ಸುನೀತಾ ರೋಡ್ ಶೋ ಹೊಸ ನಾಯಕತ್ವದ ಸಂಕೇತವಾಗಬಹುದೇ?

Update: 2024-05-09 09:02 GMT

ಸರಿಯಾಗಿ ಚುನಾವಣೆ ಎದುರಿಸಬೇಕಾದ ಹೊತ್ತಿನಲ್ಲಿಯೇ ವಿಪಕ್ಷ ನಾಯಕನನ್ನು ಜೈಲಿಗೆ ತಳ್ಳಲಾಗುತ್ತದೆ ಮತ್ತು ಪತಿಗೋಸ್ಕರ ಪತ್ನಿ ಹೋರಾಟದ ಕಣಕ್ಕಿಳಿಯುವ ಹಾಗಾಗುತ್ತದೆ.

ಒಂದೆಡೆ ವೈಯಕ್ತಿಕ ಸಂಕಟ, ಸಂಘರ್ಷವನ್ನೂ ಇನ್ನೊಂದೆಡೆ ಪಕ್ಷಕ್ಕಾಗಿ ಪತಿಯ ಪರವಾಗಿ ಹೊಣೆಗಾರಿಕೆಯನ್ನೂ ನಿಭಾಯಿಸುವ ಸನ್ನಿವೇಶ ಅದು.

ಈ ದೇಶದಲ್ಲಿ ವಿಪಕ್ಷಗಳನ್ನು ಇಂಥ ಅನಿವಾರ್ಯತೆಗೆ ತಳ್ಳಿ ಚುನಾವಣೆಯನ್ನು ತಮ್ಮ ಪಾಲಿಗೆ ಸುಲಭವಾಗಿಸಿಕೊಳ್ಳುವ ತಂತ್ರವನ್ನು ಅಧಿಕಾರಸ್ಥರು ರೂಪಿಸಿರುವಾಗ, ಇಂತಹ ಸವಾಲನ್ನು ವಿಪಕ್ಷಗಳು ಹೇಗೆ ಎದುರಿಸುತ್ತವೆ?

ಈ ಪ್ರಶ್ನೆಗೆ ಉತ್ತರವೆಂಬಂತೆ ದಿಲ್ಲಿ ಚುನಾವಣಾ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿರುವವರು ರಾಜಕೀಯ ನಾಯಕರೊಬ್ಬರ ಪತ್ನಿ.

ಅವರ ಹೋರಾಟದಲ್ಲಿ ಕಾಣಿಸುತ್ತಿರುವುದು ನಿಜವಾಗಿಯೂ ಈ ದೇಶದ ಜನಸಾಮಾನ್ಯರ ಆತ್ಮವಿಶ್ವಾಸ ಮತ್ತು ಛಲಗಾರಿಕೆ.

ವೈಯಕ್ತಿಕ ಬಾಂಧವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಅಂತಹ ಸನ್ನಿವೇಶದಲ್ಲಿ ಚುನಾವಣಾ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿರುವವರು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್.

ಅರವಿಂದ ಕೇಜ್ರಿವಾಲ್ ಅವರಿಗೆ ಮಂಗಳವಾರವೂ ಜಾಮೀನು ಸಿಗಲಿಲ್ಲ. ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆದೇಶ ಕಾಯ್ದಿರಿಸಿದೆ. ವಿಚಾರಣೆ ಮುಂದೂಡಲಾಗಿರುವುದರಿಂದ ಕೇಜ್ರಿವಾಲ್ ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ.

ಕೇಜ್ರಿವಾಲ್ ಅವರಿಗೆ ಜಾಮೀನು ಸಿಗಬಹುದು ಮತ್ತವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಅವಕಾಶವಾಗಲಿದೆ ಎಂಬ ನಿರೀಕ್ಷೆಯಲ್ಲಿ ಎಎಪಿ ಇದೆ. ಆದರೆ, ಅದರ ಕಾಯುವಿಕೆ ದೀರ್ಘವಾಗತೊಡಗಿದೆ.

ಗಮನ ಸೆಳೆದ ಒಂದು ಸಂಗತಿಯೆಂದರೆ, ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ ಅವರ ಪತ್ನಿ ಸುನೀತಾ ಆಮ್ ಆದ್ಮಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರೀತಿ.

ದಿಲ್ಲಿಯಲ್ಲಿ ಸುನೀತಾ ಕೇಜ್ರಿವಾಲ್ ರೋಡ್ ಶೋ ನಡೆಸಿದರು.

ಎಎಪಿಯ ಮೂವರು ಪ್ರಮುಖ ನಾಯಕರು ಜೈಲಿನಲ್ಲಿರುವ ಹೊತ್ತು ಇದು. ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಜೈಲಿನಲ್ಲಿರುವಾಗ, ಎಎಪಿ ದೊಡ್ಡ ಮಟ್ಟದಲ್ಲಿಯೇ ಶಕ್ತಿ ಕಳೆದುಕೊಂಡಂತಾಗಿದೆ.

ಕೇಜ್ರಿವಾಲ್ ಮತ್ತು ಸಿಸೋಡಿಯಾ ಪಕ್ಷದ ಪ್ರಮುಖ ಪ್ರಚಾರಕರು. ಆದರೆ ಇಬ್ಬರೂ ಜೈಲಿನಲ್ಲಿರುವುದು ಪಕ್ಷಕ್ಕೆ ದೊಡ್ಡ ಹೊಡೆತ.

ಈಚೆಗಷ್ಟೇ ಜೈಲಿನಿಂದ ಬಿಡುಗಡೆಯಾದ ಸಂಜಯ್ ಸಿಂಗ್ ಹಾಗೂ ಅವರ ಜೊತೆ ಗೋಪಾಲ್ ರಾಯ್, ಸೌರಭ್ ಭಾರದ್ವಾಜ್, ದಿಲೀಪ್ ಪಾಂಡೆ ಹಾಗೂ ಆತಿಶಿ ಸಿಂಗ್ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.

ಆದರೂ ಪಕ್ಷದ ಕಾರ್ಯಕರ್ತರಲ್ಲಿ, ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡುವ ಅವಕಾಶ ಒದಗಿ ಬರಲಿದೆ ಎಂಬ ನಿರೀಕ್ಷೆಯಿತ್ತು.

ಮೂರನೇ ಹಂತದ ಮತದಾನ ನಡೆಯುತ್ತಿರುವ ಹೊತ್ತಿನಲ್ಲಿ ಅಂದರೆ ಮಂಗಳವಾರ ಕೇಜ್ರಿವಾಲ್ ಹೊರಬರುವ ಸುದ್ದಿ ಕೂಡ ಸಿಗಬಹುದು ಎಂದೇ ಎಎಪಿ ಕಾರ್ಯಕರ್ತರು ನಿರೀಕ್ಷಿಸಿದ್ದರು.

ಗುಜರಾತ್‌ನಲ್ಲಿ ಎಲ್ಲ ಸ್ಥಾನಗಳಿಗೂ ಚುನಾವಣೆ ಮುಗಿದಿದೆ. ಕಳೆದ ಬಾರಿ ಅಲ್ಲಿ ಗಮನ ಸೆಳೆದಿದ್ದ ಎಎಪಿ, ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.ಆದರೆ ಪ್ರಚಾರ ನಡೆಸಲು ಕೇಜ್ರಿವಾಲ್ ಅವರು ಅಲ್ಲಿಗೆ ಹೊಗುವುದು ಸಾಧ್ಯವಾಗಲೇ ಇಲ್ಲ.

ಹೀಗೆ ಕೇಜ್ರಿವಾಲ್ ಅನುಪಸ್ಥಿತಿ ಎಎಪಿ ಕಾರ್ಯಕರ್ತರನ್ನು ಕಾಡುತ್ತಿರುವಾಗ, ಸುನೀತಾ ಕೇಜ್ರಿವಾಲ್ ತಮ್ಮದೇ ಆದ ರೀತಿಯಲ್ಲಿ ಪಕ್ಷದ ಪರ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ.

ಒಬ್ಬ ಮುಖ್ಯಮಂತ್ರಿಯನ್ನು ಅದೂ ಚುನಾವಣೆಯ ಹೊತ್ತಿನಲ್ಲಿ ಬಂಧಿಸಿ ಜೈಲಿನಲ್ಲಿಡುವ ಮೂಲಕ ಮೋದಿ ಸರಕಾರ ಮಾಡಿರುವುದು ವಿಪಕ್ಷಗಳನ್ನು ಬಲಿಹಾಕುವ ಕೆಲಸವಾಗಿದೆ ಎಂಬುದು ಸ್ಪಷ್ಟ. ಯಾಕೆಂದರೆ, ಕೇಜ್ರಿವಾಲ್ ಅವರನ್ನು ಬಂಧಿಸಲಾಗಿರುವುದರ ಸ್ಪಷ್ಟ ಕಾರಣಗಳೇ ಈ.ಡಿ. ಬಳಿ ಇಲ್ಲ.

ಒಬ್ಬ ಮುಖ್ಯಮಂತ್ರಿಯನ್ನು ಬಂಧಿಸುವಾಗ ಅವರ ವಿರುದ್ಧ ಬಲವಾದ ಪುರಾವೆ ಇರಬೇಕಿತ್ತು. ಆದರೆ ಅದೇನೂ ಇಲ್ಲದೆ, ಅವರನ್ನು ಜೈಲಿನಲ್ಲಿಡಲಾಗಿದೆ ಮತ್ತು ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ಮಾಡಲಾಗಿದೆ.

ವಿಪಕ್ಷ ನಾಯಕನೊಬ್ಬನನ್ನು ಸರಿಯಾಗಿ ಚುನಾವಣೆಯ ಸಮಯಕ್ಕೆ ಜೈಲಿನಲ್ಲಿಟ್ಟಿರುವಾಗ ಚುನಾವಣೆಯಲ್ಲಿ ಲೆವೆಲ್ ಪ್ಲೇಯಿಂಗ್ ಫೀಲ್ಡ್‌ಗೆ ಅವಕಾಶವೇ ಇಲ್ಲದಂತೆ ಮಾಡಲಾಯಿತಲ್ಲವೆ?

ತಮ್ಮನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅವರು ಹಾಲಿ ದಿಲ್ಲಿ ಸಿಎಂ ಆಗಿದ್ದಾರೆ ಮತ್ತು ಅವರು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸುವ ಅಗತ್ಯವಿದೆ. ಹೀಗಾಗಿ ಅವರ ಮಧ್ಯಂತರ ಜಾಮೀನು ಅರ್ಜಿಯ ವಾದ ವಿವಾದ ಆಲಿಸುವುದಾಗಿ ಈ.ಡಿ.ಗೆ ಹೇಳಿತು.

ಅರವಿಂದ ಕೇಜ್ರಿವಾಲ್ ರೂಢಿಗತ ಅಪರಾಧಿ ಅಲ್ಲ ಎಂದು ಹೇಳಿದ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದಿಪಂಕರ್ ದತ್ತಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಇದು ಅಸಾಧಾರಣ ಪರಿಸ್ಥಿತಿ ಎಂದು ಅಭಿಪ್ರಾಯಪಟ್ಟಿತು.

ಚುನಾವಣೆ ಐದು ವರ್ಷಕ್ಕೆ ಒಮ್ಮೆ ಬರುತ್ತದೆ. ಪ್ರತೀ ನಾಲ್ಕರಿಂದ ಆರು ತಿಂಗಳಿಗೆ ಬೆಳೆ ಕಟಾವು ಮಾಡುವ ರೀತಿ ಅಲ್ಲ ಇದು. ಅವರನ್ನು ಮಧ್ಯಂತರ ಜಾಮೀನಿನ ಅಡಿ ಬಿಡುಗಡೆ ಮಾಡಬಹುದೇ ಎಂಬುದನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕಿದೆ ಎಂದು ಪೀಠ ಹೇಳಿದೆ.

ಬಿಡುಗಡೆ ಮಾಡಿದರೆ ನೀವು ಅಧಿಕೃತ ಕರ್ತವ್ಯ ನಿಭಾಯಿಸುವುದನ್ನು ನಾವು ಬಯಸುವುದಿಲ್ಲ ಎಂದು ಕೂಡ ಕೋರ್ಟ್ ಹೇಳಿದೆ.

ದಿಲ್ಲಿ, ಗುಜರಾತ್, ಪಂಜಾಬ್ ಅಥವಾ ಇನ್ನಾವುದೇ ಕಡೆ ಕೇಜ್ರಿವಾಲ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಾರದೆಂದೇ ಜೈಲಿನಲ್ಲಿಡಲಾಗಿದೆ ಎಂಬುದು ಎಎಪಿ ಆರೋಪವಾಗಿದೆ.

ವಿಪಕ್ಷ ನಾಯಕನನ್ನು ಚುನಾವಣಾ ಪ್ರಚಾರದಿಂದಲೇ ದೂರ ಇರುವಂತೆ ಮಾಡುವುದಾದರೆ, ಇಲ್ಲಿ ನ್ಯಾಯ ಮತ್ತು ನಿಷ್ಪಕ್ಷ ಚುನಾವಣೆ ಹೇಗೆ ನಡೆದಂತಾಯಿತು? ಇಲ್ಲಿ ಒಂದು ಪಕ್ಷದ ಹಕ್ಕನ್ನು ಕೂಡ ಕಸಿದುಕೊಂಡಂತಾಗಿದೆಯಲ್ಲವೆ?

ಬಂಧನವನ್ನು ಚುನಾವಣೆ ಹೊತ್ತಿಗೇ ಏಕೆ ಮಾಡಲಾಯಿತು ಎಂಬ ಕೋರ್ಟ್ ಪ್ರಶ್ನೆಗೂ ಈ.ಡಿ. ಬಳಿ ಸೂಕ್ತ ಉತ್ತರವಿಲ್ಲ. ಇತರರ ವಿಚಾರಣೆ ಹೊತ್ತಿಗೆ, ಕೇಜ್ರಿವಾಲ್ ಪಾತ್ರದ ಬಗ್ಗೆ ತಿಳಿಯಿತು ಎಂಬ ಸಬೂಬನ್ನು ಈ.ಡಿ. ಹೇಳುತ್ತ ಬಂದಿದೆ.

ಎರಡು ವರ್ಷಗಳ ಹಿಂದಿನ ವಿಚಾರ ಇಟ್ಟುಕೊಂಡು ಈಗೇಕೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ? ಇದು ಸರಿಯಲ್ಲ. ಇಷ್ಟು ಸಮಯ ಏಕೆ ಹಿಡಿಯಿತು ಎಂದು ಕೋರ್ಟ್ ಮತ್ತೆ ಮತ್ತೆ ಪ್ರಶ್ನಿಸಿದೆ.

ಕೇಜ್ರಿವಾಲ್ ಅವರಿಗೆ ಮಂಗಳವಾರವೂ ಜಾಮೀನು ಸಿಗದೇ ಹೋಗಿರುವುದರಿಂದ ಎಎಪಿ ಎದುರು ಒಂದು ಬಗೆಯ ಅನಿಶ್ಚಿತತೆ ತಲೆದೋರಿದಂತಾಗಿದೆ. ತಮ್ಮ ನಾಯಕ ಹೊರಬರುವರೆ ಇಲ್ಲವೆ ಎಂಬ ಆತಂಕ ಎಎಪಿ ಕಾರ್ಯಕರ್ತರನ್ನು ಕಾಡತೊಡಗಿದೆ.

ದಿಲ್ಲಿಯಲ್ಲಿ ಮೇ 25ಕ್ಕೆ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ 13 ಸ್ಥಾನಗಳಿಗಾಗಿ ಜೂನ್ 1ರಂದು ಚುನಾವಣೆ ನಡೆಯಲಿದೆ.

ಹೀಗಿರುವಾಗ, ಸಂಜಯ್ ಸಿಂಗ್, ಸುನೀತಾ ಕೇಜ್ರಿವಾಲ್ ಎಎಪಿಯ ನೇತೃತ್ವವನ್ನು ನಿಭಾಯಿಸಬಲ್ಲರೆ?

ಇಂತಹದ್ದೊಂದು ಪ್ರಶ್ನೆ ಇರುವಾಗಲೇ, ಸುನೀತಾ ಕೇಜ್ರಿವಾಲ್ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.

ಪತಿಗಾಗಿ ಪತ್ನಿ ಪ್ರಚಾರ ಕಣದಲ್ಲಿ ನಿಂತು ಹೋರಾಡುವುದು ಸಾಧಾರಣ ವಿಚಾರವಲ್ಲ. ಇದರಲ್ಲಿ ಸಂಕಟ, ಸಂಘರ್ಷ ಎಲ್ಲವೂ ಇವೆ.

ಎಎಪಿ ಮತ್ತು ಕಾಂಗ್ರೆಸ್ ಜೊತೆಯಾಗಿ ದಿಲ್ಲಿಯಲ್ಲಿ ಚುನಾವಣೆ ಎದುರಿಸುತ್ತಿವೆ. ನಾಲ್ಕು ಸ್ಥಾನಗಳಲ್ಲಿ ಎಎಪಿ ಅಭ್ಯರ್ಥಿಗಳಿದ್ದಾರೆ. ದಿಲ್ಲಿಯ ಜೊತೆಗೇ ಪಂಜಾಬ್‌ನಲ್ಲಿಯೂ ಎಎಪಿ ಸರಕಾರವಿದೆ. ಎಎಪಿ ಈಗ ರಾಷ್ಟ್ರೀಯ ಪಕ್ಷವಾಗಿದೆ.

ಎಎಪಿಯ ದಿಲ್ಲಿ ರೋಡ್ ಶೋ ಮೋದಿ ರೋಡ್ ಶೋಗಿಂತಲೂ ಬೇರೆಯಾಗಿ ಕಂಡಿತು. ಮೋದಿ ರಾಜಮಾರ್ಗದಲ್ಲಿ ರೋಡ್ ಶೋ ಮಾಡಿದರೆ, ಎಎಪಿ ರೋಡ್ ಶೋ ದಿಲ್ಲಿಯ ಗಲ್ಲಿಗಳಲ್ಲಿ, ಬಜಾರುಗಳಲ್ಲಿ ಹಾದುಹೋಯಿತು.

ರಾಜಕೀಯಕ್ಕಿಂತ ಬೇರೆಯಾದ ರೀತಿಯಲ್ಲಿ ಸುನೀತಾ ರೋಡ್ ಶೋನಲ್ಲಿ ಮಾತಾಡಿದರು.

ಕಳೆದೆರಡು ತಿಂಗಳಿಂದ ತನ್ನ ಪತಿಯನ್ನು ಜೈಲಿನಲ್ಲಿಡಲಾಗಿದೆ. ಅವರನ್ನು ಆರೋಪಿ ಎಂದು ಸಾಬೀತು ಪಡಿಸುವುದೂ ಸಾಧ್ಯವಾಗಿಲ್ಲ. ಕೇಳಿದರೆ ವಿಚಾರಣೆ ನಡೆದಿದೆ ಎನ್ನಲಾಗುತ್ತದೆ. ವಿಚಾರಣೆ 10 ವರ್ಷ ನಡೆದರೆ 10 ವರ್ಷ ಜೈಲಿನಲ್ಲಿಡುತ್ತಾರೆಯೇ ಎಂಬ ಪ್ರಶ್ನೆಯನ್ನು ಸುನೀತಾ ಎತ್ತಿದರು.

ಅಪರಾಧಿ ಎಂದು ಸಾಬೀತಾದ ಬಳಿಕ ಜೈಲಿಗೆ ಹಾಕುವುದನ್ನು ನೋಡಿದ್ದೇವೆ. ಆದರೆ ಈ ಮಂದಿ ಹೊಸ ವ್ಯವಸ್ಥೆಯನ್ನು ತಂದಿದ್ಧಾರೆ. ಕೇಸ್ ನಡೆಯುತ್ತಿರುವವರೆಗೂ ಜೈಲಿನಲ್ಲಿಡುವ ವ್ಯವಸ್ಥೆ. ಇದು ಸ್ಪಷ್ಟವಾಗಿ ಸರ್ವಾಧಿಕಾರ ಎಂದು ಸುನೀತಾ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಭಾಷಣದಲ್ಲಿ ಅವರು ತಮ್ಮ 30 ವರ್ಷಗಳ ದಾಂಪತ್ಯದ ಬಗ್ಗೆ, ಬಾಂಧವ್ಯದ ಬಗ್ಗೆ ಹೇಳಿದರು.

ತಮ್ಮ ಪತಿಗಾಗಿ ಚುನಾವಣಾ ಪ್ರಚಾರ ಕಣಕ್ಕಿಳಿದಿರುವ ಸುನೀತಾ, ಜೈಲಿನಲ್ಲಿರುವ ತಮ್ಮ ಪತಿಯ ಅನುಪಸ್ಥಿತಿಯಲ್ಲಿ ಹೋರಾಡುತ್ತಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಇವರಿಬ್ಬರೂ ದಿಲ್ಲಿಯಲ್ಲಿ ಎಎಪಿ ಪರವಾಗಿ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.

ಅದು ಬರೀ ಚುನಾವಣಾ ಪ್ರಚಾರವಾಗಿ ಮಾತ್ರ ಉಳಿಯುವುದಿಲ್ಲ. ವಿಪಕ್ಷಗಳನ್ನು ತಬ್ಬಲಿಯಾಗಿಸುವವರ ವಿರುದ್ಧ ತಲೆಯೆತ್ತಿ ನಿಲ್ಲುವ ಹೊಸ ನಾಯಕತ್ವದ ಸಂಕೇತವೂ ಆಗುತ್ತದೆ.

ದಿಲ್ಲಿಯ ಗಲ್ಲಿಗಳಲ್ಲಿ, ಬಜಾರುಗಳಲ್ಲಿ ಹಾದುಹೋದ ಎಎಪಿ ರೋಡ್ ಶೋ ಅಂತಹ ಸಂಕೇತಗಳನ್ನು ಕಾಣಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News