಝಳಕ್ಕೆ ಕಾಫಿ ಗಿಡಗಳು ಒಣಗುತ್ತಿದ್ದು, ಕೃತಕವಾಗಿ ನೀರು ಹಾಯಿಸಿ ಮುಂದಿನ ವರ್ಷಕ್ಕೆ ಕಾಫಿ ಫಸಲನ್ನು ಬೆಳೆಗಾರರು ಉಳಿಸಲು ಮುಂದಾಗಿದ್ದಾರೆ. ಕೆರೆ, ಬೋರ್‌ವೆಲ್ ನೀರು ಬಳಸಿ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಿರುವುದರಿಂದ ಕಾಫಿ ಹೂವು ಕೂಡ ಅರಳಿವೆ.
ಕಾಳುಮೆಣಸು ಬಳ್ಳಿಗಳಿಗೆ ನೀರು ಅನಿವಾರ್ಯ: ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಹುತೇಕ ಕಡೆಗಳಲ್ಲಿ ಕಾಳುಮೆಣಸು ಕೊಯ್ಲು ಆರಂಭಗೊಳ್ಳಲಿದ್ದು, ಈ ಅವಧಿಯಲ್ಲಿ ಕಾಳುಮೆಣಸು ಬಳ್ಳಿಗಳಿಗೆ ನೀರು ಅನಿವಾರ್ಯವಾಗಿವೆ. ದಶಕಗಳ ಹಿಂದೆ ಕೊಡಗಿನಲ್ಲಿ ಮಾರ್ಚ್ ತಿಂಗಳಲ್ಲಿ ಒಂದೆರಡು ಮಳೆ ಬರುವುದು ವಾಡಿಕೆಯಾಗಿತ್ತು. ಈ ಅವಧಿಯಲ್ಲಿ ಮಳೆ ಸುರಿದರೆ ಕಾಳುಮೆಣಸು ಫಸಲು ಕೂಡ ಉತ್ತಮ ರೀತಿಯಲ್ಲಿ ಇರಲಿದ್ದು, ಮಳೆಯಿಂದ ಕಾಳುಮೆಣಸು ದಪ್ಪವಾಗಿ
ಕೆಜಿ ಕೂಡ ಹೆಚ್ಚಳವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಹವಮಾನ ವೈಪರೀತ್ಯಗಳಿಂದಾಗಿ ಮಾರ್ಚ್‌ನಲ್ಲಿ ಸುರಿಯುವ ಮಳೆಯೂ ಅಕಾಲಿಕವಾಗಿ ಜನವರಿಯಲ್ಲಿ ಸುರಿದು ಕಾಫಿ ಫಸಲಿಗೆ ನಷ್ಟವುಂಟು ಮಾಡುತ್ತಿರುವುದು ಮಾಮೂಲಿಯಾಗಿ ಬಿಟ್ಟಿವೆ.
ಕಾಳುಮೆಣಸು ಕೊಯ್ಲಿಗೂ ಮುನ್ನ ಬಳ್ಳಿಗಳಿಗೆ ನೀರು ಹಾಯಿಸಲೇ ಬೇಕು. ಇಲ್ಲದಿದ್ದರೆ ಕಾಳುಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಸೊರಗಿ ಹೋಗುತ್ತವೆ. ಇದೀಗ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಕರಿಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಅನಿವಾರ್ಯವಾಗಿ ಬೆಳೆಗಾರರು ಕಾಳುಮೆಣಸಿನ ಬಳ್ಳಿಗಳಿಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸಿ, ಬಳ್ಳಿಗಳನ್ನು ಜೀವಂತವಾಗಿ ಉಳಿಸುತ್ತಿದ್ದಾರೆ.
ಕಾಫಿ ಹೂವು ಅರಳಬೇಕಾದ ಸಮಯದಲ್ಲಿ ಅರಳುತ್ತಿಲ್ಲ: ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಧಿಗೂ ಮುನ್ನವೇ ಕಾಫಿ ಹೂ ಅರಳುತ್ತಿವೆ. ಸಾಮಾನ್ಯವಾಗಿ ಕಾಫಿ ಕೊಯ್ಲು ಪೂರ್ಣಗೊಂಡು ಮಾರ್ಚ್ ತಿಂಗಳ ಅಂತ್ಯದೊಳಗೆ ಸುರಿಯುವ ಮಳೆಗೆ ಜಿಲ್ಲೆಯಲ್ಲಿ ಕಾಫಿ ಹೂವು ಅರಳುತ್ತಿತ್ತು. ಆದರೆ ಜಿಲ್ಲೆಯಲ್ಲಿ ಹವಾಮಾನ ಬದಲಾವಣೆಯಿಂದ ಎಲ್ಲವೂ ಬದಲಾಗಿ ಬಿಟ್ಟಿವೆ.
ಮಾರ್ಚ್‌ನಲ್ಲಿ ಮಳೆ ಸುರಿದರೆ ಬೆಳೆಗಾರರಿಗೆ ತೋಟಗಳಿಗೆ ನೀರು ಹಾಯಿಸಿ ಕಾಫಿ ಗಿಡಗಳಲ್ಲಿ ಹೂವು ಅರಳಿಸುವ ಅಗತ್ಯವಿಲ್ಲ. ಲಕ್ಷಾಂತರ ರೂ. ಉಳಿಯುತ್ತಿತ್ತು. ಆದರೆ, ಮಳೆ ಬಾರದ ಕಾರಣ ಲಕ್ಷಾಂತರ ರೂ. ವ್ಯಹಿಸಿ ಕೃತಕವಾಗಿ ನೀರು ಹಾಯಿಸಿ ಕಾಫಿ ಗಿಡದಲ್ಲಿ ಹೂ ಅರಳಿಸುತ್ತಿವೆ.
ಬತ್ತುತ್ತಿವೆ ಜಲಮೂಲಗಳು, ತೋಟಗಳಿಗೆ ಹಾಯಿಸಲು ನೀರಿಲ್ಲ
ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸ್ಪ್ರಿಂಕ್ಲರ್ ಮೂಲಕ ಕಾಫಿ ತೋಟಗಳಿಗೆ ನೀರು ಹಾಯಿಸುವ ದೃಶ್ಯ ಕಣ್ಣಿಗೆ ಕಾಣುತ್ತವೆ. ಜೀವ ನದಿ ಕಾವೇರಿಯೂ ಬಿಸಿಲಿನ ತಾಪಕ್ಕೆ ಬತ್ತುತ್ತಿವೆ. ಆದರೆ, ಮೋಟರ್ ಪಂಪ್ ಮೂಲಕ ಸ್ಪ್ರಿಂಕ್ಲರ್ ಬಳಸಿ ನೀರು ಹಾಯಿಸಲು ಬೆಳೆಗಾರರಿಗೆ ನೀರು ಅಭಾವ ಎದುರಾಗಿದ್ದು, ಬೋರ್ ವೆಲ್, ಕೆರೆಗಳಲ್ಲಿ ಬಿಸಿಲ ಬೇಗೆಗೆ ನೀರು ಬತ್ತುತ್ತಿವೆ.
ಬಹುತೇಕ ಬೆಳೆಗಾರರು ಕೆರೆ ಹಾಗೂ ಬೋರ್‌ವೆಲ್‌ನ ನೀರನ್ನು ಬಳಸಿ ಮೋಟರ್ ಪಂಪ್ ಮೂಲಕ ಸ್ಪ್ರಿಂಕ್ಲರ್‌ನಲ್ಲಿ ತೋಟಗಳಿಗೆ ನೀರು ಹಾಯಿಸುತ್ತಾರೆ. ಆದರೆ, ಬೆಳೆಗಾರರು ತೋಟದಲ್ಲಿ ತೋಡಿರುವ ಕೃಷಿ ಹೊಂಡಗಳು ಬತ್ತುತ್ತಿದ್ದು, ನೀರಿನ ಅಭಾವ ಉಂಟಾಗಿದೆ. ಜಿಲ್ಲೆಯ ಬೆಳೆಗಾರರು ಮಾರ್ಚ್ ತಿಂಗಳಲ್ಲಿ ಒಂದೆರಡು ಮಳೆಯಾಗುವ ನೀರಿಕ್ಷೆಯಲ್ಲಿ ಇದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಬಿಸಿಲ ಝಳಕ್ಕೆ ಕಾವೇರಿ ತವರಿನಲ್ಲಿ ನೀರಿಗೂ ಹಾಹಕಾರ ಉಂಟಾಗಿವೆ.