ಇತಿಹಾಸ ತೆರೆದಿಟ್ಟ ನಾಣ್ಯ-ನೋಟುಗಳ ಪ್ರದರ್ಶನ

Update: 2024-07-15 09:05 GMT

ಬೆಂಗಳೂರು: ನಾಣ್ಯಗಳು ಇತಿಹಾಸದ ಪ್ರತಿಬಿಂಬ. ಕಾಲ ಬದಲಾದಂತೆ ಹಿಂದೆ ಉಪಯೋಗವಿದ್ದ ನಾಣ್ಯಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೊಸ ನಾಣ್ಯ ಬರುವಾಗ ಹಳೆ ನಾಣ್ಯಗಳು ಕಣ್ಮರೆಯಾಗುತ್ತದೆ. ಈ ನಡುವೆ ಇತಿಹಾಸ ನೆನಪಿಸುವ ಹಳೆ ನಾಣ್ಯ ಮತ್ತು ನೋಟುಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವೊಂದು ಬೆಂಗಳೂರಿನಲ್ಲಿ ಜರುಗಿ ನೋಡುಗರನ್ನು ವಿಸ್ಮಯಗೊಳಿಸಿತು.

ಕನ್ನಡ ನಾಡು ನಾಣ್ಯ ಸಂಘದ 50ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಅದ್ದೂರಿಯಾಗಿ ಮೂರು ದಿನಗಳ ಕಾಲ ನಡೆದ ಹಳೆಯ ನಾಣ್ಯ ಮತ್ತು ನೋಟುಗಳ ದರ್ಶನವು ಇತಿಹಾಸದಲ್ಲಿ ದಾಖಲಾಗಿರುವ ದೇಶದ ವಿವಿಧ ಸಾಮ್ರಾಜ್ಯಗಳ ಗತವೈಭವವನ್ನು ಸಾರುವುದರೊಂದಿಗೆ ವಿದೇಶಗಳ ಅಪರೂಪದ ನಾಣ್ಯ ಮತ್ತು ನೋಟುಗಳನ್ನು ಪರಿಚಯಿಸುವ ಮೂಲಕ ನೋಡುಗರಿಗೆ ಇತಿಹಾಸದ ತಿಳಿವಳಿಕೆಯೊಂದಿಗೆ ಜ್ಞಾನಾರ್ಜನೆಯನ್ನೂ ವಿಸ್ತರಿಸಿತು.

ನೂರಾರು ವರ್ಷಗಳ ವಿಭಿನ್ನ, ವಿಶೇಷ ಹಾಗೂ ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಒಂದೆಡೆ ನೋಡುವ ಸುಯೋಗ ವೀಕ್ಷಕರಿಗೆ ದೊರೆಯಿತು. ಇದು ನೋಡುಗರಿಗೆ ಜಗತ್ತಿನ ಇತಿಹಾಸ, ಕುತೂಹಲಕರ ಸಂಗತಿಯನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು. ಸಾರ್ವಜನಿಕರು, ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಪುರಾತನ ವಸ್ತುಗಳನ್ನು ಕಣ್ತುಂಬಿಕೊಂಡರು.

ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‌ಮಾರ್ಕ್ ನಾಣ್ಯಗಳು ಗಮನ ಸೆಳೆದವು. ಗ್ರೀಕ್, ರೋಮನ್, ಕುಷಾಣರು, ಗುಪ್ತ, ಶಾತವಾಹನ, ಕದಂಬ, ಚೋಳ, ಪಾಂಡ್ಯ, ಮೊಘಲ್ ಮುಂತಾದ ಪ್ರಾಚೀನ ಸಾಮ್ರಾಜ್ಯದ ನಾಟ್ಯಗಳು ತಮ್ಮ ಇತಿಹಾಸವನ್ನು ತಿಳಿಸಿಕೊಟ್ಟವು.

ಬರೋಡ, ಗ್ವಾಲಿಯರ್, ಮೇವಾರ, ತಿರುವಾಂಕೂರು, ಹೈದರಾಬಾದ್, ಕಚ್ಛ್, ಮೈಸೂರು, ವಿಜಯನಗರ ಮುಂತಾದ ಭಾರತೀಯ ಸಂಸ್ಥಾನಗಳೊಂದಿಗೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಸ್ವಾತಂತ್ರ್ಯ ಭಾರತದ ನಾಟ್ಯಗಳು, ನೋಟುಗಳು ಆಕರ್ಷಿಸಿದವು. ಚಲಾವಣೆಯಿಂದ ಹಿಂತೆಗೆದುಕೊಂಡಿರುವ ನೋಟುಗಳೂ ನೋಡಲು ಲಭ್ಯವಾದವು.

ರಾಜ ಮಹಾರಾಜರ, ಹೋರಾಟಗಾರರ ಹಾಗೂ ಗಣ್ಯರ ಸ್ಮರಣಾರ್ಥ ಬಿಡುಗಡೆಯಾದ 1,000, 150, 100, 75, 60, 50, 20, 10 ರೂ.ಗಳ ನಾಣ್ಯಗಳು, ನೂರಾರು ದೇಶ-ವಿದೇಶಗಳ ನಾಣ್ಯ, ನೋಟುಗಳು, ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳು, ಚಿನ್ನದಿಂದ ತಯಾರಾದ ವಿದೇಶಿ ನೋಟುಗಳು, ಹೀಗೆ ನೂರಾರು ವರ್ಷಗಳ ಹಿಂದಿನ ಅಪೂರ್ವ ಸಂಗ್ರಹಗಳು ಆಯಾ ಕರೆನ್ಸಿ ಲೋಕವನ್ನು ಪರಿಚಯಿಸಿದವು. ಇತ್ತೀಚೆಗೆ ಚಾಲ್ತಿಗೆ ಬಂದ ನೋಟುಗಳು ಆಧುನಿಕತೆಯನ್ನು ತಿಳಿಸಿಕೊಟ್ಟವು.

ಶ್ರೀಲಂಕಾ, ಇರಾನ್, ಬಾಂಗ್ಲಾದೇಶ, ನೇಪಾಳ, ಬರ್ಮಾ, ಬ್ರೆಜಿಲ್, ಇಂಗ್ಲೆಂಡ್, ಅಮೆರಿಕಾ, ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್ ಕೆನಡಾ, ಗಯಾ, ಉಗಾಂಡ ಸೇರಿದಂತೆ ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳು ನೋಡುಗರನ್ನು ಆಕರ್ಷಿಸಿದವು.

ನಾಣ್ಯ ಸಂಘಕ್ಕೆ 50 ವರ್ಷ, 50 ಪ್ರದರ್ಶನ..!

ಪ್ರದರ್ಶನದಲ್ಲಿ ವಿವಿಧ 100 ಸ್ಟಾಲ್‌ಗಳಿವೆ. ಮೂರು ದಿನಗಳಲ್ಲಿ ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು ವೀಕ್ಷಿಸಿದ್ದು, ಸಂಗ್ರಹಿಸುವ ಹವ್ಯಾಸವುಳ್ಳವರು ನಾಣ್ಯ-ನೋಟುಗಳನ್ನು ಖರೀದಿಸಿದ್ದಾರೆ. ಕೋಟ್ಯಂತರ ರೂ. ವಹಿವಾಟು ನಡೆದಿರುವ ಬಗ್ಗೆ ಅಂದಾಜಿಸಲಾಗಿದೆ. ಕಡಿಮೆ ಸಂಗ್ರಹವಿರುವ ನಾಣ್ಯ-ನೋಟುಗಳಿಗೆ ಬೇಡಿಕೆ ಹೆಚ್ಚಿತ್ತು. ಕನ್ನಡ ನಾಡು ನಾಣ್ಯ ಸಂಘದಿಂದ ಪ್ರತೀ ವರ್ಷವೂ ನಾಣ್ಯ-ನೋಟುಗಳ ಪ್ರದರ್ಶನ ಮಾಡಿಕೊಂಡು ಬರಲಾಗುತ್ತಿದೆ. ಈಗ 50 ವರ್ಷಗಳು ತುಂಬಿದ್ದು, 50 ಪ್ರದರ್ಶನಗಳನ್ನು ಪೂರೈಸಿದ್ದೇವೆ.

-ಸುರೇಶ್, ಕನ್ನಡ ನಾಡು ನಾಣ್ಯ ಸಂಘದ ಕಾರ್ಯದರ್ಶಿ

ಉಗಾಂಡ ದೇಶದಲ್ಲಿ ನೋಟು ಮುದ್ರಣಗೊಂಡ ಆರಂಭದಿಂದಲೂ ಇಲ್ಲಿಯವರೆಗೆ ಎಲ್ಲ ನೋಟುಗಳ ಜೊತೆಗೆ ಎಲ್ಲ ದೇಶದ ನೋಟುಗಳ ಸಂಗ್ರಹ ನನ್ನ ಬಳಿಯಿದೆ. ನೋಟುಗಳನ್ನು ಸಂಗ್ರಹಿಸಿ ಈ ರೀತಿಯ ಪ್ರದರ್ಶನಗಳಲ್ಲಿ ಭಾಗವಹಿಸುವುದೇ ನನ್ನ ಹವ್ಯಾಸ.

-ಇರ್ದಿವ್‌ನಾತ್, ಉಗಾಂಡದ ನೋಟು ಸಂಗ್ರಹಕಾರ

40 ವರ್ಷಗಳಿಂದ ಪುರಾತನ ನಾಣ್ಯಗಳು, ನೋಟಗಳನ್ನು ಸಂಗ್ರಹಿಸಿದ್ದು, ವಿಜಯನಗರ ಹಾಗೂ ಮೈಸೂರು ಒಡೆಯರ್ ಮನೆತನದ ಎಲ್ಲ ಕಾಲದ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸಿದ್ದೇನೆ. ಅಫ್ಘಾನಿಸ್ತಾನದ ಕಂದಹಾರದಲ್ಲಿರುವ ವಸ್ತು ಸಂಗ್ರಹಾಲಯವನ್ನು ಧ್ವಂಸ ಮಾಡಿದಾಗ ದೊರೆತ ಪುರಾತನ ನಾಣ್ಯಗಳು ಲಭ್ಯ ಇದೆ.

-ಹುಣಸೂರು ಕೇಶವಮೂರ್ತಿ, ಪ್ರಾಚೀನ ನಾಣ್ಯ ಮತ್ತು ನೋಟುಗಳ ಸಂಗ್ರಹಕಾರ

ಅತಿದೊಡ್ಡ ಆಕಾರದ ನೋಟು

ವಿಶ್ವದಲ್ಲೇ ಅತಿದೊಡ್ಡ ಆಕಾರದ ಮಲೇಶಿಯಾದ ನೋಟು, ನಾಡಿನ ರಕ್ಷಣೆಗಾಗಿ ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡುವ ಚಿತ್ರಣದ ಮುದ್ರಣವುಳ್ಳ ನಾಣ್ಯಗಳು ಹಾಗೂ ಮುದ್ರರಾಕ್ಷಸನ ಹಾವಳಿಯ ದೋಷವುಳ್ಳ ವಿಚಿತ್ರ ಆಕಾರದ ನಾಣ್ಯ, ನೋಟಗಳು ವಿಶೇಷ ಎನಿಸಿದವು. ಟಿಪ್ಪು ಸುಲ್ತಾನನ ಕಾಲದ 2 ಪೈಸೆ ನಾಣ್ಯದಲ್ಲಿ ಆನೆಗಳ ಚಿತ್ರ, ಉರ್ದು ಲಿಪಿ ವಿಶಿಷ್ಟವಾಗಿತ್ತು.


Delete Edit

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಲ್ಲೂರು

contributor

Similar News