ಅರುಣ್ ಗೋಯಲ್ ರಾಜೀನಾಮೆಯ ಸುತ್ತ ಅನುಮಾನಗಳ ಹುತ್ತ!

ವೈಯಕ್ತಿಕ ಮತ್ತು ಆರೋಗ್ಯದ ಕಾರಣಕ್ಕಾಗಿ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದಾರೆನ್ನುವುದು ಮೇಲ್ನೋಟದ ಹೇಳಿಕೆ. ಆದರೆ, ಗೋಯಲ್ ಅವರ ಆರೋಗ್ಯ ಚೆನ್ನಾಗಿಯೇ ಇದೆ. ನಿಜವಾದ ವಿಚಾರವೇ ಬೇರೆ ಎಂದು ವರದಿಗಳು ಹೇಳುತ್ತಿವೆ. ಚುನಾವಣಾ ಆಯೋಗದ ಒಳಗಿರು ವವರ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರ ಜೊತೆಗಿನ ಗಂಭೀರ ಭಿನ್ನಾಭಿಪ್ರಾಯವೇ ಗೋಯಲ್ ರಾಜೀನಾಮೆಗೆ ಕಾರಣ ಎನ್ನುತ್ತಿವೆ ವರದಿಗಳು. ರಾಜೀವ್ ಕುಮಾರ್ ಮತ್ತು ಗೋಯಲ್ ಚುನಾವಣಾ ತಯಾರಿ ಯನ್ನು ಪರಿಶೀಲಿಸಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಈ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗುತ್ತಿದೆ.

Update: 2024-03-12 06:11 GMT
Editor : Thouheed | Byline : ಆರ್. ಕುಮಾರ್

ದೇಶದಲ್ಲಿ ಮಹಾ ಚುನಾವಣೆ ಘೋಷಣೆಗೆ ಇನ್ನೊಂದೇ ವಾರವಿರುವ ಹೊತ್ತಿನಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಅರುಣ್ ಗೋಯಲ್ ದಿಢೀರ್ ರಾಜೀನಾಮೆ ಕೊಟ್ಟಿದ್ದಾರೆ. ಗೋಯಲ್ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆೆ.

ದೇಶದಲ್ಲಿ ಈಚಿನ ವರ್ಷಗಳಲ್ಲಿನ ಚುನಾವಣೆ ಪ್ರಕ್ರಿಯೆಯ ಬಗ್ಗೆ, ಇವಿಎಂ ಬಗ್ಗೆ, ವಿವಿಪ್ಯಾಟ್ ಬಗ್ಗೆ ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣಾ ಆಯೋಗದ ಕಾರ್ಯ ವೈಖರಿ ಬಗ್ಗೆಯೇ ಹಲವಾರು ಅನುಮಾನಗಳು ತಕರಾರುಗಳು ಇವೆ. ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ, ಅವರೆಲ್ಲ ಸರಕಾರದ ಹೌದಪ್ಪಗಳಾಗುತ್ತಿರುವುದರ ಬಗ್ಗೆಯೂ ಈಗಾಗಲೇ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಹೀಗಿರುವಾಗಲೇ, ಲೋಕಸಭೆ ಚುನಾವಣೆ ಇನ್ನೇನು ಘೋಷಣೆಯಾಗಬೇಕು ಎನ್ನುವಾಗ ಚುನಾವಣಾ ಆಯುಕ್ತರು ರಾಜೀನಾಮೆ ನೀಡಿದ್ದಾರೆ.

ಬಹಳ ನಿರ್ಣಾಯಕ ಎನ್ನುವಂಥ ಸಮಯದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ಹಠಾತ್ ರಾಜೀನಾಮೆ ಮೋದಿ ಸರಕಾರದ ಬಗ್ಗೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಗೋಯಲ್ ಅಧಿಕಾರಾವಧಿ 2027ರ ಡಿಸೆಂಬರ್ 5ರವರೆಗೂ ಇತ್ತು. ಅಲ್ಲದೆ, ಮುಂದಿನ ವರ್ಷ ಫೆಬ್ರವರಿಯಲ್ಲಿ ಈಗಿನ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತರಾಗಲಿದ್ದು, ಆ ಸ್ಥಾನಕ್ಕೆ ಗೋಯಲ್ ಹೋಗುವವರಿದ್ದರು. ಹೀಗಿರುವಾಗ ಯಾವ ನಿರ್ದಿಷ್ಟ ಕಾರಣಗಳನ್ನೂ ಕೊಡದೆ ಗೋಯಲ್ ಹುದ್ದೆ ಬಿಟ್ಟು ಹೊರಟಿರುವುದು ನಿಜಕ್ಕೂ ಒಂದು ವಿಲಕ್ಷಣ ಬೆಳವಣಿಗೆ.

ಪಟಿಯಾಲದಲ್ಲಿ ಜನಿಸಿದ ಗೋಯಲ್ ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಪದವೀಧರ. ಅವರು ಚುನಾವಣಾ ಆಯುಕ್ತರ ಹುದ್ದೆಗೆ ಬಂದಿದ್ದ ಸಂದರ್ಭ ಕೂಡ ವಿವಾದವೆಬ್ಬಿಸಿತ್ತು. ಪಂಜಾಬ್ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಐಎಎಸ್‌ನಿಂದ ಸ್ವಯಂನಿವೃತ್ತಿ ಪಡೆದ ಕೆಲವೇ ಗಂಟೆಗಳಲ್ಲಿ ಅವರನ್ನು ಮೋದಿ ಸರಕಾರ, ಐದಾರು ತಿಂಗಳುಗಳಿಂದ ಖಾಲಿಯೇ ಇದ್ದ ಚುನಾವಣಾ ಆಯುಕ್ತರ ಹುದ್ದೆಯಲ್ಲಿ ಕೂರಿಸಿತ್ತು. ಅಷ್ಟು ದಿಢೀರ್ ನೇಮಕ ಪ್ರಕ್ರಿಯೆ ಎಲ್ಲರ ಹುಬ್ಬೇರುವುದಕ್ಕೆ ಕಾರಣವಾಗಿತ್ತು ಮತ್ತು ಗೋಯಲ್ ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಅರುಣ್ ಗೋಯಲ್ ಅವರ ಆತುರದ ನೇಮಕಾತಿ ಬಗ್ಗೆ ಸುಪ್ರಿಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಅಷ್ಟೊಂದು ತರಾತುರಿಯಲ್ಲಿ ಚುನಾವಣಾ ಆಯುಕ್ತರ ನೇಮಕವಾದುದರ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿತ್ತು. ಆ ವರ್ಷದ ಮೇ ತಿಂಗಳಿನಿಂದಲೂ ಆ ಹುದ್ದೆ ಖಾಲಿಯೇ ಇದ್ದರೂ ಸರಕಾರ ಸುಮ್ಮನೆ ಇತ್ತೆಂಬುದನ್ನೂ ಸುಪ್ರೀಂ ಕೋರ್ಟ್ ಗಮನಿಸಿತ್ತು. ಚುನಾವಣಾ ಆಯೋಗಕ್ಕೆ ಹೌದಪ್ಪಗಳ ನೇಮಕವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಹೀಗೆ ನೇಮಕವಾಗುವ ಆಯುಕ್ತರು ಹೇಗೆ ಪ್ರಧಾನಿಯನ್ನು ಪ್ರಶ್ನಿಸಲು ಸಾಧ್ಯ ಎಂದು ಕೇಳಿತ್ತು. ಚುನಾವಣೆ ವೇಳೆ ಸರಕಾರ ಏನಾದರೂ ತಪ್ಪು ಮಾಡಿದರೆ ಹೀಗೆ ನೇಮಕವಾಗುವವರು ಅದನ್ನು ಹೇಗೆ ಪ್ರಶ್ನಿಸುತ್ತಾರೆ ಎಂಬುದು ಸುಪ್ರೀಂ ಕೋರ್ಟ್ ಪ್ರಶ್ನೆಯಾಗಿತ್ತು.

ಅರುಣ್ ಗೋಯಲ್ ಈ ಹಿಂದೆಯೂ ಐಎಎಸ್ ಹುದ್ದೆಯಲ್ಲಿ 37 ವರ್ಷಗಳ ನಂತರ, ನಿವೃತ್ತರಾಗಲು ಒಂದು ತಿಂಗಳಿದ್ದಾಗ 2022ರ ನವೆಂಬರ್ 18ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ಮರುದಿನವೇ ನವೆಂಬರ್ 19ರಂದು ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ನವೆಂಬರ್ 21ರಂದು ಅಧಿಕಾರ ವಹಿಸಿಕೊಂಡಿದ್ದರು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಕುರಿತ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿಯೇ ಗೋಯಲ್ ನೇಮಕಾತಿ ನಡೆದಿತ್ತು.

ಸ್ವಯಂ ನಿವೃತ್ತಿ ಪಡೆಯುವ ಸಮಯದಲ್ಲಿ ಗೋಯಲ್ ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮೊದಲು ಸಂಸ್ಕೃತಿ ಕಾರ್ಯದರ್ಶಿ ಮತ್ತು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದರು.

ಈಗ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ಆಯೋಗ ದೇಶಾದ್ಯಂತ ಓಡಾಡುವ ಸಮಯದಲ್ಲಿ ಗೋಯಲ್ ರಾಜೀನಾಮೆ ನೀಡಿದ್ದಾರೆ. ಮತ್ತೊಬ್ಬ ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಫೆಬ್ರವರಿಯಲ್ಲಿ ನಿವೃತ್ತರಾಗಿದ್ದರು. ಹಾಗೆ ಆಯೋಗದಲ್ಲಿ ಒಂದು ಹುದ್ದೆ ಖಾಲಿ ಇದ್ದಾಗಲೇ ಗೋಯಲ್ ಕೂಡ ರಾಜೀನಾಮೆ ನೀಡಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರವೇ ಈಗ ಚುನಾವಣಾ ಆಯೋಗದಲ್ಲಿ ಉಳಿದಂತಾಗಿದೆ.

ಅವತ್ತು ಗೋಯಲ್ ನೇಮಕಾತಿ ವಿವಾದದ ಬೆನ್ನಲ್ಲೇ ಕಳೆದ ವರ್ಷದ ಮಾರ್ಚ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು. ಅದರ ಪ್ರಕಾರ ಸಮಿತಿಯಲ್ಲಿ ಪ್ರಧಾನಿ, ಪ್ರತಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಇರಬೇಕಿತ್ತು.

ಆದರೆ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್ ರೂಪಿಸಿದ್ದ ಆ ಸಮಿತಿಯ ಸ್ವರೂಪವನ್ನೂ ಕೇಂದ್ರ ಸರಕಾರ ಸಂಸತ್ತಿನ ಬಲ ಬಳಸಿಕೊಂಡು ಬದಲಿಸಿತ್ತು. ಸಿಜೆಐ ಅವರನ್ನು ಸಮಿತಿಯಿಂದ ಹೊರಗಿಡಲಾಯಿತು. ಪ್ರಧಾನಿ, ಪ್ರತಿಪಕ್ಷ ನಾಯಕ ಹಾಗೂ ಮೂರನೇ ಸದಸ್ಯನಾಗಿ ಪ್ರಧಾನಿ ಸೂಚಿಸುವ ಕೇಂದ್ರ ಸಂಪುಟದ ಒಬ್ಬ ಮಂತ್ರಿ ಇರುವಂತೆ ಕಾಯ್ದೆ ರೂಪಿಸಲಾಯಿತು. ಹಾಗೆ ಸರಕಾರದ ಬಲವೇ ಚುನಾವಣಾ ಆಯುಕ್ತರ ನೇಮಕ ವಿಚಾರದಲ್ಲಿ ಹೆಚ್ಚಾಗುವಂತೆ ಮಾಡಲಾಯಿತು.

ಈಗ ಗೋಯಲ್ ರಾಜೀನಾಮೆ ವಿಚಾರದಲ್ಲಿ ಆಯೋಗದ ಯಾವ ಅಧಿಕಾರಿಯೂ ಮಾತಾಡುವ ಸ್ಥಿತಿಯಲ್ಲಿ ಇಲ್ಲ. ಸರಕಾರದ ಕಡೆಯಿಂದಲೂ ಯಾವುದೇ ಪ್ರತಿಕ್ರಿಯೆ ಇಲ್ಲ. ಕಾನೂನು ಸಚಿವರಾಗಲೀ ಅಥವಾ ಇನ್ನಾವುದೇ ಮಂತ್ರಿಗಳಾಗಲಿ ಹೇಳಿಕೆ ನೀಡಿಲ್ಲ. ಪ್ರಧಾನಿಯಂತೂ ಹೇಗೂ ಇಂತಹ ವಿಷಯಗಳ ಬಗ್ಗೆ ಮಾತಾಡುವುದೇ ಇಲ್ಲ. ಆದರೆ ಇದು ಸರಕಾರ ಉತ್ತರ ನೀಡಲೇ ಬೇಕಿರುವ ಹೊತ್ತು. ಅದು ಏನು ಉತ್ತರ ಕೊಡಲಿದೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

2020ರ ಆಗಸ್ಟ್‌ನಲ್ಲಿ ಅಶೋಕ್ ಲವಾಸಾ ಅವರು ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿನ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಕೈಗೊಂಡ ಹಲವು ತೀರ್ಮಾನಗಳಿಗೆ ಅವರು ಭಿನ್ನ ನಿಲುವು ದಾಖಲಿಸಿದ್ದರು. ಮೇ 2019ರಲ್ಲಿ, ತಮ್ಮ ನಿರ್ಧಾರಗಳನ್ನು ದಾಖಲಿಸದೆ ಕಡೆಗಣಿಸಲಾದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳ ಕುರಿತು ನಿರ್ಧರಿಸುವ ಸಭೆಗಳಿಗೆ ಹಾಜರಾಗುವುದನ್ನು ಅಶೋಕ್ ಲವಾಸಾ ಅವರು ನಿಲ್ಲಿಸಿದ್ದರು.

ನೀತಿ ಸಂಹಿತೆ ಉಲ್ಲಂಘನೆಯೆಂದು ಕಾಣಿಸುತ್ತಿದ್ದ ಆರು ಘಟನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದ್ದನ್ನು ಅವರು ಆಕ್ಷೇಪಿಸಿದ್ದರು. ಅದಾದ ಬಳಿಕ ಅವರಿಗೆ ಮತ್ತವರ ಪರಿವಾರದವರಿಗೆ ಐಟಿ ನೋಟಿಸ್ ಮೂಲಕ ಕಿರುಕುಳ ನೀಡಲಾಯಿತು. ಈ.ಡಿ. ರೇಡ್ ಕೂಡ ಅವರ ಪರಿವಾರದವರ ವಿರುದ್ಧ ನಡೆದಿತ್ತು.

ಆಯುಕ್ತರಾಗಿ ಅವರು ಮೋದಿ ಸರಕಾರಕ್ಕೆ ಅನುಕೂಲಕರ ತೀರ್ಮಾನ ಕೊಡಲು ಇಷ್ಟಪಟ್ಟಿರಲಿಲ್ಲ. ಹಾಗಾಗಿ ಅವರು ಹುದ್ದೆಯನ್ನೇ ತ್ಯಜಿಸಬೇಕಾಗಿ ಬಂದಿತ್ತು.

ಈಗ ಚುನಾವಣೆ ಘೋಷಣೆಗೆ ವಾರವಷ್ಟೇ ಬಾಕಿ ಇದೆ ಎನ್ನುವಾಗ ಆಯುಕ್ತರು ಕಾರಣವನ್ನೇ ಹೇಳದೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕಾರಣದ ಬಗ್ಗೆ ಅಧಿಕಾರಿಗಳಿಗೂ ಮಾಹಿತಿಯಿಲ್ಲ.

ವರದಿಗಳ ಪ್ರಕಾರ, ಅರುಣ್ ಗೋಯಲ್ ಲೋಕಸಭೆ ಚುನಾವಣೆ ಸಿದ್ಧತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿವಿಧ ರಾಜ್ಯಗಳಲ್ಲಿನ ತಯಾರಿಯ ಪರಿಶೀಲನೆಗಾಗಿ ಅವರು ನಿರಂತರ ಪ್ರವಾಸ ಕೈಗೊಂಡಿದ್ದರು.

ಹೀಗಿರುವಾಗಲೇ ಅವರ ದಿಢೀರ್ ರಾಜೀನಾಮೆ ಅಚ್ಚರಿಗೆ ಕಾರಣವಾಗಿದೆ. ಹಲವು ಊಹಾಪೋಹಗಳಿಗೆ, ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.

ವೈಯಕ್ತಿಕ ಮತ್ತು ಆರೋಗ್ಯದ ಕಾರಣಕ್ಕಾಗಿ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದಾರೆನ್ನುವುದು ಮೇಲ್ನೋಟದ ಹೇಳಿಕೆ. ಆದರೆ, ಗೋಯಲ್ ಅವರ ಆರೋಗ್ಯ ಚೆನ್ನಾಗಿಯೇ ಇದೆ. ನಿಜವಾದ ವಿಚಾರವೇ ಬೇರೆ ಎಂದು ವರದಿಗಳು ಹೇಳುತ್ತಿವೆ. ಚುನಾವಣಾ ಆಯೋಗದ ಒಳಗಿರು ವವರ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರ ಜೊತೆಗಿನ ಗಂಭೀರ ಭಿನ್ನಾಭಿಪ್ರಾಯವೇ ಗೋಯಲ್ ರಾಜೀನಾಮೆಗೆ ಕಾರಣ ಎನ್ನುತ್ತಿವೆ ವರದಿಗಳು. ರಾಜೀವ್ ಕುಮಾರ್ ಮತ್ತು ಗೋಯಲ್ ಚುನಾವಣಾ ತಯಾರಿ ಯನ್ನು ಪರಿಶೀಲಿಸಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಈ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳದ ಸಿದ್ಧತೆಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಲು ಕೋಲ್ಕತಾದಲ್ಲಿ ಸುದ್ದಿಗೋಷ್ಠಿಯಲ್ಲಿ ಕೂಡ ಗೋಯಲ್ ಭಾಗವಹಿಸಿರಲಿಲ್ಲ. ರಾಜೀವ್ ಕುಮಾರ್ ಒಬ್ಬರೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅನಾರೋಗ್ಯದ ಕಾರಣ ಎಂಬುದನ್ನು ಅವರ ನಿಕಟ ಮೂಲಗಳೇ ನಿರಾಕರಿಸಿವೆ ಎಂದು ವರದಿಗಳು ಹೇಳುತ್ತಿವೆ. ಆದರೆ ಇಬ್ಬರು ಉನ್ನತ ಸಾಂವಿಧಾನಿಕ ಅಧಿಕಾರಿಗಳ ನಡುವೆ ಉಂಟಾದ ಭಿನ್ನಮತ ಏನು ಎನ್ನು ವುದು ಖಚಿತವಿಲ್ಲ. ವಿವರ ಮಾಹಿತಿಗಳು ಆ ಬಗ್ಗೆ ಇಲ್ಲ.

ಅವರನ್ನು ರಾಜೀನಾಮೆ ನೀಡದಂತೆ ತಡೆಯುವ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಪ್ರಯತ್ನಗಳು ಸರಕಾರದ ಮೂಲಕ ನಡೆದವು. ಆದರೆ ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ ಎಂದು ಅಧಿಕಾರಿಗಳು ಹೇಳಿರುವ ಬಗ್ಗೆ ವರದಿಗಳಿವೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಸರಕಾರದ ಇತರ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಹೊರತುಪಡಿಸಿ, ಗೆಜೆಟ್ ಅಧಿಸೂಚನೆ ಹೊರಡಿಸುವವರೆಗೂ ಚುನಾವಣಾ ಆಯೋಗದೊಳಗೆ ಕೂಡ ಯಾರಿಗೂ ಗೋಯಲ್ ಹಠಾತ್ ರಾಜೀನಾಮೆ ನಿರ್ಧಾರದ ಬಗ್ಗೆ ಸುಳಿವುಗಳೇ ಇರಲಿಲ್ಲ ಎನ್ನಲಾಗುತ್ತಿದೆ.

ಅರುಣ್ ಗೋಯಲ್ ಕೋಲ್ಕತಾದಲ್ಲಿ ನಡೆದ ಚುನಾವಣಾ ಪರಿಶೀಲನೆಯ ಸಭೆಯ ನಂತರ ಹಠಾತ್ತನೆ ಏಕೆ ರಾಜೀನಾಮೆ ನೀಡಿದರು ಎಂದು ಟಿಎಂಸಿ ಪ್ರಶ್ನಿಸಿದೆ. ದಿಲ್ಲಿಯ ಆದೇಶ ಪಾಲಿಸಲು ವಿರೋಧಿಸಿಯೇ ರಾಜೀನಾಮೆ ನೀಡಿದ್ದಾರೆ ಎಂದು ಟಿಎಂಸಿ ಹೇಳಿದೆ.

ಇದು ಎಲೆಕ್ಷನ್ ಕಮಿಷನೋ ಅಥವಾ ಎಲೆಕ್ಷನ್ ಒಮಿಷನೋ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಭಾರತದಲ್ಲಿ ಈಗ ಯಾಕೆ ಒಬ್ಬರೇ ಚುನಾವಣಾ ಆಯುಕ್ತರಿದ್ದಾರೆ? ನಮ್ಮ ಸ್ವತಂತ್ರ ಸಂಸ್ಥೆಗಳನ್ನು ವ್ಯವಸ್ಥಿತ ರೀತಿಯಲ್ಲಿ ನಾಶ ಮಾಡುವುದನ್ನು ನಿಲ್ಲಿಸದಿದ್ದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದು ಹೋಗಲಿದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಗೋಯಲ್ ರಾಜೀನಾಮೆಗೆ ಒಂದೇ ಮುಖ್ಯ ಚುನಾವಣಾ ಆಯುಕ್ತರು ಇಲ್ಲವೇ ಮೋದಿ ಸರಕಾರದ ಜೊತೆಗಿನ ಭಿನ್ನಮತ ಕಾರಣವಾಗಿರಬೇಕು. ವೈಯಕ್ತಿಕ ಕಾರಣವೂ ಇರಬಹುದು. ಇಲ್ಲವೇ ಅವರು ಬಿಜೆಪಿ ವತಿಯಿಂದ ಚುನಾವಣೆಗೆ ಸ್ಪರ್ಧಿಸಲೂಬಹುದು. ಆ ಸಾಧ್ಯತೆಯೂ ಇದೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.

ಗಮನಿಸಬೇಕಿರುವ ವಿಚಾರವೆಂದರೆ, ಈಗ ಒಬ್ಬರಲ್ಲ, ಇಬ್ಬರು ಆಯುಕ್ತರನ್ನು ಮೋದಿ ಸರಕಾರ ನೇಮಿಸಬೇಕಾದ ಸಂದರ್ಭ ಬಂದಿದೆ.ಚುನಾವಣೆಗೆ ಕೆಲವೇ ವಾರಗಳ ಮೊದಲು ಮೋದಿ ಸರಕಾರ ಇಬ್ಬರು ಆಯುಕ್ತರನ್ನು ನೇಮಿಸಲಿದೆ ಎಂಬುದೇ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಹೊಸ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ, ಕೇಂದ್ರ ಕಾನೂನು ಸಚಿವರು ಮತ್ತು ಕೇಂದ್ರದ ಇಬ್ಬರು ಕಾರ್ಯದರ್ಶಿಗಳಿರುವ ಶೋಧ ಸಮಿತಿ ಐವರ ಹೆಸರುಗಳನ್ನು ಅಂತಿಮಗೊಳಿಸುತ್ತದೆ. ಬಳಿಕ ಪ್ರಧಾನಿ ನೇತೃತ್ವದ ಸಮಿತಿ ಅಂತಿಮವಾಗಿ ಆಯ್ಕೆ ಮಾಡುತ್ತದೆ. ಸಮಿತಿಯಲ್ಲಿ ಪ್ರತಿಪಕ್ಷ ನಾಯಕ ಇದ್ದರೂ ಅವರ ಅಭಿಪ್ರಾಯಕ್ಕೆ ಯಾವುದೇ ಪ್ರಾಮುಖ್ಯತೆ ಸಿಗದೇ ಹೋಗುವ ಸಾಧ್ಯತೆಗೆ ಹೊಸ ಕಾನೂನು ಅವಕಾಶ ಮಾಡಿಕೊಟ್ಟಿರುವುದೇ ಈ ವಿಚಾರದಲ್ಲಿ ಕಳವಳಕ್ಕೆ ಕಾರಣ.

ಹೊಸ ಕಾನೂನಿನ ಪ್ರಕಾರ, ಸರಕಾರದ ಇಚ್ಛೆಯೇ ಆಯುಕ್ತರ ನೇಮಕದಲ್ಲಿ ಪಾತ್ರ ವಹಿಸಲಿದೆ. ಹಾಗಾಗಿ ಮತ್ತೊಮ್ಮೆ ಹೌದಪ್ಪಗಳೇ ನೇಮಕವಾಗುವ ಸಾಧ್ಯತೆ ನಿಜಕ್ಕೂ ಆತಂಕ ಮೂಡಿಸಿರುವ ಸಂಗತಿಯಾಗಿದೆ. ಇದು ಪ್ರಜಾತಂತ್ರದ ಪಾಲಿಗೆ ಬಹು ದೊಡ್ಡ ಸವಾಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಕುಮಾರ್

contributor

Similar News