ದೇಶದ ನ್ಯಾಯವಂಚಿತ ಪತ್ರಕರ್ತರು

ಲಾಕ್‌ಡೌನ್ ಸಮಯದಲ್ಲಿ ಕೆಲವು ಖಾಸಗಿ ಮಾಧ್ಯಮ ಸಂಸ್ಥೆಗಳು, ರಜಾ ದಿನದ ಇಲ್ಲವೇ ಹವ್ಯಾಸಿ ಪತ್ರಕರ್ತರು ಎಂದು ಬರೆಸಿಕೊಂಡು ಹಲವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದವು. ಅವರಾರೂ ತಾವು ಪತ್ರಕರ್ತರು ಎಂದು ಹೇಳಿಕೊಳ್ಳದೆ, ಹವ್ಯಾಸಕ್ಕಾಗಿ ಇಂಥ ಸಂಸ್ಥೆಗೆ ಕೆಲಸ ಮಾಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಅವರಲ್ಲಿ ಅನೇಕರು ಅನುಭವಿ ಪತ್ರಕರ್ತರಿದ್ದರು. ಸಾವಿರಾರು ಪತ್ರಕರ್ತರು ಉದ್ಯೋಗ ಕಳೆದುಕೊಂಡಿದ್ದಾಗ ಇವರು ಅಂಥ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಿ ಆ ಸಂಸ್ಥೆಗಳಿಗೆ ದುಡಿಯುತ್ತಿದ್ದರು. ಹವ್ಯಾಸಿ ಪತ್ರಿಕೋದ್ಯಮ ಎನ್ನುತ್ತಿದ್ದರು. ಭದ್ರತೆ ಇಲ್ಲದ ಯಾವ ಸ್ಥಿತಿಯನ್ನೂ ಅವರು ಪ್ರಶ್ನೆ ಮಾಡುವಂತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ತಾವು ಪತ್ರಕರ್ತರೇ ಅಲ್ಲ ಎಂದು ಒಪ್ಪಿಕೊಂಡುಬಿಟ್ಟಿದ್ದರು.

Update: 2024-04-03 06:18 GMT

ಚಿತ್ರದುರ್ಗದಲ್ಲಿ ಎಪ್ರಿಲ್ 1ರಂದು ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಭಾಗವಹಿಸಿದ್ದರು. ಅವರ ಭಾಷಣದಲ್ಲಿನ ಆಯ್ದ ಅಂಶಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಮಾಧ್ಯಮದಲ್ಲಿ ಉತ್ತಮ ವರದಿಗಳು ಪ್ರಕಟವಾಗದಿರಲು ಮೊದಲ ತಡೆ ಸರಕಾರವಲ್ಲ, ಅದು ನಂತರದ ಸ್ಥಾನದಲ್ಲಿ ಬರುತ್ತದೆ. ಮೊದಲ ತಡೆ ಮಾಧ್ಯಮಗಳ ಒಡೆತನ ಹೊಂದಿರುವ ಉದ್ಯಮಿಗಳು. ಅವರಿಗೆ ಜಾಹೀರಾತು ತರಲಾರದ, ಅವರ ಉದ್ಯಮಕ್ಕೆ ಪೂರಕವಾಗದ ವರದಿಗಳನ್ನು ಪ್ರಕಟಿಸುವುದು ಇಷ್ಟವಿಲ್ಲ. ಸರಕಾರದ ವಿರುದ್ಧದ ವರದಿಗಳು ಅವರಿಗೆ ಬೇಡ.

ಇಲ್ಲಿ ನೀಡಲಾದ ಕೆಲವು ಪ್ರಶಸ್ತಿಗಳು ಕಲಬುರ್ಗಿ, ಅಂಬೇಡ್ಕರ್ ಮೊದಲಾದವರ ಹೆಸರಿನಲ್ಲಿರುವುದು ಮುಖ್ಯ ವಿಚಾರ ಮತ್ತು ತೀರಾ ಸಕಾಲಿಕ. ಅಂಬೇಡ್ಕರ್, ಕಲಬುರ್ಗಿ ಇವರೆಲ್ಲರೂ ವಿಚಾರವಾದಿ ಚಿಂತಕರು. ಸಾಮಾಜಿಕ ನ್ಯಾಯಕ್ಕೆ ಮಾತ್ರವಲ್ಲ, ವಿಚಾರವಾದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದವರು.

ಕಳೆದ 10 ವರ್ಷಗಳಲ್ಲಿ ಜನಪರ ಕಾಳಜಿಯುಳ್ಳ ಬುದ್ಧಿಜೀವಿಗಳು, ಪತ್ರಕರ್ತರು ಮತ್ತು ಬರಹಗಾರರ ಹತ್ಯೆಗಳೇ ನಡೆದಿವೆ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರೆಲ್ಲರೂ ವಿಚಾರವಾದಿ ಚಿಂತಕರಾಗಿದ್ದರು. ಬಹಳ ಮುಖ್ಯವಾಗಿ, ಅವರೆಲ್ಲರ ಬರಹಗಳು ಮತ್ತು ಕೃತಿಗಳು ಕನ್ನಡ, ಮರಾಠಿ ಮೊದಲಾಗಿ ಭಾರತೀಯ ಭಾಷೆಗಳಲ್ಲಿದ್ದವು.

ಹರ್ಯಾಣ ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಫೆಬ್ರವರಿ 11, 12ರಂದು ಡ್ರೋನ್ ಬಳಸಿ ಅಶ್ರುವಾಯು ಪ್ರಯೋಗಿಸಲಾಯಿತು ಎಂಬುದನ್ನು ಯಾವ ಪತ್ರಿಕೆಯ ಸಂಪಾದಕೀಯವೂ ಪ್ರಶ್ನಿಸಲೇ ಇಲ್ಲ. ಅಲ್ಲಿ ಪ್ರತಿಭಟಿಸುತ್ತಿದ್ದವರಾರೂ ಆಕ್ರಮಣಕಾರಿಗಳಾಗಿರಲಿಲ್ಲ. ಭಯೋತ್ಪಾದಕರಾಗಿರಲಿಲ್ಲ. ಅವರು ನಮ್ಮ ಜನರಾಗಿದ್ದರು, ನಮ್ಮ ರೈತರಾಗಿದ್ದರು. ಅವರ ಮೇಲೆ ಅಂಥದೊಂದು ಕ್ರಮ ಎಂಥ ನಾಚಿಕೆಗೇಡಿನ ಕ್ಷಣ!

ಬಹುದೊಡ್ಡ ಪರಂಪರೆಯಿದ್ದ ಭಾರತೀಯ ಪತ್ರಿಕೋದ್ಯಮ ಕಳೆದ 30 ವರ್ಷಗಳಲ್ಲಿ ಮಾಧ್ಯಮದ ವಾಣಿಜ್ಯೀಕರಣದಿಂದಾಗಿ ಅಧೋಗತಿಗೆ ಬಂದಿದೆ. 1822ರಲ್ಲಿ ಮೊದಲ ಭಾರತೀಯ ರಾಜಕೀಯ ಪತ್ರಿಕೆಯನ್ನು ತಂದ ಭಾರತೀಯ ರಾಜಾರಾಮ್ ಮೋಹನ್ ರಾಯ್ ಅವರನ್ನು ಅವರ 200ನೇ ಜನ್ಮದಿನೋತ್ಸವದ ವೇಳೆ ನೆನಪಿಸಿಕೊಂಡು ಯಾವ ಸಂಪಾದಕೀಯವಾದರೂ ಪ್ರಕಟವಾಯಿತೇ? ರಾಜಾರಾಮ್ ಮೋಹನ್ ರಾಯ್ ಅವರ ಒಂದು ಬರಹವನ್ನು, ಅಂದು ರೈತರ ಬಗ್ಗೆ ಹೇಗೆ ಬರೆಯಲಾಗುತ್ತಿತ್ತು ಮತ್ತು ಇಂದು ಹೇಗೆ ರೈತರ ಕುರಿತಾದ ವರದಿಗಾರಿಕೆ ಇದೆ ಎಂಬುದನ್ನು ಗ್ರಹಿಸುವುದಕ್ಕಾಗಿ ನೋಡಬಹುದು.

1822ರಲ್ಲಿ ಅವರು ಆರಂಭಿಸಿದ್ದ ಪತ್ರಿಕೆ ಬಂಗಾಲಿಯಲ್ಲಿರಲಿಲ್ಲ, ಮೊಗಲರ ಆಡಳಿತ ಭಾಷೆಯಾಗಿದ್ದ ಪರ್ಷಿಯನ್‌ನಲ್ಲಿತ್ತು. ಆಗ, ಪ್ರತಾಪ್ ನಾರಾಯಣ ದಾಸ್ ಎಂಬ ಯುವ ರೈತನಿಗೆ ಯಾವುದೋ ಸಣ್ಣ ತಪ್ಪಿಗಾಗಿ ಕಮಿಲಾ ಜಿಲ್ಲಾ ನ್ಯಾಯಾಧೀಶರು ಛಡಿಯೇಟಿನ ಶಿಕ್ಷೆ ವಿಧಿಸುತ್ತಾರೆ. ಛಡಿಯೇಟಿನ ತೀವ್ರತೆಗೆ ಆತ ಸತ್ತೇ ಹೋಗುತ್ತಾನೆ. ಅದರ ಬಗ್ಗೆ ರಾಜಾರಾಮ್ ಮೋಹನ್ ರಾಯ್ ಸಂಪಾದಕೀಯ ಬರೆಯುತ್ತಾರೆ. ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟವಾಗಿದ್ದ ಆ ಸಂಪಾದಕೀಯ ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಪ್ರಭಾವಿ ಸಂಪಾದಕೀಯಗಳಲ್ಲಿ ಒಂದಾಗಿತ್ತು.

ಆಗ ಯಾವ್ಯಾವ ಭಾಷೆಗಳ ಪತ್ರಿಕೆಗಳಿದ್ದವೋ ಆ ಎಲ್ಲ ಭಾಷೆಗಳಿಗೂ ಅದು ಅನುವಾದಗೊಂಡಿತ್ತು. ಜೇಮ್ಸ್ ಬಕಿಂಗ್‌ಹ್ಯಾಮ್ ಅದನ್ನು ಇಂಗ್ಲಿಷಿಗೆ ಅನುವಾದಿಸಿದ್ದರು. ಕಡೆಗೆ ಅದು ಇಂಗ್ಲೆಂಡ್ ಕೋರ್ಟ್ ಕಮಿಲಾ ಜಿಲ್ಲಾ ನ್ಯಾಯಾಧೀಶನಿಗೆ ಸಮನ್ಸ್ ಕೊಡುವುದಕ್ಕೆ ಕಾರಣವಾಯಿತು. ಈಗಲೂ ಕೆಲವು ನ್ಯಾಯಾಧೀಶರಿಗೆ ಸಮನ್ಸ್ ಹೋಗುತ್ತದೆ. ಆದರೆ ಅದು ಸುಪ್ರೀಂ ಕೋರ್ಟ್‌ನಿಂದಲ್ಲ; ಬದಲಾಗಿ ರಾಜಕಾರಣಿಗಳಿಂದ.

ಜಿಲ್ಲಾ ನ್ಯಾಯಾಧೀಶನಿಗೆ ಸಮನ್ಸ್ ಬಂದ ಕೂಡಲೇ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಹಲವು ಕಾನೂನುಗಳನ್ನು ತರುತ್ತಾನೆ. ಅದರ ಬಗ್ಗೆ ರಾಜಾರಾಮ್ ಮೋಹನ್‌ರಾಯ್ ಮೊದಲ ಪುಟದಲ್ಲಿ ಸಂಪಾದಕೀಯ ಬರೆಯುತ್ತಾರೆ. ಈ ಕಾನೂನಿನ ಅಡಿಯಲ್ಲಿ ಕೆಲಸ ಮಾಡುವ ಬದಲು ನಾನು ನನ್ನ ಪತ್ರಿಕೆಯನ್ನೇ ಮುಚ್ಚುತ್ತೇನೆ ಎಂದು ಬರೆದು, ಪತ್ರಿಕೆಯನ್ನು ನಿಲ್ಲಿಸಿಬಿಟ್ಟರು. ಆನಂತರ ಅವರು ಬಂಗಾಲಿ ಭಾಷೆಯ ಪತ್ರಿಕೆ ಆರಂಭಿಸಿ, ಪತ್ರಿಕಾ ಸ್ವಾತಂತ್ರ್ಯದ ವಿರುದ್ಧದ ಕಾನೂನುಗಳ ವಿರುದ್ಧ ಆಕ್ರಮಣಕಾರಿಯಾಗಿ ಬರೆದರು. ಹೇಗೆ ಆಗ ಪತ್ರಿಕೋದ್ಯಮ ಪ್ರತಿರೋಧಿಸುವ ಶಕ್ತಿ ಹೊಂದಿತ್ತು ಎಂಬುದಕ್ಕೆ ಇದೆಲ್ಲವೂ ನಿದರ್ಶನ.

ಕೋವಿಡ್‌ನಿಂದಾಗಿ ಎಷ್ಟೋ ಪತ್ರಕರ್ತರು ಸಾವಿಗೀಡಾದರು. ಅವರೆಲ್ಲ ನಾಲ್ಕೋ, ಐದೋ ಸಾವಿರ ಗಳಿಸುತ್ತಿದ್ದ ಗ್ರಾಮೀಣ ಭಾಗದ ಅರೆಕಾಲಿಕ ವರದಿಗಾರರಾಗಿದ್ದರು. ಆದರೆ ಅವರ ಕುಟುಂಬದವರು ಆಸ್ಪತ್ರೆ, ಚಿಕಿತ್ಸೆ ಎಂದು ಲಕ್ಷಾಂತರ ರೂ. ಸಾಲ ಮಾಡಿಕೊಳ್ಳುವ ಹಾಗಾಯಿತು.

ಲಾಕ್‌ಡೌನ್ ಘೋಷಣೆಯಾದಾಗ ಮೋದಿ ಸರಕಾರ ಮೀಡಿಯಾವನ್ನು ಅಗತ್ಯ ಸೇವೆಗಳ ಅಡಿಯಲ್ಲಿ ಸೇರಿಸಿತ್ತು. ಮೋದಿಯ ಬಗ್ಗೆ ಏನೇ ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ, ಆ ವಿಚಾರ ಮಾತ್ರ ಬಹಳ ಸ್ವಾಗತಾರ್ಹ ನಡೆಯಾಗಿತ್ತು. ಕಾರ್ಪೊರೇಟ್ ಒಡೆತನದ ಮೀಡಿಯಾ ಸಂಸ್ಥೆಗಳು ಕೆಲವೇ ತಿಂಗಳುಗಳಲ್ಲಿ 3,500 ಪತ್ರಕರ್ತರನ್ನು, ಅಲ್ಲದೆ 10ರಿಂದ 15 ಸಾವಿರದಷ್ಟು ಇತರ ಮೀಡಿಯಾ ಕೆಲಸಗಾರರನ್ನು ತೆಗೆದುಹಾಕಿದಾಗ, ಸರಕಾರ ಮಾತ್ರ ಯಾರನ್ನೂ ಕೆಲಸದಿಂದ ತೆಗೆಯಲಿಲ್ಲ. ವೈದ್ಯರಿಂದ ಹಿಡಿದು ಸಫಾಯಿ ಕರ್ಮಚಾರಿಗಳವರೆಗೆ ಯಾರೊಬ್ಬರನ್ನೂ ಅದು ಕೆಲಸದಿಂದ ತೆಗೆಯುವ ಕ್ರಮಕ್ಕೆ ಮುಂದಾಗಲಿಲ್ಲ.

ಆಗ ಕೆಲವು ಖಾಸಗಿ ಮಾಧ್ಯಮ ಸಂಸ್ಥೆಗಳು, ರಜಾ ದಿನದ ಇಲ್ಲವೇ ಹವ್ಯಾಸಿ ಪತ್ರಕರ್ತರು ಎಂದು ಬರೆಸಿಕೊಂಡು ಹಲವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದವು. ಅವರಾರೂ ತಾವು ಪತ್ರಕರ್ತರು ಎಂದು ಹೇಳಿಕೊಳ್ಳದೆ, ಹವ್ಯಾಸಕ್ಕಾಗಿ ಇಂಥ ಸಂಸ್ಥೆಗೆ ಕೆಲಸ ಮಾಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಅವರಲ್ಲಿ ಅನೇಕರು ಅನುಭವಿ ಪತ್ರಕರ್ತರಿದ್ದರು. ಸಾವಿರಾರು ಪತ್ರಕರ್ತರು ಉದ್ಯೋಗ ಕಳೆದುಕೊಂಡಿದ್ದಾಗ ಇವರು ಅಂಥ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಿ ಆ ಸಂಸ್ಥೆಗಳಿಗೆ ದುಡಿಯುತ್ತಿದ್ದರು. ಹವ್ಯಾಸಿ ಪತ್ರಿಕೋದ್ಯಮ ಎನ್ನುತ್ತಿದ್ದರು. ಭದ್ರತೆ ಇಲ್ಲದ ಯಾವ ಸ್ಥಿತಿಯನ್ನೂ ಅವರು ಪ್ರಶ್ನೆ ಮಾಡುವಂತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ತಾವು ಪತ್ರಕರ್ತರೇ ಅಲ್ಲ ಎಂದು ಒಪ್ಪಿಕೊಂಡುಬಿಟ್ಟಿದ್ದರು.

ಇನ್ನೊಂದು ಘಟನೆಯೂ ನಡೆಯಿತು, ಇದ್ದಕ್ಕಿದ್ದಂತೆ ನೂರಾರು ಪತ್ರಕರ್ತರು ನಿವೃತ್ತರಾಗಲು ನಿರ್ಧರಿಸಿದರು. ಅಂಡಮಾನ್‌ನಿಂದ ಅರುಣಾಚಲ ಪ್ರದೇಶದವರೆಗಿನ ನೂರಾರು ಪತ್ರಕರ್ತರು ಒಂದೇ ವಾರ ಅಥವಾ ತಿಂಗಳೊಳಗೆ ನಿವೃತ್ತರಾದರು. ಪ್ರೆಸ್ ಕೌನ್ಸಿಲ್ ಇದರ ಬಗ್ಗೆ ವಿವರ ಕೇಳಿದಾಗ, ಇದು ನಿಮಗೆ ಸಂಬಂಧಿಸಿದ್ದಲ್ಲ ಎಂಬ ಪ್ರತಿಕ್ರಿಯೆ ಬಂದಿತ್ತು. ಪತ್ರಿಕಾ ಸ್ವಾತಂತ್ರ್ಯ ಬೇರೆ, ಉದ್ಯಮದ ವಿಚಾರ ಬೇರೆ ಎಂದು ಹೇಳಲಾಯಿತು. ಉದ್ಯೋಗಿಗಳನ್ನು ತೆಗೆದುಕೊಳ್ಳುವುದು, ತೆಗೆದುಹಾಕುವುದು ನಮಗೆ ಬಿಟ್ಟದ್ದು, ಪ್ರೆಸ್ ಕೌನ್ಸಿಲ್‌ನದ್ದಲ್ಲ ಎನ್ನಲಾಯಿತು. ಅದು ಅತ್ಯಂತ ಅಸಹ್ಯ ಉತ್ತರವಾಗಿತ್ತು. ಮತ್ತು ಅವುಗಳಲ್ಲಿ ಹೆಚ್ಚಿನವು ಬಿರ್ಲಾ, ಅಂಬಾನಿ ಥರದ ಬಂಡವಾಳಶಾಹಿಗಳ ಒಡೆತನದ ಕಂಪೆನಿಗಳಾಗಿದ್ದವು. ಅವರೆಲ್ಲ ಸರಕಾರಕ್ಕೆ ಹತ್ತಿರದವರಾಗಿದ್ದರು.

ಈ ಕೋಟ್ಯಧಿಪತಿಗಳೆಲ್ಲ ತಮ್ಮ ಹಣ ಮಾಡಿಕೊಳ್ಳುವುದು ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿಯೇ. ತೈಲ ಮತ್ತು ನೈಸರ್ಗಿಕ ಅನಿಲ, ಖನಿಜಗಳು, ಗಣಿಗಾರಿಕೆ, ವಿಮಾನಯಾನ ಎಲ್ಲವೂ ಸಾರ್ವಜನಿಕ ಆಸ್ತಿ. ಅವನ್ನೆಲ್ಲ ಖಾಸಗೀಕರಣಗೊಳಿಸಿ ಇಲ್ಲವೇ ಗುತ್ತಿಗೆ ಆಧಾರದ ಮೇಲೆ ಈ ಕಾರ್ಪೊರೇಟ್ ಸಂಸ್ಥೆಗಳಿಗೆ ಕೊಡಲಾಗಿದೆ. 99 ವರ್ಷಗಳವರೆಗಿನ ಕೆಲವು ಲೀಸ್‌ಗಳೂ ಇವೆ.

ಈ ಉದ್ಯಮಪತಿಗಳು ಯಾವ ಕಾನೂನಿಗೂ ತಲೆ ಬಾಗುವವರಲ್ಲ. ಇನ್ನಾವುದೇ ಕ್ಷೇತ್ರದಲ್ಲಿ ಹೀಗೆ ಸಾವಿರಾರು ಉದ್ಯೋಗಿಗಳನ್ನು ಕೆಲವೇ ತಿಂಗಳುಗಳ ಅವಧಿಯಲ್ಲಿ ತೆಗೆದುಹಾಕಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿತ್ತು. ಆದರೆ ಅಂಥ ಅವಕಾಶವೇ ಇಲ್ಲದ ಇಂಥ ಸನ್ನಿವೇಶದಲ್ಲಿ ಕಳಕಳಿಯ ಕೆಲಸ ಮಾಡುವ ಧೈರ್ಯ ಪತ್ರಕರ್ತರಿಗೆ ಎಲ್ಲಿಂದ ಬರಬೇಕು?

ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ 10 ವರ್ಷಗಳಲ್ಲಿ ಮೋದಿ ಒಂದಾದರೂ ಸುದ್ದಿಗೋಷ್ಠಿ ನಡೆಸಿದರೇ? ಜಗತ್ತಿನಲ್ಲೆಲ್ಲೂ ಹೀಗೆ ನಡೆದಿಲ್ಲ. ಎಲ್ಲ ಪತ್ರಕರ್ತರ ಎದುರು ಬರಲು ಪ್ರಧಾನಿ ಯಾಕೆ ಭಯಪಡುತ್ತಾರೆ? ಮೀಡಿಯಾ ಒಡೆತನ ಹೊಂದಿರುವ ಕಾರ್ಪೊರೇಟ್‌ಗಳು ಮತ್ತು ಸರಕಾರದ ನಡುವೆ ಒಂದು ಸಂಬಂಧ ಬೆಳೆದುಬಿಟ್ಟಿದೆ. ಕಳೆದ 10 ವರ್ಷಗಳಲ್ಲಂತೂ ಇದು ತುಂಬ ದೊಡ್ಡ ಮಟ್ಟದಲ್ಲಿ ಆಗಿದೆ. ಕೋವಿಡ್‌ನಂಥ ಸ್ಥಿತಿಯಲ್ಲೂ ಮೀಡಿಯಾ ಒಡೆತನ ಉಳ್ಳ ಕೆಲವರು ಆರ್ಥಿಕವಾಗಿ ಬಹಳ ಬೆಳೆದಿದ್ದರು. ಅತಿ ಹೆಚ್ಚಿನ ಚುನಾವಣಾ ಬಾಂಡ್ ಖರೀದಿಸಿದವರೂ ಇದ್ದಾರೆ. ಅತಿ ದೊಡ್ಡ ಮೀಡಿಯಾ ಸಂಸ್ಥೆಯ ಒಡೆಯ ಮುಕೇಶ್ ಅಂಬಾನಿ. ಅತಿ ಹೆಚ್ಚು ಬಾಂಡ್ ಖರೀದಿಸಿರುವುದು ರಿಲಯನ್ಸ್‌ಗೆ ಸಂಬಂಧಿಸಿರುವ ಕಂಪೆನಿಗಳು. ಹೀಗೆ ಸರಕಾರ, ಮಾಧ್ಯಮ ಮತ್ತು ಜಾಹೀರಾತುದಾರರ ಮಧ್ಯೆ ಒಂದು ಬಗೆಯ ಸಂಬಂಧವಿದೆ.

ಇಂಥ ಸ್ಥಿತಿಯಲ್ಲಿ ಏನಾಗುತ್ತಿದೆ? ಕೋವಿಡ್‌ನಿಂದಾಗಿ ದೇಶದಲ್ಲಿ ಜನ ಸಾಯುತ್ತಿದ್ಧಾರೆ ಎಂದು ಯಾರೂ ಬರೆಯಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆ 47 ಲಕ್ಷ ಮಂದಿ ಭಾರತೀಯರು ಕೋವಿಡ್‌ನಿಂದಾಗಿ ಸತ್ತಿರುವುದಾಗಿ ಹೇಳಿತು. ಜಾನ್ಸ್ ಹಾಪ್ಕಿನ್ ಯೂನಿವರ್ಸಿಟಿ 42 ಲಕ್ಷ ಮಂದಿ ಸತ್ತಿರುವುದಾಗಿ ಹೇಳಿತು. ವೈದ್ಯಕೀಯ ಜಗತ್ತಿನ ಅತಿ ದೊಡ್ಡ ಪತ್ರಿಕೆ ಲ್ಯಾನ್ಸೆಟ್ 42ರಿಂದ 46 ಲಕ್ಷ ಸಾವು ಸಂಭವಿಸಿರುವುದಾಗಿ ಹೇಳಿತು. ವಾಶಿಂಗ್ಟನ್ ಡಿಸಿಯ ಗ್ಲೋಬಲ್ ಡೆವಲಪ್ಮೆಂಟ್ ಕೌನ್ಸಿಲ್ 49 ಲಕ್ಷ ಸಾವು ಸಂಭವಿಸಿದೆ ಎಂದು ಹೇಳಿತು. ಆದರೆ ಭಾರತ ಸರಕಾರ ಮಾತ್ರ 4,86,000 ಸಾವು ಸಂಭವಿಸಿದೆ ಎಂದಿತು. ವಿಶ್ವಗುರುವೇ ಹಾಗೆ ಹೇಳಿದ ಮೇಲೆ ಮತ್ತಿನ್ನೇನು ಚರ್ಚೆ ಬಾಕಿಯಿರುತ್ತದೆ ಹೇಳಿ? ವಿಶ್ವಗುರುವೇ ಸತ್ತವರು 4,86,000 ಮಂದಿ ಮಾತ್ರ ಎಂದ ಮೇಲೆ ಅದಕ್ಕಿಂತ ಹೆಚ್ಚಾಗಿರಲು ಹೇಗೆ ಸಾಧ್ಯ?

ಭಾರತದ ಮಾಧ್ಯಮ ಈ ಬೋಗಸ್ ಅಂಕಿಅಂಶವನ್ನು ಪ್ರಶ್ನಿಸಲೇ ಇಲ್ಲ. ಅದು ಅತಿ ನಾಚಿಕೆಗೇಡಿನ ಸಂಗತಿ. ಸರಕಾರ ಹೇಳುತ್ತಿರುವ ಅಂಕಿ ಅಂಶ ಸುಳ್ಳು ಮತ್ತು ತಪ್ಪು ಎಂದು ಒಂದೇ ಒಂದು ಸಂಪಾದಕೀಯ ಹೇಳಲಿಲ್ಲ.

ಇದಕ್ಕಿಂತ ಬೇರೆ ಅಂಕಿಅಂಶಗಳನ್ನು ಕೊಟ್ಟಿದ್ದ ಸಂಸ್ಥೆಗಳೆಲ್ಲವೂ ಜಗತ್ತಿನಾದ್ಯಂತದ ಕೋವಿಡ್ ಪರಿಸ್ಥಿತಿಯ ಮೇಲೆ ಗಮನ ಇಟ್ಟವಾಗಿದ್ದವು. ಆದರೆ ಅವೆಲ್ಲವೂ ಭಾರತದ ವಿರುದ್ಧ ಪಿತೂರಿ ನಡೆಸಿವೆ ಎಂದು ಆರೋಪಿಸಲಾಯಿತು. ಅವರಿಗೆ ಭಾರತವೆಂದರೆ ಹೊಟ್ಟೆಯುರಿ ಎನ್ನಲಾಯಿತು.

ವಿಶ್ವಸಂಸ್ಥೆಯ ಮಾನವ ಪ್ರಗತಿ ವರದಿ 132ನೇ ಸ್ಥಾನದಲ್ಲಿ ಭಾರತವನ್ನು ಇರಿಸಿತ್ತು. ಹಾಗೆ ಹೇಳಿದುದರ ಹಿಂದಿನ ಕಾರ್ಯವಿಧಾನವನ್ನು ಇಲ್ಲಿ ಪ್ರಶ್ನಿಸಲಾಯಿತು. ಅದನ್ನು ಸುಳ್ಳು ಎಂದು ಆರೋಪಿಸಲಾಯಿತು. ಪಕ್ಷಪಾತ ಮಾಡಲಾಗುತ್ತಿದೆ ಎನ್ನಲಾಯಿತು. ವಿಶ್ವ ಆರೋಗ್ಯ ಸಂಸ್ಥೆ, ಹ್ಯೂಮನ್ ಡೆವಲಪ್‌ಮೆಂಟ್ ರಿಪೋರ್ಟ್ ಭಾರತದ ಬಗ್ಗೆ ಯಾಕಾದರೂ ಪಕ್ಷಪಾತ ಮಾಡಬೇಕಾಗಿದೆ ಎಂಬುದು ಅರ್ಥವಾಗದ ವಿಚಾರ. ಅವುಗಳಲ್ಲೆಲ್ಲ ಭಾರತೀಯರೇ ಉನ್ನತ ಹುದ್ದೆಗಳಲ್ಲಿದ್ಧಾರೆ.

ಭಾರತದ ಹಸಿವು ಸೂಚ್ಯಂಕದಲ್ಲಿ 121 ದೇಶಗಳ ಪೈಕಿ ಭಾರತ 111ನೇ ಸ್ಥಾನದಲ್ಲಿತ್ತು. ಅದು ಕೂಡ ಈ ಸರಕಾರಕ್ಕೆ ಪಿತೂರಿಯಾಗಿ ಕಂಡಿತು. ಜನ ಹಸಿದಿಲ್ಲವೆಂದಾದರೆ ಯಾಕೆ ನೀವು 80 ಕೋಟಿ ಜನರಿಗೆ ಉಚಿತ ಪಡಿತರ ಕೊಡುತ್ತೀರಿ?

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಚಾರಕ್ಕೆ ಬಂದರೆ, ಯಾವುದೇ ಸರಕಾರದ ಅಡಿಯಲ್ಲಿಯೂ ಭಾರತದಲ್ಲಿ ಇದು ಸುಧಾರಣೆ ಕಂಡಿಲ್ಲ. 2021ರಲ್ಲಿ 180 ದೇಶಗಳ ಪೈಕಿ ಭಾರತದ ಸ್ಥಾನ 142ಕ್ಕೆ ಕುಸಿಯಿತು. ಎಲ್ಲದರಲ್ಲಿಯೂ ಯುಪಿಎ ಸರಕಾರಕ್ಕಿಂತ ಎನ್‌ಡಿಎ ಸರಕಾರವೇ ಮುಂದಿರುತ್ತದಲ್ಲವೆ? ಇಲ್ಲೂ ಅದೇ ಆಗಿದೆ, 142ನೇ ಸ್ಥಾನಕ್ಕೆ ದೇಶವನ್ನು ಇಳಿಸಲಾಗಿದೆ. ವಿಶ್ವಗುರು ಆಗ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆಯ ಆ ಸೂಚ್ಯಂಕವನ್ನು, ಪ್ಯಾರಿಸ್‌ನಲ್ಲಿ ಕೂತ ಜನ ಭಾರತದ ವಿರುದ್ಧ ಮಾಡುತ್ತಿರುವ ಪಿತೂರಿ ಎಂದು ದೂಷಿಸಿದರು. ಆದರೆ, ಭಾರತ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಕುಸಿದದ್ದರಲ್ಲಿ ಯಾವ ರಹಸ್ಯವೂ ಇರಲಿಲ್ಲ.

ಭಾರತ ಸರಕಾರದ ಅತಿ ಹಿರಿಯ ಅಧಿಕಾರಿಯೊಬ್ಬರು ಸೂಚ್ಯಂಕದ ಪರಿಶೀಲನೆಗೆ ಉನ್ನತ ಸಮಿತಿ ರಚನೆಗೆ ಆದೇಶಿಸಿದರು. ಸಮಿತಿ ರಚನೆಯಾಯಿತು. ಅದರಲ್ಲಿ 11 ಮಂದಿ ಅತ್ಯುನ್ನತ ಅಧಿಕಾರಿಗಳೇ ಇದ್ದರು. ಇಬ್ಬರು ಪತ್ರಕರ್ತರನ್ನು ಮಾತ್ರ ಆ ಸಮಿತಿಗೆ ನೇಮಿಸಲಾಯಿತು.

ಅದರಲ್ಲಿ ಒಬ್ಬರು ಖ್ಯಾತ ಟಿವಿ ನಿರೂಪಕ. 4 ನಿಮಿಷವೂ ಮಾತಾಡದೆ ಸುಮ್ಮನಿರಲಾರದ, ಸಾಮಾನ್ಯವಾಗಿ 4 ತಾಸು ಮಾತಾಡುವ ನಿರೂಪಕ, 4 ಗಂಟೆಗಳ ಸಭೆಯಲ್ಲಿ ಒಂದು ಮಾತನ್ನೂ ಹೇಳದೆ ಸುಮ್ಮನೆ ಕೂತಿದ್ದು ವಿಶೇಷವಾಗಿತ್ತು. 2 ಸಭೆಗಳ ಬಳಿಕ ಆತ ತಾನು ತುಂಬ ಕೆಲಸದ ಒತ್ತಡದಲ್ಲಿರುವುದಾಗಿಯೂ ಮುಂದಿನ ಸಭೆಗಳಿಗೆ ಬರಲಾರೆನೆಂದು ಹೇಳಿದ್ದೂ ಆಯಿತು. ಆತ ಸರಕಾರದ ಪರವಿದ್ದ ಪತ್ರಕರ್ತ ಎಂಬುದನ್ನು ಬೇರೆ ಹೇಳಬೇಕಿಲ್ಲ.

ನನ್ನನ್ನು ಸಮಿತಿಗೆ ಸೇರಲು ಕೇಳಿದಾಗ, ಸುಮ್ಮನೆ ಆ ವರದಿಯನ್ನು ನಿರಾಕರಿಸುವುದೇ ಉದ್ದೇಶವಾಗಿದ್ದರೆ ಸೇರಲಾರೆ ಎಂದು ಷರತ್ತು ಹಾಕಿಯೇ ಸೇರಿದ್ದೆ. ಕಡೆಗೆ ಸಮಿತಿಯ ಕರಡು ವರದಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತ ಯಾವ ಅಂಶವೂ ಇರಲಿಲ್ಲ. ನಾನದನ್ನು ಒಪ್ಪದೇ ನನ್ನದೇ ಅಭಿಪ್ರಾಯವನ್ನು ಮೂರು ಬಾರಿ ಸಲ್ಲಿಸಿದೆ. ಕಡೆಗೆ ಆ ಸಮಿತಿಯೇ ಇಲ್ಲವಾಗಿ ಹೋಯಿತು.

ಇಂಥ ಸನ್ನಿವೇಶದಲ್ಲಿ ಈ ದೇಶದಲ್ಲಿ ಪತ್ರಕರ್ತರ ಸ್ಥಿತಿ ಬಹಳ ಕಷ್ಟಕರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News