ದ.ಕ.: ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ತನ್ನ ಗತವೈಭವವನ್ನು ಮರಳಿ ಪಡೆಯಲಿದೆಯೇ?

Update: 2024-02-14 06:22 GMT

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ದೇಶದ ಪ್ರಮುಖ ರಾಜ್ಯಗಳಲ್ಲಿ ಪರಿಸ್ಥಿತಿ ಈಗ ಹೇಗಿದೆ ಎಂಬುದನ್ನು ಕಳೆದ ಕೆಲವು ವಾರಗಳಲ್ಲಿ ‘ವಾರ್ತಾ ಭಾರತಿ’ ಅಂಕಿ ಅಂಶಗಳ ಸಹಿತ ನಿಮ್ಮ ಮುಂದಿಟ್ಟಿದೆ. ಈಗ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಒಂದೊಂದಾಗಿ ನೋಡುವ ಸರದಿ.

ಮೊದಲಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ನೋಡುವುದಾದರೆ,

ಒಟ್ಟು 8 ವಿಧಾನಸಭಾ ಕ್ಷೇತ್ರಗಳಿರುವ ದ.ಕ.ದ ಸಾಕ್ಷರತೆ ಪ್ರಮಾಣ ಶೇ.88.57

ವಿಧಾನಸಭಾ ಕ್ಷೇತ್ರಗಳು- ಮೂಡುಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ.

ಈಗ 6 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 2ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ದ.ಕ. ಜಿಲ್ಲೆಯ ಅಂದಾಜು ಜನಸಂಖ್ಯೆ 21ಲಕ್ಷ

ಒಟ್ಟು ಮತದಾರರು (2024ರ ಜನವರಿ 24ರವರೆಗೆ) -17,88,405

ಪುರುಷ ಮತದಾರರು -8,73,277

ಮಹಿಳಾ ಮತದಾರರು - 9,15,058

ಇತರ ಮತದಾರರು- 70

ಇನ್ನು, ಜಾತಿವಾರು ಮತದಾರರ ನಿಖರ ಮಾಹಿತಿ ಜಿಲ್ಲೆಯಲ್ಲಿ ಲಭ್ಯವಿಲ್ಲ.

ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಕಾರ್ಯಕರ್ತರು ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ತಯಾರಿಸಿದ ಅಂದಾಜು ಪಟ್ಟಿಯ ಪ್ರಕಾರ,

ಬಿಲ್ಲವರು-3,80,369

ಮುಸ್ಲಿಮರು-3,92,666

ಒಕ್ಕಲಿಗರು-1,55,286

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ-1,98,286

ಕ್ರೈಸ್ತರು-1,56,284

ಬಂಟರು-1,21,138

ಬ್ರಾಹ್ಮಣರು, ಜಿಎಸ್‌ಬಿ-66,786

ಜೈನರು-8,500

ಮೊಗವೀರರು-26,500

ಕುಲಾಲರು-24,500

ಗಾಣಿಗರು, ವಿಶ್ವಕರ್ಮ, ದೇವಾಡಿಗ, ಕೊಟ್ಟಾರಿ, ಜೋಗಿ, ಭಂಡಾರಿ, ಮಡಿವಾಳರು-20,600

ಇತರರು-1,90,656

ಕಳೆದ ಮೂರು ಲೋಕಸಭೆ ಚುನಾವಣೆ(2009, 2014 ಮತ್ತು 2019)ಗಳಲ್ಲೂ ಬಿಜೆಪಿಯ ನಳಿನ್ ಕುಮಾರ್ ಕಟೀಲು ಗೆಲುವು ಸಾಧಿಸಿದ್ದಾರೆ.

ಕಳೆದ ಮೂರು ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:

2019 ಬಿಜೆಪಿಗೆ ಶೇ.57.57, ಕಾಂಗ್ರೆಸ್‌ಗೆ ಶೇ.37.15

2014 ಬಿಜೆಪಿಗೆ ಶೇ.53.23, ಕಾಂಗ್ರೆಸ್‌ಗೆ ಶೇ.41.33

2009 ಬಿಜೆಪಿಗೆ ಶೇ.49.16, ಕಾಂಗ್ರೆಸ್‌ಗೆ ಶೇ.45.18

1951ರಿಂದ 2019ರವರೆಗಿನ ಚುನಾವಣೆಗಳಲ್ಲಿ 9 ಬಾರಿ ಕಾಂಗ್ರೆಸ್, 8 ಬಾರಿ ಬಿಜೆಪಿಗೆ ಗೆಲುವು ಸಿಕ್ಕಿದೆ.

1951ರಿಂದ ಸತತ 9 ಬಾರಿ ಕಾಂಗ್ರೆಸ್ ಜಯ ಗಳಿಸಿದ್ದರೆ, 1991ರಿಂದ 2019ರವರೆಗೆ 8 ಚುನಾವಣೆಗಳಲ್ಲಿ ಬಿಜೆಪಿ ಸತತ ಗೆಲುವು ಕಂಡಿದೆ.

ಈ ಕ್ಷೇತ್ರದಲ್ಲಿ ಏನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿರುತ್ತದೆ.

ಕಾಂಗ್ರೆಸ್‌ನ ಬಿ. ಜನಾರ್ದನ ಪೂಜಾರಿ ಹಾಗೂ ಬಿಜೆಪಿಯ ವಿ. ಧನಂಜಯ ಕುಮಾರ್ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರೆ, 2009ರಿಂದ ಹಾಲಿ ಸಂಸದ ನಳಿನ್ ಕುಮಾರ್ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ.

1951ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. ಆಗ ಮದ್ರಾಸ್, ಮೈಸೂರು ಹಾಗೂ ಕೊಡಗಿನಲ್ಲಿ ಪ್ರತ್ಯೇಕವಾಗಿ ಲೋಕಸಭೆ ಚುನಾವಣೆ ನಡೆದಿತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಆಗ ಮದ್ರಾಸ್ ಪ್ರಾಂತದ ಭಾಗವಾಗಿತ್ತು.

ಸೌತ್ ಕೆನರಾ ಎಂದು ಕರೆಯಲಾಗುತ್ತಿದ್ದ ಕ್ಷೇತ್ರದ ಆ ಮೊದಲ ಚುನಾವಣೆಯಲ್ಲಿ ಕಾರ್ಮಿಕ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ ಪತ್ರಕರ್ತ ಬೆನೆಗಲ್ ಶಿವರಾವ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಎದುರಾಳಿಯಾಗಿ ಶಿವರಾಮ ಕಾರಂತರ ಸಹೋದರ ಕೆ.ರಾಮಕೃಷ್ಣ ಕಾರಂತರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯಿಂದ ಅಭ್ಯರ್ಥಿಯಾಗಿದ್ದರು. ಬೆನೆಗಲ್ ಗೆಲುವು ಕಂಡಿದ್ದರು.

1957ರಲ್ಲಿ ಕೊಡಗು ಜಿಲ್ಲೆಯನ್ನು ಒಳಗೊಂಡು ಮಂಗಳೂರು ಕ್ಷೇತ್ರ ರಚನೆಯಾಯಿತು. ಆ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿ ಕೃಷ್ಣ ಶೆಟ್ಟಿ ವಿರುದ್ಧ ಕಾಂಗ್ರೆಸ್‌ನ ಕೆ. ರಾಮಚಂದ್ರ ಆಚಾರ್ಯ ಗೆಲುವು ಕಂಡಿದ್ದರೆ, 1962ರಲ್ಲಿ ಸಿಪಿಐನ ಬಿ.ವಿ. ಕಕ್ಕಿಲಾಯ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎ. ಶಂಕರ ಆಳ್ವ ಗೆಲುವು ಸಾಧಿಸಿದ್ದರು ಹಾಗೂ 1967ರಲ್ಲಿ ಕಾಂಗ್ರೆಸ್‌ನ ಸಿ.ಎಂ. ಪೂಣಚ್ಚ ಗೆಲುವು ಕಂಡಿದ್ದರು.

1971ರಲ್ಲಿ ಕಣದಲ್ಲಿದ್ದದ್ದು ವಿಭಜಿತ ಕಾಂಗ್ರೆಸ್ ಬಣಗಳು. ಇಂದಿರಾ ಗಾಂಧಿ ನೇತೃತ್ವದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಶೆಟ್ಟಿ ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಪೂಣಚ್ಚ ವಿರುದ್ಧ ಗೆಲುವು ಕಂಡರು.

1977ರಲ್ಲಿ ದೇಶದಲ್ಲಿ ಕಾಂಗ್ರೆಸ್ ಸೋತಿದ್ದರೂ ಮಂಗಳೂರು ಸೇರಿ ಕರ್ನಾಟಕದ 26 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆ ಚುನಾವಣೆಯಲ್ಲಿ ಗೆದ್ದ ಬಿ. ಜನಾರ್ದನ ಪೂಜಾರಿ 1989ರವರೆಗೆ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದರು.

ಈ ನಡುವೆ 1984ರ ಚುನಾವಣೆ ವೇಳೆಗೆ ಬಿಜೆಪಿ ಉದಯವಾಗಿತ್ತು.

1991ರಲ್ಲಿ, ಹಿಂದಿನ ಚುನಾವಣೆಯಲ್ಲಿ ಪೂಜಾರಿ ಎದುರು ಸೋತಿದ್ದ ಬಿಜೆಪಿಯ ವಿ. ಧನಂಜಯ ಕುಮಾರ್ ಗೆಲುವಿನೊಂದಿಗೆ ಮಂಗಳೂರಿನಲ್ಲಿ ಬಿಜೆಪಿ ಮೊದಲ ಗೆಲುವು ದಾಖಲಿಸಿತು. ಅಲ್ಲಿಂದ 1999ರವರೆಗೆ ಧನಂಜಯ ಕುಮಾರ್ ಅವರು ಸತತ ನಾಲ್ಕು ಗೆಲುವುಗಳನ್ನು ಕಂಡರು.

2004ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಡಿ.ವಿ. ಸದಾನಂದ ಗೌಡ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ವಿರುದ್ಧ ಗೆದ್ದರು.

2009ರ ಚುನಾವಣೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಕೊಡಗು ಬೇರ್ಪಟ್ಟಿತು. ಆ ಚುನಾವಣೆಯಿಂದ 2019ರ ಚುನಾವಣೆಯವರೆಗೂ ಬಿಜೆಪಿಯ ನಳಿನ್ ಕುಮಾರ್ ಕಟೀಲು ಜಯ ಸಾಧಿಸುತ್ತಾ ಬಂದಿದ್ದಾರೆ.

ಕಾಂಗ್ರೆಸ್: ಅಸೆಂಬ್ಲಿ ಚುನಾವಣೆ ಉಮೇದು ಈಗಿಲ್ಲ

ಕಾಂಗ್ರೆಸ್‌ನಿಂದ ಯಾರು ಕಣಕ್ಕಿಳಿಯಬಹುದು ಎಂಬುದು ರಹಸ್ಯವಾಗಿಯೇ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಉತ್ಸಾಹ ಲೋಕಸಭೆ ಸ್ಪರ್ಧೆಗೆ ಕಂಡುಬರುತ್ತಿಲ್ಲ.

ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಎಂಎಲ್‌ಸಿ ಹರೀಶ್ ಕುಮಾರ್, ಪದ್ಮರಾಜ್ ಆರ್. ಅವರ ಹೆಸರುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಸಚಿವ ಮಧು ಬಂಗಾರಪ್ಪ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಈಗಾಗಲೇ ಸಭೆ ನಡೆಸಿ ಜಿಲ್ಲೆಯಲ್ಲಿ ಉಮೇದುವಾರಿಕೆಯ ಅರ್ಹರ ಬಗ್ಗೆ ಸಮಾಲೋಚನೆ ನಡೆಸಿರುವ ಅವರು ಶೀಘ್ರವೇ ಹೈಕಮಾಂಡ್‌ಗೆ ವರದಿ ಸಲ್ಲಿಸುವ ಸಾಧ್ಯತೆಗಳಿವೆ.

ಮಾಜಿ ಸಚಿವರಾಗಿ, ಪಕ್ಷದ ಜಿಲ್ಲಾಧ್ಯಕ್ಷರಾಗಿಯೂ ಪ್ರಾಮಾಣಿಕ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ರಮಾನಾಥ ರೈ ಮಾತ್ರವಲ್ಲದೆ, ತಮ್ಮ ವಿಭಿನ್ನ ಕಾರ್ಯಶೈಲಿ, ನಡೆ ನುಡಿಯ ಮೂಲಕ ಗುರುತಿಸಿಕೊಂಡಿರುವ ಸ್ಪೀಕರ್ ಯು.ಟಿ. ಖಾದರ್ ಸ್ಪರ್ಧೆ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ.

ಮುಸ್ಲಿಮ್ ಕೋಟಾದಲ್ಲಿ ಯು.ಟಿ. ಖಾದರ್ ಸೋದರ ಯು.ಟಿ. ಇಫ್ತಿಕಾರ್ ಅವರ ಹೆಸರೂ ಚಲಾವಣೆಗೆ ಬಂದಿದೆ.

ಬಿಲ್ಲವರ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಅಥವಾ ಯುವ ನಾಯಕರಾಗಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಆಪ್ತರಾಗಿರುವ ಪದ್ಮರಾಜ್ ಅವರಿಗೆ ಟಿಕೆಟ್ ನೀಡಿದರೆ ಹೇಗೆ ಎಂಬ ಮಾತೂ ದಟ್ಟವಾಗಿದೆ.

ಇವೆಲ್ಲದರ ಮಧ್ಯೆ ಮಹಿಳಾ ಅಭ್ಯರ್ಥಿಯನ್ನು ಕಾಂಗ್ರೆಸ್ ಅದೃಷ್ಟ ಪರೀಕ್ಷೆಗೆ ಇಳಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

ಬಿಜೆಪಿಯಿಂದ ಕಟೀಲು ಅವರನ್ನೇ ಬಿಜೆಪಿ ಕಣಕ್ಕಿಳಿಸಿದರೂ, ಹಿಂದುತ್ವದ ಅಲೆಯ ಹೊರತಾಗಿಯೂ ಈಗಾಗಲೇ ಅವರ ವಿರುದ್ಧ ಪಕ್ಷದೊಳಗಿನ ಅಸಮಾಧಾನ, ಬಿಜೆಪಿ ಜತೆಗಿನ ಜೆಡಿಎಸ್ ಮೈತ್ರಿ ಬಗ್ಗೆ ಇರುವ ಅಪಸ್ವರ, ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆ ಹಾಗೂ ಪ್ರಸಕ್ತ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂಬ ಲೆಕ್ಕಾಚಾರವೂ ನಡೆದಿದೆ.

ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಸುಮಾರು 1.50 ಲಕ್ಷದಷ್ಟು ಮತಗಳನ್ನು ಕಳೆದುಕೊಂಡಿತ್ತು. ಆ ಮತಗಳನ್ನು ಹೇಗೆ ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಸದ್ಯ ಕಾಂಗ್ರೆಸ್ ಇದೆ.

ಆದರೆ, ರಾಜ್ಯದೆಲ್ಲೆಡೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವ ಇದ್ದಾಗಲೂ ಕರಾವಳಿಯಲ್ಲಿ ಬಿಜೆಪಿ ಭದ್ರಕೋಟೆಗೆ ಈ ಅಂಶಗಳು ಕಾಂಗ್ರೆಸ್ ಕೈಹಿಡಿದಿರಲಿಲ್ಲ. ಹಾಗಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವು ತಮ್ಮದೇ ಎಂಬ ಹುಮ್ಮಸ್ಸು ಬಿಜೆಪಿ ಪಾಳಯದಲ್ಲಿದೆ.

ದಕ್ಷಿಣ ಕನ್ನಡ

ಜನಸಾಮಾನ್ಯರ ಬಾಯಲ್ಲಿ ಮಂಗಳೂರು ಎಂದೇ ಕರೆಸಿಕೊಳ್ಳುವ ಕ್ಷೇತ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ. ಈಚಿನ 8 ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಸತತ ಗೆಲುವುಗಳನ್ನು ಕಂಡಿದೆ. 2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ 8ರಲ್ಲಿ 6 ಕ್ಷೇತ್ರಗಳನ್ನು ಬಿಜೆಪಿಯೇ ಬಾಚಿಕೊಂಡಿದೆ. ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರದ ಹೊರತಾಗಿಯೂ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಹೀಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರಿನ ಸವಾಲುಗಳೇನು? ಮೊದಲ 9 ಸತತ ಗೆಲುವುಗಳನ್ನು ಕಂಡಿದ್ದ ಕಾಂಗ್ರೆಸ್ ತನ್ನ ಗತವೈಭವವನ್ನು ಈ ಬಾರಿಯಾದರೂ ಮರಳಿ ಪಡೆಯುವುದೇ ಅಥವಾ ಬಿಜೆಪಿಯ ಪ್ರಾಬಲ್ಯವೇ ಮುಂದುವರಿಯುವುದೇ?.

ಕಟೀಲು ಸ್ಪರ್ಧೆ ಫಲ ನೀಡುವುದೆ?

ನಳಿನ್ ಕುಮಾರ್ ಕಟೀಲು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷದ ನಾಯಕರ ನಡುವೆ ಗುರುತಿಸಿ ಕೊಂಡಿದ್ದರೂ, ಕಾರ್ಯಕರ್ತರ ಒಂದು ವಲಯದಲ್ಲಿ ಸಾಕಷ್ಟು ಮೂದಲಿಕೆ, ವಿರೋಧಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಈ ಬಾರಿ ಅವರನ್ನೇ ಕಣಕ್ಕಿಳಿಸಿದರೆ ಬಿಜೆಪಿಯ ಭದ್ರ ಕೋಟೆಯನ್ನು ಮುರಿಯುವ ಕಾಂಗ್ರೆಸ್ ಕನಸಿಗೆ ಬಲ ಸಿಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿದೆ.

ಈ ನಡುವೆ, ಬಿಜೆಪಿಯಿಂದ ಈ ಬಾರಿ ಹೊಸಬರನ್ನು ಕಣಕ್ಕಿಳಿಸಬೇಕೆಂಬ ವಾದವೂ ಕೇಳಿಬರುತ್ತಿದೆ.

ಈ ನಡುವೆ ಬಂಡಾಯ ನಾಯಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಮತ್ತೆ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ.

ನಳಿನ್ ಕುಮಾರ್ ಕಟೀಲು ಇಲ್ಲಿ ಮೊದಲು ಕಣಕ್ಕಿಳಿದಾಗಲೂ ಹೊಸ ಮುಖವೇ ಆಗಿದ್ದರು. ಹಾಗಿದ್ದರೂ ಬಿಜೆಪಿಯ ಇಮೇಜ್‌ನಿಂದಾಗಿ ಗೆಲ್ಲುವುದು ಸಾಧ್ಯವಾಗಿತ್ತು. ಹಾಗಾಗಿ ಇಲ್ಲಿ ಹೊಸಬರು ಸ್ಪರ್ಧಿಸಿದರೂ ಗೆಲುವು ಗ್ಯಾರಂಟಿ ಎನ್ನುವ ಮಾತು ಜಿಲ್ಲೆಯ ಬಿಜೆಪಿ ವಲಯದಲ್ಲಿದೆ.

ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕುವುದೇ ಕಾಂಗ್ರೆಸ್?

ಜನಸಾಮಾನ್ಯರ ಬಾಯಲ್ಲಿ ಮಂಗಳೂರು ಎಂದೇ ಕರೆಸಿಕೊಳ್ಳುವ ಕ್ಷೇತ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ. ಈಚಿನ 8 ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಸತತ ಗೆಲುವುಗಳನ್ನು ಕಂಡಿದೆ. 35 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ.

2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ 8ರಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿಯೇ ಜಯಭೇರಿ ಬಾರಿಸಿದೆ.

ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರದ ಹೊರತಾಗಿಯೂ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಈ ಬಾರಿ ಕರಾವಳಿಯ ಪ್ರಮುಖ ಕ್ಷೇತ್ರವಾದ ಮಂಗಳೂರನ್ನು ಶತಾಯಗತಾಯ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ಇನ್ನು ಬಿಜೆಪಿಯಿಂದ ಈ ಸಲವೂ ನಳಿನ್ ಕುಮಾರ್ ಕಟೀಲು ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಗಳೇ ನಿಚ್ಚಳವಾಗಿವೆ. ಕಾಂಗ್ರೆಸ್ ತಂತ್ರ ಏನಿರಲಿದೆಯೊ ಕಾದು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News