ಸರಕಾರಕ್ಕೆ ಅನುಕೂಲಕರ ತೀರ್ಪು, ನಿವೃತ್ತಿಯ ನಂತರ ಹೊಸ ಹುದ್ದೆಯ ಇನಾಮು!?

Update: 2024-03-02 06:00 GMT

ಎ.ಎಂ. ಖಾನ್ವಿಲ್ಕರ್

ಜಸ್ಟಿಸ್ ಎ.ಎಂ. ಖಾನ್ವಿಲ್ಕರ್ ಅವರು ಹೊಸ ಲೋಕಪಾಲರಾಗಿ ನೇಮಕವಾದ ಬೆನ್ನಿಗೇ ನಿವೃತ್ತ ನ್ಯಾಯಾಧೀಶರಿಗೆ ಸರಕಾರಿ ಹುದ್ದೆ ಕೊಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗಿರುವ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರ ಕೆಲವು ತೀರ್ಪುಗಳು ಮೋದಿ ಸರಕಾರಕ್ಕೆ ಬಿಗ್ ರಿಲೀಫ್ ನೀಡಿದ್ದವು ಎಂದು ಅವರ ಹಳೆಯ ತೀರ್ಪುಗಳನ್ನು ಉಲ್ಲೇಖಿಸಲಾಗುತ್ತಿದೆ.

ನಿವೃತ್ತಿ ಬಳಿಕ ನ್ಯಾಯಾಧೀಶರಿಗೆ ಹೊಸ ಹುದ್ದೆ ನೀಡುವುದರ ಸಂಬಂಧ ಪ್ರಶ್ನೆಗಳು ಏಳುತ್ತಿರುವುದು ಇದೇ ಮೊದಲೇನೂ ಅಲ್ಲ. ನ್ಯಾ. ರಂಜನ್ ಗೊಗೊಯಿ, ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ.ಎಸ್ ಅಬ್ದುಲ್ ನಝೀರ್ ಅವರನ್ನು ಬೇರೆ ಹುದ್ದೆಗಳಿಗೆ ನೇಮಕ ಮಾಡಿರುವುದು ಕೂಡ ಚರ್ಚೆಗೆ ಈಗಾಗಲೇ ಎಡೆ ಮಾಡಿಕೊಟ್ಟಿದ್ದನ್ನು ನೆನಪು ಮಾಡಿಕೊಳ್ಳಬಹುದು.

ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಅದರ ಹಿರಿಯ ನಾಯಕರು ನಿವೃತ್ತ ನ್ಯಾಯಮೂರ್ತಿಗಳು ಸರಕಾರಿ ಹುದ್ದೆ ಪಡೆಯುವುದನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಈಗ ಅವರದೇ ಸರಕಾರದಲ್ಲಿ ಆಗುತ್ತಿರುವುದಾದರೂ ಏನು?

ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಲು ನಿವೃತ್ತಿ ನಂತರ ಎರಡು ವರ್ಷಗಳಾದರೂ ಅಂತರ ಇರಬೇಕೆಂದು 2012ರಲ್ಲಿ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದರು. ಇಲ್ಲದೆ ಹೋದರೆ ನ್ಯಾಯಾಂಗದ ಮೇಲೆ ಸರಕಾರ ಪ್ರಭಾವ ಬೀರಲು ಪ್ರಯತ್ನಿಸುವ ಸಾಧ್ಯತೆ ಇರುತ್ತದೆ ಎಂದಿದ್ದರು. ಅಷ್ಟೇ ಅಲ್ಲ, ಸುಪ್ರೀಮ್ ಕೋರ್ಟ್ ಹಾಗೂ ಹೈಕೋರ್ಟಿನ ಯಾವ ನ್ಯಾಯಮೂರ್ತಿಗಳಿಗೆ ಮತ್ತೆ ಯಾವ ಆಯೋಗದ ಹುದ್ದೆ ಕೊಡಬೇಕು ಎಂದು ಮೊದಲೇ ನಿರ್ಧಾರ ಆಗಿರುತ್ತದೆ ಎಂದೂ ಗಡ್ಕರಿ ಹೇಳಿದ್ದರು.

ಬಿಜೆಪಿಯ ಇನ್ನೊಬ್ಬ ಹಿರಿಯ ನಾಯಕ ದಿವಂಗತ ಅರುಣ್ ಜೇಟ್ಲಿ ಅವರೂ ನಿವೃತ್ತಿ ನಂತರ ನ್ಯಾಯಮೂರ್ತಿಗಳು ಬೇರೆ ಹುದ್ದೆ ಪಡೆದರೆ ಅವರು ನಿವೃತ್ತಿಯಿಂದ ಮೊದಲು ನೀಡಿದ ತೀರ್ಪುಗಳ ಬಗ್ಗೆ ಸಂಶಯ ಉಂಟಾಗುತ್ತದೆ ಎಂದು ಹೇಳಿದ್ದರು.

ನ್ಯಾಯಾಧೀಶರು ನಿವೃತ್ತಿ ನಂತರದ ಹುದ್ದೆಗಳಿಗೆ ಆಸೆಪಡುವುದು ಅವರು ಹುದ್ದೆಯಲ್ಲಿರುವಾಗ ನೀಡುವ ತೀರ್ಪುಗಳನ್ನು ಪ್ರಭಾವಿ ಸುತ್ತವೆ ಎಂದು 2013ರಲ್ಲಿ ಪಿಯೂಷ್ ಗೋಯಲ್ ಅವರು ಅರುಣ್ ಜೇಟ್ಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದ್ದರು.

ಈ ಇಬ್ಬರೂ ಈಗ ಮೋದಿ ಸರಕಾರದಲ್ಲಿ ಸಚಿವರಾಗಿದ್ದಾರೆ.

ಈಗ ಇವರಿಬ್ಬರೂ ವಿಪಕ್ಷದಲ್ಲಿದ್ದಿದ್ದರೆ ಖಾನ್ವಿಲ್ಕರ್ ಅವರು ಲೋಕಪಾಲರಾಗಿ ನೇಮಕವಾದ ಬಗ್ಗೆ ಏನು ಹೇಳುತ್ತಿದ್ದರು?

ಇನ್ನು ಲೋಕಪಾಲ ನೇಮಕ ಸಮಿತಿಯಲ್ಲಿ ಪ್ರಧಾನಿ ಜೊತೆ ಸ್ಪೀಕರ್, ವಿಪಕ್ಷ ನಾಯಕ ಹಾಗೂ ಸಿಜೆಐ ಕೂಡ ಇರುತ್ತಾರೆ. ಆದರೆ ಜಸ್ಟಿಸ್ ಖಾನ್ವಿಲ್ಕರ್ ಅವರ ಕೆಲವು ತೀರ್ಪುಗಳ ಕುರಿತು ಮಾತಾಡಲೇಬೇಕಾಗುತ್ತದೆ. ಈ.ಡಿ. ವಿಚಾರವಾಗಿ ಅವರು ನೀಡಿದ್ದ ತೀರ್ಪು ಅಂಥವುಗಳಲ್ಲಿ ಒಂದು. ನಿವೃತ್ತಿಗೆ ಎರಡು ದಿನ ಮೊದಲು ಈ.ಡಿ. ವಿಚಾರದಲ್ಲಿ ಒಂದು ದೊಡ್ಡ ತೀರ್ಪು ಕೊಟ್ಟಿದ್ದರು. ಅದು ಈ.ಡಿ. ಶಕ್ತಿಯನ್ನು ಹೆಚ್ಚು ಮಾಡಿಬಿಟ್ಟಿತು.

ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ಈ.ಡಿ. ಸಂಸ್ಥೆಗೆ ಮಾಡಿದ ತಿದ್ದುಪಡಿಯ ಕರಾಳ ಶಾಸನದ ವಿರುದ್ಧ ಸುಮಾರು 200 ಅರ್ಜಿಗಳು ದಾಖಲಾಗಿದ್ದವು. ಈ ತಿದ್ದುಪಡಿಯ ಅನುಸಾರ ಆರೋಪಿಗಳಿಗೆ ಎಫ್‌ಐಆರ್ ಪ್ರತಿ ಕೊಡುವ ಅಗತ್ಯವಿಲ್ಲ, ಆರೋಪಿಯನ್ನು ಬಂಧಿಸಿದ ತಕ್ಷಣ ಆತ ಅಪರಾಧಿ ಎಂದು ಪರಿಗಣಿಸುವುದು, ತಾನು ನಿರಪರಾಧಿ ಎಂದು ಸ್ವತಃ ಆರೋಪಿಯೇ ಸಾಬೀತುಪಡಿಸಬೇಕು ಮತ್ತು ಅಲ್ಲಿಯವರೆಗೂ ಬೇಲ್ ನಿರಾಕರಣೆ, ಎನ್ನುವಂತಹ ಆ ಕರಾಳ ಶಾಸನವನ್ನು ಖಾನ್ವಿಲ್ಕರ್ ಒಳಗೊಂಡ ಮೂವರು ಸದಸ್ಯರ ವಿಭಾಗೀಯ ಪೀಠ ಮಾನ್ಯ ಮಾಡಿತ್ತು.

ಈಗ ಈ.ಡಿ. ಸತತವಾಗಿ ಕೇವಲ ವಿಪಕ್ಷಗಳ ಬೆನ್ನು ಬಿದ್ದಿದೆ. ಎಎಪಿಯ ಮನೀಶ್ ಸಿಸೋಡಿಯಾ ವರ್ಷದಿಂದ ಜೈಲಿನಲ್ಲಿದ್ದರೆ, ಸತ್ಯೇಂದ್ರ ಜೈನ್ ಕೂಡಾ ಜೈಲಿನಲ್ಲಿದ್ದಾರೆ.

ಜಾರ್ಖಂಡ್ ಮಾಜಿ ಸಿಎಂ ಜೆಎಂಎಂನ ಹೇಮಂತ್ ಸೊರೇನ್ ಜೈಲುಪಾಲಾಗಿದ್ದಾರೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಸತತ ಸಮನ್ಸ್‌ಗಳು ಬರುತ್ತಿವೆ. ಹೀಗಾಗಿ ಬಚಾವಾಗಲು ವಿಪಕ್ಷಗಳ ಎಷ್ಟೋ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಸೇರಿದ ಕೂಡಲೇ ಅವರ ವಿರುದ್ಧದ ಈ.ಡಿ. ತನಿಖೆ ನಿಂತು ಬಿಡುತ್ತದೆ. ಹಾಗಾಗಿ ಈಗ ಈ.ಡಿ. ಎಂಬುದು ವಿಪಕ್ಷಗಳ ನಾಯಕರನ್ನು ಬೇಟೆಯಾಡುವ ಸಂಸ್ಥೆ ಎಂಬಂತಾಗಿದೆ.

ನಿವೃತ್ತರಾದ ಬೆನ್ನಿಗೇ ಬೇರೆ ಮಹತ್ವದ ಸರಕಾರಿ ಹುದ್ದೆ ಪಡೆಯುತ್ತಿರುವ ನ್ಯಾಯಾಧೀಶರ ಪಟ್ಟಿ ಬಹಳ ಉದ್ದವಿದೆ. ಜಿಲ್ಲಾ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್‌ವರೆಗೂ ಇದು ನಡೆಯುತ್ತಿದೆ.

ಖಾನ್ವಿಲ್ಕರ್ 2022ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತರಾದ ಒಂದೂವರೆ ವರ್ಷದ ಬಳಿಕ ಅವರು ಲೋಕಪಾಲ್ ಆಗಿ ನೇಮಕಗೊಂಡಿದ್ಧಾರೆ.

ಅಲ್ಲದೆ ತಮ್ಮ ಕರ್ತವ್ಯದ ಕೊನೆಯ ದಿನವಾದ ಜನವರಿ 31ರಂದು ಜ್ಞಾನವಾಪಿ ಮಸೀದಿಯ ನೆಲ ಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದ್ಧ ನ್ಯಾ. ಎ.ಕೆ. ವಿಶ್ವೇಶ ಅವರು ನಿವೃತ್ತರಾಗಿ ಒಂದು ತಿಂಗಳಾಗುವ ಮೊದಲೇ ಅವರನ್ನು ಉತ್ತರ ಪ್ರದೇಶ ಸರಕಾರ ಲಕ್ನೊದ ಡಾ. ಶಕುಂತಳಾ ಮಿಶ್ರಾ ನ್ಯಾಷನಲ್ ರಿಹೆಬಿಲಿಟೇಶನ್ ವಿಶ್ವವಿದ್ಯಾನಿಲಯಕ್ಕೆ ಲೋಕಪಾಲ್ ಆಗಿ ನೇಮಿಸಿದೆ.

ತ್ರಿವಳಿ ತಲಾಖ್, ಎಸ್‌ಸಿ-ಎಸ್‌ಟಿ ಕಾಯ್ದೆ ವಿಚಾರವಾಗಿ ತೀರ್ಪು ನೀಡಿದ್ದ ನ್ಯಾ.ಎ.ಕೆ. ಗೋಯಲ್ ಅವರನ್ನು ಸುಪ್ರೀಮ್ ಕೋರ್ಟ್‌ನಿಂದ ನಿವೃತ್ತಿ ಹೊಂದಿದ ದಿನವೇ ಎನ್‌ಜಿಟಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.

ರಾಮಮಂದಿರ ಕುರಿತ ತೀರ್ಪು ಕೊಟ್ಟಿದ್ದ ಪೀಠದ ಐವರಲ್ಲಿ ಮೂವರಿಗೆ ನಿವೃತ್ತಿ ನಂತರ ಒಂದಲ್ಲ ಒಂದು ಹುದ್ದೆ ನೀಡಲಾಗಿದೆ.

ಬಾಬರಿ ಮಸೀದಿ- ರಾಮಜನ್ಮ ಭೂಮಿ ವಿವಾದದ ತೀರ್ಪು ನೀಡಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಸುಪ್ರೀಮ್ ಕೋರ್ಟ್‌ನಿಂದ ಸಿಜೆಐ ಆಗಿ ನಿವೃತ್ತರಾದ ನಾಲ್ಕೇ ತಿಂಗಳಲ್ಲಿ ಮೋದಿ ಸರಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.

ಜುಲೈ 2021ರಲ್ಲಿ ನಿವೃತ್ತರಾದ ನ್ಯಾ. ಅಶೋಕ್ ಭೂಷಣ್ ಅವರನ್ನು ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.

ನ್ಯಾ. ಎಸ್. ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ ಗವರ್ನರ್ ಆಗಿ 2023ರಲ್ಲಿ ನೇಮಿಸಲಾಗಿತ್ತು.

ಆಗ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ನಿವೃತ್ತಿ ನಂತರ ನ್ಯಾಯಾಧೀಶರನ್ನು ಬೇರೆ ಹುದ್ದೆಗಳಿಗೆ ನೇಮಿಸುವ ವಿಚಾರದಲ್ಲಿ ಬಿಜೆಪಿಯವರು ಏನು ಹೇಳಿದ್ದರೆಂಬುದನ್ನು ನೆನಪಿಸಿದ್ದರು.

ಮೋದಿ ಸರಕಾರ ಬಂದ ವರ್ಷವೇ ದೇಶದ ಮುಖ್ಯ ನ್ಯಾಯ ಮೂರ್ತಿ ಹುದ್ದೆಯಿಂದ ನಿವೃತ್ತರಾದ ಜಸ್ಟಿಸ್ ಪಿ. ಸದಾಶಿವಂ ಅವರನ್ನು ಕೇರಳ ಗವರ್ನರ್ ಹುದ್ದೆಗೆ ನೇಮಿಸಲಾಯಿತು.

ಸುಪ್ರೀಮ್ ಕೋರ್ಟ್‌ನಲ್ಲಿ ಅಮಿತ್ ಶಾ ಅವರ ವಿರುದ್ಧದ ನಕಲಿ ಎನ್‌ಕೌಂಟರ್ ಪ್ರಕರಣದ ಎರಡನೇ ಎಫ್‌ಐಆರ್ ರದ್ದು ಪಡಿಸಿದ ಪೀಠದಲ್ಲಿ ಜಸ್ಟಿಸ್ ಸದಾಶಿವಂ ಅವರಿದ್ದರು. ರಾಜ್ಯಪಾಲ ರಾಗಿ ನೇಮಕವಾದಾಗ ಅವರ ಆ ತೀರ್ಪು ಚರ್ಚೆಗೆ ಬಂತು.

ರಾಜ್ಯಸಭೆಗೆ ಹೋದ ರಂಜನ್ ಗೊಗೊಯಿ ಒಂದಾದರೂ ಪ್ರಶ್ನೆಯನ್ನು ಸಂಸತ್ತಿನಲ್ಲಿ ಎತ್ತಿದರೆ? ಮಣಿಪುರದಲ್ಲಿನ ಕರಾಳತೆ ಬಗ್ಗೆ ಅವರೇನಾದರೂ ಮಾತಾಡಿದರೆ? ಸುಮ್ಮನೆ ಕೂತಿರಲು, ಪ್ರಶ್ನೆ ಮಾಡದೆ ಇರಲು ಅವರು ರಾಜ್ಯಸಭೆಗೆ ಹೋದರೆ?

ಒಂದು ಕಡೆ ಮೋದಿ ಸರಕಾರಕ್ಕೆ ಖುಷಿ ಕೊಟ್ಟ ತೀರ್ಪು ನೀಡಿದವರು ನಿವೃತ್ತರಾದ ಬೆನ್ನಿಗೇ ಬೇರೆ ಪ್ರಮುಖ ಸರಕಾರಿ ಹುದ್ದೆ ಪಡೆಯುತ್ತಾರೆ. ಇನ್ನೊಂದು ಕಡೆ ಸುಪ್ರೀಮ್ ಕೋರ್ಟ್ ಗೆ ಬರಲೇ ಬೇಕಿದ್ದ ಅತ್ಯಂತ ಪ್ರತಿಭಾವಂತ, ಅನುಭವಿ ನ್ಯಾಯಾಧೀಶರು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾಗುವ ಅವಕಾಶವನ್ನೇ ತಪ್ಪಿಸಲಾಗುತ್ತಿದೆ ಎಂಬ ಆರೋಪವೂ ಇದೆ.

ಜಸ್ಟಿಸ್ ಅಖಿಲ್ ಖುರೇಷಿ ಹಾಗೂ ಜಸ್ಟಿಸ್ ಎಸ್. ಮುರಳೀಧರ್ ಅವರು ದೇಶ ಕಂಡ ಅತ್ಯುತ್ತಮ ನ್ಯಾಯಾಧೀಶರಾಗಿದ್ದರು. ಆದರೆ ಅವರಿಬ್ಬರೂ ಕೊನೆಗೂ ಸುಪ್ರೀಮ್ ಕೋರ್ಟ್ ತಲುಪಲೇ ಇಲ್ಲ. ಅವರು ಕೊಟ್ಟ ಕೆಲವು ತೀರ್ಪುಗಳೇ ಅವರಿಗೆ ಮುಳುವಾದವು ಎಂಬ ಆರೋಪಗಳಿವೆ.

ಯೋಗ್ಯತೆ ಆಧಾರದಲ್ಲಿ ಕೆಲವರ ನೇಮಕ ಆಗುತ್ತದೆ ಮತ್ತು ಅದು ಅನಿವಾರ್ಯವೂ ಹೌದು. ಆದರೆ ಪ್ರತೀ ನೇಮಕಕ್ಕೂ ಅಂಥ ಅಗತ್ಯವಿತ್ತು ಎಂಬುದನ್ನು ಸಾಬೀತುಪಡಿಸಬಲ್ಲ ಬಲವಾದ ಕಾರಣಗಳಿರಬೇಕು. ಇಲ್ಲದೇ ಹೋದಲ್ಲಿ ನ್ಯಾಯದ ಬಗ್ಗೆಯೆ ಅನುಮಾನ ಮೂಡಲು ಇಂಥ ಬೆಳವಣಿಗೆಗಳು ಕಾರಣವಾಗುತ್ತವೆ.

ನಿವೃತ್ತಿಗೆ ಒಂದು, ಎರಡು ದಿನ ಮೊದಲು, ವಾರದ ಮೊದಲು, ತಿಂಗಳ ಮೊದಲು ಸರಕಾರಕ್ಕೆ ಅನುಕೂಲಕರ ತೀರ್ಪು ಕೊಡುವುದು, ಮತ್ತದಕ್ಕೆ ಪ್ರತಿಯಾಗಿ ಹೊಸ ಹುದ್ದೆಯ ಇನಾಮು ಪಡೆಯುವುದು ಹೆಚ್ಚಾಗುತ್ತಿದೆ. ಮೊದಲೆಲ್ಲ ಇದು ಬಹಳ ನಾಜೂಕಾಗಿ ಅಲ್ಲೊಂದು ಇಲ್ಲೊಂದು ನಡೆಯುತ್ತಿತ್ತು. ಈಗ ಯಾವ ಮುಲಾಜು, ಹಿಂಜರಿಕೆ ಇಲ್ಲದೆ ರಾಜಾರೋಷವಾಗಿಯೇ ನಡೆಯುತ್ತಿದೆ.

ಹುದ್ದೆ ನೀಡುವ ಸರಕಾರವೂ ಯಾವುದೇ ಮುಲಾಜು ತೋರಿಸುತ್ತಿಲ್ಲ, ಹುದ್ದೆ ಪಡೆಯುವ ನ್ಯಾಯಮೂರ್ತಿಗಳೂ ಯಾವುದೇ ಹಿಂಜರಿಕೆ ತೋರಿಸುತ್ತಿಲ್ಲ.

ಇದು ಹೀಗೇ ನಡೆಯುವುದು, ವ್ಯವಸ್ಥೆಯೇ ಹೀಗೇ ಎಂಬಂತೆ ಎಗ್ಗಿಲ್ಲದೆ ಈ ನಿವೃತ್ತಿ ಬೆನ್ನಿಗೇ ಸರಕಾರಿ ಹುದ್ದೆ ಕೊಡುವ ಪ್ರಕ್ರಿಯೆ ನಡೆಯುತ್ತಿದೆ.

ಇದು ಯಾವ ಸ್ಥಿತಿಯನ್ನು ಸೂಚಿಸುತ್ತದೆ? ಮದರ್ ಆಫ್ ಡೆಮಾಕ್ರಸಿಗೆ, ವಿಶ್ವ ಗುರುವಿಗೆ ಹೇಳಿದ ಮಾದರಿಯೇ ಇದು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶರತ್ ಪಿ.ಎಸ್.

contributor

Similar News