ಹರ್ಯಾಣದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಕಾದಿದೆಯೇ?

ಈ ಸಲದ ಚುನಾವಣೆ ಹೇಗಿದೆಯೆಂದರೆ, ಚುನಾವಣೆ ಇನ್ನೂ ಬಾಕಿಯಿರುವಾಗಲೇ ಜನತೆ ನಿರ್ಧಾರ ಮಾಡಿಬಿಟ್ಟಿದ್ದಾರೆ. ಚುನಾವಣೆಯಲ್ಲಿ ತಾವೇನು ಮಾಡಲಿದ್ದೇವೆ ಎಂಬುದರ ಬಗ್ಗೆ ಜನತೆ ಲೆಕ್ಕಾಚಾರ ಹಾಕಿಯಾಗಿದೆ. ಮುಂಬರುವ ಐದು ವರ್ಷಗಳಿಗಾಗಿ ತಾವು ಎಂಥ ಸರಕಾರ ತರಬೇಕೆಂಬುದನ್ನು ಜನ ಆಗಲೇ ಯೋಚಿಸಿಬಿಟ್ಟಿದ್ದಾರೆ. ರೈತರ ಹೋರಾಟದ ವಿರುದ್ಧವಾಗಿ ನಿಂತಿದ್ದ ಹರ್ಯಾಣದ ಬಿಜೆಪಿ ಸರಕಾರ ಅದಕ್ಕೆ ತಕ್ಕ ಫಲ ಉಣ್ಣಬೇಕಾದ ಹೊತ್ತು ಬಂದಿದೆ.

Update: 2024-10-03 07:20 GMT
Editor : Thouheed | Byline : ಎನ್. ಕೇಶವ್

ಅಕ್ಟೋಬರ್ 5ರಂದು ಹರ್ಯಾಣ ವಿಧಾನಸಭೆ ಚುನಾವಣೆ ನಡೆಯಲಿದೆ.

ರಾಜಸ್ಥಾನ, ಮಧ್ಯಪ್ರದೇಶದಂತೆ ಹರ್ಯಾಣ ಬಹಳ ದೊಡ್ಡ ರಾಜ್ಯವಲ್ಲದಿದ್ದರೂ, ಈ ಬಾರಿ ಅಲ್ಲಿನ ಚುನಾವಣೆಗೆ ವಿಶೇಷ ಮಹತ್ವವಿದೆ. ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ ಹರ್ಯಾಣ ಚುನಾವಣೆಗೆ ಇಷ್ಟೊಂದು ಪ್ರಾಮುಖ್ಯತೆ ಹಿಂದೆಂದೂ ಸಿಕ್ಕಿದ್ದಿರಲಿಲ್ಲ.

ಚುನಾವಣಾ ವಿಶ್ಲೇಷಕರಾದ ಯೋಗೇಂದ್ರ ಯಾದವ್ ಅಂಥವರು ಹರ್ಯಾಣ ಚುನಾವಣೆ ಬಗ್ಗೆ ಮಾತಾಡಿರುವುದೇ ಅದರ ಪ್ರಾಮುಖ್ಯತೆಯನ್ನು ಹೇಳುತ್ತದೆ.

ಹಲವು ವರ್ಷಗಳಿಂದ ಚುನಾವಣೆಗಳ ಸಾಧ್ಯಾಸಾಧ್ಯತೆಗಳನ್ನು ಬಹಳ ಕರಾರುವಾಕ್ಕಾಗಿ ಗುರುತಿಸಿ ವಿಶ್ಲೇಷಿಸುತ್ತ ಬಂದವರಾಗಿರುವ ಯೋಗೇಂದ್ರ ಯಾದವ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗತಿ ಏನಾಗಲಿದೆ ಎಂಬುದನ್ನು ಹೇಳಿದ್ದರು.

ಆಗ ಪ್ರಶಾಂತ್ ಕಿಶೋರ್ ಅಂಥವರ ಮೂಲಕ ಯೋಗೇಂದ್ರ ಯಾದವ್ ವಿಶ್ಲೇಷಣೆಗೆ ವಿರುದ್ಧವಾದ, ಬಿಜೆಪಿಗೆ ಹೆಚ್ಚು ಸ್ಥಾನಗಳು ಬರಲಿವೆ ಎಂಬ ಹುಸಿಯನ್ನು ಮುನ್ನೆಲೆಗೆ ತರುವ ಯತ್ನಗಳೂ ಆಗಿದ್ದಿತ್ತು. ಕಡೆಗೆ ಏನಾಗಬೇಕೋ ಅದೇ ಆಗಿತ್ತು. ಜನ ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದರು. ಪ್ರಶಾಂತ್ ಕಿಶೋರ್ ತನ್ನ ವಿಶ್ಲೇಷಣೆಗೆ ತಾನೇ ಪಶ್ಚಾತ್ತಾಪ ಪಡಬೇಕಾದ ಸ್ಥಿತಿ ಬಂದಿತ್ತು. ಯೋಗೇಂದ್ರ ಯಾದವ್ ಏನು ಹೇಳಿದ್ದರೋ ಅದೇ ನಿಜವಾಗಿತ್ತು.

ಈಗ ಹರ್ಯಾಣ ಚುನಾವಣೆಯಲ್ಲಿ ಏನಾಗಲಿದೆ ಎಂಬುದರ ಬಗ್ಗೆಯೂ ಅವರು ಮಾತಾಡಿದ್ದಾರೆ. ಯಾದವ್ ಹರ್ಯಾಣದವರೇ ಆಗಿದ್ದು, ಅಲ್ಲಿನ ಒಟ್ಟು ಮನಃಸ್ಥಿತಿಯನ್ನು ಬಲ್ಲವರಾಗಿದ್ದಾರೆ ಎಂಬುದು ಇಲ್ಲಿ ಇನ್ನಷ್ಟು ಮುಖ್ಯವಾದ ಅಂಶ. ಅವರೀಗ ಸೋಷಿಯಲ್ ಮೀಡಿಯಾದಲ್ಲಿ ಹರ್ಯಾಣ ಚುನಾವಣೆ ಕುರಿತು ವೀಡಿಯೊ ಪೋಸ್ಟ್ ಮಾಡಿದ್ದಾರೆ.

ಅವರು ಹೇಳುವ ಪ್ರಕಾರ,

ಮೊದಲನೆಯದಾಗಿ, ಹರ್ಯಾಣದಲ್ಲಿ ಕಾಂಗ್ರೆಸ್ ಅಲೆಯಿದೆ. ಸಹಜವಾಗಿಯೇ ಬಹುಮತ ಬರಲಿದೆ. ಕಾಂಗ್ರೆಸ್ ಸರಕಾರ ರಚನೆಯಾಗುತ್ತದೆ.

ಎರಡನೆಯದಾಗಿ, ಹರ್ಯಾಣದಲ್ಲಿ ಕೇವಲ ಕಾಂಗ್ರೆಸ್ ಅಲೆ ಮಾತ್ರವಲ್ಲ, ಅಲ್ಲಿ ಅದರ ಪರ ಬಿರುಗಾಳಿಯಿದೆ. ಎಂದರೆ ಭಾರೀ ಬಹುಮತವೇ ಬರಬೇಕು.

ಮೂರನೆಯದಾಗಿ, ಹರ್ಯಾಣದಲ್ಲಿ ಕಾಂಗ್ರೆಸ್ ಸುನಾಮಿ ಇದೆ. ಕಾಂಗ್ರೆಸ್‌ಗೆ ಮತಗಳು ಹೋಗುವುದನ್ನು ಯಾರಾದರೂ ತಪ್ಪಿಸಲು, ಕಾಂಗ್ರೆಸನ್ನು ಸೋಲಿಸಲು ಇನ್ನು ಅಲ್ಲಿ ಸಾಧ್ಯವೇ ಇಲ್ಲ.

ಹೇಗೆ ದಿಲ್ಲಿಯಲ್ಲಿ ಕೇಜ್ರಿವಾಲ್ ಬಿಜೆಪಿ ಮತ್ತು ಕಾಂಗ್ರೆಸನ್ನು ಗುಡಿಸಿಹಾಕಿದ್ದರೋ ಹಾಗೆ ಹರ್ಯಾಣದಲ್ಲಿ ಕಾಂಗ್ರೆಸ್ ಈ ಬಾರಿ ಮಾಡಲಿದೆ.

ಅಂತೂ ಹರ್ಯಾಣದಲ್ಲಿ ಸರಕಾರ ರಚಿಸಲಿರುವುದು ಕಾಂಗ್ರೆಸ್ ಎಂಬುದನ್ನು ಯಾವ ಅನುಮಾನಕ್ಕೂ ಆಸ್ಪದವಿಲ್ಲದಂತೆ ಯಾದವ್ ಹೇಳಿಬಿಟ್ಟಿದ್ದಾರೆ. ಆದರೆ ಹರ್ಯಾಣದಲ್ಲಿ ಬಿಜೆಪಿ ಇಂಥ ಸ್ಥಿತಿಗೆ ಹೇಗೆ ಬಂದುಮುಟ್ಟಿತು?

ಯೋಗೇಂದ್ರ ಯಾದವ್ ಅದರ ಬಗ್ಗೆಯೂ ಹೇಳಿದ್ದಾರೆ.ಹರ್ಯಾಣದಲ್ಲಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಮೋಸದ ಮೂಲಕ. ಹೀಗಾಗಿ ಬಿಜೆಪಿ ತನ್ನ ಎರಡನೇ ಅವಧಿಯಲ್ಲಿ ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಯಿತು.

ಈಗ ಹರ್ಯಾಣದಲ್ಲಿ ಇತಿಹಾಸ ಬದಲಾಗಿದೆ. ಮೊದಲ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದ ಮನೋಹರ್ ಖಟ್ಟರ್ ಎರಡನೇ ಅವಧಿಯಲ್ಲಿ ತೀವ್ರ ವಿರೋಧ ಎದುರಿಸಿದರು. ಅವರನ್ನು ಬದಲಿಸಿ ಅವರ ಜಾಗಕ್ಕೆ ನಯಾಬ್ ಸಿಂಗ್ ಸೈನಿಯನ್ನು ತರಲಾಗಿದೆ.

ಈ ಸಲದ ಚುನಾವಣೆ ಹೇಗಿದೆಯೆಂದರೆ, ಚುನಾವಣೆ ಇನ್ನೂ ಬಾಕಿಯಿರುವಾಗಲೇ ಜನತೆ ನಿರ್ಧಾರ ಮಾಡಿಬಿಟ್ಟಿದ್ದಾರೆ. ಚುನಾವಣೆಯಲ್ಲಿ ತಾವೇನು ಮಾಡಲಿದ್ದೇವೆ ಎಂಬುದರ ಬಗ್ಗೆ ಜನತೆ ಲೆಕ್ಕಾಚಾರ ಹಾಕಿಯಾಗಿದೆ. ಮುಂಬರುವ ಐದು ವರ್ಷಗಳಿಗಾಗಿ ತಾವು ಎಂಥ ಸರಕಾರ ತರಬೇಕೆಂಬುದನ್ನು ಜನ ಆಗಲೇ ಯೋಚಿಸಿಬಿಟ್ಟಿದ್ದಾರೆ. ರೈತರ ಹೋರಾಟದ ವಿರುದ್ಧವಾಗಿ ನಿಂತಿದ್ದ ಹರ್ಯಾಣದ ಬಿಜೆಪಿ ಸರಕಾರ ಅದಕ್ಕೆ ತಕ್ಕ ಫಲ ಉಣ್ಣಬೇಕಾದ ಹೊತ್ತು ಬಂದಿದೆ.

ಯೋಗೇಂದ್ರ ಯಾದವ್ ಪ್ರಕಾರ, ಹರ್ಯಾಣದಲ್ಲಿ ಬಿಜೆಪಿಯ ಸ್ಥಿತಿ ತೀರಾ ದುರ್ಬಲವಾಗಿದೆ.

ಒಂದು ಕಾಲದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹರ್ಯಾಣದಲ್ಲಿ 10ರಲ್ಲಿ 10 ಸ್ಥಾನಗಳನ್ನು ಪಡೆದಿತ್ತು ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 90ರಲ್ಲಿ 41 ಸ್ಥಾನಗಳನ್ನು ಗಳಿಸಿತ್ತು.

ಕಳೆದ ಲೋಕಸಭೆ ಚುನಾವಣೆಯಲ್ಲಿ 10ಕ್ಕೆ ಐದು ಸೀಟುಗಳು ಬಂದಿವೆ. ಹೀಗಾಗಿ ವಿಧಾನಸಭೆ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದಕ್ಕೆ ಗಣಿತದ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರೂ ಸ್ಥೂಲವಾಗಿ ಅಂದಾಜು ಮಾಡಬಹುದು. ಬಿಜೆಪಿಗೆ ತೀವ್ರ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ಬಿಜೆಪಿ ಸೀಟುಗಳ ಸಂಖ್ಯೆ ತೀರಾ ಕಡಿಮೆಯಾಗಲಿದೆ.

ಯೋಗೇಂದ್ರ ಯಾದವ್ ಅವರ ಪ್ರಕಾರ, ಹರ್ಯಾಣ ಚುನಾವಣೆಯಲ್ಲಿನ ನಿರ್ಣಯ ಕಿಸಾನ್, ಜವಾನ್, ಪೈಲ್ವಾನ್‌ಗಳು ಕೊಡುವ ನಿರ್ಣಯವಾಗಲಿದೆ. ಸುಳ್ಳು ಮತ್ತು ಲೂಟಿ ವಿರುದ್ಧದ ತೀರ್ಮಾನ ಬರಲಿದೆ. ಹಾಗಾಗಿ, ಹರ್ಯಾಣದಲ್ಲಿ ಚುನಾವಣಾ ಪ್ರಚಾರಕ್ಕೂ ಮೊದಲೇ ಅಲ್ಲೇನಾಗಬೇಕು ಎನ್ನುವುದು ನಿರ್ಧಾರವಾಗಿಬಿಟ್ಟಿದೆ.ಕಾಂಗ್ರೆಸ್ ಅನ್ನು ಸೋಲಿಸುವುದು ಬಿಜೆಪಿಗೆ ಸಾಧ್ಯವೇ ಇಲ್ಲ. ಇವಿಷ್ಟು ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆಯ ಮುಖ್ಯಾಂಶಗಳು

ಯೋಗೇಂದ್ರ ಯಾದವ್ ಅವರು ಪ್ರಶಾಂತ್ ಕಿಶೋರ್ ರಂತೆ ನಾನು ಹೇಳಿದ್ದೇ ಅಂತಿಮ ಅನ್ನೋ ಧಾಟಿಯಲ್ಲಿ ಮಾತಾಡುವವರಲ್ಲ.

ನನಗೆ ಕಂಡ ಹಾಗೆ ಹೀಗಾಗಲಿದೆ, ಇದು ನನ್ನ ಅರಿವಿಗೆ ಬಂದಿದ್ದು, ನಾನು ಅಲ್ಲಿ ಹೋಗಿ ಕಂಡುಕೊಂಡಿದ್ದು, ಅಲ್ಲಿನ ಮತದಾರರನ್ನು ಮಾತಾಡಿಸಿ ತಿಳಿದುಕೊಂಡಿದ್ದು ಇಷ್ಟು ಎಂದು ಹೇಳುವವರು ಯೋಗೇಂದ್ರ ಯಾದವ್

ಲೋಕಸಭಾ ಚುನಾವಣೆಯಲ್ಲಿ ಯಾದವ್ ಏನು ಹೇಳಿದ್ದರೋ ಹಾಗೇ ಆಗಿತ್ತು. ಮಡಿಲ ಮೀಡಿಯಾಗಳ ಎಲ್ಲ ಆರ್ಭಟಗಳು ಠುಸ್ ಆಗಿದ್ದವು, ಪ್ರಶಾಂತ್ ಕಿಶೋರ್ ರಂತಹ ಬೋಗಸ್ ವಿಶ್ಲೇಷಕರೂ ಸಂಪೂರ್ಣ ಟೊಳ್ಳು ಎಂದು ಸಾಬೀತಾಗಿತ್ತು.

ಹರ್ಯಾಣ ಸಣ್ಣ ರಾಜ್ಯವಾದರೂ ಹಲವಾರು ಅಂಶಗಳಿಂದಾಗಿ ಅದು ಪ್ರಮುಖ ರಾಜ್ಯವಾಗಿ ಕಾಣುತ್ತಿದೆ. ವಿಶೇಷವಾಗಿ ಅಗ್ನಿವೀರ್ ಯೋಜನೆಯಿಂದ ಆಕ್ರೋಶಿತ ಯುವಜನರು, ಮೋದಿ ಸರಕಾರದ ಧೋರಣೆಯಿಂದ ಬೀದಿ ಪಾಲಾದ ರೈತರು, ಮೋದಿ ಸರಕಾರದ ವಿರುದ್ಧ ಬೀದಿಗೆ ಬಂದಿದ್ದ ಕುಸ್ತಿಪಟುಗಳು - ಅಂದರೆ ಜವಾನ್, ಕಿಸಾನ್, ಪೈಲ್ವಾನ್-ಇವರೆಲ್ಲರೂ ಹರ್ಯಾಣದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಅಕ್ಟೋಬರ್ 8ರ ಫಲಿತಾಂಶಕ್ಕಾಗಿ ದೇಶದೆಲ್ಲೆಡೆ ಈಗ ಕುತೂಹಲವಿದೆ.

ಅಲ್ಲಿ ಬಿಜೆಪಿ ದೊಡ್ಡ ಸೋಲು ಕಂಡರೆ, ಅದರ ಪರಿಣಾಮ ದಿಲ್ಲಿಯ ಮೋದಿ ಸರಕಾರದ ಮೇಲೆ ಖಂಡಿತ ಕಾಣಲಿದೆ. ಮಿತ್ರಪಕ್ಷಗಳಿಗೆ ಬಿಜೆಪಿ ಜೊತೆ ಚೌಕಾಸಿಗೆ ಅವಕಾಶ ಹೆಚ್ಚಲಿದೆ. ನಿಮ್ಮ ನೀತಿಗಳನ್ನು ತಿದ್ದಿಕೊಳ್ಳದಿದ್ದರೆ ಕಷ್ಟ ಎಂದು ಅವು ತಗಾದೆ ತೆಗೆಯುವ ಸಾಧ್ಯತೆ ಇದೆ.

ಮೋದಿ-ಶಾ ಅವರ ಹಿಡಿತ ಸಡಿಲವಾಗಲಿದೆ. ಬಿಜೆಪಿಯೊಳಗಂತೂ ಇವರಿಬ್ಬರ ವಿರುದ್ಧ ಇನ್ನಷ್ಟು ಅಸಮಾಧಾನ ಬಹಿರಂಗವಾಗಿಯೇ ಕಾಣಲಿದೆ. ಜೊತೆಗೆ ಸಂಘ ಇನ್ನಷ್ಟು ಖಡಕ್ ಆಗಿ ಮಾತಾಡಲಿದೆ.

ಹರ್ಯಾಣ ಚುನಾವಣೆ ಮುಗಿದ ಬೆನ್ನಿಗೇ ನಡೆಯಲಿರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರ ಸಿಗಲಿದೆ. ಇವರನ್ನು ಹರ್ಯಾಣದ ಜವಾನ್, ಕಿಸಾನ್, ಪೈಲ್ವಾನ್ ಒಟ್ಟಾಗಿ ಸೋಲಿಸಿದ್ದಾರೆ, ಈಗ ಇಲ್ಲೂ ಇವರನ್ನು ಸೋಲಿಸಿ ಎಂದೇ ಕಾಂಗ್ರೆಸ್ ಮಹಾರಾಷ್ಟ್ರ ಚುನಾವಣಾ ಅಖಾಡಕ್ಕೆ ಇಳಿಯಲಿದೆ.

ಜೊತೆಗೆ ಉತ್ತರದ ದೊಡ್ಡ ಹಾಗೂ ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖವಾದ ರಾಜ್ಯಗಳಲ್ಲೂ ಅದು ಕಾಣಲಿದೆ.

ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಪಂಜಾಬ್, ಹಿಮಾಚಲಗಳಲ್ಲಿ ಬಿಜೆಪಿಗೆ ಇದು ಹಾನಿ ಉಂಟುಮಾಡಲಿದೆ. ಈ ರಾಜ್ಯಗಳಲ್ಲಿ ಈಗ ತಕ್ಷಣ ಚುನಾವಣೆ ಇಲ್ಲದಿದ್ದರೂ ಅಲ್ಲಿ ಮೊದಲೇ ಬಿಜೆಪಿಯೊಳಗಿರುವ ತಳಮಳ ಇನ್ನಷ್ಟು ಹೆಚ್ಚಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್. ಕೇಶವ್

contributor

Similar News