ಕಸಾಪ ನಿರ್ಣಯದಲ್ಲೇ ಸಮಾಧಿಯಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಹುಟ್ಟಿದ ಮನೆ

ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಹುಟ್ಟಿದ ಮನೆಯನ್ನು ಸಾಕಷ್ಟು ಪ್ರಯತ್ನದ ನಂತರವೂ,ಇದೀಗ ಎಲ್ಲರ ಗಮನ ಸೆಳೆಯುವ ಸನ್ನಿಸೈಡ್ ಆಗಿದ್ದು, ಇದೀಗ ಜ.ತಿಮ್ಮಯ್ಯ ಅವರ ಸ್ಮಾರಕ ವಸ್ತುಸಂಗ್ರಹಾಲಯವಾಗಿ ಪರಿವರ್ತನೆಗೊಂಡಿದೆ. ದೇಶ, ವಿದೇಶದ ಪ್ರವಾಸಿಗರನ್ನು ಸನ್ನಿಸೈಡ್ ಸೆಳೆಯುತ್ತಿದೆ. ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸನ್ನಿಸೈಡ್ ಉದ್ಘಾಟನೆ ಮಾಡಿದ್ದರು. ಶನಿವಾರಸಂತೆಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹುಟ್ಟಿದ ಮನೆಯನ್ನು ಸ್ಮಾರಕವಾಗಿ ನಿರ್ಮಿಸಿ, ಅವರ ಜೀವನ ಚರಿತ್ರೆಯನ್ನು ಜಗತ್ತಿಗೆ ಪರಿಚಯಿಸುವ ವಸ್ತುಸಂಗ್ರಹಾಲಯವಾಗಿ ಮಾರ್ಪಾಡು ಮಾಡಬೇಕಾಗಿದೆ. ಇದರ ಬಗ್ಗೆ ಸರಕಾರ, ಜಿಲ್ಲಾಡಳಿತ ಆಸಕ್ತಿವಹಿಸಿ ದೇಶದ ಮೊದಲ ದಂಡನಾಯಕ ಕಾರ್ಯಪ್ಪ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎನ್ನುವುದು ಕೊಡಗಿನ ಜನತೆ, ಮಾಜಿ ಯೋಧರು,ದೇಶಪ್ರೇಮಿಗಳ ಒಕ್ಕೊರಲಿನ ಧ್ವನಿಯಾಗಿದೆ.

Update: 2024-01-28 04:16 GMT

ಮಡಿಕೇರಿ, ಜ.27: ಕೆ.ಎಂ. ಕಾರ್ಯಪ್ಪ ಜನಿಸಿದ ಮನೆಯನ್ನು ಸ್ಮಾರಕ ಮಾಡುವ ಉದ್ದೇಶದಿಂದ, 1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು, ಮೊದಲು ಸಾರ್ವಜನಿಕ ಗ್ರಂಥಾಲಯವಾಗಿ ಲೋಕಾರ್ಪಣೆ ಮಾಡಿದ್ದರು.

ಆದರೆ ಸ್ಮಾರಕ ಮಾಡುವ ಉದ್ದೇಶದಿಂದ ಲೋಕಾರ್ಪಣೆಗೊಂಡಿರುವ ಗ್ರಂಥಾಲಯವು, 27 ವರ್ಷ ಕಳೆದರೂ ಗ್ರಂಥಾಲಯವಾಗಿಯೇ ಉಳಿದಿದೆ.

2010ರಲ್ಲಿ ಶನಿವಾರಸಂತೆಯಲ್ಲಿ ನಡೆದಿದ್ದ ಕೊಡಗು ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಪ್ಪ ಅವರು ಹುಟ್ಟಿದ ಮನೆಯ ಅಭಿವೃದ್ಧಿ ಮತ್ತು ಕಾರ್ಯಪ್ಪ ಪ್ರತಿಮೆ ಸ್ಥಾಪಿಸುವಂತೆ,ಶನಿವಾರಸಂತೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಅಭಿಮಾನಿ ಬಳಗ ಹಾಗೂ ಮಾಜಿ ಯೋಧರು ಮನವಿ ಸಲ್ಲಿಸಿದ್ದರು.

ಆದರೆ ಮನವಿ ಸಲ್ಲಿಸಿ 14 ವರ್ಷ ಕಳೆದರೂ ಕೇವಲ ಗ್ರಂಥಾಲಯಕ್ಕೆ ಸೀಮಿತಗೊಂಡಿದೆ ಕೆ.ಎಂ. ಕಾರ್ಯಪ್ಪ ಜನಿಸಿದ ಮನೆ.

ಜನರಿಂದ ದೂರವಾಗುತ್ತಿದೆ ಕಾರ್ಯಪ್ಪ ಹುಟ್ಟಿದ ಮನೆ !

ಸ್ಮಾರಕ ಮಾಡುವ ಉದ್ದೇಶದಿಂದ, ಗ್ರಂಥಾಲಯವಾಗಿ ಲೋಕಾರ್ಪಣೆಗೊಂಡಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹುಟ್ಟಿದ ಮನೆ ಸ್ಮಾರಕವಾಗದೆ ವರ್ಷದಿಂದ ವರ್ಷಕ್ಕೆ ಜನರಿಂದ ದೂರವಾಗುತ್ತಿದೆ. ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸ್ಮಾರಕವಾಗಿಲ್ಲ. ಇದೀಗ ಗ್ರಂಥಾಲಯವೂ ಮುಚ್ಚುವ ಸ್ಥಿತಿಗೆ ಬಂದಿದೆ ಎನ್ನಲಾಗಿದೆ.

ಗ್ರಂಥಾಲಯದ ಗ್ರಂಥಪಾಲಕಿ ವಿವಾಹವಾಗಿ ತೆರಳಿದ ನಂತರ ಗ್ರಂಥಾಲಯವೂ ಜನರಿಂದ ದೂರವಾಗಿದೆ. ಬದಲಿ ಗ್ರಂಥಪಾಲಕಿ ನೇಮಿಸುವ ಕೆಲಸವಾಗಿಲ್ಲ. ಶನಿವಾರಸಂತೆ ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರು ನಾಮಕಾವಸ್ಥೆಗೆ ಬೆಳಗ್ಗೆ ಓಪನ್ ಮಾಡಿ, ಮಧ್ಯಾಹ್ನ ಮುಚ್ಚುತ್ತಿದ್ದಾರೆ.ಇದರಿಂದ ಗ್ರಂಥಾಲಯವೂ ಜನರ ಉಪಯೋಗಕ್ಕೆ ಬರುತ್ತಿಲ್ಲ. ಗ್ರಂಥಾಲಯ ಜನರ ಬಳಕೆಗೆ ಲಭ್ಯವಾಗದಿರುವುದರಿಂದ, ಮೆಲ್ಲನೆ ಜನರಿಂದ ದೂರವಾಗುತ್ತಿದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹುಟ್ಟಿದ ಮನೆ.

ಒಂದು ವರ್ಷದೊಳಗೆ ಸ್ಮಾರಕ ಪೂರ್ಣ ಎಂದವರು ಮತ್ತೆ ತಿರುಗಿ ನೋಡಿಲ್ಲ!

2010ರಲ್ಲಿ ಶನಿವಾರಸಂತೆಯಲ್ಲಿ ನಡೆದಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅಂದಿನ ರಾಜ್ಯ ಕಸಾಪ ಅಧ್ಯಕ್ಷರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹುಟ್ಟಿದ ಮನೆಯನ್ನು ಸ್ಮಾರಕ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದರು. ಆದರೆ 14 ವರ್ಷಗಳ ಕಳೆದರೂ ಸ್ಮಾರಕವಾಗದೆ ಉಳಿದುಕೊಂಡಿದೆ.

2012ರಲ್ಲಿ ಶನಿವಾರಸಂತೆಯಲ್ಲಿ ನಡೆದಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 113ನೇ ಜನ್ಮದಿನದ ಸಂದರ್ಭದಲ್ಲಿ ಅಂದಿನ ಸಚಿವರು ಹಾಗೂ ಶಾಸಕರು ಕೆ.ಎಂ ಕಾರ್ಯಪ್ಪ ಅವರ ಮನೆಯನ್ನು ಸ್ಮಾರಕ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ದಶಕ ಕಳೆದರೂ ಮನೆ ಇಂದಿಗೂ ಗ್ರಂಥಾಲಯವಾಗಿಯೇ ಉಳಿದಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಸ್ವತಂತ್ರ ಭಾರತದ ಮೊದಲ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ,ಹುಟ್ಟಿದ ಮನೆಯನ್ನು ಸ್ಮಾರಕವಾಗಿಸಿ ಅವರಿಗೆ ಮತ್ತಷ್ಟು ಗೌರವ ನೀಡಬೇಕಾಗಿದೆ.ಇದರ ಬಗ್ಗೆ ಜಿಲ್ಲೆಯ ಶಾಸಕದ್ವಯರು ಮುತುವರ್ಜಿ ವಹಿಸಿ ಮುಂದಿನ ವರ್ಷ ಕೆ.ಎಂ. ಕಾರ್ಯಪ್ಪಜನ್ಮದಿನದಂದು ಅವರು ಜನಿಸಿದ ಮನೆ ಸ್ಮಾರಕವಾಗಿ ಉದ್ಘಾಟನೆ ಆಗಲಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಫೀ.ಮಾ. ಕಾರ್ಯಪ್ಪ ಹುಟ್ಟಿದ ಮನೆ ಕೊಡಗಿನ ಶನಿವಾರಸಂತೆಯಲ್ಲಿ ಇರುವ ವಿಚಾರ ಗೊತ್ತಿದೆ. ಆ ಮನೆಯನ್ನು ಸ್ಮಾರಕ ಮಾಡಲು ಮುಂದಾಗಿದ್ದ ವಿಚಾರ ತಿಳಿದಿರಲಿಲ್ಲ. ಆದರೆ ಇದೀಗ ಈ ವಿಷಯ ನನ್ನ ಗಮನಕ್ಕೆ ಬಂದಿದ್ದು,ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಮಾಹಿತಿ ಪಡೆದು,ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಂಡು, ಸ್ಮಾರಕ ಮಾಡಲು ಕ್ರಮಕೈಗೊಳ್ಳಲಾಗುವುದು.

-ವೆಂಕಟ್ ರಾಜಾ,ಜಿಲ್ಲಾಧಿಕಾರಿ ಕೊಡಗು.

ಶನಿವಾರಸಂತೆಯಲ್ಲಿ ಫೀ.ಮಾ. ಕಾರ್ಯಪ್ಪ ಹುಟ್ಟಿದ ಮನೆಯನ್ನು ಸ್ಮಾರಕ ಮಾಡಬೇಕೆಂದು ಶನಿವಾರಸಂತೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರ ಪರವಾಗಿ ಸಮ್ಮೇಳನದಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಇದರ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಾಗಿದೆ.

-ಸಿ.ಎಂ. ಪುಟ್ಟಸ್ವಾಮಿ,

ಕಸಾಪ ಮಾಜಿ ಅಧ್ಯಕ್ಷ ಶನಿವಾರಸಂತೆ.

ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯಕ್ಕೆ ಸಿಬ್ಬಂದಿ ನೇಮಕ ಮಾಡುವ ಅವಕಾಶ ನಮಗಿಲ್ಲ. ಆದರೂ ಈ ಕೂಡಲೇ ಗ್ರಂಥಪಾಲಕರನ್ನು ನೇಮಿಸುವಂತೆ ಸಂಬಂಧಪಟ್ಟವರಿಗೆ ಪತ್ರ ರವಾನಿಸಲಾಗಿದೆ. ಕೆ.ಎಂ. ಕಾರ್ಯಪ್ಪ ಹುಟ್ಟಿದ ಮನೆಯನ್ನು ಅವಿಸ್ಮರಣೀಯವಾದ ಸ್ಮಾರಕವಾಗಿ ನಿರ್ಮಿಸಬೇಕು.ಜಿಲ್ಲಾಡಳಿತ ಈ ವಿಷಯವನ್ನು ನಿರ್ಲಕ್ಷ್ಯಿಸದೆ ಗಂಭೀರವಾಗಿ ಪರಿಗಣಿಸಬೇಕು.

-ಸರ್ದಾರ್ ಅಹ್ಮದ್,

ಉಪಾಧ್ಯಕ್ಷ ಶನಿವಾರಸಂತೆ ಗ್ರಾಪಂ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News