‘ಬಾಯ್ಕಾಟ್ ಮಾಲ್ದೀವ್ಸ್’: ಭಾರತಕ್ಕೆ ದುಬಾರಿಯಾದೀತೇ?

ಮಾಲ್ದೀವ್ಸ್ ನಿಧಾನವಾಗಿ ಚೀನಾ ತೆಕ್ಕೆಗೆ ಹೋಗುತ್ತಿರುವ ಈ ಹಂತದಲ್ಲಿ, ಭಾರತ ರಾಜತಾಂತ್ರಿಕವಾಗಿ ಜಾಣ ನಡೆ ಅನುಸರಿಸಬೇಕಿದೆ. ಪುಟ್ಟ ದೇಶ ಮಾಲ್ದೀವ್ಸ್ ಅನ್ನು ಹೇಗೆ ರಾಜತಾಂತ್ರಿಕವಾಗಿ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬ ಜಾಣತನ ಭಾರತದ ರಾಜತಾಂತ್ರಿಕ ವ್ಯವಸ್ಥೆಗೆ ಇದೆ. ಅದೇನೂ ಭಾರತಕ್ಕೆ ದೊಡ್ಡ ಸವಾಲಲ್ಲ. ಆದರೆ ರಾಜತಾಂತ್ರಿಕ ವ್ಯವಸ್ಥೆಯ ಹೊರಗೆ ಬಹಳ ಪ್ರಬಲವಾಗಿರುವ ಇಲ್ಲಿನ ಐಟಿ ಸೆಲ್ ಹಾಗೂ ಸೋಷಿಯಲ್ ಮೀಡಿಯಾ ಭಕ್ತರು ಮಾಲ್ದೀವ್ಸ್ ಜೊತೆಗಿನ ಭಾರತೀಯರ ಜನ ಸಂಪರ್ಕವನ್ನು, ಸ್ನೇಹವನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

Update: 2024-01-11 06:52 GMT
Editor : Thouheed | Byline : ವಿನಯ್ ಕೆ.

ಇತ್ತೀಚೆಗೆ ಲಕ್ಷದ್ವೀಪಕ್ಕೆ ಹೋದ ಭಾರದತ ಪ್ರಧಾನಿ ಮೋದಿ ಅಲ್ಲಿಂದ ಚೆಂದದ ವೀಡಿಯೊಗಳನ್ನೂ, ಫೋಟೊಗಳನ್ನು ಪೋಸ್ಟ್ ಮಾಡಿದರು. ಅದನ್ನು ನೋಡಿದ ಕೂಡಲೇ ಅವರ ಭಕ್ತ ಪಡೆ ಮಾಲ್ದೀವ್ಸ್ vs ಲಕ್ಷದ್ವೀಪ್ ಎಂದು ಶುರು ಹಚ್ಚಿಕೊಂಡರು.

ಮಾಲ್ದೀವ್ಸ್‌ನಲ್ಲೂ ಇರುವ ಇಂತಹದೇ ತಲೆ ಇಲ್ಲದ ಕೆಲವು ರಾಜಕಾರಣಿಗಳು ಬಾಯಿಗೆ ಬಂದಂತೆ ಹೇಳಿಕೆ ಕೊಟ್ಟರು. ಅದಕ್ಕೆ ಪ್ರತಿಯಾಗಿ ಭಾರತದಲ್ಲಿ ‘ಬಾಯ್ಕಾಟ್ ಮಾಲ್ದೀವ್ಸ್’ ಎಂಬ ಅಭಿಯಾನವೇ ಶುರುವಾಯಿತು.

ಮೊನ್ನೆ ಮಾಲ್ದೀವ್ಸ್‌ಗೆ ಹೋಗಿ ಹೊಸ ವರ್ಷ ಆಚರಿಸಿ ಬಂದ ಅಕ್ಷಯ್ ಕುಮಾರ್‌ರಂತಹ ಸೆಲೆಬ್ರಿಟಿಗಳು ‘‘ಮಾಲ್ದೀವ್ಸ್‌ಗೆ ಹೋಗಬೇಕಾಗಿಲ್ಲ, ಎಲ್ಲವೂ ಲಕ್ಷ ದ್ವೀಪದಲ್ಲೇ ಇದೆ’’ ಎಂದು ಹೇಳಿಕೆ ಕೊಟ್ಟರು. ಇನ್ನು ಕೆಲವರು ಸೆಲೆಬ್ರಿಟಿಗಳು ಮಾಲ್ದೀವ್ಸ್ ಫೋಟೊವನ್ನೇ ಶೇರ್ ಮಾಡಿ ಲಕ್ಷದ್ವೀಪಕ್ಕೆ ಹೋಗೋಣ ಎಂದರು.

ಆದರೆ ಭಾರತ-ಮಾಲ್ದೀವ್ಸ್ ಸಂಬಂಧ ಟ್ವಿಟರ್, ಫೇಸ್‌ಬುಕ್‌ನ ಶೂರರು ನಿರ್ಧರಿಸಿ ಬಿಡುವಷ್ಟು ಸರಳವೇ? ಸುಲಭವೇ?

ಪ್ರಧಾನಿ ಮೋದಿಯವರ ಬಗ್ಗೆ ಮಾಲ್ದೀವ್ಸ್ ಸಚಿವರುಗಳು ಅವಹೇಳನಕಾರಿಯಾಗಿ ಮಾತನಾಡಿದ್ದು ವಿರೋಧಿಸಲೇಬೇಕಿರುವ ವಿಚಾರ. ಆದರೆ ಅಂತರ್ ರಾಷ್ಟ್ರೀಯ ಸಂಬಂಧಗಳನ್ನು ನಿಭಾಯಿಸಲು ರಾಜತಾಂತ್ರಿಕ ಮಾರ್ಗಗಳಿವೆ ಮತ್ತು ಅಂತಹ ಮಾರ್ಗಗಳು ಭಾರತದ ವಿದೇಶಾಂಗ ಇಲಾಖೆಗೆ ಬಹಳ ಚೆನ್ನಾಗಿಯೇ ಗೊತ್ತಿವೆ.

ಇನ್ನೊಂದು ದೇಶವನ್ನು ತೆಗಳುವುದೆಂದರೆ ಅದು ಇಲ್ಲಿ ನೆಹರೂರನ್ನು, ಮುಸ್ಲಿಮರನ್ನು ಬೈದಷ್ಟು ಸರಳ ಅಲ್ಲ. ಮತ್ತದು ಒಂದು ಮಿತಿ ದಾಟಿದರೆ ರಾಜತಾಂತ್ರಿಕವಾಗಿ ಅತಿ ಸೂಕ್ಷ್ಮ ವಿಚಾರವಾದೀತು ಎಂಬುದು ಅಂಧ ಭಕ್ತರಿಗೆ, ಬಲಪಂಥೀಯ ಐಟಿ ಪಡೆಗೆ ಹೊಳೆಯಲಾರದು.

ನಿಜವಾಗಿಯೂ ಸ್ಪಂದಿಸಬೇಕಿರುವ ಹತ್ತು ಹಲವು ವಿಚಾರಗಳಲ್ಲಿ ಜಾಣ ಮೌನ ತಾಳುವ ಮತ್ತು ಯಾವಾಗಲೋ ಬಂದು ಏನೋ ಹುಂಬ ಹೇಳಿಕೆ ನೀಡುವ ಸೆಲೆಬ್ರಿಟಿಗಳಿಗೂ ತಾವೇನೋ ಮೋದಿಯವರನ್ನು ಬೆಂಬಲಿಸಿ, ಭಾರತದ ಆತ್ಮನಿರ್ಭರತೆ ಪ್ರತಿಪಾದಿಸಿ ಮಾತಾಡಿದೆವು ಅನ್ನಿಸುತ್ತಿರಬಹುದು. ಆದರೆ ಇಂಥ ಮಾತುಗಳೆಲ್ಲ ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸೂಕ್ಷ್ಮ ರಾಜತಾಂತ್ರಿಕ ಸಂಬಂಧದ ಮೇಲೆ ಎಂಥ ಪರಿಣಾಮ ಬೀರಿಯಾವು ಎಂಬುದರ ಕಲ್ಪನೆಯೂ ಬಹುಶಃ ಅವರಿಗೆ ಇಲ್ಲ.

ಈ ಜಗಳದ ಪೂರ್ಣ ಲಾಭ ಪಡೆಯಲು ಚೀನಾ ಹೊಂಚು ಹಾಕುತ್ತಾ ಇದೆ. ಹಾಗಾಗಿ ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಒಂದು ಹಂತದಲ್ಲಿ, ಎರಡೂ ದೇಶಗಳ ನಡುವಿನ ಸಂಬಂಧ ತೀರಾ ಹದಗೆಡುವ ಮಟ್ಟಕ್ಕೆ ಹೋದರೆ ಅಪಾಯಕಾರಿಯಾಗಲಿದೆ.

ಯಾಕೆಂದರೆ ಮಾಲ್ದೀವ್ಸ್ ಮೇಲೆ ಈಗ ಚೀನಾ ಹೆಚ್ಚುಕಡಿಮೆ ತನ್ನ ಹಿಡಿತ ಸಾಧಿಸಿಯೇಬಿಟ್ಟಿದೆ. ಅಲ್ಲದೆ ಮಾಲ್ದೀವ್ಸ್ ಕೂಡಾ ಈಗಾಗಲೇ ಚೀನಾದ ಸೂತ್ರಕ್ಕೆ ಅನುಗುಣವಾಗಿ ಆಡುತ್ತಿದೆ.

ಹಾಗಾಗಿಯೇ, ಇದು ಭಾರತ ರಾಜತಾಂತ್ರಿಕ ಜಾಣ್ಮೆಯಿಂದ, ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕಿರುವ ವಿದ್ಯಮಾನವಾಗಿದೆಯೇ ಹೊರತು ಭಕ್ತರು ಬಾಯಿಗೆ ಬಂದಂತೆ ಮಾತಾಡುತ್ತಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾ ಯಿಸೀತು. ನಮ್ಮ ದೇಶಕ್ಕೇ ಅದು ದುಬಾರಿಯಾದೀತು.

ಯಾಕೆ ಭಾರತಕ್ಕೆ? ಪುಟ್ಟ ದೇಶ ಮಾಲ್ದೀವ್ಸ್ ಮುಖ್ಯವಾಗಿದೆ?

ಹಿಂದೂ ಮಹಾಸಾಗರದಲ್ಲಿರುವ ಮಾಲ್ದೀವ್ಸ್ ತನ್ನ ರಕ್ಷಣಾ ಮತ್ತು ವಿದೇಶಿ ಸಂಬಂಧಗಳಲ್ಲಿ ಭಾರತಕ್ಕೆ ಭೌಗೋಳಿಕ-ರಾಜಕೀಯ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ನಿರ್ಣಾಯಕ. ಮಾಲ್ದೀವ್ಸ್ ಜೊತೆಗಿನ ತನ್ನ ನಿಕಟ ಸಂಬಂಧವನ್ನು ತೀರಾ ಕೊಡಹಿಕೊಳ್ಳಲು ಆಗದ ಸನ್ನಿವೇಶ ಭಾರತಕ್ಕಿದೆ. ಚೀನಾ ಈಗಾಗಲೇ ಮಾಲ್ದೀವ್ಸ್ ಮೇಲೆ ಕಣ್ಣಿಟ್ಟಿದೆ ಮತ್ತು ಅದನ್ನು ತನ್ನ ಪ್ರಭಾವದ ವ್ಯಾಪ್ತಿಗೆ ತಂದುಕೊಳ್ಳುತ್ತಿದೆ. ಇದು ಭಾರತಕ್ಕೆ ಭವಿಷ್ಯದಲ್ಲಿ ತರಬಹುದಾದ ಅಪಾಯದ ಹಿನ್ನೆಲೆಯಲ್ಲಿ, ಮಾಲ್ದೀವ್ಸ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ನಮಗೆ ಸಾಧ್ಯವಿಲ್ಲ ಎಂಬುದು ಪರಿಣಿತರ ಅಭಿಪ್ರಾಯ.

ಮಾಲ್ದೀವ್ಸ್‌ಗೆ ಅದರ ಪ್ರವಾಸೋದ್ಯಮಕ್ಕೆ ಭಾರತೀಯ ಪ್ರವಾಸಿಗರಿಂದ ದೊಡ್ಡ ಲಾಭವಾಗುತ್ತಿದೆ ಎಂಬುದು ಸ್ಪಷ್ಟ. ಮಾಲ್ದೀವ್ಸ್ ಪ್ರವಾಸೋದ್ಯಮ ಸಚಿವಾಲಯವೇ ಈ ಹಿಂದೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2023ರಲ್ಲಿ ಮಾಲ್ದೀವ್ಸ್ ಪ್ರವಾಸ ಕೈಗೊಂಡವರಲ್ಲಿ ಭಾರತೀಯರೇ ಹೆಚ್ಚು.

ಭಾರತದಿಂದ ಮಾಲ್ದೀವ್ಸ್‌ಗೆ ಪ್ರವಾಸ ಹೋದವರ ಸಂಖ್ಯೆ 2,09,198. ಎರಡನೇ ಸ್ಥಾನ ರಶ್ಯದ್ದು. ಅಲ್ಲಿಂದ ಹೋದ ಪ್ರವಾಸಿಗರು 2,09,146. ಮೂರನೇ ಸ್ಥಾನದಲ್ಲಿ ಚೀನಾ. ಅಲ್ಲಿಂದ ಮಾಲ್ದೀವ್ಸ್‌ಗೆ ಪ್ರವಾಸ ಹೋದವರು 1,87,118.

2022ರಲ್ಲಿ ಕೂಡ ಭಾರತದ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಒಟ್ಟು 2,40,000 ಪ್ರವಾಸಿಗರು ಹೋಗಿದ್ದರು. ಆ ವರ್ಷ ರಶ್ಯದಿಂದ ಹೋದ ಪ್ರವಾಸಿಗರು 1,98,000. ಬ್ರಿಟನ್‌ನಿಂದ 1,77,000ಕ್ಕೂ ಹೆಚ್ಚು ಪ್ರವಾಸಿಗರು ಹೋಗಿದ್ದರು.

ಹೀಗೆ ಮಾಲ್ದೀವ್ಸ್ ಪ್ರಧಾನವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿರುವ ದ್ವೀಪರಾಷ್ಟ್ರ ಮತ್ತು ಅದು ಭಾರತೀಯ ಪ್ರವಾಸಿಗರಿಂದ ಬಹು ದೊಡ್ಡ ಆದಾಯ ಗಳಿಸುತ್ತಿದೆ.

ಆದರೆ ಅಲ್ಲಿಗೆ ಯುರೋಪ್, ರಶ್ಯ, ಚೀನಾ ಮತ್ತಿತರ ದೇಶಗಳಿಂದಲೂ ಪ್ರವಾಸಿಗಳು ಬರುತ್ತಾರೆ ಎಂಬುದನ್ನೂ ನಾವು ಗಮನಿಸಬೇಕು.

ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸ್ನೇಹಶೀಲತೆ ಸಾಂಪ್ರದಾಯಿಕವಾದುದಾದರೂ ಇತ್ತೀಚಿನ ವರ್ಷಗಳಲ್ಲಿ ಅದು ಹದಗೆಡುತ್ತ ಬಂದಿದೆ. ಅದೂ 2023ರಲ್ಲಿ ಮುಹಮ್ಮದ್ ಮುಯಿಝ್ಝ ಅಧ್ಯಕ್ಷರಾದ ಬಳಿಕವಂತೂ ಭಾರತದ ಸಂಬಂಧಕ್ಕೆ ಪೂರ್ತಿ ವಿರೋಧವನ್ನೇ ತೋರಿಸುತ್ತ ಬಂದಿದ್ದಾರೆ. ಅವರು ಚೀನಾ ಪರ ನಿಲುವು ಹೊಂದಿರುವವರಾಗಿದ್ದಾರೆ. ಅಲ್ಲೀಗ ‘ಭಾರತ ಮೊದಲು’ ಎಂಬ ಕಾಲ ಹೋಗಿ, ಭಾರತ ಹೊರಕ್ಕೆ ಎಂಬ ಸನ್ನಿವೇಶ ಇದೆ.

ಮುಹಮ್ಮದ್ ಮುಯಿಝ್ಝ ಮಾಲ್ದೀವ್ಸ್ ಅಧ್ಯಕ್ಷರಾಗುವ ಮೊದಲು ಅವರು ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸಂಪುಟದಲ್ಲಿ ಸಚಿವರಾಗಿದ್ದರು ಮತ್ತು ಮಾಲ್ದೀವ್ಸ್ ಅಭಿವೃದ್ಧಿಗಾಗಿ ಚೀನಾದಿಂದ ದೊಡ್ಡ ಮೊತ್ತದ ಸಾಲ ತಂದಿದ್ದರು.

ಯಾರೇ ಮಾಲ್ದೀವ್ಸ್ ಅಧ್ಯಕ್ಷರಾದರೂ ಮೊದಲು ಭಾರತಕ್ಕೆ ಭೇಟಿ ನೀಡುವ ಸಂಪ್ರದಾಯವಿತ್ತು. ಆದರೆ ಮುಯಿಝ್ಝ ಅದನ್ನು ಮೊದಲ ಬಾರಿಗೆ ಮುರಿದರು. ಟರ್ಕಿಗೆ ಭೇಟಿ ನೀಡಿದರು.

ಇದಾದ ಬಳಿಕ ಡಿಸೆಂಬರ್‌ನಲ್ಲಿ ಅವರು 75 ಸಿಬ್ಬಂದಿಯಿರುವ ಭಾರತದ ಸೇನೆಯನ್ನು ಮಾಲ್ದೀವ್ಸ್ ನಿಂದ ಹಿಂದೆಗೆಯಬೇಕೆಂಬ ವಿಚಾರವನ್ನು ಪ್ರಸ್ತಾಪಿಸಿದರು.

ಇದರ ಬೆನ್ನಲ್ಲೇ ಅವರ ಸಂಪುಟ ಮಾಲ್ದೀವ್ಸ್-ಭಾರತ ಜಲ ವೈಜ್ಞಾನಿಕ ಸಮೀಕ್ಷೆ ಒಪ್ಪಂದವನ್ನು ನವೀಕರಿಸದಿರಲು ತೀರ್ಮಾನ ತೆಗೆದುಕೊಂಡಿತು. ಅದು ಸಾಗರ ದತ್ತಾಂಶಗಳ ಪರಿಶೀಲನೆಯಿಂದ ಹಿಡಿದು ಆರ್ಥಿಕ ಅಭಿವೃದ್ಧಿ, ವೈಜ್ಞಾನಿಕ ಸಂಶೋಧನೆ, ಪರಿಸರ, ಜಲ ಸಾರಿಗೆ ಮತ್ತು ಭದ್ರತೆಯ ವರೆಗಿನ ಸಮಸ್ಯೆಗಳಿಗೆ ಸಂಬಂಧಿಸಿದ ಒಪ್ಪಂದವಾಗಿತ್ತು.

ಆದಾದ ಬಳಿಕ ಈಗ ಅವರ ಸಚಿವರುಗಳಿಂದ ಅವಹೇಳನಕಾರಿ ಹೇಳಿಕೆಗಳು ಬಂದವು.

ಕಳೆದ ಕೆಲ ವರ್ಷಗಳಿಂದ ಹಳಸುತ್ತಲೇ ಬಂದಿದ್ದ ಎರಡೂ ದೇಶಗಳ ಸಂಬಂಧ ಈಗ ಮತ್ತೊಂದು ಅತಿರೇಕ ಮುಟ್ಟಿದಂತೆ ಕಾಣುತ್ತಿದೆ.

ಈಗ ಭಾರತದಲ್ಲಿ ಬಾಯ್ಕಾಟ್ ಮಾಲ್ದೀವ್ಸ್ ಗದ್ದಲವೆದ್ದಿರುವಾಗ ಮುಯಿಝ್ಝ, ಹೆಚ್ಚು ಪ್ರವಾಸಿಗರನ್ನು ಕಳಿಸುವಂತೆ ಚೀನಾವನ್ನು ಕೇಳಿಕೊಂಡಿದ್ದಾರೆ. ಮಾಲ್ದೀವ್ಸ್ ಗೆ ಮಹತ್ವದ ಸ್ನೇಹಿತ ರಾಷ್ಟ್ರ ಎಂದು ಅವರು ಚೀನಾವನ್ನು ಕೊಂಡಾಡಿದ್ದಾರೆ.

ಇದೆಲ್ಲದರ ನಡುವೆಯೂ ಅವರು ಕಳೆದ ನವೆಂಬರ್‌ನಲ್ಲೇ ಭಾರತ ಭೇಟಿಯ ಪ್ರಸ್ತಾಪ ಮಾಡಿದ್ದರೆಂಬ ವರದಿ ಗಳಿವೆ. ಭಾರತ ಭೇಟಿ ಕುರಿತ ಅವರ ಪ್ರಸ್ತಾಪಕ್ಕೆ ಮೋದಿ ಸರಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ಹೇಳುತ್ತಿವೆ.

ಮಾಲ್ದೀವ್ಸ್‌ನ ಯಾವುದೇ ಅತಿರೇಕದ ನಡೆ ಹಿಂದೆ ಆಟವಾಡುತ್ತಿರುವುದು ಚೀನಾ ಎಂಬುದು ಸ್ಪಷ್ಟ.

ಸಾಲ ನೀಡಿಯೇ ಶ್ರೀಲಂಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಚೀನಾ ಮಾಲ್ದೀವ್ಸ್‌ನಲ್ಲಿಯೂ ಅದೇ ತಂತ್ರ ಅನುಸರಿಸುತ್ತಿದೆ. ಅಲ್ಲಿನ ವಿಮಾನ ನಿಲ್ದಾಣ ವಿಸ್ತರಿಸಿ ಕೊಡುವ ಭರವಸೆ ಕೊಟ್ಟಿದೆ. ಅಲ್ಲಿ ಒಂದು ದೊಡ್ಡ ಸೇತುವೆ ನಿರ್ಮಿಸಿ ಅದಕ್ಕೆ ಚೀನಾ-ಮಾಲ್ದೀವ್ಸ್ ಸ್ನೇಹ ಸೇತುವೆ ಎಂದೇ ಹೆಸರಿಟ್ಟಿದೆ.

ಮಾಲ್ದೀವ್ಸ್‌ನಲ್ಲಿ ಚೀನಾದ ಉದ್ಯಮಿಗಳು 1.3 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು ಅದು ಇನ್ನಷ್ಟು ಹೆಚ್ಚುವುದು ಖಚಿತ ಎನ್ನುತ್ತಿವೆ ವರದಿಗಳು.

ಸ್ಟ್ರಿಂಗ್ ಆಫ್ ಪರ್ಲ್ಸ್ ಮೂಲಕ ವಿದೇಶಿ ವ್ಯಾಪಾರದ ಎಲ್ಲಾ ಪ್ರಮುಖ ಆಯಕಟ್ಟಿನ ಬಂದರುಗಳ ಮೇಲೆ ಹಿಡಿತ ಸಾಧಿಸುತ್ತಿರುವ ಚೀನಾ ಈಗ ಮಾಲ್ದೀವ್ಸ್ ಅನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.

ಇಲ್ಲಿ ಬಲಪಂಥೀಯರ ಆಟದಿಂದಾಗಿ ಬಾಂಗ್ಲಾದಂತಹ ನಾವೇ ಸೃಷ್ಟಿಸಿದ ದೇಶದ ಜನರ ಜೊತೆ ನಮ್ಮ ಸಂಬಂಧ ಹದಗೆಟ್ಟಿದೆ. ಅತ್ತ ಶ್ರೀಲಂಕಾ ಜೊತೆಗೂ ಅದೇ ರೀತಿ ಆಗಿದೆ.

ಅಕ್ಕಪಕ್ಕದ ಪುಟ್ಟ ದೇಶಗಳ ಜೊತೆ ರಾಜತಾಂತ್ರಿಕವಾಗಿ ಉತ್ತಮ ಸಂಬಂಧ ಇಟ್ಟುಕೊಳ್ಳುವುದು, ಪರಸ್ಪರ ಎರಡೂ ದೇಶಗಳ ಜನರ ನಡುವೆ ಬಾಂಧವ್ಯ ಇರುವುದು ಭಾರತದ ಪಾಲಿಗೆ ರಾಜತಾಂತ್ರಿಕ ಹಾಗೂ ಸುರಕ್ಷತಾ ದೃಷ್ಟಿಯಲ್ಲಿ ಬಹಳ ಮುಖ್ಯ. ಅದು ಇಲ್ಲಿ ಸೋಷಿಯಲ್ ಮೀಡಿಯಾ ದಲ್ಲಿ ಬೊಬ್ಬೆ ಹಾಕುವವರಿಗೆ ಅರ್ಥವಾಗುವುದಿಲ್ಲ.

ಮಾಲ್ದೀವ್ಸ್ ನಿಧಾನವಾಗಿ ಚೀನಾ ತೆಕ್ಕೆಗೆ ಹೋಗುತ್ತಿರುವ ಈ ಹಂತದಲ್ಲಿ, ಭಾರತ ರಾಜತಾಂತ್ರಿಕವಾಗಿ ಜಾಣ ನಡೆ ಅನುಸರಿಸಬೇಕಿದೆ. ಪುಟ್ಟ ದೇಶ ಮಾಲ್ದೀವ್ಸ್ ಅನ್ನು ಹೇಗೆ ರಾಜತಾಂತ್ರಿಕವಾಗಿ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬ ಜಾಣತನ ಭಾರತದ ರಾಜತಾಂತ್ರಿಕ ವ್ಯವಸ್ಥೆಗೆ ಇದೆ. ಅದೇನೂ ಭಾರತಕ್ಕೆ ದೊಡ್ಡ ಸವಾಲಲ್ಲ. ಆದರೆ ರಾಜತಾಂತ್ರಿಕ ವ್ಯವಸ್ಥೆಯ ಹೊರಗೆ ಬಹಳ ಪ್ರಬಲವಾಗಿರುವ ಇಲ್ಲಿನ ಐಟಿ ಸೆಲ್ ಹಾಗೂ ಸೋಷಿಯಲ್ ಮೀಡಿಯಾ ಭಕ್ತರು ಮಾಲ್ದೀವ್ಸ್ ಜೊತೆಗಿನ ಭಾರತೀಯರ ಜನ ಸಂಪರ್ಕವನ್ನು, ಸ್ನೇಹವನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಇನ್ನು ಲಕ್ಷದ್ವೀಪವನ್ನು ಮಾಲ್ದೀವ್ಸ್ ಎದುರು ಸ್ಪರ್ಧೆಗೆ ಒಡ್ಡುತ್ತಿರುವ ವಿಷಯ.

ಜಗತ್ತಿನ 60 ವಿವಿಧ ನಗರಗಳಿಂದ ನೇರ ವಿಮಾನ ಸಂಪರ್ಕ ಇರುವ, ಲಕ್ಷದ್ವೀಪಕ್ಕಿಂತ ಹತ್ತು ಪಟ್ಟು ದೊಡ್ಡದಿರುವ ಹಾಗೂ ಪ್ರವಾಸೋದ್ಯಮಕ್ಕೆ ಬೇಕಾದ ಸಂಪೂರ್ಣ ಮೂಲಭೂತ ಸೌಲಭ್ಯಗಳಿರುವ ದೇಶ ಮಾಲ್ದೀವ್ಸ್.

ಲಕ್ಷದ್ವೀಪ ಅದ್ಭುತ ಸೌಂದರ್ಯ ಇರುವ ದ್ವೀಪ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಅಲ್ಲಿಗೆ ಇರುವುದು ಒಂದೇ ವಿಮಾನ ಕೊಚ್ಚಿಯಿಂದ. ಅಲ್ಲಿ ಒಂದು ಪೂರ್ಣ ಪ್ರಮಾಣದ ವಿಮಾನ ನಿಲ್ದಾಣ ಕೂಡ ಇಲ್ಲ. ಅಲ್ಲಿರುವುದು ಒಂದು ಏರ್‌ಸ್ಟ್ರಿಪ್ ಮಾತ್ರ.

ಮಾಲ್ದೀವ್ಸ್ ಗೆ ಭಾರತೀಯರು ಪಾಸ್ ಪೋರ್ಟ್ ಹಾಗೂ ಬ್ಯಾಗ್ ಹಿಡಿದುಕೊಂಡು ಯಾವಾಗ ಬೇಕಾದರೂ ವಿಮಾನ ಹತ್ತಬಹುದು. ಅಲ್ಲಿ ಇಳಿದ ಕೂಡಲೇ ವೀಸಾ ಕೊಡುತ್ತಾರೆ. ಆದರೆ ಲಕ್ಷದ್ವೀಪಕ್ಕೆ ಹೋಗಲು ಸುದೀರ್ಘ ಪರ್ಮಿಟ್ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಲಕ್ಷದ್ವೀಪದಲ್ಲಿ ಅಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯೇ ಇನ್ನೂ ಆಗಿಲ್ಲ. ಸಮುದ್ರದ ನೀರನ್ನು ಕುಡಿಯಲು ಅರ್ಹವಾಗಿಸುವ ಪ್ರಕ್ರಿಯೆ ಈಗಷ್ಟೇ ಶುರುವಾಗುತ್ತಿದೆ.

ಮಾಲ್ದೀವ್ಸ್ ನಲ್ಲಿ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ. ಇಲ್ಲಿ ಲಕ್ಷದ್ವೀಪದಲ್ಲಿ ಮದ್ಯಕ್ಕೆ ನಿರ್ಬಂಧವಿದೆ. ಜೊತೆಗೆ ಬೀಫ್‌ಗೂ ನಿರ್ಬಂಧ ಹಾಕುವ ಯೋಜನೆಯಿದೆ.

ಒಂದು ವೇಳೆ ಲಕ್ಷದ್ವೀಪದಲ್ಲಿ ಈ ಎಲ್ಲ ವ್ಯವಸ್ಥೆಗಳನ್ನು ಸಮರೋಪಾದಿಯಲ್ಲಿ ಒದಗಿಸಿದರೂ ಅದು ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ. ಒಂದು ಮಿತಿಗಿಂತ ಹೆಚ್ಚು ಪ್ರವಾಸಿಗರನ್ನು ತಾಳಿಕೊಳ್ಳುವ ಸಾಮರ್ಥ್ಯ ಅಲ್ಲಿನ ಪರಿಸರಕ್ಕಿಲ್ಲ. ಅದು ಲಕ್ಷದ್ವೀಪಕ್ಕೆ, ಅಲ್ಲಿನ ಪರಿಸರಕ್ಕೆ ಬಹಳ ದುಬಾರಿಯಾಗಲಿದೆ.

ಇವೆಲ್ಲಕ್ಕಿಂತ ಮಾಲ್ದೀವ್ಸ್ ಮತ್ತು ಚೀನಾ ನಡುವಿನ ಸಂಬಂಧ ಗಟ್ಟಿಯಾಗುತ್ತಿರುವಾಗ ಆ ದೇಶದ ಜೊತೆ ಸಮತೋಲನವನ್ನು ಕಾಯ್ದುಕೊಳ್ಳುವುದು ಭಾರತಕ್ಕೆ ನಿಜವಾಗಿಯೂ ಬಹಳ ಮುಖ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News