ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗಿ ಉಲ್ಬಣ: 292 ಪಾಸಿಟಿವ್ ಪ್ರಕರಣ

Update: 2024-07-08 10:10 GMT

ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗಿ ಉಲ್ಬಣಗೊಂಡಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.ರಾಜ್ಯ ರಾಜಧಾನಿ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಡೆಂಗಿ ಪ್ರಕರಣಗಳು ಶಿವಮೊಗ್ಗದಲ್ಲಿ ದಾಖಲಾಗಿವೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಸೋನೆ ಮಳೆ ಡೆಂಗಿ ಉಲ್ಬಣಕ್ಕೆ ಕಾರಣ ಎನ್ನಲಾಗುತ್ತಿದೆ.ಸೋನೆ ಮಳೆಯೊಂದಿಗೆ ಆಗಾಗ ಬಿಸಿಲು ಬೀಳುತ್ತಿರುವುದರಿಂದ ಡೆಂಗಿ ಹರಡುವ ಸೊಳ್ಳೆ ಸಂತಾನೋತ್ಪತ್ತಿಯಾಗುತ್ತಿದೆ. ಅಲ್ಲದೆ ಚರಂಡಿಗಳು, ಮೋರಿಗಳು ಮತ್ತು ಕಾಲುವೆಗಳಲ್ಲಿ ನಿಂತ ನೀರು ಸೊಳ್ಳೆಗಳ ಲಾರ್ವಾಗಳ ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸುತ್ತದೆ. ಇದು ಡೆಂಗಿ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಗಿ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಕಳೆದ ವರ್ಷ, 456 ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಜುಲೈನಲ್ಲಿಯೇ 290ರ ಗಡಿ ದಾಟಿರುವುದು ಗಮನಿಸಿದರೆ ಪರಿಸ್ಥಿತಿ ಹೆಚ್ಚು ಆತಂಕಕಾರಿಯಾಗುವ ಸಾಧ್ಯತೆಯಿದೆ.

ಡೆಂಗಿ ರೋಗದ ಲಕ್ಷಣಗಳನ್ನು ಹೊಂದಿದವರ ರಕ್ತ ಪರೀಕ್ಷೆ ನಿರಂತರವಾಗಿ ಮಾಡಲಾಗುತ್ತಿದೆ. ಪ್ರಸಕ್ತ ಜಿಲ್ಲೆಯಲ್ಲಿ ಈಗಾಗಲೇ 292 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 3,177 ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ.

ಅಡಿಕೆ ಹಾಳೆಯೇ ಮೂಲ: ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಿದ್ದು, ಮಲೆನಾಡು ಭಾಗದಲ್ಲಿ ಡೆಂಗಿ ಹೆಚ್ಚಲು ಅಡಿಕೆ ಹಾಳೆ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಬೇಸಿಗೆಯಲ್ಲಿ ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದ ತೋಟಗಳಲ್ಲಿ ಅಡಿಕೆಯ ಹಾಳೆಗಳಲ್ಲಿ ನೀರು ನಿಂತು ಸಾಕಷ್ಟು ಸಂಖ್ಯೆಯಲ್ಲಿ ಲಾರ್ವಾಗಳು ಪತ್ತೆಯಾಗಿವೆ. ಆದರೆ ಹನಿ ನೀರಾವರಿ ಹೊಂದಿದ್ದ ಕಡೆಗಳಲ್ಲಿ ಈ ಪ್ರಕರಣಗಳು ಕಂಡುಬಂದಿಲ್ಲ. ಸಾಗರ ತಾಲೂಕಿನ ಗ್ರಾಮವೊಂದರಲ್ಲಿ ಒಂದು ಹಾಳೆಯಲ್ಲಿ 100-200 ಲಾರ್ವಾಗಳು ಪತ್ತೆಯಾಗಿವೆ.

ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ಸಿಮೆಂಟ್ ತೊಟ್ಟಿ, ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಇದ್ದುದರಿಂದಲೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗಿವೆ.

ಆರೋಗ್ಯ ಇಲಾಖೆಯಿಂದ ಸೊಳ್ಳೆ ಉತ್ಪತ್ತಿ ತಾಣ ಪತ್ತೆ ಹಚ್ಚಿ ಲಾರ್ವಾಗಳ ಕೇಂದ್ರಗಳನ್ನು ನಾಶ ಪಡಿಸುವುದು, ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನ ಎಂದು ಮಾಡಲಾಗುತ್ತಿದೆ. ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಸೇರಿ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಕುಡಿಯದೇ ಇರುವ ನೀರಿಗೆ ಲಾರ್ವಾ ನಾಶಕ ಔಷಧಿಯನ್ನು ಹಾಕಲಾಗುತ್ತಿದೆ. ಹೆಚ್ಚು ಪ್ರಕರಣ, ಲಾರ್ವಾ ಇರುವ ಕಡೆಗಳಲ್ಲಿ ಫಾಗಿಂಗ್ ಮಾಡಿಸಲಾಗುತ್ತಿದೆ.

ಡೆಂಗಿ ತಡೆಗಟ್ಟುವುದು ಹೇಗೆ?

►ಸಾಕಷ್ಟು ನೀರು ಕುಡಿಯುವುದು

►ಹೊರಗೆ ಹೋಗುವಾಗ ಕವರ್ ಮಾಡಿಕೊಳ್ಳುವುದು

►ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ

►ಸೊಳ್ಳೆ ನಿವಾರಕಗಳನ್ನು ಬಳಸಿ

►ರೋಗನಿರೋಧಕ ಶಕ್ತಿಯನ್ನು

ಹೆಚ್ಚಿಸಲು ಆರೋಗ್ಯಕರ ಆಹಾರವನ್ನು ಸೇವಿಸಬೇಕು.

ಆರೋಗ್ಯ ಇಲಾಖೆಯಿಂದ ಡೆಂಗಿ ಜ್ವರ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮನೆ ಮನೆಗೆ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ತೆರಳಿ ಲಾರ್ವಾ ಸಮೀಕ್ಷೆ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಲಾಖೆ ಜೊತೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಿದರೆ ನಿಯಂತ್ರಣ ಪರಿಣಾಮಕಾರಿ ಆಗುತ್ತದೆ.

-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ತಮ್ಮ ಮನೆ ಸುತ್ತಮುತ್ತ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ತೊಟ್ಟಿ, ಡ್ರಮ್ ಇತರ ನೀರು ಸಂಗ್ರಹ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಟೈಯರ್, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಇತ್ಯಾದಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ವಿಲೇವಾರಿ ಮಾಡಬೇಕು. ಸೊಳ್ಳೆ ನಿರೋಧಕಗಳು ಮತ್ತು ಸೊಳ್ಳೆ ಪರದೆಯನ್ನು ಬಳಸಬೇಕು.

-ಡಾ.ನಟರಾಜ್,ಡಿಎಚ್‌ಒ

ತಾಲೂಕುವಾರು ಪಾಸಿಟಿವ್ ಪ್ರಕರಣಗಳು

ಶಿವಮೊಗ್ಗ: 83

ಭದ್ರಾವತಿ: 26

ಹೊಸನಗರ: 21

ಸಾಗರ :31

ಶಿಕಾರಿಪುರ:70

ಸೊರಬ :37

ತೀರ್ಥಹಳ್ಳಿ: 24

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶರತ್ ಪುರದಾಳ್

contributor

Similar News