ಚುನಾವಣಾ ಸಮಯದ ಗ್ಯಾಸ್ ಸಿಲಿಂಡರ್ ರಾಜಕಾರಣ!
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 500 ರೂ.ಗೆ ಸಿಲಿಂಡರ್ ಕೊಡುವ ಭರವಸೆ ನೀಡಿದ್ದಾಗ, 500 ರೂ.ಗೆ ಕಾಗದದ ಸಿಲಿಂಡರ್ ಕೂಡ ಬರುವುದಿಲ್ಲ ಎಂದು ಬಿಜೆಪಿ ಮಂತ್ರಿಯೇ ವ್ಯಂಗ್ಯವಾಡಿದ್ದರು. ಆದರೆ ಅದೇ ಬಿಜೆಪಿ ಆಮೇಲೆ ಅದೇ ಮಧ್ಯಪ್ರದೇಶದಲ್ಲಿ 450 ರೂ.ಗೆ ಸಿಲಿಂಡರ್ ನೀಡುವ ಭರವಸೆ ನೀಡಿತ್ತು. ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ಗಳಲ್ಲಿ 500 ರೂ.ಗೆ ಸಿಲಿಂಡರ್ ನೀಡುವ ಭರವಸೆ ಕೊಡುತ್ತಿದೆ.
ಜಾರ್ಖಂಡ್‌ನಲ್ಲಿ ಸರಕಾರ ರಚನೆಯಾದರೆ ಪ್ರತೀ ಕುಟುಂಬಕ್ಕೆ 500 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ ಎಂದು ಬಿಜೆಪಿ ಭರವಸೆ ನೀಡಿದೆ.
‘ಇಂಡಿಯಾ’ ಮೈತ್ರಿಕೂಟ 450 ರೂ.ಗೆ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದೆ.
ಮಹಾರಾಷ್ಟ್ರದಲ್ಲಿ ಉಜ್ವಲಾ ಮತ್ತು ಲಾಡ್ಲಿ ಸಹೋದರಿಯರಿಗೆ 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.
ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲಿ 50 ರೂ.ಗಳ ಅಂತರದಲ್ಲಿ ಅಡುಗೆ ಅನಿಲ ರಾಜಕಾರಣ ನಡೆಯುತ್ತಿದೆ.
2020ರ ಜೂನ್‌ನಲ್ಲಿ ಸಬ್ಸಿಡಿ ನಿಲ್ಲಿಸಿದ ನಂತರ ಸಿಲಿಂಡರ್‌ನ ಬೆಲೆ ಹೆಚ್ಚಾಯಿತು ಮತ್ತು ರೂ. 1,100 ದಾಟಿತು.ಇದಾದ ನಂತರ ಕೇವಲ 200 ರೂ. ಕಡಿಮೆಯಾದರೆ ಸಿಲಿಂಡರ್ ಅಗ್ಗವಾಗುತ್ತಿದೆ ಎಂದು ದೊಡ್ಡದಾಗಿ ಹೇಳಲಾಗುತ್ತಿದೆ.
ಏನೇನಾಗುತ್ತಿದೆ ಎಂದು ನೋಡಿಕೊಂಡರೆ,
ಡಾಲರ್ ಎದುರು ರೂಪಾಯಿ ಮೌಲ್ಯ ಹಿಂದೆಂದೂ ಇಲ್ಲದಷ್ಟು ಕುಸಿದಿದೆ. ರೂಪಾಯಿ ಕುಸಿತ ಎಂಬುದು ಈಗ ಸುದ್ದಿಯೇ ಅಲ್ಲ ಎಂಬಷ್ಟು ಎಲ್ಲರೂ ಅದಕ್ಕೆ ಒಗ್ಗಿ ಹೋಗಿದ್ದಾರೆ.
ಈರುಳ್ಳಿ ಮುಂಬೈಯಲ್ಲಿ ಕೆಜಿಗೆ 100 ರೂ. ಆಗಿದೆ.
ಮಧ್ಯಮ ವರ್ಗದ ಮಂದಿ ಕೆಳ ಮಧ್ಯಮ ವರ್ಗ ಇಲ್ಲವೇ ಬಡತನಕ್ಕೆ ಕುಸಿಯುತ್ತಿದ್ದಾರೆ. 2017ರಿಂದ 2023ರ ಅವಧಿಯಲ್ಲಿ 50 ಲಕ್ಷ ಮಂದಿ ಮಧ್ಯಮ ವರ್ಗದಿಂದಲೇ ಮಾಯವಾಗಿದ್ದಾರೆ.
ಉತ್ತರ ಪ್ರದೇಶ, ಅಸ್ಸಾಂ, ಮಧ್ಯ ಪ್ರದೇಶಗಳಲ್ಲೂ 500 ರೂ.ಗೆ ಸಿಲಿಂಡರ್ ನೀಡುವ ಭರವಸೆ ಇತ್ತು. ಆದರೆ ಆ ಮೂರೂ ರಾಜ್ಯಗಳಲ್ಲಿ ಸಿಲಿಂಡರ್ ಬೆಲೆ ಕ್ರಮವಾಗಿ 840 ರೂ., 852 ರೂ., 808 ರೂ. ಇದೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲಾದರೂ 500 ರೂ.ಗೆ ಸಿಲಿಂಡರ್ ಸಿಗುತ್ತಿದೆಯೇ?
ಮೋದಿ ಸರಕಾರ 2020ರಲ್ಲಿ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ನಿಲ್ಲಿಸಿದೆ. ಬಿಜೆಪಿ ಸರಕಾರವಿರುವ ಒಂದು ರಾಜ್ಯದಲ್ಲಿ 500 ರೂ. ಗೆ ಸಿಲಿಂಡರ್ ಕೊಡುವುದಾದರೆ ಅದೇ ಬಿಜೆಪಿ ಸರಕಾರವೇ ಇರುವ ಮತ್ತೊಂದು ರಾಜ್ಯದಲ್ಲಿ ಸಿಲಿಂಡರ್ ದರ 850 ರೂ. ಏಕೆ? ಇದಕ್ಕೇನು ಮಾನದಂಡ?
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 500 ರೂ.ಗೆ ಸಿಲಿಂಡರ್ ಕೊಡುವ ಭರವಸೆ ನೀಡಿದ್ದಾಗ, 500 ರೂ.ಗೆ ಕಾಗದದ ಸಿಲಿಂಡರ್ ಕೂಡ ಬರುವುದಿಲ್ಲ ಎಂದು ಬಿಜೆಪಿ ಮಂತ್ರಿಯೇ ವ್ಯಂಗ್ಯವಾಡಿದ್ದರು. ಆದರೆ ಅದೇ ಬಿಜೆಪಿ ಆಮೇಲೆ ಅದೇ ಮಧ್ಯಪ್ರದೇಶದಲ್ಲಿ 450 ರೂ.ಗೆ ಸಿಲಿಂಡರ್ ನೀಡುವ ಭರವಸೆ ನೀಡಿತ್ತು. ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ಗಳಲ್ಲಿ 500 ರೂ.ಗೆ ಸಿಲಿಂಡರ್ ನೀಡುವ ಭರವಸೆ ಕೊಡುತ್ತಿದೆ.
ಪೆಟ್ರೋಲ್, ಡೀಸೆಲ್ ಬೆಲೆಯಂತೂ ಏರುತ್ತಲೇ ಇದೆ. ಆದರೆ ಮಡಿಲ ಮಾಧ್ಯಮಗಳಲ್ಲಿ ಈ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬಗ್ಗೆ ಚರ್ಚೆಯೇ ಇಲ್ಲ.
2023ರಲ್ಲಿ ರಾಜಸ್ಥಾನ ಚುನಾವಣೆ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಚರ್ಚೆಗೆ ಬಂತು. ಆದರೆ ಚುನಾವಣೆ ನಂತರ ಇದರ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಅವತ್ತು ಮೋದಿ ಜೋರಾಗಿ ಹೇಳಿದ್ದರು.
ತಮಾಷೆ ಏನೆಂದರೆ, ಬೆಲೆ ಕಡಿತ ಮಾಡುವುದಾಗಿ ಪ್ರಧಾನಿ ಹೇಳಲೇ ಇಲ್ಲ. ಸಮೀಕ್ಷೆ ಮಾಡುತ್ತೇವೆ ಎಂದಿದ್ದರು.
ಆದರೆ ಹೇಳಿ ವರ್ಷವೇ ಆಯಿತು. ಆ ಸಮೀಕ್ಷೆ ನಡೆಯಿತೇ? ಮತ್ತೆ ಚುನಾವಣೆ ನಡೆಯುತ್ತಿದೆ. ದರ ಏರುತ್ತಲೇ ಇದೆ.
2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ತೈಲ ದರ ಏರಿಕೆಯಾಗಲೇ ಇಲ್ಲ. ಆದರೆ ಚುನಾವಣೆ ಮುಗಿದ ಮೇಲೆ 9 ಬಾರಿ ದರ ಏರಿಕೆಯಾಗಿದೆ.
ರಶ್ಯದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮಾಡುತ್ತಿರುವ ಮೋದಿ ಸರಕಾರ ದೇಶದ ಜನರಿಗೇನಾದರೂ ಕಡಿಮೆ ದರದಲ್ಲಿ ಕೊಡುತ್ತಿದೆಯೇ?
ಆದರೆ ರಶ್ಯದಿಂದ ಅಗ್ಗದ ದರದಲ್ಲಿ ತೆಗೆದುಕೊಳ್ಳುತ್ತಿರುವ ತೈಲವನ್ನು ಭಾರತ ಯೂರೋಪ್‌ಗೆ ಮಾರುತ್ತಿದೆ. ಹೀಗೆ ರಶ್ಯ ತೈಲಕ್ಕೆ ಭಾರತ ಹಬ್ ಎನ್ನುವಂತಾಗಿ ಬಿಟ್ಟಿದೆ.
ಟಿಎಂಸಿ ಸಂಸದ ಸಾಕೇತ್ ಗೋಖಲೆ ಆಕ್ಷೇಪಿಸಿರುವಂತೆ ಶೇ.25ರಿಂದ ಶೇ.50ರಷ್ಟು ಕಡಿಮೆ ಬೆಲೆಗೆ ತೈಲ ಖರೀದಿಸುವ ಭಾರತದಲ್ಲಿ ಮಾತ್ರ ತೈಲ ಬೆಲೆ ಇಳಿಕೆಯಾಗಿಯೇ ಇಲ್ಲ.
ರಶ್ಯದಿಂದ ಭಾರತ ತೈಲ ಖರೀದಿಸದೆ ಹೋದರೆ, ಜಾಗತಿಕವಾಗಿ ತೈಲಬೆಲೆ ಗಗನಕ್ಕೇರಲಿದೆ ಎಂದು ಕೇಂದ್ರ ಮಂತ್ರಿ ಹರ್ದೀಪ್ ಪುರಿ ಹೇಳುತ್ತಾರೆ. ದೇಶದಲ್ಲಿ ತೈಲಬೆಲೆ ತಗ್ಗುತ್ತಿಲ್ಲ ಎಂಬ ಚಿಂತೆ ಮಂತ್ರಿಗಿಲ್ಲ. ಇಲ್ಲಿನ ಜನ ತೈಲ ಬೆಲೆ ಏರಿಕೆಯಿಂದ ಕಂಗಾಲಾದ ಬಗ್ಗೆ ಅವರಿಗೆ ಕಳಕಳಿಯಿಲ್ಲ. ಅವರ ಚಿಂತೆ ಜಾಗತಿಕವಾಗಿ ದರ ಏರಲಿರುವುದರ ಬಗ್ಗೆ.
ಬೆಲೆಯೇರಿಕೆ, ನಿರುದ್ಯೋಗ ಮತ್ತು ಕಡಿಮೆ ಸಂಬಳ ಇದರ ನಡವೆ ಸಿಲುಕಿಕೊಂಡು ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಆದರೆ ಇವನ್ನೂ ಮೀರಿ ಜನರನ್ನು ವಂಚಿಸುತ್ತಿರುವ ಹಲವಾರು ಅಪಾಯಗಳೂ ಇವೆ.
ಸಿಲಿಂಡರ್ ಸಬ್ಸಿಡಿ ತೆಗೆದುಹಾಕಿದ ಬಳಿಕ ಬಿಜೆಪಿ ಆ ವಿಚಾರವನ್ನೇ ಮರೆತುಬಿಡುತ್ತಿತ್ತು. ಜನರು ಸಿಲಿಂಡರ್‌ಗೆ ಭಾರೀ ಬೆಲೆ ತೆರುತ್ತಲೇ ಇರುವಂತಾಗುತ್ತಿತ್ತು.
2023ರಲ್ಲಿ ರಾಜಸ್ಥಾನ, ಛತ್ತೀಸ್‌ಗಡ, ಮಧ್ಯಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆ ಹೊತ್ತಲ್ಲಿ ತಾವು ಅಧಿಕಾರಕ್ಕೆ ಬಂದರೆ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುತ್ತೇವೆ ಎಂದು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಆ ಎರಡೂ ರಾಜ್ಯಗಳಲ್ಲಿ 450 ರೂ.ಗೆ ಸಿಲಿಂಡರ್ ನೀಡುವುದಾಗಿಯೂ ಛತ್ತೀಸ್‌ಗಡದಲ್ಲಿ 500 ರೂ.ಗೆ ಸಿಲಿಂಡರ್ ನೀಡುವುದಾಗಿಯೂ ಭರವಸೆ ನೀಡಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ವರ್ಷದಲ್ಲಿ ಮೂರು ಉಚಿತ ಸಿಲಿಂಡರ್‌ಗಳನ್ನು ನೀಡುವ ಭರವಸೆ ನೀಡಿತ್ತು. ಆದರೆ ಬಿಜೆಪಿ ಸೋತುಹೋಯಿತು.
2022ರ ಚುನಾವಣೆಯಲ್ಲಿ ಬಿಜೆಪಿ ಎರಡು ಸಿಲಿಂಡರ್ ಉಚಿತ ಎಂದು ಉತ್ತರ ಪ್ರದೇಶದಲ್ಲಿ ಹೇಳಿತ್ತು.
ಬಿಜೆಪಿ ತಾನು ಉಚಿತವಾಗಿ ಕೊಡುವುದಾಗಿ ಹೇಳಿದರೆ ಅದು ಭರವಸೆ, ಅದೇ ಬೇರೆ ಪಕ್ಷಗಳು ಹಾಗೆ ಹೇಳಿದರೆ ‘ರೇವಡಿ’.
ಮೋದಿ ಸರಕಾರದ ಆಟ ಹೇಗಿದೆಯೆಂದರೆ, ಮೊದಲು ಸದ್ದಿಲ್ಲದೆ ದರವನ್ನು ಏರಿಸುವುದು, ಆಮೇಲೆ ಟಾಂಟಾಂ ಹೊಡೆದು ಸ್ವಲ್ಪ ದರ ಇಳಿಕೆ ಮಾಡುವುದು.
2019ರಿಂದ ಈವರೆಗಿನ ಗ್ಯಾಸ್ ಸಿಲಿಂಡರ್ ದರ ಏನಿದೆ ಎನ್ನುವುದನ್ನು ನೋಡೋಣ.
14.2 ಕೆಜಿಯ ಒಂದು ಗ್ಯಾಸ್ ಸಿಲಿಂಡರ್ ಬೆಲೆ
2019ರ ಎಪ್ರಿಲ್‌ನಲ್ಲಿ 706 ರೂ.
2021ರ ಎಪ್ರಿಲ್‌ನಲ್ಲಿ 809 ರೂ.
2022ರ ಎಪ್ರಿಲ್‌ನಲ್ಲಿ 949 ರೂ.
2023ರ ಮಾರ್ಚ್‌ನಲ್ಲಿ 1,103 ರೂ.
4 ವರ್ಷಗಳಲ್ಲಿ ಶೇ.56ರಷ್ಟು ಏರಿಕೆ ಆದಂತಾಗಿದೆ.
ಹೀಗೆ ಏರಿದ ಬೆಲೆಯಲ್ಲಿ ಕೊಂಚ ತಗ್ಗಿಸಿದರೆ ಓಡೋಡಿ ಬಂದು ಮಡಿಲ ಮೀಡಿಯಾಗಳು ಮೋದಿ ಸರಕಾರದ ತುತ್ತೂರಿ ಬಾರಿಸುತ್ತವೆ.
ಚುನಾವಣೆ ನಡೆಯಲಿರುವ ಒಂದು ರಾಜ್ಯದಲ್ಲಿ 500 ರೂ.ಗೆ ಬಿಜೆಪಿ ಗ್ಯಾಸ್ ಸಿಲಿಂಡರ್ ಕೊಡುತ್ತದೆ ಎಂದಾದರೆ ದೇಶದ ಎಲ್ಲೆಡೆ ಕೊಡುವುದಕ್ಕೆ ಏನು ಅಡ್ಡಿ?
ಶ್ರೀಲಂಕಾದಲ್ಲಿ ಕೂಡ ಗ್ಯಾಸ್ ಸಿಲಿಂಡರ್ ದರ ಏರಿಕೆ ದೊಡ್ಡ ವಿಷಯವಾಗಿತ್ತು. ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ಕಾಲದಲ್ಲಿ ಜನರು ಖಾಲಿ ಸಿಲಿಂಡರ್ ಹಿಡಿದು ಬೀದಿಯಲ್ಲಿ ನಿಂತಿದ್ದರು. ಗ್ಯಾಸ್ ಸಿಲಿಂಡರ್ ಏರಿಕೆ ಶ್ರೀಲಂಕಾದ ವಿಕಾರ ಆರ್ಥಿಕತೆಯ ಪ್ರತಿರೂಪದಂತೆ ಕಂಡಿತ್ತು.
ಇಲ್ಲಿಯೂ ಈಗ ಅದು ದೊಡ್ಡ ವಿಷಯವಾಗುತ್ತಿದೆ. ಆದರೆ ಅದರ ಬಗ್ಗೆ ಮೀಡಿಯಾಗಳು ಚರ್ಚೆ ಮಾಡುತ್ತಿಲ್ಲ.
2014ರಲ್ಲಿ ಗ್ಯಾಸ್ ಸಿಲಿಂಡರ್‌ಗೆ 400 ರೂಪಾಯಿ ಇದ್ದಾಗ ಬಿಜೆಪಿ ಉಗ್ರ ಪ್ರತಿಭಟನೆ ಮಾಡಿತ್ತು. ಆಗ ಪೆಟ್ರೋಲ್ ಬೆಲೆ 65-70ರ ನಡುವೆ ಇದ್ದಿದ್ದಕ್ಕೆ ಬಿಜೆಪಿಯಿಂದ ಇಂತಹ ಪ್ರತಿಭಟನೆ ವ್ಯಕ್ತವಾಗಿತ್ತು. ಬಿಜೆಪಿ ಪರ ಸೆಲೆಬ್ರಿಟಿಗಳಿಂದ ಯುಪಿಎ ಸರಕಾರವನ್ನು ಕುಟುಕುವ ವ್ಯಂಗ್ಯದ ಟ್ವೀಟ್‌ಗಳು ಬಂದಿದ್ದವು.
ಆದರೆ ಮೋದಿ ಬಂದ ಮೇಲೆ ಪೆಟ್ರೋಲ್ ಬೆಲೆ ನೂರರ ಗಡಿಯನ್ನೂ ದಾಟಿತು. ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನು ದಾಟಿ ಮುಂದೆ ಹೋಗಿದ್ದನ್ನೂ ನೋಡುವ ಕಾಲ 2020ರಲ್ಲಿ ಬಂತು. ಗ್ಯಾಸ್ ಸಿಲಿಂಡರ್ ಬೆಲೆ ಸಾವಿರವನ್ನೇ ದಾಟಿತು.
ಆದರೆ ಈ ಬಗ್ಗೆ ಚರ್ಚೆಯೇ ಇಲ್ಲ, ‘‘ನಾನಿನ್ನು ಮುಂದೆ ಸೈಕಲ್‌ನಲ್ಲಿ ಹೋಗುತ್ತೇನೆ’’ ಅಂದಿದ್ದ ಆ ಸೆಲೆಬ್ರಿಟಿಗಳ ಟ್ವೀಟ್ ಕೂಡ ಬರಲಿಲ್ಲ.
ಸರಕಾರ ಬೇರೆಯೇ ಏನೇನೋ ವಿಷಯಗಳನ್ನು ಜನರ ತಲೆತುಂಬಿ ಆದಷ್ಟೂ ಅವರನ್ನು ಭ್ರಮೆಯಲ್ಲಿರಿಸಲು ನೋಡುತ್ತಿದೆ.
ಬಿಜೆಪಿ ಮತ್ತು ಅದರ ಐಟಿ ಸೆಲ್ ಲವ್ ಜಿಹಾದ್ ವಿಷಯ ಮಾತಾಡುತ್ತದೆ. ವಕ್ಫ್ ಭೂಮಿ ವಿಷಯ, ಹಲಾಲ್ ವಿಷಯ ಮಾತಾಡುತ್ತದೆ, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತಾಡುತ್ತದೆ, ನಮ್ಮ ಪ್ರಧಾನಿ ಮತ್ತು ಟ್ರಂಪ್ ಭಾರೀ ಆತ್ಮೀಯರು ಎನ್ನುತ್ತದೆ, ಮಹಾಪುರುಷರ ಪ್ರತಿಮೆ ಮಾಡುವ ಬಗ್ಗೆ ಮಾತಾಡುತ್ತದೆ. ಆದರೆ ಗ್ಯಾಸ್ ಸಿಲಿಂಡರ್ ಬಗ್ಗೆ, ತೈಲ ಬೆಲೆ ಬಗ್ಗೆ, ದಿನಸಿ, ತರಕಾರಿಗಳ ಬೆಲೆ ಬಗ್ಗೆ, ನಿರುದ್ಯೋಗದ ಬಗ್ಗೆ, ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ.
ಅದನ್ನೇ ಮಡಿಲ ಮೀಡಿಯಾಗಳು ಫಾಲೋ ಮಾಡುತ್ತವೆ.
ಸದ್ಯಕ್ಕೆ ಎಲ್ಲ ಮಡಿಲ ಮೀಡಿಯಾಗಳು ಟ್ರಂಪ್ ಗೆಲುವಿನ ಸಂಭ್ರಮದಲ್ಲಿ ಮುಳುಗಿವೆ.
ಟ್ರಂಪ್ ಗೆದ್ದಿರೋದು ಭಾರತದಲ್ಲಿಯೇ ಅಥವಾ ಮೋದಿ ಅಮೆರಿಕದಲ್ಲೂ ಚುನಾವಣೆ ಗೆದ್ದಿದ್ದಾರೆಯೇ ಎಂಬ ಸಂಶಯ ಬರುವ ಹಾಗೆ ಟ್ರಂಪ್ ಗೆಲುವಿನ ಸಂಭ್ರಮಾಚರಣೆ ಮಡಿಲ ಮೀಡಿಯಾಗಳಲ್ಲಿ ನಡೆಯುತ್ತಿದೆ.
ಒಟ್ಟಾರೆ ದಿನನಿತ್ಯ ಜನಸಾಮಾನ್ಯರು ಎದುರಿಸುವ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲೇಬಾರದು, ಅದರ ಬದಲಿಗೆ ಸಂಬಂಧವೇ ಇಲ್ಲದ ವಿಷಯಗಳಲ್ಲಿ ಅವರನ್ನು ತೊಡಗಿಸಿ ಭ್ರಮೆಯಲ್ಲಿ ತೇಲಾಡಿಸುತ್ತಾ ಇರಬೇಕು.
ಇದು ಬಿಜೆಪಿ ಹಾಗೂ ಮಡಿಲ ಮೀಡಿಯಾಗಳ ಅಜೆಂಡಾವಾಗಿದೆ.