ದಾವಣಗೆರೆಯಲ್ಲಿ ಪ್ರತಿಷ್ಠಿತ ಕುಟುಂಬದ ಮಹಿಳೆಯರಿಂದ ಸ್ಪರ್ಧೆ

Update: 2024-03-23 04:53 GMT

ಡಾ.ಪ್ರಭಾ | ಗಾಯತ್ರಿ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ಈ ಬಾರಿ ವಿಶೇಷತೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಸ್ಪರ್ಧೆಗೆ ಅಣಿಯಾಗಿರುವುದರಿಂದ ಚುನಾವಣಾ ಕಣ ರಂಗೇರಿದೆ. ಜೊತೆಗೆ ಬಂಡಾಯದ ಬಿರುಗಾಳಿಯೂ ಜೋರಾಗಿದೆ.

ಬಿಜೆಪಿ ಪಕ್ಷದಿಂದ ಮತ್ತೊಮ್ಮೆ ಸ್ಪರ್ಧೆ ಬಯಸಿದ ಜಿ.ಎಂ.ಸಿದ್ದೇಶ್ವರ ಸ್ಥಳೀಯ ನಾಯಕರ ಪ್ರಬಲ ವಿರೋಧದಿಂದ ತನ್ನ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಗಿಟ್ಟಿಸಿಕೊಂಡು ಬರುವಲ್ಲಿ ಯಶಸ್ವಿಯಾದರು. ಆದರೆ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಅರ್ಧ ಡಝನ್ ನಷ್ಟು ನಾಯಕರು ಸಿದ್ದೇಶ್ವರ ವಿರುದ್ಧ ತಿರುಗಿ ಬಿದ್ದು ಬಂಡಾಯದ ಕಹಳೆ ಊದಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಹೈಕಮಾಂಡ್ ಹರಸಾಹಸ ಪಡುತ್ತಿದೆ. ಆದರೆ ಅವರು ತಣ್ಣಗಾಗುತ್ತಿಲ್ಲ. ಹೀಗಾಗಿ ಹೈಕಮಾಂಡ್ ಅವರನ್ನು ಸಮಾಧಾನಪಡಿಸಿ ಪಕ್ಷದ ಗೆಲುವಿಗೆ ಸಹಕರಿಸುವ ವಾತಾವರಣ ನಿರ್ಮಾಣ ಮಾಡದಿದ್ದರೆ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಬಂಡಾಯಗಾರರು ಮಗ್ಗುಲ ಮುಳ್ಳಾಗುವವುದು ಕಟ್ಟಿಟ್ಟ ಬುತ್ತಿ.

ಇನ್ನೂ ಕಾಂಗ್ರೆಸ್ ನಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಬಿ.ಜಿ.ವಿನಯ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿ ದಾವಣಗೆರೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಜನರ ವಿಶ್ವಾಸ ಗಳಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿ ಟಿಕೆಟ್ ನನಗೆ ಸಿಗುತ್ತದೆ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಎಸ್.ಎಸ್.ಮಲ್ಲಿಜಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದೆ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜಿ.ಬಿ.ವಿನಯ್ ಕುಮಾರ್ ಅವರಿಗೆ ನಿರಾಸೆಯಾಗಿದ್ದು, ಈಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಭಿಮಾನಿಗಳ ಒತ್ತಡ ಹಾಕಿದ್ದಾರೆ. ಒಂದು ವೇಳೆ ಅವರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಗೆ ತಲೆನೋವಾಗಲಿದೆ‌.

ಕಾಂಗ್ರೆಸ್ ಪ್ಲಸ್ ಪಾಯಿಂಟ್:

ಕಳೆದ (2019)ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರು ಬಿಜೆಪಿ ಶಾಸಕರಿದ್ದರು. ಅಲ್ಲದೇ ಬಿಜೆಪಿ ಸರಕಾರವಿತ್ತು. ಹೀಗಾಗಿ ಜಿ.ಎಂ.ಸಿದ್ದೇಶ್ವರ ಗೆಲುವು ಸುಲಭವಾಗಿತ್ತು. ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಲೋಕಸಭಾ ವ್ಯಾಪ್ತಿಯಲ್ಲಿ ಆರು ಕಾಂಗ್ರೆಸ್ ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕರ ಬೆಂಬಲವಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತವಾಗಲಿದೆ.

ಬಿಜೆಪಿಗೆ ಬಂಡಾಯದ ಬಿಸಿ:

ಜಿಲ್ಲೆಯಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪತ್ನಿಗೆ ಟಿಕೆಟ್ ನೀಡಿರುವುದರಿಂದ ಮಾಜಿ ಶಾಸಕರು ಹಾಗೂ ಮಾಜಿ ಸಚಿವರು ಪಕ್ಷದ ಅಭ್ಯರ್ಥಿ ವಿರುದ್ದ ಬಂಡಾಯ ಘೋಷಣೆ ಮಾಡಿ ಅಭ್ಯರ್ಥಿ ಬದಲಿಸಲು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ 3-4 ಬಾರಿ ಸಭೆ ನಡೆಸಿದ್ದಾರೆ. ಅದರೆ, ಇದಕ್ಕೆ ಸೊಪ್ಪು ಹಾಕದ ವರಿಷ್ಠರು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಜಿಲ್ಲಾ ಬಂಡಾಯ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ.

ಬಂಡಾಯ ತಣಿದರೆ ಮಾತ್ರ ಬಿಜೆಪಿಗೆ ಬಲ

ಜಿಲ್ಲೆಯಲ್ಲಿ ಮಾಜಿ ಸಚಿವರು ಹಾಗೂ ನಾಯಕರು ಬಂಡಾಯವನ್ನು ಬಿಜೆಪಿ ವರಿಷ್ಠರು ಬಂಡಾಯ ತಣಿಸಿ ಒಟ್ಟಾಗಿ ನಡೆದರೆ ಬಿಜೆಪಿಗೆ ಬಲ ಬರಲಿದೆ. ಇಲ್ಲದಿದ್ದರೆ, ಬಿಜೆಪಿಗೆ ಅದೇ ಮುಳುವಾಗಲಿದೆ.

ಹೊನ್ನಾಳ್ಳಿಯಲ್ಲಿ ಮಾಜಿ ಸಚಿವರಾದ ರೇಣುಕಾಚಾರ್ಯ, ಹರಪನಹಳ್ಳಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ, ಜಗಳೂರಿನಲ್ಲಿ ಮಾಜಿ ಶಾಸಕ ಗುರುಸಿದ್ದನಗೌಡ ಹಾಗೂ ಚನ್ನಗಿರಿಯಲ್ಲಿ ಮಾಡಾಳ ವಿರೂಪಾಕ್ಷಪ್ಪ ಅವರ ಮಗ ಮಾಡಾಳ ಮಲ್ಲಿಕಾರ್ಜುನ್ ಹಾಗೂ ಮಾಜಿ ಶಾಸಕ ಬಸವರಾಜ ನಾಯ್ಕ್, ಪಾಲಿಕೆ ಸದಸ್ಯ ಅಜಯ್ ಕುಮಾರ್ ಸೇರಿದಂತೆ ಹಲವರು ಬಂಡಾಯ ಸಾರಿದ್ದಾರೆ. ಇವರ ಸಿಟ್ಟು ಶಮನವಾಗದಿದ್ದರೆ ಬಿಜೆಪಿಗೆ ಕಂಟಕವಾಗಲಿದೆ.

ಸಂಸದ ಸಿದ್ದೇಶ್ವರ ಪರವಾಗಿ ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ರಾಮಚಂದ್ರಪ್ಪ, ಎಚ್.ಪಿ.ರಾಜೇಶ್ ಸೇರಿದಂತೆ ಹಲವು ನಾಯಕರು ಕಾರ್ಯಕರ್ತರ ಬೆಂಬಲವಿದೆ.ಅದರೆ, ಬಿಜೆಪಿ ಬಂಡಾಯದ ಬಿಸಿ ಮಾತ್ರ ಬಾರಿ ಪೆಟ್ಟು ನೀಡುತ್ತಿದೆ.

ಕುಟುಂಬ ರಾಜಕಾರಣ

ಬಿಜೆಪಿ ಕಳೆದ ಎರಡು ದಶಕಗಳ ಕಾಲ ಡಾ.ಸಿದ್ದೇಶ್ವರ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಈ ಮುಂಚೆ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರು ಸಂಸದರಾಗಿದ್ದಾರು. ಅವರ ನಂತರ ಸತತವಾಗಿ ಡಾ.ಸಿದ್ದೇಶ್ವರ ಅವರು ಸಂಸದರಾಗಿದ್ದಾರೆ. ಈಗ ಪತ್ನಿಗೆ ನೀಡಿರುವುದು ಬಿಜೆಪಿ ಹಲವು ನಾಯಕರಲ್ಲಿ ಅಸಮಾಧಾನ ತಂದಿದೆ. ಇದಕ್ಕಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಡಾ.ರವಿಕುಮಾರ್, ರೇಣುಕಾಚಾರ್ಯ ಸೇರಿದಂತೆ ಹಲವರು ಬಿಜೆಪಿ ಟಿಕಟ್ ಆಕಾಂಕ್ಷಿಗಳಾಗಿದ್ದರು. ಅದರೆ, ಹಾಲಿ ಸಂಸದರ ಪತ್ನಿಗೆ ಟಿಕೆಟ್ ನೀಡಿರುವುದು. ಬಂಡಾಯಕ್ಕೆ ಕಾರಣವಾಗಿದೆ. ಬಿಜೆಪಿಯ ಹಲವು ನಾಯಕರು ಕುಟುಂಬ ರಾಜಕಾರಣಕ್ಕೆ ಕಿಡಿಕಾರಿದ್ದಾರೆ.

ತಲಾ 6 ಬಾರಿ ಗೆಲುವು

1977 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಕೊಂಡಜ್ಜಿ ಬಸಪ್ಪನವರು ಸಂಸದರಾದರು, ನಂತರ 1980 ರಲ್ಲಿ ಟಿ.ವಿ.ಚಂದ್ರಶೇಖರ ಸಂಸದರಾದರು. ನಂತರ 1984, 1989 ಹಾಗೂ 1991ರಲ್ಲಿ ಚನ್ನಯ್ಯ ಒಡೆಯರ್ ಗೆಲವು ಸಾಧಿಸಿದರು. 1977 ರಿಂದಲೂ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ 1996 ರ ನಂತರ ಬಿಜೆಪಿಗೆ ತೆಕ್ಕೆಗೆ ಜಾರಿತು. ಮೊದಲ ಬಾರಿಗೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಕಮಲ ಅರಳಿಸಿದರು. 1998 ರಲ್ಲಿ ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪ ಅವರ ವಿರುದ್ದ ಶಾಮನೂರು ಶಿವಶಂಕರಪ್ಪ ಅವರು ಗೆಲುವು ಸಾಧಿಸಿದರು. ನಂತರ 1999ರಲ್ಲಿ ನಡೆದ ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಜಿ.ಮಲ್ಲಿಕಾರ್ಜುನಪ್ಪ ಗೆಲುವು ಸಾಧಿಸಿದರು. ನಂತರ ಡಾ.ಜಿ.ಎಂ.ಸಿದ್ದೇಶ್ವರ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ನಡುವೆ ಮೂರು ಬಾರಿ ಚುನಾವಣೆಯಲ್ಲಿ ಜಿ.ಎಂ.ಸಿದ್ದೇಶ್ವರ ಅವರು ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ದ ಗೆಲುವು ಸಾಧಿಸಿದರು. ನಂತರ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಸ್ಪರ್ಧಿಸಿದರು. ಸಿದ್ದೇಶ್ವರ ಅವರು 1.60 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಪ್ರಕಾಶ್‌ ಎಚ್ ಎನ್

contributor

Similar News