ಅಂಗಮಾರಿ ರೋಗದಿಂದ ಬೆಳೆ ನಾಶ: ಟೊಮೆಟೊ ಕೃಷಿಕರಲ್ಲಿ ಆತಂಕ
ಹೊಸಕೋಟೆ: ಸತತ ಮಳೆ ಮತ್ತು ಚಳಿಯ ವಾತಾವರಣದ ಪರಿಣಾಮ ಟೊಮೆಟೊ ಬೆಳೆಗೆ ಅಂಗಮಾರಿ ರೋಗ ಬಿದ್ದು ನಾಶವಾಗುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಟೊಮೆಟೊ ದರ ಏರಿಕೆಯಿಂದ ರೈತರ ಮೊಗದಲ್ಲಿ ಹರ್ಷ ಕಂಡಿದ್ದರೂ, ಅಂಗಮಾರಿ ರೋಗದಿಂದಾಗಿ ಗಿಡಗಳೆಲ್ಲಾ ನಾಶವಾಗುತ್ತಿದೆ. ಇದು ರೈತರನ್ನು ಆತಂಕಕ್ಕೆ ತಳ್ಳಿದೆ.
ಜಿಲ್ಲೆ ಯಲ್ಲಿ ಬಹುತೇಕ ರೈತರು ರಾಗಿ, ಅವರೆ, ತೊಗರಿ, ಶೇಂಗಾ ಬಿತ್ತನೆ ಮಾಡಿದ್ದರು. ಬಿತ್ತನೆ ನಂತರ ಮಳೆ ಇಲ್ಲದೆ ಬಹುತೇಕ ಬೆಳೆ ನೆಲಕಚ್ಚಿತ್ತು. ಈಗ ಕಳೆದ ಎರಡು ವಾರಗಳಿಂದ ನಿಂರಂತ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳಾದ ಟೊಮೆಟೊ, ಕೋಸು, ಹೂ ಕೋಸುಗೆ ಬೆಳೆಗಳ ಮೇಲೆ ಪರಿಣಾಮ ಬೀರಿದೆ.
ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಬಾರದ ಮಳೆ ಇದೀಗ ದಿಢೀರನೆ ಬಂದಿರುವುದು ತಡವಾಗಿ ಬಿತ್ತನೆ ಮಾಡಿರುವ ಮಳೆಯಾಶ್ರಿತ ಬೆಳೆಗಳಿಗೆ ವರದಾನವಾದರೆ, ಟೊಮೆಟೊ ಬೆಳೆಗೆ ಮಳೆ ಕಂಟಕವಾಗಿ ಕಾಡುತ್ತಿದೆ. ಭೂಮಿಯಲ್ಲಿ ತೇವಾಂಶ ಜಾಸ್ತಿಯಾದರೆ ರೋಗಗಳು ಸಹಜವಾಗಿ ಬರುತ್ತವೆ. ಮಣ್ಣಿನಲ್ಲಿ ಕ್ಯಾಲ್ಕಿಯಂ ಕಡಿಮೆಯಾಗಿ ಕಾಯಿ ಕೆಳಗೆ ಕಪ್ಪಾಗುತ್ತದೆ. ರೈತರು ಮುಂಜಾಗ್ರತಾ ಕ್ರಮವಾಗಿ ಭೂಮಿಗೆ ಕ್ಯಾಲ್ಕಿಯಂ ಹೊಂದಿರುವ ಗೊಬ್ಬರ ಕೊಡಬಹುದೆಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆಗಳನ್ನು ನೀಡುತ್ತಿದ್ದಾರೆ.
ನಾಟಿ ಮಾಡಿರುವ ಟೊಮೆಟೊ ಬೆಳೆಗೆ ಕೊನೆ ಅಂಗಮಾರಿ ರೋಗ ಬಿದ್ದು ಕಾಯಿ ಕಪ್ಪಾಗಿದೆ. ಸತತ ಮಳೆಯಿಂದ ಅನೇಕ ರೋಗಗಳು ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ. ತೇವಾಂಶ ಹೆಚ್ಚಾಗುವುದರಿಂದ ಸಾಕಷ್ಟು ನಷ್ಟ ಎದುರಿಸಬೇಕಾಗುತ್ತದೆ.
-ಮುನಿನಾರಾಯಣಪ್ಪ, ರೈತ ಗಿಡ್ಡಪ್ಪನಹಳ್ಳಿ
ಒಂದು ಕಡೆ ಟೊಮೆಟೊ ಹಣ್ಣಿಗೆ ಬೆಲೆ ಇದ್ದರೂ ಇನ್ನೊಂದೆಡೆ ಸತತ ಮಳೆ ಹಾಗೂ ತೇವಾಂಶದಿಂದ ತೋಟಗಳಿಗೆ ಅಂಗಮಾರಿ ರೋಗಬಾಧೆ ಎದುರಾಗಿದೆ. ರೈತರು ಸಾಲ ಮಾಡಿ ಹಾಕಿದ ಬಂಡವಾಳ ವಾಪಸ್ ಬರುವುದೂ ಅನುಮಾನವಾಗಿದೆ.
-ಮುನಿವೆಂಕಟಪ್ಪ, ರೈತ ನೆಗರೇನಹಳ್ಳಿ