ಯೋಗೇಶ್ವರ್ ನಡೆ ಕುಮಾರ ಸ್ವಾಮಿ ಲೆಕ್ಕಾಚಾರ ತಪ್ಪಿಸಿತೇ?

Update: 2024-10-25 10:05 GMT

ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಚನ್ನಪಟ್ಟಣ ಉಪ ಚುನಾವಣೆ ಅಖಾಡಕ್ಕೆ ಹೊಸ ರಂಗು ಬಂದಿದೆ.

ಉಪ ಚುನಾವಣೆ ನಡೆಯುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಎರಡು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಚನ್ನಪಟ್ಟಣವನ್ನು ಜೆಡಿಎಸ್ ಕ್ಷೇತ್ರ ಎಂದು ಬಿಟ್ಟುಕೊಟ್ಟಿತ್ತು.

ಎನ್‌ಡಿಎ ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಯಲು ಬಯಸಿದ್ದ ಯೋಗೇಶ್ವರ್ ಈ ಬೆಳವಣಿಗೆಯಿಂದ ಬೇಸತ್ತು, ಕಾಂಗ್ರೆಸ್ ಸೇರಿದ್ದಾರೆ. ಅವರ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಚನ್ನಪಟ್ಟಣಕ್ಕೆ ಅವರನ್ನು ಅಭ್ಯರ್ಥಿಯನ್ನಾಗಿ ಎಐಸಿಸಿ ಘೋಷಿಸಿದೆ.

ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಮೂಲಕ ಡಿ.ಕೆ. ಶಿವಕುಮಾರ್ ಕುಟುಂಬ ಒಬ್ಬ ಎದುರಾಳಿಯನ್ನು ಕಡಿಮೆ ಮಾಡಿಕೊಂಡಿದೆ ಮತ್ತು ಅವರನ್ನೇ ಕುಮಾರಸ್ವಾಮಿ ವಿರುದ್ಧ ಅಸ್ತ್ರವಾಗಿಸುವ ತಂತ್ರಗಾರಿಕೆಯನ್ನು ಮೆರೆದಿದೆ.

ಆಗಲೇ ವಿಚಿತ್ರ ಅಸಹಾಯಕ ಪರಿಸ್ಥಿತಿ ತಲುಪಿದ್ದ ಕುಮಾರಸ್ವಾಮಿ ಈಗ ಯೋಗೇಶ್ವರ್ ಎದುರಾಳಿಯಾಗಲಿರುವುದು ಪಕ್ಕಾ ಆಗುತ್ತಿದ್ದಂತೆ ಇನ್ನಷ್ಟು ಗೊಂದಲಗಳಿಗೆ ಒಳಗಾದಂತಿದೆ.

ಚನ್ನಪಟ್ಟಣ ಕ್ಷೇತ್ರಕ್ಕೆ ಈಗ ಜೆಡಿಎಸ್ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿರುವ ನಿಖಿಲ್‌ರನ್ನು ಮೊದಲೇ ಆ ಸ್ಥಾನಕ್ಕೆ ಅಭ್ಯರ್ಥಿಯೆಂದು ಕೊಂಡಿದ್ದ ಕುಮಾರಸ್ವಾಮಿ ಆನಂತರ ಯೋಗೇಶ್ವರ್ ಹಟದಿಂದಾಗಿ ಆ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಬಿಜೆಪಿ ತಮ್ಮನ್ನು ಬೆಂಬಲಿಸುವುದಿಲ್ಲ ಎಂಬುದು ಖಾತ್ರಿಯಾಗುತ್ತಲೇ ಕುಮಾರಸ್ವಾಮಿ ಸಂದಿಗ್ಧಕ್ಕೆ ಸಿಲುಕಿದ್ದರು. ಒಂದು ಹಂತದಲ್ಲಿ ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಸಲು ತಮ್ಮ ಸಮ್ಮತಿಯಿದೆ ಎಂಬ ಸುಳಿವನ್ನೂ ನೀಡಿದ್ದರು.

ಆದರೆ ಅದಾವುದೂ ಆಗದೆ, ಬಿಜೆಪಿಯಿಂದಲೇ ಸ್ಪರ್ಧಿಸುವ ಅವಕಾಶ ಸಿಗಬಹುದು ಎಂದು ಕಾಯುವಷ್ಟು ಕಾದ ಯೋಗೇಶ್ವರ್ ಬಿಜೆಪಿಗೆ ಸಡ್ಡು ಹೊಡೆದು ಕಾಂಗ್ರೆಸ್‌ಗೆ ಮರಳಿದ್ದಾರೆ.

ಅಲ್ಲಿಗೆ, ಚನ್ನಪಟ್ಟಣದಲ್ಲಿ ಪಕ್ಷಕ್ಕೆ ಬಲವಾಗಿದ್ದ ಯೋಗೇಶ್ವರ್ ಅವರನ್ನು ಪಕ್ಷ ಕಳೆದುಕೊಳ್ಳುವಂತಾಗಲು ಕುಮಾರಸ್ವಾಮಿಯವರೇ ಕಾರಣ ಎಂಬ ಅಸಮಾಧಾನವೂ ಬಿಜೆಪಿಯಲ್ಲಿ ಮೂಡಿದೆ.

ಮೊದಲೇ ಜೆಡಿಎಸ್ ಮೈತ್ರಿ, ಅದರಲ್ಲೂ ಕುಮಾರಸ್ವಾಮಿ ವಿಚಾರದಲ್ಲಿ ಅಸಮಾಧಾನದಿಂದಿರುವ ಬಿಜೆಪಿ ನಾಯಕರಿಗೆ ಯೋಗೇಶ್ವರ್ ರಾಜೀನಾಮೆ ಬೇಸರ ತರಿಸದಿದ್ದೀತೇ?

ಬಿಜೆಪಿ ಮನಸ್ಸು ಮಾಡಿದ್ದರೆ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವ ತೀರ್ಮಾನಕ್ಕೂ ಬರಬಹುದಿತ್ತು. ಆದರೆ ಅದು ಮೈತ್ರಿಧರ್ಮವನ್ನು ಪಾಲಿಸುವುದಕ್ಕಾಗಿ ಅಂಥ ಹೆಜ್ಜೆ ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ. ಆದರೆ ನಿಜವಾಗಿಯೂ ಮೈತ್ರಿಧರ್ಮದ ಪಾಲನೆಗಾಗಿ ಬಿಜೆಪಿ ಹೀಗೆ ಮಾಡಿತೇ ಅಥವಾ ಬೇರೆಯದೇ ತಂತ್ರಗಾರಿಕೆ ಅದಾಗಿದೆಯೆ?

ಬಹುಶಃ ಕುಮಾರಸ್ವಾಮಿಯವರನ್ನು ಚನ್ನಪಟ್ಟಣ ಉಪ ಚುನಾವಣೆ ನೆಪದಲ್ಲಿ ನೀರಿಗಿಳಿಸಿ ನೋಡಲು ಮತ್ತು ಆ ಮೂಲಕ ಜೆಡಿಎಸ್ ಪಾಲಿನ ಭದ್ರಕೋಟೆಯಲ್ಲಿಯೇ ಕುಮಾರಸ್ವಾಮಿ ಸೋಲು ಅನುಭವಿಸುವಂತಾಗಲು ರಚಿಸಲಾಗಿರುವ ವ್ಯೆಹ ಇದೆಂಬಂತೆಯೂ ತೋರುತ್ತದೆ.

ಚನ್ನಪಟ್ಟಣ ಕ್ಷೇತ್ರದ ವಿಚಾರದಲ್ಲಿ ಬಿಜೆಪಿ ಕಿಂಚಿತ್ ತೊಡಗಿಸಿಕೊಳ್ಳುವಿಕೆಯೇ ಇಲ್ಲದೆ ತನ್ನ ಪಾಡಿಗೆ ತಾನಿರುವುದು ತೀರಾ ಸರಳ ಎಂದೇನೂ ಅನ್ನಿಸುತ್ತಿಲ್ಲ. ವ್ಯವಸ್ಥಿತವಾಗಿ ಕುಮಾರಸ್ವಾಮಿಯವರನ್ನು ಕಟ್ಟಿಹಾಕುವುದು ಅದರ ಉದ್ದೇಶವಿದ್ದಂತೆ ಕಾಣಿಸುತ್ತದೆ. ಆದರೆ ಈ ಲೆಕ್ಕಾಚಾರದಲ್ಲಿ ಅದು ಯೋಗೇಶ್ವರ್ ನಡೆಯ ಬಗ್ಗೆ ಮಾಡಿಕೊಂಡಿದ್ದಿರಬಹುದಾದ ಅಂದಾಜು ಮಾತ್ರ ತಪ್ಪಿದ ಹಾಗಿದೆ.

ಹೇಗೂ ಯೋಗೇಶ್ವರ್ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೆ ಮತ್ತು ಅಂಥ ವಾತಾವರಣ ನಿರ್ಮಿಸಿ, ಅವರನ್ನು ಮೈತ್ರಿ ವಿರುದ್ಧ ಬಂಡಾಯ ಎಂಬಂತೆ ಕಣಕ್ಕಿಳಿಯುವಂತೆ ಮಾಡುವುದು ಬಿಜೆಪಿ ಉದ್ದೇಶವಾಗಿತ್ತೆನ್ನಿಸುತ್ತದೆ.

ಒಂದು ವೇಳೆ ಸೋತರೆ ಅದರಿಂದ ತಾನು ಕಳೆದುಕೊಳ್ಳುವುದೇನೂ ಇಲ್ಲ ಮತ್ತು ಗೆದ್ದರೆ ಪುನಃ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ತೆಗೆದುಕೊಂಡರಾಯಿತು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು.

ಆದರೆ, ಪಕ್ಷೇತರನಾಗಿ ಕಣಕ್ಕಿಳಿಯುವುದಕ್ಕಿಂತ ಒಂದು ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವುದರಲ್ಲಿ ಹೆಚ್ಚು ಲಾಭವಿದೆ ಎಂದು ಯೋಚಿಸಿದ ಯೋಗೇಶ್ವರ್ ಒಂದು ಹಂತದಲ್ಲಿ ಎಸ್‌ಪಿ ಟಿಕೆಟ್ ಪಡೆದಾದರೂ ಕಣಕ್ಕಿಳಿಯುವ ಅವಕಾಶವನ್ನೂ ಮುಕ್ತವಾಗಿ ಇರಿಸಿಕೊಂಡಿದ್ದರು.

ಆದರೆ ಕಾಂಗ್ರೆಸ್ ಜೊತೆಗೆ ನಡೆದಿರಬಹುದಾದ ತೆರೆಯ ಹಿಂದಿನ ಮಾತುಕತೆಗಳ ಬಳಿಕ ಗೂಡಿಗೆ ಮರಳುವ ನಿರ್ಧಾರಕ್ಕೆ ಬಂದಿದ್ದ ಯೋಗೇಶ್ವರ್ ಬುಧವಾರ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಕಾಣಿಸಿಕೊಂಡು, ಕಾಂಗ್ರೆಸ್ ಸೇರುವುದನ್ನು ಖಚಿತಪಡಿಸಿದ್ದರು. ಮುಂದಿನ ಒಂದೆರಡು ಗಂಟೆಗಳಲ್ಲಿಯೇ ಅವರು ಕಾಂಗ್ರೆಸ್ ಬಾವುಟ ಹಿಡಿದದ್ದೂ ಆಯಿತು. ಈಗ ಇರುವುದು ಚನ್ನಪಟ್ಟಣ ಅಖಾಡದಲ್ಲಿನ ಅವರ ಆಟ.

ಯೋಗೇಶ್ವರ್ ಮೂಲಕ ಕಾಂಗ್ರೆಸ್ ಈಗ ಬಿಜೆಪಿ-ಜೆಡಿಎಸ್ ಮೈತ್ರಿಗೆ, ಅದರಲ್ಲೂ ಕುಮಾರಸ್ವಾಮಿಯವರಿಗೆ ದೊಡ್ಡ ಸವಾಲನ್ನೇ ಹಾಕಿ ನಿಂತಂತಿದೆ ಮತ್ತು ಈ ಸವಾಲನ್ನು ಎದುರಿಸುವುದು ಹೇಗೆಂಬ ಸಂದಿಗ್ಧದಲ್ಲಿಯೇ ಕುಮಾರಸ್ವಾಮಿ ಈಗ ಅಭ್ಯರ್ಥಿಯನ್ನು ನಿರ್ಧರಿಸಿದ್ದಾರೆೆ.

ಕೊನೆಗೂ ನಿಖಿಲ್‌ರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಇನ್ನು ಕಾಂಗ್ರೆಸ್ ಸಂಡೂರಿಗೆ ಇ. ತುಕಾರಾಂ ಪತ್ನಿ ಇ. ಅನ್ನಪೂರ್ಣ ಅವರನ್ನು ಅಭ್ಯರ್ಥಿಯೆಂದು ಘೋಷಿಸಿದ್ದು, ನಿನ್ನೆ ಶಿಗ್ಗಾಂವಿ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಯಾಸೀರ್ ಪಠಾಣ್ ಅಲ್ಲಿನ ಅಭ್ಯರ್ಥಿಯಾಗಿದ್ದಾರೆ.

ಅಲ್ಲಿಯೂ ಬಸವರಾಜ ಬೊಮ್ಮಾಯಿ ರಾಜಕಾರಣದ ಎದುರು ಎಂತಹ ಪ್ರತಿ ತಂತ್ರಗಾರಿಕೆ ಹೂಡಬೇಕು ಎಂಬ ಲೆಕ್ಕಾಚಾರ ನಡೆದಿತ್ತು.

ಈ ಬಾರಿ ಮುಸ್ಲಿಮ್ ಅಭ್ಯರ್ಥಿ ಬದಲು ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಬೊಮ್ಮಾಯಿಗೆ ಠಕ್ಕರ್ ನೀಡುವ ಹವಣಿಕೆಯಲ್ಲಿ ಕಾಂಗ್ರೆಸ್ ಇತ್ತು.ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಹೆಸರು ಕೂಡ ಕಾಂಗ್ರೆಸ್‌ನಿಂದ ಶಿಗ್ಗಾಂವಿ ಕ್ಷೇತ್ರಕ್ಕೆ ಕೇಳಿಬಂದಿತ್ತು.

ಆದರೆ ಅಲ್ಲಿ ಕಳೆದ ಬಾರಿಯ ಅಭ್ಯರ್ಥಿ ಯಾಸೀರ್ ಪಠಾಣ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಬೆಂಬಲವೂ ಇರುವುದರಿಂದ ಕೊನೆಗೂ ಅವರೇ ಅಭ್ಯರ್ಥಿಯೆಂದು ಘೋಷಣೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News