ಘನತೆಯ ಬದುಕಿಗಾಗಿ

Update: 2024-08-25 04:29 GMT

ಅವರು ಬದುಕಿನುದ್ದಕ್ಕೂ ನೋಡಿದ ನೆನಪುಗಳು, ಮಿಥ್‌ಗಳನ್ನು, ಸಂಸ್ಕೃತಿಯನ್ನು ಮರೆಯುವುದಕ್ಕಾಗುವುದಿಲ್ಲ. ತಿರಸ್ಕರಿಸುವುದಕ್ಕೂ ಆಗುವುದಿಲ್ಲ. ನಿಜ ಅವೆಲ್ಲಾ ನೋವಿನ ಜೊತೆಗೆ, ಅವಮಾನದ ಜೊತೆಗೆ ಬೆಸೆದುಕೊಂಡಿರುತ್ತವೆ. ಅದರೂ ಅವುಗಳೊಂದಿಗೆ ಮುಖಾಮುಖಿ ಆಗುವುದು ಅನಿವಾರ್ಯ. ಅದನ್ನು ಮರುವ್ಯಾಖ್ಯಾನಿಸುವುದೂ ಅನಿವಾರ್ಯ. ಸಮುದಾಯಗಳನ್ನು ಪ್ರತ್ಯೇಕಿಸುವ, ಕೆಲವರನ್ನು ಶ್ರೇಷ್ಠರಾಗಿ, ಕೆಲವರನ್ನು ಕನಿಷ್ಠರಾಗಿ ನೋಡುವ ಗುರುತುಗಳನ್ನು ಇಟ್ಟುಕೊಂಡು ಎಲ್ಲರೂ ಒಂದು ಅನ್ನುವ ಘೋಷಣೆಗಳಿಗೆ ಯಾವ ಅರ್ಥವೂ ಇಲ್ಲ. ತಳಸಮುದಾಯ ಸಿಲುಕಿರುವ ಗುರುತುಗಳನ್ನು ಅಳಿಸುವ ದಿಕ್ಕಿನಲ್ಲಿ ಜಂಗಮದ ಪ್ರಯತ್ನ ಒಂದು ಆಶಾಕಿರಣ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಮಾನತೆಯ ಮಾತಿಗೆ ಒಂದಿಷ್ಟು ಬೆಲೆ ಬರಬೇಕಾದರೆ ಇಂತಹ ಚಳವಳಿಗಳು ಗೆಲ್ಲಬೇಕು.


‘‘ಕನ್ನಡದ ರಂಗಭೂಮಿಯು ಕೆಲವರನ್ನು ಮುಟ್ಟಿ ಸ್ಟೇಜಿಗೆ ಕೈ ಹಿಡಿದು ಕರೆದುಕೊಂಡರೆ, ಮತ್ತೆ ಕೆಲವರನ್ನು ದೂರದಲ್ಲಿ ಕೂತು ನಾಟಕ ನೋಡಲು ಮಾತ್ರ ಅವಕಾಶ ಕೊಟ್ಟಿದೆ. ಅಂದರೆ ಕನ್ನಡದ ರಂಗಭೂಮಿ ದಲಿತರನ್ನು ಮುಟ್ಟಿಸಿಕೊಳ್ಳದಂತೆ ಶತಮಾನಗಳ ಕಾಲ ಅಸ್ಪಶ್ಯತೆ ಆಚರಿಸಿದೆ. ಈ ಮಧ್ಯೆ ದಲಿತೇತರ ಕೆಲವರು ದಲಿತ ಸಮುದಾಯವನ್ನು ಪ್ರತಿನಿಧಿಸಿ ಕೆಲವು ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ದಲಿತ ಸಮುದಾಯದ ಹೊಸ ತಲೆಮಾರು ತನ್ನದೇ ಹಿರಿಯರ ಕಥೆ ಹೇಳುವ ಮಾದರಿ ಕನ್ನಡದಲ್ಲಿರಲಿಲ್ಲ’’ ಎಂದು ಹೇಳುವ ಮೂಲಕ ಅರುಣ್ ಜೋಳದಕೂಡ್ಲಿಗಿ ತಮ್ಮ ತಲೆಮಾರಿನ ಹಲವರ ಅಭಿಪ್ರಾಯವನ್ನು ಧ್ವನಿಸುತ್ತಿದ್ದಾರೆ.

ಕೆಲವರ್ಷಗಳಿಂದ ನಾಟಕ ಕ್ಷೇತ್ರದಲ್ಲಿ ಗಮನಸೆಳೆಯುವ ಕೆಲಸ ಮಾಡುತ್ತಿರುವ ಕೆ.ಪಿ. ಲಕ್ಷ್ಮಣ್ ಇದನ್ನು ಇನ್ನಷ್ಟು ವಿಸ್ತರಿಸುತ್ತಾ ‘‘ನಮಗೆ ನಾಟಕದ ದೊಡ್ಡ ಪರಂಪರೆ ಇದೆ. ಸಂಸ್ಕೃತದಲ್ಲಿ ಕಾಳಿದಾಸ ಮೊದಲಾದ ದೊಡ್ಡ ನಾಟಕಕಾರರಿದ್ದಾರೆ. ಆದರೆ ಅದರಲ್ಲಿ ತಳಸಮುದಾಯದ ಪಾತ್ರಗಳು ಬರುವುದಿಲ್ಲ. ನಮ್ಮೂರಿನಲ್ಲಿ ನಾನು ನೋಡುತ್ತಿದ್ದ ಯಾವ ಪಾತ್ರಗಳೂ ರಂಗದ ಮೇಲೆ ಬರುವುದಿಲ್ಲ. ಬಂದರೂ ಬಹುತೇಕ ಅಂತಹ ಪಾತ್ರಗಳನ್ನು ಅವಮಾನಿಸುವುದಕ್ಕಾಗಿಯೇ ಸೃಷ್ಟಿಸಲಾಗಿದೆ. ಹಾಗಾಗಿ ಆ ಪರಂಪರೆಯನ್ನು ಇಟ್ಟುಕೊಂಡು ನನಗೆ ನಾಟಕ ಮಾಡುವುದಕ್ಕೆ ಆಗುವುದಿಲ್ಲ. ಅವರೆಲ್ಲಾ ಕುಬ್ಜವಾಗಿ, ಕೊಳಕುಬಟ್ಟೆಯಲ್ಲಿ, ಕೈಮುಗಿದುಕೊಂಡು, ದೈನೇಸಿಯಾಗಿ ನಿಂತಿರುತ್ತಾರೆ. ಅವರನ್ನೆಲ್ಲಾ ಸಮಾಜ ಹೇರಿದ ಗುರುತುಗಳ ಮೂಲಕವಷ್ಟೇ ನೋಡಲಾಗುತ್ತಿತ್ತು. ಅದು ಅವರ ಒಂದು ಮಗ್ಗಲಷ್ಟೆ. ಜೊತೆಗೆ ಅವರು ರೈತರು, ಕಲಾವಿದರು ಇನ್ನೂ ಏನೇನೋ ಆಗಿರುತ್ತಾರೆ. ಅಷ್ಟೇ ಅಲ್ಲ ಇಂದು ಹಲವರು ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಹೀಗೆ ಪಯಣಿಸಿದ ಜನರು ರಂಗಭೂಮಿಯಲ್ಲಿ ಕಾಣುವುದೇ ಇಲ್ಲ’’ ಎನ್ನುವ ಮಾತು ನಿಜ.

ಈ ಅವಮಾನ ಪರಂಪರೆಯನ್ನು ಮೀರಿಕೊಂಡ ಪರಂಪರೆಯೊಂದನ್ನು ಕಟ್ಟಬೇಕಾದ ಜವಾಬ್ದಾರಿಯನ್ನು ಮುಖ್ಯವಾಹಿನಿಯು ನಿರ್ವಹಿಸಿಲ್ಲ ಅನ್ನುವುದರಲ್ಲಿ ಸತ್ಯವಿದೆ. ಹಾಗಾಗಿ ಈ ಅವಮಾನದ ನೋವನ್ನು ಅನುಭವಿಸಿಕೊಂಡು ಬಂದವರೇ ಈ ಕೆಲಸವನ್ನು ನಿರ್ವಹಿಸಬೇಕಾಗಿದೆ. ಇದರ ಮುಂಚೂಣಿಯಲ್ಲಿರುವ ಯುವಕರು ತಮ್ಮ ಅನುಭವವನ್ನು ಅಭಿವ್ಯಕ್ತಿಸಲು ಬೇಕಾದ ಪರಿಣತಿಯನ್ನು ಹೊಂದಿದ್ದಾರೆ. ಇವರೆಲ್ಲರ ತಂದೆ ತಾಯಂದಿರು ತಮ್ಮ ಮಕ್ಕಳು ಈ ಅವಮಾನದ ಪರಂಪರೆಯಲ್ಲಿ ಸಿಲುಕಬಾರದು ಎನ್ನುವ ಕಾರಣಕ್ಕೆ ಇವರನ್ನು ಓದಿಗೆ ಹಚ್ಚುವ ಪ್ರಯತ್ನವನ್ನು ಮಾಡಿದ ತಲೆಮಾರಿನವರು. ವಿದ್ಯಾಭ್ಯಾಸಕ್ಕೆ ಹಚ್ಚುವ ಮೂಲಕ ಇವರನ್ನೆಲ್ಲಾ ಸಮಾಜ ಹೊರಿಸಿದ ಗುರುತುಗಳಿಂದ ಹೊರತರಬೇಕೆನ್ನುವುದು ಮನೆಯವರ ಉದ್ದೇಶವಾಗಿತ್ತು. ಮತ್ತೆ ಅದೇ ಪರಂಪರೆಗೆ ತಳ್ಳಬಹುದಾದ ತಮಟೆ, ಅರೆ ಇವೆಲ್ಲವನ್ನು ಮುಟ್ಟದಂತೆ ಮಕ್ಕಳಿಗೆ ತಾಕೀತು ಮಾಡಿದ್ದರು. ಹಳ್ಳಿಯಲ್ಲಿ ಹುಟ್ಟು, ಜಾತಿ, ಮನೆಯವರ ಉದ್ಯೋಗ ಇವೆಲ್ಲಾ ಗುರುತನ್ನು ಸ್ಥಾಪಿಸಿಬಿಡುತ್ತದೆ. ಅಂತಹ ಗುರುತುಗಳೊಂದಿಗೆ ಗುರುತಿಸಿಕೊಳ್ಳಲು ಬಯಸದ ಇವರೆಲ್ಲಾ ಅವಕಾಶಗಳನ್ನು ಹುಡುಕಿಕೊಂಡು ಬೇರೆ ಕಡೆಗೆ ಹೋದವರೇ. ಉದಾಹರಣೆಗೆ ಲಕ್ಷ್ಮಣ್ ನಿನಾಸಂ, ಅದಿಮಾ ನಂತರ ಸಿಂಗಾಪುರದ ಇಂಟರ್ ಕಲ್ಚರಲ್ ಥಿಯೇಟರ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತರು ಹೋದರು. ಹಾಗೆ ಉಳಿದವರು ಕೂಡ ಬೇರೆ ಬೇರೆ ಹಾದಿಯಲ್ಲಿ ಹಾದುಬಂದವರೇ. ಇವರೆಲ್ಲರಿಗೂ ತಮ್ಮ ಸಮುದಾಯಕ್ಕೆ ಘನತೆ ತಂದುಕೊಡುವ ತವಕ ಇತ್ತು. ಅದೊಂದು ಅತ್ಯಂತ ಪ್ರಾಮಾಣಿಕ ಕಾಳಜಿಯಾಗಿದೆ. ಹಾಗಾಗಿ ಇವರಿಗೆ ಸಮುದಾಯದಿಂದ ದೂರ ಉಳಿಯುವುದಕ್ಕೆ ಸಾಧ್ಯವಿಲ್ಲ. ಅದು ಅವರ ಅವಿಭಾಜ್ಯ ಅಂಗ ಅನ್ನುವುದು ಸ್ಪಷ್ಟವಾಗತೊಡಗಿತು. ನಾನು, ನನ್ನ ಸಮುದಾಯ ಬೇರೆ ಅಲ್ಲ ಅನಿಸಿತು. ನನ್ನ ಸಮುದಾಯದ ಬಗ್ಗೆ ಮಾತನಾಡುವಾಗ ನನ್ನ ಬಗ್ಗೆಯೂ ಮಾತನಾಡುತ್ತಿರುತ್ತೇನೆ. ನನ್ನ ನಾಟಕ ನಾನು ಬೇರೆಯಾಗಿ ಕಾಣುವುದಿಲ್ಲ. ಅನ್ನುವ ಆರೋಗ್ಯಕರ ನಿರ್ಧಾರ ಸಾಧ್ಯವಾಯಿತು.

ಒಂದು ಸಮುದಾಯಕ್ಕೆ ದೊರಕಿರುವ ಘನತೆ ಆ ಸಮುದಾಯದ ಜನ ಮನುಷ್ಯರಾಗಿ ಬೆಳೆಯುವಲ್ಲಿ ಅತಿಮುಖ್ಯ ಪಾತ್ರವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮೆರಿಟ್, ಪ್ರತಿಭೆ, ಕಠಿಣ ಶ್ರಮದ ಬಗ್ಗೆ ತುಂಬಾ ಮಾತನಾಡುತ್ತಿದ್ದೇವೆ. ಒಬ್ಬನ ಯಶಸ್ಸಿಗೆ ಅವನ ಕಠಿಣಶ್ರಮ ಕಾರಣ ಅಂದುಬಿಡುತ್ತೇವೆ. ಹಿಂದೆ ಬಿದ್ದವರನ್ನು ಅವರ ದುರಭ್ಯಾಸಕ್ಕೋ, ಸೋಮಾರಿತನಕ್ಕೋ ದೂಷಿಸುತ್ತೇವೆ. ಆ ಇಡೀ ಸಮುದಾಯ ಅವರ ಜಾತಿಯ, ಲಿಂಗದ, ಧರ್ಮದ ಕಾರಣಕ್ಕಾಗಿ ಹಿಂದೆ ಉಳಿಯಬೇಕಾಗಿ ಬಂದದ್ದರ ಅನಿವಾರ್ಯತೆಯನ್ನು ಬೇಕಂತಲೇ ಕಡೆಗಣಿಸುತ್ತೇವೆ. ಚರಿತ್ರೆಯುದ್ದಕ್ಕೂ ಈ ಸಮುದಾಯಗಳ ಮೇಲೆ ಕೆಲವು ಋಣಾತ್ಮಕ ಗುರುತುಗಳನ್ನು ಹೇರುವ ಕೆಲಸ ನಡೆಯುತ್ತಲೇ ಬಂದಿದೆ. ಹಾಗಾಗಿ ದಲಿತರು, ಮುಸ್ಲಿಮರು, ವಲಸಿಗರು, ಮಹಿಳೆಯರು ಇತ್ಯಾದಿ ಗುಂಪುಗಳ ಬಗ್ಗೆ ಥರಾವರಿ ಕಥೆಗಳನ್ನು ಕೇಳುತ್ತೇವೆ. ಅವರು ದಡ್ಡರು, ಅಬಲೆಯರು, ಕೆಟ್ಟವರು, ಕಳ್ಳರು, ಕುಡುಕರು, ಯಾತಕ್ಕೂ ಬೇಡದವರು, ಅವಮಾನಕ್ಕೆ ಯೋಗ್ಯರು.. ಹೀಗೆ ಅವರನ್ನು ಲೇಬಲ್ ಮಾಡುವ ಕೆಲಸ ನಡೆದೇ ಇದೆ. ಅಷ್ಟೇ ಅಲ್ಲ ಹಲವು ಮಾಧ್ಯಮಗಳ ಮೂಲಕ ಅವಮಾನಿತರೂ ಇದನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿದೆ. ಹಾಗಾಗಿಯೇ ಕೆಲವರಿಗೆ ತಮ್ಮ ಜಾತಿಯ ಬಗ್ಗೆ, ಸಮುದಾಯದವರ ಬಗ್ಗೆ ಅಸಹ್ಯ ಮೂಡಿರುತ್ತದೆ. ತಳಸಮುದಾಯದ ಯುವಕರು ತಮ್ಮ ಮನೆಯವರಿಂದ, ಕೇರಿಯಿಂದ ದೂರವಾಗುತ್ತಾ ಬರುತ್ತಾರೆ. ಅದರೊಂದಿಗೆ ಗುರುತಿಸಿಕೊಳ್ಳುವುದು ಅವಮಾನ ಅನಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಮಾಜ ಅವರ ಮೇಲೆ ಹೊರಿಸಿರುವ ಕೆಲ ಕೆಟ್ಟ ಗುರುತುಗಳ ಭಾರ ಅವರನ್ನು ಕುಗ್ಗಿಸಿರುತ್ತದೆ. ಅವರ ವ್ಯಕ್ತಿತ್ವದ ಇತರ ಮಗ್ಗಲುಗಳನ್ನು ಕಟ್ಟಿಕೊಡುವುದಕ್ಕೆ ನಮಗೆ ಸಾಧ್ಯವಾಗಬೇಕು. ಆ ಮೂಲಕ ವ್ಯಕ್ತಿತ್ವಗಳಿಗೆ ಘನತೆಯನ್ನು ಕಟ್ಟಿಕೊಡುವುದಕ್ಕೆ ಸಾಧ್ಯವಾಗಬೇಕು. ಆ ಮೂಲಕ ಇಡೀ ಸಮುದಾಯಕ್ಕೆ ಘನತೆಯನ್ನು ತಂದುಕೊಡುವುದಕ್ಕೆ ಸಾಧ್ಯವಾಗಬೇಕು. ಅವರ ವ್ಯಕ್ತಿತ್ವವನ್ನು ಇಡಿಯಾಗಿ ಹಿಡಿಯುವುದಕ್ಕೆ ಸಾಧ್ಯವಾಗದೆ ಹೋದರೆ ಕೇವಲ ಹೊಲೆಯ, ಮಾದಿಗ, ಮುಸಲ್ಮಾನ ಇತ್ಯಾದಿಗೆ ಇಳಿಸಿಬಿಟ್ಟರೆ ಆ ವ್ಯಕ್ತಿತ್ವಕ್ಕೆ ದ್ರೋಹ ಮಾಡಿದಂತಾಗುತ್ತದೆ. ಇಂದು ಅಂತಹ ದ್ರೋಹ ವ್ಯಾಪಕವಾಗಿ ನಡೆಯುತ್ತಿದೆ.

ಇಂದು ಈ ಹಿನ್ನೆಲೆಯಿಂದ ಬಂದು ಬೇರೆ ಜಗತ್ತಿಗೆ ತೆರೆದುಕೊಂಡ ಸೂಕ್ಷ್ಮ ಮನಸ್ಸಿನ ಹಲವು ಯುವಕರಿಗೆ ಇದು ಸಹಜವಾಗಿಯೇ ಕಾಡುತ್ತಿದೆ. ಸಮಾಜ ಹೊರಿಸಿದ ಗುರುತುಗಳನ್ನು ಮುಖಾಮುಖಿಯಾಗುವ, ಪ್ರಶ್ನಿಸುವ, ಅಳಿಸುವ ಕೆಲಸವನ್ನು ತಮ್ಮ ತಮ್ಮ ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ. ಇವರು ವೈಯಕ್ತಿಕವಾಗಿ ಈ ನೋವನ್ನು ಅನುಭವಿಸಿದ್ದಾರೆ. ಬೇರೆಯವರ (ವೇಮುಲ, ಅನುಸೂಯಮ್ಮ, ಶೇಷಗಿರಿಯಪ್ಪ ಮೊದಲಾದವರ) ನೋವನ್ನು ನೋಡಿದ್ದಾರೆ. ಅಂಬೇಡ್ಕರ್ ಅಂತಹವರ ಬರಹಗಳ ಓದಿನಿಂದ ದಕ್ಕಿರುವ ಅನುಭವವಿದೆ.

ಭಾರತದಲ್ಲಿ ಒಂಟಿತನ ಹುಟ್ಟಿರುವುದು ಹೊರಗಿಡುವ ಪ್ರಕ್ರಿಯೆಯಲ್ಲಿ, ಅಸ್ಪಶ್ಯತೆಯ ಕಾರಣದಿಂದಾಗಿ. ಈ ತಬ್ಬಲಿತನಕ್ಕೆ ಇವರು ಕಾರಣ ಅಲ್ಲ. ಊರು ಕೇರಿ ಅನ್ನುವುದು ಕೇರಿಯವರು ಮಾಡಿಕೊಂಡ ವಿಭಜನೆಯಲ್ಲ. ಅದು ಊರಿನವರ, ಇಡೀ ಸಮುದಾಯದ ಕ್ರಿಯೆಯಾಗಿರುತ್ತದೆ. ಒಬ್ಬರ ಬದುಕುವ ಕ್ರಮ, ತಿನ್ನುವ ಆಹಾರ, ಬಳಸುವ ವಾದ್ಯ ಅವರನ್ನು ಅನ್ಯರನ್ನಾಗಿಸುತ್ತದೆ. ಅದು ಆ ಬದುಕು ಬದುಕುತ್ತಿರುವವರ ಸಮಸ್ಯೆಯಲ್ಲ. ಅದು ಅದಕ್ಕೆ ಕಾರಣವಾದ ವ್ಯವಸ್ಥೆಯ ಸಮಸ್ಯೆ. ಹಾಗಾಗಿ ಅವರಷ್ಟೇ ಇದರಿಂದ ಹೊರಬರುವುದಕ್ಕೆ ಸಾಧ್ಯವಿಲ್ಲ. ಅದು ಸಾಮುದಾಯಿಕವಾಗಿ ಆಗಬೇಕಾದ ಕ್ರಿಯೆ.

ಇದಕ್ಕೆ ಸ್ಪಷ್ಟ ಪರಿಹಾರ ಗೊತ್ತಿಲ್ಲದೆ ಇರಬಹುದು. ಹೋರಾಟಗಳ ಮೂಲಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ಗುರುತುಗಳೊಡನೆ, ಈ ಪರಂಪರೆಯೊಡನೆ ಮುಖಾಮುಖಿಯಾಗುವ ಜರೂರು ಇದೆ. ಕಲೆಯ ಮೂಲಕ ಇದಕ್ಕೆ ಪರಿಹಾರ ಸಾಧ್ಯವೂ ಇಲ್ಲದೆ ಇರಬಹುದು. ಆದರೆ ಕನಿಷ್ಠ ಹಾಗೂ ಶ್ರೇಷ್ಠ ಅನ್ನುವ ಕೃತಕ ವ್ಯತ್ಯಾಸವಿದೆ ಎಂದು ಹೇಳುವುದಕ್ಕೆ ಇದಕ್ಕೆ ಸಾಧ್ಯವಾಗುತ್ತದೆ. ಅವುಗಳ ನಡುವೆ ಇರುವ ಸಂಘರ್ಷವನ್ನು ಹೇಳುವುದಕ್ಕೆ ಸಾಧ್ಯವಾಗುತ್ತದೆ. ಇಷ್ಟು ಕಾಲ ಗುಟ್ಟಾಗಿಡುತ್ತಲೇ ಬಂದಿದ್ದ ವಿಷಯಗಳನ್ನು ಬಿಚ್ಚಿಡುವುದಕ್ಕೆ ಸಾಧ್ಯವಾಗುತ್ತದೆ. ದಸ್ ನಂಬರ್, ದೊಡ್ಡ ಮಾಂಸ ಇತ್ಯಾದಿ ಗೋಪ್ಯ ಹೆಸರುಗಳನ್ನು ಕಳಚಿ ಅದನ್ನು ಬೀಫ್ ಎಂದು ಸಂಬೋಧಿಸುವುದಕ್ಕೆ ಸಾಧ್ಯವಾಗುತ್ತದೆ. ಈವರೆಗೂ ಎಷ್ಟೋ ವಿಷಯಗಳ ಬಗ್ಗೆ ಆವರಿಸಿಕೊಂಡಿದ್ದ ಮೌನವನ್ನು ಹರಿಯುವುದಕ್ಕೆ ಸಾಧ್ಯವಾಗುತ್ತದೆ. ಈವರೆಗೂ ಹೇಳಿಕೊಳ್ಳಲಾಗದ ದಿನನಿತ್ಯದ ಅನುಭವಗಳನ್ನು ಹೇಳಿಕೊಳ್ಳುವುದಕ್ಕೆ ವೇದಿಕೆ ಸಿಗುತ್ತದೆ. ಜನರೊಂದಿಗೆ ಮಾತನಾಡಿಸುವಾಗ, ಮನೆ ಕೇಳುವಾಗ, ಊಟಕ್ಕೆ ಹೋದಾಗ, ಪ್ರೀತಿಸುವಾಗ, ಜನರ ಜೊತೆ ಬೆರೆಯುವಾಗ ಜಾತಿ ಕಾಣಿಸಿಕೊಳ್ಳುತ್ತಿದ್ದ ಬಗೆಯನ್ನು, ಆಗುತ್ತಿದ್ದ ಮುಜುಗರವನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಹಾಗಾಗಿ ನಾಟಕ ಹೇಳುವ ಕಥೆ ಬದಲಾಗುತ್ತಿದೆ. ಜೊತೆಗೆ ಕಥೆ ಹೇಳುವ ಉದ್ದೇಶವೂ ಬೇರೆಯೇ ಆಗಿದೆ. ಸ್ವಾಭಾವಿಕವಾಗಿಯೇ ಕಥೆ ಹೇಳುವ ಶೈಲಿ ಬೇರೆಯಾಗಿದೆ. ನಿರ್ದೇಶಕ ಪ್ರೇಕ್ಷಕನಿಗೆ ಏನನ್ನೂ ವಿವರಿಸುತ್ತಿಲ್ಲ. ನಾಟಕಗಳು ಪ್ರೇಕ್ಷಕರ ಮುಂದೆ ಪಾತ್ರಗಳು ಅನುಭವಗಳನ್ನು ಬಿಚ್ಚಿಡುತ್ತಾ ಹೋಗುತ್ತವೆ. ಅದಕ್ಕೆ ಪ್ರತಿಕ್ರಿಯಿಸುವಂತೆ ಹಾಗೂ ತಮ್ಮನ್ನು ಪರೀಕ್ಷಿಸಿ ನೋಡಿಕೊಳ್ಳುವಂತೆ ಪ್ರೇಕ್ಷಕರನ್ನು ನಾಟಕ ಒತ್ತಾಯಿಸುತ್ತವೆ. ಅಷ್ಟೇ ಅಲ್ಲ ಈ ಪಾತ್ರಗಳೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನೂ ಸೂಚಿಸುತ್ತವೆ. ಆತ್ಮಾವಲೋಕನಕ್ಕೆ, ಚರ್ಚೆಗೆ ಒತ್ತಾಯಿಸುತ್ತವೆ.

ಶ್ರೇಣೀಕರಣವನ್ನು ಮುರಿಯುವ ಕೆಲಸ ನಾಟಕದ ಕಟ್ಟಾಣಿಕೆಯಲ್ಲೂ ನಡೆಯುತ್ತದೆ. ಗುರುತು ಸೃಷ್ಟಿಸುವ ಸಣ್ಣ ಸಣ್ಣ ವೃತ್ತಗಳನ್ನು ಆಳಿಸುವ, ಪ್ರಕ್ರಿಯೆ ನಾಟಕ ಕಟ್ಟುವ ರಚನೆಯಲ್ಲೇ ಇದೆ. ಇಲ್ಲಿ ಯಾರೂ ಶ್ರೇಷ್ಠರಲ್ಲ. ಯಾರೂ ಕನಿಷ್ಠರಲ್ಲ. ಹಾಗಾಗಿ ಸಂಘರ್ಷವಿಲ್ಲ. ನಿರ್ದೇಶಕರು, ನಟರು, ಎಲ್ಲರೂ ಸಮಾನ ಪಾಲುದಾರರು. ನಾಟಕದ ಕಟ್ಟಾಣಿಕೆಯಲ್ಲಿ ಎಲ್ಲರ ಪಾಲೂ ಇದೆ. ಎಲ್ಲರ ಬದುಕಿನ ಅನುಭವಗಳನ್ನು, ಓದುಗಳನ್ನು ಸೇರಿಸಿಕೊಂಡು ದೃಶ್ಯಗಳು ರೂಪುಗೊಳ್ಳುತ್ತಾ ಹೋಗುತ್ತವೆೆ. ನಾಟಕಕ್ಕೆ ಬೇಕಾದ ಮಾತುಗಳನ್ನು ನಟರೇ ಕೊಟ್ಟಿದ್ದಾರೆ. ಪ್ರಕ್ರಿಯೆಯಲ್ಲಿ ಪಾತ್ರಗಳು ಇಳಿಸಲಾಗದೆ ಹೊತ್ತುಕೊಂಡು ತಿರುಗಾಡುತ್ತಿದ್ದ ನೋವುಗಳನ್ನು ಹೇಳಿಕೊಂಡು ಹಗುರಮಾಡಿಕೊಳ್ಳುತ್ತವೆ. ಆ ಪ್ರಕ್ರಿಯೆಯಲ್ಲಿ ನಟರು ನಟಿಸುವ ಪಾತ್ರ ಹಾಗೂ ನಟರ ನಡುವೆ ಘರ್ಷಣೆಯೂ ಹುಟ್ಟಿಕೊಳ್ಳಬಹುದು. ಅಪ್ರೆಸರ್ ಪಾತ್ರವನ್ನು ನಿರ್ವಹಿಸುವುದು ನಟರಿಗೆ ಸಮಸ್ಯೆಯಾಗಿ ತೋರಬಹುದು. ಈ ಎಲ್ಲಾ ಅನುಭವಗಳನ್ನು ರೂಪಕವಾಗಿ ಕಟ್ಟುತ್ತಾ, ಹೆಣೆಯುತ್ತಾ ಒಂದು ಮಾಡುವ ಕೆಲಸವನ್ನು ನಿರ್ದೇಶಕರು ಮಾಡುತ್ತಾ ಸಾಗಿದ್ದಾರೆ. ಅಂದರೆ ಬರೆಯುವುದು, ನಟನೆ, ನಿರ್ದೇಶನ ಎಲ್ಲವೂ ಒಟ್ಟಿಗೆ ನಡೆಯುತ್ತಾ ನಾಟಕ ಸಿದ್ಧವಾಗಿದೆ. ಮಹಿಳೆಯರನ್ನು ಇಡೀ ಪ್ರಕ್ರಿಯೆಯಲ್ಲಿ ಒಳಗುಮಾಡಿಕೊಂಡಿರುವ ಕ್ರಿಯೆ ಮಾತ್ರ ಒಂದು ಮಾದರಿಯನ್ನು ಸೃಷ್ಟಿಸಿದೆ.

ತಮಟೆ, ಉರುಮೆ, ಜಂಬೆ, ಗೆಜ್ಜೆ, ಬಿದಿರು ಮಳೆಕೋಲು ಇವುಗಳನ್ನು ನಾಟಕದಲ್ಲಿ ಬಳಸಿಕೊಂಡಿರುವುದು ಹಲವು ಕಾರಣಕ್ಕೆ ಮುಖ್ಯವಾಗುತ್ತದೆ. ಅವುಗಳ ಸದ್ದು ದಲಿತರ ಸಾಂಸ್ಕೃತಿಕ ನೆನಪುಗಳನ್ನು ತನ್ನೊಳಗೆ ಇಟ್ಟುಕೊಂಡಿವೆ. ದಲಿತ ಕಲೆ, ಸಂಗೀತ ಇವೆಲ್ಲಾ ಬಹುತೇಕ ಸಮಯದಲ್ಲಿ ಅವಮಾನ, ಹಿಂಸೆಯೊಂದಿಗೆ ತೆಕ್ಕೆ ಹಾಕಿಕೊಂಡಿರುತ್ತದೆ. ಆ ವಾದ್ಯಗಳಿಗೂ ಒಂದು ಘನತೆಯನ್ನು ತಂದುಕೊಡುವ ಹೊಣೆಗಾರಿಕೆ ನಾಟಕಕ್ಕಿದೆ. ಈವರೆಗೆ ಈ ವಾದ್ಯಗಳನ್ನು ಇವರಿಗಾಗಿ ನುಡಿಸಿರಲಿಲ್ಲ. ಮೇಲ್ಜಾತಿಯವರು ಹೇಳುತ್ತಿದ್ದರು ಅನ್ನುವ ಕಾರಣಕ್ಕೆ ನುಡಿಸುತ್ತಿದ್ದರು. ಈಗ ಸಂಗೀತಗಾರರಾಗಿ, ತಮಗಾಗಿ ನುಡಿಸಿಕೊಳ್ಳುತ್ತಿದ್ದಾರೆ. ಈಗ ವಾದ್ಯಗಳನ್ನು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಹಾಗೂ ದಲಿತರ ಸಾಂಸ್ಕೃತಿಕ ನೆನಪುಗಳನ್ನು ನಮ್ಮ ಮುಂದೆ ತೆರೆದಿಡುವುದಕ್ಕೆ ಈ ವಾದ್ಯಗಳ ಸದ್ದನ್ನು ಬಳಸಿಕೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಮಾಜ ಹಾಕಿದ ಸೀಮಿತ ಗುರುತಿನ ವೃತ್ತವನ್ನು ಅಳಿಸಿಕೊಂಡು, ಕಲಾವಿದರೊ, ನಟರೋ ಇನ್ನೇನೋ ಆಗುವ ಹಾದಿಯಲ್ಲಿದ್ದಾರೆ. ಅನುಭವಿಸಿದ ಅಪಮಾನವನ್ನು, ನೋವನ್ನು ಶಮನಮಾಡಿಕೊಳ್ಳುವುದಕ್ಕೆ ಕಲೆಯಲ್ಲೇ ಅವಕಾಶವನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ತಮಟೆ ನುಡಿಸುವುದೇ ಗುರುತನ್ನು ಅಳಿಸಿಹಾಕುವ ಕ್ರಿಯೆಯೂ ಆಗುತ್ತಿದೆ.

ಪ್ರತಿಯೊಂದು ಜಾತಿಗೂ ಒಂದು ಭಂಗಿ ಎನ್ನುವುದು ನಿರ್ಣಯವಾಗಿ ಬಿಟ್ಟಿರುತ್ತದೆ. ಅದು ಅಭ್ಯಾಸವಾಗಿಬಿಟ್ಟಿರುತ್ತದೆ. ಸಮಾಜದಲ್ಲಿ ಕಾಣುವ ಶ್ರೇಣೀಕರಣ ಇಲ್ಲೂ ಕಾಣಿಸಿಕೊಳ್ಳುತ್ತಾ ಇರುತ್ತದೆ. ಮೇಲುಜಾತಿಯವರು ಎದುರಾದಾಗ ತಳಸಮುದಾಯದವರು ದೇಹವನ್ನು ಕುಗ್ಗಿಸಿ ನಿಂತುಕೊಳ್ಳಬೇಕು. ಬಗ್ಗಿ ನಡೆಯಬೇಕು. ಕೆಳಗೆ ಕುಳಿತುಕೊಳ್ಳಬೇಕು. ಇಂತಹ ಭಂಗಿಗಳನ್ನು ಅಭ್ಯಾಸ ಮಾಡಿಸಲಾಗಿದೆ. ರಂಗದಲ್ಲಿ ಪಾತ್ರಗಳು ವಹಿಸುವ ಜವಾಬ್ದಾರಿ ಬದಲಾದಾಗ ಈ ಭಂಗಿಗಳೂ ಬದಲಾಗಬೇಕಾಗುತ್ತದೆ. ಇಲ್ಲಿಯ ಪಾತ್ರಗಳು ನೆಟ್ಟಗೆ ನಿಲ್ಲುವುದಷ್ಟೇ ಅಲ್ಲ, ಇಂಗ್ಲಿಷ್ ಮಾತನಾಡುತ್ತವೆ. ಗಿಟಾರ್ ನುಡಿಸುತ್ತವೆೆ. ಪೊಯೆಟ್ರಿ ಓದುತ್ತವೆೆ, ಒಳ್ಳೆ ಬಟ್ಟೆ ಹಾಕುತ್ತವೆೆ. ಅಸರ್ಟ್ ಮಾಡಿಕೊಳ್ಳುವುದೇ ಅಭಿವ್ಯಕ್ತಿಯ ವಿಧಾನವೂ ಆಗಿದೆ. ಈ ಬದಲಾದ ಭಂಗಿಗಳು ಪಾತ್ರಗಳ ಹಾಗೂ ಪ್ರೇಕ್ಷಕರ ಮನೋಭಾವದ ಮೇಲೂ ಪ್ರಭಾವ ಬೀರುತ್ತದೆ.

ಚಂದ್ರು ನಿರ್ದೇಶಿಸಿದ ‘ಪಂಚಮಪದ’ ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟದ ಕಥನವನ್ನು ಕಟ್ಟಿಕೊಟ್ಟಿತ್ತು. ಅದು ತೀವ್ರ ಹೋರಾಟದ ಹಂತ. ಚಿಕ್ಕತಿಮ್ಮಯ್ಯನವರ ಕೊಲೆ, ಅನುಸೂಯಮ್ಮನ ಮೇಲಿನ ಅತ್ಯಾಚಾರ ಮತ್ತು ಶೇಷಗಿರಿಯಪ್ಪನವರ ಕೊಲೆ ಇತ್ಯಾದಿ ಪ್ರಕರಣಗಳ ಸುತ್ತ ಬಿ. ಕೃಷ್ಣಪ್ಪನವರಂತಹವರ ನಾಯಕತ್ವದಲ್ಲಿ ಹಲವು ಹೋರಾಟಗಳು ನಡೆದಿದ್ದವು. ಚಂದ್ರಗುತ್ತಿಯ ಬೆತ್ತಲೆ ಸೇವೆಯಂತಹ ಆಚರಣೆಗಳ ವಿರುದ್ಧ ತೀವ್ರವಾದ ಹೋರಾಟ ನಡೆದಿತ್ತು. ಹಲವು ಪತ್ರಿಕೆಗಳು ವಿಶೇಷವಾಗಿ ಪಂಚಮ ಇಂತಹ ಹೋರಾಟಗಳಿಗೆ ಮುಖವಾಣಿಯಾಗಿತ್ತು. ಹೋರಾಟದ ಭಾಗವಾಗಿ ಸಾಂಸ್ಕೃತಿಕ ಚಳವಳಿ ತೀವ್ರವಾಗಿತ್ತು. ಬೀದಿ ನಾಟಕಗಳು, ಹೋರಾಟದ ಹಾಡುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅದು ಸಮುದಾಯದವರು ಬ್ರೆಕ್ಟ್ ಬರೆದ ತಾಯಿ, ಗೆಲಿಲಿಯೋ ಇತ್ಯಾದಿ ನಾಟಕಗಳನ್ನು ಆಡಿಸಿದ ಕಾಲ. ಜನಪರ ಚಳವಳಿಗಳು ತೀರಾ ಸಕ್ರಿಯವಾಗಿದ್ದ ಕಾಲ. ಇತ್ತೀಚಿನ ಲಕ್ಷ್ಮಣ್ ನಿರ್ದೇಶನದ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ ಬಾಬ್ ಮಾರ್ಲಿಯ ಸಂಗೀತ, ಅಂಬೇಡ್ಕರ್ ವೈಟಿಂಗ್ ಫಾರ್ ವಿಸಾ ಲೇಖನ, ವೇಮುಲ ಅವರ ಕೊನೆಯ ಪತ್ರ, ಎನ್.ಕೆ. ಹನುಮಂತಯ್ಯ ಅವರ ಅಸ್ಪಶ್ಯ ಪದ್ಯ, ಜೊತೆಗೆ ಹಲವು ಅನುಭವಗಳನ್ನು ಒಟ್ಟಿಗೆ ನೇಯ್ದು ಗುರುತಿನ ಸಮಸ್ಯೆಯ ಹಲವು ವಿರೋಧಾಬಾಸಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಜಂಗಮ ಕಲೆಕ್ಟಿವ್ ಹಲವು ಪ್ರತಿಭಾವಂತ ಕಲಾವಿದರನ್ನು ಒಟ್ಟು ಮಾಡಿಕೊಂಡು ರಂಗಕ್ಕೆ ದಲಿತ ಲೋಕವನ್ನು ಕೈಹಿಡಿದು ಕರೆತರುತ್ತಿದೆ. ಹಾಗೆಯೇ ಅದಕ್ಕೆ ಬೇಕಾದ ಕಲಾದೃಷ್ಟಿಯನ್ನು ಸಮುದಾಯಗಳಿಂದಲೇ ಪಡೆದುಕೊಳ್ಳುವ ಅನಿವಾರ್ಯತೆಯ ಅರಿವು ಅದಕ್ಕಿದೆ. ಅವರು ಬದುಕಿನುದ್ದಕ್ಕೂ ನೋಡಿದ ನೆನಪುಗಳು, ಮಿಥ್‌ಗಳನ್ನು, ಸಂಸ್ಕೃತಿಯನ್ನು ಮರೆಯುವುದಕ್ಕಾಗುವುದಿಲ್ಲ. ತಿರಸ್ಕರಿಸುವುದಕ್ಕೂ ಆಗುವುದಿಲ್ಲ. ನಿಜ ಅವೆಲ್ಲಾ ನೋವಿನ ಜೊತೆಗೆ, ಅವಮಾನದ ಜೊತೆಗೆ ಬೆಸೆದುಕೊಂಡಿರುತ್ತದೆ. ಅದರೂ ಅದರೊಂದಿಗೆ ಮುಖಾಮುಖಿ ಆಗುವುದು ಅನಿವಾರ್ಯ. ಅದನ್ನು ಮರುವ್ಯಾಖ್ಯಾನಿಸುವುದೂ ಅನಿವಾರ್ಯ. ಸಮುದಾಯಗಳನ್ನು ಪ್ರತ್ಯೇಕಿಸುವ, ಕೆಲವರನ್ನು ಶ್ರೇಷ್ಠರಾಗಿ, ಕೆಲವರನ್ನು ಕನಿಷ್ಠರಾಗಿ ನೋಡುವ ಗುರುತುಗಳನ್ನು ಇಟ್ಟುಕೊಂಡು ಎಲ್ಲರೂ ಒಂದು ಅನ್ನುವ ಘೋಷಣೆಗಳಿಗೆ ಯಾವ ಅರ್ಥವೂ ಇಲ್ಲ. ತಳಸಮುದಾಯ ಸಿಲುಕಿರುವ ಗುರುತುಗಳನ್ನು ಅಳಿಸುವ ದಿಕ್ಕಿನಲ್ಲಿ ಜಂಗಮದ ಪ್ರಯತ್ನ ಒಂದು ಆಶಾಕಿರಣ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಮಾನತೆಯ ಮಾತಿಗೆ ಒಂದಿಷ್ಟು ಬೆಲೆ ಬರಬೇಕಾದರೆ ಇಂತಹ ಚಳವಳಿಗಳು ಗೆಲ್ಲಬೇಕು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಟಿ.ಎಸ್. ವೇಣುಗೋಪಾಲ್

contributor

Similar News