ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಯವರಿಗಿದೆಯೇ?

Update: 2024-09-26 07:19 GMT

ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗವರ್ನರ್ ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ.

ಕಾಂಗ್ರೆಸ್ ಸರಕಾರದ ವಿರುದ್ಧ ಅಸ್ತ್ರ ಹುಡುಕುತ್ತಲೇ ಇರುವ ಬಿಜೆಪಿಗೆ ಈಗ ಬಲ ಬಂದಂತಾಗಿದೆ. ಕೇಂದ್ರ ಸಚಿವರು, ಸಂಸದರೂ ಸೇರಿ ಇಡೀ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಮುಗಿಬೀಳುತ್ತಿದೆ.

ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬುದು ಬಿಜೆಪಿಯ ಒತ್ತಾಯ. ಆದರೆ, ನಾನೇಕೆ ರಾಜೀನಾಮೆ ಕೊಡಲಿ ಎಂಬುದು ಸಿದ್ದರಾಮಯ್ಯ ಪ್ರಶ್ನೆ.

ಹಾಗೆಯೇ, ಮೊದಲು ಮೋದಿ ರಾಜೀನಾಮೆ ನೀಡಲಿ ಎಂದು ಸಚಿವ ಸಂತೋಷ್ ಲಾಡ್ ತಿವಿದಿದ್ದಾರೆ.

ಹಾಗೆಯೇ ಕಳೆದ 10 ವರ್ಷಗಳ ದೇಶದ ರಾಜಕೀಯ ಆಟಗಳನ್ನು ಗಮನಿಸಿದವರಿಗೆ ಬಿಜೆಪಿಯವರಿಗೆ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕತೆ ಇದೆಯೇ? ಭ್ರಷ್ಟಾಚಾರ ವಿಷಯದಲ್ಲಿ ಮೊದಲು ಯಾರು ರಾಜೀನಾಮೆ ಕೊಡಬೇಕಾದವರು? ಎಂಬ ಪ್ರಶ್ನೆಗಳು ಮೂಡದೇ ಇರದು.

ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ಮೋದಿ ಭಾಷಣ ಮಾಡುತ್ತಾರೆ. ಪ್ರತಿಪಕ್ಷ ನಾಯಕರ ಮೇಲೆ ಸಾವಿರಾರು ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಅವರು ಯಾರನ್ನು ಕಳಂಕಿತರು ಎಂದಿರುತ್ತಾರೋ ಅದೇ ನಾಯಕರು ಆನಂತರ ಬಿಜೆಪಿ ಸೇರಿಕೊಳ್ಳುತ್ತಾರೆ. ಕಳಂಕಿತರು ಎಂದು ಯಾರ ಬಗ್ಗೆ ಮೋದಿ ಅಥವಾ ಬಿಜೆಪಿಯ ಇತರರು ಆರೋಪಿಸಿರುತ್ತಾರೋ ಅವರು ಅದೇ ಬಿಜೆಪಿ ಸೇರಿ ನಿರಾಳವಾಗುತ್ತಾರೆ. ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಎಂದರೆ, ವಿಪಕ್ಷ ನಾಯಕರ ಹಿಂದೆ ಈ.ಡಿ., ಸಿಬಿಐಗಳನ್ನು ಛೂ ಬಿಡುವುದು, ಆ ನಾಯಕರು ಹೆದರಿ ಓಡೋಡಿ ಬಂದು ಬಿಜೆಪಿಯನ್ನು ಸೇರಿಕೊಳ್ಳುವಂತೆ ಮಾಡುವುದು ಎಂಬುದು ಬಿಜೆಪಿಯನ್ನು ಆರಿಸಿ ಕಳಿಸಿದ ಜನರಿಗೆ ಅರ್ಥವಾಗಿದೆ.

2014ರಿಂದಲೂ ಮೋದಿಯ ಭ್ರಷ್ಟಾಚಾರ ವಿರುದ್ಧದ ಹೋರಾಟ ಅದೆಷ್ಟು ವಿಪಕ್ಷ ನಾಯಕರು ಬಿಜೆಪಿ ಸೇರಿಕೊಳ್ಳುವಂತೆ ಮಾಡಿದೆ ಎಂದರೆ, ಕೇಂದ್ರದ ತನಿಖಾ ಏಜೆನ್ಸಿಗಳ ಕೇಸ್ ಎದುರಿಸುತ್ತಿದ್ದ ಬೇರೆ ಬೇರೆ ಪಕ್ಷಗಳ 25 ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಅವರಲ್ಲಿ 23 ನಾಯಕರ ವಿರುದ್ಧದ ಕೇಸ್‌ಗಳು ಕ್ಲೋಸ್ ಆಗಿಬಿಟ್ಟವು.

ತನಿಖಾ ಏಜೆನ್ಸಿಗಳು 2022 ಮತ್ತು 2023ರಲ್ಲಿ ತೀವ್ರ ಮಟ್ಟದಲ್ಲಿ ಕಾರ್ಯಾಚರಣೆಗೆ ಇಳಿದದ್ದು ಮಹಾರಾಷ್ಟ್ರದಲ್ಲಿ.

2022ರಲ್ಲಿ ಏಕನಾಥ್ ಶಿಂದೆ ಬಣ ಶಿವಸೇನೆಯಿಂದ ಬೇರೆಯಾಗಿ ಬಿಜೆಪಿಯೊಂದಿಗೆ ಸರಕಾರ ರಚಿಸಿತು.

ಒಂದು ವರ್ಷದ ನಂತರ ಅಜಿತ್ ಪವಾರ್ ಬಣ ಎನ್‌ಸಿಪಿಯಿಂದ ಬೇರ್ಪಟ್ಟು ಆಡಳಿತಾರೂಢ ಎನ್‌ಡಿಎ ಒಕ್ಕೂಟವನ್ನು ಸೇರಿ ಪಾಪ ಕಳೆದುಕೊಂಡಿತು.

ಎನ್‌ಸಿಪಿಯ ಇಬ್ಬರು ಪ್ರಮುಖ ನಾಯಕರಾದ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ವಿರುದ್ಧ ಪರಮ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದವರು ಸ್ವತಃ ಮೋದಿ.

ಯಾವಾಗ ಅವರಿಬ್ಬರೂ ಬಿಜೆಪಿ ಸೇರಿದರೋ ಅವರ ವಿರುದ್ಧದ ಕೇಸ್‌ಗಳು ಕ್ಲೋಸ್ ಆದವು.

ಎನ್‌ಸಿಪಿ ಬಗ್ಗೆಯಂತೂ ಬಿಜೆಪಿ ಹಾಗೂ ಮೋದಿ ಧೋರಣೆ ತೀರಾ ಲಜ್ಜೆಗೇಡಿಯಾಗಿತ್ತು. ಆ ಪಕ್ಷ ಎಪ್ಪತ್ತು ಸಾವಿರ ಕೋಟಿಯ ಭ್ರಷ್ಟಾಚಾರ ಮಾಡಿದೆ ಎಂದು ಸ್ವತಃ ಮೋದಿ ಮಧ್ಯ ಪ್ರದೇಶದಲ್ಲಿ ಭಾಷಣ ಮಾಡಿದ ಮೂರ್ನಾಲ್ಕು ದಿನಗಳಲ್ಲೇ ಅದೇ ಪಕ್ಷದ ಜೊತೆ ಮೈತ್ರಿ ಮಾಡಿ ಆ ಪಕ್ಷದ ಅಜಿತ್ ಪವಾರ್‌ರನ್ನೇ ಡಿಸಿಎಂ ಮಾಡಿದ್ದರು ಮೋದಿ. ಇದಕ್ಕಿಂತ ನಾಚಿಕೆಗೇಡು ಬೇರೇನಿದೆ?

ಅದಕ್ಕಾಗಿ ಮೋದಿ ಅಥವಾ ದೇವೇಂದ್ರ ಫಡ್ನವಿಸ್ ರಾಜೀನಾಮೆ ಕೊಟ್ಟರೆ?

ಬಿಜೆಪಿ ಸೇರಿದ 25 ವಿಪಕ್ಷ ನಾಯಕರ ಸಾಲಿನಲ್ಲಿ ಮಹಾರಾಷ್ಟ್ರದವರೇ 12 ಪ್ರಮುಖ ರಾಜಕಾರಣಿಗಳಿದ್ದಾರೆ. ಅವರಲ್ಲಿ 11 ಮಂದಿ 2022 ಅಥವಾ ಅದರ ನಂತರ ಬಿಜೆಪಿಗೆ ಸೇರಿದರು.

412 ವಿಪಕ್ಷ ಶಾಸಕರು ಕಳೆದ 10 ವರ್ಷಗಳಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ. ಅವರಲ್ಲಿ 200 ಮಂದಿ ಕಾಂಗ್ರೆಸ್‌ನಿಂದಲೇ ಹೋಗಿದ್ಧಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಹೇಳುತ್ತಾರೆ. ಇದು ಸಣ್ಣ ಸಂಖ್ಯೆಯೂ ಅಲ್ಲ, ಸಣ್ಣ ವಿಚಾರವೂ ಅಲ್ಲ.

ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡುತ್ತಾ ಹೇಗೆ ಸರಕಾರಗಳನ್ನು ಉರುಳಿಸಲಾಗಿದೆ, ಹೇಗೆ ಹಣಬಲ ಉಪಯೋಗಕ್ಕೆ ಬಂದಿದೆ ಎಂಬುದನ್ನೇ ಇದು ತೋರಿಸುತ್ತದೆ.

ಮಧ್ಯಪ್ರದೇಶ, ಕರ್ನಾಟಕ, ಮಣಿಪುರ, ಗೋವಾ, ಉತ್ತರಾಖಂಡಗಳಲ್ಲಿನ ಚುನಾಯಿತ ಸರಕಾರಗಳನ್ನೆಲ್ಲ ಹೇಗೆ ಬೀಳಿಸಲಾಯಿತು ಎಂಬುದನ್ನು ದೇಶ ನೋಡಿದೆ.

ಜನಾದೇಶ ಪಡೆದ ಸರಕಾರಗಳನ್ನು ಉರುಳಿಸಲು ನಡೆಸಿದ ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ರೂ. ಎಲ್ಲಿಂದ ಬಂತು? ಆ ಬ್ರಹ್ಮಾಂಡ ಭ್ರಷ್ಟಾಚಾರ ಕ್ಕಾಗಿಯೇ ಮೋದಿ, ಅಮಿತ್ ಶಾ ಯಾವತ್ತೋ ರಾಜೀನಾಮೆ ಕೊಡಬೇಕಿತ್ತು. ಕೊಟ್ಟರೆ?

ಕರ್ನಾಟಕದಲ್ಲಿಯೂ ಅಷ್ಟೆ. ವಿಪಕ್ಷಗಳಿಂದ ಬಿಜೆಪಿಗೆ ಹೋದವರೆಲ್ಲ ಮೋದಿಯಿಂದ ಪ್ರಭಾವಿತರಾಗಿ ಹೋದವರೇ? ಅವರೆಲ್ಲರೂ ಮೋದಿ ಕೈಯಲ್ಲಿನ ಈ.ಡಿ. ಮತ್ತು ಸಿಬಿಐ ಎಂಬ ಅಸ್ತ್ರಗಳನ್ನು ನೋಡಿ ಹೆದರಿಕೊಂಡು ಬಿಜೆಪಿ ಸೇರಿಕೊಂಡವರು.

ಪ್ರಫುಲ್ ಪಟೇಲ್ ವಿಚಾರದಲ್ಲಿ 8 ಸಾವಿರ ಕೋಟಿ ರೂ. ಭ್ರಷ್ಟಾಚಾರದ ಕೇಸ್ ಅನ್ನು ಸಿಬಿಐ ಕ್ಲೋಸ್ ಮಾಡಿತು. ಅಜಿತ್ ಪವಾರ್ ವಿರುದ್ಧದ ಪ್ರಕರಣವೂ ಹಾಗೆಯೇ ಕ್ಲೋಸ್ ಆಯಿತು.

ಸಿಬಿಐ, ಐಟಿ, ಈ.ಡಿ. ಇನ್ನೂ ಹಲವು ಪ್ರತಿಷ್ಠಿತ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಮೋದಿ ರಾಜೀನಾಮೆ ಕೊಡಬೇಕಿತ್ತು. ಕೊಟ್ಟರೆ?

ವಿಶ್ವದ ಅತಿ ದೊಡ್ಡ ಪಕ್ಷ ಎಂದು ಕರೆಯಲ್ಪಡುವ ಬಿಜೆಪಿ, ವಿಶ್ವದ ಅತ್ಯಂತ ಶ್ರೀಮಂತ ಪಕ್ಷವೂ ಆಗಿದೆ. ಆದರೆ ಈ ಸಂಪತ್ತು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ದೇಣಿಗೆಯಲ್ಲ. ಬದಲಾಗಿ, ಜನಸಾಮಾನ್ಯರು ಹಾಗೂ ದೇಶದ ಸಂಪನ್ಮೂಲಗಳ ಲೂಟಿಯಿಂದ ಬಂದದ್ದು, ಚುನಾವಣಾ ಬಾಂಡ್‌ನಂತಹ ಅಕ್ರಮಗಳ ಮೂಲಕ ಬಂದಿರುವ ಸಂಪತ್ತದು ಎನ್ನುತ್ತವೆ ವರದಿಗಳು. ಹಾಗೆ ಅಕ್ರಮವಾಗಿ ಪಕ್ಷಕ್ಕೆ ದುಡ್ಡು ಪಡೆದಿದ್ದಕ್ಕೆ ಮೋದಿಯವರು ರಾಜೀನಾಮೆ ಕೊಟ್ಟರೆ?

ಈ ಲೂಟಿಯಿಂದಾಗಿಯೇ ಕಾರ್ಪೊರೇಟ್‌ಗಳು, ಅದರಲ್ಲೂ ಮೋದಿ ಮಿತ್ರರಾದ ಅದಾನಿ ಮತ್ತು ಅಂಬಾನಿ ಈ ಹತ್ತು ವರ್ಷಗಳಲ್ಲಿ ವಿಶ್ವದ ಅತ್ಯಂತ ಶ್ರೀಮಂತರ ಸಾಲಿನಲ್ಲಿ ನಿಂತರು.

ಜಗತ್ತಿನ ಅತಿ ಶ್ರೀಮಂತರಲ್ಲಿ 106ನೇ ಸ್ಥಾನದಲ್ಲಿದ್ದ ಅದಾನಿ 11ನೇ ಅತಿ ಶ್ರೀಮಂತ ವ್ಯಕ್ತಿಯಾದದ್ದು ಮೋದಿ ಅಧಿಕಾರದ ಅವಧಿಯಲ್ಲಿ. ಮುಕೇಶ್ ಅಂಬಾನಿಯನ್ನೂ ಹಿಂದಿಕ್ಕಿ ಏಶ್ಯದ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಿದ್ದೂ ಮೋದಿ ಕಾಲದಲ್ಲೇ. ಹೇಗಾಯಿತು ಹತ್ತೇ ವರ್ಷಗಳಲ್ಲಿ ಒಬ್ಬನೇ ಉದ್ಯಮಿಯ ಇಷ್ಟೊಂದು ವಿಕಾಸ?

ಅದಕ್ಕಾಗಿ ಅದೆಷ್ಟು ಕಾನೂನುಗಳನ್ನು ಬದಲಾಯಿಸಲಾಯಿತು? ಅದೆಷ್ಟು ಅಧಿಕಾರಿಗಳ ತಲೆದಂಡ ಪಡೆಯಲಾಯಿತು ? ಅದೆಷ್ಟು ಸರಕಾರೀ ಸಂಸ್ಥೆಗಳ ಖಾಸಗೀಕರಣವಾಯಿತು? ಅದೆಷ್ಟು ಜನರ ತೆರಿಗೆ ಹಣ ಲೂಟಿ ಆಯಿತು? ಅದೆಷ್ಟು ನೈಸರ್ಗಿಕ ಸಂಪನ್ಮೂಲ ಹಾಳಾಗಿ ಹೋಯಿತು?

ಬರೀ ಅದಾನಿಯ ಜಾರ್ಖಂಡ್ ವಿದ್ಯುತ್ ಸ್ಥಾವರ ಒಂದರಲ್ಲೇ ಅದಾನಿಗೆ ಸಾವಿರಾರು ಕೋಟಿ ಲಾಭ ಮಾಡಿ ಕೊಡಲು ಭಾರತ-ಬಾಂಗ್ಲಾದೇಶ ಎರಡೂ ಕಡೆ ಅದೆಷ್ಟು ಅಕ್ರಮ ಎಸಗಲಾಯಿತು?

ಯುಪಿಎ ಸರಕಾರ ಭಾರೀ ಭ್ರಷ್ಟಾಚಾರ ಮಾಡಿದೆ ಎಂಬ ಆರೋಪವನ್ನೇ ವೈಭವೀಕರಿಸಿ ಪಾರದರ್ಶಕ ಆಡಳಿತದ ಭರವಸೆ ಕೊಟ್ಟು ಬಂದ ಮೋದಿ ಸರಕಾರ ಮಾಡಿದ್ದೇನು?

‘ನಾ ಖಾವೂಂಗಾ ನಾ ಖಾನೇ ದೂಂಗಾ’ ಎನ್ನುತ್ತ 2014ರಲ್ಲಿ ಅಧಿಕಾರಕ್ಕೇರಿದವರು ಆಮೇಲೆ ಮಾಡಿದ್ದೆಲ್ಲ ಪರಮ ಭ್ರಷ್ಟಾಚಾರವೇ ಆಗಿದೆ.

ಸ್ವಿಸ್ ಬ್ಯಾಂಕ್‌ನಲ್ಲಿಯ ಕಪ್ಪುಹಣ ದೇಶಕ್ಕೆ ವಾಪಸ್ ತರುವುದಾಗಿ ಹೇಳಿ ನಡುರಾತ್ರಿಯಲ್ಲಿ ನೋಟ್‌ಬ್ಯಾನ್ ಮಾಡಿದ್ದ ಮೋದಿ ಸರಕಾರ, ಈ ದೇಶದ ಜನಸಾಮಾನ್ಯರಿಗೆ ದೊಡ್ಡ ವಂಚನೆಯನ್ನೇ ಎಸಗಿತ್ತು. ಕಪ್ಪು ಹಣ ಸಂಪೂರ್ಣ ಇಲ್ಲವಾಗುತ್ತೆ ಅಂದರು, ಏನೇನೂ ಆಗಲಿಲ್ಲ. ಬದಲಾಗಿ ಈ ದೇಶದ ಕೋಟ್ಯಂತರ ಬಡವರು, ಮಧ್ಯಮ ವರ್ಗದವರು ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾದರು. ಸಾವಿರಾರು ಜನರು ಬೀದಿಪಾಲಾದರು. ಸಾವಿರಾರು ಸಣ್ಣ ಮಧ್ಯಮ ವ್ಯಾಪಾರಗಳು ನಾಶವಾಗಿ ಹೋದವು. ಕೋಟಿಗಟ್ಟಲೆ ಉದ್ಯೋಗಗಳು ಇಲ್ಲವಾದವು.

ನೋಟ್‌ಬ್ಯಾನ್ ಮಾಡಿ ಮೋದಿ ತಂದ ಎರಡು ಸಾವಿರ ರೂಪಾಯಿ ನೋಟುಗಳೇ ಕಪ್ಪು ಹಣಕ್ಕೆ, ಭಯೋತ್ಪಾದನೆಗೆ ದಾರಿಯಾಗುತ್ತಿದೆ ಎಂಬ ವರದಿ ಬಂದು, ಆ ನೋಟನ್ನೇ ನಿಲ್ಲಿಸಬೇಕಾಯಿತು.

ಸ್ವತಂತ್ರ ಭಾರತದ ಅತಿದೊಡ್ಡ ಆರ್ಥಿಕ ಹಗರಣ ನೋಟ್ ಬ್ಯಾನ್. ಅದೊಂದಕ್ಕಾಗಿಯೇ ಮೋದಿ ಯಾವತ್ತೋ ರಾಜೀನಾಮೆ ಕೊಡಬೇಕಿತ್ತು. ಕೊಟ್ಟರೆ?

ರಫೇಲ್ ಒಪ್ಪಂದವನ್ನು ಉಳಿಸಲು ಮೋದಿ ಸರಕಾರ ಎರಡು ದಶಕಗಳ ರಕ್ಷಣಾ ಭ್ರಷ್ಟಾಚಾರವನ್ನು ಹೇಗೆಲ್ಲ ಮುಚ್ಚಿಡುವ ಕಸರತ್ತು ಮಾಡಿತ್ತು. ಮಿತ್ರ ಅದಾನಿ ವಂಚನೆಗಳ ಬಗ್ಗೆ ಒಂದಾದ ಮೇಲೊಂದು ಗಂಭೀರ ವರದಿಗಳು ಬಂದರೂ ಮೋದಿ ಸರಕಾರ ಯಾವ ತನಿಖೆಯನ್ನೂ ಕೈಗೆತ್ತಿಕೊಳ್ಳಲೇ ಇಲ್ಲ.

ಬದಲಾಗಿ ದೇಶದ ಏರ್‌ಪೋರ್ಟ್, ಬಂದರು ಎಲ್ಲವನ್ನೂ ಅದಾನಿ ಕೈಗಿಡಲಾಗಿದೆ.

ಅದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಆರೋಪ ಹೊತ್ತಿರುವ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ವಿರುದ್ಧವೂ ತನಿಖೆಯಿಲ್ಲ. ಆಕೆಯನ್ನು ವಜಾ ಕೂಡ ಮಾಡಿಲ್ಲ.

ಕೋಟಿ ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಅಧಿಕಾರಕ್ಕೆ ಬಂದ ಮೋದಿ ಅವಧಿಯಲ್ಲಿ ಈ ಹಿಂದೆಂದೂ ಕಾಣದಷ್ಟು ನಿರುದ್ಯೋಗ ತಾಂಡವವಾಡುತ್ತಿದೆ. ಇರುವ ಸರಕಾರಿ ಉದ್ಯೋಗಗಳನ್ನೂ ಕಿತ್ತುಕೊಂಡು ಅದನ್ನು ತಾತ್ಕಾಲಿಕ ಮಾಡಲಾಗಿದೆ.

ಹತ್ತಿಪ್ಪತ್ತು ಉದ್ಯೋಗ ಇದ್ದರೆ ಸಾವಿರಗಟ್ಟಲೆ ಜನ ಅರ್ಜಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಈಗ. ತನ್ನನ್ನು ಆರಾಧಿಸಿ, ಮತ ಹಾಕಿ ಅಧಿಕಾರ ಕೊಟ್ಟಿರುವ ಈ ದೇಶದ ಯುವಜನರಿಗೆ ಹೀಗೆ ಮೋಸ ಮಾಡಿದ್ದಕ್ಕೆ ಮೋದಿ ರಾಜೀನಾಮೆ ಕೊಟ್ಟರೆ?

ಈಗ ಮೂರನೇ ಅವಧಿಯ ಮೊದಲ 100 ದಿನಗಳಲ್ಲೂ ಮೋದಿ ಸರಕಾರ ಕಿಂಚಿತ್ತಾದರೂ ನೈತಿಕತೆ ತೋರಿದೆಯೆ?

ಸಮಸ್ಯೆಗಳಿಗೆ ಕುರುಡಾಗುವ ಮತ್ತು ಸವಾಲುಗಳಿಗೆ ಬೆನ್ನು ಹಾಕುವ ಚಾಳಿಯನ್ನೇ ಮೋದಿ ಮುಂದುವರಿಸಿರುವುದಾಗಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಟೀಕಿಸಿದ್ದಾರೆ. ಈ 100 ದಿನಗಳಲ್ಲಿ ಸರಕಾರದ ಪ್ರತೀ ಕ್ಷಣದಲ್ಲೂ ಅಸ್ಥಿರತೆ, ಅನಿರ್ದಿಷ್ಟತೆ ಮತ್ತು ಅಪ್ರಬುದ್ಧತೆಯೇ ಕಾಣಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಮಾತಾಡಿದ್ದೇ ಬಂತು. ಅದನ್ನು ಬಿಟ್ಟು ನೀವೇನು ಮಾಡಿದ್ದೀರಿ? ನೀವು ಭ್ರಷ್ಟರೆಂದು ಕರೆದವರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ. ನೀವು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಲು ಹೊರಟಿದ್ದೀರಾ? ಎಂಬ ಕಾಂಗ್ರೆಸ್ ನಾಯಕಿಯ ಪ್ರಶ್ನೆ, ಬಿಜೆಪಿಯ ಭ್ರಷ್ಟತೆಯನ್ನು ಅದರ ಮುಖಕ್ಕೇ ಹಿಡಿದಿದೆ.

ತನಿಖಾ ಏಜೆನ್ಸಿಗಳ ದುರ್ಬಳಕೆಗಾಗಿ ಸುಪ್ರೀಂ ಕೋರ್ಟ್ ನಿಮಗೆ ಹಲವು ಬಾರಿ ಛೀಮಾರಿ ಹಾಕಿದೆ. ಏಜೆನ್ಸಿಗಳನ್ನು ಈಗಲೂ ಬಿಜೆಪಿಯ ಅಡಿಯಾಳಾಗಿ ಬಳಸುವುದನ್ನು ಮುಂದುವರಿಸುತ್ತೀರಾ ಅಥವಾ ಮುಕ್ತವಾಗಿರಿಸುತ್ತೀರಾ? ಎಂದು ಶ್ರಿನೇತ್ ಕೇಳಿದ್ದಾರೆ.

ಗಡಿಯಲ್ಲಿ ಯೋಧರು ಉಗ್ರರ ದಾಳಿಗೆ ಬಲಿಯಾಗುತ್ತಲೇ ಇದ್ದರೆ, ರೈಲು ಅಪಘಾತಗಳಲ್ಲಿ ಸಾವುಗಳು ಸಂಭವಿಸುತ್ತಲೇ ಇದ್ದರೆ ನೈತಿಕ ಹೊಣೆ ಹೊರುವ ಸೌಜನ್ಯವನ್ನೂ ಮೋದಿಯೂ ತೋರಿಸಿಲ್ಲ, ಅವರ ಸಂಪುಟದ ಒಬ್ಬ ಸಚಿವರೂ ತೋರಿಸಿದ್ದಿಲ್ಲ. ಇಂಥ ಬಿಜೆಪಿ ಏಕೆ ಈಗ ಸಿದ್ದರಾಮಯ್ಯ ವಿಚಾರದಲ್ಲಿ ಮಾತ್ರ ನೈತಿಕತೆಯ ಪ್ರಶ್ನೆಯನ್ನು ಮುಂದೆ ಮಾಡುತ್ತಿದೆ?

ಸಿದ್ದರಾಮಯ್ಯ ಅವರನ್ನು ಈ ನಾಡಿನ ಜನರು, ಅವರಿಗೆ ಮತ ಹಾಕಿ ಅಧಿಕಾರ ಕೊಟ್ಟಿರುವ ಜನರು ಪ್ರಶ್ನಿಸಲಿ.

ಆದರೆ ಬಿಜೆಪಿಗೆ ಆ ನೈತಿಕತೆ ಇದೆಯೇ ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News