ಚುನಾವಣೆಯ ಫಲಿತಾಂಶಗಳು ಪ್ರಜಾಪ್ರಭುತ್ವದ ಸಾಮಾಜಿಕ ಬದುಕಿನ ಗತಿಬಿಂಬ

ಎಲ್ಲರನ್ನು ಒಳಗೊಳ್ಳುವ ಜನರ ಬದುಕಿಗೆ ಅಗತ್ಯವಾದ ಮೂಲಸೌಕರ್ಯವಿಲ್ಲದೆ ಅಭಿವೃದ್ಧಿಯಾಗಲು, ಪ್ರಬಲ ರಾಷ್ಟ್ರವಾಗಲು ಅಥವಾ ವಿಶ್ವ ಗುರುವಾಗಲು ಸಾಧ್ಯವಿಲ್ಲ. ಜನರು ನಿಸ್ಸಂಶಯವಾಗಿ ಗುಣಾತ್ಮಕ ಸಾಮಾಜಿಕ ಸೇವೆಗಳನ್ನು ಬಯಸುತ್ತಿದ್ದಾರೆ. ಹಣದುಬ್ಬರದ ನಿಯಂತ್ರಣ ಸೇರಿದಂತೆ ಆರ್ಥಿಕ ಸ್ಥಿರತೆಯ ಮೂಲಕ ಜನರ ಜೀವನ ಮತ್ತು ಜೀವನೋಪಾಯದಲ್ಲಿ ಮಹತ್ವದ ಬದಲಾವಣೆಯನ್ನು ಬಯಸುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿಯಲ್ಲಿ ಅಸ್ಪಷ್ಟ ಘೋಷಣೆಗಳನ್ನು ಹಾಗೂ ಜನರ ಬದುಕಿನ ಬಗ್ಗೆ ಬೇಜವಾಬ್ದಾರಿ ತೀರ್ಪುಗಳನ್ನು ಮೀರುವುದು ಹೊಸ ಸಮ್ಮಿಶ್ರ ಸರಕಾರದ ಗುರಿಯಾಗಬೇಕು.

Update: 2024-07-14 09:12 GMT

18ನೇ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಜನಸಾಮಾನ್ಯರು ಕಳೆದ ದಶಕದಲ್ಲಿ ಆಡಳಿತ ನಡೆಸಿದ ಸರಕಾರಕ್ಕೆ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಿಲ್ಲ ಎನ್ನುವ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಜನರು ಕಳೆದ ದಶಕದ ಅಭಿವೃದ್ಧಿ ಸೂತ್ರವನ್ನು ತಿರಸ್ಕರಿಸಿರುವುದನ್ನು ಪ್ರತಿಬಿಂಬಿಸುತ್ತದೆ. ಅದು ಹೇಗೆಂದರೆ, ಅತ್ಯಂತ ಹೆಚ್ಚಿನ ಪ್ರಮಾಣದ ಬಡವರು ಮತ್ತು ಗ್ರಾಮೀಣ ಪ್ರದೇಶವನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಆಡಳಿತರೂಢ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆಯೂ ಇದನ್ನು ಸೂಚಿಸುತ್ತದೆ. ಇದೇ ಲಕ್ಷಣವನ್ನು ಕರ್ನಾಟಕದಲ್ಲಿಯೂ ನಾವು ಕಾಣಬಹುದು. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದ ಗ್ರಾಮೀಣ ಪ್ರದೇಶ, ಬಡವರು, ಭೂರಹಿತ ಕಾರ್ಮಿಕರು ಮತ್ತು ಬದುಕಿಗೆ ಕೃಷಿಯನ್ನು ಹೆಚ್ಚಾಗಿ ಅವಲಂಬಿಸಿರುವ ಜನರು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಜನರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಐದು ಲೋಕಸಭಾ ಕ್ಷೇತ್ರಗಳಲ್ಲಿ 2019ರಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದರು. ಈ ಬಾರಿಯ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ. ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟ ಪಂಗಡಗಳಿಗೆ(5+2) ಸೇರಿದ ಎಲ್ಲಾ ಏಳು ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ, ಬಿಜೆಪಿಯನ್ನು ಜನರು ಗೆಲ್ಲಿಸಿದ್ದರು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಏಳು ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಎರಡರಲ್ಲಿ ಮಾತ್ರ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಕರ್ನಾಟಕ ಮಾನವ ಅಭಿವೃದ್ಧಿ-2022ರ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಆರು(ಈಗ ವಿಜಯನಗರ ಸೇರಿ ಏಳು) ಜಿಲ್ಲೆಗಳು ಕೆಳಗಿನಿಂದ ಹತ್ತು ಸ್ಥಾನಗಳನ್ನು ಪಡೆದುಕೊಂಡಿವೆ. ಈ ಅಂಶವು ಅತ್ಯಂತ ದುಸ್ಥಿತಿಯಲ್ಲಿ ಜನರು ದೊಡ್ಡಮಟ್ಟದ ರಾಜಕೀಯ ಬದಲಾವಣೆಯನ್ನು ಅವರ ಬದುಕಿನ ನೆಲೆಯಲ್ಲಿ ನಿರೀಕ್ಷಿಸುತ್ತಿರುವುದನ್ನು ಸೂಚಿಸುತ್ತದೆ.

ಆರ್ಥಿಕ ಬೆಳವಣಿಗೆಯು ಬಡವರನ್ನು, ದಲಿತರನ್ನು, ಮಹಿಳೆಯರನ್ನು ಮತ್ತು ಕೃಷಿ ಸಮಾಜವನ್ನು ಒಳಮಾಡಿಕೊಳ್ಳಲಿಲ್ಲ. ನಿರುದ್ಯೋಗ, ಹಸಿವು, ಆರೋಗ್ಯ ಮತ್ತು ಶಿಕ್ಷಣ ಇನ್ನೂ ಮುಂತಾದ ವಲಯಗಳ ಗುಣಾತ್ಮಕ ಸುಧಾರಣೆಗೆ ಹೆಚ್ಚಿನ ಮಹತ್ವ ಮತ್ತು ಆದ್ಯತೆ ನೀಡಲಿಲ್ಲ. ಹಣದುಬ್ಬರ ಮತ್ತು ಬೆಲೆ ಏರಿಕೆಯ ನಿಯಂತ್ರಣಕ್ಕೆ ಕನಿಷ್ಠ ಕ್ರಮಗಳನ್ನು ಜರುಗಿಸಲಿಲ್ಲ. ಇದು ಆಹಾರ ಪದಾರ್ಥಗಳ ಬೆಲೆ ಗಗನಮುಖಿಯಾಗಲು ಕಾರಣವಾಯಿತು. ಕೋವಿಡ್-19 ಸಮಯದಲ್ಲಿ ಆಡಳಿತದ ಬಗ್ಗೆ ಅಸಮಾಧಾನವು ಹೆಚ್ಚಿತು. ಪರಿಣಾಮ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಯಲ್ಲಿ ತಳಭಾಗದಲ್ಲಿರುವ ಬಡ ಕುಟುಂಬಗಳಿಗೆ, ಆಹಾರ, ಆರೋಗ್ಯ ಮತ್ತು ಅಕ್ಷರದ ಮೇಲಿನ ಔಟ್ ಆಫ್ ಪಾಕೆಟ್ ವೆಚ್ಚದ ದುಪ್ಪಟ್ಟಿಗೆ ಕಾರಣವಾಯಿತು. ಹಣದುಬ್ಬರ ಮತ್ತು ಆಹಾರದ ಬೆಲೆ ಮತದಾರರನ್ನು ಹೇಗೆ ಮತ ಚಲಾಯಿಸಲು ಪ್ರಭಾವಿಸುತ್ತದೆ ಎಂಬುದು 2014ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆಯ ಫಲಿತಾಂಶವು ನಮಗೆ ತಿಳಿಸುತ್ತದೆ. 2014ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್(ಯುಪಿಎ)ನ ಆಡಳಿತದ ಅಂತ್ಯಕ್ಕೆ ಸ್ವಲ್ಪ ಮೊದಲು ಆಹಾರ-ಬೆಲೆ ಹಣದುಬ್ಬರವು ಐತಿಹಾಸಿಕವಾಗಿ ಹೆಚ್ಚಳವಾಗಿತ್ತು. ಆಗ ಜನರು ಯುಪಿಎ ಸರಕಾರವನ್ನು ತಿರಸ್ಕರಿಸಿದ್ದರು. ಸ್ವಲ್ಪ ಹೆಚ್ಚು ಕಡಿಮೆ ಅದೇ ರೀತಿಯಲ್ಲಿಯೇ 18ನೇ ಲೋಕಸಭಾ ಚುನಾವಣೆಯಲ್ಲಿ ಜನರು ಮೋದಿ ನಾಯಕತ್ವದ ಕೇಂದ್ರ ಸರಕಾರದ ವಿರುದ್ಧವೂ ಮತ ಚಲಾಯಿಸಿದ್ದಾರೆ. ನಿರುದ್ಯೋಗದ ಪ್ರಮಾಣದಲ್ಲಿ ಭಾರೀ ಹೆಚ್ಚಳ, ಸ್ವಯಂ ಉದ್ಯೋಗಿಗಳ ನೈಜ ಗಳಿಕೆಯಲ್ಲಿನ ಭಾರೀ ಕುಸಿತ, ಕೃಷಿ ಸಮಾಜದ ಬಿಕ್ಕಟ್ಟುಗಳು, ಬದುಕಿಗೆ ಪ್ರತಿದಿನ ದುಡಿಯಲೇಬೇಕಾದ ದುಡಿಯುವ ಜನರ ಬಿಕ್ಕಟ್ಟುಗಳನ್ನು ಕೇಳುವ ತಾಳ್ಮೆಯೇ ಆಡಳಿತ ನಡೆಸುವ ನಾಯಕರಿಗೆ ಇರಲಿಲ್ಲ. ಇನ್ನು ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಎದುರಿಸಿದ ಗಂಡಾಂತರಗಳಿಗೆ ಗಮನ ನೀಡುವ ಮನಸ್ಥಿತಿಯೇ ಇಲ್ಲದ ನಾಯಕತ್ವದಿಂದ ಜನರು ದೂರ ಸರಿಯಲು ಕಾರಣವಾಯಿತು.

ಉದ್ಯೋಗರಹಿತ ಬೆಳವಣಿಗೆ(ಜಾಬ್ಲೆಸ್ ಗ್ರೋಥ್):

ಭಾರತದ ಜಿಡಿಪಿ ಬೆಳವಣಿಗೆಯ ಸರಾಸರಿ ದರವು 2006ರಿಂದ 2023ರವರೆಗೆ ಶೇಕಡ 6.21ರಷ್ಟು ಇತ್ತು. 2020ರಲ್ಲಿ ಕೋವಿಡ್-19 ಲಾಕ್‌ಡೌನ್‌ನಿಂದ ಜಿಡಿಪಿ ಬೆಳವಣಿಗೆಯ ದರವು ಶೇ.-5.80ರಷ್ಟು ಕುಸಿತವನ್ನು ಕಂಡಿತು. 2021ರಲ್ಲಿ ಸಾರ್ವಕಾಲಿಕ ಗರಿಷ್ಠ ಶೇ. 9.10 ದಾಖಲೆಯ ಬೆಳವಣಿಗೆ ದರವನ್ನು, 2022ರಲ್ಲಿ ಶೇ. 7 ದರದಲ್ಲಿ, 2023ರ ಶೇ. 6.5 ದರದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಈ ಬೆಳವಣಿಗೆಯ ದರವು ಆರ್‌ಬಿಐನ ನಿರೀಕ್ಷೆಗಳನ್ನು ಮೀರಿದೆ. ಆದರೆ ನಿರುದ್ಯೋಗ ಬೆಳವಣಿಗೆಯ ದರವು 2010ರಲ್ಲಿ ಶೇ. 2ರಷ್ಟು ಇದ್ದು, 2015ಕ್ಕೆ ಶೇ. 5ರಷ್ಟು ಮತ್ತು 2018ರ ವೇಳೆಗೆ ಶೇ. 6.1ಕ್ಕೆ ಹೆಚ್ಚಳವಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ ಪ್ರಕಾರ ಭಾರತದ ನಿರುದ್ಯೋಗ ಬೆಳವಣಿಗೆಯ ದರವು ಅಕ್ಟೋಬರ್ 2023ರ ವೇಳೆಗೆ ಶೇ. 10.05 ರಷ್ಟು ಇದೆ. ಈ ದರವು ಸಾರ್ವಕಾಲಿಕ ಗರಿಷ್ಠ ನಿರುದ್ಯೋಗ ಬೆಳವಣಿಗೆಯ ದರವಾಗಿದೆ. ದೇಶದಲ್ಲಿ ಶೇ. 40ಕ್ಕೂ ಹೆಚ್ಚಿನ ಪ್ರಮಾಣದ ವಿದ್ಯಾವಂತ ಯುವಕರು ಉದ್ಯೋಗಾವಕಾಶ ಇಲ್ಲದೆ ಹೊರಗುಳಿದಿರುತ್ತಾರೆ. ದುಡಿಯುವ ಸಾಮರ್ಥ್ಯವಿರುವ ಜನರು ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ಪರಿಸ್ಥಿತಿಯು ಅತ್ಯಂತ ಭೀಕರವಾಗುತ್ತಿರುವುದನ್ನು ಈ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಇದು ಭಾರತದ ನಿರುದ್ಯೋಗ ಬಿಕ್ಕಟ್ಟನ್ನು ಮತ್ತಷ್ಟು ದಿಗ್ಭ್ರಮೆಗೊಳಿಸುತ್ತಿದೆ.

ಕಳೆದ ದಶಕದ ಆರ್ಥಿಕ ನೀತಿಯು ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ. ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲ್ ಪಾವತಿ, ಹೆದ್ದಾರಿ ನಿರ್ಮಾಣ, ವಿಮಾನ ನಿಲ್ದಾಣಗಳ ನಿರ್ಮಾಣ, ರೈಲು ನಿಲ್ದಾಣಗಳ ನವೀಕರಣ ಮುಂತಾದ ಅಬ್ಬರವನ್ನು ಅನಾವರಣಗೊಳಿಸುವುದರ ಮೇಲೆ ಕೇಂದ್ರೀಕರಿಸಿತ್ತು. ಇದರೊಂದಿಗೆ ರೈತರು, ಮಹಿಳೆಯರು ಮತ್ತು ಬಡವರಿಗೆ ಉಚಿತ ಪಡಿತರ ಸೇರಿದಂತೆ ಹಲವಾರು ನೇರ ವರ್ಗಾವಣೆಗಳು ಆಡಳಿತ ನಡೆಸಿದ ಪಕ್ಷದ ನಾಯಕರಿಗೆ ಗೆಲುವಿನ ಸೂತ್ರದಂತೆ ಕಂಡವು. ಆದರೆ ಆಡಳಿತದಲ್ಲಿದ್ದ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಮರಳಿ ತರಲು ಇದು ಸಾಕಾಗಲಿಲ್ಲ. ಹೀಗಾಗಿ ಆರ್ಥಿಕ ನೀತಿಗಳ ಬದಲಾವಣೆಯ ಅಗತ್ಯವಿರುವುದನ್ನು 2024ರ ಜನಾದೇಶವು ತಿಳಿಸುತ್ತದೆ.

ಜನರ ಅಸಮಾಧಾನದ ಮೂಲಗಳ ಕಡೆಗೆ ಇಂದಿನ ಸರಕಾರ ಗಮನಹರಿಸಬೇಕು. ಸರಕಾರವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ಕೆಲವು ಅಂಶಗಳನ್ನು ನಾವು ನೋಡಬಹುದು. ಮೊದಲಿಗೆ, ಇಲ್ಲಿಯವರೆಗೆ ಕೈಗೊಂಡ ಸುಧಾರಣೆಗಳು ಏನೇ ಇರಲಿ, ಅವು ತಳಮಟ್ಟದಲ್ಲಿ ಇರುವ ಜನರ ಬದುಕಿನಲ್ಲಿ ಸಾಕಷ್ಟು ಗುಣಾತ್ಮಕ ಬದಲಾವಣೆಗಳನ್ನು ತಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಏಕೆಂದರೆ ನಾವು ಕಂಡ ಆರ್ಥಿಕ ಬೆಳವಣಿಗೆ ಶೇ. 75 ಭಾರತೀಯರು ಪೌಷ್ಟಿಕ ಆಹಾರವನ್ನು ಖರೀದಿಸುವ ಸಾಮರ್ಥ್ಯವನ್ನು ನಿರ್ಮಾಣ ಮಾಡಲಿಲ್ಲ. ಇದು ಕಳೆದ ಐದು ವರ್ಷಗಳಲ್ಲಿ ಆಹಾರದ ಬೆಲೆಗಳ ಹೆಚ್ಚಳ ಮತ್ತು ಸಂಪತ್ತಿನ ಅಸಮಾನತೆಯ ಹೆಚ್ಚಳವನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಜಾಗತಿಕವಾಗಿ ಸಿರಿಧಾನ್ಯಗಳ ಉತ್ತೇಜನದ ಹೊರತಾಗಿ, ಕಳೆದ ದಶಕದ ಆರ್ಥಿಕ ಪ್ಯಾಕೇಜ್‌ನಲ್ಲಿ ಕೃಷಿಯು ನಿರ್ಲಕ್ಷಿಸಲ್ಪಟ್ಟ ಪ್ರಮುಖ ಅಂಶ. ಪ್ರಮುಖ ಆಹಾರ ಪದಾರ್ಥಗಳ ಬೆಲೆಗಳ ನಿರಂತರ ಏರಿಕೆಯು ಅಭಿವೃದ್ಧಿಯಾಗದ ಸಮಾಜದ ಸಂಕೇತ. ಕೆಲವು ವರ್ಷಗಳಿಂದ ಪ್ರಮುಖ ಆಹಾರ ಪದಾರ್ಥವಾದ ಗೋಧಿ ಉತ್ಪಾದನೆಯು ನಿರಂತರವಾಗಿ ಕುಸಿಯುತ್ತಿದೆ. ದುಡಿಯುವ ಜನರಿಗೆ ಅಗತ್ಯವಾದ ಪ್ರೊಟೀನ್‌ನ ಪ್ರಮುಖ ಮೂಲ ಬೇಳೆಕಾಳುಗಳ ಉತ್ಪಾದನೆಯು ಮತ್ತಷ್ಟು ಕುಸಿದಿದೆ. ಆತ್ಮನಿರ್ಭರದ ಘೋಷಣೆಯಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧ್ಯವಾಗಲಿಲ್ಲ. ಹಣ್ಣುಗಳು ಮತ್ತು ತರಕಾರಿಗಳ, ಜೀವಸತ್ವಗಳ ಮತ್ತು ಖನಿಜಗಳ ಬೆಲೆಗಳಲ್ಲಿ ಭಾರೀ ಹೆಚ್ಚಳ ಉಂಟಾಯಿತು. ಇವುಗಳನ್ನು ಬಡವರು ಖರೀದಿಸದ ವಾತಾವರಣ ನಿರ್ಮಾಣವಾಯಿತು. ಇದೇ ಸಮಯದಲ್ಲಿ ಕೃಷಿಕರ ಬಿಕ್ಕಟ್ಟುಗಳನ್ನು ಘನತೆಯಿಂದ ಕೇಳಿಸಿಕೊಳ್ಳದೆ, ತುಚ್ಛವಾಗಿ ಕಂಡಿದ್ದು ಸಹ ವಿಕಸಿತ ಭಾರತದ ವೇಗವನ್ನು ತಡೆಯುವ ಪರಿಸರ ನಿರ್ಮಾಣ ಮಾಡಿತು. ಒಟ್ಟಾರೆ ಜನಸಾಮಾನ್ಯರ ಬಿಕ್ಕಟ್ಟುಗಳನ್ನು ಪರಿಗಣಿಸದೆ ‘ವಿಕಸಿತ ಭಾರತ್’ ಕನಸು ಕಂಡದ್ದು ಅತಿಯಾದ ಆತ್ಮವಿಶ್ವಾಸವಲ್ಲದೆ ಮತ್ತೇನಲ್ಲ.

ಮೂಲಭೂತ ಸೌಲಭ್ಯಗಳು ಮತ್ತು ಮಾನವ ಅಭಿವೃದ್ಧಿ:

ಗುಣಮಟ್ಟದ ಮೂಲಭೂತ ಸೌಲಭ್ಯಗಳು ಮಾನವ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ದಿಕ್ಕಿನಲ್ಲಿ ಉತ್ತಮ ಗುಣಮಟ್ಟದ ಕುಡಿಯುವ ನೀರಿನ ಪೂರೈಕೆಯು ಉತ್ತಮ ಆರೋಗ್ಯ ಫಲಿತಾಂಶಕ್ಕೆ ಕೊಡುಗೆ ನೀಡುತ್ತದೆ. ಸುಧಾರಿತ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯು ಅತಿಸಾರದ ಅಪಾಯವನ್ನು ಕಡಿಮೆ ಮಾಡುತ್ತದೆ. ತಾಯಿ ಮತ್ತು ಮಗುವಿನ ಮರಣವನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ. ನೀರಿನ ಮೂಲದಿಂದ ನೀರನ್ನು ತರಲು ಇರುವ ದೂರ ಮತ್ತು ಅದಕ್ಕೆ ಕಳೆಯುವ ಸಮಯವು ಐದು ವರ್ಷದೊಳಗಿನ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಇವುಗಳ ನಡುವಿನ ಸಂಬಂಧವನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಸಾರ್ವಜನಿಕ ನೀರು ಸರಬರಾಜು ಮತ್ತು ನೀರಿನ ಸಂಬಂಧಿತ ಆರೋಗ್ಯ ಸೂಚ್ಯಂಕಗಳ ಮೂಲಕ ಪರಿಶೀಲಿಸಬಹುದು. ನೀರಿನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯುವ ಮೂಲಕ ಮಾನವ ಶ್ರಮವನ್ನು ಹೆಚ್ಚಿಸಬಹುದು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಹತ್ವಾಕಾಂಕ್ಷೆಯಿಂದ ಆಗಸ್ಟ್ 15, 2019ರ ಕೆಂಪು ಕೋಟೆ ಮೇಲಿನ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಜಲ ಜೀವನ್ ಮಿಷನ್’ ಘೋಷಿಸಿದ್ದರು. ಜಲ ಜೀವನ್ ಮಿಷನ್ ಎಲ್ಲಾ ಗ್ರಾಮೀಣ ಮನೆಗಳಿಗೆ ಪೈಪ್‌ಲೈನ್ ಮೂಲಕ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸಲು ರೂಪಿಸಲಾದ ಕಾರ್ಯಕ್ರಮ.

ಆದರೆ ಜಲ ಜೀವನ್ ಮಿಷನ್ ಯೋಜನೆಯನ್ನು ಭೌಗೋಳಿಕ ಪರಿಸರವನ್ನು ಅರ್ಥಮಾಡಿಕೊಳ್ಳದೆ ಅನುಷ್ಠಾನಗೊಳಿಸಿರುವುದು ತಿಳಿದುಬರುತ್ತದೆ. ಈ ಯೋಜನೆ ರೂಪಿಸುವಾಗ ಸ್ಥಳೀಯ ಸರಕಾರವನ್ನು ಪರಿಗಣಿಸದಿರುವುದು ತಿಳಿಯುತ್ತದೆ. ಅನುಷ್ಠಾನದ ನಂತರ ವಿಕೇಂದ್ರೀಕೃತ ನೆಲೆಯಲ್ಲಿ ಸಮುದಾಯ-ನಿರ್ವಹಣೆಯ ವಿಧಾನವನ್ನು ಅನುಸರಿಸಿ, ನೀರು ಸರಬರಾಜು ವ್ಯವಸ್ಥೆಯನ್ನು ದೀರ್ಘಾವಧಿಯಲ್ಲಿ ಸಮುದಾಯವೇ ನಿರ್ವಹಿಸುವಂತೆ ಸ್ಥಳೀಯ ಜನರನ್ನು ಸಬಲೀಕರಿಸುವುದು ಎಂಬುದು ಜಲ ಜೀವನ್ ಮಿಷನ್‌ನ ಆಶಯ. ಆದರೆ, ಯೋಜನೆಯ ಅನುಷ್ಠಾನದ ಸಮಯದಲ್ಲಿ ಸ್ಥಳೀಯ ಜನರು ಮತ್ತು ಸ್ಥಳೀಯ ಸರಕಾರದ ಜೊತೆ ಚರ್ಚಿಸದೆ ಯೋಜನೆ ರೂಪಿಸಿರುವುದು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಆಶಯಕ್ಕೆ ವಿರುದ್ಧವಾದದ್ದು.

ಈ ನಡುವೆ ಆರ್ಥಿಕ ಬೆಳವಣಿಗೆಯು ಉತ್ಪಾದನೆ ಮತ್ತು ಅನುಭೋಗವಾದವನ್ನು ಮಿತಿ ಮೀರಿ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಪರಿಸರಾತ್ಮಕ ಬಿಕ್ಕಟ್ಟುಗಳು ಹೆಚ್ಚಿವೆ. ಅದರಲ್ಲಿಯೂ ಗಾಳಿ ಮತ್ತು ನೀರಿನ ಮೂಲಗಳು ಹೆಚ್ಚು ಕಲುಷಿತಗೊಂಡಿವೆ. ಕುಡಿಯುವ ನೀರಿನ ಗುಣಮಟ್ಟವು ಮಾನವ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಕರ್ನಾಟಕದ ಬಹುತೇಕ ಜನವಸತಿಗಳ ನೀರಿನ ಮೂಲಗಳಲ್ಲಿ ಫ್ಲೋರೈಡ್, ನೈಟ್ರೇಟ್ ಮತ್ತು ಕಬ್ಬಿಣ ಅಂಶಗಳು ಪೀಡಿತವಾಗಿದೆ. ಕರ್ನಾಟಕದ 234 ಜಲಾನಯನ ಪ್ರದೇಶಗಳಲ್ಲಿ 64 ಜಲಾನಯನ ಪ್ರದೇಶಗಳು ಗಂಭೀರವಾದ ನೀರಿನ ಗುಣಮಟ್ಟದ ಸಮಸ್ಯೆಗಳನ್ನು ಹೊಂದಿವೆ. ರಾಜ್ಯದ ಕೆಲವು ಭಾಗಗಳಲ್ಲಿ ಮಾನವ ಜನ್ಯ ವಿವಿಧ ರೀತಿಯ ತ್ಯಾಜ್ಯ, ರಾಸಾಯನಿಕ ಪದಾರ್ಥಗಳಿಂದ ಅಂತರ್ಜಲವು ಫ್ಲೋರೈಡ್, ಆರ್ಸೆನಿಕ್, ಕಬ್ಬಿಣ, ನೈಟ್ರೇಟ್ ಮತ್ತು ಲವಣಾಂಶದ ಅಧಿಕ ಸಾಂದ್ರತೆಯೊಂದಿಗೆ ಕಲುಷಿತಗೊಂಡಿದೆ. ಇದರಿಂದ ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ‘ಜೀವಿಸುವ ಹಕ್ಕಿನ’ ಭಾಗವಾಗಿ ‘ಯಾವುದೇ ರೀತಿಯ ಮಾಲಿನ್ಯ ಇಲ್ಲದ ನೀರು’ ಮತ್ತು ‘ಸುರಕ್ಷಿತ ಕುಡಿಯುವ ನೀರನ್ನು’ ಪಡೆಯುವುದು ಪ್ರತಿಯೊಬ್ಬರ ಹಕ್ಕು ದಿನದಿಂದ ದಿನಕ್ಕೆ ಸವಕಲಾಗುತ್ತಿದೆ.

ಇಂತಹ ಹತ್ತು ಹಲವು ಗಂಭೀರ ಸಮಸ್ಯೆಗಳನ್ನು ಒಳಗೊಳಗೆ ಅನುಭವಿಸುತ್ತಿರುವ ತಳಮಟ್ಟದಲ್ಲಿ ಇರುವ ಜನರು ಬೆಳವಣಿಗೆ (ಕೆಲವರ ಬೆಳವಣಿಗೆ) ಆಧಾರಿತ ಆರ್ಥಿಕ ಚಿಂತನೆ ಬದಲಾಗಬೇಕು. ನಮಗೆ ಘನತೆಯ ಬದುಕು ಬೇಕು ಎನ್ನುವುದನ್ನು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನುವುದನ್ನು ಸಣ್ಣ ಮನಸ್ಸಿನ ದೊಡ್ಡ ನಾಯಕರು ತಿಳಿಯಬೇಕಾಗಿದೆ. ಏಕೆಂದರೆ, ನಮ್ಮ ಮಹಾನಗರಗಳಲ್ಲಿ ನೀರು ಸರಬರಾಜು ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಈ ಬೇಸಿಗೆಯಲ್ಲಿ ಬೆಂಗಳೂರು ಮತ್ತು ದಿಲ್ಲಿ ತೀವ್ರ ಕುಡಿಯುವ ನೀರಿನ ಕೊರತೆಯನ್ನು ಕಂಡಿವೆ. ಕುಡಿಯುವ ನೀರಿನ ಸರಬರಾಜಿನಲ್ಲಿಯೂ ರಾಜಕೀಯ ಮಾಡುವ ಸಣ್ಣ ಮನಸ್ಸಿನ ದೊಡ್ಡ ನಾಯಕರು ನಮ್ಮ ಮುಂದಿದ್ದಾರೆ. ಇದು ಭಾರತದ ಬಹುತ್ವವನ್ನು ಒಟ್ಟುಗೂಡಿಸುವಿಕೆಗೆ, ಸಾಮಾಜಿಕ ಸಾಮರಸ್ಯಕ್ಕೆ ನೀರಿನ ರಾಜಕಾರಣವು ಅಪಾಯವನ್ನು ಉಂಟುಮಾಡಲಿದೆ. ಜೊತೆಗೆ ಜನರ ಆರ್ಥಿಕ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿದೆ. ಇದನ್ನು ಅರಿತ ಜನರು ನಾವು ವಿಶ್ವಗುರುವಾಗುವುದಕ್ಕೂ ಮೊದಲು ಗುಣಮಟ್ಟದ ಕುಡಿಯುವ ನೀರು ಮತ್ತು ಪೌಷ್ಟಿಕ ಆಹಾರ ಬೇಕು ಎನ್ನುವುದನ್ನು ಮತದಾನದ ಮೂಲಕ ತೋರಿಸಿದ್ದಾರೆ.

ಎಲ್ಲರನ್ನು ಒಳಗೊಳ್ಳುವ ಜನರ ಬದುಕಿಗೆ ಅಗತ್ಯವಾದ ಮೂಲಸೌಕರ್ಯವಿಲ್ಲದೆ ಅಭಿವೃದ್ಧಿಯಾಗಲು, ಪ್ರಬಲ ರಾಷ್ಟ್ರವಾಗಲು ಅಥವಾ ವಿಶ್ವ ಗುರುವಾಗಲು ಸಾಧ್ಯವಿಲ್ಲ. ಜನರು ನಿಸ್ಸಂಶಯವಾಗಿ ಗುಣಾತ್ಮಕ ಸಾಮಾಜಿಕ ಸೇವೆಗಳನ್ನು ಬಯಸುತ್ತಿದ್ದಾರೆ. ಹಣದುಬ್ಬರದ ನಿಯಂತ್ರಣ ಸೇರಿದಂತೆ ಆರ್ಥಿಕ ಸ್ಥಿರತೆಯ ಮೂಲಕ ಜನರ ಜೀವನ ಮತ್ತು ಜೀವನೋಪಾಯದಲ್ಲಿ ಮಹತ್ವದ ಬದಲಾವಣೆಯನ್ನು ಬಯಸುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿಯಲ್ಲಿ ಅಸ್ಪಷ್ಟ ಘೋಷಣೆಗಳನ್ನು ಹಾಗೂ ಜನರ ಬದುಕಿನ ಬಗ್ಗೆ ಬೇಜವಾಬ್ದಾರಿ ತೀರ್ಪುಗಳನ್ನು ಮೀರುವುದು ಹೊಸ ಸಮ್ಮಿಶ್ರ ಸರಕಾರದ ಗುರಿಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಎಚ್.ಡಿ.ಪ್ರಶಾಂತ್

contributor

Similar News