ಮೀಸಲಾತಿ ಕುರಿತ ಸಮಕಾಲೀನ ಸಮಸ್ಯೆಗಳು ಮತ್ತು ಚರ್ಚೆಗಳು

ಸಾಮಾನ್ಯವಾಗಿ ಒಬಿಸಿ ವರ್ಗದೊಳಗೆ ಯಾವ ಜಾತಿಯನ್ನಾದರೂ ಸೇರಿಸುವುದು ಆ ಜಾತಿಯ ಮತಬ್ಯಾಂಕ್ ಬಲವನ್ನು ಆಧರಿಸಿದೆ. ಒಬಿಸಿ ವರ್ಗದೊಳಗೆ ಹೊಸ ಜಾತಿಯನ್ನು ಸೇರಿಸುವ ಕುರಿತು ಚುನಾವಣೆಗೆ ಮುನ್ನವೇ ಅಧಿಕಾರದಲ್ಲಿರುವ ಪಕ್ಷ ಕ್ರಮಕ್ಕೆ ಮುಂದಾಗುತ್ತದೆ. ಏಕೆಂದರೆ ಸಂಬಂಧಪಟ್ಟ ಜಾತಿಯ ಮತದಾರರು ಆ ಪಕ್ಷದ ಪರವಾಗಿ ಮತ ಚಲಾಯಿಸುವ ಸಲುವಾಗಿ. ಮತ್ತೊಂದೆಡೆ ಪಕ್ಷಗಳಿಂದ ಮತಗಳನ್ನು ಸೆಳೆಯಲು ಅಧಿಕಾರಕ್ಕೆ ಬರುವ ಮುನ್ನವೇ ಜಾತಿಗಳನ್ನು ಒಬಿಸಿಗೆ ಸೇರಿಸುವ ಭರವಸೆ ನೀಡುತ್ತವೆ. ರಾಜಕೀಯ ಪಕ್ಷಗಳ ಈ ಉಪಕ್ರಮಗಳು ಜಾತಿ ಮತ್ತು ಮೀಸಲಾತಿ ರಾಜಕೀಯದ ನಂಟನ್ನು ಬಹಿರಂಗಗೊಳಿಸುತ್ತದೆ.

Update: 2024-01-07 04:02 GMT

Photo: PTI

 ಸರ್ವೋಚ್ಚ ನ್ಯಾಯಾಲಯ ಇಂದಿರಾ ಸಹಾನಿ ಪ್ರಕರಣದಲ್ಲಿ ಇತ್ತ ತೀರ್ಪಿನ ನಂತರ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜಕೀಯ ಮತ್ತು ಕಾನೂನು ಚರ್ಚೆಯಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು. ಜಾತಿ, ಈಗ ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 1990ರ ದಶಕದ ಆರಂಭದಲ್ಲಿ ಕೇವಲ ಒಂಭತ್ತು ರಾಜ್ಯಗಳು ಒಬಿಸಿಗಳ ಪರವಾಗಿ ಮೀಸಲಾತಿ ನೀತಿಯನ್ನು ಅಳವಡಿಸಿಕೊಂಡಿದ್ದವು ಮತ್ತು ಕೆಲವೇ ಕೆಲವು ರಾಜ್ಯಗಳು ಅಂದರೆ -ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಮತ್ತು ಲಕ್ಷದ್ವೀಪ ರಾಜ್ಯಗಳಲ್ಲಿ ಒಬಿಸಿ ಜನಸಂಖ್ಯೆ ಇಲ್ಲದ ಕಾರಣ ಒಬಿಸಿ ಮೀಸಲಾತಿ ಆ ರಾಜ್ಯಗಳಲ್ಲಿ ಜಾರಿಯಲ್ಲಿ ಇರಲಿಲ್ಲ. 2015- 2018ರ ಅವಧಿಯಲ್ಲಿ 120 ಜಾತಿಗಳು/ಸಮುದಾಯಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಿ ಅಧಿಸೂಚನೆ ಹೊರಡಿಸಿದೆ ಎಂಬುದನ್ನೂ ಗಮನಿಸಬೇಕು.

ಸಮಕಾಲೀನ ಭಾರತದಲ್ಲಿ ಜಾತಿಯು ಅತ್ಯಂತ ಪ್ರಸಕ್ತವಾದ ಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚೆಗೆ ಹರ್ಯಾಣದ ಜಾಟರು, ಗುಜರಾತಿನ ಪಟೇಲರು-ಪಾಟೀದಾರರು, ಮಹಾರಾಷ್ಟ್ರದ ಮರಾಠರು, ರಾಜಸ್ಥಾನದ ಗುಜ್ಜಾರರು, ಆಂಧ್ರಪ್ರದೇಶದ ಕಾಪುಗಳು ಸೇರಿದಂತೆ ಹಲವು ಜಾತಿಗಳು ಪ್ರತಿಭಟನೆಯಲ್ಲಿ ನಿರತವಾಗಿವೆ ಮತ್ತು ಆಕ್ರಮಣಕಾರಿಯಾಗಿ ಬೇಡಿಕೆಯನ್ನೂ ಮಂಡಿಸುತ್ತಿವೆ. ಒಬಿಸಿ ವರ್ಗದ ಒಂದು ಭಾಗವಾಗಲೂ ಎಲ್ಲಾ ರೀತಿಯ ಆದ್ಯತಾ ಉಪಚಾರ ತತ್ವ ಅಥವಾ ನಿರ್ದಿಷ್ಟವಾಗಿ ಹೇಳಬೇಕೆಂದರೆ ವಿವಿಧ ಹಂತಗಳಲ್ಲಿ ಮೀಸಲಾತಿಯ ಸೌಲಭ್ಯ ಪಡೆಯಲು ತುದಿಗಾಲಲ್ಲಿ ನಿಂತಿವೆ.

ಸಾಮಾನ್ಯವಾಗಿ ಒಬಿಸಿ ವರ್ಗದೊಳಗೆ ಅವರನ್ನು ಸೇರಿಸುವುದು ಅವರ ಮತಬ್ಯಾಂಕ್ ಬಲವನ್ನು ಆಧರಿಸಿದೆ. ಒಬಿಸಿ ವರ್ಗದೊಳಗೆ ಹೊಸ ಜಾತಿಯನ್ನು ಸೇರಿಸುವ ಕುರಿತು ಚುನಾವಣೆಗೆ ಮುನ್ನವೇ ಅಧಿಕಾರದಲ್ಲಿರುವ ಪಕ್ಷ ಕ್ರಮಕ್ಕೆ ಮುಂದಾಗುತ್ತದೆ. ಏಕೆಂದರೆ ಸಂಬಂಧಪಟ್ಟ ಜಾತಿಯ ಮತದಾರರು ಆ ಪಕ್ಷದ ಪರವಾಗಿ ಮತ ಚಲಾಯಿಸುವ ಸಲುವಾಗಿ. ಮತ್ತೊಂದೆಡೆ ಪಕ್ಷಗಳಿಂದ ಮತಗಳನ್ನು ಸೆಳೆಯಲು ಅಧಿಕಾರಕ್ಕೆ ಬರುವ ಮುನ್ನವೇ ಜಾತಿಗಳನ್ನು ಒಬಿಸಿಗೆ ಸೇರಿಸುವ ಭರವಸೆ ನೀಡುತ್ತವೆ. ರಾಜಕೀಯ ಪಕ್ಷಗಳ ಈ ಉಪಕ್ರಮಗಳು ಜಾತಿ ಮತ್ತು ಮೀಸಲಾತಿ ರಾಜಕೀಯದ ನಂಟನ್ನು ಬಹಿರಂಗಗೊಳಿಸುತ್ತದೆ.

ಒಬಿಸಿ ಮೀಸಲಾತಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳತ್ತ ಕಣ್ಣು ಹಾಯಿಸಿದರೆ- ಮೊದಲನೆಯದಾಗಿ, ವಿವಿಧ ಪ್ರಭಾವಿ ಜಾತಿಗಳು ಮತ್ತು ಸಮುದಾಯಗಳಿಂದ ಒಬಿಸಿ ವರ್ಗದೊಳಗೆ ಸೇರ್ಪಡೆಗೊಳ್ಳಲು ಮಂಡಿಸುವ ಬೇಡಿಕೆಯನ್ನು ಈಡೇರಿಸುವುದು. ಎರಡನೆಯದು, ಒಬಿಸಿ ಪಟ್ಟಿಯ ಪರಿಷ್ಕರಣೆ ಯಾಗದ ಪರಿಣಾಮ ವಾಗಿ ಮುಂದುವರಿದ ಜಾತಿಗಳನ್ನು ಪಟ್ಟಿಯಿಂದ ಹೊರ ಹಾಕಲು ಸಾಧ್ಯವಾಗದಿರುವುದು.

ಒಬಿಸಿ ಸೇರ್ಪಡೆಗಾಗಿ ವಿವಿಧ ಜಾತಿಗಳ ಬೇಡಿಕೆಗಳು ಮತ್ತು ಅದರ ಪರಿಣಾಮವಾಗಿ ರಾಜ್ಯದ ಕ್ರಮಗಳು ಯಥಾ ಪ್ರಕಾರ ನ್ಯಾಯ ನಿರೀಕ್ಷೆಯಿಂದ ನ್ಯಾಯಾಲಯಗಳತ್ತ ಮುಖ ಮಾಡುತ್ತವೆ. ರಾಮ್ ಸಿಂಗ್ v/s ಭಾರತ ಒಕ್ಕೂಟ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾಟ್‌ಗಳನ್ನು ಕೇಂದ್ರೀಯ ಒಬಿಸಿ ಪಟ್ಟಿಗೆ ಸೇರಿಸುವ ರಾಜಕೀಯ ಆರೋಪಿತ, ರಾಜ್ಯ ಕ್ರಮವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಿದ್ದರೂ, ಈ ವಿಷಯದಲ್ಲಿ ಭಾರತ ಸರಕಾರವು ಒಬಿಸಿಗಳ ಕೇಂದ್ರೀಯ ಪಟ್ಟಿಗೆ ಸೇರಿಸಲು ಅಧಿಸೂಚನೆ ಹೊರಡಿಸಿತು. ಆದರೆ ಅವರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಪರಿಗಣಿಸದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರಕಾರ ತಿರಸ್ಕರಿಸಿ ಅಧಿಸೂಚನೆ ಹೊರಡಿಸಿರುವುದನ್ನು ಸರಕಾರವು ಹಿಂದುಳಿದ ಅರ್ಥ ವಿವರಣೆಯ ಉದ್ದೇಶವನ್ನು ನಿರ್ಲಕ್ಷಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸುತ್ತದೆ.

2016ರಲ್ಲಿ ಹರ್ಯಾಣವು ನ್ಯಾ.ಕೆ.ಸಿ. ಗುಪ್ತಾ ಆಯೋಗದ ವರದಿಯ ಆಧಾರದ ಮೇಲೆ ಜಾಟ್ ಸಮುದಾಯವೂ ಸೇರಿದಂತೆ ಐದು ಜಾತಿಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕಾಯ್ದೆಯನ್ನು ಜಾರಿಗೊಳಿಸಿತು. ಈ ವರದಿಯನ್ನು ರಾಮ್ ಸಿಂಗ್ ತೀರ್ಪಿನಲ್ಲಿ ಚರ್ಚಿಸಲಾಗಿದೆ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವೂ ಹಲವಾರು ನಿಯತಾಂಕಗಳ ಕುರಿತು ವರದಿಯನ್ನು ಟೀಕಿಸಿದೆ.

ಅದರ ಹೊರತಾಗಿಯೂ ಪಂಜಾಬ್ ಮತ್ತು ಹರ್ಯಾಣದ ಉಚ್ಚ ನ್ಯಾಯಾಲಯವು ಮುಖ್ಯವಾಗಿ ತಾಂತ್ರಿಕ ಕಾನೂನು ಅಂಶದ ಮೇಲೆ ಕಾಯ್ದೆಯ ಕಾನೂನು ಬದ್ಧತೆಯನ್ನು ಮಾನ್ಯ ಮಾಡಿದೆ. ಸರ್ವೋಚ್ಚ ನ್ಯಾಯಾಲಯದ ರಾಮ್ ಸಿಂಗ್ ತೀರ್ಪು ಜಾಟ್‌ಗಳನ್ನು ಕೇಂದ್ರ ಸರಕಾರದ ಒಬಿಸಿ ಪಟ್ಟಿಗೆ ಸೇರಿಸಲು ಮಾತ್ರ ಸಂಬಂಧಿಸಿರುವುದರಿಂದ ರಾಜ್ಯ ಸರಕಾರ ಕಾಯ್ದೆ ರೂಪಿಸಲು ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದೂ ಹೇಳಿದೆ. ಸರ್ವೋಚ್ಚ ನ್ಯಾಯಾಲಯವು ಆಯೋಗಕ್ಕೆ ಅರ್ಹ ವರ್ಗಗಳ ಮೀಸಲಾತಿಯ ಪ್ರಮಾಣವನ್ನು ಮಾತ್ರ ನಿರ್ಧರಿಸಲು ನಿರ್ದೇಶಿಸಿ, ಆ ತನಕ ಮೀಸಲಾತಿಯ ಪ್ರಯೋಜನಗಳನ್ನು ತಡೆಹಿಡಿದಿದೆ.

ರಾಜಸ್ಥಾನದ ಗುಜ್ಜಾರ್ ಆಂದೋಲನವು ಗುಜ್ಜಾರರನ್ನು ಕೇವಲ ಒಬಿಸಿ ವರ್ಗಕ್ಕೆ ಸೇರಿಸುವುದಷ್ಟೇ ಅಲ್ಲ, ಅದಕ್ಕೆ ಒಬಿಸಿ ಚೌಕಟ್ಟಿನಲ್ಲಿಯೇ ಪ್ರತ್ಯೇಕ ಕೋಟಾ ನೀಡಬೇಕೆಂದು ಹಕ್ಕು ಮಂಡಿಸಿತು. ಪ್ರತ್ಯೇಕ ಉಪ-ಕೋಟಾ ಬೇಡಿಕೆಯಿಂದ ರಾಜಸ್ಥಾನದಲ್ಲಿ ಹಲವಾರು ಶಾಸಕಾಂಗ ಮತ್ತು ನ್ಯಾಯಾಂಗ ಬೆಳವಣಿಗೆಗೆ ಕಾರಣವಾಗಿದೆ. ರಾಜಸ್ಥಾನ ರಾಜ್ಯವು ಗುಜ್ಜಾರರು ಮತ್ತು ಇತರ ನಾಲ್ಕು ಜಾತಿಗಳಿಗೆ ವಿಶೇಷವಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಶೇ.21ರಷ್ಟು ಒಬಿಸಿ ಮೀಸಲಾತಿಯಲ್ಲಿ ಶೇ.5ರಷ್ಟು ಮೀಸಲಾತಿ ನೀಡಲು ಪ್ರಯತ್ನಿಸಿತು. ರಾಜಸ್ಥಾನ್ ಉಚ್ಚ ನ್ಯಾಯಾಲಯ ಕ್ಯಾಪ್ಟನ್ ಗುರುವಿಂದರ್ ಸಿಂಗ್ v/s ರಾಜಸ್ಥಾನ್ ಪ್ರಕರಣದಲ್ಲಿ ಅಂತಹ ವರ್ಗೀಕರಣ ಸಂವಿಧಾನ ವಿರೋಧಿ ಎಂದು ಅಮಾನ್ಯಗೊಳಿಸಿತು. ಸಂಬಂಧಿತ ಜಾತಿಗಳಿಗೆ ಪ್ರತ್ಯೇಕ ವರ್ಗವನ್ನು ರಚಿಸುವುದು ಮತ್ತು ಬೆಂಬಲಿಸುವುದಕ್ಕೆ ಅಂಥ ಯಾವುದೇ ಸಂದರ್ಭವಾಗಲೀ ಮತ್ತು ದತ್ತಾಂಶಗಳೇ ಆಗಲಿ ಇರುವುದಿಲ್ಲ ಎಂದಿತು.

ಮರಾಠರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ‘ಮರಾಠಾ ಸೇವಾ ಸಂಘ’ 1997ರ ಸಮಯದಲ್ಲಿ ಹೋರಾಟದ ಹಾದಿಯನ್ನು ಹಿಡಿದಿತ್ತು. ಅದು 2010ರ ನಂತರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಪ್ರಯುಕ್ತ, ಮರಾಠರಿಗೆ ಶೇ.16 ಮತ್ತು ಮುಸ್ಲಿಮರಿಗೆ ಶೇ.5ರಷ್ಟು ಕೋಟಾ ನಿಗದಿಪಡಿಸಿ ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿತು. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳೆರಡೂ ಕೂಡ ಆದೇಶಕ್ಕೆ ತಡೆ ಆಜ್ಞೆ ವಿಧಿಸಿದವು.

ಮರಾಠರ ನಿರಂತರ ಒತ್ತಡಕ್ಕೆ ತಲೆಬಾಗಿ ಸರಕಾರ 2017ರಲ್ಲಿ ಎಂ.ಜಿ. ಗಾಯಕ್ವಾಡ್ ಅಧ್ಯಕ್ಷತೆಯ ಆಯೋಗವನ್ನು ಮರಾಠರಿಗೆ ಮೀಸಲಾತಿ ನೀಡುವ ಸಲುವಾಗಿ ವರದಿಯನ್ನು ಕೇಳಿತು. ಆಯೋಗ ಕೊಟ್ಟ ವರದಿಯನ್ನು ಅನುಸರಿಸಿ ಶೇ. 16ರಷ್ಟು ಕೋಟಾ ನಿಗದಿಪಡಿಸಿ ಸರಕಾರ ಮರಾಠರಿಗೆ ಮೀಸಲಾತಿ ನೀಡಿ ಆದೇಶ ಹೊರಡಿಸಿತು. ಉಚ್ಚ ನ್ಯಾಯಾಲಯ ಮೀಸಲಾತಿಯನ್ನು ಒಪ್ಪಿತು, ಆದರೆ ಕೋಟಾವನ್ನು ಮಾತ್ರ ಶೇ.12ಕ್ಕೆ ಇಳಿಸಿತು. ಸರ್ವೋಚ್ಚ ನ್ಯಾಯಾಲಯ ಮುಂಬೈ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿ ಆಯೋಗದ ದತ್ತಾಂಶಗಳು ಮತ್ತು ಸಂಗತಿಗಳು ಮರಾಠಾ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ರುಜುವಾತು ಪಡಿಸಲು ಪೂರಕವಾಗಿಲ್ಲ ಮತ್ತು ಅಳವಡಿಸಿಕೊಂಡಿರುವ ಮಾನದಂಡಗಳೂ ಕೂಡ ಸಮರ್ಥವಾಗಿಲ್ಲ ಎಂದೂ ಮೀಸಲಾತಿ ಆದೇಶವನ್ನು ತಳ್ಳಿಹಾಕಿತು(ಜೈಶ್ರೀ ಲಕ್ಷ್ಮಣರಾವ್ ಪಾಟೀಲ್ v/s ರಾಜ್ಯದ ಮುಖ್ಯಮಂತ್ರಿ).

ಒಬಿಸಿಯೊಳಗೆ ಜಾತಿಗಳನ್ನು ಸೇರಿಸುವುದನ್ನು ತಡೆಯುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದಾಗಿದೆ ಹಾಗೆಯೇ ಸೀಮಿತವೂ ಆಗಿದೆ. ನ್ಯಾಯಾಲಯಗಳು ಬಹುತೇಕ ಇಂದಿರಾ ಸಹಾನಿ ಮತ್ತು ಇದರ ನಂತರದ ತೀರ್ಪುಗಳು ಹಾಕಿದ ಮಾರ್ಗದರ್ಶಿ ಸೂತ್ರಕ್ಕೆ ಬದ್ಧವಾಗಿವೆ. ನ್ಯಾಯಾಲಯದ ಪರಿಶೀಲನೆಯೂ ಸೇರಿಸಬೇಕಾದ ಜಾತಿಯು ವಾಸ್ತವವಾಗಿ ಹಿಂದುಳಿದಿದೆಯೇ ಅಥವಾ ಇಲ್ಲವೇ ಎಂಬಷ್ಟಕ್ಕೆ ಸೀಮಿತವಾಗಿದೆ.

ಹಿಂದುಳಿದ ವರ್ಗದ ಟ್ಯಾಗ್ ಪಡೆಯಲು ಜಾತಿಗಳ ಕೂಗು ಹಿಂದುಳಿದಿರುವಿಕೆಯ ಸಮಸ್ಯೆಯ ಮತ್ತೊಂದು ಕೋನವನ್ನು ಬಹಿರಂಗಪಡಿಸುತ್ತದೆ. ಕೆಲವು ಜಾತಿಗಳು (ಪ್ರಧಾನವಾಗಿ ಕೃಷಿಕ ಜಾತಿಗಳು) ಆಯಾ ರಾಜ್ಯಗಳಲ್ಲಿ ರಾಜಕೀಯವಾಗಿ ಪ್ರಬಲವಾಗಿದ್ದರು. 1990ರ ದಶಕದ ನಂತರ ದೇಶವು ಅಳವಡಿಸಿಕೊಂಡ ಆರ್ಥಿಕ ನೀತಿಯಿಂದಾಗಿ ಆರ್ಥಿಕ ತೊಡರುಗಳನ್ನು ಎದುರಿಸುತ್ತಿವೆ. ಅಲ್ಲಿ ಕೃಷಿಯು ಆರ್ಥಿಕ ಬೆಳವಣಿಗೆಯ ಪ್ರಮುಖ ಸಾರಥಿಯಾಗಿ ಮಹತ್ವವನ್ನು ಕಳೆದುಕೊಂಡಿದೆ.

ಅನೇಕ ವಿಷಯ ತಜ್ಞರು ಕೂಡ ಮರಾಠರನ್ನು ಸಾಮಾಜಿಕವಾಗಿ ಹಿಂದುಳಿದವರು ಎಂದು ಪರಿಗಣಿಸಲು ಸಾಧ್ಯವಾಗಿಲ್ಲದಿರುವುದು ಅವರು ರಾಜಕೀಯ ಪ್ರಾತಿನಿಧ್ಯದಲ್ಲಿ ಮೇಲುಗೈ ಪಡೆದುಕೊಂಡಿರುವುದು ಅಲ್ಲದೇ, ಅನೇಕ ವಿದ್ಯಾಸಂಸ್ಥೆಗಳನ್ನೂ ಮತ್ತು ಸಹಕಾರ ಸಂಘಗಳನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವುದೇ ನೈಜ ಕಾರಣ. ಹಸಿರು ಕ್ರಾಂತಿಯ ಫಲಾನುಭವಿಗಳಾಗಿದ್ದ ಮತ್ತು ಸಮೃದ್ಧಿಯನ್ನೂ ಹೊಂದಿದ್ದ ಜಾಟ್‌ಗಳ ಸ್ಥಿತಿಯೂ ಮರಾಠರ ಸ್ಥಿತಿಯನ್ನೇ ಹೋಲುವುದು. ಒಂದು ಕಾಲದಲ್ಲಿ ಕ್ಷತ್ರಿಯ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದ ಜಾಟ್‌ಗಳು ತಮ್ಮ ತಂತ್ರ ಬದಲಾಯಿಸಿ ಆಕ್ರಮಣಕಾರಿಯಾಗಿ ಒಬಿಸಿ ಸ್ಥಾನ ಮಾನಕ್ಕೆ ಒತ್ತಾಯಿಸುತ್ತಿದ್ದಾರೆ.

ಅದೇ ರೀತಿ, 1980ರ ದಶಕದ ಮೊದಲಾರ್ಧದಲ್ಲಿ ಮೀಸಲಾತಿ ಪರ ಶಕ್ತಿಗಳ ವಿರುದ್ಧ ಹೋರಾಡಿದ ಪಟೇಲರು ಒಂದು ಜಾತಿಯಾಗಿ ಪ್ರವರ್ಧಮಾನಕ್ಕೆ ಬಂದರು. ಜಮೀನ್ದಾರಿ ಪದ್ಧತಿ ರದ್ದತಿಯ ಪರಿಣಾಮವಾಗಿ ಮತ್ತು 70- 80ರ ದಶಕದಲ್ಲಿ ಸಣ್ಣ ಪ್ರಮಾಣದ ಉದ್ಯಮಗಳನ್ನು ಬೆಂಬಲಿಸುವ ರಾಜ್ಯ ನೀತಿಯಿಂದ ಅವರು ಹೆಚ್ಚು ಪ್ರಯೋಜನ ಪಡೆದುಕೊಂಡರು. ಹೀಗಿದ್ದರೂ ಪಟೇಲರು ಒಬಿಸಿ ಮೀಸಲಾತಿಗಾಗಿ ಇಂದೂ ಹೋರಾಟವನ್ನು ನಿಲ್ಲಿಸಿಲ್ಲ. ಒಬಿಸಿಗಳು ಅತಿ ದೊಡ್ಡ ಮತ ಬ್ಯಾಂಕ್ ಆಗಿರುವುದರಿಂದ ರಾಜಕೀಯ ಪ್ರೇರಣೆಯೇ ಪ್ರೇರಕ ಶಕ್ತಿಯಾಗಿದೆ.

ಸಕಾರಾತ್ಮಕ ತಾರತಮ್ಯದ ನೀತಿಯಾಗಿ ಮೀಸಲಾತಿಯನ್ನು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ನಿರ್ದಿಷ್ಟ ಸಮಯಕ್ಕೆ ಮಾತ್ರ ಕಾರ್ಯಗತ ಗೊಳಿಸಬೇಕಾಗುತ್ತದೆ ಮತ್ತು ಅದನ್ನು ಶಾಶ್ವತ ಗೊಳಿಸಲು ಸಹ ಸಾಧ್ಯವಿಲ್ಲ. ನಮ್ಮ ಆರ್ಥಿಕತೆಯು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿದ ನಂತರ ಮೀಸಲಾತಿಯ ಬೇಡಿಕೆಯು ತಾನಾಗಿಯೇ ದೂರವಾಗುತ್ತದೆ.

ಒಬಿಸಿ ಪಟ್ಟಿ ಪರಿಷ್ಕರಣೆ:

ಮುಂದುವರಿದ ಜಾತಿಗಳು ಹಿಂದುಳಿದ ಸ್ಥಾನಮಾನದ ಬೇಡಿಕೆ ಇಟ್ಟು ಅದನ್ನು ಪಡೆದೂ ಮೀಸಲಾತಿಯ ಎಲ್ಲಾ ಪ್ರಯೋಜನ ಗಳನ್ನೂ ಅನುಭವಿಸಿ ಮೇಲ್ಮುಖವಾದ ಸಾಮಾಜಿಕ ಚಲನೆಯನ್ನು ಗಳಿಸಿದ್ದರೂ, ಒಬಿಸಿ ವರ್ಗದಲ್ಲಿ ಅಂತಹ ಜಾತಿಗಳ ಮುಂದುವರಿಕೆ ಸಮಸ್ಯಾತ್ಮಕವಾಗತ್ತದೆ. ಒಬಿಸಿ ಪಟ್ಟಿಯನ್ನು ಪರೀಕ್ಷಣೆಗೆ ಒಳಪಡಿಸಿದಿದ್ದರೆ, ಹಾಗೆ ಪಟ್ಟಿಯಲ್ಲಿ ಸೇರಿಸಲಾದ ಜಾತಿಗಳು ಶಾಶ್ವತವಾಗಿ ಮುಂದುವರಿಯುವುದು ಖಚಿತವಾಗುತ್ತದೆ. ಯು.ಎಸ್.ವಿ. ಬಲರಾಮ್, ಕೆ.ಸಿ.ವಸಂತ್ ಕುಮಾರ್, ಇಂದಿರಾ ಸಹಾನಿ, ಅಶೋಕ್ ಠಾಕೂರ್ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಬಹು ಸಂಖ್ಯೆಯು ಒಬಿಸಿ ಪಟ್ಟಿಯ ಪರೀಕ್ಷಣಾ ಕಾರ್ಯವನ್ನು ಕೈಗೊಳ್ಳಲು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ನ್ಯಾಯಾಲಯದ ನಿರ್ದೇಶನವನ್ನು ರಾಜ್ಯ ಸರಕಾರಗಳಾಗಲಿ ಅಥವಾ ಕೇಂದ್ರ ಸರಕಾರವಾಗಲಿ ಅನುಷ್ಠಾನಗೊಳಿಸುವಲ್ಲಿ ಸೋತಿವೆ. ರಾಜಸ್ಥಾನ ಉಚ್ಚ ನ್ಯಾಯಾಲಯ, ಕ್ಯಾಪ್ಟನ್ ಗುರು ವಿಂದರ್ ಸಿಂಗ್ ಪ್ರಕರಣದಲ್ಲಿ ರಾಜ್ಯದ ಪಾತ್ರವನ್ನು ಕಟುವಾಗಿ ಟೀಕಿಸಿದೆ. ಆಯೋಗ ಒದಗಿಸಿದ ದತ್ತಾಂಶಗಳನ್ನು ವೀಕ್ಷಿಸಿದ ನ್ಯಾಯಾಲಯ, ಗೊತ್ತು ಪಡಿಸಲಾದ ಶೇ. 21ರಷ್ಟಕ್ಕಿಂತ ಒಬಿಸಿ ಅಭ್ಯರ್ಥಿಗಳು ಶೇ.30ರಷ್ಟು ಹುದ್ದೆಗಳನ್ನು ಪಡೆದುಕೊಂಡಿವೆ. ಮುಂದೆ, ನ್ಯಾಯಾಲಯ ಸ್ಪಷ್ಟಪಡಿಸಿರುವಂತೆ ಕೇವಲ ನಾಲ್ಕು ಜಾತಿಗಳು ಶೇ.60ರಷ್ಟು ಒಬಿಸಿ ಮೀಸಲಾತಿಯ ಹುದ್ದೆಗಳನ್ನು ಪಡೆದುಕೊಂಡಿವೆ. ಅವುಗಳಲ್ಲಿ ಜಾಟ್ ಸಮುದಾಯದ ಅಭ್ಯರ್ಥಿಗಳೇ ಶೇ.30ರಷ್ಟು ಹುದ್ದೆಗಳನ್ನು ಆಕ್ರಮಿಸಿ ಕೊಂಡಿದ್ದಾರೆ.

ಜಾತಿಗಳ ಪರಿಷ್ಕರಣೆಯಿಂದ ಮೀಸಲಾತಿಯ ಪ್ರಯೋಜನವು ಒಬಿಸಿ ವರ್ಗದ ನಿಜವಾದ ಹಿಂದುಳಿದ ಸದಸ್ಯರನ್ನು ತಲುಪುವುದು ಅತಿ ಮುಖ್ಯ. ಇಲ್ಲದಿದ್ದರೆ ಒಬಿಸಿ ಸಮುದಾಯದ ಬಲಾಢ್ಯ ಸದಸ್ಯರು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಇದು ಸಾಮಾಜಿಕ ನ್ಯಾಯ ಎಂದು ಕರೆಯಲ್ಪಡುವ ಮೀಸಲಾತಿಗೆ ಅಪಹಾಸ್ಯ ಉಂಟು ಮಾಡಿದಂತಾಗುತ್ತದೆ.

ಕರ್ನಾಟಕದಲ್ಲಿ ಸಹ ಪ್ರಸಕ್ತ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯು ಸುಮಾರು 30 ವರ್ಷಗಳಿಂದ ಪರಿಷ್ಕರಣೆಗೆ ಒಳಪಟ್ಟಿಲ್ಲ. ನಿಜ ಅರ್ಥದಲ್ಲಿ ಹಿಂದುಳಿದ ವರ್ಗಗಳ ದೃಷ್ಟಿಯಿಂದ ಇದು ದುರಂತ. ಇದುವರೆಗೂ ಯಾರೊಬ್ಬರೂ ಸರಕಾರ ಮಾಡಲೇಬೇಕಾದ ಈ ಪ್ರಕಾರ್ಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಉಸಾಬರಿಗೆ ಹೋಗಲೇ ಇಲ್ಲ. ರಾಜಕೀಯ (ಕು)ತಂತ್ರಗಾರಿಕೆಯಿಂದ ಒಬಿಸಿ ಎಂದೂ ಪರಿಗಣಿಸಿದ ಬಲಿಷ್ಠ ಸಮುದಾಯಗಳೆರಡೂ ತಮ್ಮ ನ್ಯಾಯವಲ್ಲದ ಪಾಲನ್ನೂ ಪಡೆಯುತ್ತಲೇ ಹೋಗುತ್ತವೆ; ನಿಜವಾದ ಒಬಿಸಿಗಳು ಮತ್ತಷ್ಟೂ ಬಳಲಿ ಬಡಕಲಾಗುತ್ತಿವೆ. ಆ ವಿಷಯದಲ್ಲಿ ಯಾವ ರಾಜ್ಯಗಳೂ ಹೊರತಲ್ಲ ಬಿಡಿ.

ತೃತೀಯ ಲಿಂಗಿಗಳು ಒಬಿಸಿಗೆ:

ಎಪ್ರಿಲ್ 2014ರಲ್ಲಿ ಓಂಐSಒ v/s ಭಾರತ ಒಕ್ಕೂಟ ಪ್ರಕರಣದಲ್ಲಿ ಹೆಗ್ಗುರುತಾಗಿರುವ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ತೃತೀಯ ಲಿಂಗಿಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ಪರಿಗಣಿಸಲು ಮತ್ತು ಒಬಿಸಿ ಸದಸ್ಯರಿಗೆ ಲಭ್ಯವಿರುವ ಎಲ್ಲಾ ರೀತಿಯ ಮೀಸಲಾತಿ ಸೌಲಭ್ಯಗಳನ್ನು ವಿಸ್ತರಿಸಲು ರಾಜ್ಯಗಳಿಗೆ ನಿರ್ದೇಶಿಸಿತು. ಆದರೂ, ಒಬಿಸಿಯೊಳಗೆ ಅವರ ಸೇರ್ಪಡೆಯೊಂದಿಗೆ ಕೆಲವು ಸಮಸ್ಯೆಗಳಿವೆ, ಅವು ಸಾಂವಿಧಾನಿಕ ಚೌಕಟ್ಟಿನೊಳಗೆ ಆಳವಾದ ಪರೀಕ್ಷೆ ಮತ್ತು ವಿವೇಚನೆಗೆ ಒಳಗೊಳ್ಳಬೇಕಾಗಿದೆ.

ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯುಎಸ್):

ಸರ್ವೋಚ್ಚ ನ್ಯಾಯಾಲಯ ಇಂದಿರಾ ಸಹಾನಿ ಪ್ರಕರಣದಲ್ಲಿ ಆರ್ಥಿಕ ಮಾನದಂಡ ಒಂದನ್ನೇ ಇಟ್ಟುಕೊಂಡು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಪರಿಗಣಿಸ ತಕ್ಕದ್ದಲ್ಲ ಎಂದು ಹೇಳಿತ್ತು. ವಾಸ್ತವತೆ ಹೀಗಿದ್ದರೂ 2019ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಹೊಸದಾಗಿ 15(6) ಮತ್ತು 16(6) ಪರಿಚ್ಛೇದಗಳನ್ನು ಸೇರಿಸಿ ಆರ್ಥಿಕ ದುರ್ಬಲ ವರ್ಗ ಗಳಿಗೆ ಶೇ.10ರಷ್ಟು ಮೀಸಲಾತಿ ನೀಡಲಾ ಯಿತು. ಈ ವರ್ಗ ಸಾಕಷ್ಟು ಪ್ರಾತಿನಿಧ್ಯ ಹೊಂದಿರುವುದೇ ಅಥವಾ ಇಲ್ಲವೇ ಎಂಬುದನ್ನು ಅಧ್ಯಯನ ಮಾಡಲು ಯಾವ ಆಯೋಗವನ್ನೂ ರಚಿಸುವ ಗೊಡವೆಗೆ ಸರಕಾರ ಹೋಗಲೇ ಇಲ್ಲ. ಸರ್ವೋಚ್ಚ ನ್ಯಾಯಾಲಯ ಕೂಡ ಸರಕಾರದ ಈ ನಿರ್ಧಾರವನ್ನು 3:2ರ ಬಹುಮತದೊಡನೆ ತೀರ್ಮಾನಿಸಿ, ಸಾಂವಿಧಾನಿಕ ತಿದ್ದುಪಡಿಯು ಸಂವಿಧಾನ ಹಾಗೂ ಮೂಲಭೂತ ರಚನೆಯ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿತು(ಜನಹಿತ್ ಅಭಿಯಾನ್ v/s ಭಾರತ ಒಕ್ಕೂಟ).

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ನಿರ್ವಹಿಸುವ ಕಾನೂನು ತತ್ವದಲ್ಲಿ, ಜಾತಿಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಭಾರತೀಯ ಸಮಾಜದಲ್ಲಿ ಜಾತಿ ಮತ್ತು ವರ್ಗ ವಿಭಜನೆಯನ್ನು ತೊಡೆದು ಹಾಕಲು ಉದ್ದೇಶವಿರುವ ಸಂವಿಧಾನವು ಜಾತಿ ವ್ಯವಸ್ಥೆಯಿಂದ ಉಂಟಾಗುವ ಅಸಮಾನತೆಗಳನ್ನು ಪರಿಹರಿಸಲು ಮತ್ತು ಸಾಮಾಜಿಕ ನ್ಯಾಯದ ಗುರಿಯನ್ನು ಹೊಂದಲು ಜಾತಿ ಆಧಾರಿತ ಮೀಸಲಾತಿಯನ್ನು ಬೆಂಬಲಿಸು ವುದು ಸಮಕಾಲೀನ ಸಮಾಜದಲ್ಲಿ ಸಮಂಜಸವೆನಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎನ್. ಲಿಂಗಪ್ಪ

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Similar News