ದಾವಣಗೆರೆ: ಸರಕಾರಿ ಆಸ್ಪತ್ರೆಗಳಲ್ಲಿ ಸ್ಥಗಿತಗೊಂಡ ಡಯಾಲಿಸಿಸ್ ಯಂತ್ರಗಳು

Update: 2023-12-19 06:07 GMT

Photo: freepik

ದಾವಣಗೆರೆ, ಡಿ.18: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ವರಿಗೆ ಜೀವದಾನವಾಗಲೆಂದು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಿಗೆ ಒದಗಿಸಿರುವ ಬಹಳಷ್ಟು ಡಯಾಲಿಸಿಸ್ ಯಂತ್ರಗಳು ಸ್ಥಗಿತಗೊಂಡಿದ್ದು, ಲೆಕ್ಕಕ್ಕುಂಟು ಉಪಯೋಗಕ್ಕಿಲ್ಲ ಎಂಬಂತಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 20 ಡಯಾಲಿಸಿಸ್ ಯಂತ್ರಗಳಿವೆ. ಆದರೆ, 20ರಲ್ಲಿ ಕೇವಲ 6 ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಆರ್ಥಿಕ ಮುಗ್ಗಟ್ಟಿನಲ್ಲಿರುವ ಬಡರೋಗಿಗಳು ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗೆ ತೆರಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ ಯಂತ್ರಗಳು, ಅವುಗಳ ನಿರ್ವಹಣೆ, ಸಿಬ್ಬಂದಿ ನೇಮಕವನ್ನು ಖಾಸಗಿ ಕಂಪೆನಿಗೆ 2017ರಲ್ಲಿ ಹೊರಗುತ್ತಿಗೆ ನೀಡಲಾಗಿತ್ತು. ಇದರ ಟೆಂಡರ್ ಅವಧಿ 2022ಕ್ಕೆ ಮುಗಿದಿದೆ. ಆದರೆ, ಮರು ಟೆಂಡರ್ ಕರೆದಿದ್ದು, ಈವರೆಗೂ ಯಾರೂ ಮುಂದೆ ಬಂದಿಲ್ಲ. ಇದರ ಪರಿಣಾಮ ಡಯಾಲಿಸಿಸ್ ರೋಗಿಗಳು ಪರದಾಡುವಂತಾಗಿದೆ.

ಮೆಡಿಕಲ್ ಹಬ್ ಆಗಿರುವ ದಾವಣಗೆರೆ ಜಿಲ್ಲೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುವ ಭರವಸೆಯಿಂದ ಹೊರ ಜಿಲ್ಲೆಗಳ ರೋಗಿಗಳು ಈ ಜಿಲ್ಲೆಗೆ ಬರುತ್ತಾರೆ. ದಾವಣಗೆರೆಯಲ್ಲಿರುವ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜೊತೆಗೆ ಎಲ್ಲ ತಾಲೂಕು ಆಸ್ಪತ್ರೆಗಳು ಈಗಾಗಲೇ ಡಯಾಲಿಸಿಸ್ ಸೌಲಭ್ಯ ಹೊಂದಿವೆ. ಆದರೆ, 14 ಡಯಾಲಿಸಿಸ್ ಯಂತ್ರಗಳು ದುರಸ್ತಿಗೆ ಕಾಯುತ್ತಿವೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ಸರಕಾರ ಒದಗಿಸಿರುವ 3 ಮೂರು ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸಿದರೆ 10 ಯಂತ್ರಗಳು ಸ್ಥಗಿತಗೊಂಡಿವೆ. ಚನ್ನಗಿರಿ ಆಸ್ಪತ್ರೆಯಲ್ಲಿ 1, ಹರಿಹರ ಆಸ್ಪತ್ರೆಯಲ್ಲಿ 2, ಜಗಳೂರು ಆಸ್ಪತ್ರೆಯಲ್ಲಿ 1 ಕಾರ್ಯ ನಿರ್ವಹಿಸಿದರೆ, ಆಯಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 1 ಯಂತ್ರಗಳು ಸ್ಥಗಿತಗೊಂಡಿವೆ.

ವಾರಕ್ಕೆ 10 ಸಾವಿರ ರೂ. ಬೇಕು: ಮೂತ್ರಪಿಂಡ ಸಮಸ್ಯೆಯಿಂದ ಬಳಲುವ ರೋಗಿಗಳು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡುವುದು ಅನಿವಾರ್ಯವಾಗಿದ್ದು, ಒಂದು ವೇಳೆ ರೋಗಿಗಳು ನಿರ್ಲಕ್ಷ್ಯ ವಹಿಸಿದರೆ ಪ್ರಾಣಕ್ಕೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆ ಸಿಗುತ್ತಿದ್ದಾಗ ವಾರಕ್ಕೆ ಮೂರು ಬಾರಿ ನಯಾ ಪೈಸೆ ಖರ್ಚು ಇಲ್ಲದೆ ರೋಗಿಗಳು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಆದರೆ, ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳು ದುರಸ್ತಿಗೆ ಬಂದಿರುವುದರಿಂದ ಈಗ ಒಂದು ಡಯಾಲಿಸಿಸ್‌ಗೆ 1,500-2,500 ರೂ. ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳುವ ದುರಂತ ಒದಗಿ ಬಂದಿದೆ. ಬಡರೋಗಿಗಳಿಗೆ ಉಚಿತ ಡಯಾಲಿಸಿಸ್ ವರದಾನವಾಗಿದೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿನ 10 ಡಯಾಲಿಸಿಸ್ ಯಂತ್ರಗಳು ದುರಸ್ತಿಯಲ್ಲಿದ್ದು, ಸಕಾಲದಲ್ಲಿ ಸೇವೆ ಸಿಗದೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾಗಿದೆ. ತಕ್ಷಣ ಡಯಾಲಿಸಿಸ್ ಘಟಕ ನಿರ್ವಹಣೆಗೆ ಟೆಂಡರ್ ಕರೆದು ಉಚಿತ ಡಯಾಲಿಸಿಸ್ ಮರು ಪ್ರಾರಂಭಿಸಬೇಕೆಂದು ಡಯಾಲಿಸಿಸ್ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.

ವೇತನ ಇಲ್ಲದೆ ಸಿಬ್ಬಂದಿ ಪರದಾಟ

ಜಿಲ್ಲೆಯಲ್ಲಿರುವ ಡಯಾಲಿಸಿಸ್ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ಐದು ತಿಂಗಳ ವೇತನ ಇಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಖಾಸಗಿ ಕಂಪೆನಿಗೆ 2017ರಲ್ಲಿ ಹೊರಗುತ್ತಿಗೆ ನೀಡಲಾಗಿತ್ತು. ಈ ಕಂಪೆನಿಯಡಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಪ್ರತಿ ತಿಂಗಳು ವೇತನ ಪಡೆಯುತ್ತಿದ್ದರು. ಆದರೆ, ಅವರು ಕೊಡುತ್ತಿದ್ದ ವೇತನ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಜೊತೆಗೆ ಪಿಎಫ್, ಇಎಸ್‌ಐ ಸೌಲಭ್ಯ ಕೊಡಬೇಕೆಂದಿದ್ದರೂ ಕೊಟ್ಟಿಲ್ಲ. ಈಗ ಏಜೆನ್ಸಿಯ ಅವಧಿ ಮುಗಿದ ಬಳಿಕ ಸರಕಾರವೇ ನಮಗೆ ವೇತನ ಕೊಡುತ್ತಿತ್ತು. ಆದರೆ, ಕಳೆದ ಐದು ತಿಂಗಳು ವೇತನ ಕೊಟ್ಟಿಲ್ಲ. ವೇತನ ಇಲ್ಲದೆ ನಮ್ಮ ಕುಟುಂಬ ನಿರ್ವಹಣೆ ಮಾಡುವುದು ಹೇಗೆ. ಕೊಡುವ 5-6 ಸಾವಿರ ರೂ. ಕಡಿಮೆ ವೇತನದಿಂದ ಹಾಗೂ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಲಿದೆ. ಸರಕಾರ ೩೦ ಸಾವಿರ ವೇತನ ನೀಡಬೇಕೆಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

ಚನ್ನಗಿರಿ ತಾಲೂಕಿಗೆ ಸಿಎಸ್‌ಆರ್ ಫಂಡ್ ಅಡಿಯಲ್ಲಿ 2 ಡಯಾಲಿಸಿಸ್ ಯಂತ್ರ ಒದಗಿಸಲು ದಾನಿಗಳು ಮುಂದೆ ಬಂದಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಡಯಾಲಿಸಿಸ್ ಯಂತ್ರಗಳ ಸಮರ್ಪಕವಾಗಿ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ.

ಡಾ.ಷಣ್ಮುಖಪ್ಪ, ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ


ಡಯಾಲಿಸಿಸ್ ಯಂತ್ರಗಳ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸಿಜಿ ಆಸ್ಪತ್ರೆಯಲ್ಲದೆ ರಾಜ್ಯದ ಎಲ್ಲ ಕಡೆ ಈ ಸಮಸ್ಯೆಯಿದೆ. ಈ ಸಂಬಂಧ ಸರಕಾರ ಟೆಂಡರ್ ಕರೆದಿದ್ದು, ಟೆಂಡರ್‌ದಾರರು ಬಂದ ನಂತರ ಈ ಸಮಸ್ಯೆ ಬಗೆಹರಿಯಲಿದೆ.

ಡಾ.ನಾಗೇಂದ್ರಪ್ಪ, ದಾವಣಗೆರೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಪ್ರಕಾಶ್ ಎಚ್.ಎನ್.

contributor

Similar News