ಕಾಂಗ್ರೆಸ್ ಯಾಕೆ ತನ್ನ ಚುನಾವಣಾ ವೈಫಲ್ಯಗಳಿಂದ ಪಾಠ ಕಲಿಯುವುದಿಲ್ಲ?

Update: 2024-10-31 06:30 GMT
Editor : Ismail | Byline : ಎನ್. ಕೇಶವ್

ಕಾಂಗ್ರೆಸ್ ತನ್ನ ಈಗಿನ ರೀತಿನೀತಿಯಲ್ಲೇ ಮುಂದುವರಿದರೆ ತಾನು ವಿಫಲವಾಗುವುದರ ಜೊತೆಗೇ ದೇಶವನ್ನೂ ವಿಫಲತೆಗೆ ನೂಕುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದ ಸಮಯ ಇದಾಗಿದೆ.

ಕಾಂಗ್ರೆಸ್ ವಿಫಲವಾಗುವುದೆಲ್ಲಿ ಎಂಬುದನ್ನು ಆನಂದ್ ತೇಲ್ತುಂಬ್ಡೆ ನಾಲ್ಕು ಅಂಶಗಳ ಮೂಲಕ ವಿವರಿಸುತ್ತಾರೆ.

ಪಕ್ಷದ ಸ್ಪಷ್ಟ ಮತ್ತು ಸ್ಥಿರವಾದ ಸೈದ್ಧಾಂತಿಕ ನಿಲುವಿನ ಕೊರತೆಯೇ ಅದರ ವೈಫಲ್ಯಗಳಿಗೆ ಪ್ರಮುಖ ಕಾರಣ ಎನ್ನುತ್ತಾರೆ ತೇಲ್ತುಂಬ್ಡೆ.

ಗೆಲ್ಲಬೇಕಾಗಿದ್ದ ಹರ್ಯಾಣವನ್ನು ಕಳೆದುಕೊಳ್ಳುವುದರೊಂದಿಗೆ ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದ ಆಶಾಭಾವನೆ ಮಣ್ಣುಪಾಲಾಗಿದೆ ಮತ್ತು ಈ ಹಂತದಲ್ಲಿ, ಎದುರಿರುವ ಮಹಾರಾಷ್ಟ್ರ ಚುನಾವಣೆಯಲ್ಲೂ ಬಿಜೆಪಿ ಗೆದ್ದುಬಿಟ್ಟಿತೆಂದರೆ, ಹಿಂದೂ ರಾಷ್ಟ್ರ ಕುರಿತ ಅದರ ಮಹತ್ವಾಕಾಂಕ್ಷೆಗೆ ಅಸಾಧಾರಣ ಬಲ ಬಂದುಬಿಡಲಿದೆ.

ಇದನ್ನು ಗಮನಿಸುತ್ತ, ಯಾಕೆ ಕಾಂಗ್ರೆಸ್ ತನ್ನ ಚುನಾವಣಾ ವೈಫಲ್ಯಗಳಿಂದ ಪಾಠ ಕಲಿಯುವುದಿಲ್ಲ ಎಂಬ ಪ್ರಶ್ನೆಯನ್ನು ಹಿರಿಯ ಲೇಖಕ, ಮಾನವ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಎತ್ತಿದ್ದಾರೆ.

‘ಸ್ಕ್ರಾಲ್’ನಲ್ಲಿ ಪ್ರಕಟವಾಗಿರುವ ಬರಹದಲ್ಲಿ ಅವರು ಕಾಂಗ್ರೆಸ್ ಪಾಠ ಕಲಿಯದಿರುವುದಕ್ಕೆ ಇರುವ ಕಾರಣಗಳ ಬಗ್ಗೆಯೂ, ಅದು ಮಾಡಬೇಕಿರುವುದು ಏನು ಎಂಬುದರ ಬಗ್ಗೆಯೂ ಚರ್ಚಿಸಿದ್ದಾರೆ.

ಬಿಜೆಪಿ ಕಥೆ ಮುಗಿಯಲಿಕ್ಕಿದೆ ಎನ್ನಿಸುವಂತೆ ಲೋಕಸಭೆ ಚುನಾವಣೆ ಫಲಿತಾಂಶ ಮೂಡಿಸಿದ್ದ ಭರವಸೆ ಹರ್ಯಾಣ ಮತ್ತು ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆ ಫಲಿತಾಂಶದ ಮೂಲಕ ಚೂರು ಚೂರಾಗಿದೆ.

ಜಮ್ಮು-ಕಾಶ್ಮೀರದಲ್ಲಿ ‘ಇಂಡಿಯಾ’ ಮೈತ್ರಿ ಗೆದ್ದರೂ, ಅದರ ಪೂರ್ತಿ ಶ್ರೇಯಸ್ಸು ನ್ಯಾಷನಲ್ ಕಾನ್ಫರೆನ್ಸ್ ನದ್ದೇ ಹೊರತು, ಅಲ್ಲಿ ಕಾಂಗ್ರೆಸ್ ಸಾಧನೆ ನೀರಸ. ಇನ್ನು ಗೆಲ್ಲಲೇಬೇಕಿದ್ದ ಹರ್ಯಾಣದಲ್ಲೂ ಕಾಂಗ್ರೆಸ್ ಸೋತಿದೆ.

ಬಿಜೆಪಿ ಅವನತಿಗೆ ಇಳಿದಂತೆ ಲೋಕಸಭೆ ಚುನಾವಣೆಯಿಂದ ಕಂಡಿತ್ತು. ಆದರೆ ಅದು ವಿಪಕ್ಷ ಪಾಳಯದಲ್ಲಿ ಉತ್ಸಾಹ ಮತ್ತು ಶಕ್ತಿಯಾಗಿ ಬದಲಾಗಲೇ ಇಲ್ಲ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆಯಲ್ಲಿ ಆಗಿದ್ದ ಕುಸಿತ ಶೇ.37.7ರಿಂದ ಶೇ.36.56 ಅಂದರೆ ಕೇವಲ ಶೇ.1ಕ್ಕಿಂತ ಸ್ವಲ್ಪ ಕಡಿಮೆ.

ಆದರೆ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅದು 63 ಸ್ಥಾನಗಳನ್ನು ಕಳೆದುಕೊಂಡಿತ್ತು.

303 ಸ್ಥಾನಗಳನ್ನು ಪಡೆದಿದ್ದ ಬಿಜೆಪಿಯ ಓಟ 240 ಸ್ಥಾನಗಳಿಗೇ ನಿಂತುಬಿಟ್ಟಿತ್ತು.

ಆದರೂ, ಮೋದಿ ನೇತೃತ್ವದಲ್ಲಿಯೇ ಮೂರನೇ ಬಾರಿಗೆ ಸರಕಾರ ರಚನೆಯಾಗುವುದನ್ನು ಯಾರೂ ತಡೆಯಲಾಗಲಿಲ್ಲ.

ಬಿಜೆಪಿಯ ಸಂಖ್ಯಾ ಬಲ ಕೂಡ ಇತರ ಯಾವುದೇ ಪಕ್ಷಗಳಿಗಿಂತಲೂ ಹೆಚ್ಚಿತ್ತು. ಹಾಗಾದಾಗ, ವಿಪಕ್ಷಗಳು, ಅದರಲ್ಲೂ ಕಾಂಗ್ರೆಸ್ ತನ್ನ ದೌರ್ಬಲ್ಯವನ್ನು ಬೇಗ ನಿವಾರಿಸಿಕೊಂಡು ವಿಧಾನಸಭಾ ಚುನಾವಣೆಗೆ ಸಜ್ಜಾಗಬೇಕಿತ್ತು.

ಆದರೆ, ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗಳಲ್ಲಿ ಆದದ್ದೇ ಬೇರೆ.

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಗೆಲ್ಲಲಿಲ್ಲವಾದರೂ, ಕೇಂದ್ರ ಸರಕಾರದ ಏಜೆಂಟ್ ಎಂಬಂತಿರುವ ಲೆಫ್ಟಿನೆಂಟ್ ಗವರ್ನರ್ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶದ ಚುನಾಯಿತ ಸರಕಾರಕ್ಕೆ ಹೆಚ್ಚು ಮಹತ್ವವೇನೂ ಇಲ್ಲ.

ಆದರೆ ಹರ್ಯಾಣದಲ್ಲಿ ಚುನಾವಣೆಗೆ ಮುನ್ನ ಮುಖ್ಯಮಂತ್ರಿಯನ್ನು ಬದಲಾಯಿಸುವ ಗಿಮಿಕ್‌ನ ಹೊರತಾಗಿಯೂ ಗೆಲ್ಲುವುದು ಬಿಜೆಪಿಗೆ ಸುಲಭವಾಗಿರಲಿಲ್ಲ. ಸೋಲುವ ಭೀತಿಯಿಂದಲೇ ಮೋದಿ ಕೂಡ ಅಲ್ಲಿ ಹೆಚ್ಚು ರ್ಯಾಲಿಗಳನ್ನೂ ಮಾಡಿರಲಿಲ್ಲ.

ಕಾಂಗ್ರೆಸ್ ಗೆಲ್ಲಲೇಬೇಕು ಎನ್ನುವಂಥ ಸನ್ನಿವೇಶವಿತ್ತು.ಆದರೆ, ಫಲಿತಾಂಶ ಎಲ್ಲರಿಗೂ ಶಾಕ್ ತಂದಿತ್ತು.

90 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 37 ಸ್ಥಾನಗಳನ್ನು ಗಳಿಸಿತು. ಮತ ಎಣಿಕೆಯಲ್ಲಿ ವಂಚನೆಯಾಗಿದೆ ಎಂದು ಕಾಂಗ್ರೆಸ್ ದೂರಿತು. ಅದನ್ನು ಚುನಾವಣಾ ಆಯೋಗ ನಿರಾಕರಿಸಿದ್ದೂ ಆಯಿತು.

ಇನ್ನೊಂದೆಡೆ, ಜಮ್ಮು-ಕಾಶ್ಮೀರದಲ್ಲಿ, ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳನ್ನು ಗೆದ್ದಿತು, ಕಾಂಗ್ರೆಸ್ 6 ಮತ್ತು ಸಿಪಿಎಂ ಒಂದು ಸ್ಥಾನವನ್ನು ಗೆದ್ದಿದೆ.

ಗಮನಿಸಬೇಕಾದುದೆಂದರೆ, ಜಮ್ಮು ವಲಯದಲ್ಲಿ ಬಿಜೆಪಿಗೆ ಹೊಡೆತ ಕೊಡುವುದು ಕಾಂಗ್ರೆಸ್‌ಗೆ ಸಾಧ್ಯವಾಗಲೇ ಇಲ್ಲ.

ಅಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಬೇಕಾಗಿತ್ತು, ಆದರೆ ಅದು ಶೋಚನೀಯ ಎನ್ನುವಂಥ ವೈಫಲ್ಯ ಕಂಡಿತು.

ಅಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದು ಸ್ಥಾನವನ್ನು ಮಾತ್ರ.

ಇಬ್ಬರು ಕಾರ್ಯಾಧ್ಯಕ್ಷರು, ಮಾಜಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಮತ್ತು ಹಲವಾರು ಸಚಿವರು ಸೇರಿದಂತೆ ಅದರ ಹೆಚ್ಚಿನ ಹಿರಿಯ ನಾಯಕರು ಬಿಜೆಪಿ ಪ್ರತಿಸ್ಪರ್ಧಿಗಳ ಮುಂದೆ ಸೋತುಹೋದರು.

ಪ್ರಚಾರದ ಹೊತ್ತಿನಲ್ಲೂ ಅದು ಜಮ್ಮುವಿನತ್ತ ಹೆಚ್ಚು ಫೋಕಸ್ ಮಾಡದೇ ಹೋಯಿತು, ತನ್ನ ಶಕ್ತಿಯನ್ನೆಲ್ಲ ಕಾಶ್ಮೀರದ ಮೇಲೆ ಹಾಕಿತು. ಆದರೆ ಅಲ್ಲಿ ಅದು ಗಳಿಸಿದ್ದು ಬರೀ ಐದು ಸ್ಥಾನಗಳು.

ಮತ ಹಂಚಿಕೆ ಗಮನಿಸಿದರೂ, ಬಿಜೆಪಿ ಶೇ.25.5ರಷ್ಟನ್ನು ಪಡೆದಿದೆ. ನ್ಯಾಷನಲ್ ಕಾನ್ಫರೆನ್ಸ್ ಶೇ.23.4 ಮತ್ತು ಕಾಂಗ್ರೆಸ್ ಕೇವಲ ಶೇ.11.9ರಷ್ಟನ್ನು ಪಡೆದಿವೆ. ಹೀಗಾಗಿ ಜಮ್ಮು-ಕಾಶ್ಮೀರದಲ್ಲೂ ಕಾಂಗ್ರೆಸ್ ಖುಷಿಪಡುವಂಥದ್ದೇನೂ ಇಲ್ಲ. ಕಡೇಪಕ್ಷ ಹೇಳಿಕೊಳ್ಳುವುದಕ್ಕಾದರೂ 6 ಸೀಟುಗಳಿವೆ ಎಂದು ತೃಪ್ತಿಪಡಬೇಕಷ್ಟೆ.

ತಾನು ವಿಫಲವಾಗುವುದು ಮಾತ್ರವಲ್ಲದೆ ದೇಶವನ್ನೂ

ವಿಫಲತೆಯ ಕಡೆಗೆ ತಳ್ಳುತ್ತಿದೆಯೆ ಕಾಂಗ್ರೆಸ್?

ಈ ನಿಟ್ಟಿನಲ್ಲಿ ಯೋಚಿಸುತ್ತ ಆನಂದ್ ತೇಲ್ತುಂಬ್ಡೆ ಅವರು, ಏಕೆ ಕಳೆದ 10 ವರ್ಷಗಳಲ್ಲಿ ತನ್ನ ಚುನಾವಣಾ ವೈಫಲ್ಯಗಳಿಂದ ಕಾಂಗ್ರೆಸ್ ಪಾಠ ಕಲಿಯುತ್ತಿಲ್ಲ ಎಂಬುದನ್ನು ವಿವರಿಸುತ್ತಾರೆ.

2024ರಲ್ಲಿ ಹರ್ಯಾಣ ಬಿಜೆಪಿಯನ್ನು ತಿರಸ್ಕರಿಸಲು ಬಯಸಿದ್ದಕ್ಕಿಂತ, 2017ರಲ್ಲಿ ಗುಜರಾತ್ ಬಿಜೆಪಿಯನ್ನು ತಿರಸ್ಕರಿಸಲು ಸಿದ್ಧವಾಗಿತ್ತು ಎಂಬುದರ ಕಡೆಗೆ ತೇಲ್ತುಂಬ್ಡೆ ಅವರು ನಮ್ಮ ಗಮನ ಸೆಳೆಯುತ್ತಾರೆ.

ಆದರೆ ಅವತ್ತಿನ ಆ ಸನ್ನಿವೇಶವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲೇ ಇಲ್ಲ. ಅವತ್ತು ಗುಜರಾತ್‌ನಲ್ಲಿ ಹೇಗೆ ಬಿಜೆಪಿ ವಿರೋಧಿ ಅಲೆ ಇತ್ತು ಎಂಬ ವಾಸ್ತವವನ್ನು ಸಂಪೂರ್ಣವಾಗಿ ಕಾಂಗ್ರೆಸ್ ನಿರ್ಲಕ್ಷಿಸಿತ್ತು.

ಬಿಜೆಪಿಗೆ ಪರ್ಯಾಯವಾಗಿ ಅಲ್ಲಿನ ಜನ ಕಾಂಗ್ರೆಸ್ ಅನ್ನು ನೋಡಬಯಸಿದ್ದರೇ ಹೊರತು ಅದೂ ಮತ್ತೊಂದು ಹಿಂದುತ್ವ ಅಜೆಂಡಾದ ಪಕ್ಷವಾಗುವುದು ಅವರಿಗೆ ಬೇಕಿರಲಿಲ್ಲ.

ಅಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ನಾಯಕ ದೇವಸ್ಥಾನಕ್ಕೆ ಭೇಟಿ ನೀಡುತ್ತಾ, ಕೇಸರಿ ಶಾಲು ಹೊದ್ದುಕೊಂಡು, ತಾನು ಕೂಡ ಹಿಂದೂ ಎಂದು ತೋರಿಸಲು ಹೊರಟದ್ದು ಅತ್ಯಂತ ಮೂರ್ಖತನವಾಗಿತ್ತು ಎನ್ನುತ್ತಾರೆ ತೇಲ್ತುಂಬ್ಡೆ.

ನಿರೀಕ್ಷೆಯಂತೆ, ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿತು, ಆದರೂ 16 ಸ್ಥಾನಗಳನ್ನು ಹೆಚ್ಚಿಗೆ ಗೆದ್ದಿತ್ತು. ಆ 16 ಹೆಚ್ಚುವರಿ ಸ್ಥಾನಗಳ ಬಗ್ಗೆ ಸಂಭ್ರಮಿಸುವುದರಲ್ಲಿ ಅದು ಮುಳುಗಿಹೋಗಿತ್ತೇ ಹೊರತು, ನಿಜವಾಗಿಯೂ ತನ್ನದಾಗಬೇಕಿದ್ದ ದೊಡ್ಡ ಪಾಲೊಂದನ್ನು ತಾನು ಕಳೆದುಕೊಂಡೆ ಎಂಬ ಕೊರಗು ಅದನ್ನು ಕಾಡಲೇ ಇಲ್ಲ.

ಅದಾಗಿ ಹಲವು ವರ್ಷಗಳ ಬಳಿಕ, ಅದರಲ್ಲೂ ‘ಭಾರತ ಜೋಡೊ ಯಾತ್ರೆ’ಗಳ ನಂತರ ರಾಹುಲ್ ಗಾಂಧಿ ಪ್ರಬುದ್ಧರಾಗಿದ್ದಾರೆ, ನಿಜ. ಆದರೂ, ಬಿಜೆಪಿಯನ್ನು ಸೋಲಿಸಲು ಅಗತ್ಯವಾಗಿರುವ ನಾಯಕತ್ವದ ಮಟ್ಟಕ್ಕಿಂತ ಬಹಳ ಕೆಳಗಿದ್ದಾರೆ ಎಂಬುದು ತೇಲ್ತುಂಬ್ಡೆ ಅಭಿಪ್ರಾಯ.

ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯ ಮತಗಳ ಪ್ರಮಾಣ ಶೇ.37.3ಕ್ಕೆ ನಿಂತುಹೋಗಿದೆ. ಅಂದರೆ, ಶೇ.60ಕ್ಕಿಂತ ಹೆಚ್ಚು ಮತದಾರರು ಅದನ್ನು ವಿರೋಧಿಸಿದ್ದಾರೆ, ಪರ್ಯಾಯವನ್ನು ಹುಡುಕುತ್ತಿದ್ದಾರೆ ಎಂಬುದನ್ನು ಅದು ಸೂಚಿಸುತ್ತದೆ. ಈ ಹಂತದಲ್ಲಿ ಕಾಂಗ್ರೆಸ್ ತನ್ನನ್ನು ತಾನು ನಂಬಲರ್ಹ ಪರ್ಯಾಯ ಎಂದು ತೋರಿಸಿಕೊಳ್ಳಬೇಕಿತ್ತು.

ಬಿಜೆಪಿಗೆ ವಿರುದ್ಧವಾದ ಸೈದ್ಧಾಂತಿಕ ದೃಷ್ಟಿಕೋನವಾಗಿ ಕಾಂಗ್ರೆಸ್ ಎದುರು ಇರುವುದು ಹಿಂದುತ್ವ ವಿರೋಧಿ ನಿಲುವೇ ಹೊರತು ಬೇರೇನೂ ಅಲ್ಲ.

ಅದು ಬಿಜೆಪಿಯ ಮುಸ್ಲಿಮ್ ವಿರೋಧಿ ನಿಲುವು, ಅದರ ಗೋವಿನ ರಾಜಕೀಯ ಮತ್ತು ಅದರ ಕೇಸರೀಕರಣದ ಪ್ರಚಾರಗಳಿಗೆ ಸಕ್ರಿಯ ವಿರೋಧವಾಗಿ ಪ್ರಕಟವಾಗಬೇಕು.

ಆದರೆ, ಹೆಚ್ಚು ಮತ ಗಳಿಸಿದವರನ್ನು ಗೆದ್ದವರೆಂದು ಗುರುತಿಸುವ ಈ ವ್ಯವಸ್ಥೆಯಲ್ಲಿ ಕಡೆಗೂ ಚಾಣಾಕ್ಷ ತಂತ್ರಗಳೇ ಮುಖ್ಯವಾಗುತ್ತವೆ. ಹಾಗಾಗಿ, ಸೈದ್ಧಾಂತಿಕ ವಿರೋಧವೊಂದರಿಂದಲೇ ಬಿಜೆಪಿಯನ್ನು ಸೋಲಿಸಲು ಆಗದು. ಪ್ರಮುಖ ತಂತ್ರವೆಂದರೆ, ಬಿಜೆಪಿ ವಿರುದ್ಧ ವಿಪಕ್ಷಗಳ ಒಗ್ಗಟ್ಟನ್ನು ತಕ್ಷಣದ ಗುರಿಯಾಗಿಸುವುದು.

ಇಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸುವಾಗ ಅದನ್ನು ತನ್ನ ಅರ್ಹತೆ ಎಂದು ತೋರಿಸಿಕೊಳ್ಳದೆ, ನಯ ಮತ್ತು ಜಾಣ್ಮೆಯಿಂದಲೇ ನಿಭಾಯಿಸಬೇಕಾಗುತ್ತದೆ. ಹಾಗೆಯೇ, ಬೇಕಾದಷ್ಟು ಖರ್ಚು ಮಾಡಬಲ್ಲ ತಾಕತ್ತಿರುವ ಬಿಜೆಪಿಯ ಎದುರಲ್ಲಿ ತನ್ನದೇ ಚುನಾವಣಾ ಕಾರ್ಯವೈಖರಿ ಮತ್ತು ಎತ್ತಿಕೊಳ್ಳುವ ವಿಷಯಗಳ ಮೂಲಕ ಕಾಂಗ್ರೆಸ್ ಪರಿಣಾಮಕಾರಿ ಹಾದಿಯನ್ನು ಕಂಡುಕೊಳ್ಳಲು ಸಾಧ್ಯ. ಈ ದಿಕ್ಕಿನ ಹೆಜ್ಜೆಗಳಿಂದ ಮಾತ್ರ ಬಿಜೆಪಿಯನ್ನು ಸೋಲಿಸಬಹುದು ಮತ್ತು ಸಂವಿಧಾನದ ಪೀಠಿಕೆಯಲ್ಲಿ ವ್ಯಾಖ್ಯಾನಿಸಲಾಗಿರುವ ಭಾರತವನ್ನು ಉಳಿಸಿಕೊಳ್ಳಬಹುದು.

ಆದರೆ ಕಾಂಗ್ರೆಸ್ ತನ್ನ ಈಗಿನ ರೀತಿನೀತಿಯಲ್ಲೇ ಮುಂದುವರಿದರೆ ತಾನು ವಿಫಲವಾಗುವುದರ ಜೊತೆಗೇ ದೇಶವನ್ನೂ ವಿಫಲತೆಗೆ ನೂಕುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದ ಸಮಯ ಇದಾಗಿದೆ.

ಕಾಂಗ್ರೆಸ್ ವಿಫಲವಾಗುವುದೆಲ್ಲಿ ಎಂಬುದನ್ನು ತೇಲ್ತುಂಬ್ಡೆ ನಾಲ್ಕು ಅಂಶಗಳ ಮೂಲಕ ವಿವರಿಸುತ್ತಾರೆ.

ಪಕ್ಷದ ಸ್ಪಷ್ಟ ಮತ್ತು ಸ್ಥಿರವಾದ ಸೈದ್ಧಾಂತಿಕ ನಿಲುವಿನ ಕೊರತೆಯೇ ಅದರ ವೈಫಲ್ಯಗಳಿಗೆ ಪ್ರಮುಖ ಕಾರಣ ಎನ್ನುತ್ತಾರೆ ತೇಲ್ತುಂಬ್ಡೆ.

1. ಜಾತ್ಯತೀತತೆಯ ಪರವಾಗಿ ನಿಸ್ಸಂದಿಗ್ಧವಾಗಿ

ನಿಲ್ಲಲು ಹಿಂಜರಿಕೆ.

ಜಾತ್ಯತೀತತೆಯನ್ನು ಸಮರ್ಥಿಸುವಲ್ಲಿ, ವಿಶೇಷವಾಗಿ ಬಿಜೆಪಿಯ ಬಹುಸಂಖ್ಯಾತ ರಾಜಕೀಯವನ್ನು ಎದುರಿಸುವಲ್ಲಿ ಕಾಂಗ್ರೆಸ್ ಆಗಾಗ ಸೋತಿದೆ.

ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್, ಹಿಂದುತ್ವ ಅಜೆಂಡಾ, ಗೋರಕ್ಷಣೆ ಮತ್ತು ಮತಾಂತರ ವಿರೋಧಿ ಕಾನೂನುಗಳಂತಹ ವಿಷಯಗಳಲ್ಲಿ ಬಿಜೆಪಿಯ ನಿರೂಪಣೆಗೆ ಸ್ಪಷ್ಟ ಸವಾಲು ಒಡ್ಡುವುದರಿಂದ ಜಾರಿಕೊಳ್ಳುತ್ತದೆ. ಈ ಹಿಂಜರಿಕೆಗೆ ಕಾರಣ, ಹಿಂದೂ ಬಹುಸಂಖ್ಯಾತರು ತನ್ನಿಂದ ದೂರವಾಗುತ್ತಾರೆ ಎಂಬ ಭಯ.

ಆದರೆ ಇದು ಬಿಜೆಪಿಗೆ ಪರ್ಯಾಯವನ್ನು ಹುಡುಕುತ್ತಿರುವ ಶೇ.60ರಷ್ಟು ಮತದಾರರಲ್ಲಿ ನಿರಾಸೆ ಮೂಡಿಸುತ್ತದೆ.

ಜಾತ್ಯತೀತತೆಯ ರಕ್ಷಕರಿಗಾಗಿ ಹುಡುಕುತ್ತಿರುವವರ ಎದುರು ತಾನಿದ್ದೇನೆ ಎಂಬ ಭರವಸೆ ತುಂಬಲು ಕಾಂಗ್ರೆಸ್ ಖಂಡಿತ ವಿಫಲವಾಗಿದೆ. ಹಾಗಾದರೆ ಈ ವಿಚಾರದಲ್ಲಿ ಕಾಂಗ್ರೆಸ್ ಏನು ಮಾಡಬೇಕು?

ದೃಢವಾದ ಜಾತ್ಯತೀತ ನಿಲುವನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಅಲ್ಪಸಂಖ್ಯಾತರಿಗೆ, ಅದರಲ್ಲೂ ಮುಸ್ಲಿಮರಿಗೆ ಆಗುತ್ತಿರುವ ಕಿರುಕುಳವನ್ನು ಬಯಲು ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಭಾರತದ ಬಹುತ್ವದ ಚೌಕಟ್ಟಿಗೆ ಬೆದರಿಕೆಯಾಗಿರುವ ಕೋಮುವಾದಿ ನೀತಿಗಳನ್ನು ಖಡಾಖಂಡಿತವಾಗಿ ವಿರೋಧಿಸಬೇಕು.

ಬಿಜೆಪಿಯ ಬಹುಸಂಖ್ಯಾತ ನಿಲುವಿಗಿಂತ ತಾನು ವಿಭಿನ್ನ ಎಂದಾಗಲು ಕಾಂಗ್ರೆಸ್ ಜಾತ್ಯತೀತತೆಯನ್ನು ಸ್ಪಷ್ಟ ಮತ್ತು ದಿಟ್ಟವಾಗಿ ವ್ಯಕ್ತಪಡಿಸಬೇಕು.

2. ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯದ

ವಿಚಾರದಲ್ಲಿನ ನಿಲುವು.

ಗುಂಪು ಹತ್ಯೆ, ತಾರತಮ್ಯ ಕಾನೂನುಗಳು ಮತ್ತು ಮುಸ್ಲಿಮರು ಸಾಮಾಜಿಕವಾಗಿ, ಆರ್ಥಿಕವಾಗಿ ಅಂಚಿನಲ್ಲಿರುವ ವಾಸ್ತವ ಇಂಥ ವಿಷಯಗಳನ್ನು ಕಾಂಗ್ರೆಸ್ ಎತ್ತಿ ತೋರಿಸುತ್ತಲೇ ಇಲ್ಲ. ಇದರಿಂದಾಗಿ, ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಂಗ್ರೆಸ್ ಕಾಯಲಾರದೇನೋ ಎನ್ನುವಂಥ ಭಾವನೆ ಮೂಡಿದೆ.

ಕಾಂಗ್ರೆಸ್ ಮಾಡಬೇಕಿರುವುದೇನು?

ಕಾಂಗ್ರೆಸ್ ಮುಸ್ಲಿಮರ ವಿಚಾರದಲ್ಲಿನ ತಾರತಮ್ಯವನ್ನು ಬಹಿರಂಗವಾಗಿ ಪರಿಹರಿಸಬೇಕು. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಕಾನೂನಾತ್ಮಕ ಪರಿಹಾರಗಳನ್ನು ನೀಡಬೇಕು.

ಅಂದರೆ, ದ್ವೇಷ ಭಾಷಣ, ಕೋಮು ಹಿಂಸಾಚಾರ ಮತ್ತು ಮುಸ್ಲಿಮರನ್ನು ತಾರತಮ್ಯಕ್ಕೆ ಗುರಿಯಾಗಿಸುವುದರ ವಿರುದ್ಧ ನಿಲ್ಲಬೇಕು. ಹಾಗೆಯೇ ಅಂಚಿನಲ್ಲಿರುವ ಸಮುದಾಯಗಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು.

3. ದಲಿತರು ಮತ್ತು ಆದಿವಾಸಿಗಳನ್ನು ಮರಳಿ

ಒಲಿಸಿಕೊಳ್ಳುವ ಪ್ರಯತ್ನ.

ದಲಿತ ಮತ್ತು ಆದಿವಾಸಿ ಸಮುದಾಯಗಳ ಬೆಂಬಲವನ್ನು ಮರಳಿ ಪಡೆಯಲು ಕಾಂಗ್ರೆಸ್ ಹೆಣಗಾಡಿದೆ. ಅವರಲ್ಲಿ ಅನೇಕರು ಬಿಜೆಪಿ ಇಲ್ಲವೇ ಪ್ರಾದೇಶಿಕ ಪಕ್ಷಗಳತ್ತ ವಾಲಿದ್ದಾರೆ.

ಜಾತಿ ತಾರತಮ್ಯ, ಭೂಮಿಯ ಹಕ್ಕುಗಳು ಮತ್ತು ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಸ್ತುನಿಷ್ಠ ಹೆಜ್ಜೆಗಳನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತಿಲ್ಲ.

ಈ ನಿಟ್ಟಿನಲ್ಲಿ ಕಾಂಗ್ರೆಸ್ ದಲಿತರು ಮತ್ತು ಆದಿವಾಸಿಗಳ ಆತಂಕ ಪರಿಹರಿಸಲು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ಭೂ ಸುಧಾರಣೆಗಳು ಮತ್ತು ಜಾತಿ ಆಧಾರಿತ ಹಿಂಸಾಚಾರ ಎದುರಿಸಲು ಅಗತ್ಯ ಕಾನೂನು ಕ್ರಮಗಳೆಲ್ಲ ಇದರಲ್ಲಿ ಸೇರಿವೆ.

ತಳಮಟ್ಟದ ದಲಿತ ಮತ್ತು ಆದಿವಾಸಿ ಚಳವಳಿಗಳೊಂದಿಗೆ ಬಲವಾಗಿ ನಿಂತು ಅವರಿಗೆ ದನಿಯಾಗಬೇಕು.

4. ತಾನು ರಾಷ್ಟ್ರೀಯ ಪಕ್ಷ ಎಂಬ

ಭಾವನೆ ಬಿಟ್ಟು ತೊಡಗಿಸಿಕೊಳ್ಳಬೇಕು.

ಕಾಂಗ್ರೆಸ್ ಇನ್ನೂ ಗತವೈಭವದ ಗುಂಗಿನಲ್ಲೇ ಇದೆ. ಇದರಿಂದಾಗಿ, ಅದು ಈಗಿನ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಜನರು ಭಾವಿಸುವಂತಾಗಿದೆ. ಅಲ್ಲದೆ, ಪ್ರಾದೇಶಿಕ ನಿರೀಕ್ಷೆಗಳ ಬಗ್ಗೆಯೂ ಮನವರಿಕೆ ಮಾಡಿಕೊಳ್ಳಲು ಅದಕ್ಕೆ ಕಷ್ಟವಾಗುತ್ತಿದೆ.

ಹಾಗಾಗಿ ಕಾಂಗ್ರೆಸ್ ತನ್ನ ಪ್ರಭಾವ ಕ್ಷೀಣಿಸುತ್ತಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.

ಸ್ಥಳೀಯ ಸಂದರ್ಭಗಳಿಗೆ ಅನುಗುಣವಾಗಿ ತನ್ನ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು. ವಿನಮ್ರತೆಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

ಸ್ಥಳೀಯ ನಾಯಕರ ಮಾತುಗಳನ್ನು ಆಲಿಸುವುದು ಮತ್ತು ತಳಮಟ್ಟದ ಸಮಸ್ಯೆಗಳತ್ತ ಗಮನಹರಿಸುವುದು ಅಗತ್ಯ.

ಮತದಾರರಿಗೆ ಹೆಚ್ಚು ಹತ್ತಿರವಾಗುವ ಹಾದಿಯನ್ನು ಅದು ಕಂಡುಕೊಳ್ಳಬೇಕು. ತನ್ನ ಹಿಂದಿನ ತಪ್ಪುಗಳನ್ನು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕವಾಗಿರಬೇಕು ಮತ್ತು ತಾನು ಜನಪರ ಪಕ್ಷ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು.

ಇಷ್ಟನ್ನು ಹೇಳುವ ತೇಲ್ತುಂಬ್ಡೆ, ತಕ್ಷಣ ಕಾಂಗ್ರೆಸ್ ಎದುರು ಇರುವ ಸವಾಲಿನ ಬಗ್ಗೆಯೂ ಗಮನ ಸೆಳೆದಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ಮತ್ತು

ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ವಿಚಾರವಾಗಿ ಅವರು ಹೇಳಿದ್ದಾರೆ.

ಬಿಜೆಪಿ ಮಹಾರಾಷ್ಟ್ರವನ್ನು ಗೆಲ್ಲಲು ಹವಣಿಸುತ್ತಿದೆ ಮತ್ತು ಮತದಾರರನ್ನು ಓಲೈಸಲು ಎಲ್ಲಾ ರೀತಿಯ ಉಚಿತ ಕೊಡುಗೆಗಳನ್ನು ನೀಡುತ್ತಿದೆ.

ಮೋದಿ ಹಾಗೂ ಅಮಿತ್ ಶಾ ಮಹಾರಾಷ್ಟ್ರದತ್ತ ಗಮನ ಹರಿಸಿದ್ದಾರೆ. ಮೋದಿ ಮತ್ತೆ ಮತ್ತೆ ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಆಗಸ್ಟ್ 30ರಂದು ಮೋದಿ ಮುಂಬೈನಲ್ಲಿ ವಧವನ್ ಬಂದರನ್ನು ಉದ್ಘಾಟಿಸಿದ್ದಾರೆ. ಆ ವೇಳೆ ಅವರು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಟೀಕಿಸಿದರು.

ವಾಶಿಮ್ ಜಿಲ್ಲೆಯ ಪೊಹರಾದೇವಿಯಲ್ಲಿರುವ ಜಗದಂಬಾ ದೇವಸ್ಥಾನಕ್ಕೂ ಮೋದಿ ಭೇಟಿ ನೀಡಿದರು.

ಅಕ್ಟೋಬರ್ 8ರಂದು ಅವರು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ಆರೆ ನಡುವಿನ ಮೆಟ್ರೊ ಮಾರ್ಗ ಉದ್ಘಾಟಿಸಿದ್ದಾರೆ.

ಥಾಣೆ ಇಂಟೆಗ್ರಲ್ ರಿಂಗ್ ಮೆಟ್ರೊ ರೈಲು ಯೋಜನೆ, ಎಲಿವೇಟೆಡ್ ಈಸ್ಟರ್ನ್ ಫ್ರೀವೇ ವಿಸ್ತರಣೆ ಮತ್ತು ನವಿ ಸೇರಿದಂತೆ 32,800 ಕೋಟಿ ರೂ. ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.

ಇನ್ನೊಂದೆಡೆ ಶಾ ಬಿಜೆಪಿ ಪಾಲಿಗೆ ಎರಡು ನಿರ್ಣಾಯಕ ಪ್ರದೇಶಗಳಾದ ವಿದರ್ಭ ಮತ್ತು ಮರಾಠವಾಡದಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ವ್ಯಾಪಕ ಸಭೆಗಳನ್ನು ನಡೆಸುತ್ತಿದ್ದಾರೆ.

ಗೆದ್ದರೆ ಮಹಿಳೆಯರಿಗೆ ಲಡ್ಕಿ ಬೆಹನ್ ಯೋಜನೆಯಡಿ ಪ್ರತೀ ಫಲಾನುಭವಿಗೆ ತಿಂಗಳಿಗೆ 1,500ರೂ.ಗಳಿಂದ 3,000 ರೂ.ಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ಭರವಸೆ ನೀಡಿದ್ದಾರೆ.

ಮಹಾಯುತಿ ಮೈತ್ರಿಕೂಟದಲ್ಲಿ ಆಡಳಿತಾರೂಢ ಪಕ್ಷಗಳ ರಾಜಕಾರಣಿಗಳ ನಂಟು ಹೊಂದಿರುವ ಐದು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ 815 ಕೋಟಿ ರೂ.ಗಳ ಸಾಲವನ್ನು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ ನೀಡುವಂತೆ ಸರಕಾರ ಶಿಫಾರಸು ಮಾಡಿದೆ.

ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಅಕ್ಟೋಬರ್ 15ರಂದು ಮುಂಬೈಗೆ ಪ್ರವೇಶ ಬಿಂದುಗಳಲ್ಲಿ ಲಘು ಮೋಟರ್‌ವಾಹನಗಳಿಗೆ ಟೋಲ್ ಅನ್ನು ಮನ್ನಾ ಮಾಡಿದೆ.

ಈ ಅಂಶಗಳು ಖಂಡಿತವಾಗಿಯೂ ಚುನಾವಣೆಯಲ್ಲಿ ಮಹಾಯುತಿಗೆ ನೆರವಾಗಲಿವೆ.

ಇದಕ್ಕೆ ವ್ಯತಿರಿಕ್ತವಾಗಿ, ಮಹಾ ವಿಕಾಸ್ ಅಘಾಡಿ ಲೋಕಸಭೆ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದ ಗುಂಗಿನಿಂದ ಹೊರಬಂದಿಲ್ಲ. ಅಘಾಡಿಯ ಮೂರೂ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಪೂರ್ತಿ ಬಗೆಹರಿದಿಲ್ಲ.

ಮರಾಠಾ ಆಂದೋಲನ, ಇತರ ಹಿಂದುಳಿದ ವರ್ಗಗಳ ಮೀಸಲಾತಿಯ ಬೇಡಿಕೆ ಮತ್ತು ಸೋಯಾಬೀನ್ ಮತ್ತು ಕಬ್ಬು ರೈತರಲ್ಲಿನ ಅಸಮಾಧಾನದಂತಹ ಸಮಸ್ಯೆಗಳು ಮಹಾಯುತಿಗೆ ಸವಾಲಾಗಬಹುದು. ಆದರೆ ಇದನ್ನು ತಪ್ಪಿಸಿಕೊಳ್ಳಲು ಬಿಜೆಪಿ ಹಿಂದೂ ರಾಷ್ಟ್ರದ ಅಸ್ತ್ರ ಪ್ರಯೋಗಿಸಬಹುದಾದ ಸಾಧ್ಯತೆಯೂ ಇದೆ. ಅದರಿಂದ ಅದರ ಬಲ ಹೆಚ್ಚಾಗಿಬಿಡಲೂ ಬಹುದು.

ಕಾಂಗ್ರೆಸ್ ತನ್ನ ಜವಾಬ್ದಾರಿ ಏನೆಂಬುದನ್ನು ಅರಿತು ಎಚ್ಚೆತ್ತುಕೊಳ್ಳುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ ಆನಂದ್ ತೇಲ್ತುಂಬ್ಡೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಎನ್. ಕೇಶವ್

contributor

Similar News