ಒಡೆಯರ್ ಪಾಳ್ಯ ಬಳಿ ರಾಜ್ಯದಲ್ಲೇ ಅತೀ ಎತ್ತರದ ಬುದ್ಧನ ಪ್ರತಿಮೆ ನಿರ್ಮಾಣ
ಚಾಮರಾಜನಗರ: ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಅರಣ್ಯ ಸಂಪತ್ತು, ಎರಡು ಹುಲಿ ಸಂರಕ್ಷಿತ ಪ್ರದೇಶದ ನಡುವೆ ಇರುವ ಪ್ರಾಕೃತಿಕ ನೈಸರ್ಗಿಕ ಸಂಪತ್ಬರಿತ ಪ್ರದೇಶದಲ್ಲಿ 6 ಕೋಟಿ ರೂ.ವೆಚ್ಚದಲ್ಲಿ 113 ಅಡಿ ಎತ್ತರದ ಬೃಹತ್ ಬುದ್ಧನ ವಿಗ್ರಹ ಪ್ರತಿಮೆ ನಿರ್ಮಾಣವಾಗುತ್ತಿದೆ.
ಕರ್ನಾಟಕ, ತಮಿಳುನಾಡು ನಡುವೆ ಇರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪವಿರುವ ಟಿಬೆಟಿಯನ್ನರ ನಿರಾಶ್ರಿತರ ಶಿಬಿರ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ಹಾಗೂ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದು, ಉಭಯ ರಾಜ್ಯಗಳ ಬೆಸೆಯುವ ಅರಣ್ಯವಾಗಿದೆ.
ಚಾಮರಾಜನಗರ ಜಿಲ್ಲೆಯ ಒಡೆಯರ್ ಪಾಳ್ಯದ ಟಿಬೆಟಿಯನ್ ಶಿಬಿರದಲ್ಲಿ ಬುದ್ಧ ಮಂದಿರದ ಬಳಿ ಟಿಬೆಟಿಯನ್ ಸಮುದಾಯದವರೇ 113 ಅಡಿ ಎತ್ತರದ ಬೃಹತ್ ಎತ್ತರದ ಹಸನ್ಮುಖಿ ಧ್ಯಾನಸ್ಥ ಬುದ್ಧನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ಬರದಿಂದ ಸಾಗುತ್ತಿದೆ.
ಪ್ರತಿಮೆ ಪ್ರತಿಷ್ಠಾಪಿಸುವ ಸಲುವಾಗಿ ಈಗಾಗಲೇ ಕಮಲದ ಹೂವಿನ ಆಕಾರದ ವೇದಿಕೆ ನಿರ್ಮಾಣ ಮಾಡಲಾಗಿದೆ. ಪ್ರಾಥಮಿಕ ಹಂತದ ಕಾಮಗಾರಿ ಮುಗಿಯುತ್ತಿದ್ದಂತೆ ಪಕ್ಕದ ಭೂತಾನ್ ದೇಶದಲ್ಲಿ ತಯಾರಿಸಲಾಗಿರುವ ಹಸನ್ಮುಖಿ ಧ್ಯಾನಸ್ಥ ಬುದ್ಧನ ಪ್ರತಿಮೆಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ತಾಮ್ರದಿಂದ ಪ್ರತಿಮೆಯನ್ನು ತಯಾರಿಸಿ ಬಳಿಕ ಚಿನ್ನದ ಬಣ್ಣದ ಲೇಪನ ಮಾಡಲಾಗುತ್ತದೆ. ಪ್ರತಿಮೆ ನಿರ್ಮಾಣಕ್ಕೆ ಅಂದಾಜು 6 ಕೋಟಿ ರೂ.ವೆಚ್ಚವಾಗಲಿದೆ ಎನ್ನಲಾಗುತ್ತಿದೆ.
ಒಡೆಯರಪಾಳ್ಯ ಬಳಿ ಇರುವ ನಿರಾಶ್ರಿತರ ಶಿಬಿರವು ಮೈಸೂರು ಜಿಲ್ಲೆಯ ಬೈಲುಗುಪ್ಪೆ, ಮುಂಡಗೋಡು ಮಾದರಿಯಲ್ಲಿ ಪ್ರವಾಸಿಸ್ಥಳವಾಗಿ ರೂಪುಗೊಂಡಿದೆ. ಚಾಮರಾಜನಗರ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಜನರನ್ನೂ ಇದು ಆಕರ್ಷಿಸುತ್ತಿದೆ. ಇಲ್ಲಿರುವ ಬುದ್ಧ ಮಂದಿರಗಳಲ್ಲಿ ಬಾಲ ಬೌದ್ಧ ಬಿಕ್ಕುಗಳು ಗಮನ ಸೆಳೆಯುತ್ತಾರೆ. ಒಡೆಯರ ಪಾಳ್ಯದಲ್ಲಿ ಐದು ಬೌದ್ಧ ದೇವಾಲಯಗಳಿದ್ದು ಪ್ರತಿ ಮಂದಿರದಲ್ಲೂ ಬುದ್ಧನ ಮೂರ್ತಿಗಳಿವೆ.
ವಾರಾಂತ್ಯದಲ್ಲಿ ಕುಟುಂಬ ಸಮೇತ ಭೇಟಿ ನೀಡುವ ಪ್ರವಾಸಿಗರು ದಿನವಿಡಿ ಶಿಬಿರದಲ್ಲಿರುವ ಬುದ್ಧ ಮಂದಿರಗಳಿಗೆ ಭೇಟಿ ನೀಡುತ್ತಾರೆ. ಒಂದು ದಿನದ ಪ್ರವಾಸಕ್ಕೆ ಇದು ಯೋಗ್ಯವಾದ ಸ್ಥಳ ಎನಿಸಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುತ್ತಿರುವವರ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿರುವ ಈ ಶಿಬಿರದಲ್ಲಿ ಬುದ್ಧನ ಮೂರ್ತಿ ಪ್ರತಿಷ್ಠಾಪನೆಯಾದರೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ರಾಜ್ಯದಲ್ಲೇ ಅತೀ ಎತ್ತರದ ಬುದ್ಧನ ಪ್ರತಿಮೆ ಹೊಂದಿರುವ ಸ್ಥಳ ಎಂಬ ಹೆಗ್ಗಳಿಕೆಗೂ ಒಡೆಯರಪಾಳ್ಯದ ಶಿಬಿರ ಪಾತ್ರವಾಗಲಿದೆ.
ಟಿಬೆಟ್‌ನಿಂದ ಕಳೆದ ಐದು ದಶಕಗಳ ಹಿಂದೆ ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟಿಯನ್ನರಿಗೆ ಕರ್ನಾಟಕದ ರಾಜ್ಯದ ಮುಂಡಗೋಡು, ಬೈಲುಗುಪ್ಪೆ ಹಾಗೂ ಒಡೆಯರಪಾಳ್ಯ ಬಳಿ ಸ್ಥಳ ನೀಡಿ ಶಿಬಿರ ನಿರ್ಮಿಸಿಕೊಡಲಾಯಿತು. ಅಂದಿನಿಂದ ಟಿಬೆಟಿಯನ್ ಸಂಸ್ಕೃತಿಯ ಜತೆಗೆ ಆಯಾ ಜಿಲ್ಲೆಗಳ ಆಚಾರ ವಿಚಾರಗಳಲ್ಲೂ ಭಾಗಿಯಾಗುವ ಮೂಲಕ ಟಿಬೆಟಿಯನ್ನರು ಸ್ಥಳೀಯರೊಂದಿಗೆ ಸೌರ್ಹಾರ್ದವಾಗಿ ಬದುಕು ಸಾಗಿಸುತ್ತಿದ್ದಾರೆ.