ಕಾಫಿ ಮಧ್ಯೆ ಕಮರಿದ ʼಕೂರ್ಗ್ ಮ್ಯಾಂಡರಿನ್ʼ

Update: 2024-02-12 09:58 GMT

ಮಡಿಕೇರಿ, ಫೆ.11: ವಿಶಿಷ್ಟ ರುಚಿಯಿಂದ ವಿಶ್ವಾದ್ಯಂತ ಜನಪ್ರಿಯತೆ ಹಾಗೂ ಬೇಡಿಕೆ ಪಡೆದಿದ್ದ ‘ಕೂರ್ಗ್ ಮ್ಯಾಂಡರಿನ್’ (ಕೊಡಗಿನ ಕಿತ್ತಳೆ) ಬೆಳೆಯಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಿತ್ತಳೆ ನಾಡು ಕೊಡಗಿನಲ್ಲೇ ಮಾಯವಾಗುತ್ತಿದೆ. ಪ್ರಸಕ್ತ ಕಾಫಿ ತೋಟಗಳ ಮಧ್ಯೆ, ಅಲ್ಲಲ್ಲಿ ಒಂದೆರಡು ಕಿತ್ತಳೆ ಕಂಡರೆ ಭಾಗ್ಯ ಎಂಬಲ್ಲಿಗೆ ಕೂರ್ಗ್ ಮ್ಯಾಂಡರಿನ್ ತಲುಪಿದೆ.

ಅಳಿವಿನಂಚಿನಲ್ಲಿರುವ ಕೂರ್ಗ್ ಮ್ಯಾಂಡರಿನ್ ಪುನಃಶ್ಚೇತನಕ್ಕಾಗಿ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿಗಳು ಹೊಸ ಯೋಜನೆಯನ್ನು ರೂಪಿಸಿದ್ದಾರೆ. ರಾಷ್ಟ್ರೀಯ ಕೃಷಿ ವಿಕಾಸ್ ಅಡಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.

ರೈತರಿಗೆ ಉಚಿತ ಕಿತ್ತಳೆ ಗಿಡ: ಕಿತ್ತಳೆಯನ್ನು ಅಭಿವೃದ್ಧಿಪಡಿಸಲು ಹಾಗೂ ಕಿತ್ತಳೆ ಬೆಳೆಯಲು ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಈ ಮೂರು ಜಿಲ್ಲೆಯ ಆಯ್ದ ಬೆಳೆಗಾರರನ್ನು ಆಯ್ಕೆ ಮಾಡಿ ಅವರಿಗೆ ಕಿತ್ತಳೆ ಗಿಡಗಳನ್ನು ಉಚಿತವಾಗಿ ನೀಡಿ, ಗಿಡಕ್ಕೆ ಬೇಕಾದ ಕೀಟನಾಶಕ ಹಾಗೂ ಗಿಡದ ಪೋಷಣಾ ವೆಚ್ಚವನ್ನು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಇಲಾಖೆ ಭರಿಸಲಿದೆ.

ಕೊಡಗಿನ ಕಿತ್ತಳೆ ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿದ್ದರೂ ರುಚಿ ಉತ್ಕೃಷ್ಟ. ಕೊಡಗಿನ ಕಿತ್ತಳೆಯನ್ನು ದಕ್ಷಿಣ ಭಾರತದ ವಿವಿಧೆಡೆಗಳಲ್ಲಿ ಬೆಳೆಯಲಾಗುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಕೊಡಗಿನ ಹವಾಮಾನದಲ್ಲಿ ಮಾತ್ರ ಕೊಡಗಿನ ಕಿತ್ತಳೆ ಬೆಳೆಯಲು ಸಾಧ್ಯ. ಕೊಡಗಿನ ಕಿತ್ತಳೆಗೆ 2005-06ರಲ್ಲಿ ಭೌಗೋಳಿಕವಾಗಿ ಸೂಚಕ ಸ್ಥಾನಮಾನ ದೊರಕಿದೆ. ಆದರೆ, ಕಿತ್ತಳೆ ಬೆಳೆಯುವ ಪ್ರದೇಶಗಳು ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಕೂರ್ಗ್ ಮ್ಯಾಂಡರಿನ್ ಅಳಿವಿನಂಚಿಗೆ ತಲುಪಿದೆ.

1830ರ ಅವಧಿಯಲ್ಲಿ ಬಿಟ್ರಿಷರು ಕೊಡಗಿನ ಪರ್ವತ ಪ್ರದೇಶದ ಬಾಣೆ ಜಾಗದಲ್ಲಿ ಕಿತ್ತಳೆ ಬೆಳೆದಿದ್ದರು. 1940ರಲ್ಲಿ 10 ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆದಿದ್ದ ಕೂರ್ಗ್ ಮ್ಯಾಂಡರಿನ್ 1960-70ರಲ್ಲಿ 50,000 ಎಕರೆ ಪ್ರದೇಶಕ್ಕೆ ವ್ಯಾಪಿಸಿತ್ತು. ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಮಾರುಕಟ್ಟೆಯಲ್ಲಿ ಕೊಡಗಿನ ಕಿತ್ತಳೆ ಹಣ್ಣಿನ ಬೇಡಿಕೆಯೂ ಹೆಚ್ಚಾಗಿತ್ತು. 1942-43ರಲ್ಲಿ ಜಿಲ್ಲೆಯಲ್ಲಿ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘವೂ ಸ್ಥಾಪನೆಯಾಯಿತು. ಕೂರ್ಗ್ ಮ್ಯಾಂಡರಿನ್ ಬೆಳೆ ಅಭಿವೃದ್ಧಿಪಡಿಸಲು ಹಾಗೂ ಸಂಶೋಧಿಸಲು 1947ರಲ್ಲಿ ಚೆಟ್ಟಳ್ಳಿಯಲ್ಲಿ ಕಿತ್ತಳೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಯಿತು. ನಂತರ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರವಾಗಿ ಮಾರ್ಪಡಿತ್ತು. ಇದೀಗ ಬೆಳೆಗಾರರು ಕೊಡಗಿನ ಕಿತ್ತಳೆಯನ್ನು ಕೇವಲ 2,500ರಿಂದ 3,000 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದಾರೆ.

ಕಿತ್ತಳೆ ಹಣ್ಣಿಗೆ ಹಳದಿ ರೋಗ: 1950ರ ಅವಧಿಯಲ್ಲಿ ಕಿತ್ತಳೆ ಬೆಳೆಗೆ ಕಾಣಿಸಿಕೊಂಡ ಸಿಟ್ರಸ್ ಡೈ ಬ್ಯಾಕ್ ರೋಗ (ಹಳದಿ ರೋಗ) ಕೂರ್ಗ್ ಮ್ಯಾಂಡರಿನ್ ಅವಸಾನಕ್ಕೆ ಮುನ್ನುಡಿ ಬರೆಯಿತು. 1980ರಿಂದ 90ರ ಅವಧಿಯಲ್ಲಂತೂ ಕೊಡಗಿನ ಕಿತ್ತಳೆಗೆ ಹಳದಿ ರೋಗ ಬಾಧಿಸಿ ಅವನತಿಯ ಹಂತ ತಲುಪಿತ್ತು. ಈ ಕಾರಣದಿಂದಲೇ ಜಿಲ್ಲೆಯ ಬೆಳೆಗಾರರು ಕಿತ್ತಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಅದಲ್ಲದೆ ಕಿತ್ತಳೆ ಗಿಡಗಳಿಗೆ ತಗಲಿರುವ ಹಳದಿ ರೋಗವನ್ನು ತಡೆಗಟ್ಟಲು ರೋಗ ನಿರೋಧಕಗಳನ್ನು ಸಿಂಪಡಿಸಬೇಕಾಗಿರುವುದರಿಂದ ಯಾರೂ ಕಿತ್ತಳೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಕಾಫಿ ಹಾಗೂ ಕರಿಮೆಣಸು ಮುಖ್ಯ ಬೆಳೆಯಾಗಿರುವುದರಿಂದ ಬಹುತೇಕರು ಲಾಭದಾಯಕವಾದ ಕಿತ್ತಳೆ ಹಣ್ಣಿನ ಬೆಳೆಯನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕೆರೆ

contributor

Similar News